ಅಂಕಣ ಪ್ರಚಲಿತ

ರೋಹಿಂಗ್ಯಾ ಮುಸಲ್ಮಾನರನ್ನು ಭಾರತದಿಂದ ಏಕೆ ಹೊರದಬ್ಬಬೇಕು?

ಮಯನ್ಮಾರ್ ಆಗ್ನೇಯ ಏಷ್ಯಾದಲ್ಲಿರುವ ಭಾರತದ ನೆರೆ ರಾಷ್ಟ್ರ. ಆಂಗ್ಲ ಭಾಷೆಯಲ್ಲಿ ಮಯನ್ಮಾರ್, ಜಪಾನೀ ಪ್ರಭಾವದಿಂದ ಬರ್ಮಾ ಮತ್ತು ದೇಶೀಯವಾಗಿ ಬಾಮಾ ಎಂದು ಕರೆಯಲಾಗುವ ಮಯನ್ಮಾರ್ ಬೌದ್ಧಧರ್ಮೀಯರ ದೇಶ. ಇಲ್ಲಿ 87% ಜನ ಬೌದ್ಧ ಮತವನ್ನು ಅನುಸರಿಸಿದರೆ, 7% ಜನ ಕ್ರೈಸ್ತ ಮತವನ್ನೂ, 5% ಜನ ಇಸ್ಲಾಂ ಮತವನ್ನೂ, 2% ಜನ ಹಿಂದೂ ಮತವನ್ನೂ ಅನುಸರಿಸುತ್ತಾರೆ. ಅಧಿಕ ಸಂಖ್ಯೆಯಲ್ಲಿರುವ ಬಾಮಾರ್ (ಮಯಮ್ನಾರ್) ಸಮುದಾಯದ ಹೆಸರನ್ನೇ ಹೊಂದಿರುವ ಮಯನ್ಮಾರ್ ದೇಶದಲ್ಲಿ ಸುಮಾರು 5 ಕೋಟಿ ಜನರಿದ್ದು, ಕಡಿಮೆ ಜನಸಾಂದ್ರತೆಯನ್ನು ಹೊಂದಿದೆ. ಹಿಂದೂಗಳು ಕಡಿಮೆ ಇದ್ದರೂ ಹಿಂದೂಧರ್ಮದ ಪ್ರಭಾವ ಮಯನ್ಮಾರ್ ಸಂಸ್ಕೃತಿಯಲ್ಲಿ ಗಾಢವಾಗಿ ಅಂತರ್ಗತವಾಗಿದೆ. ಮಯನ್ಮಾರ್ ದೇಶದಲ್ಲಿ 135 ಬೌದ್ಧ ಜಾತಿಗಳಿದ್ದು, 105ಕ್ಕೂ ಹೆಚ್ಚು ಭಾಷಾ ಪ್ರಬೇಧಗಳನ್ನು ಬಳಸುವ ಸಮುದಾಯಗಳಿವೆ. ಕ್ರೈಸ್ತ ಮತ್ತು ಮುಸ್ಲಿಂ ಮತಾಂತರಗಳಿಂದ ಹಲವಾರು ಜಾತಿಸಮುದಾಯಗಳು ಒಡೆದಿದ್ದು ಒಳಪ್ರಭೇದಗಳ ಅಸ್ತಿತ್ವಕ್ಕೆ ಕಾರಣವಾಗಿದೆ.

ಹತ್ತನೇ ಶತಮಾನದಿಂದ ಆಡಳಿತ ನಡೆಸುತ್ತಿದ್ದ ಮಯನ್ಮಾರ್ ಬಾಗನ್ (ಅಥವಾ ಬಾಮರ್) ಸಾಮ್ರಾಜ್ಯವು 13ನೇ ಶತಮಾನದಲ್ಲಿ ಮುಂಗೋಲರ ದಾಳಿಗೆ ತುತ್ತಾಯಿತು. ಮುಂಗೋಲರ ಸೈನ್ಯದಲ್ಲಿ ಮುಸ್ಲಿಮರು ಇದ್ದರೂ ಅವರಲ್ಲಿ ಹಲವರ ರೀತಿನೀತಿಗಳು ಅರಬ್ ಮುಸ್ಲಿಮರ ಜೀವನ ಶೈಲಿಗಿಂತ ತೀರಾ ಭಿನ್ನವಾಗಿದ್ದವು. ಮಯನ್ಮಾರ್’ನಲ್ಲಿ ಮುಸ್ಲಿಮರು 7ನೇ ಶತಮಾನದಲ್ಲಿ ಅರಬ್ ವ್ಯಾಪಾರಸ್ಥರಾಗಿ ಪ್ರವೇಶಿಸಿದರು. ಚೀನಾದೇಶದ ಮೂಲಕವಾಗಿಯೂ ಸಹ ಮುಸ್ಲಿಮರು ಮಂದಲೆಯಲ್ಲಿ ಬಂದಿಳಿದರು. ಉದಾರ ಮನಸ್ಕನಾಗಿದ್ದ ಮಂದಲೆಯ ರಾಜ ಮಿಂದನ್ ಮುಸ್ಲಿಮರಿಗೆ ಮಸೀದಿಕಟ್ಟಿಕೊಳ್ಳಲು ಅನುಮತಿ ನೀಡಿದ. ಸುಮಾರು ಇದೇಸಮಯದಲ್ಲಿ ಪರ್ಶಿಯಾದ ಮುಸ್ಲಿಮರು ಉತ್ತರ ಮಯನ್ಮಾರ್ ಅನ್ನು ಪ್ರವೇಶಿಸಿದರು. ಹದಿನೈದನೇ ಶತಮಾನದಲ್ಲಿ ನಡೆದ ಯುದ್ದದಲ್ಲಿ ಸೋತ ರಾಜ ನರಮೈಕ್ಲ ಬಂಗಾಲದ ಮುಸ್ಲಿಂರಾಜನ ಸಹಕಾರದಿಂದ ಪುನಃರಾಜ್ಯವನ್ನು ಪಡೆದ. ಆದರೆ, ಸಹಾಯಕ್ಕಾಗಿ ಬಂದ ಮುಸ್ಲಿಂ ಸೈನ್ಯ ಇಲ್ಲೇ ಸ್ಥಿರವಾಗಿ ನಿಂತಿತು. ಕ್ವಾಲಾಉಂಗ್ ಎಂಬಲ್ಲಿ ಸಂಡಿಖಾನ್ ಮಸೀದಿಯ ನಿರ್ಮಾಣ ಈ ಕಾಲದಲ್ಲಾಯಿತು. ಅಷ್ಟೇ ಅಲ್ಲದೆ ಈ ಪ್ರದೇಶಬಂಗಾಲದ ಸಾಮಂತ ರಾಜ್ಯವಾಗಬೇಕಾಯಿತು. ಒಂದು ನೂರು ವರ್ಷಗಳ ಕಾಲ ಅರಕನ್ ರಾಜರು ಮುಸ್ಲಿಂ ಬಿರುದುಗಳನ್ನು ಧರಿಸಿ ರಾಜ್ಯವಾಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಹದಿನೆಂಟನೇ ಶತಮಾನದವರೆಗೆ ಅರಕಾನ್ ಪ್ರದೇಶವು ಮುಸ್ಲಿಮರ ಆಡಳಿತದ ಛಾಯೆಯಲ್ಲೇ ಇತ್ತು. ಹೀಗೆ ಪ್ರಸ್ತುತ ಮಯನ್ಮಾರ್ ಮುಸ್ಲಿಮರ ಪೂರ್ವಜರು ಅರಬ್, ಪರ್ಷಿಯಾ, ಟರ್ಕಿ, ಮೂರರು, ಭಾರತ ಮತ್ತು ಚೀನಾದಿಂದ ಬಂದವರಾಗಿದ್ದರು.

ಹತ್ತೊಂಬತ್ತನೇ ಶತಮಾನದಲ್ಲಿ ಮೊದಲ ಆಂಗ್ಲೋಭರ್ಮಾ ಯುದ್ಧದಲ್ಲಿ ಬಾಮರ್ ಆಡಳಿತವು ಕೊನೆಗೊಂಡು ರಾಕೈನ್ ಪ್ರಾಂತವು ಬ್ರಿಟಿಷರ ವಶವಾಯಿತು. ಇಪ್ಪತ್ತನೇ ಶತಮಾನದ ಮಧ್ಯದವರೆಗೆ ಬ್ರಿಟಿಷ್ ಆಡಳಿತ ಮುಂದುವರೆಯಿತು. ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ಭಾರತೀಯರನ್ನು ಮಯನ್ಮಾರ್’ಗೆ ಸ್ಥಳಾಂತರಿಸಿದರು. ಬ್ರಿಟಿಷರ ಆಡಳಿತದಿಂದ ಬೇಸತ್ತಿದ್ದ ಮಯನ್ಮಾರ್ನ ನಾಗರೀಕರು ವಸಾಹತುಶಾಹಿಗಳ ಪ್ರತಿನಿಧಿಗಳಂತಿದ್ದ ಭಾರತೀಯರ ಬಗ್ಗೆಯೂ ಅಸಮಧಾನ ತಾಳಿದರು. ಮಯನ್ಮಾರ್ ಸ್ವಾತಂತತ್ಯ ಚಳುವಳಿಯು ಬ್ರಿಟಿಷರು ಮತ್ತು ಭಾರತೀಯರ ವಿರುದ್ದ ನಿರ್ದೇಶಿತವಾಗಿತ್ತು. 1937ರಲ್ಲಿ ಬ್ರಿಟಿಷರುಮಯನ್ಮಾರ್ವನ್ನು ಭಾರತದಿಂದ ಪ್ರತ್ಯೇಕಗೊಳಿಸಿದರು. ಎರಡನೇ ವಿಶ್ವ ಸಂಗ್ರಾಮದಲ್ಲಿ ಜಪಾನ್ ದೇಶವು ಮಯನ್ಮಾರ್ವನ್ನು ಆಕ್ರಮಿಸಿತು. ಮಯನ್ಮಾರ್’ನಿಂದ ಭಾರತದ ಮೇಲೂ ಜಪಾನೀಯರು ದಾಳಿ ನಡೆಸುವ ಸಾಧ್ಯತೆ ಇತ್ತು. ಆಗ ಬ್ರಿಟಿಷರು ಒಂದು ಗೆರಿಲ್ಲಾ ಸೈನ್ಯವನ್ನು ಭಾರತ ಬರ್ಮಾದ 800 ಮೈಲಿ ಗಡಿಯನ್ನು ರಕ್ಷಿಸಲು ತಯಾರುಮಾಡಿದರು. ಗೆರಿಲ್ಲಾ ಸೈನ್ಯದ ಭಾಗಶಃ ಸಹಾಯದಿಂದ ಸುಮಾರು 1945ರ ವೇಳೆಗೆ ಬ್ರಿಟಿಷರು ತಮ್ಮ ನಿಯಂತ್ರಣವನ್ನು ಪುನಃ ಸಾಧಿಸಲು ಶಕ್ತರಾದರು. ಈ ಸೈನ್ಯದಲ್ಲಿ ಮುಸ್ಲಿಮರ ಪ್ರಾಬಲ್ಯವಿದ್ದು ಅವರು ಭಾರತ ಮತ್ತು ಮಯನ್ಮಾರ್ ಮೂಲಗಳಿಂದ ಬಂದಿದ್ದರು. ಈ ಸೈನ್ಯವು ಅರಕಾನ್ ಪ್ರದೇಶದ ಬೌದ್ಧಸಮುದಾಯಕ್ಕೆ ಕಿರುಕುಳ ನೀಡುತ್ತಿದ್ದ ಸ್ಥಳೀಯ ಮುಸ್ಲಿಮರ ಜೊತೆ ಕೈ ಜೋಡಿಸಿದರು. ಮಯನ್ಮಾರ್ದ ಬೌದ್ಧರು ಭಾರತೀಯರು ಮತ್ತು ಮುಸ್ಲಿಮರನ್ನು ಸಂಶಯದಿಂದ ನೋಡುವ ಮೂಲಕಾರಣಗಳು ಇತಿಹಾಸದ ಪುಟಗಳಲ್ಲಿವೆ. ಈ ಕಾರಣಗಳ ಹಿಂದೆ ಬ್ರಿಟಿಷರ ಕುತಂತ್ರ ರಾಜಕಾರಣವಿದೆ.

ಈಗ ಮಯನ್ಮಾರ್’ನಲ್ಲಿ ಪಶ್ಚಿಮದ ರಾಖೈನ್ ಪ್ರಾಂತದಲ್ಲಿ ರೋಹಿಂಗ್ಯಾ ಮುಸ್ಲಿಮರೂ, ಸರ್ಕಾರದಿಂದ ಮಾನ್ಯತೆ ಪಡೆದ ಕಮೇನ್ ಮುಸ್ಲಿಮರೂ, ಚೀನಾ ಮೂಲದ ಪಾಂತೇ ಮುಸ್ಲಿಮರೂ, ಮಲಯಾ ಮೂಲದಮತ್ತು ಅಂತರ್ಜಾತಿ ವಿವಾಹದಿಂದ ಜನಿಸಿದ ಜೆರ್ಬಾಡಿ ಮುಸ್ಲಿಮರೂ ಇದ್ದಾರೆ. ಪ್ರಪಂಚದ ಎಲ್ಲೆಡೆಯಂತೆ ಮಯನ್ಮಾರ್’ನಲ್ಲಿ ಕೂಡಾ ಮುಸ್ಲಿಮರು ಇತರರೊಡನೆ ತಿಕ್ಕಾಟಗಳನ್ನು ಹಿಂದಿನಿಂದಲೂ ನಡೆಸಿದ್ದಾರೆ. ಸುಮಾರು ಹದಿನಾರನೇ ಶತಮಾನದಲ್ಲೇ, ಮುಸ್ಲಿಮರು ಒಂದಿಬ್ಬರು ಮಯನ್ಮಾರ್ನ ರಾಜರ ಅವಕೃಪೆಗೆ ಪಾತ್ರರಾಗಿ ಶಿಕ್ಷೆಗೆ ಒಳಗಾಗಿದ್ದರು. ಬ್ರಿಟಿಷ್ ಆಡಳಿತದ ಪ್ರಚೋದನೆಗೆ ಒಳಗಾದ ಮುಸ್ಲಿಮರು ಬೌದ್ಧರಜೊತೆ ತಿಕ್ಕಾಟವನ್ನು ಹೆಚ್ಚಿಸಿದರು. 1938ರಲ್ಲಿ ಬೌದ್ಧ ಮುಸ್ಲಿಂ ಕೋಮು ಗಲಭೆಗಳು ನಡೆದವು. ಬೌದ್ಧರ ಕ್ರೋಧಕ್ಕೆ 113 ಮಸೀದಿಗಳು ಆಹುತಿಯಾದವು. ನಂತರವೂ ಸಹ ಬ್ರಿಟಿಷರು ಮಯನ್ಮಾರ್’ನಲ್ಲಿ ಮುಸ್ಲಿಂ ತುಷ್ಟೀಕರಣವನ್ನು ಮುಂದುವರೆಸಿದರು. ಸ್ವತಂತ್ರ್ಯಪ್ರಾಪ್ತಿಯ ಸಂದರ್ಭದಲ್ಲಿ ಬರ್ಮಾ ಮುಸ್ಲಿಂ ಕಾಂಗ್ರೆಸ್ ಸ್ಥಾಪನೆ ಮಾಡಲಾಯಿತು. ಬ್ರಿಟಿಷರ ಅನುಪಸ್ಥಿತಿಯಲ್ಲಿ ರಾಜಕೀಯವಾಗಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವಪ್ರಯತ್ನವನ್ನು ಮಯನ್ಮಾರ್ದ ಮುಸ್ಲಿಮರು ಮಾಡಿದರು.

ಇಂದು ಭಾರತದ ಮುಸ್ಲಿಂ ಲೀಗಿನ ಉದಯ ಮತ್ತು ರಾಜಕೀಯದ ಪ್ರತಿರೂಪವೇ ಆಗಿತ್ತು.

ಸ್ವಾತಂತ್ರ್ಯಾ ನಂತರದಲ್ಲಿ ಮಯನ್ಮಾರ್ ಸರಕಾರವು 1955ರಲ್ಲಿ ಬೌದ್ಧ ಪಂಥವನ್ನು ಅಧಿಕೃತ ಮತವನ್ನಾಗಿ ಸ್ವೀಕರಿಸಿತು. 1962ರ ಸೈನ್ಯ ಕ್ರಾಂತಿಯು ಮಯನ್ಮಾರ್’ನಲ್ಲಿ ಬೌದ್ಧಮತವನ್ನು ಉಳಿಸಿಕೊಳ್ಳುವ ಪ್ರಯತ್ನವೇ ಆಗಿತ್ತೆಂದು ವಿಶ್ಲೇಷಿಸಲಾಗುತ್ತದೆ. ಇದು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವು ಮಯನ್ಮಾರ್ನ ಮುಖ್ಯವಾಹಿನಿಗೆ ಸೇರುವುದರಲ್ಲಿ ವಿಫಲವಾಗುತ್ತಿರುವ ಸೂಚನೆಗಳಿಗೆ ಪ್ರತಿಕ್ರಿಯೆಯೂ ಆಗಿದ್ದಿರಬಹುದು. ಭಾರತ, ಚೀನಾ ದೇಶಗಳಲ್ಲಿ ಬೌದ್ಧ ಅವನತಿಯ ಅನುಭವ ಇಂದಿನ ಬರ್ಮಾ ಆಡಳಿತದ/ಸಮಾಜದ ನಿಲುವುಗಳಲ್ಲಿ ವ್ಯಕ್ತವಾಗುತ್ತಿದೆ. ನಂತರದ ದಶಕಗಳಲ್ಲಿ ಆದ ಬೆಳವಣಿಗೆಗಳು ಈ ನಿಲುವುಗಳಿಗೆ ಸಮರ್ಥನೆ ನೀಡಿರುವುದೂ ಸುಳ್ಳಲ್ಲ.

1997ರಲ್ಲಿ ಪುರುಷ ಮುಸ್ಲಿಮರು ಕೆಲವರು ಬೌದ್ಧ ಕನ್ಯೆಯ ಮಾನಭಂಗ ಪ್ರಯತ್ನ ಮಾಡಿದ ವರದಿ ಜನಜನಿತವಾಗಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಕ್ರುದ್ಧರಾದ ಸುಮಾರು 1500 ಬೌದ್ಧ ಭಿಕ್ಷುಗಳು ಮಂದಲೆಯಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿಂಸೆಗೆ ತಿರುಗಿ ಆಸ್ತಿಪಾಸ್ತಿಗಳ ಅಪಾರ ನಷ್ಟ ಉಂಟಾಯಿತು. 2001 ರಲ್ಲಿ ಸಿಟ್ವೆ ಮತ್ತು ತಾವಂಗೂ ಪ್ರದೇಶದಲ್ಲಿ ಸಣ್ಣ ವಯಸ್ಸಿನ ಮುಸ್ಲಿಮ್ ಯುವಕರು ಅಂಗಡಿಯೊಂದರಲ್ಲಿ ತಿನಿಸುಗಳನ್ನು ತಿಂದು ಹಣ ಕೊಡದೆ ಮಹಿಳೆಯೊಬ್ಬರನ್ನು ಸತಾಯಿಸಿದರು. ಆಗ ಪ್ರಾರಂಭವಾದ ಜಗಳದ ಮಧ್ಯೆ ಪ್ರವೇಶಿಸಿದ ಬೌದ್ಧ ಭಿಕ್ಷುವನ್ನು ಹತ್ಯೆ ಮಾಡಲಾಯಿತು. ಇದು ತೀವ್ರರೀತಿಯ ಕೋಮುಗಲಭೆಗಳಿಗೆ ಕಾರಣವಾಯಿತು. 2012 ರಲ್ಲಿ ಮತ್ತೊಮ್ಮೆ ಮೂವರು ಪುರುಷ ಮುಸ್ಲಿಮರು ಆರಕಾನ್ ಪ್ರದೇಶದ ಸ್ತೀಯ ಮಾನಭಂಗ ಮಾಡಿ ಕೊಂದರೆಂಬ ಸುದ್ಧಿ ತಿಳಿಯುತ್ತಿದ್ದಂತೆ ಜನರು ಬಸ್ ಒಂದನ್ನುತಡೆದು ಅದರಲ್ಲಿದ್ದ ಹತ್ತು ಮುಸ್ಲಿಮರನ್ನು ಹಲ್ಲೆ ಮಾಡಿ ಕೊಂದರು. ಕೆಲದಿನಗಳ ನಂತರ ಶುಕ್ರವಾರದ ಪ್ರಾರ್ಥನೆಯ ನಂತರ ಬೀದಿಗಿಳಿದ ರೋಹಿಂಗ್ಯಾ ಮುಸ್ಲಿಮರು ಮೌಂಗ್ದ ಪಟ್ಟಣವನ್ನು ಲೂಟಿ ಮಾಡಿದರು.ಅರಕಾನ್ ನಿವಾಸಿಗಳನ್ನು ಹತ್ಯೆ ಮಾಡಿದರು. ನಂತರ ನಡೆದ ಹತ್ಯಾಕಾಂಡದಲ್ಲಿ 77 ಜನ ಸತ್ತರು. ನೂರಾರು ಜನ ಗಾಯಗೊಂಡರು. 5000 ಸಾವಿರ ಮನೆಗಳನ್ನು ಸುಡಲಾಯಿತು. 61000 ಸಾವಿರ ಜನನಿರ್ವಸಿತರಾದರು. ಇದೇ ರೀತಿಯ ಘಟನೆ 2014ರಲ್ಲೂ ಸಹ ಪುನರಾವರ್ತನೆ ಆಯಿತು. ಈ ಬಾರಿ ಟೀ ಅಂಗಡಿ ನಡೆಸುತ್ತಿದ್ದ ಮುಸ್ಲಿಮನೊಬ್ಬ ಬೌದ್ಧ ಸ್ತ್ರೀಯ ಮಾನಹರಣ ನಡೆಸಿದ ಘಟನೆ ಗಲಭೆಗೆ ಕಾರಣವಾಗಿತ್ತು. ರೋಹಿಂಗ್ಯಾ ಮುಸ್ಲಿಮರು ಹಲವಾರು ದಶಕಗಳಿಂದ ಶಸ್ತ್ರ ಸಜ್ಜಿತರಾಗಿ ಸರ್ಕಾರಿ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ಪ್ರಕ್ರಿಯೆ 1947ರಿಂದ ನಡೆಯುತ್ತಿದ್ದು, 1970 ರಿಂದ ಹೆಚ್ಚಾಗಿದೆ. 2016 ರಿಂದ ರೋಹಿಂಗ್ಯಾ ಬಂಡುಕೋರರ ದಾಳಿಗಳ ತೀವ್ರತೆ ಹೆಚ್ಚಾಗಿದೆ. 2016ರ ದಾಳಿಯಲ್ಲಿ 134 ಜನ ಸತ್ತಿದ್ದರೆ, 2017 ರ ದಾಳಿಗಳಲ್ಲಿ 71 ಜನ ಸತ್ತಿದ್ದಾರೆ.

ಮಯನ್ಮಾರ್’ನಲ್ಲಿ ಎರಡು ರೀತಿಯ ಘಟನೆಗಳು ನಡೆಯುತ್ತಿವೆ. ಒಂದು ಸಾಮಾಜಿಕವಾಗಿ ರೋಹಿಂಗ್ಯಾ ಮುಸ್ಲಿಮರು ಬೌದ್ಧ ಸಮುದಾಯದ ಮೇಲೆ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಅತಿಕ್ರಮಣ ನಡೆಸುತ್ತಿದ್ದಾರೆ. ಮುಸ್ಲಿಮರು ಹೆಚ್ಚು ಭೂಮಿಯನ್ನು ಖರೀದಿ ಮಾಡುತ್ತಿದ್ದು ಅವರ ಬೆಂಬಲಕ್ಕೆ ಹಲವು ಆರ್ಥಿಕ ಮೂಲಗಳಿವೆ ಎನ್ನಲಾಗುತ್ತಿದೆ. ಸಂಪತ್ತಿನ ಮೂಲಕ ಬೌದ್ಧ ಹೆಂಗಸರನ್ನು ಆಕರ್ಷಿಸಿ ವಿವಾಹವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವಾರು ಬಾರಿ ಬೌದ್ಧ ಹೆಂಗಸರನ್ನು ಅತಿಕ್ರಮಿಸಿ ನಂತರ ಮದುವೆಯಾಗಲಾಗುತ್ತದೆ.

ವಿವಾಹವಾದ ಮೇಲೆ ಕಡ್ಡಾಯವಾಗಿ ಬೌದ್ಧ ಸ್ತ್ರೀಯರನ್ನು ಮತಾಂತರ ಮಾಡಲಾಗುತ್ತಿದೆ. ಎರಡನೆಯದಾಗಿ, ಜಾಗತಿಕ ಜಿಹಾದಿ ಸಂಘಟನೆಗಳು ಮಯನ್ಮಾರ್’ನ ಬೇರೂರಿವೆ. ಇತ್ತೀಚಿನ ದಾಳಿಗಳನ್ನು ಹೊಸದಾಗಿ ರಚಿತವಾದ ಅರೆಕಾಲಿಕ ರೋಹಿಂಗ್ಯ ರಕ್ಷಣಾ ಸೇನೆ ಎಂಬ ಜಿಹಾದಿ ಸಂಘಟನೆ ನಡೆಸಿದೆ. ಜನಸಾಮಾನ್ಯ ರೋಹಿಂಗ್ಯಾರು ಈ ಸಂಘಟನೆಗೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎನ್ನಲಾಗಿದೆ. ಇದು ಬಹುಸಂಖ್ಯಾತ ಬೌದ್ಧ ಸಮುದಾಯದಲ್ಲಿ ತೀವ್ರ ಸಂಚನಲ ಉಂಟುಮಾಡಿದೆ. ಸರಕಾರದ ಸುರಕ್ಷಾ ಕ್ರಮಗಳಿಗೆ ಸಮಾಜದ ಬೆಂಬಲ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಇದರ ಫಲವಾಗಿ ಅಧಿಕ ಸಾವು ನೋವು ಮತ್ತು ಗುಳೆ ಹೋಗುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರುವ ವರದಿಗಳು ಹೆಚ್ಚುತ್ತಿವೆ.

-ಶ್ರೀಧರನ್ ಎಂ.ಕೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!