Featured ಅಂಕಣ ಪ್ರಚಲಿತ

ಪ್ರಕಾಶ್ ರೈ ಪ್ರಶಸ್ತಿ ವಾಪಸ್ ಕೊಟ್ರೆ ಎದೆ ಬಡಿದುಕೊಂಡು ಅಳೋರ್ಯಾರು?

ಡಾ. ಎಂ.ಎಂ. ಕಲ್ಬುರ್ಗಿಯವರ ಹತ್ಯೆಯಾದಾಗ ಪ್ರಶಸ್ತಿ ವಾಪಸಿ ಎಂಬ ನಾಟಕ ಮಾಡಿ ಇದ್ದಬದ್ದ ಪ್ರಶಸ್ತಿ ಫಲಕಗಳನ್ನೆಲ್ಲ ವಾಪಸ್ ಕೊಟ್ಟ ಕನ್ನಡದ ಸಾಹಿತಿಗಳಿಗೆ ಈಗ ಸಂಕಟದ ಕಾಲ. ಗೌರಿ ಲಂಕೇಶ್ ಹತ್ಯೆಯಾಗಿದೆ. ಇನ್ನೊಂದು ರೌಂಡ್ ಪ್ರಶಸ್ತಿ ವಾಪಸಿ ಮಾಡಬೇಕು. ಆದರೆ ಕಲ್ಬುರ್ಗಿ ಹತ್ಯೆ ಸಮಯದಲ್ಲೇ, ಶೋಕೇಸ್‍ನಲ್ಲಿಟ್ಟಿದ್ದ ಎಲ್ಲ ಫಲಕಗಳನ್ನು ವಾಪಸ್ ಕೊಟ್ಟಿರುವುದರಿಂದ ಈಗ ಹೊಸದಾಗಿ ವಾಪಸ್ ಕೊಡಲು ಪ್ರಶಸ್ತಿ ಫಲಕಗಳು ಯಾವುದೂ ಇಲ್ಲ. ಇಂಥ ಸಂದರ್ಭದಲ್ಲಿ ನಿಮ್ಮ ಸಹಾಯಕ್ಕೆ ನಾನಿದ್ದೇನೆ, ನನ್ನ ಹತ್ತಿರ ಐದು ರಾಷ್ಟ್ರಪ್ರಶಸ್ತಿ ಇದೆ, ಅವುಗಳನ್ನು ವಾಪಸ್ ಕೊಟ್ಟು ಅವಾರ್ಡ್ ವಾಪಸಿ ಬ್ರಿಗೇಡ್‍ನ ಮಾನ ಕಾಪಾಡುತ್ತೇನೆ ಎಂಬಂತೆ ಆಪದ್ಬಾಂಧವನಾಗಿ ಬಂದಿದ್ದಾರಂತೆ ಖಳನಟ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್.

ಪ್ರಕಾಶ್ ರೈ ಪ್ರಶಸ್ತಿ ವಾಪಸ್ ಮಾಡುತ್ತೇನೆಂದ ಸುದ್ದಿ ಓಡಾಡುತ್ತಿದೆ. ಬಹುಶಃ ತನ್ನ ಅವಾರ್ಡುಗಳನ್ನು ವಾಪಸ್ ಮಾಡ್ತೇನೆ ಎಂದೊಡನೆ ಈ ದೇಶದಲ್ಲಿ ಅಲ್ಲೋಲಕಲ್ಲೋಲವಾಗುತ್ತೆ, ಜನ ನಾ ಮುಂದು ತಾ ಮುಂದು ಎನ್ನುತ್ತ ಓಡೋಡಿ ಬಂದು ತನ್ನ ಕಾಲು ಹಿಡಿದು ಬೇಡುತ್ತಾರೆ ಎಂದು ಪ್ರಕಾಶ್ ರೈ ಹಗಲುಗನಸು ಕಾಣುತ್ತಿರಬಹುದು. ಆದರೆ ಇನ್ನೊಂದು ಕಡೆ, ಪ್ರಶಸ್ತಿ ವಾಪಸ್ ಮಾಡುವಷ್ಟು ಮೂರ್ಖನಲ್ಲ ನಾನು ಎಂದೂ ಹೇಳಿಕೆ ಕೊಟ್ಟಿದ್ದಾರಂತೆ. ಅಂದರೆ ಇದುವರೆಗೆ ಪ್ರಶಸ್ತಿ ವಾಪಸ್ ಮಾಡಿರುವವರು ಮೂರ್ಖರು ಎಂದು ಇವರು ಹೇಳಿದಂತಾಗಲಿಲ್ಲವೇ? ಆ ಮೂಲಕ ಇಡೀ ಗಂಜಿಪಡೆಯನ್ನೇ ಇವರು ಮೂರ್ಖರ ಸಾಲಿಗೆ ಸೇರಿಸಿ ಹೋಲ್‍ಸೇಲ್ ಆಗಿ ಎಲ್ಲರನ್ನೂ ಅಪಮರ್ಯಾದೆ ಮಾಡಿದಂತೆ ಆಗಲಿಲ್ಲವೇ? ಅಥವಾ ಹೀಗೂ ಯೋಚಿಸಬಹುದು: ಮೂರ್ಖ  ಹೌದು, ಆದರೆ ಪ್ರಶಸ್ತಿ ವಾಪಸು ಮಾಡುವಷ್ಟು ಮೂರ್ಖ ಅಲ್ಲ – ಎನ್ನುವ ಅರ್ಥವೂ ಅವರ ಮಾತಿನಿಂದ ಬರುತ್ತದೆ. ಗೌರಿಯ ಹತ್ಯೆಯಾದ ಮೇಲೆ ರಾಜ್ಯ ಸರಕಾರದ ವೈಫಲ್ಯ ಅನ್ನುವ ಬದಲು ನೇರವಾಗಿ ಮೋದಿಯ ಮೇಲೆ ಟೀಕೆಯ ಮಳೆ ಸುರಿಸಿದಾಗಲೇ ಪ್ರಕಾಶ್ ರೈ ಅವರ ಮಾನಸಿಕ ಸ್ಥಿತಿ ಏನು ಎಂಬುದು ಕನ್ನಡಿಗರಿಗೆ ಅರ್ಥವಾಗಿತ್ತು. ಹಿಂದೊಮ್ಮೆ ಕಾವೇರಿ ನದಿ ನೀರಿನ ಹಂಚಿಕೆಯ ವಿವಾದದ ಸಂದರ್ಭದಲ್ಲಿ “ನಾನೊಬ್ಬ ನಟ. ನನಗೆ ನಟನೆಗೆ ಸಂಬಂಧಿಸಿದ ಪ್ರಶ್ನೆಯನ್ನಷ್ಟೇ ಕೇಳಿ” ಎಂದು ಸ್ಟುಡಿಯೋದಲ್ಲಿ ರಂಪ ರಾಮಾಯಣ ಎಬ್ಬಿಸಿ ತನ್ನ ದರ್ಪ ಪ್ರದರ್ಶಿಸಿ ಎದ್ದು ಹೋಗಿದ್ದ ಈ ಮಹಾನ್ ನಟನಿಗೆ ಈಗ ಗೌರಿಯ ವಿಷಯದಲ್ಲಿ ತಾನು ನಟನೆ ಬಿಟ್ಟು ಉಳಿದ ವಿಷಯ ಮಾತಾಡುತ್ತಿದ್ದೇನೆ ಎಂಬುದು ಅರಿವಿಗೆ ಬರಲಿಲ್ಲವೇ? ಅಥವಾ ರಾಜ್ಯ ಸರಕಾರದ ಕಡೆಯಿಂದ ಏನಾದರೊಂದು ಪ್ರಶಸ್ತಿ ಬರಲಿ ಎನ್ನುವ ಹಪಹಪಿ ಅವರನ್ನು ಮೋದಿಯ ವಿರುದ್ಧ ಮಾತಾಡುವಂತೆ ಪ್ರೇರೇಪಿಸುತ್ತಿದೆಯೇ?

ಪ್ರಕಾಶ್ ರೈ ಅವರು ಒಂದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲಿ. “ಗೌರಿಯ ಹತ್ಯೆಯನ್ನು ಸಂಭ್ರಮಿಸಿದವರು ಯಾರು ಎಂದು ಗೊತ್ತಿದೆ”, “ಗೌರಿಯ ಕೊಲೆಗಾರರು ಯಾರು ಅನ್ನೋದು ಗೊತ್ತಿದೆ” ಎಂದೆಲ್ಲ ಕರೆಂಟ್ ಶಾಕ್ ಹೊಡೆಸಿಕೊಂಡ ಕಪ್ಪೆಯಂತೆ ವಟಗುಟ್ಟುವ ಬದಲು ಇವರು ತನಗೆ ಏನೇನು ಗೊತ್ತಿದೆಯೋ ಅದೆಲ್ಲವನ್ನೂ ಸ್ಪಷ್ಟವಾಗಿ ಎಸ್‍ಐಟಿ ಎಂಬ ತನಿಖಾ ದಳದ ಎದುರು ಇಡಲಿ. ಗೌರಿಯನ್ನು ಕೊಂದವರು ಯಾರು ಎಂಬುದು ಗೊತ್ತಿದ್ದರೆ ಅದನ್ನು ನೇರವಾಗಿ ಸರಕಾರಕ್ಕೆ ತಿಳಿಸಿ ಹತ್ತು ಲಕ್ಷ ರುಪಾಯಿಯ ಬಹುಮಾನ ಪಡೆಯಲಿ. ಅದು ಬಿಟ್ಟು “ಮೋದಿ ನನಗಿಂತ ದೊಡ್ಡ ನಟ. ನನ್ನ ಐದು ಪ್ರಶಸ್ತಿಗಳನ್ನೂ ಅವರಿಗೇ ಕೊಡಬೇಕು” ಎಂದೋ “ಗೌರಿಯ ಹತ್ಯೆಯ ವಿಷಯದಲ್ಲಿ ಪ್ರಧಾನಿ ಮೋದಿ ನಡುವೆ ಬಂದು ಮಾತಾಡಬೇಕು” ಎಂದೋ ತಲೆಬುಡ ಇಲ್ಲದ ಹರಿಕತೆ ಹರಿಯಬಿಟ್ಟರೆ ಇವರ ಮಾತುಗಳನ್ನು ಪ್ರಸಾದ ಎಂದು ಸ್ವೀಕರಿಸುವಷ್ಟು ದಡ್ಡರೇನಲ್ಲ ಕನ್ನಡಿಗರು. ಗೌರಿಯ ಹತ್ಯೆಯಾದಾಗ ಪ್ರಕಾಶ್ ರೈ “ನಾವೆಲ್ಲರೂ ಲಂಕೇಶ್ ಮಕ್ಕಳು” ಎಂಬ ಮಾತಾಡಿದ್ದರು. ಗೌರಿ ಮತ್ತು ಪ್ರಕಾಶ್ ರೈ ಇಬ್ಬರ ಬುದ್ಧಿಮಟ್ಟವೂ ಒಂದೇ ರೀತಿ ಇದ್ದದ್ದನ್ನು ನೋಡಿದರೆ ಇವರು ಲಂಕೇಶ್ ಮಗ ಇದ್ದರೂ ಇರಬಹುದೇನೋ ಅನ್ನಿಸುತ್ತದೆ.

ಯಾವುದೇ ಹತ್ಯೆ, ಗಲಾಟೆ ಆದಾಗ ಗಂಜಿಪಡೆ ಎದ್ದು ನಿಲ್ಲುವುದು ಹೊಸದೇನಲ್ಲ. ಆ ಹತ್ಯೆ ಅಥವಾ ಗಲಾಟೆಯಿಂದ ತಮಗೆ ರಾಜಕೀಯ ಲಾಭ ಇದೆ ಎಂದು ಗೊತ್ತಾದ ತಕ್ಷಣ ಇವರು ಮುನಿಸಿಪಾಲಿಟಿ ತೊಟ್ಟಿಗೆ ಮುತ್ತಿಗೆ ಹಾಕಿದ ಬೀದಿನಾಯಿಗಳಂತೆ ಒಟ್ಟು ಸೇರುತ್ತಾರೆ. ಕೂಡಲೇ ಆ ಪ್ರಕರಣದ ಹೊಣೆಯನ್ನು ಮೋದಿಯ ತಲೆಗೆ ಹೇಗೆ ಕಟ್ಟುವುದು ಎಂದು ತುರ್ತು ಸಭೆ ನಡೆಯುತ್ತದೆ. ನಡೆದಿರುವ ಪ್ರಕರಣದ ಎಲ್ಲಾ ಜವಾಬ್ದಾರಿಯನ್ನೂ ಮೋದಿ ತಲೆಗೆ ಕಟ್ಟಿದರೆ ಅಲ್ಲಿಗೆ ಇವರ ಅರ್ಧಕ್ಕರ್ಧ ಕೆಲಸ ಮುಗಿದಂತೆ. ಆಮೇಲೆ ಇದ್ದೇ ಇದೆ ಪತ್ರಿಕೆಗಳ ಮುಂದೆ, ಟಿವಿ ಮಾಧ್ಯಮದ ಮುಂದೆ ಅಲವತ್ತುಕೊಳ್ಳುವುದು, ಗೋಳಾಡುವುದು, ಹಣೆ ಹೊಡೆದುಕೊಂಡು ಬೊಬ್ಬಿರಿಯುವುದು. ಇವರ ಅರಚಾಟ ಕಿರುಚಾಟಗಳು ಯಾವ ರೇಂಜಿಗೆ ಇರುತ್ತವೆಂದರೆ ಒಂದೆರಡು ದಿನದಲ್ಲೇ ವಿಷಯ ಬಿಬಿಸಿ, ನ್ಯೂಯಾರ್ಕ್ ಟೈಂಸ್‍ವರೆಗೆ ಹೋಗುತ್ತದೆ. ಭಾರತದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆಯನ್ನು ಅಂತಾರಾಷ್ಟ್ರೀಯ ಗಂಜಿಪಡೆಯೂ ಕೇಳತೊಡಗುತ್ತದೆ. ದೇಶದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲು ಸರ್ವಪ್ರಯತ್ನಗಳನ್ನೂ ನಡೆಸಲಾಗುತ್ತದೆ.

ಈ ಗಂಜಿಪಡೆಯ “ಓರಾಟ”ಗಳು ಅದೆಷ್ಟೊಂದು ಸೆಲೆಕ್ಟಿವ್ ನೋಡಿ. 2013ರಿಂದ 17ರವರೆಗೆ 20ಕ್ಕೂ ಹೆಚ್ಚು ಪತ್ರಕರ್ತರು ಈ ದೇಶದಲ್ಲಿ ಹತ್ಯೆಯಾಗಿದ್ದಾರೆ. ಐಬಿಎನ್‍ನ ರಾಜೇಶ್ ವರ್ಮ, ದೇಶಬಂಧುವಿನ ಸಾಯಿ ರೆಡ್ಡಿ, ಆಜ್ ಪತ್ರಿಕೆಯ ರಾಕೇಶ್ ಶರ್ಮ, ಆಂಧ್ರಪ್ರಭಾದ ಎಮ್.ವಿ.ಎನ್. ಶಂಕರ್, ದೈನಿಕ್ ಜಾಗರಣ್‍ನ ಮಿಥಿಲೇಶ್ ಪಾಂಡೆ, ಆಜ್ ತಕ್‍ನ ಅಕ್ಷಯ್ ಸಿಂಗ್, ಸಮಾಚಾರ್‍ನ ಜಗೇಂದ್ರ ಸಿಂಗ್, ತಾಜಾ ಟಿವಿಯ ಇಂದ್ರದೇವ್ ಯಾದವ್… ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತದೆ. ಈ ಯಾರ ಕೊಲೆಗಳೂ ಸುದ್ದಿಯಾಗಲಿಲ್ಲ ಯಾಕೆಂದರೆ ಇವರ್ಯಾರೂ ಎಡಪಂಥೀಯರಾಗಿರಲಿಲ್ಲ! ಯಾರೂ ಮೋದಿಯನ್ನು ವಾಚಾಮಗೋಚರ ಬಯ್ಯುವ ಗಂಜಿಪಡೆಯ ಗಿರಾಕಿಯಾಗಿರಲಿಲ್ಲ! ಬಿಜೆಪಿಯನ್ನು ಅನಗತ್ಯವಾಗಿ ಟೀಕಿಸುವ, ಕಾಂಗ್ರೆಸ್ ಪಕ್ಷವನ್ನು ಇಂದ್ರ ಚಂದ್ರ ಎಂದು ಆಕಾಶಕ್ಕೇರಿಸಿ ಕೂರಿಸುವ ಕೆಲಸವನ್ನು ಈ ಪತ್ರಕರ್ತರು ಮಾಡುತ್ತಿರಲಿಲ್ಲ. ಪತ್ರಿಕಾಧರ್ಮವನ್ನು ಪಾಲಿಸುತ್ತಿದ್ದರು ಎಂಬ ಕಾರಣಕ್ಕೇ ಈ ಯಾರ ಹತ್ಯೆಯೂ ದೇಶದ ಯಾವುದೇ ಪತ್ರಿಕೆ ಅಥವಾ ಟಿವಿಗೆ ಬ್ರೇಕಿಂಗ್ ನ್ಯೂಸ್ ಆಗಲಿಲ್ಲ. ಆಯಾ ಪತ್ರಿಕೆ/ಚಾನೆಲ್‍ನವರು ತಮ್ಮ ಪತ್ರಕರ್ತರಿಗಾಗಿ ಸಿಂಗಲ್ ಕಾಲಮ್ ವ್ಯಯಿಸಿದರು ಎಂಬುದನ್ನು ಬಿಟ್ಟರೆ ಈ ಯಾವ ಪತ್ರಕರ್ತರ ಸಾವೂ ಯಾರಿಗೂ ಎರಡು ಹನಿ ಕಣ್ಣೀರು ಹಾಕಲು ಯೋಗ್ಯ ಅನ್ನಿಸಲಿಲ್ಲ. ಆದರೆ ಮೋದಿಯನ್ನು ಏಕವಚನದಲ್ಲಿ ಬಾಯಿಗೆ ಬಂದಂತೆ ಬಯ್ಯುತ್ತಿದ್ದ, ಹಿಂದೂ ಧರ್ಮಕ್ಕೆ ಅಪ್ಪ ಅಮ್ಮ ಇದ್ದಾರೇನ್ರೀ ಎಂದು ಕೇಳುತ್ತ ಸಾರ್ವಜನಿಕರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತಿದ್ದ, ಅಮಿತ್ ಶಾರ ಬೋಳುತಲೆಯನ್ನು ಕಿಚಾಯಿಸಿಕೊಂಡು ನಗುತ್ತಿದ್ದ… ಒಟ್ಟಾರೆ ಯಾವುದೇ ಆರೋಗ್ಯವಂತ ಮನುಷ್ಯನ ಚಹರೆ ಇಲ್ಲದೇ ಇದ್ದ ಗೌರಿ ಸತ್ತದ್ದು ಮಾತ್ರ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತದೆ ಎಂದರೆ ಗಂಜಿಪಡೆ ಅದಕ್ಕಾಗಿ ಹಗಲಿರುಳು ಎಷ್ಟು ದುಡಿದಿರಬಹುದು ಎಂದು ಯೋಚಿಸಿ. ಯಾರ ಸಾವಿನಿಂದ ಯಾರು ಹೆಚ್ಚು ಲಾಭ ಎತ್ತುತ್ತಾರೋ ಅವರೇ ಆ ಹತ್ಯೆಯ ಸಂಚು ರೂಪಿಸಿರುವ ಸಾಧ್ಯತೆಯೂ ಇದೆ ಎಂಬ ಕೋನದಲ್ಲಿ ಯೋಚಿಸುವುದಾದರೆ ಗೌರಿಯ ಹತ್ಯೆ ಎಲ್ಲರಿಗಿಂತ ಹೆಚ್ಚು ಗಂಜಿಪಡೆಗೇ ಅಗತ್ಯವಿತ್ತು ಎನ್ನಬಹುದು. ಕರ್ನಾಟಕದಲ್ಲಿ ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ, ಸೋಲಿನ ದವಡೆಯಿಂದ ಪಾರಾಗಲು ಕಾಂಗ್ರೆಸ್ ಪಕ್ಷಕ್ಕೆ ತುರ್ತಾಗಿ ಒಂದು ಪ್ರಗತಿಪರ ಶವ ಬೀಳಬೇಕಾಗಿತ್ತು. ಪ್ರಶಸ್ತಿ ವಾಪಸಿಯಂಥ ಇನ್ನೊಂದು ಡ್ರಾಮಾ ಶುರು ಹಚ್ಚಿಕೊಳ್ಳಲು ಪ್ರಗತಿಪರ ರಣಹದ್ದುಗಳಿಗೂ ತಮ್ಮದೇ ಬ್ರಿಗೇಡಿನ ಒಂದು ಹದ್ದಿನ ಹೆಣ ಬೀಳಬೇಕಾಗಿತ್ತು. ಹಾಗಿದ್ದ ಮೇಲೆ ಗೌರಿಯ ಸಾವಿಗೆ ಇವರಲ್ಲೇ ಯಾರಾದರೊಬ್ಬರು ಯಾಕೆ ಕಾರಣವಾಗಿರಬಾರದು? ಗೌರಿಯ ಹತ್ಯೆಯಾದೊಡನೆ ಕೆಲವರು ಕಚ್ಚೆ-ಕೋಮಣ ಕಟ್ಟಿಕೊಳ್ಳುವುದಕ್ಕೂ ಪುರುಸೊತ್ತಿಲ್ಲದಂತೆ ಭಾರೀ ಚಟುವಟಿಕೆಯಿಂದ ಓಡಾಡುತ್ತಿರುವುದರ ರಹಸ್ಯ ಏನು?

ಪ್ರಕಾಶ್ ರೈ ತನ್ನ ಪ್ರಶಸ್ತಿಗಳನ್ನು ವಾಪಸ್ ಕೊಡುವುದಾದರೆ ಧಾರಾಳವಾಗಿ ಕೊಡಲಿ. ಇಲ್ಲವೇ ಕಸದ ಬುಟ್ಟಿಗೆ ಎಸೆಯಲಿ. ಇವರ ಪ್ರಶಸ್ತಿಗಳನ್ನು ವಾಪಸು ತೆಗೆದುಕೊಂಡು ಯಾರಿಗೆ ಏನಾಗಬೇಕಾಗಿದೆ? “ಮೋದಿ ನನಗಿಂತ ದೊಡ್ಡ ನಟ. ನನ್ನ ಪ್ರಶಸ್ತಿಗಳನ್ನು ಅವರಿಗೇ ಕೊಟ್ಟು ಬಿಡಬೇಕು ಅನ್ನಿಸುತ್ತಿದೆ” ಎಂಬಂಥ ಕ್ಷುಲ್ಲಕ ಹೇಳಿಕೆ ಕೊಡುವ ಮುನ್ನ ಪ್ರಕಾಶ್ ರೈ ತಾನು ಯಾರು, ತನ್ನ ಸ್ಥಾನ ಏನು, ಮೋದಿಯವರ ಎದುರು ತನ್ನ ಮಟ್ಟ ಯಾವುದು ಎಂಬುದನ್ನು ಅಂದಾಜಿಸಿಕೊಳ್ಳಬೇಕಿದೆ. ನಾಲ್ಕು ದಿನದ ಗಂಜಿ ಸಂಪಾದಿಸುವುದಕ್ಕಾಗಿ ಮೋದಿಯ ಹೆಸರನ್ನು ಹೀಗೆಲ್ಲ ಎಳೆದಾಡಬೇಕಾದ ಅಗತ್ಯವಿರಲಿಲ್ಲ. ಮೋದಿಯನ್ನು, ಕೇಂದ್ರ ಸರಕಾರವನ್ನು ಈ ಮಹಾನ್ ನಟ ಎಳೆದಾಡಿರುವುದರಿಂದ ಸದ್ಯಕ್ಕಂತೂ ರಾಜ್ಯ ಸರಕಾರದ ಗಮನಕ್ಕೆ ಬಿದ್ದಿದ್ದಾರೆ. ಶೀಘ್ರದಲ್ಲಿ ರಾಜ್ಯ ಸರಕಾರದ ಕಡೆಯಿಂದ ಒಂದು ಪ್ರಶಸ್ತಿ ಈ ನಟನಿಗೆ ಘೋಷಣೆಯಾಗಬಹುದು. ಪ್ರಶಸ್ತಿ ಪಡೆಯಲು ಇಷ್ಟೆಲ್ಲ ಸರ್ಕಸ್ ಮಾಡುವ ಅಗತ್ಯ ಇರುವವರು ಮೋದಿಯ ಘನತೆಯ ಬಗ್ಗೆ ಮಾತಾಡುವುದು ನಿಜಕ್ಕೂ ಹಾಸ್ಯಾಸ್ಪದ. ಪ್ರಕಾಶ್ ರೈ ಈಗ ಸಿನೆಮಾದಲ್ಲಲ್ಲದೆ ನಿಜ ಜೀವನದಲ್ಲಿ ಮಾಡುತ್ತಿರುವ ನಟನೆಗೆ ಸಾಧ್ಯವಾದರೆ ಒಂದು ರಾಷ್ಟ್ರಪ್ರಶಸ್ತಿಯನ್ನು ಮೋದಿ ಸರಕಾರವೇ ಘೋಷಿಸಲಿ.

 

ಕೊಸರು: ಕಲ್ಬುರ್ಗಿ ಹತ್ಯೆಯ ಸಂದರ್ಭದಲ್ಲಿ ಪ್ರಶಸ್ತಿ ವಾಪಸ್ ಮಾಡ್ತೇನೆ ಅಂತ ಹೇಳಿ ಫಲಕವನ್ನಷ್ಟೇ ವಾಪಸ್ ಕೊಟ್ಟು ದುಡ್ಡು ತನ್ನ ಬಳಿಯೇ ಉಳಿಸಿಕೊಂಡ ಸಾಹಿತಿ ಚಂದ್ರಶೇಖರ ಪಾಟೀಲರು ಈಗ ಗೌರಿ ಹತ್ಯೆಯನ್ನು ವಿರೋಧಿಸಿ, ಕಳೆದ ಸಲ ತನ್ನ ಬಳಿ ಉಳಿಸಿಕೊಂಡಿದ್ದ ಪ್ರಶಸ್ತಿ ಮೊತ್ತದ ಚೆಕ್ ಅನ್ನು ಕೂಡ ವಾಪಸ್ ಮಾಡ್ತಾರೆ ಅಂತ ನಾವು ಕೇಳ್ಪಟ್ಟಿದ್ದು ಕೇವಲ ಸುಳ್ಸುದ್ದೀನಾ?

 

 

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!