Featured ಅಂಕಣ

ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ರಾಯಭಾರಿ:  ರಘು ದೀಕ್ಷಿತ್

ಜನಪ್ರಿಯತೆ ಎನ್ನುವ ಕುದುರೆಯ ಹಿಂದೆ ಓಡದೆ ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಗೆಲವಿನ ಶಿಖರವನ್ನು ತಲಪಿರುವ ರಘು ದೀಕ್ಷಿತ್, ತಾನು ಸಾಧಿಸಿದ್ದೇನೆ ಎಂದರೆ ಅದು ಅಹಂ ಆಗುತ್ತದೆ ಎನ್ನುವ ಹಂಬಲ ವ್ಯಕ್ತಿ. ಅಪ್ಪಟ ಅಯ್ಯಂಗಾರೀ ಮನೆತನದಿಂದ ಬಂದಿರುವ ಇವರು ತಮ್ಮ ಅಂತರಾಳದಲ್ಲಿ ಭಾರತೀಯತೆಯ ಬಗ್ಗೆ ಆಳವಾದ ಪ್ರೀತಿ-ಗೌರವ ಬೆಳೆಸಿಕೊಂಡು ಬಂದಿದ್ದಾರೆ. ಭಾರತೀಯತೆ, ಶಾಸ್ತ್ರೀಯಸಂಗೀತ ಕಲೆಗಳಿಲ್ಲದೆ ‘ರಘು ದೀಕ್ಷಿತ್ ಪ್ರಾಜೆಕ್ಟ್’ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಭಾರತೀಯತೆ ಇವರಲ್ಲಿ ಹಾಸುಹೊಕ್ಕಾಗಿದೆ. ಮಹಾರಾಷ್ಟ್ರದ ನಾಸಿಕ್‍ನಲ್ಲಿ ಜನಿಸಿದ ಇವರ ಬಾಲ್ಯ-ವಿದ್ಯಾಭ್ಯಾಸ ಎಲ್ಲ ಕಳೆಜದ್ದು ಸ್ವಂತ ಊರಾದ ಮೈಸೂರಿನಲ್ಲಿ. ಪುಟ್ಟಪುಟ್ಟ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯರ ತನಕ ಎಲ್ಲ ವಯೋಮಾನದ ಅಭಿಮಾನಿವರ್ಗವನ್ನು ಹೊಂದಿರುವವರು ಇವರು. ಗೆಜ್ಜೆಕಟ್ಟಿ ಶಾಸ್ತ್ರೀಯಸಂಗೀತಕ್ಕೆ ಭರತನಾಟ್ಯ ಮಾಡುತ್ತಿದ್ದ ಅಯ್ಯಂಗಾರೀ ಮಾಣಿ; ಗಿಟಾರ್ ಹಿಡಿದು ಶಾಸ್ತ್ರೀಯಸಂಗೀತದ ಆಧಾರದಲ್ಲಿ ಷರೀಫಜ್ಜರ ತತ್ತ್ವಪದ, ವರಕವಿಯ ಜೀವನಪ್ರೀತಿಯ ಹಾಡುಗಳನ್ನು ಹಾಡುತ್ತಾ ಭಾರತೀಯತೆಯನ್ನು ವಿಶ್ವದ ಮೂಲೆಮೂಲೆಯಲ್ಲಿ ಪಸರಿಸುತ್ತಿದ್ದಾರೆ. ಇಂಗ್ಲಿಷ್ ಹಾಡುಗಳಷ್ಟೇ ರಾಕ್‍ಬ್ಯಾಂಡ್‍ಗೆ ಸೂಕ್ತ ಎನ್ನುವ ಕಾಲದಲ್ಲಿ ಕನ್ನಡ ಹಾಡುಗಳನ್ನು ಹಾಡುವ ಮೂಲಕ ಭಾರತದ ಭಾಷೆಯೊಂದನ್ನು ಜಗತ್ತಿನೆಲ್ಲೆಡೆಗೆ ತನ್ನ ಜೊತೆ ಶ್ರೋತೃಗಳೂ ಹಾಡುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಆಧುನಿಕತೆ ಎನ್ನುವ ಸೋಗಿನಲ್ಲಿ ಕೊಚ್ಚಿಹೋಗದೆ ತನ್ನತನವನ್ನು ಹೇಗೆ ಉಳಿಸಿಕೊಳ್ಳಬಹುದು ಎನ್ನುವುದಕ್ಕೆ ಜೀವಂತ ಸಾಕ್ಷಿಯಾಗಿ ನಿಲ್ಲುತ್ತಾರೆ ರಘು ದೀಕ್ಷಿತ್.

ಮೈಸೂರಿನ ಬಾಲ್ಯದ ದಿನಗಳಿಂದ ಆರಂಭಿಸಿ, ರಘುಪತಿ ದ್ವಾರಕನಾಥ್ ದೀಕ್ಷಿತ್ ಒಬ್ಬ ಗೀತರಚನಕಾರ-ಗಾಯಕ, ನಿರ್ದೇಶಕ, ನಿರ್ಮಾಪಕನಾಗಿ ಬೆಳೆದುಬಂದ ಬಗೆಯನ್ನು, ಕಷ್ಟ-ಸುಖಗಳೊಡನೆ ನಮ್ಮ ಓದುಗರೊಂದಿಗೆ ಹಂಚಿಕೊಳ್ಳುವಿರಾ?

ಕಷ್ಟ-ಸುಖ ಜೊತೆಗೇ ಇದೆ. ಬಹಳ ಜನ ಕೇಳ್ತಾರೆ ನಿಮ್ಮನ್ನು ನೀವು ಯಾವಾಗ ಸಕ್ಸೆಸ್‍ಫುಲ್ ಎಂದು ಡಿಫೈನ್ ಮಾಡಿಕೊಳ್ಳುತ್ತೀರಾ ಎಂದು. ಅವರಿಗೆ ನಾನು ಹೇಳುವುದು, ಯಾವಾಗ ನಾವು ನಮಗೆ ಇಷ್ಟವಿರುವುದನ್ನು ಕಸುಬಾಗಿ ಆರಿಸಿಕೊಳ್ಳುತ್ತೇವೆಯೋ ಅದು ಸಕ್ಸೆಸ್. ಅದರಿಂದ ಎಷ್ಟು ಹಣ ಸಂಪಾದಿಸುತ್ತೇವೆಯೋ, ಹೆಸರು ಗಳಿಸುತ್ತೇವೆಯೋ ಅವೆಲ್ಲ ಬೋನಸ್. ಆದರೆ ಪ್ರವೃತ್ತಿಯನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸುವ ಕ್ಷಣ ಇದೆಯಲ್ಲ ಅದು ನಿಜವಾದ ಸಕ್ಸೆಸ್. ಹಾಗೆ ನಿರ್ಧರಿಸಿದ ಕ್ಷಣದಿಂದ ಇನ್ನಾವತ್ತೂ ನಾನು ಯಾರ ಮುಂದೆಯೂ ಕೈಯೊಡ್ಡಿ ನಿಂತಿಲ್ಲ, ಎಲ್ಲೂ ‘ಸಾರ್’ ಎಂದು ಹಲ್ಲುಗಿಂಜುವ ಪರಿಸ್ಥಿತಿ ಎದುರಾಗಿಲ್ಲ. ಹಾಗಾಗಿ ನಾನು ಇಂದು ಏನಾಗಿದ್ದೇನೋ (ನನ್ನ ಡೆಸ್ಟಿನಿ) ಅದಕ್ಕೆ ನಾನೇ ಕಾರಣ, ನಾನೇ ಮಾಲೀಕ ಎನ್ನಬಹುದು. ನನ್ನ ಭವಿಷ್ಯ ಹೇಗಿರಬೇಕು ಎಂದು ನಾನೇ ನಿರ್ಧರಿಸುವ ಜೀವನ ನನ್ನದಾಗಿತ್ತು, ಅದೇ ನನ್ನ ಗೆಲವು. ಹಾಗೆ ನೋಡುವುದಾದರೆ ಸುಖ ಜಾಸ್ತಿ ದುಃಖ ಕಡಮೆ ಎಂದೇ ಹೇಳಬಹುದು.

ನಾನು ಸುಲಭದ ದಾರಿ ಆರಿಸಿಕೊಂಡಿಲ್ಲ ಎಂದೇ ಹೇಳಬಹುದು. ನನ್ನನ್ನು ನಾನೇ ಪೆದ್ದ ಎಂದು ಬೈದುಕೊಂಡ ದಿನಗಳೂ ಇವೆ. ಯಾಕೆ ಹೇಳ್ತಾ ಇದ್ದೇನೆ ಅಂದರೆ, ಸಿನೆಮಾ ಸಂಗೀತವನ್ನೇ ಹಿಡಿದುಕೊಂಡು ಕೇವಲ ಅದರಲ್ಲಿ ಇದ್ದುಕೊಂಡು ಅದನ್ನೇ ಮುಖ್ಯ ವೃತ್ತಿಯಾಗಿ ಮಾಡಿಕೊಂಡಿದ್ದರೆ, ಪ್ರಾಯಶಃ ಹಣ ಸಂಪಾದನೆಯೇ ಆಗಿರಲಿ, ಹೆಸರಿನ ಜನಪ್ರಿಯತೆಯೇ ಆಗಿರಲಿ ಬೇಗ ಬಂದಿರುತ್ತಿತ್ತು. ಆದರೆ ಸಿನೆಮೇತರ ಸಂಗೀತದಲ್ಲೇ ಹೆಚ್ಚಿನ ಆಸಕ್ತಿಯಿದ್ದ ಕಾರಣ, ಮೊದಲಿನಿಂದಲೂ ನನ್ನ ಸಂಗೀತವನ್ನು ನಾನೇ ಕಂಪೋಸ್ ಮಾಡಿಕೊಳ್ಳಬೇಕೆಂಬ ತುಡಿತವಿದ್ದದ್ದರಿಂದ ಈ ದಾರಿ ಆಯ್ದುಕೊಂಡಿದ್ದೆ. ಜೊತೆಗೆ ಚಿಕ್ಕಂದಿನಿಂದಲೂ ಸಿನೆಮಾ ಸಂಗೀತ ಎಂದರೆ ಸ್ವಲ್ಪ ದೂರವೇ ಆಗಿತ್ತು. ಆದರೆ, ಸಿನೆಮೇತರ ಸಂಗೀತವನ್ನು ಸಾಮಾನ್ಯ ಜನರಿಗೆ ತಲಪಿಸುವುದು ಸುಲಭವಲ್ಲ. ರೇಡಿಯೋ, ಟಿ.ವಿ. ಚಾನೆಲ್ ಯಾವುದೂ ಇದನ್ನು ಹಾಕುವುದಿಲ್ಲ, ಕ್ಯಾಸೆಟ್-ಸಿಡಿ ಕೊಂಡುಕೊಳ್ಳುವ ವರ್ಗ ಬಹಳ ಕಡಮೆ. ನಾನು ಶುರುಮಾಡಿದ ಸಮಯವಂತೂ ಬಹಳ ಕಷ್ಟ ಇತ್ತು. ಪ್ರಾಯಶಃ ಈಗ ಜನರಿಗೆ ಮುಟ್ಟಿಸುವುದು ಸುಲಭ, ಆದರೆ ನನ್ನಂತಹ ಸಾವಿರಾರು ಜನ ಈಗಿದ್ದಾರೆ. ಹಾಗಾಗಿ ‘ಗುಂಪಿನಲ್ಲಿ ಗೋವಿಂದ’ ಎಂದಾಗದೆ, ಅನನ್ಯವಾಗಿ ನೆಲೆಯೂರುವುದು ಇಂದಿನ ಹೊಸ ಸವಾಲು. ಅಂದು ನಮ್ಮ ಹಾಡನ್ನು ಒಬ್ಬರಾದರೂ ಕೇಳಿದರೆ ಸಾಕು ಎನ್ನುವ ಸ್ಥಿತಿ ಇತ್ತು. ಇಂದು ಕೇಳುವವರು ಹಲವರಿದ್ದಾರೆ, ಜೊತೆಗೆ ಕೇಳಿಸುವವರೂ ಸಾಕಷ್ಟಿದ್ದಾರೆ. ಅವರೆಲ್ಲರಿಂದ ಹೊರಗೆ ನಿಂತು ವಿಶಿಷ್ಟವಾಗುವುದು ಹೇಗೆ ಎನ್ನುವ ಸವಾಲನ್ನು ಸ್ವೀಕರಿಸಬೇಕಾಗಿದೆ. ಹಲವು ಕಲಾವಿದರಂತೆ ಒಂದಿಷ್ಟು ಹಾಡುಗಳನ್ನು ಮಾಡುವುದು, ವೀಡಿಯೋ ತಯಾರಿಸುವುದು, ಅದನ್ನು ಯೂ-ಟ್ಯೂಬ್‍ನಲ್ಲಿ ಹರಿಯಬಿಡುವುದು – ಹೀಗೆ ಇಂದಿಗೂ ನಾನು ಮಾಡಿಲ್ಲ. ನನ್ನ ನಿಲವು ಏನೆಂದರೆ, ಸ್ಟೇಜ್ ಮೇಲೆ ನಿಂತು ಹಾಡಿ ಅದರಿಂದ ಹತ್ತೇ ಜನ ಆದರೂ ಸರಿಯೇ ಸಂತೋಷಪಟ್ಟು ಅವರು ಮತ್ತೆ ಒಂದಷ್ಟು ಜನರನ್ನು ಮುಂದಿನ ಕಾರ್ಯಕ್ರಮಕ್ಕೆ ಕರೆದುಕೊಂಡು ಬರುತ್ತಾರಲ್ಲ, ಅಂತಹ ಮಾದರಿಯಲ್ಲೇ ಕೆಲಸ ಮಾಡುವುದು. ಇದರಿಂದಾಗಿಯೇ ನನ್ನ ಪ್ರಗತಿ ನಿಧಾನಗತಿಯಲ್ಲಿ ಮುಂದುವರಿದು ಅದರದ್ದೇ ಆದ ಸಮಯವನ್ನು ತೆಗೆದುಕೊಂಡು ಬೆಳೆಯಿತು.

 

ಭರತನಾಟ್ಯದಲ್ಲಿ ವಿದ್ವತ್ತು, ಮೈಕ್ರೊಬಯಾಲಜಿಯಲ್ಲಿ ಚಿನ್ನದ ಪದಕ, ಬೆಲ್ಜಿಯಂನಲ್ಲಿ ವೃತ್ತಿಜೀವನದ ಆರಂಭ? ಇವೆಲ್ಲದರ ನಡುವೆ ಸಂಗೀತಕಲೆ ‘ಫಿಟ್’ ಆಗಿದ್ದಾದರೂ ಹೇಗೆ?

‘ಫಿಟ್’ ಅಲ್ಲ ‘ತುರುಕಿದ್ದು’ ಎನ್ನಬಹುದು. ಈಗ ನನಗೆ ಆ ಮಾದರಿ ಅರ್ಥವಾಗುತ್ತಿದೆ. ನಾವು ಮನೆ ಹೀಗಿರಬೇಕು, ಇದಾದ ಬಳಿಕ ಇದು, ಆಮೇಲೆ ಇನ್ನೇನೋ ಎನ್ನುವ ಪ್ಲಾನ್ ಮಾಡಿ ಇಂಜಿನಿಯರ್ ಬಳಿ ಹೇಳಿ ಬ್ಲೂಪ್ರಿಂಟ್ ರೆಡಿ ಮಾಡಿಸಿರುತ್ತೇವೆ. ಕೊನೆಯಲ್ಲಿ ಹಾಗೆ ಬೇಡ, ಬೆಡ್‍ರೂಂ ಕೊನೆಯ ಮಹಡಿಯಲ್ಲಿ ಬೇಕು ಎಂದು ಪ್ಲಾನ್ ಬದಲಾಯಿಸಿಬಿಡುತ್ತೇವೆ. ಅದೇ ರೀತಿ ನಮ್ಮ ಭಗವಂತ. ಡೆಸ್ಟಿನಿ ಅನ್ನುವುದೇ ವಿಚಿತ್ರ. ನಾವು ಏನೋ ಅಂದುಕೊಂಡಿರುತ್ತೇವೆ. ಆದರೆ ಪೂರ್ತಿ ತದ್ವಿರುದ್ಧವೇ ಆಗಿಬಿಡುವ ಸಂದರ್ಭಗಳು ನಿರ್ಮಾಣವಾಗುತ್ತವೆ. ನನ್ನ ಜೀವನದಲ್ಲಿ ಪರಿಚಯವೇ ಇಲ್ಲದ ಹಲವರು ಬಂದು ಸಾಥ್ ನೀಡಿದ್ದಾರೆ. ಇವನ್ನೆಲ್ಲಾ ಗಮನಿಸುತ್ತಾ ಬಂದಿದ್ದೇನೆ. ಅದರಿಂದ ಕಲಿತಿದ್ದೇನೆಂದರೆ – ಇಂದು ಯಾರೋ ಒಬ್ಬ ಬಂದು ನನ್ನನ್ನು ಭೇಟಿಯಾಗಬಯಸಿದರೆ, ಇವನಿಂದ ನನ್ನ ಜೀವನ ಬದಲಾಗುತ್ತದೆ ಎನ್ನುವಷ್ಟರ ಮಟ್ಟಿಗೆ ತಿಳಿದುಕೊಳ್ಳಬಲ್ಲವನಾಗಿದ್ದೇನೆ. ಅದನ್ನು ‘ಎನರ್ಜಿ ರೀಡಿಂಗ್’ ಎನ್ನಬಹುದು.

ಪದವಿ ತರಗತಿಯ ಸಮಯದಲ್ಲಿ ನನ್ನ ಸ್ನೇಹಿತ ಗಿಟಾರಿಸ್ಟ್ ಜೆಫ್ರಿ ಅಂತ ಇದ್ದ. ಅವನು ಗಿಟಾರ್ ನುಡಿಸುವುದು, ಹುಡುಗಿಯರೆಲ್ಲ ಸುತ್ತುವರಿದು ಪ್ರೋತ್ಸಾಹಿಸುವುದು ಎಲ್ಲ ನಡೆಯುತ್ತಿತ್ತು. ಒಮ್ಮೆ ಕಾಲೇಜು ವಾರ್ಷಿಕೋತ್ಸವದಲ್ಲಿ ನಾನು ಭರತನಾಟ್ಯ ಮಾಡಿ ಮೇಕಪ್ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಆತ ಗಿಟಾರ್ ಹಿಡಿದುಕೊಂಡು ಬಂದು, “ಏನೋ ಇದು, ಒಳ್ಳೆ ಹುಡುಗಿಯರ ಥರ ಮೇಕಪ್ ಕಾಜಲ್ ಹಾಕ್ಕೊಂಡು, ಅರ್ಧ ಮೈ ಬಿಟ್ಕೊಂಡು ಹೆಂಗಸಿನಂತೆ ಡಾನ್ಸ್ ಮಾಡೋದು; ನಾಚಿಕೆ ಆಗೋಲ್ವಾ ನಿನಗೆ? ಗಂಡಸು ಅಂದರೆ ನೋಡು, ಗಿಟಾರ್ ಹಿಡ್ಕೊಂಡು ಈ ರೀತಿ ಹಾಡಿದ್ರೇನೆ ಗಂಡಸು ಅನ್ನೋದು” ಎಂದು ಕಿಚಾಯಿಸಿದ. ಆ ಕ್ಷಣಕ್ಕೆ ನನಗೆ ಅದು ಸರಿ ಅನ್ನಿಸದಿದ್ದುದರಿಂದ: “ಅಷ್ಟೊಂದು ಇದ್ದರೆ ಎರಡು ತಿಂಗಳು ಕೊಡು, ಆ ನಿನ್ನ ಜುಜುಬಿ ಇನ್‍ಸ್ಟ್ರುಮೆಂಟ್ ನಾನು ನುಡಿಸಿ ತೋರಿಸುವೆ. ಅದೇ ಸಮಯದಲ್ಲಿ ನೀನು ಭರತನಾಟ್ಯದ ಎರಡು ಮೂರು ಸ್ಟೆಪ್ ಮಾಡಿ ತೋರಿಸು ಸಾಕು. ಆಮೇಲೆ ನಾನು ಹೆಂಗಸು ನೀನು ಗಂಡಸು ಎಂದು ಒಪ್ಪಿಕೊಳ್ಳುತ್ತೇನೆ” ಎಂದು ಸವಾಲುಹಾಕಿದೆ. ಅದಕ್ಕೆ ಅವನು, “ಇಲ್ಲ ಇಲ್ಲ, ನಾನು ತಮಾಷೆ ಮಾಡ್ತಿದ್ದೆ, ಇದನ್ನೆ ಸೀರಿಯಸ್ ಆಗಿ ತಗೋಬೇಡ” ಅಂದಿದ್ದ. ಆದರೆ ನನ್ನ ಮನಸ್ಸಿನಲ್ಲಿ ಆ ವಿಷಯ ಆಳವಾಗಿ ಊರಿತ್ತು.

ನಮ್ಮದು ಮಧ್ಯಮವರ್ಗದ ಅಪ್ಪಟ ಬ್ರಾಹ್ಮಣ ಕುಟುಂಬ; ಅಲ್ಲಿ ಕಡಿವಾಣಗಳು ಬಹಳ. ಜೊತೆಗೆ ಅಪ್ಪನ ಕೋಪ. ಹಾಗಾಗಿ ಪಾಶ್ಚಾತ್ಯ ಡ್ರೆಸ್, ಪಾಶ್ಚಾತ್ಯ ಸಂಗೀತ, ಇಂಗ್ಲಿಷ್ ಕಾರ್ಯಕ್ರಮ ನೋಡುವುದು ಯಾವುದೂ ಅಪ್ಪನಿಗೆ ಹಿಡಿಸುತ್ತಿರಲಿಲ್ಲ. ಇಂತಹ ವಾತಾವರಣದಲ್ಲಿ ಬೆಳೆದ ನನಗೆ ಗಿಟಾರ್ ಎಂದರೆ ಕ್ರಿಶ್ಚಿಯನ್ನರು ನುಡಿಸುವುದು ಎನ್ನುವ ಭಾವನೆಯಿತ್ತು. ಹಾಗಾಗಿ ಬೆಳಗ್ಗೆ ಎದ್ದು ಎಲ್ಲಾ ಕ್ರಿಶ್ಚಿಯನ್ ಸ್ನೇಹಿತರ ಪಟ್ಟಿಯನ್ನೇ ಮಾಡಿಕೊಂಡೆ. ಅಪ್ಪನ ಸೈಕಲ್ ಒಂದಿತ್ತು, ಅದನ್ನು ತುಳಿದುಕೊಂಡು ಅವರೆಲ್ಲರ ಮನೆಗೆ ಹೋಗಿ ‘ನೋಡಪ್ಪಾ ಈ ತರಹ ನನಗೆ ಗಿಟಾರ್ ಕಲಿಯಬೇಕಿದೆ, ಫ್ರೀಯಾಗಿ ಹೇಳಿಕೊಡಬೇಕು, ಗಿಟಾರ್ ನಿಮ್ಮ ಮನೆಯದ್ದೇ ಆಗಿರಬೇಕು, ನಿಮ್ಮ ಮನೆಯಲ್ಲೇ ಅಭ್ಯಾಸಕ್ಕೂ ಬಿಡಬೇಕು…’ ಇಷ್ಟಲ್ಲದೇ, ‘ನನ್ನ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ವಿಷಯ ತಿಳಿಯಬಾರದು’ ಎನ್ನುವ ಕಂಡೀಷನ್ ಬೇರೆ ಹಾಕುತ್ತಿದ್ದೆ! ಎರಡು ವಾರ ಕಳೆದರೂ ಯಾರೂ ಸಿಗಲಿಲ್ಲ. ಮತ್ತೊಂದು ದಿನ, ಕಾಲೇಜಿನ ಹಾದಿಯಲ್ಲಿ ನನ್ನ ಪಿಯುಸಿ ಗೆಳೆಯ ಲಿಯೋ ಸಿಕ್ಕಿದ. ಅವನನ್ನು ಕರೆದು ನಿಲ್ಲಿಸಿ ಗಿಟಾರ್ ಕಲಿಯುವ ನನ್ನ ಹಂಬಲ ತಿಳಿಸಿದೆ. ಅದೇ ಸಮಯಕ್ಕೆ ಅವನೂ ಗಿಟಾರ್ ಕಲಿಯುತ್ತಿದ್ದ. ಆದರೆ ಅದು ಕ್ಲಾಸ್ ಅಲ್ಲ, ಕ್ರಿಶ್ಚಿಯನ್ ಸೆಮಿನರಿಯಲ್ಲಿ ಐವನ್ ಮತ್ತೆ ಪೀಟರ್ ಎಂಬ ಇಬ್ಬರು ಬ್ರದರ್ಸ್ ಬಳಿ ಕಲಿಯುತ್ತಿದ್ದ. ಅವನ ಜೊತೆ ನಾನೂ ಹೋಗಿ ಅವರನ್ನು ಪರಿಚಯ ಮಾಡಿಕೊಂಡೆ. ಮೊದಲಿಗೆ ಲಿಯೋಗೆ ಸರಿಯಾಗಿ ಬೈದರು, ನನ್ನ ಬಳಿಯೂ ಅದೇ ಹೇಳಿದರು. ನನ್ನ ಚಾಲೆಂಜ್ ವಿಷಯ ಹೇಳಿದೆ, ಬ್ರದರ್ ಐವನ್ ಅವರ ಮನಸ್ಸು ಕರಗಿತೋ ಏನೋ, ಗಿಟಾರ್ ಬಗ್ಗೆ ಬೇಸಿಕ್ ಮಾಹಿತಿ ಇರುವ ಪುಸ್ತಕ ಕೊಟ್ಟುಹೋದರು. ಮರುದಿನದಿಂದ ಶುರು, ಮನೆಯಲ್ಲಿ ಕಾಲೇಜಿಗೆ ಹೋಗುತ್ತೇನೆ ಅನ್ನೋದು, ಸೆಮಿನರಿಗೆ ಹೋಗಿ ಗಿಟಾರ್ ಮೀಟುತ್ತಾ ಕುಳಿತುಕೊಳ್ಳುವುದು. ಎರಡು ವಾರಗಳಲ್ಲಿ ಒಂದು ಹಾಡು ನುಡಿಸುವುದು ಕಲಿತುಕೊಂಡೆ. ಏನೇನೋ ಕಸರತ್ತು ಮಾಡಿ ಐವನ್ ಬಳಿ ಚರ್ಚಿನ ಗಿಟಾರನ್ನೇ ಪಡೆದುಕೊಂಡು ಕಾಲೇಜಿಗೆ ಹೋಗಿ ಜೆಫ್ರಿ ಎದುರು ಹಾಡಿ ತೋರಿಸಿದ್ದೂ ಆಯಿತು. ಹೀಗೆ ಚಾಲೆಂಜ್ ಮೂಲಕವೇ ನನಗೊಂದು ಸ್ವರ ಇದೆ, ನಾನೂ ಹಾಡಬಲ್ಲೆ ಎನ್ನುವುದು ಅರಿವಾಯಿತು.

 

ಇಷ್ಟೆಲ್ಲಾ ಕಟ್ಟುನಿಟ್ಟಿನ ವಾತಾವರಣದ ಮನೆ ಅನ್ನುತ್ತಿದ್ದೀರಿ. ಮತ್ತೆ ಗಿಟಾರ್ ನಿಮ್ಮ ಮನೆಗೆ ಹೇಗೆ ಬಂತು?

ಒಮ್ಮೆ ನನ್ನನ್ನು ಭರತನಾಟ್ಯದಲ್ಲಿ ಶಿವನ ಪಾತ್ರಕ್ಕಾಗಿ ಬೆಂಗಳೂರಿಗೆ ಕಳುಹಿಸಿದ್ದರು. ಇಲ್ಲಿ ಸ್ನೇಹಿತೆ ವಿಜಯಲಕ್ಷ್ಮಿ, ಸದಾಕಾಲ ನನ್ನನ್ನು ಮೈಸೂರು ಹುಡುಗ ಎಂದು ರೇಗಿಸುವವಳು. ‘ನಿನಗೇನು ಗೊತ್ತು ಇಲ್ಲಿ ಎಂ.ಜಿ. ರೋಡ್ ಇದೆ, ಬ್ರಿಗೇಡ್ ರೋಡ್ ಇದೆ’ ಅಂತಾನೆ ಇರುತ್ತಿದ್ದಳು, ಕೊನೆಗೆ ಒಂದು ದಿನ ಆಕೆಯಲ್ಲಿ ‘ನಿಮ್ಮ ಎಂ.ಜಿ. ರೋಡ್ ಏನಿದೆ ಮಹಾ, ನನಗೂ ತೋರಿಸು’ ಅಂದಿದ್ದೇ ತಡ ಅಲ್ಲೆಲ್ಲಾ ಸುತ್ತಾಡಿಸೋಕೆ ಕರೆದುಕೊಂಡು ಹೋದಳು. ಅಲ್ಲಿ ಕಣ್ಣಿಗೆ ಬಿದ್ದಿದ್ದೇ ಗಿಟಾರ್ ಶಾಪ್, ಆಕೆಯೋ ‘ಬಾ ನಿನಗೆ ಇದೆಲ್ಲಾ ಸರಿ ಹೋಗಲ್ಲ’ ಎಂದಾಗ ನಾನು ಗಿಟಾರ್ ಹಿಡಿದುಕೊಂಡು ಟ್ಯೂನ್‍ಮಾಡಿ ಹಾಡಿ ತೋರಿಸಿದ್ದೆ. ವಿಜಿಗೆ ಆಶ್ಚರ್ಯವೋ ಆಶ್ಚರ್ಯ, ‘ಏನು, ನಿನಗೆ ಗಿಟಾರ್ ನುಡಿಸೋಕೂ ಬರುತ್ತಾ!’ ಎಂದಾಗ, ‘ಸ್ವಲ್ಪ ಕಲಿತುಕೊಂಡು ಆಮೇಲೆ ಬಿಟ್ಟುಬಿಟ್ಟೆ, ಗಿಟಾರ್ ಇಲ್ಲ’ ಎಂದೆ. ಮುಂದೆ ಎರಡು ದಿನಗಳ ಬಳಿಕ ಬೆಂಗಳೂರಿನಲ್ಲಿ ಭರತನಾಟ್ಯ ಕಾರ್ಯಕ್ರಮವೂ ಆಯಿತು. ನಾನು ಮತ್ತೆ ಮೈಸೂರಿಗೆ ಹೊರಡುವ ದಿನವೂ ಬಂದಿತ್ತು. ವಿಜಿ ನಾನು ಉಳಿದುಕೊಂಡಿದ್ದ ಮನೆಗೆ ಬಂದು ನನಗಾಗಿ ಗಿಟಾರ್ ಒಂದನ್ನು ಉಡುಗೊರೆಯಾಗಿ ತಂದಿದ್ದಳು. ಹೀಗೆ ಗಿಟಾರ್ ನನ್ನ ಮನೆಗೆ ಬಂತು. ಅದಾದ ಬಳಿಕ ಊಟ ತಿಂಡಿ ಓದು ನಿದ್ದೆ ಎಲ್ಲವೂ ಗಿಟಾರ್ ಜೊತೆಗೇ ಆಗುತ್ತಿತ್ತು. ಅದೊಂದು ತರಹ ಹುಚ್ಚು ಹಿಡಿದ ಹಾಗಾಗಿತ್ತು.

 

ಸ್ವಂತವಾಗಿ ರಾಗ ಹಾಕಬಲ್ಲೆ, ಹಾಡುಗಳನ್ನು ಬರೆಯಲು ಸಾಧ್ಯ ಎನ್ನುವ ಅರಿವಾಗಿದ್ದು ಹೇಗೆ?

ಟ್ಯೂನ್ ಮಾಡುವುದಕ್ಕೆ ಬರುತ್ತದೆ ಎಂದು ಅರಿವಾಗಿದ್ದು ಇಲ್ಲಿ ಬೆಂಗಳೂರಿನಲ್ಲಿಯೇ, ಆವತ್ತು ವಿಜಿ ಮುಂದೆ ನುಡಿಸಿದ್ದು ಮತ್ತೆ ಎರಡು ದಿನದ ಬಳಿಕ ಹಾಗೇ ನೆನಪಿಗೆ ಬರುತ್ತಿತ್ತು. ಆಗ ನಾನೂ ಟ್ಯೂನ್ ಮಾಡಬಲ್ಲೆ ಅನಿಸಿತು. ಆದರೆ ಟ್ಯೂನ್ ಏನೋ ತಯಾರಾಗುತ್ತಿತ್ತು. ಹಾಡು ಬೇಕಲ್ಲಾ? ದಿನಪತ್ರಿಕೆ ತೆಗೆದುಕೊಳ್ಳುವುದು… ಹೆಡ್‍ಲೈನ್ಸ್‍ಗೆ ರಾಗ ಹಾಕುವುದು… ಹಾಡುವುದು – ಹೀಗೆ ಮಾಡುತ್ತಿದ್ದೆ. ನನ್ನ ಒರಿಜಿನಲ್ ಟ್ಯೂನ್ಸ್ ಎಲ್ಲ ಕರ್ನಾಟಕ ಶಾಸ್ರೀಯಸಂಗೀತದ ತಳಹದಿಯಲ್ಲೇ ಇರುತ್ತದೆ.

 

ಭಾರತದ ಪಾರಂಪರಿಕ ಸಂಗೀತದ ಜೊತೆಗೆ ಪ್ರಪಂಚದ ವಿವಿಧ ಭಾಗಗಳ ಸಂಗೀತವನ್ನು ಸೇರಿಸಿ ಎರಕಹೊಯ್ದು ಹೊಸ ರಸಪಾಕವನ್ನು ಉಣಬಡಿಸಲು ಹೇಗೆ ಸಾಧ್ಯವಾಯಿತು?

ನನಗೆ ಈ ರೀತಿಯೇ ಮಾಡಬೇಕು, ಫ್ಯೂಷನ್ ಹಾಡಬೇಕು ಎನ್ನುವ ಲೆಕ್ಕಾಚಾರ ಏನೂ ಇರಲಿಲ್ಲ. ನನ್ನ ಭರತನಾಟ್ಯದ ಹಿನ್ನೆಲೆಯೇ ಬಹುಶಃ ಇದಕ್ಕೆಲ್ಲಾ ಕಾರಣ. ಯಾವುದೇ ಪಾಶ್ಚಾತ್ಯ ಸಂಗೀತ, ವಾದ್ಯ ಕಲಿತರೂ ಆಳದಲ್ಲಿ ನೆಲೆಯೂರಿದ್ದ ಶಾಸ್ತ್ರೀಯ ಪ್ರಾಕಾರ ತಾನೇತಾನಾಗಿ ನನ್ನ ಎಲ್ಲಾ ಟ್ಯೂನ್‍ಗಳಲ್ಲಿ ಬಂದುಬಿಡುತ್ತಿತ್ತು. ಇಂದಿಗೂ ಅದು ಹಾಗೇ ಸಾಗುತ್ತಿದೆ. ಭಾರತ ಇಂದು ಏನಾಗಿದೆ ಅದನ್ನು ನಮ್ಮ ಸಂಗೀತದ ಮೂಲಕ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನಬಹುದು. ಅದೆಷ್ಟೇ ಆಧುನಿಕತೆಯನ್ನು ಒಪ್ಪಿಕೊಂಡು ಅಪ್ಪಿಕೊಂಡು ಇದ್ದರೂ ನಮ್ಮ ಮೂಲತನವಾದ ಭಾರತೀಯತೆಯನ್ನು ನಮ್ಮಿಂದ ಬಿಡಲಾಗುತ್ತಿಲ್ಲ ಅನ್ನುವುದು ಸೂರ್ಯಸತ್ಯ. ನಮ್ಮದೇ ಆದ ಕೆಲವು ಪದ್ಧತಿಗಳನ್ನು ಬಿಟ್ಟಿಲ್ಲ, ಬಿಡಲಾಗುವುದಿಲ್ಲ. ಈ ದೃಷ್ಟಿಯಿಂದ ನೋಡುವುದಾದರೆ ನಮ್ಮ ಸಂಗೀತವೂ ಹಾಗೆಯೇ; ಮೂಲದಲ್ಲಿ ಎಲ್ಲವೂ ನಮ್ಮ ಶಾಸ್ತ್ರೀಯ ಸಂಗೀತವನ್ನೇ ಆಧರಿಸಿದೆ. ನಮ್ಮ ಹಾಡುಗಳನ್ನು ಕೇಳಿದಾಗ ಗಡಿಗಳ ಮಿತಿಯನ್ನು ಮೀರಿ ಟ್ಯೂನ್ ಆಗಿವೆ ಎನಿಸಿದರೂ ಅದೇ ಕ್ಷಣಕ್ಕೆ ಭಾರತೀಯತೆ ಎನ್ನುವುದು ಆಳದಲ್ಲಿ ಗಟ್ಟಿಯಾಗಿ ನಿಂತಿದೆ ಎನ್ನುವುದೂ ಅರಿವಿಗೆ ಬರುತ್ತದೆ. ಇದು ಒತ್ತಡದಿಂದ ಅಥವಾ ಬಲವಂತದಿಂದ ಬರುವುದಲ್ಲ; ಭಾರತೀಯತೆ, ಶಾಸ್ತ್ರೀಯಸಂಗೀತ ಎನ್ನುವ ಸಹಜತೆ ಅಷ್ಟೇ.

 

 ಬಹುತೇಕ ಜಗತ್ತಿನೆಲ್ಲೆಡೆ ಸಂಗೀತಕಾರ್ಯಕ್ರಮಗಳನ್ನು ನೀಡಿದ್ದೀರಿ. ಈ ಸಂದರ್ಭದಲ್ಲಿ ನಿಮಗೆ ಸಂಗೀತದಲ್ಲಿ ವಾದ್ಯಗಳು ಪ್ರಧಾನ ಅನ್ನಿಸುತ್ತದೆಯೇ?

ಭಾರತದಲ್ಲಿ ಒಂದು ರಾಕ್‍ಬ್ಯಾಂಡ್‍ನಲ್ಲಿ ಹಾಡಿದ ಕೂಡಲೇ ನೀವು ‘ಕೂಲ್’ ಎನಿಸಿಕೊಳ್ಳುತ್ತೀರಿ. ನನ್ನ ಮೊದಲ ಕೊಲಾಬರೇಟರ್ ವಿದ್ವಾನ್ ಮೈಸೂರು ಎಚ್.ಎನ್. ಭಾಸ್ಕರ್, ವಯೋಲಿನ್ ವಾದಕರು. ನನ್ನ ಹೆಚ್ಚಿನ ಎಲ್ಲಾ ಕಂಪೋಸಿಷನ್‍ಗಳ ಕ್ರೆಡಿಟನ್ನು ಅವರಿಗೆ ಸಲ್ಲಿಸಲು ಇಷ್ಟಪಡುತ್ತೇನೆ. ರಘುದೀಕ್ಷಿತ್ ಮ್ಯೂಸಿಕ್ ಚೆನ್ನಾಗಿದೆ ಎಂದರೆ ಅದು ಕೇವಲ ರಘುದೀಕ್ಷಿತ್ ಕಾರಣದಿಂದಲ್ಲ, ಇಂತಹ ಹಲವರು ಅದರ ಹಿಂದೆ ಇದ್ದಾರೆ. ಇಂದಿಗೂ ನನಗೆ ಏನಾದರೂ ಸಂಶಯ ಬಂದಾಗ ಟ್ಯೂನ್ ನಡುವೆ ಬಾಕಿ ಆದಾಗ ಭಾಸ್ಕರ್ ಜೊತೆ ಮಾತನಾಡುತ್ತೇನೆ; ಟ್ಯೂನ್ ಸರಿಮಾಡಿಕೊಳ್ಳುತ್ತೇವೆ. ವಯೋಲಿನ್ ಇರುವ ಕಾರಣವೇ ನಮ್ಮ ಸಂಗೀತದಲ್ಲಿ ವಿಶೇಷವಾದ ಆಕರ್ಷಣೆ ಶುರುವಾಗಿತ್ತು. ಅದೇ ಕಾರಣಕ್ಕೆ ನಾನು ಇಂದಿಗೂ ನಮ್ಮ ತಂಡದಲ್ಲಿ ವಯೋಲಿನ್ ವಾದ್ಯವನ್ನು ಇಟ್ಟುಕೊಂಡಿದ್ದೇನೆ. ಕೆಲವು ಸಮಯ ವಯೋಲಿನಿಸ್ಟ್ ಸಿಗದೆ ಕೊಳಲು ಇಟ್ಟುಕೊಂಡಿದ್ದೆವು, ಈಗ ಮತ್ತೆ ವಯೋಲಿನಿಸ್ಟ್ ಇದ್ದಾರೆ.

ಆದರೆ, ನನ್ನ ತಂಡದಲ್ಲಿ ಯಾವುದೇ ವಾದ್ಯಗಳನ್ನು ಹಾಕಿದರೂ ಕೊನೆಗೆ ಅದರಲ್ಲಿ ನುಡಿಯುವುದು ಭಾರತೀಯ ಶೈಲಿಯ ಟ್ಯೂನ್, ಅದು ಗಿಟಾರ್ ಡ್ರಮ್ ಯಾವುದೇ ಆಗಿದ್ದರೂ ಸರಿಯೇ, ಅಲ್ಲಿ ಶಾಸ್ತ್ರೀಯತೆ ಇರುತ್ತದೆ. ಪ್ರಾಯಶಃ ವಯೋಲಿನ್ ಕೊಳಲಿನ ಶಾಸ್ತ್ರೀಯತೆ ಎಲ್ಲಾ ಇರದಿದ್ದರೆ ನಮ್ಮ ತಂಡ ಆಕರ್ಷಣೀಯವಾಗುತ್ತಿರಲಿಲ್ಲ, ಇಷ್ಟೊಂದು ಸಕ್ಸೆಸ್ ಫುಲ್ ಎನಿಸುತ್ತಿರಲಿಲ್ಲ. ಕೊನೆಗೆ “ವಾದ್ಯ ಯಾವುದು ಎನ್ನುವ ಚಿಂತೆ ಈ ಹಿಂದೆಯೂ ಕಾಡಿಲ್ಲ, ಇನ್ನು ಮುಂದೆಯೂ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಕಾರಣ ನಮಗೆ ವಾದ್ಯಕ್ಕಿಂತ ಹೆಚ್ಚು ಭಾರತೀಯ ಶಾಸ್ತ್ರೀಯಸಂಗೀತವೇ ಆಧಾರ.”

 

ಭಾರತೀಯ ಮೂಲದ ಶಾಸ್ತ್ರೀಯತೆಯನ್ನು ಪಾಶ್ಚಾತ್ಯ ವಾದ್ಯಗಳಿಗೆ ಅಳವಡಿಸಿಕೊಂಡ ನಿಮ್ಮ ಸಂಗೀತವನ್ನು ವಿದೇಶಿಯರು ಹೇಗೆ ಸ್ವೀಕರಿಸಿದ್ದಾರೆ?

ನಮ್ಮ ರಾಕ್‍ಬ್ಯಾಂಡ್ ಹಾಡುಗಳನ್ನು ಕೇಳಿದ ಸ್ವಲ್ಪ ಹೊತ್ತಿಗೇ, ಓಹ್ ಇಂಡಿಯನ್ ಮ್ಯೂಸಿಕ್ ಎಂದರೆ ಹೀಗೂ ಇರುತ್ತಾ! ಎಂದು ಆಶ್ಚರ್ಯಪಡುತ್ತಾರೆ. ಯಾಕೆಂದರೆ ಪಾಶ್ಚಾತ್ಯ ಜನರಿಗೆ ಭಾರತೀಯ ಸಂಗೀತವಾದ್ಯ ಅಂದರೆ ಸಿತಾರ್, ತಬಲಾ ಮಾತ್ರ. ಹಾಡು ಅಂದಾಗ ಪಂಜಾಬಿ ಭಾಂಗ್ರಾ ಹಾಡು, ಇನ್ನೊಂದು ಬಾಲಿವುಡ್ ಹಾಡುಗಳು. ಶಾರೂಖಾನ್‍ನಿಂದ ಹಿಡಿದು ಇಂದಿನ ಎಲ್ಲಾ ಬಾಲಿವುಡ್ ನಟರೂ ಇದಕ್ಕೆ ಕಾರಣರು. ಹಾಗಾಗಿ ಇಂಡಿಯನ್ ಮ್ಯೂಸಿಕ್ ಎಂದರೆ ಇಷ್ಟೇ ಎನ್ನುವ ಮನೋಭಾವನೆ ಅವರಲ್ಲಿ ಮೂಡಿದೆ. ಆದ್ದರಿಂದ ಹಲವು ವಾದ್ಯಗಳನ್ನು ಇಟ್ಟುಕೊಂಡು ಭಾರತೀಯ ಸಂಗೀತವನ್ನು ಆಧಾರವಾಗಿಸಿಕೊಂಡು ನಡೆಯುತ್ತಿರುವ ನಮ್ಮ ಬ್ಯಾಂಡನ್ನು ಜನ ಹೊಸಪ್ರೀತಿಯಿಂದ ಸ್ವೀಕರಿಸುತ್ತಾರೆ.

 

ಜಾನಪದ ಗೀತೆಗಳನ್ನು ಹಾಡುವವರಿಗೆ ಶಾಸ್ತ್ರೀಯ ಸಂಗೀತದ ಕಲಿಕೆ ಅಗತ್ಯವೆ? ಹೌದಾದರೆ ಎಷ್ಟರಮಟ್ಟಿಗೆ?

ಇರಬಾರದು. ಶಾಸ್ತ್ರೀಯಸಂಗೀತ ಕಲಿತ ತಕ್ಷಣ ಅದು ಜಾನಪದ ಸಂಗೀತವಾಗಲು ಸಾಧ್ಯವಿಲ್ಲ. ಜಾನಪದ ಸಂಗೀತ ಎಂದರೆ, ನಮ್ಮ ಹಳ್ಳಿಹಳ್ಳಿಗಳಲ್ಲಿ ಅಲ್ಲಿಯ ಜನ ಹಾಡಿದ ಹಾಡುಗಳು. ಅದು ಎಲ್ಲಿಂದ ಹುಟ್ಟಿಕೊಂಡಿತು, ಅದಕ್ಕೊಂದು ಸಿದ್ಧಪುಸ್ತಕವಿಲ್ಲ, ಬರೆದಿಟ್ಟ ಶಾಸ್ತ್ರವಿಲ್ಲ, ಶ್ರದ್ಧೆ-ಶಿಸ್ತು ಇಲ್ಲ. ಶಿಸ್ತಿಲ್ಲದ್ದು ಯಾವತ್ತೂ ಹೃದಯದಿಂದ ಬರುತ್ತದೆ. ಹೃದಯದಿಂದ ಹಾಡಿದ್ದೇ ಜಾನಪದ. ಆ ದಿನ ಆತ ಏನು ಕಷ್ಟಪಟ್ಟ, ಸುಖವನ್ನು ಅನುಭವಿಸಿದ, ಯಾವ ದೇವರ ಮೇಲೆ ಭಕ್ತಿಯಿದೆಯೋ ಅದರ ಬಗ್ಗೆ ಹಾಡು ಹೇಳಿಕೊಂಡ. ದೇವರ ಬಗ್ಗೆ ಹಾಡಿದರೂ ನಿನ್ನಿಂದ ನನ್ನ ಜೀವನ ಹೀಗಾಗಿದೆ, ನೀನಿಲ್ಲದೇ ನಾನಿಲ್ಲ ಎಂದು ಹಾಡಿದ್ದಾರೆಯೇ ಹೊರತು, ವಿಷ್ಣುಸಹಸ್ರನಾಮ ಅಥವಾ ಶಾಸ್ತ್ರೀಯಸಂಗೀತದಲ್ಲಿರುವಂತೆ ವರ್ಣಿಸುವುದಾಗಲೀ ಜಾನಪದದಲ್ಲಿ ಇಲ್ಲ. ಅಲ್ಲಿ ಏನಿದ್ದರೂ ನನ್ನನ್ನು ಕಾಪಾಡು, ನನ್ನ ಮಳೆ-ಬೆಳೆ ಚೆನ್ನಾಗಿರಲಿ, ಮದುವೆಯ ಹಾಡುಗಳು ಹೀಗೆ ಜೀವನದ ನೈಜತೆಯ ಬೆಳಕು ಚೆಲ್ಲುವ ಹಾಡುಗಳು. ಇದಕ್ಕೆ ಶಾಸ್ತ್ರೀಯತೆಯ ಅಗತ್ಯವಿಲ್ಲ. ಇದೇ ಕಾರಣಕ್ಕೆ ನಾನು ನನ್ನನ್ನು ಜಾನಪದ ಹಾಡುಗಾರ ಎಂದು ಕರೆದುಕೊಳ್ಳುತ್ತೇನೆ. ಸಂಗೀತದ ಯಾವುದೇ ತರಗತಿಗಳಿಗೆ ಹೋಗಿಲ್ಲ. ನನ್ನ ಹೃದಯಕ್ಕೆ ಹತ್ತಿರವಾದ ಮನಸ್ಸಿಗೆ ಬಂದ ಹಾಡುಗಳನ್ನು ಹಾಡುತ್ತೇನೆ. ಯಾರು ಇದರ ಬಗ್ಗೆ ಟೀಕೆ ಮಾಡಿದರೂ ಸುಮ್ಮನಿದ್ದುಬಿಡುತ್ತೇನೆ, ಅದಕ್ಕೆ ನನ್ನದೇ ಪಾಲಿಸಿ ಇದೆ: ‘ನೀವು ಸೋಷಿಯಲ್‍ಮೀಡಿಯಗಳಲ್ಲಿ ನಡೆಯುವ ಟೀಕೆ-ಚರ್ಚೆಗಳನ್ನೆಲ್ಲ ಮೀರಿ ನೆಮ್ಮದಿಯಿಂದ ಇರಬೇಕೆಂದರೆ ಅವನ್ನೆಲ್ಲ ನಿರ್ಲಕ್ಷಿಸಬೇಕು.’

ಭಾರತದಲ್ಲಿ ಸಂಗೀತ, ಕುಸ್ತಿ ಮುಂತಾದ ಕೆಲವು ಕಲೆಗಳಲ್ಲಿ ಇನ್ನೂ ಪಾರಂಪರಿಕ ಕಲಿಕಾವಿಧಾನ ಉಳಿದುಕೊಂಡಿದೆ. ಇದು ಹೀಗೇ ಮುಂದುವರಿಯಬೇಕೊ ಅಥವಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪದವಿಯ ಒಂದು ವಿಷಯವಾಗಿ ಕಲಿಕಾವಿಧಾನ ಬೆಳೆಯಬೇಕೊ?

ನಾನು ನೋಡಿರುವಂತೆ, ಕಾಲೇಜು ತರಗತಿಗಳಲ್ಲಿ ಕಲಿಸುವಂತಹ ಈ ಕೋರ್ಸ್ ಕೇವಲ ಕೋರ್ಸ್ ಆಗಿಯೆ ಉಳಿದುಕೊಂಡಿವೆ. ಒಂದು ಡಿಗ್ರಿ ಬೇಕು ಎನ್ನುವಲ್ಲಿಗೆ ಅದು ನಿಂತುಬಿಡುತ್ತದೆ. ಮೂರುವರ್ಷದಲ್ಲಿ ತರಗತಿಯ ಶಿಸ್ತಿನಿಂದ ಕಲಿತುಕೊಂಡು ಬಿ.ಮ್ಯೂಸಿಕ್ ಅಂತ ಡಿಗ್ರಿ ಪಡೆದುಕೊಂಡುಬಿಡಬಹುದು; ಆದರೆ ಶಾಸ್ತ್ರೀಯಸಂಗೀತದ ಆಳವನ್ನು ತಲಪಬೇಕಾದರೆ ವರ್ಷಾನುಗಟ್ಟಲೆ ಕಠಿಣ ಪರಿಶ್ರಮ ಬೇಕು. ಸಾಕಷ್ಟು ವಿದ್ಯಾರ್ಥಿಗಳಲ್ಲಿ ನೋಡಿದ್ದೇನೆ, ಡಿಗ್ರಿ ಬೇಕು ಸರ್ಟಿಫಿಕೇಟ್ ಬೇಕು ಎನ್ನುವ ಕಾರಣಕ್ಕಷ್ಟೇ ಅವು ಮೀಸಲಾಗಿವೆ. ಅವರೆಲ್ಲರೂ ತಮ್ಮದೇ ಆದ ಗುರುಗಳ ಬಳಿ ಹೋಗಿ ದಿನನಿತ್ಯ ಸಂಗೀತ-ಭರತನಾಟ್ಯ ಹೀಗೆ ಕಲೆಯ ಹಲವು ಪ್ರಕಾರಗಳನ್ನು ಪಾರಂಪರಿಕ ರೀತಿಯಲ್ಲೇ ಅಭ್ಯಸಿಸುತ್ತಿರುತ್ತಾರೆ. ಸರ್ಟಿಫಿಕೇಟ್ ಕೂಡ ಇಂದಿನ ಕಾಲಕ್ಕೆ ಅಗತ್ಯವಾಗಿದೆ, ಅವುಗಳ ಮೂಲಕವೇ ಹಲವು ಕಡೆ ಕಛೇರಿಯ ಅವಕಾಶಗಳು ಸಿಗುತ್ತವೆ. ಕೆಲವು ವರ್ಷಗಳಿಂದ ಇಂತಹ ಒಂದು ಪದ್ದತಿ ಬೆಳೆದು ಬಂದಿದೆ. ಆದರೆ ಇದು ನಿಜವಾಗಿಯೂ ಹಾಸ್ಯಾಸ್ಪದ. ಕಲಾವಿದನ ನಿಜವಾದ ಪ್ರತಿಭೆಯೇನಿದೆ ಅದರ ಗುಣಮಟ್ಟದ ಮೇಲೆ ಅವಕಾಶ ನೀಡದೆ ಮಾಕ್ರ್ಸ್‍ಕಾರ್ಡ್‍ಗೆ ಸೀಮಿತವಾಗಿಸುವುದು ಖೇದನೀಯ. ಡಿಗ್ರಿ ಎನ್ನುವುದು ಟೆಕ್ನಿಕಲ್ ಆವಶ್ಯಕತೆ ಅಷ್ಟೇ, ಆತನಲ್ಲಿ ಗುಣಮಟ್ಟದ ಪ್ರತಿಭೆಯಿದೆ ಎಂದಾದರೆ ಆತ ಉತ್ತಮ ಕಲಾವಿದನಾಗಬಲ್ಲ. ನಿಜವಾದ ಕಲಾವಿದನಾಗಲು ಆತ ಅದನ್ನು ಆರಾಧಿಸಬೇಕು, ಅದರಲ್ಲಿಯೇ ವರ್ಷಾನುಗಟ್ಟಲೆ ಸಾಧನೆ ಮಾಡಬೇಕು. ಶಾಸ್ತ್ರೀಯಕಲೆಗಳಿಗೆ ಪಾರಂಪರಿಕ ಕಲಿಕಾವಿಧಾನವೇ ಸೂಕ್ತ.

 

ಶಾಸ್ತ್ರೀಯ, ಜಾನಪದ, ರಾಕ್, ಜಾಜ್ ಮುಂತಾದವುಗಳಲ್ಲಿ ನಿಮಗೆ ಅತಿ ಹೆಚ್ಚು ಇಷ್ಟವಾದ ಪ್ರಕಾರ ಯಾವುದು?

ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸುತ್ತೇನೆ.

ಯಾಕೆ ಎಂದು ಹೇಳಬಹುದಾ?

ನನ್ನ ಪ್ರಕಾರ ಇರುವುದು ಎರಡೇ ರೀತಿಯ ಸಂಗೀತ, ಒಂದು ಉತ್ತಮ ಸಂಗೀತ, ಮತ್ತೊಂದು ಕೆಟ್ಟ ಸಂಗೀತ (ಗುಡ್ ಮ್ಯೂಸಿಕ್ ಮತ್ತು ಬ್ಯಾಡ್ ಮ್ಯೂಸಿಕ್). ಅದರಲ್ಲಿಯೂ ನನಗೆ ಉತ್ತಮ ಎನಿಸುವ ಸಂಗೀತ ನಿಮಗೆ ಬಹಳ ಕೆಟ್ಟದಾಗಿದೆ ಎನಿಸಬಹುದು, ನಿಮಗೆ ಪ್ರಿಯವಾದ ಸಂಗೀತ ನನಗೆ ಕೇಳಲೂ ಸಹ್ಯವಾಗದಿರಬಹುದು. ಆದ್ದರಿಂದ ಸಂಗೀತ ಎನ್ನುವುದು ಬಹಳ ವ್ಯಕ್ತಿನಿಷ್ಟ ವಿಷಯ; ಇಂತಹದ್ದೇ ಹತ್ತಿರವಾದದ್ದು ಇಂತಹ ಸಂಗೀತ ನನಗೆ ದೂರ ಎನ್ನುವುದು ತಪ್ಪು ಎಂದು ನನ್ನ ಅಭಿಪ್ರಾಯ. ಎಲ್ಲಾ ಸಂಗೀತದಲ್ಲೂ ಸೌಂದರ್ಯವಿದೆ, ಅದರದ್ದೇ ಆದ ಕೊರತೆಗಳೂ ಇವೆ. ಎಲ್ಲಾ ಸಂಗೀತಪ್ರಕಾರದಲ್ಲಿ ನನಗೆ ಯಾವುದು ಚೆನ್ನಾಗಿದೆ ಎನಿಸುತ್ತದೆಯೋ ಅದನ್ನು ನಾನು ಕೇಳಿಯೇ ಕೇಳುತ್ತೇನೆ. ‘ಹೆವಿ ಮೆಟಲ್’ ಹಾಡು ಕೇಳುತ್ತೇನೆ. ಅದೇ ರೀತಿ ಬೆಳಗ್ಗೆ ಎದ್ದತಕ್ಷಣ ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲು ಕೇಳದೇ ಇದ್ದರೆ ಆ ದಿನ ಸಾಗುವುದೇ ಇಲ್ಲ. ಬೆಳಗ್ಗಿನ ಸಮಯದಲ್ಲಿ ಶಾಸ್ತ್ರೀಯಸಂಗೀತ ಇರಲೇಬೇಕು. ಅದು ನನಗೆ ಅರ್ಥವಾಗುತ್ತದೋ ಇಲ್ಲವೋ ಬಿಡಿ, ಮನಸ್ಸಿಗೆ ಬಹಳ ಶಾಂತಿಯನ್ನು ಕೊಡುತ್ತದೆ. ಹಾಗಾಗಿ ಹಿಪ್-ಹಾಪ್, ರಾಕ್, ಎಲೆಕ್ಟ್ರಾನಿಕ್ ಎಲ್ಲವನ್ನೂ ಕೇಳುತ್ತೇನೆ. ವಿದೇಶದಲ್ಲಿ ಕಲಾವಿದರಿಂದ ಹಲವು ವಿಷಯಗಳನ್ನು ಕಲಿತುಕೊಳ್ಳುತ್ತಿದ್ದೇನೆ. ಮೊನ್ನೆ ‘ಟೆಲ್ಲುರೈಡ್ ಬ್ಲೂಗ್ರಾಸ್ ಫೆಸ್ಟಿವಲ್’ಗೆ ಹೋಗಿಬಂದೆ. ಅಲ್ಲಿ ಪರಿಚಯವಾದ ಕಲಾವಿದೆಯೊಬ್ಬಳು 24 ಗ್ರಾಮ್ಮಿ ಪ್ರಶಸ್ತಿ ವಿಜೇತೆ! ಅಂತಹವರ ಎದುರು ನಮ್ಮ ಸಾಧನೆ ಏನೇನೂ ಇಲ್ಲ. ಅಂತಹವರ ಎದುರು ನಾವು ಸಣ್ಣವರೆನಿಸಿಬಿಡುತ್ತೇವೆ. ಆದರೆ ಅದೇ ವ್ಯಕ್ತಿಗಳು ‘ನೀವ್ಯಾಕೆ ಇಲ್ಲಿಗೆ ಬಂದು ನಮ್ಮ ಜೊತೆ ಸ್ವಲ್ಪ ಸಮಯ ಕಾರ್ಯಕ್ರಮಗಳನ್ನು ಕೊಡಬಾರದು, ಒಂದು ಆಲ್ಬಮ್ ಮಾಡಬಾರದು?’ ಎಂದು ಕರೆದಾಗ ನಮ್ಮ ಇಷ್ಟು ವರ್ಷಗಳ ಪರಿಶ್ರಮ ಸಾರ್ಥಕ ಎನಿಸುತ್ತದೆ. ಆದ್ದರಿಂದಲೇ ಎಲ್ಲ ಕಲಾಪ್ರಕಾರಗಳಲ್ಲಿರುವ ಒಳ್ಳೆಯದನ್ನು ತೆಗೆದುಕೊಳ್ಳುತ್ತೇನೆ.

 

ಹಾಗಿದ್ದರೆ ವಿದೇಶದಲ್ಲಿ ಹೊಸ ಪ್ರಯೋಗದ ಯೋಚನೆ ಏನಾದರೂ ಇದೆಯಾ?

ಸದ್ಯಕ್ಕೆ ಏನೂ ನಿರ್ಧರಿಸಿಲ್ಲ. ಮುಂದಿನ ವರ್ಷ ಯೋಚಿಸಬೇಕು.

 

ನಿಮ್ಮ ಸಂಗೀತಕಾರ್ಯಕ್ರಮವನ್ನು ಅತಿಹೆಚ್ಚು ಇಷ್ಟಪಡುವ ಶ್ರೋತೃಗಳು ಯಾರು?

ಉತ್ತರ: ಎಲ್ಲಾ ವರ್ಗದವರೂ ಇದ್ದಾರೆ. ಜಯನಗರದಲ್ಲಿ ಒಬ್ಬರು ಅಜ್ಜಿ ಇದ್ದಾರೆ, ಆಕೆ ತನ್ನ ಮೊಮ್ಮಗನನ್ನು ಹೋಗೋ ರಘುದೀಕ್ಷಿತ್ ರೀತಿ ಗಿಟಾರ್ ನುಡಿಸು, ಅವರ ಬಳಿ ಗಿಟಾರ್ ಕಲಿ ಎಂದು ಕಳುಹಿಸುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಆತನ ಹುಟ್ಟುಹಬ್ಬದ ದಿನ ಆಶೀರ್ವಾದ ಮಾಡಿ ಎಂದು ಬಂದಿದ್ದ; ಜೊತೆಗೆ ಅಜ್ಜಿ ನಿಮಗೆ ಎಂದು ರವೆ ಉಂಡೆ ಮಾಡಿದ್ದಾರೆ ಎಂದು ತಂದಿದ್ದ. ಹೀಗೆ ಪುಟ್ಟಮಕ್ಕಳಿಂದ ಹಿಡಿದು ತಾತ-ಅಜ್ಜಿಯವರೆಗೂ ಶ್ರೋತೃವರ್ಗವಿದೆ, ಪ್ರೀತಿಸುವ ಜನರಿದ್ದಾರೆ.

 

ಸಿನೆಮಾ ಕ್ಷೇತ್ರಕ್ಕೂ ನಿಮ್ಮ ಪ್ರಾಜೆಕ್ಟ್‍ಗಳಿಗೂ ಸಂಗೀತ ನಿರ್ದೇಶನ ಮಾಡುವಾಗ ಇರುವ ಭಿನ್ನತೆಗಳು ಏನೇನು?

ರಘುದೀಕ್ಷಿತ್ ಪ್ರಾಜೆಕ್ಟ್‍ಗಳಿಗೆ ಮಾಡುವ ಸಂಗೀತ ನೇರವಾಗಿ ಹೃದಯದಿಂದ ಬಂದಿರುವ ಸಂಗೀತ. ಪ್ರತಿಹಾಡುಗಳಿಗೂ ಬಹಳ ಸಮಯ ತೆಗೆದುಕೊಂಡು ಮಾಡುತ್ತೇನೆ. ಅದು ತಾನಾಗಿಯೇ ಹುಟ್ಟಬೇಕು, ಬಲವಂತದಿಂದಲ್ಲ. ರೆಹಮಾನ್ ಅವರ ಜೀವನಚರಿತ್ರೆ ಓದಿದರೆ, ಮೊದಲನೇ ಪುಟದಲ್ಲೇ ಒಂದು ವಾಕ್ಯಬರೆದಿದ್ದಾರೆ. “ಗಾಳಿಯು ಮರದ ರೆಂಬೆ-ಕೊಂಬೆಗಳನ್ನು ಸಹಜವಾಗಿ ಸೋಕಿದಾಗ ಉಂಟಾಗುವ ಧ್ವನಿಯಿದೆಯಲ್ಲ ಅದು ಸಂಗೀತ, ಅದೇ ನೀವು ಮರದ ಕೊಂಬೆಯನ್ನು ಅಲುಗಾಡಿಸಿದಾಗ ಉಂಟಾಗುವುದು ಬರಿ ಶಬ್ದವಷ್ಟೆ” – ಎಂದು. ಹಾಗಾಗಿ ‘ರಘುದೀಕ್ಷಿತ್ ಪ್ರಾಜೆಕ್ಟ್’ ಹಾಡುಗಳು “Happened over period of time.” ಆದ್ದರಿಂದಲೇ ನಾವು ಸಾಲುಸಾಲು ಆಲ್ಬಮ್ ಹೊರತಂದಿಲ್ಲ. ಸಂಗೀತ ಹಾಡು ತಾನಾಗಿಯೇ ಹುಟ್ಟಿಕೊಂಡು ಅದು ಪರಿಪೂರ್ಣವಾಗಿದೆ ಅಂದಾಗ ಮಾತ್ರ ಆಲ್ಬಮ್ ಮಾಡುತ್ತೇವೆ.

ಅದೇ ಸಿನೆಮಾ ಸಂಗೀತ ಪೂರ್ವನಿರ್ಧಾರಿತ. ಎಲ್ಲವೂ ಮೊದಲೇ ನಿರ್ಧಾರವಾಗಿರುತ್ತದೆ. ಅದಕ್ಕೆ ಸರಿಯಾಗಿ ಸಂಗೀತ ರಚನೆಯಾಗಬೇಕು. ಅದು ಕೆಟ್ಟದ್ದೆಂದು ಹೇಳುತ್ತಿಲ್ಲ, ಒಂದು ಚೌಕಟ್ಟಿನ ಒಳಗೆ ನಮ್ಮ ಆಟ ನಡೆಯಬೇಕು. ಸಾಹಿತ್ಯ, ನಟನಟಿಯ ಇಮೇಜ್, ಸನ್ನಿವೇಶ, ಯಾರು ಹಾಡುತ್ತಿದ್ದಾರೆ, ಬಜೆಟ್ ಎಷ್ಟಿದೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಂಗೀತವನ್ನು ನಿರ್ಧರಿಸಬೇಕು. ಆದ್ದರಿಂದ ಸಿನೆಮಾಸಂಗೀತ ರಘುದೀಕ್ಷಿತ್ ಒಬ್ಬನ ಸಂಗೀತವಲ್ಲ; ಅದರಲ್ಲಿ ಎಲ್ಲರ ಪ್ರಯತ್ನ ಪರಿಶ್ರಮವಿದೆ.

ಆದ್ದರಿಂದ ರಘುದೀಕ್ಷಿತ್ ಪ್ರಾಜೆಕ್ಟ್ ಮತ್ತು ಸಿನೆಮಾಸಂಗೀತಕ್ಕೆ ಬಹಳ ವ್ಯತ್ಯಾಸವಿದೆ. ಬಹಳ ಅಪರೂಪಕ್ಕೆ ಕೆಲವು ಸಿನೆಮಾ ನಿರ್ದೇಶಕರು ರಘುದೀಕ್ಷಿತ್ ಹಾಡುಗಳನ್ನೇ ಬಯಸುತ್ತಾರೆ. ಆ ರೀತಿ ನೋಡುವುದಾದರೆ, ‘ಪ್ರದೇಶ ಸಮಾಚಾರ’, ‘ಆರ್ಕೆಸ್ಟ್ರಾ’ ಎನ್ನುವ ಎರಡು ಕನ್ನಡ ಸಿನೆಮಾಗಳನ್ನು ಮಾಡುತ್ತಿದ್ದೇನೆ. ಮೊನ್ನೆ ಬಾಲಿವುಡ್‍ನಲ್ಲಿ ‘ಶೆಫ್’ ಎಂದು ಒಂದು ಸಿನೆಮಾಗೆ ಸಂಗೀತ ಮಾಡಿದ್ದೇನೆ. ಅದರ ನಿರ್ದೇಶಕ ನಾನೇ ಬೇಕು ಎಂದು ಹುಡುಕಿಕೊಂಡು ಬಂದು ಇಲ್ಲಿಯೇ ಇದ್ದು ಕೆಲಸ ಮಾಡಿಸಿಕೊಂಡು ಹೋದರು. ನಾನು ಮುಂಬೈಗೆ ಹೋಗುವ ಸನ್ನಿವೇಶವೇ ಬರಲಿಲ್ಲ. ಇಂತಹ ಪ್ರಾಜೆಕ್ಟ್ ಬಹಳ ಕಡಮೆ. ಹಾಗೆಯೇ ಉಳಿದ ಸಿನೆಮಾಸಂಗೀತಗಳು ನಾನು ಕೇವಲ ರಘುದೀಕ್ಷಿತ್ ಪ್ರಾಜೆಕ್ಟ್ ಅಷ್ಟೇ ಅಲ್ಲ ಇಂತಹದ್ದನ್ನೂ ಮಾಡಬಲ್ಲೆ, ಕಮರ್ಷಿಯಲ್ ಮಟ್ಟದಲ್ಲಿ ಸಂಗೀತ ನಿರ್ದೇಶಿಸಬಲ್ಲೆ ಎಂದು ನಿರೂಪಿಸಲು ದಾರಿಮಾಡಿಕೊಟ್ಟಿವೆ.

 

ನಿಮ್ಮ ಅಭಿಪ್ರಾಯದಂತೆ ಸಾಹಿತ್ಯಕ್ಕೆ ಪೂರಕವಾಗಿ ಸಂಗೀತವೋ ಅಥವಾ ಸಂಗೀತಕ್ಕೆ ಪೂರಕವಾಗಿ ಸಾಹಿತ್ಯವೋ?

ಅದು ಒಂದು ಮದುವೆ ಇದ್ದ ಹಾಗೆ, ಎರಡು ಕೈ ಸೇರಿದರಷ್ಟೇ ಚಪ್ಪಾಳೆ ಅಂತಾರಲ್ಲ ಹಾಗೆ. ಸಂಗೀತವೇ ಮುಖ್ಯ, ಸಾಹಿತ್ಯವೇ ಮುಖ್ಯ ಎನ್ನುವುದು ತುಂಬಾ ಕಠಿಣವಾದ ವಿಷಯ. ಒಳ್ಳೆಯ ಸಂಗೀತವಿದ್ದು ಕೆಟ್ಟ ಸಾಹಿತ್ಯವಿದ್ದರೆ ಸಂಗೀತ ಸತ್ತುಹೋಗುತ್ತದೆ ಅಥವಾ ಬಹಳ ಚೆನ್ನಾಗಿರುವ ಸಾಹಿತ್ಯವಿದ್ದು ಅದಕ್ಕೆ ಕೆಟ್ಟ ಟ್ಯೂನ್ ಇದ್ದರೆ ಸಾಹಿತ್ಯ ಸತ್ತುಹೋಗುತ್ತದೆ. ಹಾಗಾಗಿ ನನ್ನ ಪ್ರಕಾರ ಎರಡೂ ಬಹಳಮುಖ್ಯ. ನಾನು ಸಂಗೀತಕ್ಕೆ ಎಷ್ಟು ಪ್ರಾಮುಖ್ಯ ಕೊಡುತ್ತೇನೋ ಅಷ್ಟೇ ಗಮನ ಸಾಹಿತ್ಯಕ್ಕೂ ಕೊಡುತ್ತೇನೆ.

ಸಾಹಿತ್ಯ ಸರಿಯಿಲ್ಲ ಎಂದು ಮನಸ್ಸಿಗೆ ಬಂದಕೂಡಲೇ ಅದಕ್ಕೆ ಹಾಡುವುದು ಸಾಧ್ಯವಾಗುವುದಿಲ್ಲ, ಎಷ್ಟೋ ಸಲ ಸಿನೆಮಾಸಂಗೀತ ಇದೇ ರೀತಿ ಆಗಿದ್ದಿದೆ. ನಮಗೆ ಬೇಕಿಲ್ಲದಿರುವ ಪದಗಳನ್ನು ತುರುಕಬೇಕಾಗುತ್ತದೆ, ಆಗ ಎಷ್ಟೊಂದು ಹಾಡುಗಳನ್ನು ನಾನು ಕೇಳುವುದೇ ಇಲ್ಲ. ಅದಕ್ಕೆ ಏನು ಕೆಲಸ ಮಾಡಬೇಕೋ ಮಾಡಿ ಬಿಟ್ಟುಬಿಡುತ್ತೇನೆ.  

 

ಕಲೆಯನ್ನೇ ಜೀವನವನ್ನಾಗಿಸಿಕೊಂಡವರು ನೀವು, ಆರ್ಥಿಕದೃಢತೆಯ ಬಗ್ಗೆ ಎಷ್ಟರಮಟ್ಟಿಗೆ ಧೈರ್ಯವಾಗಿದ್ದಿರಿ ಅಥವಾ ನಿಖರವಾಗಿದ್ದಿರಿ?

ಓಹ್, ಅದರ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲ. ಈ ಪ್ರವೃತ್ತಿ ಜೀವನದಲ್ಲಿ ಬೇಕಿತ್ತು ಬಂದೆ ಅಷ್ಟೆ. ಇವತ್ತಿಗೂ ಹಾಗೆ ನನಗೆ ಬೇಕು ಅನಿಸಿದ್ದನ್ನು ಎಷ್ಟು ದುಡ್ಡಾಗಿದ್ದರೂ ಸರಿ ತೆಗೆದುಕೊಂಡುಬಿಡುತ್ತೇನೆ. ಈಗ ಈ ಮ್ಯೂಸಿಕ್ ಸ್ಟುಡಿಯೋವನ್ನೇ ತೆಗೆದುಕೊಳ್ಳಿ, ಒಬ್ಬ ಸಾಮಾನ್ಯ ಸಂಗೀತನಿರ್ದೇಶಕನಿಗೆ ಇದನ್ನು ಮಾಡುವುದು ಅಸಾಧ್ಯ. ನಾನು ಇಂದು ದುಡ್ಡು ಸಂಪಾದಿಸಿರುವುದರಿಂದ ಹೆಚ್ಚು ವಿಶ್ವಾಸವನ್ನು ಸಂಪಾದಿಸಿದ್ದೇನೆ. ಆದ್ದರಿಂದ ಇದನ್ನು ಮಾಡುವುದು ಸಾಧ್ಯವಾಯಿತು, ಹಲವು ಸ್ನೇಹಿತರ ಬಳಿ ದುಡ್ಡುತೆಗೆದುಕೊಂಡು ಕಟ್ಟಿಸಿರುವ ಸ್ಟುಡಿಯೋ ಇದು. ಒಂದಲ್ಲ ಒಂದು ದಿನ ದೀಕ್ಷಿತ್ ದುಡ್ಡುಕೊಡುತ್ತಾನೆ ಎನ್ನುವ ನಂಬಿಕೆ ಅವರದ್ದು; ಅದನ್ನು ಗಳಿಸಿಕೊಂಡಿದ್ದೇನೆ ಎನ್ನುವ ನೆಮ್ಮದಿ ನನ್ನದು.

 

ದೇಶ-ವಿದೇಶದಲ್ಲಿ ನಿರಂತರ ಕಾರ್ಯಕ್ರಮಗಳ ನಡುವೆ, ಹಾಡುಗಳ ಆಯ್ಕೆ, ಸಂಗೀತ ನಿರ್ದೇಶನ, ಅಭ್ಯಾಸ ಎಲ್ಲವನ್ನೂ ಹೇಗೆ ನಿಭಾಯಿಸುತ್ತೀರಿ?

ಮ್ಯಾನೇಜ್ ಮಾಡ್ತಾ ಇಲ್ಲ, ಡ್ಯಾಮೇಜ್ ಜಾಸ್ತಿಯಾಗುತ್ತಿದೆ. ತುಂಬಾ ಕಷ್ಟ, ಆರೋಗ್ಯ ನಿದ್ದೆ ಊಟ ತಿಂಡಿ ಎಲ್ಲವೂ ಹದತಪ್ಪಿಹೋಗಿದೆ. ವೈಯಕ್ತಿಕ ಕಾಳಜಿ ಎನ್ನುವುದು ನಿಂತನೀರಾಗಿದೆ ಎನ್ನಬಹುದು. ಈವತ್ತು ಮಲಗಿದ್ದು ಬೆಳಗ್ಗೆ 5.30ಕ್ಕೆ, ಎದ್ದಿದ್ದು 8ಗಂಟೆಗೆ! ಹೆಚ್ಚಿನ ದಿನಗಳೂ ಹೀಗೆಯೇ. ನಿದ್ದೆಯ ಸಮಯ ಇಷ್ಟಕ್ಕೇ ಮೀಸಲಾಗಿರುತ್ತದೆ. ರಾತ್ರಿ ಹತ್ತುಗಂಟೆಗೆ ಮಲಗಲೇಬೇಕು ಆರುಗಂಟೆಗೆ ಏಳಬೇಕು ಎಂದುಕೊಳ್ಳುತ್ತೇನೆ. ಆದರೆ ಅದು ಪ್ರತಿದಿನ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಎರಡು ಮೂರುಜನ ಯುವಸಂಗೀತಗಾರರನ್ನು ಸೇರಿಸಿಕೊಂಡಿದ್ದೇನೆ. ಅವರು ಬೆಳಗ್ಗೆ ಬೇಗ ಬಂದುಬಿಡುತ್ತಾರೆ, ಅದಕ್ಕಾಗಿಯಾದರೂ ನನ್ನ ವೇಳಾಪಟ್ಟಿ ನಿಗದಿಯಂತೇ ಸಾಗಲಿ ಎಂದು. ಆಹಾರದ ವಿಷಯದಲ್ಲೂ ಸ್ವಲ್ಪ ಕಠಿಣ ಅಭ್ಯಾಸವನ್ನು ಪಾಲಿಸುತ್ತಿದ್ದೇನೆ.

ಮೂಲ: ‘ಉತ್ಥಾನ’ದ ಓದುಗರಿಗಾಗಿ ಈಚೆಗೆ ರಘು ದೀಕ್ಷಿತ್ ಅವರ ಸಂದರ್ಶನವನ್ನು ನಡೆಸಲಾಯಿತು. ಪತ್ರಿಕೆಯ ಸಂಪಾದಕ ಶ್ರೀ ಕಾಕುಂಜೆ ಕೇಶವ ಭಟ್ಟ ಮತ್ತು ಸುಮನಾ ಮುಳ್ಳುಂಜ ಅವರೊಂದಿಗೆ ರಘು ದೀಕ್ಷಿತ್ ಅವರು ನಡೆಸಿದ ಮಾತುಕತೆಯ ಪೂರ್ಣಪಾಠ ಇದು.

ಮುಂದುವರಿಯುವುದು.

 

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!