ಅಂಕಣ ಪ್ರಚಲಿತ

ಅಮಿತ್, ಮೋದಿ ಬಂದಾಗೆಲ್ಲ ಕರ್ನಾಟಕ ಬಂದ್ ಸಾಧ್ಯವೇ? ಸಾಧುವೇ?

ನದಿಗೆ ಗಡಿರೇಖೆಗಳ ಹಂಗಿಲ್ಲ. ಆದರೆ ಗಡಿರೇಖೆಗಳನ್ನು ಎಳೆದು, ಬಾಂದುಕಲ್ಲುಗಳನ್ನು ನೆಟ್ಟು, ಇದು ತನ್ನದು ಅದು ನಿನ್ನದು ಎನ್ನುವ ಮನುಷ್ಯನಿಗೆ ನದಿಯ ಹಂಗಿಲ್ಲದೆ ಬದುಕುವುದು ಹ್ಯಾಂಗ ಸಾಧ್ಯ! ಹಾಗಾಗಿಯೇ ನದಿಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ, ಒಂದು ದೇಶದಿಂದ ಇನ್ನೊಂದಕ್ಕೆ ಹರಿಯುವ ಸ್ಥಳಗಳಲ್ಲಿ ಬಗೆಹರಿಯದ ವಿವಾದಗಳು ಮೊಳಕೆಯೊಡೆದಿವೆ. ಕೆಲವು ಸಮಸ್ಯೆಗಳಿಗೆ ದಶಕ, ಶತಕಗಳ ಇತಿಹಾಸವೂ ಇದೆ. ವಾಯುವ್ಯ ಕರ್ನಾಟಕದ ಮಹದಾಯಿ ನದಿ ನೀರು ಹಂಚಿಕೆ ವಿವಾದ ಅಂಥ ದಶಕದುದ್ದದ ಸಮಸ್ಯೆಗಳಲ್ಲೊಂದು.

ಕಳಸಾ ಬಂಡೂರಿ: ಏನಿದು?

ಮಹದಾಯಿ ವಿವಾದ ದಿನದಿನಕ್ಕೆ ಬೆಳೆಯುತ್ತಿದೆ. ರಾಷ್ಟ್ರೀಯ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಆದರೆ ಇದರ ಆಳ-ಅಗಲ ಏನು? ಮಹದಾಯಿ ವಿವಾದದ ನಿಜಸ್ವರೂಪ ಏನು? ಅರ್ಥ ಮಾಡಿಕೊಳ್ಳಬೇಕಾದರೆ ನಾವು ಬೆಳಗಾವಿಯಲ್ಲಿ ಹುಟ್ಟಿ ಹರಿವ ಎರಡು ನದಿಗಳ ದಿಕ್ಕು-ದೆಸೆಗಳನ್ನು ಸ್ವಲ್ಪ ಅರಿಯಬೇಕಾಗುತ್ತದೆ. ಮಲಪ್ರಭಾ ಮತ್ತು ಮಹದಾಯಿ, ಎರಡೂ ಜೀವನದಿಗಳು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಜನ್ಮತಳೆಯುತ್ತವೆ. ಮಲಪ್ರಭಾ, ಕಣಕುಂಬಿ ಗ್ರಾಮದ ಮಾವೋಲಿಯಲ್ಲಿ ಕಣ್ಣುಬಿಟ್ಟರೆ ಮಹದಾಯಿ ಹುಟ್ಟುವುದು ಅದೇ ಖಾನಾಪುರದ ದೇವಗಾವುಡು ಗ್ರಾಮದಲ್ಲಿ. ಮಹದಾಯಿ ಪಶ್ಚಿಮಮುಖಿಯಾಗಿ ಅರಬ್ಬಿ ಸಮುದ್ರದತ್ತ ಹರಿದರೆ ಮಲಪ್ರಭೆ ಮುಂದೆ ಕೃಷ್ಣಾ ನದಿಯನ್ನು ಕೂಡಿಕೊಳ್ಳುತ್ತಾಳೆ. ಮಲಪ್ರಭೆಗೆ ಸವದತ್ತಿ ಬಳಿ ನವಿಲುತೀರ್ಥ ಎಂಬಲ್ಲಿ ರೇಣುಕಾಸಾಗರ ಜಲಾಶಯದ ಹೆಸರಲ್ಲಿ ಒಡ್ಡು ಕಟ್ಟಿ, ನೀರು ನಿಲ್ಲಿಸಿ, ಆ ನೀರನ್ನು ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಹಲವು ಭಾಗಗಳಿಗೆ ಕುಡಿಯುವ ನೀರಿಗಾಗಿ ಹರಿಸುವ ಯೋಜನೆ ಇತ್ತು. ಹತ್ತು ವರ್ಷಗಳ ಕಾಲ ಕಟ್ಟುವ ಕೆಲಸ ನಡೆದು, 1972ರಲ್ಲಿ ಎದ್ದುನಿಂತ ಈ ಜಲಾಶಯದಲ್ಲಿ ಸಂಗ್ರಹವಾಗಬಹುದಿದ್ದ ನೀರಿನ ಸಾಮಥ್ರ್ಯ 37 ಟಿಎಂಸಿ. ಜಲಾಶಯವೇನೋ ದೊಡ್ಡದೇ. ಆದರೆ ಅದರ ಸಾಮರ್ಥ್ಯಕ್ಕೆ ತಕ್ಕಂತೆ ನದಿಯ ಒಡಲಲ್ಲಿ ನೀರಿರಬೇಕಲ್ಲ? ವರ್ಷಗಳು ಕಳೆದಂತೆ, ಮಳೆಯ ಪ್ರಮಾಣ ಕುಸಿದಂತೆ, ಒಡ್ಡಿನಲ್ಲಿ ನಿಲ್ಲುವ ನೀರಿನ ಮಟ್ಟ ಇಳಿದಿಳಿದು ನೆಲ ಕಂಡಿತು. ಕಳೆದ ನಲವತ್ತೈದು ವರ್ಷಗಳಲ್ಲಿ ಈ ಜಲಾಶಯ ಭರ್ತಿಯಾಗಿದ್ದು ಮೂರ್ನಾಲ್ಕು ಬಾರಿ ಮಾತ್ರ ಎಂದು ನೀರಿನ ಲೆಕ್ಕ ಬರೆದಿಟ್ಟ ಕಡತಗಳು ಹೇಳುತ್ತವೆ. ರೈತರ ಜಮೀನುಗಳಿಗೆ ನೀರು ಹರಿಸುವುದು ಹೋಗಲಿ, ಕುಡಿಯುವ ನೀರು ಪೂರೈಸುವುದಕ್ಕೂ ಮಲಪ್ರಭೆಯ ಒಡಲಲ್ಲಿ ದಾಸ್ತಾನಿಲ್ಲವೆಂಬ ಸ್ಥಿತಿ ಬಂತು. ಆಗ ಸರಕಾರಗಳು ನೋಡಿದ್ದು ಮಹದಾಯಿಯೆಂಬ ಮಹಾತಾಯಿಯತ್ತ. ಮಹದಾಯಿ ಬೆಳಗಾವಿಯಲ್ಲಿ ಹುಟ್ಟಿ, 30 ಕಿಲೋಮೀಟರ್ ಹರಿದು, ಸುರಗ ಎಂಬಲ್ಲಿ ಗೋವಾವನ್ನು ಪ್ರವೇಶಿಸಿ ಆ ರಾಜ್ಯದಲ್ಲಿ ಜೀವನದಿ ಮಾಂಡೋವಿಯೆಂಬ ಹೆಸರಲ್ಲಿ 52 ಕಿಲೋಮೀಟರ್ಗಳಷ್ಟು ಉದ್ದಕ್ಕೆ ಮೈತುಂಬಿ ಹರಿದು ಅರಬ್ಬಿ ಕಡಲಲ್ಲಿ ಲೀನಳಾಗುತ್ತಾಳೆ. ಈ ನದಿಗೆ ಕರ್ನಾಟಕ, ಗೋವಾಗಳಲ್ಲಿ ಹಳತಾರಾ, ಕಳಸಾ, ಬಂಡೂರಿ, ಕಾರಜೋಳ, ದೂದ್ಸಾಗರ ಹೀಗೆ ಹಲವು ಉಪನದಿಗಳು ಜೊತೆಗೂಡುತ್ತವೆ. ಅದೂ ಅಲ್ಲದೆ ಮಹದಾಯಿ ಹರಿಯುವ ನದಿಕಣಿವೆ ಹೆಚ್ಚು ಮಳೆ ಬೀಳುವ ಪಶ್ಚಿಮಘಟ್ಟದ ಪ್ರದೇಶವಾದ್ದರಿಂದ, ಮತ್ತು ಆ ನದಿಕಣಿವೆಯಲ್ಲಿ ಹತ್ತುಹಲವು ಉಪನದಿಗಳು ಬಂದು ಜೊತೆಗೂಡುವುದರಿಂದ, ಆ ನೀರಲ್ಲಿ ಒಂದಷ್ಟನ್ನು ಎತ್ತಿತೆಗೆದು ಮಲಪ್ರಭೆಯ ಜಲಾಶಯಕ್ಕೆ ಹಾಯಿಸಿ, ಅಲ್ಲಿಂದ ಮುಂದಕ್ಕೆ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳ ಪಸೆ ಒಣಗಿದ ಕೊರಳುಗಳನ್ನು ತಣಿಸಬೇಕು ಎಂದು ಕರ್ನಾಟಕದ ಸರಕಾರ ಯೋಜನೆ ಹಾಕಿತು. ಈಗಲ್ಲ, 1978ರಲ್ಲೇ. ಇಂದಿಗೆ ನಾಲ್ಕು ದಶಕಗಳ ಹಿಂದೆಯೇ.

ಪುಟಗಟ್ಟಲೆ ಸಾಗುವ ಇತಿಹಾಸವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಅದು ಹೀಗಿದೆ: ಮಹದಾಯಿ ನದಿಯ ಮೂಲಕ ಹರಿದು ವ್ಯರ್ಥವಾಗಿ ಸಮುದ್ರ ಸೇರುವ ನೀರಿನ ಪ್ರಮಾಣ ವರ್ಷಕ್ಕೆ 200 ಟಿಎಂಸಿ. ಅದರಲ್ಲಿ ಏಳೂವರೆ (ನಿಖರವಾಗಿ 7.56) ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ವರ್ಗಾಯಿಸುವ ಕಳಸಾ ಮತ್ತು ಬಂಡೂರಿ ಹೆಸರಿನ ಎರಡು ಯೋಜನೆಗಳನ್ನು ಕರ್ನಾಟಕ ಸರಕಾರ ಸಿದ್ಧಪಡಿಸಿತು. ಕಳಸಾ ಯೋಜನೆಯಲ್ಲಿ, ಮೊದಲು ಕಳಸಾ ನದಿಗೆ ಆಣೆ ಕಟ್ಟಿ 4.8 ಕಿಲೋಮೀಟರ್ ಉದ್ದದ ಕಾಲುವೆ ನಿರ್ಮಿಸುವುದು; ಹಾಗೆಯೇ ಮಹದಾಯಿಯ ಇನ್ನೊಂದು ಉಪನದಿಯಾದ ಹಳತಾರಾ ನದಿಗೆ ಆಣೆ ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು ಐದೂವರೆ ಕಿಲೋಮೀಟರ್ ಉದ್ದದ ಕಾಲುವೆಯಲ್ಲಿ ಸಾಗಿಸಿ ಕಳಸಾ ಅಣೆಕಟ್ಟೆಗೆ ತುಂಬುವುದು – ಇದು ಇದ್ದ ಯೋಜನೆ. ಇನ್ನು ಬಂಡೂರಿ ಯೋಜನೆಯಲ್ಲಿ, ಸಿಂಗಾರ ಮತ್ತು ವಾಟಿ ಎಂಬಲ್ಲಿದ್ದ ಎರಡು ನಾಲೆಗಳಿಗೆ ಅಣೆಕಟ್ಟು ಎಬ್ಬಿಸಿ ಅಲ್ಲಿ ತುಂಬಿಕೊಂಡ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಾಯಿಸುವ ಯೋಜನೆ ಇತ್ತು. ಈ ಜಲಾಶಯದಲ್ಲಿ ತುಂಬಿಕೊಂಡ 4 ಟಿಎಂಸಿ ನೀರನ್ನು 5 ಕಿಲೋಮೀಟರ್ ಉದ್ದದ ಕಾಲುವೆಯಲ್ಲಿ ಹಾಯಿಸಿ ಮಲಪ್ರಭೆಯ ಒಡಲು ತುಂಬುವ ಯೋಜನೆಯನ್ನು ಸರಕಾರ ಹಾಕಿತು. ಹೀಗೆ ಎರಡು ಕಡೆಗಳಲ್ಲಿ, ಎರಡು ಭಿನ್ನ ಯೋಜನೆಗಳು, ಮುಖ್ಯವಾಗಿ ಮಹದಾಯಿಯನ್ನೇ ಅವಲಂಬಿಸಿ ಪ್ರಾರಂಭವಾಗಿದ್ದುದರಿಂದ ಎರಡನ್ನೂ ಒಟ್ಟಾಗಿ ಕಳಸಾ-ಬಂಡೂರಿ ಯೋಜನೆ ಎಂದು ಕರೆಯುವ ಕ್ರಮ ಬಳಕೆಗೆ ಬಂತು.

ದೋಸೆ ಮಗುಚಿ ಹಾಕಿದರು

ಯೋಜನೆಗೆ ಚಾಲನೆ ಸಿಕ್ಕಿದ್ದು 1978ರಲ್ಲಿ, ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ. ಯೋಜನೆ ಮಾಡುವುದೋ ಬೇಡವೋ, ಮಾಡುವುದಿದ್ದರೆ ಹೇಗೆ ಎಲ್ಲಿ ಏನು ಎತ್ತ ಎಂಬುದನ್ನೆಲ್ಲ ಪರಿಶೀಲಿಸಿ ಪರಾಮರ್ಶಿಸಿ ಕರಡು ಸಿದ್ಧಪಡಿಸಿ ಆ ಕಡತಗಳನ್ನು ಹತ್ತಾರು ಸಲ ಕೆಂಪುಪಟ್ಟಿಯ ಆಡಳಿತ ಯಂತ್ರದಲ್ಲಿ ಹಾಯಿಸಿ ಕೊನೆಗೂ ಸರಕಾರದ ಒಪ್ಪಿಗೆ ಸಿಗುವ ಹೊತ್ತಿಗೆ 1988 ಬಂದಾಗಿತ್ತು! ಕರ್ನಾಟಕವೇನೋ ಯೋಜನೆಯ ನೀಲನಕ್ಷೆ ಸಿದ್ಧಪಡಿಸಿತು; ಆದರೆ ಇಡೀ ಕತೆಯ ಮುಖ್ಯ ಪಾತ್ರವಾದ ಗೋವಾ ಸರಕಾರದ ಅಭಿಪ್ರಾಯ ಕೇಳುವ ಕೆಲಸವನ್ನೇ ಅದು ಮಾಡಲಿಲ್ಲ! ಗೋವಾದ ಜೊತೆ ಕೇಳುವದೇನಿದೆ? ಎಲ್ಲವನ್ನೂ ನಮ್ಮ ಮೂಗಿನ ನೇರಕ್ಕೆ ಮಾಡಿಮುಗಿಸಿದರಾಯಿತು ಎಂದು ನಮ್ಮವರು ಭಾವಿಸಿದ್ದರೋ ಏನೋ. ಆದರೆ ಯೋಜನೆಯ ಕರಡು ಸಿದ್ಧಗೊಂಡು ಇನ್ನೇನು ಗುದ್ದಲಿಪೂಜೆ ನಡೆಸಬೇಕು ಎನ್ನುವಷ್ಟರಲ್ಲಿ ಗೋವಾ ಸರಕಾರ ಈ ಯೋಜನೆಗೆ ಕ್ಯಾತೆ ತೆಗೆಯಿತು. ಸಹಜವೇ ತಾನೆ? ಆಗ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್. ಬೊಮ್ಮಾಯಿ ಗೋವಾದ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆಯವರ ಜೊತೆ ಮಾತುಕತೆಗೆ ಕೂತರು. ಅಜ್ಜೀಪುಣ್ಯ! ಮಾತುಕತೆ ಫಲಪ್ರದವಾಗಿ, ಯೋಜನೆಗೆ ಗೋವೆಯ ಒಪ್ಪಿಗೆ ಸಿಕ್ಕಿತು. 2000ದಲ್ಲಿ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ದಕ್ಕಿತು. ಕಳಸಾ ಮತ್ತು ಬಂಡೂರಿ ನಾಲೆಗಳ ಒಟ್ಟು ನಿರ್ಮಾಣ ಕಾರ್ಯಕ್ಕೆ ಕ್ರಮವಾಗಿ 44.78 ಹಾಗೂ 49.20 ಕೋಟಿ ರುಪಾಯಿಗಳ ಬಜೆಟ್ ಸಿದ್ಧಗೊಂಡು ಹಣಕಾಸು ಇಲಾಖೆಯ ಗ್ರೀನ್ ಸಿಗ್ನಲ್ ಬಂದಾಯಿತು. ಇಷ್ಟೆಲ್ಲ ದ್ರಾವಿಡ ಪ್ರಾಣಾಯಾಮ ಮಾಡಿದ ಮೇಲೆ 2002ರ ಎಪ್ರಿಲ್ ಕೊನೆಯಲ್ಲಿ, ಕೇಂದ್ರ ಸರಕಾರದ ಜಲಸಂಪನ್ಮೂಲ ಸಚಿವಾಲಯ ಕಳಸಾ-ಬಂಡೂರಿ ನಾಲೆ ನಿರ್ಮಾಣಕ್ಕೆ ಹಸಿರು ನಿಶಾನೆ ಹಾರಿಸಿತು. ಆಗ ಕೇಂದ್ರದಲ್ಲಿದ್ದದ್ದು ವಾಜಪೇಯಿಯವರ ಎನ್.ಡಿ.ಎ ಸರಕಾರ. ರಾಜ್ಯದಲ್ಲಿ ಎಸ್ ಎಮ್ ಕೃಷ್ಣರ ಆಡಳಿತ.

ಅಷ್ಟರಲ್ಲಿ ಕರ್ನಾಟಕದಲ್ಲಿ ಚುನಾವಣೆ ಬಂತು. ಮೊದಲಿಗೆ ಧರಮ್ ಸಿಂಗ್ ಮುಖ್ಯಮಂತ್ರಿಯಾಗಿ ಎರಡು ವರ್ಷ ಅಧಿಕಾರ ಚಲಾಯಿಸಿದರು. 2006ರ ಪ್ರಾರಂಭದಲ್ಲಿ ಅಧಿಕಾರ ಕೈಬದಲಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಬಂತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನೀರಾವರಿ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ 2006ರ ಸೆಪ್ಟೆಂಬರ್’ನಲ್ಲಿ ಕಣಕುಂಬಿಯಲ್ಲಿ ಜಲಾಶಯ ನಿರ್ಮಿಸಲು ಗುದ್ದಲಿಪೂಜೆ ಮಾಡಿ, ಕೆಲಸವನ್ನು ಜೋರಾಗಿ ಪ್ರಾರಂಭಿಸಿಯೇಬಿಟ್ಟರು. ಆದರೆ ಅಷ್ಟರಲ್ಲಿ ಗೋವಾದಲ್ಲಿ ಅಧಿಕಾರ ಹಿಡಿದದ್ದು ಕಾಂಗ್ರೆಸ್ ಸರಕಾರ. ಕೇಂದ್ರದಲ್ಲಂತೂ ಮನ್ಮೋಹನ್ ಸಿಂಗ್ ನೇತೃತ್ವದ ಯುಪಿಎ ಅಧಿಕಾರಕ್ಕೇರಿತು. ಎರಡೂ ಸೇರಿ ಕರ್ನಾಟಕದ ಕೆಲಸಕ್ಕೆ ಕೊಕ್ಕೆ ಹಾಕುವ ತಂತ್ರ ಹೂಡಿದವು. ಯಾವುದೇ ಕಾರಣಕ್ಕೆ ಮಹದಾಯಿಯ ನೀರನ್ನು ಬೇರೆ ಕಡೆ ತಿರುಗಿಸಿ ಮಲಪ್ರಭೆಯ ಜಲಾಶಯ ತುಂಬಿಸುವ ಕೆಲಸಕ್ಕೆ ಒಪ್ಪಿಗೆ ಕೊಡುವುದಿಲ್ಲ ಎಂದು ಗೋವಾ ಪಟ್ಟುಹಿಡಿದು ಕೂತುಬಿಟ್ಟಿತು. ಮಾತ್ರವಲ್ಲ; ತಾನೇ ಹಿಂದೊಮ್ಮೆ ಒಪ್ಪಿಗೆ ಸೂಚಿಸಿದ್ದನ್ನು ಮರೆತು ಸಮಸ್ಯೆಯನ್ನು ಕೇಂದ್ರ ಸರಕಾರದ ಮುಂದೆ ತೆಗೆದುಕೊಂಡುಹೋಯಿತು. 2006ರ ಎಪ್ರಿಲ್ 26ರಂದು ಕೇಂದ್ರ ಜಲ ಆಯೋಗದ ಸಭೆ ನಡೆದಾಗ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಮೂರು ಜನ ಮುಖ್ಯಮಂತ್ರಿಗಳೂ ಅಲ್ಲಿ ಪಾಲ್ಗೊಂಡರು. ಮಹದಾಯಿಯಿಂದ 7.56 ಟಿಎಂಸಿ ನೀರನ್ನು ಬೇರೆಡೆ ಹರಿಸುವ ಕರ್ನಾಟಕದ ಪ್ರಸ್ತಾಪಕ್ಕೆ ಎಷ್ಟುಮಾತ್ರಕ್ಕೂ ಸಮ್ಮತಿಸಲಾರೆ ಎಂದು ಗೋವಾ ಹಠ ಹಿಡಿಯಿತು. ಈ ವಿವಾದವನ್ನು ಹಾಗಾದರೆ ಸೌಹಾರ್ದ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ; ಅಂತರರಾಜ್ಯ ಜಲವಿವಾದ ಕಾಯಿದೆ (1956) ಹಾಗೂ ಜಲವಿವಾದ ನಿಯಮ (1959)ಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಕ್ಕೆ ಸಚಿವಾಲಯ ಬದ್ಧವಾಗಿದೆ ಎಂದು ಕೇಂದ್ರ ಸರಕಾರದ ಜಲಸಂಪನ್ಮೂಲ ಸಚಿವಾಲಯ ಹೇಳಿಕೆ ಕೊಟ್ಟಿತು. ಮಾತ್ರವಲ್ಲ, ಸುಪ್ರೀಂ ಕೋರ್ಟ್’ಗೂ ಅಫಿಡವಿಟ್ ಸಲ್ಲಿಸಿ, ಈ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಈ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಲು ಸಾಧ್ಯವಿದ್ದ ವ್ಯಕ್ತಿ ಪ್ರಧಾನಿ ಡಾ. ಮನಮೋಹನ ಸಿಂಗ್. ಆದರೆ, ಅವರು ಡೆಂಟಿಸ್ಟ್ ಬಿಟ್ಟರೆ ಬೇರಾರ ಮುಂದೆಯೂ ಬಾಯಿ ತೆರೆಯುವುದಿಲ್ಲ ಎಂಬ ಜೋಕ್ ಹರಿದಾಡುತ್ತಿತ್ತಲ್ಲ? ಹಾಗಾಗಿ ಉತ್ಸವಮೂರ್ತಿಯಂತೆ ಆಫೀಸು-ಮನೆಗಳಿಗಷ್ಟೇ ಸೀಮಿತರಾಗಿ ಓಡಾಡುತ್ತಿದ್ದ ಸಿಂಗ್ ಮಹದಾಯಿಯ ಸಮಸ್ಯೆಯನ್ನು ಬಗೆಹರಿಸುವುದು ಕನಸಿನ ಮಾತಾಯಿತು. ಇನ್ನು, ಗೋವಾದ ಮುಖ್ಯಮಂತ್ರಿ ಆಗಿದ್ದವರು ಯಾರು? ಒಂದಾನೊಂದು ಕಾಲದಲ್ಲಿ ಬೊಮ್ಮಾಯಿಗೆ ಯೋಜನೆ ಮುಂದುವರೆಸಿ ಎಂದು ಹೇಳಿದ್ದ ಅದೇ ಪ್ರತಾಪ್ ಸಿಂಗ್ ರಾಣೆ!

ಚಿವುಟುವವರೂ ಇವರೇ, ಅಳುವವರೂ ಇವರೇ!

2007ರ ಮೇ ತಿಂಗಳಲ್ಲಿ ಗೋವಾದಲ್ಲಿ ಅಸೆಂಬ್ಲಿ ಚುನಾವಣೆಯ ಕಾವು ಏರಿದ್ದ ಸಮಯ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರ್ಯಾಲಿಯೊಂದರಲ್ಲಿ ಮಾತಾಡುತ್ತ ಘೋಷಿಸಿಬಿಟ್ಟರು: ಮಾಂಡೋವಿ ಗೋವಾದ ಜೀವನದಿ. ರಾಜ್ಯನದಿ. ಮಾಂಡೋವಿ ಗೋವೆಯ ಅಸ್ಮಿತೆಯ ಪ್ರತೀಕ. ಆಕೆಯ ಒಂದೇ ಒಂದು ಹನಿಯನ್ನೂ ಬೇರೆ ರಾಜ್ಯಗಳಿಗೆ ಬಿಟ್ಟುಕೊಡುವುದಿಲ್ಲ. ಮಾಂಡೋವಿಯ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಎಷ್ಟು ಮಾತ್ರಕ್ಕೂ ಬಿಡುವುದಿಲ್ಲ. ಇದು ನನ್ನ ಭೀಷ್ಮ ಪ್ರತಿಜ್ಞೆ! ಹಾಗೆ ಮೇಜು ಗುದ್ದಿ ಭಾಷಣ ಕುಟ್ಟಿದ್ದಕ್ಕೆ ಹುಚ್ಚೆದ್ದು ಖುಷಿಪಟ್ಟ ಗೋವನ್ನರು ಕೈ ಪಕ್ಷಕ್ಕೆ ಮತಕೊಟ್ಟು ಗೆಲ್ಲಿಸಿ ಗದ್ದುಗೆಯಲ್ಲಿ ಕೂರಿಸಿಯೇಬಿಟ್ಟರು. ಮುಂದಿನ ಐದು ವರ್ಷಗಳ ಕಾಲ ಗೋವೆಯಲ್ಲಿ ಕಾಂಗ್ರೆಸ್ ಸರಕಾರ ಇತ್ತು. ಆ ಅಷ್ಟೂ ಸಮಯ ದೆಹಲಿಯಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿತ್ತು. ಮಹದಾಯಿಯ ವಿಚಾರ ಮೇಲೆ ಬಂದಾಗೆಲ್ಲ ಎರಡೂ ಪೂರ್ವಹಂಚಿಕೆ ಹಾಕಿಕೊಂಡು, ಮೈಗೆಲ್ಲ ಎಣ್ಣೆ ಬಳಿದುಕೊಂಡೇ ಅಖಾಡಾಕ್ಕಿಳಿಯುತ್ತಿದ್ದವು. ಕರ್ನಾಟಕದ ಬೇಡಿಕೆ ಅರಣ್ಯರೋದನವಾಗುವಂತೆ ಎರಡೂ ಬಣಗಳು ನೋಡಿಕೊಂಡವು. ಸುಪ್ರೀಮ್ ಕೋರ್ಟ್’ನಲ್ಲಿ ಕರ್ನಾಟಕದ ಪರವಾದ ತೀರ್ಪು ಬಂದರೂ ಬರಬಹುದೆಂಬ ಭೀತಿಯಿಂದಾಗಿ ಮುಂಜಾಗರೂಕತಾ ಕ್ರಮವಾಗಿ ಕೇಂದ್ರ ಸರಕಾರ, ಮಹದಾಯಿ ನ್ಯಾಯಾಧಿಕರಣವನ್ನೂ ಸ್ಥಾಪಿಸಿಬಿಟ್ಟಿತು. 2010ರಲ್ಲಿ ರಚನೆಯಾದ ಈ ನ್ಯಾಯಾಧಿಕರಣಕ್ಕೆ ಕೇಂದ್ರ ಮುಂದಿನ ಮೂರು ವರ್ಷಗಳ ಕಾಲ ಅಧಿಕಾರಿಗಳನ್ನೇ ನೇಮಿಸಲಿಲ್ಲ! ನ್ಯಾಯಾಧಿಕರಣಕ್ಕೆ ಹೇಳಿಕೊಳ್ಳಲಿಕ್ಕೊಂದು ಕಚೇರಿ, ವಿಳಾಸ, ಸಿಬ್ಬಂದಿ ಇರಲಿಲ್ಲ! ಕರ್ನಾಟಕ, ಕಳಸಾ ಬಂಡೂರಿ ಯೋಜನೆಗಳನ್ನು ಯಾವ ಕಾಲಕ್ಕೂ ಮತ್ತೆ ಪ್ರಾರಂಭಿಸಬಹುದು; ಅದು ಯೋಜನೆಯನ್ನು ಒಂದಿಂಚೂ ಮುಂದುವರಿಸದಂತೆ ಮುಚ್ಚಳಿಕೆ ಬರೆದುಕೊಡಬೇಕು ಎಂದು ಗೋವೆಯ ಕಾಂಗ್ರೆಸ್ ಸರಕಾರ ನ್ಯಾಯಾಧಿಕರಣದ ಮುಂದೆ ಬೇಡಿಕೆ ಇಟ್ಟಾಗ, ಕರ್ನಾಟಕದಲ್ಲಿ ಆಗ ಇದ್ದ ಬಿಜೆಪಿ ಸರಕಾರ ಸೊಪ್ಪು ಹಾಕಲಿಲ್ಲ. ಆದರೆ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡು ಹತ್ತೇ ತಿಂಗಳಲ್ಲಿ, ನ್ಯಾಯಮಂಡಳಿಯ ತೀರ್ಪು ಬರುವವರೆಗೆ ಕಳಸಾ ಬಂಡೂರಿ ನಾಲೆ ಯೋಜನೆಯಿಂದ ಒಂದೇ ಒಂದು ಹನಿ ನೀರನ್ನೂ ಮಲಪ್ರಭೆಯ ಜಲಾಶಯಕ್ಕೆ ಹಾಯಿಸುವುದಿಲ್ಲ ಎಂಬ ಬೇಷರತ್ ಮುಚ್ಚಳಿಕೆ ಬರೆದುಕೊಟ್ಟರು!

ವಿವಾದ ಒಂದು ವೃತ್ತ ಪೂರ್ತಿಗೊಳಿಸಿ, ಬ್ಯಾಕ್ ಟು ಸ್ಕ್ವೇರ್ ಒನ್ ಎಂಬಂತೆ ಮರಳಿ ಪ್ರಾರಂಭಬಿಂದುವಿಗೆ ಬಂದುನಿಂತಿದೆ. ಮಹದಾಯಿ ಯೋಜನೆಗೆ ಸಾಧ್ಯವಿರುವ ಎಲ್ಲ ಕಂಟಕಗಳನ್ನೂ ತಂದೊಡ್ಡಿದ ಕಾಂಗ್ರೆಸ್ ಇದೀಗ ಬೆಂಗಳೂರಲ್ಲಿ ಬಿಜೆಪಿಯ ಕೇಂದ್ರ ಕಚೇರಿಯ ಮುಂದೆ ಜನರನ್ನು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದೆ! ರಾಜ್ಯದ ಸಮಸ್ಯೆಯೊಂದಕ್ಕೆ ಪರಿಹಾರ ಬೇಕು ಎಂದು ಪ್ರತಿಪಕ್ಷದ ಪ್ರಧಾನ ಕಚೇರಿ ಮುಂದೆ ಧರಣಿ ನಡೆದ ಇತಿಹಾಸ ಎಲ್ಲಾದರೂ ಇದೆಯೇ? ತಮಾಷೆ ನೋಡಿ: ನಾನು ನಿಮ್ಮ ಮನವಿಗೆ ಸ್ಪಂದಿಸುತ್ತೇನೆ. ಕುಡಿಯುವ ನೀರು ಮೊದಲ ಆದ್ಯತೆ ಎಂಬುದನ್ನು ಖಂಡಿತ ಒಪ್ಪಿಕೊಳ್ಳುತ್ತೇನೆ. ಮಹದಾಯಿಯ ಒಡಲಿನಿಂದ 7.56 ಟಿಎಂಸಿ ನೀರನ್ನು ಕರ್ನಾಟಕ ಬಳಸಿಕೊಳ್ಳಲು ನನ್ನ ತಾತ್ತ್ವಿಕ ಒಪ್ಪಿಗೆ ಇದೆ. ಸಮಸ್ಯೆ ಬಗೆಹರಿಸಲು ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ – ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರಿಗೆ ಪತ್ರ ಬರೆದ ಮರುದಿನವೇ ಕಾಂಗ್ರೆಸ್’ನ ಹೋರಾಟ ಪ್ರಾರಂಭವಾಗಿದೆ! ಪರ್ರಿಕರ್ ಬರೆದ ಪತ್ರವನ್ನು ಯಡಿಯೂರಪ್ಪನವರು ಪರಿವರ್ತನಾ ಯಾತ್ರೆಯಲ್ಲಿ ಓದಿದರೋ ಇಲ್ಲವೋ, ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಎಲ್ಲ ಕೆಲಸಗಳನ್ನೂ ಬದಿಗೊತ್ತಿ ಪುಂಖಾನುಪುಂಖವಾಗಿ ಟ್ವೀಟ್ ಮಾಡಲು ಕೂತುಬಿಟ್ಟರು. ಗೋವಾ ಮುಖ್ಯಮಂತ್ರಿಯ ಜೊತೆ ಮಾತಿಗೆ ಕೂರಬೇಕಾದದ್ದು ಮುಖ್ಯಮಂತ್ರಿಯಾಗಿರುವ ತಾನು. ಆದರೆ, ಪರ್ರಿಕರ್ ಯಡಿಯೂರಪ್ಪನವರಿಗೆ ಪತ್ರ ಬರೆಯುವ ಅಗತ್ಯ ಏನಿತ್ತು ಎಂಬುದೇ ಸಿದ್ದರಾಮಯ್ಯನವರ ಒಡಲಾಳದ ಬೇಗುದಿ! ಸಮಸ್ಯೆ ಒಂದು ವೇಳೆ ಪರಿಹಾರವಾಗಿಯೇಬಿಟ್ಟರೆ ಅದರ ಪೂರ್ತಿ ಕ್ರೆಡಿಟ್ಟನ್ನು ಬಿಜೆಪಿ ಬಾಚಿಕೊಂಡುಬಿಡುತ್ತದೆ ಎಂಬ ಆತಂಕ ಸಿದ್ದರಾಮಯ್ಯನವರ ನಿದ್ದೆಗೆಡಿಸಿದೆ. ಹಾಗಾಗಿಯೇ, ಹೋರಾಟದ ಮುಂದಿನ ಹಂತವಾಗಿ ಕರ್ನಾಟಕವನ್ನು ಬಂದ್ ಮಾಡಿಸುವ ಕೆಲಸಕ್ಕೆ ಸರಕಾರ ಕೈ ಹಾಕಿದೆ. ತಾನೇ ಮುಂದಾಗಿ ನಿಂತು ಸಾಲು ಸಾಲು ಬಂದ್’ಗಳನ್ನು ಮಾಡಿಸುತ್ತಿರುವ ಈ ಸರಕಾರಕ್ಕೆ ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ಲವಲೇಶದ ಕಾಳಜಿಯೂ ಇಲ್ಲ ಎಂಬುದು ಸ್ಪಷ್ಟ.

ಮಹದಾಯಿಯಲ್ಲಿದೆ ಮತಗಳ ಲೆಕ್ಕ:

ಮಹಾಭಾರತದಲ್ಲಿ ಒಂದು ಮಾತು ಬರುತ್ತದೆ. ದುರ್ಯೋಧನನಿಗೆ ಕುರುಕ್ಷೇತ್ರದಲ್ಲಿ ಜಮಾವಣೆಯಾದ ಪಾಂಡವರ ಸೇನೆಯನ್ನು ಕಂಡಾಗ ಅಲ್ಲಿದ್ದ ಪ್ರತಿಯೊಬ್ಬರ ಮುಖದಲ್ಲೂ ಕಂಡದ್ದು ಎರಡೇ ಬಿಂಬಗಳಂತೆ: ಭೀಮಸೇನ ಮತ್ತು ಅರ್ಜುನ! ಅವನಿಗೆ ಭಯವಿದ್ದದ್ದು ಆ ಇಬ್ಬರಿಂದ ಆದ್ದರಿಂದ, ಇಡೀ ಸೇನೆಯಲ್ಲಿ ಆ ಎರಡು ಮುಖಗಳಲ್ಲದೆ ಬೇರೇನೂ ಬೇರಾರೂ ಕಾಣಲಿಲ್ಲವಂತೆ. ಹಾಗೆ, ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಎಲ್ಲೆಲ್ಲೂ ಕಾಣುವುದು ಅಮಿತ್ ಷಾ ಮತ್ತು ನರೇಂದ್ರ ಮೋದಿ ಮಾತ್ರ. ಇದಕ್ಕೆ ಪುರಾವೆ, ಅವರೇ ಮುಂದೆ ನಿಂತು ನಡೆಸುತ್ತಿರುವ ಎರಡು ಬಂದ್’ಗಳು. ಒಂದು ಜನವರಿ 25ರಂದು ಆಯೋಜನೆಯಾದರೆ ಇನ್ನೊಂದನ್ನು ಫೆಬ್ರವರಿ 4ಕ್ಕೆ ಹಮ್ಮಿಕೊಂಡಿದ್ದಾರೆ. ಜನವರಿ 27ಕ್ಕೆಂದು ಯೋಜಿತವಾಗಿದ್ದ ಬಂದ್ ಅನ್ನು ಕಾಂಗ್ರೆಸ್, ಉದ್ದೇಶಪೂರ್ವಕ ಎರಡು ದಿನ ಮೊದಲೇ ನಡೆಯುವಂತೆ, 25ಕ್ಕೆ ಎಳೆದುತಂದಿದೆ. ಯಾಕೆಂದರೆ ಇದೇ ದಿನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ, ಪರಿವರ್ತನಾ ಯಾತ್ರೆ ಸಂಪನ್ನವಾದ ಸಂದರ್ಭಕ್ಕೆಂದು, ಮೈಸೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡುವ ಕಾರ್ಯಕ್ರಮ ಇತ್ತು! ಇನ್ನು ಫೆಬ್ರವರಿ 4? ಅಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿದೆ! ಬಹುಶಃ ಹೀಗೆ ಬಿಜೆಪಿಯ ರಾಷ್ಟ್ರೀಯ ನಾಯಕರನ್ನು ಶತಾಯಗತಾಯ ತಡೆಯುವುದೇ ಕಾಂಗ್ರೆಸ್’ನ ಒಂದಂಶದ ಕಾರ್ಯಕ್ರಮವಾಗಿದ್ದರೆ, ಚುನಾವಣೆಯ ಪ್ರಚಾರ ನಡೆಸಬೇಕಾದ ಕೊನೆಯ ಎರಡು ತಿಂಗಳು ಪೂರ್ತಿ ಕರ್ನಾಟಕ ಬಂದ್ ನಡೆಸಬೇಕಾಗಬಹುದು!

ಮಹದಾಯಿ ಸಮಸ್ಯೆ ಈಗೇಕೆ ದೊಡ್ಡದಾಗುತ್ತಿದೆ? ಯಾಕೆ ಅದು ಕೇಂದ್ರ ಸರಕಾರವನ್ನೇ ಟಾರ್ಗೆಟ್ ಮಾಡಿದೆ? ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ. ಐದು ವರ್ಷಗಳಲ್ಲಿ ನಯಾಪೈಸೆಯ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಕಾಲಹರಣ ಮಾಡಿರುವ ಸರಕಾರಕ್ಕೆ ಈಗ ಚುನಾವಣೆಗೊಂದು ವಿಷಯ ಬೇಕು. ಭಾರತೀಯ ಜನತಾ ಪಕ್ಷ ಈಗಾಗಲೇ ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಮುಂದಿಟ್ಟುಕೊಂಡು, 23 ಹಿಂದೂ ಕಾರ್ಯಕರ್ತರ ಹತ್ಯೆಯ ವಿಷಯವನ್ನು ಚುನಾವಣೆಗೆಂದು ಎಳೆದುತರುತ್ತಿರುವಾಗ, ತನ್ನ ಮುಖ ಮುಚ್ಚಿಕೊಳ್ಳಲು ಕಾಂಗ್ರೆಸ್’ಗೊಂದು ಜ್ವಲಂತ ಸಮಸ್ಯೆ ಬೇಕಾಗಿದೆ. ಯಡಿಯೂರಪ್ಪನವರನ್ನು ನಿಯಂತ್ರಿಸಬೇಕಾದರೆ ಅವರ ಉತ್ತರ ಕರ್ನಾಟಕದ ಮತಬ್ಯಾಂಕ್ ಅನ್ನು ಮುರಿಯಬೇಕು. ಉತ್ತರ ಕರ್ನಾಟಕದ ಮಂದಿಯನ್ನು ರೊಚ್ಚಿಗೆಬ್ಬಿಸಿ, ಅವರಲ್ಲಿ ಭಾಜಪಾ ವಿರೋಧಿ ಭಾವನೆ ಮೂಡುವಂತೆ ಮಾಡಬೇಕು. ಅದಕ್ಕಾಗಿ ಆರು ತಿಂಗಳ ಹಿಂದೆ ಲಿಂಗಾಯತ-ವೀರಶೈವ ಸಮಸ್ಯೆಯನ್ನು ಮುನ್ನೆಲೆಗೆ ತರಲು ಇನ್ನಿಲ್ಲಿದ ಪ್ರಯತ್ನಗಳು ನಡೆದವು. ಆದರೆ, ಈಗ, ಆ ಸಮಸ್ಯೆಗೆ ಪರಿಹಾರ ಪಡೆಯಲು ಲಿಂಗಾಯತ – ವೀರಶೈವ ಸಂಘಟನೆಗಳು ಆರು ತಿಂಗಳ ಕಾಲಾವಕಾಶ ತೆಗೆದುಕೊಂಡಿರುವುದರಿಂದ ಕಾಂಗ್ರೆಸ್ ಅನಿವಾರ್ಯವಾಗಿ ಆ ವಿಷಯವನ್ನು ತನ್ನ ಚುನಾವಣೆಯ ವಿಷಯಗಳ ಪಟ್ಟಿಯಿಂದ ಕೈಬಿಡಬೇಕಾಗಿದೆ! ಹಾಗಾದರೆ ಮುಂದೇನು? ಮಹದಾಯಿ ವಿಷಯದಲ್ಲಿ ಸಾಧ್ಯವಾದಷ್ಟು ಗಬ್ಬೆಬ್ಬಿಸೋಣ ಎಂಬುದು ಅದರ ಮುಂದಿನ ಅಜೆಂಡಾ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾಲತಾಣವನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ, ಅವರು ಮಹದಾಯಿಯನ್ನು ಚುನಾವಣೆಗಾಗಿ ಬಳಸಿಕೊಳ್ಳಲು ಅದೆಷ್ಟೊಂದು ಕಸರತ್ತು ಮಾಡುತ್ತಿದ್ದಾರೆ ಎಂಬುದು ಗೊತ್ತಾದೀತು.

ಮುಖ್ಯಮಂತ್ರಿಗಳೇ, ಉತ್ತರ ಕೊಡಿ!

1)  2005ರಿಂದ 2012ರವರೆಗೆ ಗೋವಾದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಮಹದಾಯಿಯ ಒಂದೇ ಒಂದು ಹನಿ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಬಿಡುವುದಿಲ್ಲ ಎಂದು ಕಾಂಗ್ರೆಸ್’ನ ಅಧಿನಾಯಕಿ ಸೋನಿಯಾ ಘಂಡಿ ಗೋವಾದಲ್ಲಿ ಹೇಳಿದ್ದು ಇದೇ ಅವಧಿಯಲ್ಲಿ. ಆಗ ನೀವು ಪ್ರತಿಭಟಿಸುವುದು ಬಿಡಿ, ಆ ಮಾತನ್ನು ಖಂಡಿಸಿ ಒಂದು ಸಣ್ಣ ಹೇಳಿಕೆಯನ್ನೂ ಕೊಡಲಿಲ್ಲ ಏಕೆ?

2)  ಕರ್ನಾಟಕವನ್ನು ನಾವು ನಂಬುವುದಿಲ್ಲ; ಸುಪ್ರೀಂ ಕೋರ್ಟ್’ನಲ್ಲಿ ಈ ಸಮಸ್ಯೆ ಪರಿಹಾರವಾಗುತ್ತದೆ ಎಂದು ನಮಗನ್ನಿಸುವುದಿಲ್ಲ; ನ್ಯಾಯಮಂಡಳಿ ರಚನೆ ಮಾಡಿ ಎಂದು ಗೋವಾದ ಸರಕಾರ ಕೇಂದ್ರವನ್ನು ಕೇಳಿಕೊಂಡದ್ದು ಇದೇ ಅವಧಿಯಲ್ಲಿ. ಗೋವಾದ ಬೇಡಿಕೆಯನ್ನು ಮನ್ನಿಸಿ ಕೇಂದ್ರ ಸರಕಾರ ನ್ಯಾಯಾಧಿಕರಣವನ್ನು ರಚಿಸಿದ್ದು ಕೂಡ ಇದೇ ಅವಧಿಯಲ್ಲೇ. ಮುಖ್ಯಮಂತ್ರಿಗಳೇ, ಆಗ ಕರ್ನಾಟಕದ ಕಾಂಗ್ರೆಸ್ ಪಕ್ಷಕ್ಕೆ ಮಹದಾಯಿಯ ಪರವಾಗಿ ಹೋರಾಟ ಮಾಡಬೇಕು ಅನ್ನಿಸಲಿಲ್ಲವೆ?

3)  ನಾವು ಗೋವಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಮನವೊಲಿಸುತ್ತೇವೆ. ನೀವು ಆ ಎರಡೂ ರಾಜ್ಯಗಳ ವಿರೋಧಪಕ್ಷಗಳನ್ನು (ಎರಡೂ ಕಾಂಗ್ರೆಸ್) ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಭಾಜಪಾ ನಾಯಕ ಯಡಿಯೂರಪ್ಪ ಹೇಳಿದಾಗ ಸಂಸದ, ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, “ನಾವೇನು ಮಾಡೋದಕ್ಕೆ ಸಾಧ್ಯ? ವಿರೋಧಪಕ್ಷಗಳು ಮಹದಾಯಿ ನೀರನ್ನು ಕರ್ನಾಟಕ ಪಡೆಯುವುದನ್ನು ವಿರೋಧಿಸಿಯೇ ತೀರುತ್ತವೆ” ಎಂದು ಹೇಳಿದ್ದರು. ಅಂದರೆ ಇವರ ಅಜೆಂಡಾ ಸ್ಪಷ್ಟ. ಹಾವೂ ಸಾಯಬಾರದು, ಕೋಲೂ ಮುರಿಯಬಾರದು. ಇತ್ತ ಕರ್ನಾಟಕದಲ್ಲಿ ಭಾಜಪಾ ಮೇಲೆ ಜನವಿರೋಧಿ ಎಂಬ ಭಾವನೆ ಬರುವಂತೆ ಮಾಡಬೇಕು. ಆದರೆ ಅತ್ತ, ಗೋವಾ ಮತ್ತು ಮಹಾರಾಷ್ಟ್ರಗಳ ಕಾಂಗ್ರೆಸ್ ಘಟಕಗಳನ್ನು ಎದುರು ಹಾಕಿಕೊಳ್ಳಬಾರದು! ಕರ್ನಾಟಕದಲ್ಲಿ ಮಹದಾಯಿ ಹೋರಾಟದಲ್ಲಿ ಭಾಜಪಾ ಯಶಸ್ಸು ಕಂಡದ್ದೇ ಆದರೆ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ತಾನೇ ತಾನಾಗಿ ಭಾಜಪಾ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹಾಗಾಗಲಿ ಎಂಬುದೇ ಅಲ್ಲವೆ ನಿಮ್ಮ ಆಸೆ? ಅದಕ್ಕೇ ಅಲ್ಲವೆ ಇಷ್ಟೆಲ್ಲ ಕಸರತ್ತು?

4) ಡಾ. ಮನಮೋಹನ್ ಸಿಂಗ್ ಹತ್ತು ವರ್ಷ ಪ್ರಧಾನಿಯಾಗಿದ್ದರು. ಆಗಲೂ ಮಹದಾಯಿ ವಿವಾದ ಆಗೀಗ ಎದ್ದುಕಂತುತ್ತಿತ್ತು. ಒಮ್ಮೆಯಾದರೂ ಕಾಂಗ್ರೆಸ್ನ ರಾಜಕಾರಣಿಗಳು ಸಿಂಗ್ ಮಧ್ಯಸ್ಥಿಕೆ ವಹಿಸಬೇಕೆಂದು ಕೇಳಿಕೊಂಡರೇ? ಸೋನಿಯಾ ಘಂಡಿ ಗೋವಾದಲ್ಲಿ ಆಡಿದ ಮಾತು ತಪ್ಪು ಎಂದು ಹೇಳುವ ಎದೆಗಾರಿಕೆ ಎಷ್ಟು ಕಾಂಗ್ರೆಸ್ಸಿಗರಲ್ಲಿದೆ? ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ನ ಆಗಿನ ಉಪಾಧ್ಯಕ್ಷ, ಈಗಿನ ಅಧ್ಯಕ್ಷ ರಾಹುಲ್ ಘಂಡಿ ಏನಾದರೂ ಮಾತನಾಡಿದ್ದು ಯಾರಿಗಾದರೂ ಗೊತ್ತಿದೆಯೇ? ರಾಹುಲ್ ಮಹದಾಯಿ ವಿಚಾರದಲ್ಲಿ ಕರ್ನಾಟಕದ ಪರವಾಗಿ ವಕಾಲತ್ತು ಮಾಡಿದ್ದನ್ನು ಮುಖ್ಯಮಂತ್ರಿಗಳೇ, ನೀವಾದರೂ ನೋಡಿದ್ದೀರಾ?

5) ನಾನು ಮಹದಾಯಿ ವಿಚಾರವನ್ನು ಉಭಯಪಕ್ಷಗಳಿಗೂ ಸಮ್ಮತವಾಗುವಂತೆ ಪರಿಹರಿಸುವುದಕ್ಕೆ ಯತ್ನಿಸುತ್ತೇನೆ ಎಂದು ಗೋವಾದ ಮುಖ್ಯಮಂತ್ರಿಗಳು ಯಡಿಯೂರಪ್ಪನವರಿಗೆ ಪತ್ರ ಬರೆದರೆ ಸಿದ್ದರಾಮಯ್ಯನವರು ಯಾಕೆ ಉರಿದುಬೀಳಬೇಕು? ಟ್ವಿಟ್ಟರ್’ನಲ್ಲಿ ಯಾಕೆ ಅವರು ಎಡೆಬಿಡದೆ ಭಾಜಪಾ ಮತ್ತು ಯಡಿಯೂರಪ್ಪನವರ ಮೇಲೆ “ಸೊಂಟದ ಕೆಳಗೆ ಹೊಡೆಯುವುದು” ಎಂಬಂತೆ ವಾಗ್ಬಾಣ ಎಸೆಯಬೇಕು?

6)  ಸಿದ್ದರಾಮಯ್ಯನವರು ಸರ್ವಪಕ್ಷ ನಿಯೋಗವನ್ನು ಪ್ರಧಾನಿಯ ಬಳಿ ಒಯ್ದಾಗ, ಪ್ರಧಾನಿಗಳು, ನೀವು ಮೂರೂ ಮುಖ್ಯಮಂತ್ರಿಗಳು ಮಾತುಕತೆ ಆಡಿ ಒಟ್ಟಾಗಿ ಬನ್ನಿ; ಆಗ ಕೂತು ಚರ್ಚಿಸಲು ಸುಲಭ ಎಂದಿದ್ದರು. ಮಾತ್ರವಲ್ಲ, ಗೋವಾ ಹಾಗೂ ಮಹಾರಾಷ್ಟ್ರಗಳ ವಿಪಕ್ಷಗಳ ಮನವೊಲಿಸಿ ಎಂದೂ ಹೇಳಿದ್ದರು. ಅವರೆದುರಲ್ಲಿ ಸರಿ ಎಂದು ಗೋಣಾಡಿಸಿದ ನಮ್ಮ ಮುಖ್ಯಮಂತ್ರಿಗಳು ಸಭೆಯಿಂದ ಹೊರಬರುತ್ತಲೇ, ಪ್ರಧಾನಿಗಳು ಸಮಸ್ಯೆ ಪರಿಹಾರಕ್ಕೆ ಸಹಕರಿಸುತ್ತಿಲ್ಲ ಎಂದು ಟ್ವೀಟ್ ಮಾಡಿದರು. ಈ ಇಬ್ಬಂದಿ ನಿಲುವು ಏಕೆ?

7)  ಯಾಕೆ ಒಂದಷ್ಟು ರೋಲ್ಕಾಲ್ ಸಂಘಟನೆಗಳನ್ನು ಬೆನ್ನಿಗೆ ಕಟ್ಟಿಕೊಂಡು ಬಂದ್ಗೆ ಪರೋಕ್ಷ, ಪ್ರತ್ಯಕ್ಷ ಬೆಂಬಲ ನೀಡುತ್ತೀರಿ? ಒಂದು ರೋಲ್ಕಾಲ್ ಸಂಘಟನೆಯ ಅಧ್ಯಕ್ಷ ಕೆಲವೇ ದಿನಗಳ ಹಿಂದೆ, ಯಾರೂ ಭಾಜಪಾಕ್ಕೆ ಮತ ಹಾಕಬೇಡಿ ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದ. ಅದಾಗಿ ಕೆಲವೇ ದಿನಗಳಲ್ಲಿ ಅದೇ ಸಂಘಟನೆಗಳವರು ಕರ್ನಾಟಕದ ಹಿತಾಸಕ್ತಿಯ ರಕ್ಷಣೆಯ ಹೆಸರೆತ್ತಿಕೊಂಡು ರಾಜ್ಯಾದ್ಯಂತ ಬಂದ್ ಮಾಡಲು ಓಡಾಡುತ್ತಿದ್ದಾರೆ. ಈ ಎಲ್ಲ ಬಿಂದುಗಳನ್ನು ಜೋಡಿಸುತ್ತಾ ಬಂದರೆ ನಮಗೆ ಕರ್ನಾಟಕ ಕಾಂಗ್ರೆಸ್ನ ಚಿತ್ರ ಸಿಗುತ್ತದಲ್ಲ ಯಾಕೆ? ಸ್ವಹಿತಾಸಕ್ತಿಗಾಗಿ ರಾಜ್ಯದ ಹಿತ ಬಲಿಕೊಟ್ಟು ಬಂದ್ ಮಾಡಿಸುವ, ಸರಕಾರದ ಮೂಲಕವೇ ಬಂದ್’ಗೆ ಕುಮ್ಮಕ್ಕು ಕೊಡುವ ನೀವು ರಾಜ್ಯದ ಕಾನೂನು ಪರಿಪಾಲಕರೇ?

8)  ಮುಖ್ಯಮಂತ್ರಿಗಳೇ, ನಿಮ್ಮ ಸರಕಾರದಲ್ಲಿ ನೀರಾವರಿ ಮತ್ತು ಜಲಸಂಪನ್ಮೂಲ ಸಚಿವಾಲಯ ಎಂಬುದೊಂದು ಇದೆಯೇ? ಅದಕ್ಕೆ ಸಚಿವರು ಇದ್ದಾರೆಯೇ? ಅವರು ಮಹದಾಯಿ ವಿಚಾರದಲ್ಲಿ ಏನಾದರೂ ತಲೆಕೆಡಿಸಿಕೊಂಡಿದ್ದಾರೆಯೇ? ವೀರಶೈವ ಲಿಂಗಾಯತ ಗೋಜಲಿನಿಂದ ಹೊರಬಂದು ಅವರು ತಮ್ಮ ಸಚಿವಾಲಯದ ಕೆಲಸಕಾರ್ಯಗಳತ್ತ ಗಮನ ಕೊಡುವುದು ಯಾವಾಗ? ಮಹದಾಯಿ ವಿಚಾರದಲ್ಲಿ ಕರ್ನಾಟಕ ಸರಕಾರದ ಮುಂದಿನ ಹೆಜ್ಜೆ ಏನು ಎಂದು ಯಾರಾದರೂ ಪತ್ರಕರ್ತರು ಅವರನ್ನು ಕೇಳಿದರೆ, ಅವರು, ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸಲೇಬೇಕು; ಅಲ್ಲಿಯವರೆಗೆ ನಾವು ವಿರಮಿಸುವುದಿಲ್ಲ ಎಂಬ ಉತ್ತರ ಕೊಡಬಹುದು! ಬೆಂಗಳೂರಲ್ಲಿ ಕೆರೆಗಳು ಬೆಂಕಿಯುಗುಳುತ್ತಿವೆ. ರಾಜ್ಯದಲ್ಲಿ ಅಂತರ್ಜಲ ಮಟ್ಟ ಪಾತಾಳ ಕಾಣುತ್ತಿದೆ. ಈ ವಿಷಯಗಳ ಕುರಿತು ನಿಮ್ಮ ನೀರಾವರಿ ಮತ್ತು ಜಲಸಂಪನ್ಮೂಲ ಸಚಿವರು ಏನು ಹೇಳುತ್ತಾರೆ?

ಈಗಲೂ ಕಾಲ ಮಿಂಚಿಲ್ಲ. ಮಹದಾಯಿ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಸಾಧ್ಯವಿದೆ. ಭಾಜಪಾದ ನಾಯಕರನ್ನು ಕರೆದು ಕೂರಿಸಿ ಮಾತಾಡಿಸಿ. ಗೋವಾದ ಮುಖ್ಯಮಂತ್ರಿಗಳನ್ನು ಮಾತುಕತೆಗೆ ಆಮಂತ್ರಿಸಿ. ಇಲ್ಲವೇ ಸರ್ವಪಕ್ಷ ನಿಯೋಗದ ಜೊತೆ ನೀವೇ ಅಲ್ಲಿಗೆ ಹೋಗಿ. ನ್ಯಾಯಮಂಡಳಿಯ ತೀರ್ಪು ಬಂದಾಗ ಕೈ ಕೈ ಹಿಸುಕಿಕೊಳ್ಳುವುದನ್ನು ಬಿಟ್ಟು ನಾವೇ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳುತ್ತೇವೆಂದು ಹೇಳಿಕೆ ಕೊಡಿ. ನಿಮ್ಮ ಹಿತಾಸಕ್ತಿಗಾಗಿ ಜನಸಾಮಾನ್ಯರ ಜೀವನವನ್ನು ಅಸ್ತವಸ್ತ್ಯಗೊಳಿಸುವುದನ್ನು ಬಿಡಿ. ಬಂದ್ ಹೆಸರಲ್ಲಿ ಬರೆ ಹಾಕಬೇಡಿ. ಎಲ್ಲಕ್ಕಿಂತ ಮುಖ್ಯವಾಗಿ ಮಹದಾಯಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬೇಡಿ. ರೋಮ್ ನಗರ ಹೊತ್ತಿ ಉರಿಯುವಾಗ ಪಿಟೀಲು ನುಡಿಸಿದ ನೀರೋ ನಿಮಗೆ ಆದರ್ಶವಾಗಬಾರದು ದೊರೆಗಳೇ.

ಮಹದಾಯಿ ಎಂಬ ಫ್ರಾಂಕನ್’ಸ್ಟೈನ್ ಭೂತ

ಮಹದಾಯಿ ಸಮಸ್ಯೆಯ ಇತಿಹಾಸವನ್ನು ನೋಡಿದವರಿಗೆ, ಇದು, ಇಲ್ಲದೇ ಇದ್ದ ಭೂತವೊಂದನ್ನು ನಾವಾಗಿ ಸೃಷ್ಟಿಸಿ ಈಗ ನಾವೇ ಆ ಭೂತಕ್ಕೆ ಭಯಪಡುವಂಥ ಸನ್ನಿವೇಶ ಸೃಷ್ಟಿಸಿಕೊಂಡದ್ದು ಎಂಬುದು ಗೊತ್ತಾದೀತು. 1978ರಲ್ಲಿ, ಮಹದಾಯಿಯ ನೀರು ತಿರುಗಿಸಿ ಮಲಪ್ರಭಾ ನದಿಯ ಒಡಲು ತುಂಬಿಸುವ ಐಡಿಯಾ ಕೊಟ್ಟದ್ದು ಯಾರು? ಕಾಂಗ್ರೆಸ್ ಸರಕಾರ. ಅದರಲ್ಲಿ ಮುಖ್ಯಮಂತ್ರಿಗಳಾಗಿದ್ದ ಗುಂಡೂರಾಯರು. ಒಂದು ನದಿಯಲ್ಲಿ ಒರತೆಯ ಕೊರತೆಯಾದಾಗ ಇನ್ನೊಂದು ನದಿಯಿಂದ ಅದಕ್ಕೆ ಜಲಪೂರಣ ಮಾಡುವುದು ಸರಿಯಾದ ಕ್ರಮವೇ? ವೈಜ್ಞಾನಿಕವೇ? ಈ ಕುರಿತ ಯಾವ ಸಂಶೋಧನೆಗಳೂ ಮಹದಾಯಿಯ ವಿಚಾರದಲ್ಲಿ ನಡೆದಿಲ್ಲ. ಮಲಪ್ರಭಾದಲ್ಲಿ ನೀರಿನ ಮಟ್ಟ ಯಾಕೆ ಕುಸಿತ ಕಂಡಿತು? ಆ ಭಾಗದಲ್ಲಿ ವರ್ಷ ವರ್ಷ ಮಳೆಯ ಪ್ರಮಾಣ ತಗ್ಗಲು ಕಾರಣವೇನು? ಪ್ರತಿವರ್ಷವೂ ಕಾಣಿಸಿಕೊಳ್ಳುತ್ತಿರುವ ಬರಕ್ಕೆ ಪರಿಹಾರವೇನು? ಉತ್ತರಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಏರಿಸುವುದು ಹೇಗೆ? ಈ ಯಾವ ವಿಷಯದಲ್ಲೂ ನಮ್ಮ ಸರಕಾರಗಳು, ಬಂದುಹೋದ ನೀರಾವರಿ ಸಚಿವರುಗಳು ಯೋಚಿಸಿಲ್ಲ. ಅಂತರ್ಜಲ ಏರಿಸುವ ಬಗ್ಗೆ, ಕೆರೆಗಳನ್ನು ಉಳಿಸಿಕೊಳ್ಳುವುದರ ಬಗ್ಗೆ ಯಾವ ಸರಕಾರಕ್ಕೂ ಆಸ್ಥೆ ಇಲ್ಲ. ಇಂದು ಮಹದಾಯಿಯ ನೀರು ತಿರುಗಿಸಿ ಮಲಪ್ರಭಾ ಜಲಾಶಯ ತುಂಬಿಸಲು ಉತ್ಸಾಹ ತೋರಿಸುತ್ತಿರುವ ನಾವು, ನಾಳೆಯ ದಿನ, ನೇತ್ರಾವತಿಯ ನೀರು ತಿರುಗಿಸಿ ಚಿಕ್ಕಬಳ್ಳಾಪುರ, ಕೋಲಾರಗಳಿಗೆ ನೀರುಣಿಸುವ ಯೋಜನೆ ಮುನ್ನೆಲೆಗೆ ಬಂದಾಗ ಹೇಗೆ ಪ್ರತಿಕ್ರಿಯಿಸುತ್ತೇವೆ? ಒಂದೊಂದು ಹನಿ ನೀರಿಗೂ ಬಂದ್ ಮಾಡುತ್ತಿರುವ ನಾವು, ನಮ್ಮದೇ ರಾಜಧಾನಿಯಲ್ಲಿ ಬೆಳ್ಳಂದೂರಿನಂಥ 900 ಎಕರೆ ವಿಸ್ತಾರದ ಕೆರೆಯನ್ನು ಬೆಂಕಿಯ ಕುಲುಮೆ ಮಾಡಿದ್ದೇವಲ್ಲ, ಆ ಕುರಿತು ತಲೆಕೆಡಿಸಿಕೊಂಡಿದ್ದೇವಾ? ಎಲ್ಲಿದೆ ನಮ್ಮ ಪರಿಸರ ಪ್ರಜ್ಞೆ? ಇನ್ನೊಂದೆರಡು ತಿಂಗಳಲ್ಲಿ ಕಾವೇರಿಯ ಕಾವು ಏರುತ್ತದೆ. ಆಗ, ಕಾವೇರಿ ನೀರನ್ನು ತಮಿಳುನಾಡಿಗೆ ಸತ್ತರೂ ಕೊಡೆವು ಎಂದು ಘಂಟಾಘೋಷವಾಗಿ ಸಾರುವ, ಮೂವತ್ತು ಜಿಲ್ಲೆಗಳಲ್ಲಿ ರೈಲುರೋಕೋ ಮಾಡುವ ಸಂಘಟನೆಗಳು ಪರ್ಯಾಯ ಜಲಮೂಲಗಳನ್ನು ರಕ್ಷಿಸುವ ವಿಷಯದಲ್ಲಿ ಎಷ್ಟು ಕೆಲಸ ಮಾಡಿತೋರಿಸಿವೆ?

ಮಹದಾಯಿ ಸಮಸ್ಯೆಯನ್ನು ಬೆಳ್ಳಂದೂರು ಕೆರೆಗೆ ಎಳೆದುತರುತ್ತೀರಿ ಯಾಕೆ? ಎನ್ನಬಹುದೇನೋ ನೀವು. ನಿಮಗಾಗಿ ಒಂದು ಮಾಹಿತಿ: ಕೇವಲ 20 ವರ್ಷಗಳ ಹಿಂದೆ ಬೆಂಗಳೂರಿನ ಒಟ್ಟು ಕೆರೆಗಳ ನೀರು ಹಿಡಿದಿಡುವ ಸಾಮಥ್ರ್ಯ 35 ಟಿಎಂಸಿ ಇತ್ತು. ಅದರಲ್ಲಿ ಬೆಳ್ಳಂದೂರಿನ ಕೆರೆಯೊಂದೇ 7.3 ಟಿಎಂಸಿ ನೀರನ್ನು ಒದಗಿಸಬಲ್ಲುದಾಗಿತ್ತು. ಇಂದು ಅದೊಂದು ಕಸದ ತೊಟ್ಟಿಯಾಗಿ, ಪ್ರಾಕೃತಿಕ ಮಿಥೇನ್ ಉತ್ಪಾದಕ ಘಟಕವಾಗಿ, ಕೊಳಚೆಯಾಗಿ, ಮಲದ ಗುಂಡಿಯಾಗಿ ಬದಲಾಗಿದೆ. ಅದರಲ್ಲಿ ಒಂದೇ ಒಂದು ಗ್ಲಾಸ್ ಶುದ್ಧ ನೀರನ್ನೂ ತೆಗೆಯಲು ಇಂದು ಸಾಧ್ಯವಿಲ್ಲ. ಇಂದು ನಾವು ಮಹದಾಯಿಯಿಂದ ಬೇಕು ಎಂದು ಕೇಳುತ್ತಿರುವ ನೀರಿನಷ್ಟೇ ಪ್ರಮಾಣದ ದೊಡ್ಡ ನೀರಿನ ತೊಟ್ಟಿ ಈ ಬೆಳ್ಳಂದೂರು ಕೆರೆ. ಇದನ್ನು ಕೊಚ್ಚೆಗುಂಡಿಯಾಗಿ ಮಾಡಿರುವ ನಮಗೆ ಮಹದಾಯಿಯ ನೀರಲ್ಲಿ ಪಾಲು ಕೇಳುವ ಯಾವ ಅರ್ಹತೆ ಉಳಿದಿದೆ, ನೀವೇ ಹೇಳಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!