Featured ಪ್ರಚಲಿತ

ತನಿಖಾದಳದ ಕಲೆಗಾರನೂ ಕುಂಕುಮ ಶೋಭಿತ ಕೊಲೆಗಾರನೂ

ದಿನ ಹೋದಂತೆ ಎಸ್‍ಐಟಿ ಹಾಸ್ಯಾಸ್ಪದವಾಗುತ್ತಿದೆ. ಇವರು ನಿಜಕ್ಕೂ ತನಿಖೆ ಮಾಡುತ್ತಿದ್ದಾರಾ ಅಥವಾ ತನಿಖೆಯ ಹೆಸರಲ್ಲಿ ಅನಗತ್ಯ ಕಾಲಹರಣ ಮಾಡುತ್ತಿದ್ದಾರಾ ಎಂಬ ಅನುಮಾನಗಳು ರಾಜ್ಯದ ಜನರಲ್ಲಿ ಹೆಚ್ಚುತ್ತಿವೆ. ಇದಕ್ಕೆ ಇರುವ ಕಾರಣಗಳು:

(1) ತನಿಖೆಯ ಪ್ರಾರಂಭದಲ್ಲಿ ಎಸ್‍ಐಟಿ “ಗೌರಿಯ ಕೊಲೆಯಾದಾಗ ಸ್ಥಳದಲ್ಲಿ ಯಾವ ಪ್ರತ್ಯಕ್ಷದರ್ಶಿಯೂ ಇರಲಿಲ್ಲ” ಎಂದು ಹೇಳಿತ್ತು. ಸುದ್ದಿವಾಹಿನಿಗಳಿಗೆ ಸಂದರ್ಶನ / ಬೈಟ್ ಕೊಟ್ಟ ಸ್ಥಳೀಯರು, ನೆರೆಹೊರೆಯವರು ಕೂಡ ಹೇಳಿದ್ದು ಅದೇ ಮಾತನ್ನು. ಮೊದಲ ಬಾರಿಗೆ ಗುಂಡಿನ ಶಬ್ದ ಬಂದಾಗ ಅವರಿಗೆ ಅಕ್ಕಪಕ್ಕದಲ್ಲಿ ಕೊಲೆ ನಡೆದಿರಬಹುದು ಎಂದು ಗೊತ್ತಾಗಿರಲಿಲ್ಲ. ಗಣೇಶ ವಿಸರ್ಜನೆಯ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿದ್ದುದರಿಂದ ಅಂಥಾದ್ದೇ ಕಾರ್ಯಕ್ರಮದಲ್ಲಿ ಪಟಾಕಿ ಹೊಡೆದಿರಬಹುದು ಎಂದು ಅವರು ಭಾವಿಸಿದ್ದರು. ಘಟನೆ ನಡೆದ ಹಲವು ನಿಮಿಷಗಳಾದ ಮೇಲಷ್ಟೇ ಜನ ಗೌರಿಯ ಹತ್ಯೆಯಾದ ವಿಷಯ ತಿಳಿದುಕೊಂಡರು. ಅಂದರೆ, ಆಕೆಯ ಹತ್ಯೆಯ ಸಂದರ್ಭದಲ್ಲಿ ಅದನ್ನು ಅತ್ಯಂತ ನಿಷ್ಕಷ್ಟವಾಗಿ ನೋಡಿದವರು ಅಲ್ಲಿ ಯಾರೂ ಇರಲಿಲ್ಲ.

(2) ಗೌರಿಯವರ ಮನೆಯ ಸಿಸಿಟಿವಿಯಲ್ಲಿ ಕಂಡುಬಂದ ದೃಶ್ಯ ಸ್ಷಷ್ಟವಿರಲಿಲ್ಲ. ಇಡೀ ವಾತಾವರಣ ಮಸುಕು ಮಸುಕಾಗಿತ್ತು. ಕತ್ತಲೆ ಬೇರೆ. ಗೌರಿಯನ್ನು ಕೊಂದವರ ಗುಂಪಿನಲ್ಲಿ ಮೂರು ಮಂದಿ ಇದ್ದರೋ ಇಬ್ಬರೇ ಇದ್ದರೋ ಎಂಬುದು ಕೂಡ ಪೊಲೀಸರಿಗೆ ಸ್ಪಷ್ಟವಾಗಿರಲಿಲ್ಲ.

(3) ಗೌರಿಯ ಹಂತಕರು ಹೆಲ್ಮೆಟ್ ಧರಿಸಿದ್ದರು ಎಂದು ಪೊಲೀಸರು ಹೇಳಿಕೆ ಕೊಟ್ಟಿದ್ದರು. ಹೆಲ್ಮೆಟ್ ಧರಿಸಿದ್ದುದರಿಂದ ಅವರ ಮುಖದ ಚಹರೆ ಪತ್ತೆಹಚ್ಚಲು ಆಗಲಿಲ್ಲ. ಗುರುತು ಸಿಗಬಾರದೆಂಬ ಕಾರಣಕ್ಕೇ ಅವರು ಹೆಲ್ಮೆಟ್ ಧರಿಸಿದ್ದರೆಂಬುದೂ ಸ್ಪಷ್ಟ.

ಕೊಲೆಯ ಪ್ರತ್ಯಕ್ಷದರ್ಶಿಗಳು ಇರಲಿಲ್ಲ. ಕತ್ತಲೆಯಾದ್ದರಿಂದ ಮತ್ತು ಸಿಸಿಟಿವಿ ಕಳಪೆ ಗುಣಮಟ್ಟದ್ದಾದ್ದರಿಂದ ಹಂತಕರ ಚಿತ್ರಣ ಅದರಲ್ಲಿ ಮೂಡಿರಲಿಲ್ಲ. ಮೂಡಿದ್ದರೂ ಅವರು ಹೆಲ್ಮೆಟ್ ಧರಿಸಿದ್ದರಿಂದ ಅವರ ಮುಖದ ಗುರುತು ಹಿಡಿಯಲು ಆಗಲಿಲ್ಲ. – ಈ ಮೂರೂ ಅಂಶಗಳನ್ನು ಒಗ್ಗೂಡಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೇನೆಂದರೆ ಯಾವ ಕೋನದಿಂದಲೂ ಪೊಲೀಸರಿಗಾಗಲೀ ತನಿಖಾ ದಳದವರಿಗಾಗಲೀ ಗೌರಿ ಹಂತಕರ ಮುಖದ ಗುರುತು ಹಿಡಿಯುವುದು ಸಾಧ್ಯವಾಗುವಂತಿರಲಿಲ್ಲ. ಆದರೆ ಇವರು ಅದ್ಯಾವುದೋ ಮಾಯದಿಂದ ಮೂರು ಚಿತ್ರಗಳನ್ನು ಬರೆದು ಸಾರ್ವಜನಿಕರಿಗೆ ಬಿಡುಗಡೆಗೊಳಿಸಿದರು! ಹಂತಕರು ಹೀಗೆ ಇದ್ದಾರೆಂದು ಇವರಿಗೆ ಹೇಳಿದವರು ಯಾರು?

(4) ಎಸ್‍ಐಟಿ ತನಿಖಾಧಿಕಾರಿಗಳ ಪ್ರಕಾರ ಕೊಲೆ ಮಾಡಲು ಬಂದಿದ್ದವರು ಇಬ್ಬರು. ಆದರೆ ಈ ಇಬ್ಬರು ವ್ಯಕ್ತಿಗಳ ಮೂರು ಚಿತ್ರಗಳನ್ನು ಅದೇ ತನಿಖಾ ದಳ ಬಿಡುಗಡೆಗೊಳಿಸಿದೆ! ಈ ಚಿತ್ರಗಳಲ್ಲಿ ಕಣ್ಣು, ಮೂಗು, ಕಿವಿ, ಹುಬ್ಬು ಇತ್ಯಾದಿಗಳೆಲ್ಲ ಒಬ್ಬ ಚಿತ್ರಕಾರ ಬರೆದಂತೆ ಇವೆಯೇ ಹೊರತು ಇವು ಸಹಜತೆಗೆ ದೂರವಾಗಿವೆ.

(5) ಈ ಮೂರು ಚಿತ್ರಗಳಲ್ಲಿ ಒಂದು ಕುಡುಕು ಮುಖದಂತಿದೆ. ಕೊಲೆಗಾರ ಕುಡಿದು ಬಂದಿದ್ದ ಎಂಬುದನ್ನು ಇವರು ಸಾಧಿಸಲು ಹೊರಟಿದ್ದಾರೆಯೇ? ಅದೂ ಅಲ್ಲದೆ, ಆತನ ಮುಖ ನಲವತ್ತು ವರ್ಷ ಕಳೆದವರಂತೆ ಇದೆ. ಒಂದೆಡೆ ಕೊಲೆಗಾರರೆಲ್ಲರೂ ಇಪ್ಪತ್ತೈದು-ಮೂವತ್ತರ ಆಸುಪಾಸಿನವರು ಎಂದು ಹೇಳುತ್ತ ಇನ್ನೊಂದು ಕಡೆ ಹೀಗೆ ನಡುವಯಸ್ಸಿನ ವ್ಯಕ್ತಿಯ ಮುಖ ತೋರಿಸುವುದು ಹಾಸ್ಯಾಸ್ಪದ ಅಲ್ಲವೆ?

(6) ಕೊಲೆಗಾರರು ಹೆಲ್ಮೆಟ್ ಧರಿಸಿ ಬಂದಿದ್ದರು ಎಂದ ಮೇಲೆ ಅವರಲ್ಲಿ ಒಬ್ಬ ಹಣೆಗೆ ಕುಂಕುಮ ಇಟ್ಟಿದ್ದ, ಇನ್ನೊಬ್ಬ ಕಿವಿಯಲ್ಲಿ ವಾಲೆ ಹಾಕಿದ್ದ ಎಂಬುದನ್ನು ಗುರುತಿಸಿದ ಮಹಾನ್ ಬುದ್ಧಿವಂತರು ಯಾರು? ಈ ಮೂವರೂ ಹೆಲ್ಮೆಟ್ ಹಾಕಿ ಬಂದಿರುವಾಗ ಅವರ ಕೇಶ ವಿನ್ಯಾಸ ಹೀಗೆಯೇ ಇದೆ ಎಂದು ಯಾರು ಹೇಳಿದವರು?

(7) ಶಂಕಿತರ ಚಿತ್ರ ಹೇಗೆ ತಯಾರಿಸಬೇಕು ಎಂಬುದಕ್ಕೆ ಪೊಲೀಸ್ ಇಲಾಖೆಯಲ್ಲಿ ಸ್ಪಷ್ಟ ನಿರ್ದೇಶನಗಳಿವೆ. ಕೊಲೆ ನಡೆದ ಸ್ಥಳದಲ್ಲಿ ಓಡಾಡಿಕೊಂಡಿದ್ದ ವ್ಯಕ್ತಿಗಳನ್ನು ಮಾತಾಡಿಸಿ ಅವರಿಂದ ವಿಷಯ ಸಂಗ್ರಹಿಸಿ ಚಿತ್ರಗಳನ್ನು ಬರೆಯಬೇಕು. ಹೆಚ್ಚಾಗಿ ಇಬ್ಬರು ಚಿತ್ರ ಬಿಡಿಸುವ ವ್ಯಕ್ತಿಗಳು ಒಬ್ಬನೇ ವ್ಯಕ್ತಿಯ ವಿವರಣೆಗಳನ್ನು ಕೇಳಿ ಅದಕ್ಕೆ ತಕ್ಕುದಾದ ಚಿತ್ರ ಬರೆಯುತ್ತಾರೆ. ಹಾಗೆ ಬರೆಯುವಾಗ ಅವರಿಬ್ಬರೂ ಮಾತಾಡಿಕೊಳ್ಳುವುದಿಲ್ಲ. ಕಣ್ಣು, ಕಿವಿ, ಮೂಗು, ಗಲ್ಲ, ಗಡ್ಡ-ಮೀಸೆ, ಹುಬ್ಬು, ತುಟಿ, ಕತ್ತು ಹೀಗೆ ಎಲ್ಲ ಅವಯವಗಳನ್ನೂ ಬೇರೆ ಬೇರೆಯಾಗಿ ಬಿಡಿಸಿ ನಂತರ ಅಂಟಿಸಿ ಚಿತ್ರ ಪೂರ್ತಿ ಮಾಡುತ್ತಾರೆ. ಆದರೆ ಗೌರಿಯ ಹಂತಕರ ಚಿತ್ರಗಳಲ್ಲಿ ಹಾಗಾದದ್ದು ಕಾಣುವುದಿಲ್ಲ. ಯಾವುದೋ ನುರಿತ ಚಿತ್ರಕಲಾವಿದ ಒಂದೆರಡು ಚಿತ್ರಗಳನ್ನು ಎದುರಿಟ್ಟುಕೊಂಡು ಕ್ಯಾನ್ವಾಸ್ ಮೇಲೆ ಪೋರ್ಟ್ರೇಟ್ ಬಿಡಿಸಿದಂತಿದೆ.

(8) ಈ ಮೂರು ಚಿತ್ರಗಳ ಪೈಕಿ ಒಂದು ಕರ್ನಾಟಕದ ನಕ್ಸಲ್ ನಾಯಕ ವಿಕ್ರಮ್ ಗೌಡನನ್ನು ಬಹುವಾಗಿ ಹೋಲುವಂತಿದೆ. ಅದು ಕೂಡ, ಆತನ ಒಂದೆರಡು ಚಿತ್ರಗಳನ್ನು ಎದುರಿಗೆ ಇಟ್ಟುಕೊಂಡು ಅದನ್ನು ನೋಡುನೋಡುತ್ತ ಮರುಸೃಷ್ಟಿಸಿದ ಚಿತ್ರದಂತೆ ಅದು ಕಾಣುತ್ತದೆ. ಕತ್ತಲೆಯಲ್ಲಿ ಒಂದು ಗಳಿಗೆ ಮಿಂಚಿ ಮರೆಯಾದ ಹಂತಕ ಇಷ್ಟೊಂದು ಸ್ಪಷ್ಟವಾಗಿ ಸ್ಥಳೀಯರಿಗೆ ಕಂಡಿದ್ದು ಹೇಗೆ? ಯಾವಾಗ?

(9) ಸಾವು ನಡೆದಾಗ ಆ ಕ್ಷಣಕ್ಕೆ ಸ್ಥಳದಲ್ಲಿ ಇದ್ದವರ ಪ್ರಥಮ ಮಾಹಿತಿ ಕಲೆ ಹಾಕಿ ಚಿತ್ರ ಬರೆಯುವುದು ಕ್ರಮ. ಆದರೆ, ಇಲ್ಲಿ, ಘಟನಾ ಸ್ಥಳದಲ್ಲಿ ಇದ್ದೇ ಇರಲಿಲ್ಲವಾದ ಗೌರಿಯ ತಾಯಿಯನ್ನೂ ಕೇಳಿ ಆಕೆಯ ವಿವರಣೆಯ ಆಧಾರದಲ್ಲಿ ಚಿತ್ರ ಬಿಡಿಸಲಾಗಿದೆಯಂತೆ! ಆಕೆ ಹಂತಕನ ಹಣೆಯಲ್ಲಿ ಕುಂಕುಮ ಇತ್ತು ಎಂದು ಹೇಳಿದ್ದಕ್ಕೆ ತನಿಖಾಧಿಕಾರಿಗಳು ಆತನ ಹಣೆಯಲ್ಲಿ ಕುಂಕುಮವಿಟ್ಟಿದ್ದಾರಂತೆ. ಚಿತ್ರ ಬಿಡುಗಡೆ ಮಾಡಿದ ದಿನ, “ವ್ಯಕ್ತಿಯ ಚಹರೆಯ ಬಗ್ಗೆ ನಾವು ಹೆಚ್ಚು ಗಮನ ಹರಿಸುತ್ತೇವೆಯೇ ವಿನಾ ಆತನ ತಿಲಕ, ಕಿವಿಯೋಲೆ, ಸರ ಮುಂತಾದ ಅಂಶಗಳನ್ನಲ್ಲ. ಯಾಕೆಂದರೆ ಕೊಲೆಗಾರರು ಹೆಚ್ಚಾಗಿ ತನಿಖೆಯ ದಿಕ್ಕು ತಪ್ಪಿಸಲು ಇಂಥ ವಸ್ತುಗಳನ್ನು ಉದ್ದೇಶಪೂರ್ವಕ ಹಾಕಿ ಬರುವುದೂ ಇದೆ” ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಅದಾಗಿ ಮೂರನೇ ದಿನಕ್ಕೆ “ಗೌರಿಯ ತಾಯಿಯ ವಿವರಣೆಗಳಿಗೆ ತಕ್ಕಂತೆ ನಾವು ಕೊಲೆಗಾರನ ಹಣೆಗೆ ಕುಂಕುಮ ಇಟ್ಟಿದ್ದೇವೆ” ಎಂದು ತಿಪ್ಪೆ ಸಾರಿಸಿದ್ದಾರೆ.

ಒಟ್ಟಾರೆ ನೋಡುವುದಾದರೆ ಎಸ್‍ಐಟಿಯ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂಬುದು ಅತ್ಯಂತ ಸ್ಪಷ್ಟ. ಇವರಿಗೆ ಚುನಾವಣೆ ಮುಗಿಯುವವರೆಗೆ ತನಿಖೆ ಮುಗಿಯುವುದು ಬೇಕಾಗಿಲ್ಲ. ಹಾಗಂತ ಸುಮ್ಮನೆ ಕೂರುವಂತೆಯೂ ಇಲ್ಲವಲ್ಲ! ಹಾಗಾಗಿ ಇನ್ನೂ ನಾಲ್ಕೈದು ತಿಂಗಳು ಇವರು ಸಿಕ್ಕಸಿಕ್ಕವರ ವಿಚಾರಣೆ, ಹೇಳಿಕೆ ದಾಖಲಾತಿ ಎನ್ನುತ್ತ ಕಾಲ ತಳ್ಳುತ್ತಾರೆ ಎಂಬುದು ಮಾತ್ರ ಅತ್ಯಂತ ನಿಚ್ಚಳ. ಶಂಕಿತ ಹಂತಕರ ಚಿತ್ರಗಳ ಬಿಡುಗಡೆ ಕೂಡ ಈ ತಂತ್ರದ ಒಂದು ಭಾಗವಷ್ಟೇ. ಇನ್ನು ಮುಂದಿನ ದಿನಗಳಲ್ಲಿ, ಈ ಚಿತ್ರಕ್ಕೆ ಹೋಲುತ್ತಾರೆ ಎಂಬ ಕಾರಣಕ್ಕೆ ಒಂದಷ್ಟು ಜನಸಾಮಾನ್ಯರನ್ನು ಹಿಡಿದು ವಿಚಾರಣೆಗೊಳಪಡಿಸುವ ನಾಟಕ ನಡೆಯಲಿದೆ. ಹಾಗೆ ಒಂದು ಐವತ್ತೋ ಅರವತ್ತೋ ಮಂದಿಯನ್ನು ಹಿಡಿದು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳುವಷ್ಟರಲ್ಲಿ ಡಿಸೆಂಬರ್ ಮುಗಿಯುತ್ತದೆ. ಕರ್ನಾಟಕದಲ್ಲಿ ಸದ್ಯಕ್ಕೆ ಯಾವುದೇ ಕೊಲೆಯ ಆಯುಷ್ಯ ಎರಡು ತಿಂಗಳು ಅಷ್ಟೇ. ಅದಕ್ಕಿಂತ ಆಚೆಗೆ ಆ ಬಗ್ಗೆ ಯಾರೊಬ್ಬರೂ ಮಾತಾಡುವುದಿಲ್ಲ ಎಂಬುದು ಸ್ಪಷ್ಟ. ಶರತ್ ಮಡಿವಾಳ ಅವರ ಹತ್ಯೆ ಮಾಡಿದ  ಪ್ರಮುಖ ಇಬ್ಬರು ಹಂತಕರು ಇಂದೂ ಸಿಕ್ಕಿಲ್ಲ; ಸಿಕ್ಕವರನ್ನ ಸರಿಯಾಗಿ ವಿಚಾರಣೆ ಮಾಡಿ ಚಾರ್ಜ್’ಶೀಟ್ ಹಾಕುವ ಉಮೇದನ್ನು ಪೋಲೀಸರು ಇನ್ನೂ ತೋರಿಸುತ್ತಿಲ್ಲ.  ಆ ಬಗ್ಗೆ ಯಾರಾದರೂ ಮಾತಾಡುತ್ತಿದ್ದಾರೆಯೇ? ಗೌರಿಯ ಹತ್ಯೆಯ ಅಂತಿಮ ಬಿಂದು ಕೂಡ ಹಾಗೆಯೇ ಎಂಬುದು ಸರಕಾರಕ್ಕೆ ಬಹಳ ಸ್ಪಷ್ಟವಾಗಿ ಗೊತ್ತು. ಹಾಗಾಗಿ ಹತ್ಯೆಯಾದ ದಿನದಿಂದ ಮೂರ್ನಾಲ್ಕು ತಿಂಗಳ ಕಾಲ ತನಿಖೆ ಹೆಸರಲ್ಲಿ ಒಂದಷ್ಟು ಸಾವಿರ ಪುಟಗಳ ವರದಿಯನ್ನು ತಯಾರಿಸುವುದಷ್ಟೇ ಸದ್ಯದ ಸರಕಾರದ ಧ್ಯೇಯ. ಎಸ್‍ಐಟಿ ತಂಡದ ತನಿಖೆಯ ದಾರಿಯನ್ನು ಯಾರೊಬ್ಬರೂ ಪ್ರಶ್ನಿಸುತ್ತಿಲ್ಲ. ಗೌರಿಯ ತಮ್ಮ, ತಂಗಿ, ತಾಯಿ ಎಲ್ಲರೂ ಮೌನವಾಗಿದ್ದಾರೆ. ಅಥವಾ ಅವರನ್ನು ಮೌನವಾಗಿಸಲಾಗಿದೆ. ಆರ್ಥಿಕ ಮತ್ತು ರಾಜಕೀಯ ಲಾಭಗಳ ಎದುರು ಯಾರಿಗೂ ತಮ್ಮ ಸಂಬಂಧಿಕರ ಸಾವಿನ ದುಃಖ ದೊಡ್ಡದು ಎನ್ನಿಸುವುದಿಲ್ಲ. ಹಾಗಾಗಿ ಗೌರಿಯ ಹತ್ಯೆಯಾದ ಸಂದರ್ಭದಲ್ಲಿ ದೊಡ್ಡ ದೊಡ್ಡದಾಗಿ ಕೇಳಿಬರುತ್ತಿದ್ದ ಸಿಬಿಐ ತನಿಖೆಯ ಬೇಡಿಕೆ ಈಗ ನೆನೆಗುದಿಗೆ ಬಿದ್ದಿದೆ. ಗೌರಿಯ ಕೊಲೆಗಾರರನ್ನು ಹಿಡಿಯಲೇಬೇಕು ಎಂದು ಟೌನಾಲ್‍ನಲ್ಲಿ ಠಳಾಯಿಸುತ್ತ ಅಬ್ಬಿರಿದು ಬೊಬ್ಬಿರಿಯುತ್ತಿದ್ದ ಪ್ರಗತಿಪರ ಗಂಜಿಪಡೆ ಈಗ ಬಹುತೇಕ ಮೌನವಾಗಿದೆ. ಅಂದರೆ ಅದರರ್ಥ ಇವರೆಲ್ಲರಿಗೂ ಗೌರಿಯ ಕೊಲೆಗಾರರು ಯಾರು ಎಂಬುದು ಸ್ಪಷ್ಟವಾಗಿದೆ.

ಈ ಎಲ್ಲ ನಾಟಕಗಳನ್ನು ಇನ್ನೂ ನಾಲ್ಕೈದು ತಿಂಗಳು ನೋಡಬೇಕಲ್ಲ ಎಂಬುದು ನಾವು, ಕನ್ನಡಿಗರ ದುರ್ದೈವ, ಅಷ್ಟೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!