Featured ಅಂಕಣ

ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ: ರಘು ದೀಕ್ಷಿತ್

ಮೊದಲ ಭಾಗ:  ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ: ರಘು ದೀಕ್ಷಿತ್ 

ರಾಕ್ ಬ್ಯಾಂಡ್ ಎಂದರೆ – ಇಂಗ್ಲಿಷ್ ಹಾಡುಗಳು ಎನ್ನುವುದು ಸಾಮಾನ್ಯನ ಅರಿವು; ಅದನ್ನೂ ಮೀರಿ ಕನ್ನಡ ಜಾನಪದ ಹಾಡುಗಳು, ಷರೀಫರ ತತ್ತ್ವಯುತ ಹಾಡುಗಳು ಮುಂತಾದವುಗಳನ್ನು ಆಯ್ಕೆ ಮಾಡುವ ಧೈರ್ಯ ಆಲೋಚನೆ ಹೇಗೆ ಬಂತು?

ಧೈರ್ಯ ಇರಲಿಲ್ಲ. ಒಮ್ಮೆ ನಾನು ಅತ್ತೆ ಮನೆಯಲ್ಲಿದ್ದೆ, ಅಲ್ಲೊಂದು ಕಾರ್ಯಕ್ರಮವಿತ್ತು. ಜನಜಂಗುಳಿಯಿದ್ದರೆ ಅಷ್ಟು ಆಗುತ್ತಿರಲಿಲ್ಲ ನನಗೆ. ಹಾಗಾಗಿ ಒಂದು ಕೋಣೆಯೊಳಗೆ ಗಿಟಾರ್ ಹಿಡಿದುಕೊಂಡು ಸೇರಿದ್ದೆ. ಅಲ್ಲಿ ಒಂದು ಪುಸ್ತಕವಿತ್ತು, ಅದರ ಪುಟಗಳನ್ನು ತಿರುಗಿಸಲು ಆರಂಭಿಸಿದೆ. ಅದರಲ್ಲಿ ‘ಗುಡುಗುಡಿಯಾ ಸೇದಿ ನೋಡೋ’ ಹಾಡಿತ್ತು, ಇದೇನಿದು ಎನ್ನುವ ಕುತೂಹಲಕ್ಕೆ ಅದನ್ನು ಓದಿದೆ. ವಾಹ್! ಎಷ್ಟು ಚೆನ್ನಾಗಿ ಬರೆದಿದ್ದಾರೆ ಅನ್ನಿಸಿತು. ಗಿಟಾರ್ ಹಿಡಿದುಕೊಂಡು ನುಡಿಸಲು ಶುರುಮಾಡಿದೆ. ಅರ್ಧಗಂಟೆಯಲ್ಲಿ ಟ್ಯೂನ್ ಬಂದುಬಿಟ್ಟಿತ್ತು, ಏಕೆಂದರೆ ಸಾಹಿತ್ಯ ಹಾಗೇ ಇದೆ. ಷರೀಫರ ಸಾಹಿತ್ಯಗಳೇ ಹಾಗೆ, ಅರ್ಥವಾಗುವುದಷ್ಟೇ ಕಷ;್ಟ ಒಂದುಸಲ ಅರ್ಥವಾಯಿತೆಂದರೆ ಟ್ಯೂನ್ ತಾನೇತಾನಾಗಿ ಬಂದುಬಿಡುತ್ತದೆ. ಬೇಂದ್ರೆಯವರ ಹಾಡುಗಳಂತು ಸಂಗೀತಕ್ಕೆ ಬಹಳ ಹತ್ತಿರವಾಗಿವೆ. ಹಾಡಿದ ತಕ್ಷಣವೇ ಸಂತೋಷಕೊಡುತ್ತದೆ. ಹಾಡಿ ಹಾಗೆ ಇಟ್ಟುಕೊಂಡಿದ್ದೆ. ಮೊದಲನೇ ಆಲ್ಬಂ ಮಾಡಲು ಹೋದಾಗ ವಿಶಾಲ್ ಶೇಖರ್ ಅವರಿಗೆ ಡೆಮೋ ಕೊಟ್ಟಾಗ ಅದರಲ್ಲಿ ಯಾವುದೇ ಕನ್ನಡ ಹಾಡುಗಳಿರಲಿಲ್ಲ. ಇವಲ್ಲದೆ ಬೇರೆ ಹಾಡುಗಳಿಲ್ವಾ ಎಂದು ಕೇಳಿದರು. ಆಗ ‘ಗುಡುಗುಡಿಯಾ ಸೇದಿ ನೋಡೋ’, ‘ಸೋರುತಿಹುದು ಮನೆಯಾ ಮಾಳಿಗೆ’ ಹಾಡಿದೆ. ‘ಇದು, ನಿಜವಾಗಿಯೂ ರಘುದೀಕ್ಷಿತ್ ಏನು ಎನ್ನುವುದನ್ನು ತೋರಿಸುವ ಹಾಡುಗಳಿವು. ಇದನ್ನು ಯಾಕೆ ರೆಕಾರ್ಡ್ ಮಾಡಿಲ್ಲ?’ ಎಂದರು. ಇಲ್ಲ, ಇವು ಕನ್ನಡದಲ್ಲಿವೆ, ರಾಷ್ಟ್ರೀಯಮಟ್ಟಕ್ಕೆ ಇವು ಸೂಕ್ತವೆನಿಸುವುದಿಲ್ಲ ಎಂದೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡ, ನಿನ್ನತನ ಎನ್ನುವುದು ಈ ಹಾಡುಗಳಲ್ಲಿದೆ ಎಂದು ಅವೆರಡು ಹಾಡುಗಳನ್ನು ಸೇರಿಸಿಕೊಂಡರು. ಆವತ್ತು ಅವರು ಕೊಟ್ಟ ಸಲಹೆ ಇಂದು ಇಲ್ಲಿಯ ತನಕ ಬಂದಿದೆ. ಇಂದು ಎಲ್ಲರೂ ಅದನ್ನು ಇಷ್ಟಪಡುತ್ತಿದ್ದಾರೆ, ಜೊತೆಗೆ ಹಾಡುತ್ತಾರೆ. ಯಾವುದೋ ಒಂದು ಸಮಯದಲ್ಲಿ ಸಿಗುವ ಸಣ್ಣ ಮೆಚ್ಚುಗೆಯೂ ಅತಿಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣವಾಗಿರುತ್ತದೆ, ಅದನ್ನು ವಿಶಾಲ್ ಶೇಖರ್ ಅವರು ನೀಡಿದ್ದರು.

ಅರ್ಥಗಳನ್ನು ತಿಳಿದುಕೊಳ್ಳುವ ಪ್ರಯತ್ನ ಹೇಗೆ ಮಾಡುತ್ತೀರಿ?

ಬಹಳ ಕಷ್ಟಪಡುತ್ತೇನೆ. ಸುಮಾರು ಕನ್ನಡ ಪ್ರೊಫೆಸರರ ನಂಬರನ್ನು ನನ್ನ ಫೋನ್‍ಬುಕ್‍ನಲ್ಲಿ ಇಟ್ಟುಕೊಂಡಿದ್ದೇನೆ. ಮಮತಾ ಸಾಗರ್ ಎಂದು ಒಬ್ಬರಿದ್ದಾರೆ, ನನ್ನ ತಮ್ಮನ ಸ್ನೇಹಿತೆ ಆಕೆ. ಅವರ ಬಳಿ ಆಗಾಗ ಕೇಳುತ್ತಿರುತ್ತೇನೆ. ಪದಕೋಶಗಳಿವೆ, ಆದರೆ ಕವಿ ಮನಸ್ಸಲ್ಲಿರುವುದಕ್ಕೂ ಪದಕೋಶ ಕೊಡುವ ಅರ್ಥಕ್ಕೂ ಬಹಳ ವ್ಯತ್ಯಾಸವಿದೆ. ಬೇಂದ್ರೆಯವರ ಪದಗಳ ಆಟ ನೋಡುವುದಕ್ಕೆ ಹೋದರೆ ಹುಚ್ಚುಹಿಡಿದುಬಿಡುತ್ತದೆ. ಅವರ ಒಂದು ಹಾಡನ್ನು ಅರ್ಥೈಸಿಕೊಳ್ಳಬೇಕೆಂದರೆ ಕಡಮೆ ಎಂದರೂ ಒಂದೆರಡು ವಾರವಾಗುತ್ತದೆ. ಮೇಲ್ನೋಟಕ್ಕೆ ಟ್ಯೂನ್ ಮಾಡುವುದಿಲ್ಲ, ಅರ್ಥ ತಿಳಿದುಕೊಂಡೇ ಸಂಗೀತ ಮಾಡುತ್ತೇನೆ.

ನಿಮ್ಮ ತಂಡದ ಬಗ್ಗೆ ವಿವರಿಸುವಿರಾ?

ತಂಡ ಬದಲಾಗುತ್ತಾ ಇರುತ್ತದೆ. ‘ರಘುದೀಕ್ಷಿತ್ ಪ್ರಾಜೆಕ್ಟ್’ ಎಂದು ಹೆಸರಿಟ್ಟಿದ್ದೇ ಅದೇ ಕಾರಣಕ್ಕೆ. ಮೊದಲು ಇದ್ದ ತಂಡದ ಹೆಸರು ‘ಅಂತರಾಗ್ನಿ’, ಐದಾರುವರ್ಷ ಜೊತೆಗಿದ್ದ ತಂಡ ಬಳಿಕ ಬೇರೆಯಾಯಿತು. ಭಾವನಾತ್ಮಕವಾಗಿ ಬಹಳ ಬೇಸರವಾಗಿದ್ದ ಘಟನೆಯದು. ಆಗ ಅಂದುಕೊಂಡೆ ಯಾರು ಏನೇ ಇದ್ದರೂ ಕೊನೆಗೆ ಇದು ನನ್ನ ಪಯಣ. ಯಾವ ಕಲಾವಿದ ಎಷ್ಟು ದಿನ ಇರುತ್ತಾರೋ ಅಲ್ಲಿಯತನಕ ಇರುತ್ತಾರೆ; ಕೊನೆಯಲ್ಲಿ ಅವರ ಜೀವನದ ಗುರಿ ಅವರಿಗೆ. ಈಗಿರುವ ತಂಡದಲ್ಲಿ ಜೋ ಜೇಕಬ್, ನಾರಾಯಣ ಶರ್ಮಾ, ಗೌರವ್, ಸಂಜಯ್ ಕುಮಾರ್, ಸಂಪ್ರತೀಕ್ ದಾಸ್ ಎಲ್ಲ ಜೊತೆಯಾಗಿ ಇದ್ದೇವೆ.

`ರಘುದೀಕ್ಷಿತ್ ಪರಂಪರೆ’ಯ ಮುಂದುವರಿಕೆಗೆ ಯಾರಾದರೂ ವಾರಸುದಾರರನ್ನು ಗುರುತಿಸಿದ್ದೀರಾ ಅಥವಾ ಬೆಳೆಸುತ್ತಿದ್ದೀರಾ?

ಅಂತಹ ಪರಂಪರೆ ಎನ್ನುವುದೇನಿಲ್ಲ. ಹಾಗೆಲ್ಲ ಹೇಳಿದರೆ ಅದು ಅಹಮಿಕೆಯ ಪ್ರದರ್ಶನವಾಗುತ್ತದೆ. ಭಾರತದ ಸಂಸ್ಕೃತಿಯನ್ನು ಮುಂದೆ ತೆಗೆದುಕೊಂಡು ಹೋಗಬಲ್ಲಂಥವರು ಸುಮಾರು ಜನ ಹುಟ್ಟಿಕೊಂಡಿದ್ದಾರೆ. ಎಲ್ಲರೂ ಅವರವರದ್ದೇ ಆದ ರೀತಿಯಲ್ಲಿ ಮುಂದುವರಿಯುತ್ತಿದ್ದಾರೆ. ಹಳೆಯ ಹಾಡುಗಳನ್ನು ಆರಿಸಿಕೊಂಡು ಹಾಡುತ್ತಿದ್ದಾರೆ. ಸಾಹಿತ್ಯ ಸಂಗೀತದ ಎರಡೂ ವಿಭಾಗಗಳಲ್ಲು ಉತ್ತಮ ಕೆಲಸ ಮಾಡುವವರಿದ್ದಾರೆ.

ಇತ್ತೀಚೆಗೆ ಜನಪ್ರಿಯವಾಗುತ್ತಿರುವ `ರಿಯಾಲಿಟಿ ಷೋ’ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅದು ನಿಜವಾಗಿಯೂ ಪ್ರತಿಭೆಗಳನ್ನು ಗುರುತಿಸುತ್ತಿದೆಯಾ ಅಥವಾ ಹಾದಿ ತಪ್ಪಿಸುತ್ತಿದೆಯಾ?

ಟಿ.ವಿ. ಚಾನೆಲ್ ಮಾಡುತ್ತಿರುವುದು ಅವರ ಕಸುಬಿಗಾಗಿ. ಅದನ್ನು ತಪ್ಪು ಎನ್ನಲಾಗುವುದಿಲ್ಲ. ಅಲ್ಲಿ ಭಾಗವಹಿಸಿದವರನ್ನೆಲ್ಲಾ ದಾರಿತಪ್ಪಿಸುತ್ತಿದ್ದಾರೆ ಎನ್ನುವ ರೀತಿಯಲ್ಲಿ ನೋಡುವುದು ತಪ್ಪು. ಏಕೆಂದರೆ ಯಾವುದೋ ಒಂದು ಶೋ ಕಾರಣದಿಂದ ಒಂದು ಪ್ರತಿಭೆಗೆ ವೇದಿಕೆ ಸಿಗಬಹುದು, ಗುರುತಿಸಿಕೊಳ್ಳಲು ದಾರಿಯಾಗಬಹುದು. ಉತ್ತಮ ಹಾಡುಗಾರರು ಶೋಗಳ ಮೂಲಕ ಸಿಕ್ಕಿದ್ದಾರೆ. ಕನ್ನಡದಲ್ಲಿ ‘ಸರಿಗಮಪ’ ಪ್ರತಿವರ್ಷ ನಡೆಯುತ್ತಿದೆ. ಅಲ್ಲಿ ಗೆದ್ದಬಳಿಕ ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಬೆಳೆದವರು ಬಹಳ ಕಡಮೆ. ನಕುಲ್ ಎನ್ನುವ ಹುಡುಗನಿಗೆ ಈಗ ಹೆಸರು ಬರುತ್ತಿದೆ, ಎಂಟುವರುಷಗಳ ಬಳಿಕ. ಆತ ಸಂಗೀತ, ಸೌಂಡ್ ಇಂಜಿನಿಯರಿಂಗ್ ಎಲ್ಲವನ್ನೂ ಕಲಿತುಕೊಂಡು ಈಗ ಕೆಲಸಮಾಡಲು ಶುರುಮಾಡಿದ್ದಾನೆÉ. ಇನ್ನೊಂದು 6-7 ತಿಂಗಳಲ್ಲಿ ಆತ ಉತ್ತಮ ಸಂಗೀತನಿರ್ದೇಶಕನಾಗಬಲ್ಲ ಎನ್ನುವ ಭರವಸೆ ನನಗಿದೆ. ಆದ್ದರಿಂದ, ರಿಯಾಲಿಟಿ ಶೋ ಎನ್ನುವುದನ್ನು ವೇದಿಕೆಯಾಗಷ್ಟೇ ಸ್ವೀಕರಿಸಬೇಕು. ಮುಂದೆ ಅದನ್ನು ಯಾವ ದಾರಿಯಲ್ಲಿ ತೆಗೆದುಕೊಂಡು ಹೋಗುತ್ತೇವೆ ಎನ್ನುವುದು ಆ ಕಲಾವಿದನ ಕೈಯಲ್ಲಿದೆ.

ನೀವು ಹಾಡುವ ಶೈಲಿಗೆ ನೀವೇ ಒಂದು ಅರ್ಥವನ್ನೋ ವಿವರಣೆಯನ್ನೋ ಕೊಡುವುದಿದ್ದರೆ ಏನು ಹೇಳಲು ಇಷ್ಟಪಡುತ್ತೀರಿ?

ಸಮಕಾಲೀನ ಜನಪದ ಸಂಗೀತ ಎನ್ನಬಹುದು.

ಹಾಡುಗಳನ್ನು ಆರಿಸಿಕೊಳ್ಳುವಾಗ ವಿಶೇಷವಾದ ಮಾನದಂಡ ಎಂದೇನಾದರೂ ಇಟ್ಟುಕೊಳ್ಳುತ್ತೀರಾ?

ಲಿರಿಕಲ್ ವಾಲ್ಯೂ – ಶರೀಫಜ್ಜರ ತತ್ತ್ವಪದ, ಬೇಂದ್ರೆಯವರ ಹಾಡುಗಳೇ ಇರಬಹುದು. ನಾವು ಪಾಸಿಟಿವ್ ಮೆಸೇಜ್ ಇರುವ ಸಾಹಿತ್ಯವನ್ನೇ ಆರಿಸಿಕೊಳ್ಳಬೇಕೆಂಬ ನಮ್ಮದೇ ಆದ ನಿಯಮವನ್ನು ನಾವು ಹಾಕಿಕೊಂಡಿದ್ದೇವೆ. ಹಗುರವಾಗಿ ಬರೆದಿರುವ, ಮುಖ್ಯವಾಗಿ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಬರೆದಿರುವ ಸಾಹಿತ್ಯವನ್ನು ಹೆಚ್ಚಾಗಿ ಕಾಣುತ್ತೇವೆ. ಅಂತಹ ಸಾಹಿತ್ಯದಿಂದ ನಾನು ದೂರವಿದ್ದುಬಿಡುತ್ತೇನೆ. ಪ್ರೀತಿಯ ಹಾಡುಗಳು ಎವರ್ ಗ್ರೀನ್ ಎನ್ನಬಹುದು, ಆದರೆ ಅಲ್ಲಿ ನಿಜವಾದ ಪ್ರೀತಿಯಿರಬೇಕು, ಸರಿಯಾದ ಪದಗಳನ್ನು ಉಪಯೋಗಿಸಿಕೊಂಡಿರಬೇಕು. ಸಿನೆಮಾಸಂಗೀತದಲ್ಲಿ ಈಗಿನ ಕಾಲದಲ್ಲಿ ನೋಡುವುದಿದ್ದರೆ, ಜಯಂತ್ ಕಾಯ್ಕಿಣಿ ಅವರು ಉತ್ತಮ ಸಾಹಿತ್ಯ ನೀಡುತ್ತಿದ್ದಾರೆ. ಸರಳ ಶುದ್ಧ ಸಾಹಿತ್ಯವಿದೆ. ವಾಸುಕಿ ನಾನು ನೋಡಿರುವ ಹುಡುಗ, ಸಣ್ಣವಯಸ್ಸಿನಲ್ಲಿ ಜೀವನದ ಕಷ್ಟ ಕಂಡಿದ್ದಾನೆ, ಬಹಳ ಸುಂದರವಾಗಿ ಹಾಡುಗಳನ್ನು ಬರೆಯುತ್ತಾನೆ.

ನಮ್ಮ ಕಚೇರಿಗಳಿಗೆ ಬರುವ ಜನ ಮೊದಲೇ ತಮ್ಮದೇ ಆದ ವೈಯಕ್ತಿಕ ಸಮಸ್ಯೆಗಳನ್ನು ಹೊಂದಿರುತ್ತಾರೆ. ಮತ್ತೆ ನಾವು ಮನಸ್ಸನ್ನು ಕುಗ್ಗಿಸುವ ಹಾಡುಗಳನ್ನು ಹಾಡಿದರೆ ಮನಸ್ಸು ಉಲ್ಲಸಿತವಾಗುವ ಬದಲು ಮತ್ತಷ್ಟು ಕುಗ್ಗುತ್ತದೆ. ಅದೇ ಕಾರಣಕ್ಕೆ ನಾವು ಧನಾತ್ಮಕ ಹಾಡುಗಳನ್ನೇ ಹಾಡುತ್ತೇವೆ. ಬಹಳಷ್ಟು ಜನ ಹೇಳಿದ್ದಾರೆ – ನಿಮ್ಮ ಕಾರ್ಯಕ್ರಮಕ್ಕೆ ಬಂದು ನನ್ನ ಸಮಸ್ಯೆಯಿಂದ ಸುಲಭವಾಗಿ ಹೊರಬರಬಲ್ಲೆ ಅನಿಸಿದೆ – ಎಂದು. ಇದೇ ಕಾರಣಕ್ಕೆ ನಾವು ವಿದೇಶಗಳಲ್ಲಿ ಸಕ್ಸೆಸ್ ಆಗಿದ್ದೇವೆ. ಪಾಶ್ಚಾತ್ಯದ ಹೆಚ್ಚಿನ ಹಾಡುಗಳಲ್ಲಿ ‘ಲವ್ ಬ್ರೇಕ್‍ಅಪ್’, ‘ಡಿಪ್ರೆಶನ್’ ರೀತಿಯೇ ಇರುತ್ತೇವೆ. ಅಂತಹ ಫೆಸ್ಟಿವಲ್‍ಗಳಲ್ಲಿ ನಾವು ಹಠಾತ್ ಆಗಿ ಆಕರ್ಷಣೀಯವಾದ ಉಡುಗೆ-ತೊಡುಗೆ ಜೊತೆ ‘ಜೈ ಕರ್ನಾಟಕ’ ಎಂದು ಖುಷಿಯಿಂದ ಕೂಗುತ್ತಾ ಸಂತೋಷದ ಹಾಡುಗಳನ್ನು ಹಾಡಿದಾಗ ಅಲ್ಲಿ ಉಂಟಾಗುವ ವಾತಾವರಣವೇ ಎಲ್ಲರಿಗೂ ಖುಷಿ-ನೆಮ್ಮದಿಯನ್ನು ಕೊಡುತ್ತದೆ. ಭಾಷೆ ಅರ್ಥ ಆಗದೇ ಇದ್ದರೂ ಅಲ್ಲಿರುವ ಸಂತೋಷದ ವಾತಾವರಣವೇ ಎಲ್ಲರನ್ನೂ ಉಲ್ಲಸಿತರನ್ನಾಗಿಸುತ್ತದೆ.

ವಿದೇಶಗಳಲ್ಲಿ ಕನ್ನಡ ಹಾಡುಗಳಿಗೆ ಯಾವ ರೀತಿಯ ಪ್ರತಿಕ್ರಿಯೆಗಳು ಸಿಕ್ಕಿವೆ? ಯಾವುದಾದರೂ ವಿಶೇಷವಾದ, ನೆನಪಿನಿಂದ ಅಳಿಯದಂತಹ ಘಟನೆ ಇದೆಯೆ?

ಒಂದು ಘಟನೆಯಿದೆ. ಬೇಂದ್ರೆಯವರ ಹಾಡು, ‘ಬಾರೋ ಸಾಧನಕೇರಿಗೆ, ಮರಳಿ ನಿನ್ನೀ ಊರಿಗೆ’. ಅದನ್ನು ಯು.ಕೆ.ಯಲ್ಲಿ ಹಾಡಿದ್ದೆ. ಕಾರ್ಯಕ್ರಮ ಮುಗಿದ ಬಳಿಕ ಗಂಡ ಹೆಂಡತಿ ಬಂದು ಭೇಟಿಯಾದರು, ಮಗ ಮಗಳು ಜೊತೆಗಿದ್ದರು.

ತಂದೆ ಕಣ್ಣಲ್ಲಿ ನೀರಿತ್ತು, “ನೀವು ಇದನ್ನು ಹಾಡಬಾರದಿತ್ತು, ತುಂಬಾ ತಪ್ಪು ಮಾಡಿದ್ರಿ” ಎಂದರು.

“ಯಾಕೆ ಏನಾಯ್ತು?”

“ಇಲ್ಲ, You sang it, only to make us guilty ಅಲ್ವಾ?”

Oh! Did it really make feel guilty?”

“ಹೌದು ಬಹಳ ನೊಂದುಕೊಂಡೆ. 25 ವರ್ಷದ ಹಿಂದೆ ಇಲ್ಲಿಗೆ ಬಂದೆ, ಎಂ.ಎಸ್. ವಿದ್ಯಾಭ್ಯಾಸಕ್ಕೆಂದು ಬಂದಿದ್ದೆ. ಆಗ ಸಾಲ ಇತ್ತು, ಅದನ್ನು ತೀರಿಸಲೆಂದು ಕೆಲಸ ಹುಡುಕಿಕೊಂಡೆ. ದೀಪಾವಳಿಗೆಂದು ಮನೆಗೆ ಹೋದೆ, ಆಗ ಅಪ್ಪ ಹುಡುಗಿ ನಿಶ್ಚಯಮಾಡಿದ್ದರು. ದೀಪಾವಳಿ ಮುಗಿಸಿ ಜೊತೆಗೆ ಹೆಂಡತಿಯನ್ನು ಕರೆದುಕೊಂಡು ಬಂದೆ. ಅವಳು ಬಂದಿದ್ದಾಳೆ ಊರು ಸುತ್ತಿಸೋಣ ಎಂದು ಸ್ವಲ್ಪ ಸಮಯ ಮುಂದುವರಿದೆ. ಮತ್ತೆ ಮನೆ ಸಂಸಾರ ಮಕ್ಕಳು ಎಂದಾಯಿತು. ಮಕ್ಕಳು ದೊಡ್ಡವರಾದರು ಅವರಿಗೆ ಇಲ್ಲಿಯ ಭಾಷೆ, ಸಂಸ್ಕೃತಿ, ಸ್ನೇಹಿತರು ಎಂದು ಆಗಿಬಿಟ್ಟಿತು. ಇಂದಿಗೂ ಭಾರತಕ್ಕೆ ಹೋಗಬೇಕು ಎನಿಸುತ್ತದೆ. ಆದರೆ, ಈ ಕಡೆ ಮಕ್ಕಳನ್ನು ನೋಡಿದಾಗ ಅಯ್ಯೋ ಹೋಗಲಾಗುವುದಿಲ್ಲ ಎನ್ನುವ ಬೇಸರ ಮೂಡುತ್ತದೆ. ಒಂದು ಕಡೆ ಆರ್ಥಿಕ ಸದೃಢತೆ, ಇನ್ನೊಂದೆಡೆ ಕರುಳಿನ ಕೂಗು ಎರಡರ ಮಧ್ಯೆ ತೊಳಲಾಡಿಕೊಂಡು ಇಪ್ಪತ್ತೈದು ವರ್ಷದಿಂದ ಜೀವನ ಸಾಗುತ್ತಿದೆ. ಇಂತಹ ಸಂಕಟದಲ್ಲಿರುವಾಗ ಈ ಹಾಡು ಹಾಡಿ ಬಹಳ ತಪ್ಪು ಮಾಡಿದಿರಿ.”

ಹೀಗೆ ಕೆಲವು ಸಲ, ಸಾಹಿತ್ಯ ಯಾರಿಗೆ ಎಲ್ಲಿ ತಾಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಾಗಿಯೇ ಸಾಹಿತ್ಯ ಬಹಳ ಮುಖ್ಯ ಎನ್ನುವುದು ನನ್ನ ನಿಲವು.

ಜಾನಪದ ಶೈಲಿಯನ್ನು ಇಷ್ಟಪಡುವ ನೀವು, ಆ ಲಯದಲ್ಲಿ ವಿದೇಶದಲ್ಲಿ ಹಾಡಿದಾಗ ಅಲ್ಲಿನ ಜನ ಅದನ್ನು ಸ್ವೀಕರಿಸುವ ಬಗೆ ಹೇಗಿದೆ?

ಅವರಿಗೇನೂ ಅರ್ಥವಾಗುವುದಿಲ್ಲ. ಅದಕ್ಕಾಗಿಯೇ, ನಿಧಾನಕ್ಕೆ ಸಮಯ ತೆಗೆದುಕೊಂಡು ಅರ್ಥವನ್ನು ಹೇಳುತ್ತೇನೆ. ಜೀವನದ ಘಟನೆಗಳ ಉದಾಹರಣೆ ಕೊಟ್ಟು ವಿವರಿಸುತ್ತೇನೆ. ಸಂಗೀತವನ್ನು ಇಷ್ಟಪಡುತ್ತಾರೆ, ಸಾಹಿತ್ಯವೂ ಅರ್ಥವಾದರೆ ಕಾರ್ಯಕ್ರಮವನ್ನು ಅಪ್ಪಿಕೊಂಡು ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ. ನನಗನಿಸುವುದೇನೆಂದರೆ ಪಾಶ್ಚಾತ್ಯರಿಗೆ ನಮಗಿಂತ ಹೆಚ್ಚಾಗಿಯೇ ಶಿಶುನಾಳ ಷರೀಫರ ಅಗತ್ಯವಿದೆ, ನಾವು ಸಹಜವಾಗಿಯೇ ಖುಷಿಯಿಂದ ಇರಬಲ್ಲೆವು, ಹುಟ್ಟಿದಂದಿನಿಂದ ಕಷ್ಟಗಳನ್ನು ಅನುಭವಿಸಿರುತ್ತೇವೆ. ಆದರೆ ಅವರು ಹಾಗಲ್ಲ. ಅನುಕೂಲಗಳ ಸಂತೆಯಲ್ಲಿ ಬೆಳೆದಿರುತ್ತಾರೆ, ಅರ್ಧಗಂಟೆ ವಿದ್ಯುತ್ ವ್ಯತ್ಯಯವಾದರೂ ವಿಲವಿಲ ಒದ್ದಾಡುವ ಸ್ಥಿತಿ ಅವರದ್ದು. ಅದಕ್ಕಾಗಿಯೇ ನಮ್ಮ ಅಧ್ಯಾತ್ಮ, ಗುರು ಇಂತಹದರ ಮೇಲೆ ಭಾರತೀಯರಿಗಿರುವ ಆಕರ್ಷಣೆಗಿಂತ ಹೆಚ್ಚಿನ ಆಕರ್ಷಣೆ ಪಾಶ್ಚಾತ್ಯರಿಗಿದೆ. ನಮಗೆ ಸಹಜವಾಗಿಯೇ ಇರುವ ಧೈರ್ಯ ಆತ್ಮವಿಶ್ವಾಸ ತಿಳಿವಳಿಕೆ ನೆಮ್ಮದಿಯನ್ನು ಅವರಿಗೆ ಸಾಹಿತ್ಯ ಸಂಗೀತ ಧ್ಯಾನಗಳ ಮೂಲಕ ತಿಳಿಸಬೇಕಾಗುತ್ತದೆ.

ಹಾಗಿದ್ದರೆ, ವಿದೇಶಿಯರು ನೀಡಿರುವ ಪ್ರತಿಕ್ರಿಯೆ ಘಟನೆ ಏನಾದರೂ ಇದೆಯಾ?

ಸುಮಾರಷ್ಟಿದೆ. ಅಭಿಮಾನಿಗಳಿದ್ದಾರೆ. ಮದುವೆಯನ್ನೂ ಮಾಡಿಸಿದ್ದೇವೆ. ಮಾರ್ಕೋ ಓಪ್ರಿನ್ ಎಂದು ಒಬ್ಬರಿದ್ದಾರೆ, ‘ಲಾರ್ಮಾ ಟ್ರೀ ಫೆಸ್ಟಿವಲ್’ನಲ್ಲಿ ನಮ್ಮ ಕಾರ್ಯಕ್ರಮ ನಡೆಯುವುದಿತ್ತು. ಅದೇ ಸಮಯದಲ್ಲಿ ಆತ ನಮಗೆ ಈ-ಮೇಲ್ ಬರೆದಿದ್ದ: ‘No man will ever love you like I do’ ಎನ್ನುವ ಹಾಡನ್ನು ಹಾಡುವಿರಾ, ನಾನು ಇಷ್ಟಪಟ್ಟಿರುವ ಹುಡುಗಿಗೆ ಆ ಹಾಡಿನ ಮೂಲಕ ನನ್ನ ಆಸೆಯನ್ನು ವ್ಯಕ್ತಪಡಿಸಬೇಕೆಂದಿದ್ದೇನೆ – ಎಂದು. ಸರಿ ಎಂದುಕೊಂಡು ಹಾಡು ಶುರುಮಾಡಿದ್ದೇ ತಡ, ಆತ ಮೊಣಕಾಲೂರಿ ಉಂಗುರ ಕೊಡುವುದರ ಮೂಲಕ ಆಕೆಗೆ ತನ್ನ ಇಚ್ಛೆಯನ್ನು ವ್ಯಕಪಡಿಸಿದ, ಆಕೆಯು ಓಕೆ ಅಂದುಬಿಟ್ಟಳು. ಸ್ಮರಣೀಯ ಕ್ಷಣವದು. ನಾಲ್ಕು ವರ್ಷಗಳ ಬಳಿಕ ಅಲ್ಲಿ ಮತ್ತೆ ಅದೇ ಫೆಸ್ಟಿವಲ್‍ನಲ್ಲಿ ಹಾಡಲು ಹೋಗಿದ್ದೆವು. ಈ ಸಲ ಮಾರ್ಕೋ ‘ನಾವು ಬರುತ್ತಿದ್ದೇವೆ, ಮಗುವಿನ ಜೊತೆಗೆ’ ಎಂದು ಬರೆದಿದ್ದ. ಮತ್ತೆ ಅದೇ ಹಾಡು ಹಾಡಿದ್ದೆವು ಮಗುವಿಗಾಗಿ.

2009ರಲ್ಲಿ ಹಿಚಿನ್ ಎನ್ನುವ ಪುಟ್ಟ ಊರಿನಲ್ಲಿ, ‘ರಿದಮ್ ಆಫ್ ದಿ ವಲ್ರ್ಡ್ ಫೆಸ್ಟಿವಲ್’ಗೆ ಹಾಡಿದ್ದೆವು. ಆಗ ಕೆವಿನ್ ಮತ್ತು ವಾಲರಿ ಎನ್ನುವ ದಂಪತಿ ನಮ್ಮ ಶೋದಲ್ಲಿ ಭಾಗವಹಿಸಿದ್ದರು. ಇಷ್ಟಪಟ್ಟಿದ್ದರು. ಆರು ವರ್ಷದ ಬಳಿಕ ಮತ್ತೆ ಅಲ್ಲಿ ಭಾಗವಹಿಸಲು ಹೋಗುವವರಿದ್ದೆವು. ಆಗ ವಾಲರಿ ಬರೆದಿದ್ದರು: “ನೀವು ಮತ್ತೆ ನಮ್ಮ ಊರಿಗೆ ಕಾರ್ಯಕ್ರಮ ನೀಡಲು ಬರುತ್ತಿರುವುದು ಸಂತಸದ ವಿಷಯ. ನಾನು ಮತ್ತು ಕೆವಿನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯತ್ನಿಸುತ್ತೇವೆ. ಆದರೆ ಕೆವಿನ್ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆ ದಿನ ಆತನ ಆರೋಗ್ಯಸ್ಥಿತಿ ಚೆನ್ನಾಗಿದ್ದರೆ ನಾವು ಅಲ್ಲಿರುತ್ತೇವೆ. ಒಂದು ವೇಳೆ ನಮ್ಮನ್ನು ನೀವು ಅಲ್ಲಿ ನೋಡಿಲ್ಲವೆಂದರೆ ಕೆವಿನ್‍ನ ಆರೋಗ್ಯ ಹದಗೆಟ್ಟಿದೆ ಎಂದು ಅರ್ಥೈಸಿಕೊಳ್ಳಿ” ಎಂದು. ಆವತ್ತಿನ ದಿನ ಹಾಗೆಯೇ ಆಯಿತು, ಅವರು ಬಂದಿರಲಿಲ್ಲ. ನಾವು ನಮ್ಮ ಕಾರ್ಯಕ್ರಮ ಆದ ಕೂಡಲೇ, ಬೇರೆ ಬ್ಯಾಂಡ್ ಕಾರ್ಯಕ್ರಮ ನೋಡಲು, ಅಲ್ಲಿಂದ ಕಲಿತುಕೊಳ್ಳಲು ಹೋಗುತ್ತೇವೆ. ಆದರೆ ಅವತ್ತು ಹಾಗೆ ಮಾಡಲಿಲ್ಲ. ನಾನು, ಗೌರವ್ ಗಾಡಿ ತೆಗೆದುಕೊಂಡು ಅವರ ಮನೆಯತ್ತ ಹೊರಟೆವು. ಅವರಿಗೆ ಸಪ್ರ್ರೈಸ್ ನೀಡಿದೆವು. ಅವರ ಮನೆಯಲ್ಲೇ ಸಣ್ಣ ಕಾರ್ಯಕ್ರಮ ನೀಡಿದೆವು. ಆತ ಹಾಸಿಗೆಯಲ್ಲಿದ್ದ, ಆಕ್ಸಿಜನ್ ಸಿಲಿಂಡರ್ ಅಳವಡಿಸಲಾಗಿತ್ತು, ಆದರೆ ಆ ಕ್ಷಣ ಆತನಿಗೆ ಸಿಕ್ಕ ಸಂತೋಷಕ್ಕೆ ಕಾರಣರಾದ ಖುಷಿ ನಮ್ಮದಾಗಿತ್ತು.

ಹೀಗೆ ನಮ್ಮ ಸಂಗೀತ ಹಲವರನ್ನು ಹಲವು ರೀತಿಯಲ್ಲಿ ತಲಪಿದೆ.  

ಇಷ್ಟೊಂದು ಲೈವ್ ಕನ್ಸಟ್ರ್ಸ್, ಹಲವು ಸಿನೆಮಾ ಹಾಡುಗಳಿಗೆ ಸಂಗೀತನಿರ್ದೇಶನ ಮಾಡಿದ್ದೀರಾ, ಇವೆಲ್ಲವನ್ನೂ ಮಾಡುತ್ತಾಬಂದಂತೆ ಜೀವನ ಕಲಿಸಿದ ಪಾಠವೇನು? ಹೃದಯಕ್ಕೆ ಸಮೀಪವಾಗಿಯೇ ಉಳಿದುಕೊಂಡಿರುವ ಘಟನೆಗಳು ಯಾವಾವುದು?

ಓಹ್, ನಾವು ತತ್ತ್ವಪದ ಹೇಳಿಕೊಡುವಾಗಲೇ ಅದು ನಮಗೂ ಅನ್ವಯಿಸುತ್ತಿರುತ್ತದೆ. ಇನ್ನೊಬ್ಬರಿಗೆ ಹೇಳುತ್ತಿರುವಾಗ, ಆಗಾಗ ಷರೀಫಜ್ಜ ತಲೆಯಮೇಲೆ ಹೊಡೆದು ಹೇಳುತ್ತಿರುವಂತೆ ಅನಿಸುತ್ತಿರುತ್ತದೆ. ಕಲೆಯಲ್ಲಿ ಸಾಧನೆ ಮಾಡಬೇಕು ಎಂದರೆ ಕಳೆದುಕೊಳ್ಳುವ ಧೈರ್ಯವೂ ಇರಬೇಕು. ಕಳೆದುಕೊಳ್ಳುವುದು ಬಹಳ ಇದೆ, ಗೆಲ್ಲುವುದು ಕಷ್ಟ. ಅಂತಹದ್ದರಲ್ಲಿ ದೇವರು ನೋಡಿಕೊಳ್ಳುತ್ತಾನೆ ಎನ್ನುವ ಧೈರ್ಯದಲ್ಲಿ ಇಲ್ಲಿಯ ತನಕ ಬಂದಿದ್ದೇನೆ. 10-15 ವರ್ಷಗಳಿಂದ ನಮ್ಮ ಸಂಗೀತವನ್ನು ಕೇಳಿಕೊಂಡು ಬಂದಿರುವ ಅಭಿಮಾನಿಗಳನ್ನು ಹೊಂದಿದ್ದೇನೆ. ಈವತ್ತಿಗೂ ಯಾವುದೋ ಗುರುತುಪರಿಚಯ ಇಲ್ಲದ ದೇಶಕ್ಕೆ ಹೋದಾಗ ಇಂದು ಮೊಸರನ್ನ ತಿನ್ನಬೇಕು ಅನಿಸುತ್ತಿದೆ ಎಂದು ಫೇಸ್ಬುಕ್‍ನಲ್ಲಿ ಹಾಕಿದಾಗ, ಸ್ಟೇಜ್ ಹಿಂದೆ 2-3 ಡಬ್ಬ ತಯಾರಾಗಿ ಕಾಯುತ್ತಿರುತ್ತದೆ. ಇದಕ್ಕಿಂತ ಪ್ರೀತಿ ಎಲ್ಲಿದೆ? ಪ್ರೀತಿ ಮಾಡುವವರು ಬಹಳ ಜನ ಇದ್ದಾರೆ, ಅವರು ನೋಡಿಕೊಳ್ಳುತ್ತಾರೆ ಎನ್ನುವ ಧೈರ್ಯ ಇದೆ.

ಸಂಗೀತವನ್ನು ನೇರವಾಗಿ ಕಲಿಯದಿದ್ದರೂ, ಇಲ್ಲಿ ಸಾಧಿಸಿರುವುದು ಬೆಟ್ಟದಷ್ಟು; ಇದಕ್ಕೆ ಪ್ರೇರಕರು ಅಥವಾ ಸಂಗೀತದ ಪರೋಕ್ಷ ಗುರುಗಳು ಎಂದು ಇದ್ದರೆ ಅವರು ಯಾರು?

ನಾನು ಕಲಾವಿದನಾಗಿ ಈವತ್ತು ಏನಾಗಿದ್ದೇನೋ ಅದು ಭರತನಾಟ್ಯದಿಂದ. ಭರತನಾಟ್ಯದ ಗುರುಗಳಾದ ಶ್ರೀಮತಿ ನಂದಿನಿ ಈಶ್ವರ್ ಅವರಿಂದ ಕಲಿತಿರುವುದು ಬಹಳಷ್ಟಿದೆ. ಶಿಸ್ತು, ಪರಿಶ್ರಮ, ನಿರಂತರ ಅಭ್ಯಾಸ ಎಲ್ಲವನ್ನೂ ಅಲ್ಲಿಂದಲೇ ಕಲಿತದ್ದು. ವೈಯಕ್ತಿಕ ಬೆಳವಣಿಗೆ ಎನ್ನುವುದು ಅಲ್ಲಿಂದಲೇ ಬಂದದ್ದು. ನಮ್ಮ ಆಂಗಿಕ ಅಭಿನಯ, ಉಡುಗೆ-ತೊಡುಗೆಯ ಮಹತ್ತ್ವದ ಅರಿವು ಬಂದದ್ದೂ ಭರತನಾಟ್ಯದ ಪ್ರಭಾವ. ವೇದಿಕೆಗೆ ಹೋಗುವಾಗ ಶೂ ಹಾಕಬಾರದು ಎನ್ನುವುದು ನನ್ನ ತಂಡದ ನಿಯಮ; ನನ್ನ ಬ್ಯಾಂಡ್‍ನಲ್ಲಿರುವವರಿಗೆ ಅದು ಸ್ವಲ್ಪ ಮುಜುಗರ ಎನಿಸುತ್ತಿತ್ತು. ಆದರೆ ಅದು ನಮ್ಮ ಸಂಸ್ಕೃತಿ, ಅದನ್ನು ಬಿಟ್ಟು ಇರುವುದು ಸಾಧ್ಯವಿಲ್ಲ.

ಇತ್ತೀಚೆಗಂತೂ ಯುವಮನಸ್ಸುಗಳು ಹಲವು ರಾಕ್‍ಬ್ಯಾಂಡ್ ಹೆಸರಿನಲ್ಲಿ ಸ್ಟೇಜ್ ಹತ್ತುತ್ತಿದ್ದಾರೆ, ಹಲವರು ಸಾಧನೆಯನ್ನೂ ಮಾಡುತ್ತಿದ್ದಾರೆ. ಅಂಥವರಿಗೆ ಕಿವಿಮಾತು ಏನಾದರೂ ಹೇಳಬಯಸುವಿರಾ?

ಬಹಳ ಕಷ್ಟ. ಸಕ್ಸೆಸ್ ಈತಕ್ಷಣಕ್ಕೆ ಬೇಕು ಎನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಯೂಟ್ಯೂಬ್‍ನಲ್ಲಿ ವೈರಲ್ ಮಾಡಿಬಿಟ್ಟರೆ ಅದು ಸಕ್ಸೆಸ್ ಎನ್ನುವ ಮನಃಸ್ಥಿತಿಯಿದೆ. ಕೆಲವು ಯುವಕರು ಬಂದು ಹೇಳುತ್ತಾರೆ 4-5 ಹಾಡು ಬರೆದಿದ್ದೇನೆ, ರೆಕಾರ್ಡ್ ಮಾಡಿ ಎಂದು. ಅವರಿಗೆ 60 ಹಾಡುಗಳನ್ನು ಬರೆದು ಆಮೇಲೆ ಬಾ ಎಂದು ಹೇಳ್ತೇನೆ. ಯಾಕೆಂದರೆ ಅಷ್ಟು ಅಭ್ಯಾಸದ ಬಳಿಕ ಸಾಹಿತ್ಯ ಹೇಗಿರಬೇಕು ಎನ್ನುವುದನ್ನು ತಿಳಿದುಕೊಳ್ಳುತ್ತೇವೆ. ಆದ್ದರಿಂದ ಗೆಲವು ಎನ್ನುವುದು ಇಂದು ನಾಳೆಗೆ ಬರುವುದಲ್ಲ, ಅದಕ್ಕೆ ಅಡ್ಡದಾರಿಯಿಲ್ಲ, ಪರಿಶ್ರಮಪಡಬೇಕು.

ನಿಮ್ಮ ಸಂಗೀತಕಛೇರಿಗಳಲ್ಲಿ ಒಂದು ಸುಂದರವಾದ ರಂಗು ಮೂಡಿರುತ್ತದೆ; ಮುಖ್ಯವಾಗಿ ನಿಮ್ಮ ವಸ್ತ್ರಶೈಲಿ ಎಲ್ಲರ ಗಮನಸೆಳೆಯುತ್ತದೆ. ಆ ಲುಂಗಿ, ಗೆಜ್ಜೆ ಎನ್ನುವ ಪ್ರಾದೇಶಿಕ ವಿನ್ಯಾಸವನ್ನು ಅಳವಡಿಸಿಕೊಳ್ಳುವ ಮನಸ್ಸು, ಧೈರ್ಯ ಹೇಗೆ ಬಂತು?

ಅದು ಧೈರ್ಯವಲ್ಲ. ಎಲ್ಲ ಬ್ಯಾಂಡ್‍ಗಳಿಗಿಂತ ವಿಶಿಷ್ಟವಾದದ್ದು ಬೇಕಿತ್ತು. ಕುರ್ತಾ-ಪೈಜಾಮ, ಜೀನ್ಸ್-ಕುರ್ತಾ ಎಲ್ಲವನ್ನು ಪ್ರಯತ್ನಿಸಿದ್ದೆ. ಮನೆಯಲ್ಲಿ ಪಂಚೆ ಹಾಕಿಕೊಂಡೇ ಓಡಾಡುವುದು ಅಭ್ಯಾಸ, ಯಾವುದೋ ಒಂದು ಕ್ಷಣದಲ್ಲಿ ಇದೇ ಪಂಚೆಯನ್ನು ಯಾಕೆ ಆರಿಸಿಕೊಳ್ಳಬಾರದು ಅನಿಸಿತು. ಬಿಳಿ ಪಂಚೆಯ ಬದಲು ಆಕರ್ಷಕ ಬಣ್ಣಗಳ ಪಂಚೆಯನ್ನು ಬಳಸಿಕೊಂಡೆ. ಬಣ್ಣಗಳು ಸಂತೋಷವನ್ನು ಪ್ರತಿನಿಧಿಸುತ್ತವೆ. ಗೆಜ್ಜೆ, ಅದು ಜನಪದ ಶೈಲಿಯ ಪ್ರತಿನಿದಿ.ü ಜೊತೆಗೆ ನಾನು ಭರತನಾಟ್ಯ ಹಿನ್ನೆಲೆಯಿಂದ ಬಂದಿದ್ದರಿಂದ ಹಾಕಿಕೊಳ್ಳಲು ಮುಜುಗರವಿರಲಿಲ್ಲ. ಅಲ್ಲದೇ, ಅಷ್ಟು ವರ್ಷ ಭರತನಾಟ್ಯ ಕಲಿತದ್ದಕ್ಕೆ ಗೆಜ್ಜೆಯ ಮೂಲಕವಾದರೂ ಅದು ನನ್ನ ಜೊತೆಯಿದೆ ಎಂದು ನನಗೆ ನಾನೇ ಕೊಡುವ ಸಾಂತ್ವನ. ಜನ ಅದನ್ನೆಲ್ಲಾ ಇಷ್ಟು ಇಷ್ಟಪಡುತ್ತಾರೆ ಎಂದುಕೊಂಡಿರಲಿಲ್ಲ, ಖುಷಿಯಿದೆ.

ನಿಮ್ಮ ಹಲವಷ್ಟು ಹಾಡುಗಳ ಸಾಹಿತ್ಯ ನಿಮ್ಮದೇ ರಚನೆ ಅಲ್ಲವೇ? ಸಾಹಿತ್ಯದ ಒಲವು ಬಂದಿದ್ದು ಹೇಗೆ?

‘It comes with maturity’ ಎನ್ನುವುದು ನನ್ನ ಅಭಿಪ್ರಾಯ. ವಯಸ್ಸಾಗುತ್ತಾ, ಖುಷಿ, ದುಃಖ ಎಲ್ಲವನ್ನು ಅನುಭವಿಸಿರುತ್ತೇವೆ. ಜೀವನದ ಭಾರವನ್ನು ಅರಿತುಕೊಂಡಿರುತ್ತೇವೆ. ಆಗ ‘Let’s go party tonight’ ಎನ್ನುವುದು ಸಹಜವಾಗಿಯೇ ಕಡಮೆಯಾಗುತ್ತದೆ. ಜೀವನವನ್ನು ಅರ್ಥೈಸಿಕೊಳ್ಳಲು ಪ್ರಯತ್ನಪಡುತ್ತೇವೆ, ಅದು ಸಾಹಿತ್ಯದಲ್ಲಿ ಕಾಣುತ್ತದೆ.

ಸಿನೆಮಾ ಸಂಗೀತದ ಕುರಿತಾಗಿ ಏನು ಹೇಳಲು ಬಯಸುತ್ತೀರಿ? ಸಿನೆಮಾ ಹಾಡುಗಳೇ ಶ್ರೇಷ್ಠ ಎನ್ನುವ ಭಾವನೆ ನಮ್ಮಲ್ಲಿ ಇದೆಯೆ?

ಹಲವು ಸಲ ಸಿನೆಮೇತರ ಹಾಡುಗಳನ್ನೇ ಹಾಡಬೇಕು, ‘ಮಾದೇಶ್ವರ’ ಮತ್ತೊಂದು ಹಾಡುಗಳನ್ನು ಹಾಡಲೇಬಾರದು ಎಂದು ನಿರ್ಧರಿಸಿಕೊಂಡೇ ಹೋಗಿರುತ್ತೇನೆ. ಆದರೆ ನಮ್ಮಲ್ಲಿ ಸಿನೆಮಾ ಹಾಡುಗಳ ಪ್ರಭಾವ ಎಷ್ಟರ ಮಟ್ಟಿಗೆ ಇದೆಯೆಂದರೆ, ಕಾರ್ಯಕ್ರಮಗಳಲ್ಲಿ ಬಂದಿರುವ ಶ್ರೋತೃವರ್ಗದವರು ‘ಅಣ್ಣಾ, ಮಾದೇಶ್ವರ… ಅಣ್ಣಾ’ ಅಂದುಬಿಡುತ್ತಾರೆ, ಬೇಸರವಾಗುತ್ತದೆ. ಸಿನೆಮಾಸಂಗೀತವನ್ನೂ ಮೀರಿದ ಸಂಗೀತ ನಮ್ಮಲ್ಲಿದೆ ಅನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.

“ತೀವ್ರತೆಯಿರುವ ಜೀವನವನ್ನು ಆಯ್ಕೆಮಾಡಿಕೊಳ್ಳಿ, ಗೆಲವಿನದ್ದಲ್ಲ”

ನಾನು ಇದನ್ನೇ ನಂಬಿಕೊಂಡವನು, ಅದಕ್ಕೇ ಯಾವತ್ತಿಗೂ ಒಂದು ಮಾತನ್ನು ಹೇಳುತ್ತೇನೆ, “Don’t choose Life of Success, Choose Life of Intensity” – ತೀವ್ರತೆಯಿರುವ ಜೀವನವನ್ನು ಆಯ್ಕೆಮಾಡಿಕೊಳ್ಳಿ, ಗೆಲವಿನದ್ದಲ್ಲ. ಇಂಟೆನ್ಸಿಟಿ ಇರುವ ಜೀವನವನ್ನು ಬದುಕಿದಾಗಲೇ, ನಮ್ಮ ಬದುಕಿನಕಥೆ ಎನ್ನುವುದನ್ನು ಹೇಳಬಹುದು. ಅದು ಭಾವತೀವ್ರತೆ, ವೃತ್ತಿಪರತೆ, ಪ್ರವೃತ್ತಿಯೆಡೆಗಿನ ತೀವ್ರವಾದ ತುಡಿತವೇ ಆಗಿರಬಹುದು, ದುಃಖ ಕಷ್ಟ ಎಂದರೆ ಅದರ ತೀವ್ರತೆಯನ್ನು ನಿಜವಾಗಿಯೂ ಅನುಭವಿಸಿರಬೇಕು. ಇಂದಿನ ಯುವಕರಿಗೆ ಆಗಾಗ ಹೇಳುತ್ತಿರುತ್ತೇನೆ, ನಿಮ್ಮ ಅಪ್ಪ ಜೀನ್ಸ್ ಕೊಡ್ಸಿಲ್ಲ ಎಂದು, ಯಾವುದೋ ಒಂದು ಬ್ರಾಂಡ್‍ನ ಸ್ಕೂಟರ್-ಬೈಕ್ ಕೊಡಿಸಿಲ್ಲ ಎಂದು ಕೊರಗಿರುವುದು ನಿಜವಾದ ಕಷ್ಟವೂ ಅಲ್ಲ ದುಃಖದ ವಿಷಯವೂ ಅಲ್ಲ. ಜೀವನದಲ್ಲಿ ನಿಜವಾದ ಕಷ್ಟ ನೋಡಿರಬೇಕು. ಹೊಟ್ಟೆಗಿಲ್ಲದೆ ಒದ್ದಾಡಿ, ಬಟ್ಟೆಗೂ ಗತಿಯಿಲ್ಲದೆ ಇನ್ನೊಬ್ಬರ ಬಳಿ ಕೈಚಾಚಿ ದಿನನಡೆಸುವ ಪರಿಸ್ಥಿತಿಯನ್ನು ತಂದುಕೊಳ್ಳದೆ ಸ್ವಾಭಿಮಾನವನ್ನು ಉಳಿಸಿಕೊಂಡು ಹೇಗೆ ನನ್ನ ದಿನವನ್ನು ನಾನು ಸಾಗಿಸಬೇಕು ಎಂದು ಪಡುವ ಕಷ್ಟ ಇದೆಯಲ್ಲಾ ಅದು ನಿಜವಾದ ಕಷ್ಟ, ಯಾರ ಬಳಿಯೂ ಬೇಡದೇ ನನ್ನ ಸ್ವಪ್ರಯತ್ನದಿಂದ ಮೇಲೆ ಬರುತ್ತೇನೆ ಎನ್ನುವ ಹಠವಿದೆಯಲ್ಲಾ ಅದು ಇಂದಿನ ಯುವಜನತೆಯಲ್ಲಿ ಕಡಮೆಯಾಗುತ್ತಿದೆ. ಎರಡುದಿನ ಕೆಲಸ ಮಾಡಿದ ಕೂಡಲೇ, ಮೂರನೇ ದಿನಕ್ಕೆ ನಾನು ಸಂಗೀತ ನಿರ್ದೇಶಕನಾಗಿಬಿಡುತ್ತೇನೆ ಎನ್ನುವವರೇ ಜಾಸ್ತಿ. ನನ್ನ ಬಳಿಯೇ ಒಂದು ತಿಂಗಳಿನಿಂದ ‘ರೆಹಮಾನ್ ಸ್ಕೂಲ್ ಆಫ್ ಇನ್ಸ್ಟಿಟ್ಯೂಷನ್’ನಲ್ಲಿ ಕಲಿತು ಈಗ ಇಂಟರ್ನ್ ಆಗಿ ಕೆಲಸ ಮಾಡುತ್ತಿರುವವನಿದ್ದಾನೆ. ಅವನಿಗೆ ನಾನು ಹತ್ತುಹಲವು ವಿಷಯಗಳನ್ನು ಓದುವುದಕ್ಕೆ, ಮತ್ತಷ್ಟು ಹಾಡುಗಳನ್ನು ಕೊಟ್ಟು ವಿಶ್ಲೇಷಣೆ (ಅನಲೈಸ್) ಮಾಡು ಎಂದು ಹೇಳುತ್ತಾ ಇದ್ದೆ. ಆದರೆ ಅವನಿಗೆ ಸ್ವಂತ ಹಾಡು ಮಾಡಬೇಕೆನ್ನುವ ಆತುರ. ಸರಿ, ಕೊನೆಗೆ ಕಳೆದ ವಾರ ಹಾಡುಕೊಟ್ಟೆ, ಆದರೆ ಇನ್ನೂ ಅದೇ ಹಾಡಿನಲ್ಲಿ ಕೂತಿದ್ದಾನೆ. ಈಗ ಆತನಿಗೆ ಅರಿವಾಗುತ್ತಿದೆ – ಕಾಲೇಜಿಗೆ ಹೋಗಿದ್ದಷ್ಟೇ, ಸಾಧಿಸುವುದು ಇನ್ನೂ ಬಹಳಷ್ಟಿದೆ ಎಂದು. ಅದಕ್ಕೇ ಹೇಳುತ್ತೇನೆ: ‘ಗೆಲವು ಎನ್ನುವುದನ್ನು ಮುಟ್ಟಬೇಕೆಂದರೆ ಒಂದಿಷ್ಟು ವರ್ಷಗಳ ತೀವ್ರ ಸಾಧನೆ ಅಗತ್ಯ. ಆ ತಾಳ್ಮೆ, ಪರಿಶ್ರಮ, ಚತುರತೆ ಎಲ್ಲವನ್ನೂ ಈ ಇಷ್ಟು ವರ್ಷಗಳ ವೃತ್ತಿ ಜೀವನ ನನಗೆ ಕಲಿಸಿದೆ. ಎಲ್ಲಿ ಪರಿಶ್ರಮ ಬೇಕೋ ಅಲ್ಲಿ ಪರಿಶ್ರಮದಿಂದ ಕೆಲಸ ಮಾಡಿಸಬೇಕು. ಜಾಣ್ಮೆ ಬೇಕಾದ ಪರಿಸ್ಥಿತಿಗಳಲ್ಲಿ ಜಾಣ್ಮೆಯಿಂದಲೇ ಕೆಲಸ ನಿಭಾಯಿಸಬೇಕೇ ಹೊರತು ಪರಿಶ್ರಮ ಅಲ್ಲಿ ಕೆಲಸ ಮಾಡುವುದಿಲ್ಲ. ಎಲ್ಲಿ ತಲೆತಗ್ಗಿಸಿ ನಡೆಯಬೇಕಾದ ಅಗತ್ಯತೆಯಿದೆಯೋ ಅಲ್ಲಿ ಅದೇ ರೀತಿ ನಡೆದುಕೊ ಎನ್ನುವ ಜೀವನಪಾಠವನ್ನು ಈ ವೃತ್ತಿ ಜೀವನ ಹೇಳಿಕೊಟ್ಟಿದೆ.’

ನನ್ನ ಕಛೇರಿಗಳಲೆಲ್ಲಾ ಹೇಳುತ್ತಿರುತ್ತೇನೆ, ಅದಕ್ಕೆ ಅನುಗುಣವಾದ ಕೃತಿಗಳನ್ನೇ ಆಯ್ಕೆಮಾಡುತ್ತೇನೆ. ಅಥವಾ ಹಾಡಿನ ಸಾಹಿತ್ಯದ ಅರ್ಥವಿವರಿಸುವಾಗಲೂ ಜೀವನದ ಹಲವು ಘಟನೆಗಳನ್ನು ಉದಾಹರಣೆ ನೀಡಿಯೇ ಹೇಳುತ್ತಿರುತ್ತೇನೆ. ಅದರಿಂದ ಜನರಿಗೆ ರೀಚ್ ಮಾಡಿಸುವುದು ಬಹಳ ಸುಲಭವಾಗುತ್ತದೆ. ಶಿಶುನಾಳ ಶರೀಫರ ಹಾಡು, ಬೇಂದ್ರೆಯವರ ಕವನಗಳನ್ನು ಜನರಿಗೆ ತಲಪಿಸಲು, ಅದರ ತತ್ತ್ವದ ಸ್ವಾರಸ್ಯವನ್ನು ಜನರಿಗೆ ಅರ್ಥೈಸಲು ನಮ್ಮ ನಿತ್ಯದ ಘಟನೆಗಳನ್ನೇ ತೆಗೆದುಕೊಳ್ಳುತ್ತಿರುತ್ತೇನೆ. ಈವತ್ತಿನ ದಿನದ ಘಟನೆಗಳನ್ನು ಹೇಳಿ ಹಾಡುಗಳ ಸಾಲನ್ನು ವಿವರಿಸಿದಾಗ ಜನ ಕೂಡಲೇ ಅರ್ಥವನ್ನು ಗ್ರಹಿಸಿಕೊಳ್ಳುತ್ತಾರೆ; ಜೊತೆಗೇ ಹಾಡಿನ ಸೌಂದರ್ಯವನ್ನು ಸವಿಯಲೂ ಸಾಧ್ಯವಾಗುತ್ತದೆ.

ಸಂಗೀತಕ್ಷೇತ್ರಕ್ಕೆ ಬಂದಮೇಲೆ `ಇವರು ನನ್ನ ಗಾಡ್‍ಫಾದರ್ ರೀತಿ’ ಎನ್ನುವವರು ಯಾರಾದರೂ, ಅಂತಹ ಘಟನೆಯೇನಾದರೂ ಇದೆಯೇ?

ಬಹಳ ಜನ ಇದ್ದಾರೆ. ಮುಂದೆ ಎಲ್ಲಾದರು ನನ್ನ ಜೀವನಚರಿತ್ರೆ ಎನ್ನೋದೇನಾದರು ಬರೆದರೆ, ಅಲ್ಲಿ ನಾನು ಎಷ್ಟು ಕಾರ್ಯಕ್ರಮ ಕೊಟ್ಟೆ ಏನು ಸಾಧಿಸಿದೆ ಎನ್ನುವುದಕ್ಕಿಂತ ಪ್ರತಿ ಅಧ್ಯಾಯವೂ ಯಾರೋ ಒಬ್ಬನ ಬಗ್ಗೆ ಆಗಿರುತ್ತದೆ. ಜಗತ್ತು ಮುಂದೆ ಸಾಗುತ್ತಿದ್ದಂತೆ ಜನರ ನಡುವಿನ ನಂಬಿಕೆ ಪ್ರೀತಿ ಕಡಮೆಯಾಗುತ್ತಿದೆ, ಅಂತರ ಜಾಸ್ತಿಯಾಗುತ್ತಿದೆ. ಎಲ್ಲೋ ಕೊಲೆಸುಲಿಗೆ ನಡೆಯುವುದು ಕೇಳುತ್ತಿದ್ದೇವೆ, ಎಲ್ಲ ನಮ್ಮನ್ನು ದಿನದಿಂದ ದಿನಕ್ಕೆ ದುಗುಡಕ್ಕೆ ತಳ್ಳುತ್ತಿವೆ ಎನ್ನುವುದು ಸತ್ಯ. ಅದಕ್ಕಾಗಿಯೇ ನಾನು ವೇದಿಕೆಯಲ್ಲಿ, ನನ್ನ ಜೀವನದಲ್ಲಿ ನಡೆದ ನಂಬಿಕೆಯನ್ನು ಮೂಡಿಸಬಲ್ಲ ಘಟನೆಗಳನ್ನೇ ಹೇಳುತ್ತೇನೆ.

ನನ್ನ ಮೊದಲನೇ ಕಾರ್ಯಕ್ರಮವಾಗಿದ್ದು, ‘ಸಂಸಾ’ದಲ್ಲಿ. ಅಲ್ಲಿ 1998ರಲ್ಲಿ ‘ವಿಶ್ವ ಪರಿಸರ ದಿನಾಚರಣೆ’ಯ ಸಂದರ್ಭ. ಕಾರ್ಯಕ್ರಮ ಮುಗಿಸಿ ಹೊರಗೆ ಬರುತ್ತಿದ್ದಂತೇ, ಅಲ್ಲಿ ತಂದೆ ತಾಯಿ ಮಗ, ಹರಿಹರನ್ ಎಂದು ಅವರ ಹೆಸರು. ಬಂದವರೇ ಅದ್ಭುತವಾದ ಸಂಗೀತ, ನಿಮ್ಮ ಸಿ.ಡಿ.ಗಳು ಎಲ್ಲಿ ಲಭ್ಯವಿದೆ ಎಂದು ಕೇಳಿದರು. ಇಲ್ಲ ಇದು ನನ್ನ ಮೊದಲನೇ ಕಾರ್ಯಕ್ರಮ, ಸಿ.ಡಿ. ಎಲ್ಲ ಮಾಡಿಲ್ಲ ಎಂದೆ. ನೀನು ಮಾಡಲೇಬೇಕು ಎಂದರು. ಅದರ ಬಗ್ಗೆ ಯೋಚಿಸಿಲ್ಲ ಎಂದೆ. ಮತ್ತೆ ಒತ್ತಾಯಿಸಿದಾಗ, ಡೆಮೋ ರೆಕಾರ್ಡ್‍ನ ಕ್ರಮವನ್ನೆಲ್ಲಾ ಹೇಳಿ ಆರ್ಥಿಕವಾಗಿ ಎಷ್ಟು ಅಗತ್ಯವಿದೆ ಎಂದೆಲ್ಲಾ ತಿಳಿಸಿದೆ. ನಮ್ಮ ಕಾರ್ಡ್ ವಿನಿಮಯವನ್ನೂ ಮಾಡಿಕೊಂಡೆವು. ಒಂದುವಾರದ ಬಳಿಕ ಅವರಿಂದ ಕರೆಬಂದಿತ್ತು, ನನ್ನ ಮಗನ ಹುಟ್ಟುಹಬ್ಬ ಇದೆ, ಅಲ್ಲಿಗೆ ಬಂದು ಕಾರ್ಯಕ್ರಮ ನೀಡಬಹುದೇ ಎಂದು ಕೇಳಿದ್ದರು. ಆಗ ಯಾರು ಎಲ್ಲಿಗೆ ಕರೆದರೂ ಹೋಗುವುದಷ್ಟೇ ಕೆಲಸವಾಗಿತ್ತು. ಹೋಗಿ ಕಾರ್ಯಕ್ರಮ ನೀಡಿದೆ. ಹೊರಡುವಾಗ ಮಗ ಬಂದು ಗ್ರೀಟಿಂಗ್‍ಕಾರ್ಡ್ ಕೊಟ್ಟ. ಥ್ಯಾಂಕ್ಯೂ ಎಂದು ಬರೆದಿತ್ತು. ಒಳಗೆ ಒಂದು ಚೆಕ್ ಕೂಡ ಇತ್ತು; ಅದು 30ಸಾವಿರದ ಚೆಕ್! ಆಗ ಹರಿಹರನ್ ಹೇಳಿದ್ದಿಷ್ಟು: “ನೀನು ಹೋಗಿ ಡೆಮೋ ರೆಕಾರ್ಡ್ ಕೊಡು. ಏನಾಗುತ್ತದೋ ನೋಡೋಣ” ಎಂದು. ಹೀಗೆ ನನ್ನ ಡೆಮೋ ರೆಕಾರ್ಡ್ ನಡೆದಿತ್ತು. ಎಲ್ಲವೂ ತಾನಾಗಿಯೇ ನಡೆಯುತ್ತಾ ಹೋಯಿತು. God is in the goodnsess ಎನ್ನುವುದನ್ನು ತಿಳಿದುಕೊಳ್ಳಬೇಕು.

ಮೊನ್ನೆ ಮೊನ್ನೆಯಷ್ಟೇ ನೀವು ಭಾಗವಹಿಸಿ ಬಂದ `ಟೆಲ್ಲುರೈಡ್ ಬ್ಲೂಗ್ರಾಸ್ ಫೆಸ್ಟಿವಲ್’ ಬಗ್ಗೆ, ಅಲ್ಲಿ ಭಾರತೀಯರಿಗೆ, ಭಾರತೀಯ ಸಂಗೀತಕ್ಕೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು?

ಅಲ್ಲಿ ‘ಲೋಕದ ಕಾಳಜಿ’, ‘ಸೋರುತಿಹುದು ಮನೆಯ ಮಾಳಿಗೆ’, ‘ಜಗ್ ಚಂಗಾ’ ಹಾಡನ್ನು ಹಾಡಿದ್ದೆ. ಅವರೆಲ್ಲರಿಗೆ ಬಹಳ ಖುಷಿಕೊಟ್ಟಿತು. ಅವರದ್ದು ಒಂದು ಹಾಡನ್ನು ಹಾಡಿದ್ದೆವು. ಆ ಹಾಡು, ಅಮೆರಿಕಾದಲ್ಲಿ ಗುಲಾಮೀ ಪದ್ಧತಿ ಇದ್ದಾಗ ಹಾಡುತ್ತಿದ್ದ ಹಾಡು. ನೈಜೀರಿಯಾದವನು ಗುಲಾಮನಾಗಿ ಜೀವನ ಅನುಭವಿಸಿದವನ ಹಾಡು. ಅದು, ಆತನ ಮಗನ ಮೂಲಕ ಮೊಮ್ಮಗಳಿಗೆ ಬಂದು ಆಕೆ ಆ ಹಾಡನ್ನು ಹಾಡಿದ್ದಳು. ಅದನ್ನು ಕನ್ನಡದಲ್ಲಿ ಹೀಗೆ ಹಾಡಿದ್ದೆ ‘ಆರಿರೋ, ಮರೆತಂತಿದೆ ನಾವೇ ಯಾರೋ ಆರೋ… ಆರಿರೋ… ತೊರೆದಂತ ದಾರಿಯ ತೋರೋ…’ ಹಾಗೆ ಅವರು ತಮ್ಮ ಲೋಕದ ಕಾಳಜಿ ಜೊತೆಗೆ ಸಾಹಿತ್ಯ ರಚಿಸಿ ಹಾಡಿದ್ದರು.

ನಿಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳಲೇಬೇಕು ಎಂದು ತೀವ್ರವಾಗಿ ಅನಿಸುವಂಥಾದ್ದು ಏನಾದರೂ ಇದೆಯೇ?

ಉತ್ತರ: ನನ್ನ ಕಥೆಗಳನ್ನು ಎಲ್ಲರೂ ತಿಳಿದುಕೊಂಡಿದ್ದಾರೆ, ನನ್ನ ಜೀವನ ತೆರೆದಿಟ್ಟ ಪುಸ್ತಕ. ಆದರೆ ಕೆಲವು ಸಲ ಅಭಿಮಾನಿಗಳು ದಾರಿಯಲ್ಲೆಲ್ಲೋ ಸಿಗುತ್ತಾರೆ; ಅವರಿಗೆ ಬೇಕಿರುವುದು ಸೆಲ್ಫೀ ಮಾತ್ರ. ಹಲೋ ಕೂಡ ಹೇಳದೇ, ‘ಸರ್ ಒಂದು ಸೆಲ್ಫೀ’ ಎಂದುಬಿಡುತ್ತಾರೆ. ಅಂಥವರಿಗೆ ಸರಿಯಾಗಿ ಹೇಳುತ್ತೇನೆ, ‘ನಮಸ್ಕಾರ ಅಂತ ಹೇಳಿ, ಹೇಗಿದ್ದೀರ ಅಂತ ಖುಷಿಯಿಂದ ಮಾತನಾಡಿ, ಆಮೇಲೆ ಸೆಲ್ಫೀ ಕೇಳಿ’ ಎಂದು. ಕೆಲವರಂತೂ “I ಚಿm ಥಿouಡಿ biggesಣ ಜಿಚಿಟಿ” ಅಂತಾರೆ, ಆಯ್ತಪ್ಪ ಪ್ರೂವ್ ಮಾಡು ಅಂತ ಹೇಳ್ತೇನೆ. ಎಲ್ಲ ಹಾಡು ಪ್ರತಿದಿನ ಕೇಳ್ತೇನೆ ಅಂತಾನೆ, ಯೂಟ್ಯೂಬ್ ಮತ್ತೆ ಇನ್ನೆಲ್ಲಿಂದಲೋ ಡೌನ್‍ಲೋಡ್ ಮಾಡ್ಕೊಂಡಿದೀಯ ತಾನೇ, ಕೊಂಡುಕೊಂಡಿದ್ದೀಯ ಅಂದರೆ ಇಲ್ಲ ಎನ್ನುವುದೇ ಉತ್ತರವಾಗಿರುತ್ತದೆ. ಮತ್ತೊಮ್ಮೆ, ‘ಗುಡುಗುಡಿಯಾ ಸೇದಿ ನೋಡೋ’ ಇಷ್ಟ ಅಂತೀಯಲ್ಲ ಅರ್ಥ ಹೇಳು ಎಂದರೆ, ಸರ್ ಅದು ಗೊತ್ತಿಲ್ಲ ಸರ್, ಸಿಗರೇಟ್ ಸೇದಬೇಕಾದರೆ ಕೇಳುತ್ತೇನೆ ಸರ್ ಅಂತಾನೆ. ಪಟ್ ಅಂತ ಪೆಟ್ಟು ತಿನ್ನುತ್ತಾರೆ. ಹೀಗೆ ಅಭಿಮಾನಿಗಳು ಹಲವಷ್ಟು ಜನ ಅಭಿಮಾನ ಎನ್ನುವುದರ ಅರ್ಥವೇ ತಿಳಿದುಕೊಂಡಿರುವುದಿಲ್ಲ. ಕಲಾವಿದನನ್ನು ಅಭಿಮಾನದಿಂದ ನೋಡುತ್ತೇನೆ ಎಂದು ಬಂದಾಗ, ಆತ ಏನು ಮಾಡುತ್ತಾನೆ ಎನ್ನುವುದನ್ನು ನೋಡಿ ಅಭಿಮಾನಪಡುತ್ತಾರೆ ಹೊರತು, ಅವನು ಮಾಡುತ್ತಿರುವ ಕೆಲಸಕ್ಕೆ ಅಭಿಮಾನ ಪಡುತ್ತಿದ್ದಾರಾ ಅನ್ನುವುದು ಬಹಳ ಮುಖ್ಯ. ಈ ‘ಹೀರೋ ವರ್ಶಿಪ್’ ಎನ್ನುತ್ತೇವಲ್ಲ, ಅದು ಜನರನ್ನು ಎಷ್ಟು ಅಂಧರನ್ನಾಗಿಸುತ್ತದೆ ಎಂದರೆ ಅವನು ಏನೇ ಕೆಟ್ಟಕೆಲಸ ಮಾಡಿದರೂ ಮಾಫಿಯಾಗಿಬಿಡುತ್ತದೆ. ಸ್ಕ್ರೀನ್ ಮೇಲೆ ರೌಡಿಗಳನ್ನು ಹೊಡೆದುಬಿಟ್ಟು ಹುಡುಗಿಯನ್ನು ಪಟಾಯಿಸುವುದೇ ಹೀರೋಯಿಸಂ ಆಗಿದೆ. ಆತನ ನಿಜಜೀವನದ ಬಗ್ಗೆ ತಿಳಿದುಕೊಳ್ಳುವುದೇ ಇಲ್ಲ. ಈ ರೀತಿ ಅಂಧಾನುಕರಣೆ ಮಾಡಲು ಹೋಗಬೇಡಿ ಎನ್ನುವುದನ್ನು ಹೇಳಲು ಬಯಸುತ್ತೇನೆ. ನೀವು ನಿಜವಾಗಿಯೂ ಆತನನ್ನು ಇಷ್ಟ ಪಡುತ್ತೀರಿ ಎಂದರೆ ಆತನು ಮಾಡಿರುವ ಕೆಲಸಗಳನ್ನು ಗುರುತಿಸಿ ಇಷ್ಟಪಡಿ.

ವಿಷಾದವಿಲ್ಲದ ಪಯಣ

ತುಂಬಾ ಹಣ ನೋಡಿದ್ದೇನೆ, ಅದಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ಹಣವನ್ನು ಕಳೆದುಕೊಂಡಿದ್ದೇನೆ. ಆದರೆ ಕಳೆದುಕೊಳ್ಳುವುದರಲ್ಲೂ ಖುಷಿ ಕಂಡುಕೊಳ್ಳುವ ದಾರಿಯನ್ನೂ ತಿಳಿದುಕೊಂಡಿದ್ದೇನೆ. ನನ್ನ ಸ್ನೇಹಿತರೆಲ್ಲಾ ನಗುವರು, ಕೀಳಾಗಿ ಮಾತನಾಡÀವರು; ಅವರೆಲ್ಲಾ ಸಂಪಾದನೆ ಮಾಡಿದ್ದನ್ನು ಕೂಡಿಟ್ಟು 30×40 ಸೈಟ್ ಮಾಡಿಕೊಂಡು ಜೀವನದಲ್ಲಿ ಸೆಟ್ಲ್ ಆಗುವುದನ್ನು ಯೋಚಿಸುತ್ತಿದ್ದರು. ಆದರೆ ನಾನು ಯು.ಕೆ.ಗೆ ಹೋಗಬೇಕು, ಅಲ್ಲಿ ಕಛೇರಿ ನೀಡಬೇಕು ಎಂದು ಹಣ ಕೂಡಿಡುವುದು, ಅಲ್ಲಿ ಹೋಗಿ ಹಾಲ್ ಬುಕ್ ಮಾಡುವುದು, ಅದಕ್ಕಾಗಿ ಅಲೆದಾಡುವುದು, ಟಿಕೆಟ್ ನಾವೇ ಮಾರುವುದು, ಪಬ್ಲಿಸಿಟಿ ಜಾಹೀರಾತು ಎಲ್ಲದಕ್ಕೂ ನಾವೇ ಸ್ವತಃ ಖರ್ಚು ಮಾಡುತ್ತಿದ್ದೆವು. ವರ್ಷಕ್ಕೆ ಸುಮಾರು 30-40 ಲಕ್ಷ ಇದಕ್ಕಾಗಿಯೇ ಖರ್ಚು ಮಾಡುತ್ತಿದ್ದೆ. ಅದೂ ಒಂದೆರಡು ವರ್ಷ ಅಲ್ಲ, ಸುಮಾರು ಎಂಟುವರ್ಷ ನಮ್ಮ ಟೂರ್ ನಾವೇ ಫಂಡ್ ಮಾಡಿಕೊಂಡು – ಹೀಗೆ ಎಲ್ಲವನ್ನೂ ನಾವೇ ನಿಭಾಯಿಸಿಕೊಂಡ ಬಳಿಕ ಇಂದು ಅಂತಾರಾಷ್ಟ್ರೀಯ ಸಂಗೀತದ ಮಾರುಕಟ್ಟೆಯಲ್ಲಿ ನಮಗೊಂದು ಹೆಸರಿದೆ. ನಮ್ಮನ್ನು ಗುರುತಿಸುವವರು ಇದ್ದಾರೆ. ಇಂದು ‘ಕ್ವೀನ್ ಎಲಿಜಬೆತ್ ಹಾಲ್’ ಎನ್ನುವ ಅಂತಾರಾಷ್ಟ್ರೀಯ ಹಾಲ್‍ನಲ್ಲಿ ಫುಲ್‍ಹೌಸ್ ಶೋ ಕೊಡುವಂತಹ ಕ್ಷಮತೆಯನ್ನು ಪಡೆದುಕೊಂಡಿದ್ದೇವೆ. ಹಲವಾರು ಅಂತಾರಾಷ್ಟ್ರೀಯ ಸಂಗೀತ ಫೆಸ್ಟಿವಲ್‍ಗಳಲ್ಲಿ ಹೆಡ್‍ಲೈನ್ ಆಗುವ ಮಟ್ಟಕ್ಕೆ ಏರಿದ್ದೇವೆ.

ನಾವು ಖರ್ಚು ಮಾಡಿಕೊಂಡು ಹೋಗುತ್ತಿದ್ದ ದಿನಗಳು, ಬಳಿಕ ಮೊದಲನೆಯ ಫೆಸ್ಟಿವಲ್ ಅವಕಾಶ ಸಿಕ್ಕಾಗ ಕೇವಲ 50ಪೌಡ್ ಸಂಭಾವನೆಯನ್ನು ಪಡೆದಿದ್ದು ಎಲ್ಲ ಮುಗಿದು, ಇಂದು ಅದೇ ಫೆಸ್ಟಿವಲ್ ನಮಗೆ ಮೂರುಸಾವಿರ ಪೌಂಡ್ ನೀಡುವ ದಿನಗಳು ಬಂದಿವೆ. ಭಾರತದ ಸಂಪಾದನೆಗೆ ಹೋಲಿಸಿದರೆ ಅದು ಶೇ. 50ಕ್ಕಿಂತಲೂ ಕಡಮೆ. ಆದರೆ ಲಕ್ಷಗಟ್ಟಲೆ ನಾವೇ ಖರ್ಚು ಮಾಡುತ್ತಿದ್ದಲ್ಲಿಂದ ಮೂರುಸಾವಿರ ಪೌಂಡ್ ತನಕ ಬಂದಿರುವುದು ಬಹಳ ದೂರದ ಹಾದಿಯನ್ನು ಸಾಗಿದ್ದೇವೆ ಎನ್ನುವುದನ್ನು ಹೇಳುತ್ತಿವೆ. ಕಷ್ಟ ನಿಜ, ಆದರೆ ವಿರಹದಲ್ಲಿರುವ ನೋವು ಸುಖ ಕೊಡುತ್ತದೆ ಅನ್ನುತ್ತಾರಲ್ಲ ಹಾಗೆ ಇದು. ಎಲ್ಲೋ ಅನಾಥನಾಗಿದ್ದ ನಾನು ಇಂದು ಸ್ಟೇಜ್‍ನಲ್ಲಿ ನಿಂತು ನನ್ನ ಭಾಷೆಯೇ ಅರ್ಥವಾಗದ ಸಾವಿರಾರು ಜನರನ್ನು ಸಂತೋಷಗೊಳಿಸುತ್ತಿದ್ದೇನೆ ಎಂದು ಯೋಚಿಸಿದಾಗ ಸಹಜವಾಗಿ ಇಷ್ಟು ವರ್ಷಗಳ ಈ ಜರ್ನಿ ನಿಜವಾಗಿಯೂ ಸಾರ್ಥಕ ಎನಿಸುತ್ತದೆ. ಮನೆ ಬಿಲ್ಡಿಂಗ್ ಕಟ್ಟುವ ಬದಲು ನನ್ನ ಜೀವನದ ಕಥೆಯನ್ನೇ ನಿರ್ಮಿಸಿಕೊಂಡಿದ್ದೇನೆ ಅನ್ನುವಾಗೆಲ್ಲ ಅದೊಂದು ಪುಳಕ. ಇಷ್ಟೆಲ್ಲಾ ಆದರೂ ಈ ಸ್ಟುಡಿಯೋವನ್ನು ಕಟ್ಟಿಕೊಂಡಿದ್ದೇನೆ. ಬೆಂಗಳೂರಿನಲ್ಲಿರುವ ಅತ್ಯಂತ ಸುಸಜ್ಜಿತ ಸ್ಟುಡಿಯೋ ಇದು. ಪ್ರತಿಯೊಂದು ರೆಕಾರ್ಡಿಂಗ್‍ಗೂ ಮುಂಬೈ, ಚೆನ್ನೈಗೆ ಹೋಗುತ್ತಿದ್ದೆವು. ಈವತ್ತು ಎಲ್ಲಾ ರೆಕಾರ್ಡಿಂಗ್ ಇಲ್ಲಿಯೇ ಮಾಡುತ್ತಿದ್ದೇವೆ. ಹೀಗೆ ಒಟ್ಟಾರೆ ನೋಡಿದರೆ ವಿಷಾದವಿಲ್ಲದ ಪಯಣ ನನ್ನದು ಎಂದು ಧೈರ್ಯದಿಂದ ಹೇಳಬಲ್ಲೆ. ತಪ್ಪುಗಳೇ ಮಾಡಿಲ್ಲ ಎಂದಲ್ಲ. ವೃತ್ತಿಜೀವನದಲ್ಲಿ, ವೈಯಕ್ತಿಕ ಜೀವನದಲ್ಲಿ ಮಾಡಿದ ತಪ್ಪುಗಳು ಹಲವು; ತಿಂದಿರುವ ಏಟುಗಳು ನೂರಾರು. ಆದರೆ ನಾನು ಬರೆಯೋ ಕಥೆ ಇನ್ನಾರೂ ಬರೆಯಲು ಸಾಧ್ಯವಿಲ್ಲ. ಹಾಗಾಗಿ ಇದು ವಿಷಾದವಿಲ್ಲದ ಪಯಣ…

ಮೂಲ: ‘ಉತ್ಥಾನ’ದ ಓದುಗರಿಗಾಗಿ ಈಚೆಗೆ ರಘು ದೀಕ್ಷಿತ್ ಅವರ ಸಂದರ್ಶನವನ್ನು ನಡೆಸಲಾಯಿತು. ಪತ್ರಿಕೆಯ ಸಂಪಾದಕ ಕಾಂಕುಜೆ ಕೇಶವ ಭಟ್ಟ ಮತ್ತು ಸುಮನಾ ಮುಳ್ಳುಂಜ ಅವರೊಂದಿಗೆ ರಘು ದೀಕ್ಷಿತ್ ಅವರು ನಡೆಸಿದ ಮಾತುಕತೆಯ ಪೂರ್ಣಪಾಠ ಇದು.

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!