ಅಂಕಣ ಪ್ರಚಲಿತ

ಕೊರೋನಾಗೆ ರಾಮಬಾಣ – ಆರೋಗ್ಯ ಸೇತು !

ರಾವಣನನ್ನು ಸಂಹರಿಸಲು ಸಮುದ್ರವನ್ನು ದಾಟಬೇಕಿತ್ತು. ಅದಕ್ಕೆ ಉಪಾಯವೊಂದೇ –  ಸಮುದ್ರಕ್ಕೇ ಸೇತುವೆ ಕಟ್ಟುವುದು. ವಿಚಾರ ಮಾಡಿ, ಇದೇನು ಸಾಧ್ಯವಾದ ಕೆಲಸವೇ? ಆ ಕಾಲದಲ್ಲಿ ರಾಮ ಸೇತುವನ್ನು ಕಟ್ಟಲಾಯಿತು. ಸಮುದ್ರಕ್ಕೇ ಸೇತುವೆ ಕಟ್ಟಿದವರು ನಾವು! ನಮ್ಮಲ್ಲಿ ಅಸಾಧ್ಯ ಏನು ಎಂಬುದೇ ಗೊತ್ತಿಲ್ಲ. ಆಗಾಗ ಮತ್ತೆ ಮತ್ತೆ ರಾಮನಂತಹ ಮಹಾಪುರುಷರು ಬಂದು ದೂರ ಸರಿದ ನಮ್ಮನ್ನು ಒಟ್ಟಿಗೆ ತಂದು ಅಸಾಧ್ಯವಾಗದ ಕೆಲಸವನ್ನು ಮಾಡಿಸುತ್ತಾರೆ. ಕೊರೋನಾ ವಿರುದ್ಧದ ಹೋರಾಟವೂ ಇದೆ. ಇಡೀ ದೇಶವೇ ದೂರದೂರವಿದ್ದರೂ ಹೋರಾಟಕ್ಕೆ ಒಂದಾಗಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಕೊರೋನಾ ವಿರುದ್ಧದ ಬ್ರಹ್ಮಾಸ್ತ್ರ ಅಂದರೆ ಸೋಷಿಯಲ್ ಡಿಸ್ಟೆನ್ಸಿಂಗ್. ಇಡೀ ಜಗತ್ತು ಈ ಮಂತ್ರವನ್ನು ಜಪಿಸುತ್ತಿದೆ. ಸೋಷಿಯಲ್ ಡಿಸ್ಟೆನ್ಸ್ ನಲ್ಲಿ ಬಹುಮುಖ್ಯ ಭಾಗ ಅಂದರೆ ನಮ್ಮ ಜೊತೆಗೆ ನಮ್ಮ ಅಕ್ಕ ಪಕ್ಕದಲ್ಲಿರುವ ಜನರು ಹೇಗಿದ್ದಾರೆ ಎನ್ನುವುದು. ಸೋಂಕಿತರ ಹತ್ತಿರ ಹೋಗಬಾರದು ಅದು ಮುಖ್ಯ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿ ಕನಿಷ್ಠ ಆರು ಅಡಿ ದೂರವಾದರೂ ಇರಬೇಕು.
ಇವತ್ತು ಹೇಗಾಗಿದೆ ಅಂದರೆ ಅಗತ್ಯ ವಸ್ತುಗಳನ್ನು ತರಲು ಹೊರಗೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ ಅಲ್ಲಿ ನಮ್ಮ ಅಕ್ಕ ಪಕ್ಕದವರು ಕೋವಿಡ್ ವಿಷಯದಲ್ಲಿ ಅವರ ಸ್ಥಿತಿ ಹೇಗೆ ಎಂದು ಹೇಗೆ ಗೊತ್ತಾಗುತ್ತದೆ? ಕೆಲವು ಸೋಂಕಿತರನ್ನು ಗೃಹಬಂಧನದಲ್ಲಿ‌ ಇರಲು ಆದೇಶಿಸಲಾಗುತ್ತದೆ, ನಮ್ಮ ಸುತ್ತಮುತ್ತಲಿನ ಜಾಗದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುತ್ತದೆ ಇವೆಲ್ಲ ಗೊತ್ತಾಗುವುದು ಹೇಗೆ? ಒಬ್ಬ ಮನುಷ್ಯ ತನ್ನ ಸುತ್ತ ಯಾರೂ ಬರಬಾರದು ಎಂದು ಸೊಂಟಕ್ಕೆ ವೃತ್ತಾಕಾರದ ತಗಡನ್ನು ತಯಾರಿಸಿ ಅಂಟಿಸಿಕೊಂಡು ಹೊರಗಡೆ ಬಂದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಾಗಂತೂ ಮಾಡಲು ಸಾಧ್ಯವಿಲ್ಲ. ಸುತ್ತಲಿನ ಅಂಕೆ ಸಂಖ್ಯೆಗಳು ಬಾಯಲ್ಲಿ ನೆನಪಿರುವುದಿಲ್ಲ. ನಾವು ತಂತ್ರಜ್ಞಾನದ ಯುಗದ ತುದಿಯಲ್ಲಿದ್ದೇವೆ. ಎಲ್ಲವೂ ಡಿಜಿಟಲ್! ಲಕ್ಷಾಂತರ ಕೀಮಿ ದೂರದಲ್ಲಿಯ ಮಂಗಳದ ನೆಲದಲ್ಲಿ ಏನಾಗುತ್ತಿದೆ ಎಂದು ಗೊತ್ತು ಮಾಡಬಲ್ಲ ತಂತ್ರಜ್ಞಾನ ಇರುವಾಗ ನಮ್ಮ ಸುತ್ತ ಮುತ್ತ ಏನಾಗುತ್ತಿದೆ ಎಂದು ಗೊತ್ತು ಮಾಡುವ ತಂತ್ರಜ್ಞಾನ ಇಲ್ಲವೇ? ಇದಕ್ಕಾಗಿಯೇ ಒಂದು ಹೊಸ ಆ್ಯಪ್ ಅವತಾರ ಪಡೆದಿದೆ ಅದರ ಹೆಸರು ಆರೋಗ್ಯ ಸೇತು.
ಕೊರೋನಾ ಹರಡುತ್ತಿದ್ದ ಹಾಗೆ ಡಿಜಿಟಲ್ ಇಂಡಿಯಾ ಅಡಿಯಲ್ಲಿ ನೀತಿ ಆಯೋಗ ಸಾರಥ್ಯದಲ್ಲಿ ಇಂತಹ ಒಂದು ಸಾಹಸಕ್ಕೆ ಎರಡು ತಂಡ ತಯಾರಾಗುತ್ತದೆ. ಅವರ ಗುರಿ ಒಂದೇ, ಈಗ ಹರಡುತ್ತಿರುವ ಈ ಮಹಾಮಾರಿಯನ್ನು ತಂತ್ರಜ್ಞಾನದ ಬೆಲೆಯಲ್ಲಿ ಸಿಕ್ಕಿಸಿ ತಡೆಯುವುದು. ಅದಕ್ಕಾಗಿ ಜಗತ್ತಿನಲ್ಲಿ ಎಲ್ಲೆಲ್ಲಿ ಈ ತರಹದ ತಂತ್ರಜ್ಞಾನ ಇದೆ ಎಂದು ಅಧ್ಯಯನ ಮಾಡಿ, ಜಾಗತಿಕ ಮಟ್ಟದಲ್ಲಿ ಅನುಭವಿಗಳನ್ನು ಸಂಪರ್ಕಿಸಿ ನಿರ್ಮಿಸಿದ ಆ್ಯಪ್ ಆರೋಗ್ಯ ಸೇತು!
ಎರಡೇ ವಾರದಲ್ಲಿ ಆ್ಯಪ್ ತಯಾರು! 
ಭಾರತದಲ್ಲಿ ಹದಿನೇಳು ಆ್ಯಪ್ ಬಳಕೆಯಾಗುತ್ತಿರುತ್ತದೆ. ಆದರೆ ಅವೆಲ್ಲ ಕೇವಲ ಟ್ರ್ಯಾಕಿಂಗ್ ಮಾಡಲು, ಪೋಲಿಸರಿಗೆ ಅಥವಾ ಅರೋಗ್ಯ ಇಲಾಖೆ ಬಳಸುವಂತಹದ್ದು. ಕೇವಲ ಕ್ವಾರಂಟೈನ್ ಆದ ರೋಗಿಗಳನ್ನು ಟ್ರ್ಯಾಕ್ ಮಾಡಬಹುದಿತ್ತು. ಆದರೆ ನಮಗೆ ಬೇಕಾಗಿದ್ದು ಜನರೂ ಬಳಸುವಂತಹದ್ದು. ಚೀನಾ ತನ್ನ ದೇಶದಲ್ಲಿ ಒಂದು ಆ್ಯಪ್ ಬಿಡುಗಡೆ ಮಾಡುತ್ತದೆ. ಜಿಪಿಎಸ್ ಬಳಸಿ ಯಾರು ಎಲ್ಲಿದ್ದಾರೆ ಎಂದು ಗುರುತಿಸಬಹುದು. ಅಲಿ ಪೇ, ವಿ ಚಾಟ್ ಮೂಲಕ ಅದನ್ನು ಡೌನ್‌ಲೋಡ್ ಮಾಡಿ ಬಳಸುವಂತಹದ್ದು.
ಚೀನಾ ವುಹಾನ್ ನಿಂದ ಯಾರೆಲ್ಲ ಹೊರಗೆ ಹೋಗಿದ್ದಾರೆ ಎನ್ನುವುದು ಹೇಗೆ ಕಂಡು ಹಿಡಿಯಿತು ಗೊತ್ತಾ? ಒಂದು ಆ್ಯಪ್ ಡಿಸೈನ್ ಮಾಡಿ, ಅದರಲ್ಲಿ ಡಿಸೆಂಬರ್ ನಿಂದ ಜನವರಿಯ ಕೊನೆಯ ತನಕ ಯಾರೆಲ್ಲ ವುಹಾನ್‌ ನಗರದಿಂದ ಕರೆ ಮಾಡಿದ್ದಾರೆ ಎಂದು ಪಟ್ಟಿ ಮಾಡಿತು. ನಂತರ ಅವರೆಲ್ಲ ಈಗ ಎಲ್ಲಿದ್ದಾರೆ ಎಂದು ಗುರುತಿಸಿ, ಅವರನ್ನು ಮನೆಯಲ್ಲಿ ಕೂಡಿ ಹಾಕಿತು. ಅದಕ್ಕೆ ಅಲ್ಲವೇ ವುಹಾನ್ ಬಿಟ್ಟು ಬೇರೆ ಎಲ್ಲೂ ಅಷ್ಟು ಕೇಸ್ ಹೆಚ್ಚಿರಲಿಲ್ಲ. ವಿಚಾರ ಮಾಡಿ, ವುಹಾನ್ ನಿಂದ ಎರಡು ತಿಂಗಳಲ್ಲಿ ಎಪ್ಪತ್ತು ಲಕ್ಷ ಜನರ ಪ್ರವಾಸ ಮಾಡಿದ್ದಾರಂತೆ. ಅವರನ್ನೆಲ್ಲ‌ ಗುರುತಿಸಿ, ಬೇರ್ಪಡಿಸಲು ಸಹಾಯ ಮಾಡಿದ್ದೇ ಡಿಜಿಟಲ್. ನಂತರ, ಮಾರ್ಚ್ ಇಪ್ಪತ್ತನೆಯ ತಾರೀಖಿನಂದು, ಸಿಂಗಾಪುರ್ ಒಂದು ಆ್ಯಪ್ ಬಿಡುಗಡೆ ಮಾಡುತ್ತದೆ. ಅದರ ಹೆಸರು ‘ಟ್ರೇಸ್ ಟುಗೆದರ್’. ಅದು ಕೇವಲ ಬ್ಲೂ ಟೂತ್ ಬಳಸಿ ನಮ್ಮ ಅಕ್ಕ ಪಕ್ಕ ಯಾರಾದರೂ ಸೋಂಕಿತರು ಇದ್ದಾರೆಯೇ ಎಂದು ಪರೀಕ್ಷಿಸುತ್ತದೆ.
ಭಾರತದಲ್ಲಿ ಮಾರ್ಚ್ ಮೊದಲನೆಯ ವಾರದಲ್ಲಿ ಆ್ಯಪ್ ಡೆವಲಪ್ಮೆಂಟ್ ಶುರುವಾಗುತ್ತದೆ. 50 ಜನ ಇಂಜಿನಿಯರಿಂಗ್ ತಂಡ. ಇಲ್ಲಿ ನಮಗೆ ಎರಡೂ ತಂತ್ರಜ್ಞಾನದ ಅವಶ್ಯಕತೆ ಇತ್ತು. ಬ್ಲೂಟೂತ್ ಹಾಗೂ ಜಿಪಿಎಸ್ ಎರಡನ್ನೂ ಬಳಸಿ ಕೊರೋನಾ ಸೋಂಕಿತರನ್ನು ಗುರುತಿನ ಬಲ್ಲ ಒಂದು ಹೊಸ ಆ್ಯಪ್ ತಯಾರಾಗುತ್ತದೆ. ಅದೇ ಆರೋಗ್ಯ ಸೇತು. ತಕ್ಷಣವೇ ಎಪ್ರಿಲ್ ಎರಡಕ್ಕೆ ಗೂಗಲ್ ಆ್ಯಪ್ ಸ್ಟೋರ್ ಹಾಗೂ ಆ್ಯಪಲ್ ಆ್ಯಪ್‌ ಸ್ಟೋರ್ ನಲ್ಲಿ ಬಿಡುಗಡೆಯಾಗುತ್ತದೆ. ಕೇವಲ ಐದು ದಿನದಲ್ಲಿ ಒಂದು‌ ಕೋಟಿ ಜನರು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಇದು ಇವತ್ತಿನ ತನಕದ ದಾಖಲೆ. ಇಂತಹ ದಾಖಲೆ ಸೃಷ್ಟಿಸಿದ ಆ್ಯಪ್ ಡೆವಲಪ್ ಮಾಡಲು ತಗೆದುಕೊಂಡ ಸಮಯ ಎಷ್ಟು ಗೊತ್ತಾ ಕೇವಲ‌ ಎರಡು ವಾರಗಳು ಮಾತ್ರ!
ಸೇತು ಎಂಬ ಬಿಲ್ಲಿನ ಜಿಪಿಎಸ್ ಹಾಗೂ ಬ್ಲೂಟೂತ್ ಎನ್ನುವ ಎರಡು ಬಾಣಗಳು!
ಜಿಪಿಎಸ್ :- 
ಆರೋಗ್ಯ ಸೇತು ಹೇಗೆ ಕೆಲಸ‌ ಮಾಡುತ್ತದೆ? ಮೊದಲು ನೀವು ಆ್ಯಪನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಸಲು ಹೆಸರು, ಮೊಬೈಲ್ ನಂಬರ್ ಇಷ್ಟೇ ಸಾಕು. ನಂತರ ಡಿವೈಸ್ ಬ್ಲೂಟೂತ್ ಆನ್ ಮಾಡಲು ಹಾಗೂ ಲೋಕೆಷನ್ ಗುರುತಿಸಲು ಅನುಮತಿ‌ ಕೇಳುತ್ತದೆ ಕೊಡಬೇಕು. ಇಲ್ಲದೇ ಹೋದರೆ ಅದು ಕೆಲಸ ಮಾಡುವುದಿಲ್ಲ. ಈಗ ಒಂದು ಕಟ್ಟಡದಲ್ಲಿ ಅಥವಾ ಜಾಗದಲ್ಲಿ ಸಾಕಷ್ಟು ಸೋಂಕಿತರು ಇದ್ದಾರೆ ಎಂದು ಕೊಳ್ಳೋಣ. ಅದು ಆಗಾಗಲೇ ಗುರುತಿಸಲ್ಪಟ್ಟಿರುತ್ತದೆ. ಒಂದು ವೇಳೆ ನೀವು ಇರುವ ಕಟ್ಟಡ ಅಥವಾ ಜಾಗ ಅದೇ ಆಗಿದ್ದರೆ ಕೃತಕ ಬುದ್ಧಿಮತ್ತೆ ಅದನ್ನು ಗ್ರಹಿಸಿ ಆ್ಯಪ್ ಮೂಲಕ ನಿಮಗೆ ಎಚ್ಚರಿಕೆ ಕೊಡುತ್ತದೆ. ಅಲ್ಲಿ ನೀವು ಮನೆಯಿಂದ ಹೊರಗಡೆ ಬರಲೇ ಬಾರದು ಅಥವಾ ಹೆಚ್ಚು ಜಾಗ್ರತೆ ವಹಿಸಬೇಕು. ಆ್ಯಪ ಗೆ ಅಲ್ಲಿರುವ ಸೋಂಕಿತರ ಬಗ್ಗೆ ಹೇಗೆ ಮಾಹಿತಿ ಸಿಗುತ್ತದೆ ಹೇಳಿ? ಮೆಡಿಕಲ್ ಆಫಿಸರ್ ಗಳು‌ ಸಂಗ್ರಹಿಸುವ ಎಲ್ಲಾ ದಾಖಲೆಗಳು ಆ್ಯಪ್ ನ ಡಾಟಾ ಬೇಸ್ ನಲ್ಲಿ‌ಇರುತ್ತವೆ. ಕೊರೋನಾ ಸೋಂಕಿತರು, ಕ್ವಾರಂಟೈನ್ ನಲ್ಲಿರುವವರು ಎಲ್ಲರೂ ಕಡ್ಡಾಯವಾಗಿ ಈ ಆ್ಯಪ್ ಬಳಸಲೇ ಬೇಕು. ಹೀಗಾಗಿ ಇವರ ಡಾಟಾ ಬೇಸ್ ಮೂಲಕ ಆ್ಯಪ್ ನಲ್ಲೂ ಆ ದಾಖಲೆ ಇರುತ್ತದೆ. ಕೃತಕ ಬುದ್ಧಿಮತ್ತೆಯ ಕೈಚಳಕವೇ ಆರೋಗ್ಯ ಸೇತುವಿನ ಚಮತ್ಕಾರ!
ಬ್ಲೂಟೂತ್:-
ಇನ್ನು ನೀವು ಹೊರಗಡೆ ಬಂದಾಗ ಜಿಪಿಎಸ್ ನಿಖರವಾಗಿ ನಿಮ್ಮ ಅಕ್ಕಪಕ್ಕ ಯಾರಿಗೆ ಸೋಂಕಿದೆ ಎಂದು ಹೇಳುವುದಿಲ್ಲ. ಒಂದು‌ ಅಥವಾ ಎರಡು ಮೀಟರ್ ಅಂತರದಲ್ಲಿರುವವರ ಬಗ್ಗೆ ಮಾಹಿತಿ ಬೇಕು ಅಂದರೆ ಬ್ಲೂಟೂತ್ ಬೇಕಾಗುತ್ತದೆ. ನೀವು ಹಾಲು ಅಥವಾ ತರಕಾರಿ‌ಕೊಳ್ಳಲು ಹೊರಗಡೆ ಬಂದಿದ್ದೀರಾ ಎನ್ನಿ. ಆಗ ಯಾರಾದರೂ ಕೊರೋನಾ ಸೋಂಕಿತರು ಅಥವಾ ಅವರಿಗೆ ಆ ಲಕ್ಷಣ ಇದ್ದವರು ಒಂದೋ ಎರಡೋ ಮೀಟರ ಅಂತರದಲ್ಲಿ ಬಂದರೆ ತಕ್ಷಣವೇ ಎರಡೂ ಮೊಬೈಲ್ ಬ್ಲೂಟೂತ್ ಗಳು ಸಂಪರ್ಕಕ್ಕೆ ಬಂದು ನಿಮಗೆ ನೀವು ಡೇಂಜರ್ ಜಾಗದಲ್ಲಿದ್ದೀರಿ‌ ಎಂದು ತೋರಿಸುತ್ತದೆ. ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ ಅಕ್ಕ ಪಕ್ಕ ಇರುವ ಎಲ್ಲರೂ ಬ್ಲೂಟೂತ್ ಆನ್ ಮಾಡಿರಬೇಕು. ಇಲ್ಲೂ ಆ ಮಾಹಿತಿ ಸೆಂಟ್ರಲ್ ಡಾಟಾ ಬೇಸ್ ನಿಂದ ಬರುತ್ತದೆ. ‌ಹೀಗಾಗಿ ಕೇವಲ ನಾವೊಬೊಬ್ಬರೇ ಬಳಸಿದರೆ ಏನೂ ಲಾಭವಿಲ್ಲ, ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿ ಹೊತ್ತು ನಡೆಯಬೇಕು!
ಮೂರು ವಾರದಲ್ಲಿ ಆಗಬೇಕಿದ್ದು ಮೂರು ಗಂಟೆಯಲ್ಲಿ ಆಯಿತು!
ಒಂದು ಆ್ಯಪ್‌ ಡೆವಲಪ್ಮೆಂಟ್ ಆಗಿ ಆ್ಯಪಲ್ ಅಥವಾ ಗೂಗಲ್ ಕಂಪನಿಯ ಆ್ಯಪ್ ಸ್ಟೋರ್ ನಲ್ಲಿ ಜಾಗ ಪಡೆಯಬೇಕು ಅಂದರೆ ಕನಿಷ್ಠ ಮೂರು ವಾರಗಳಾದರೂ ಬೇಕು. ಇಲ್ಲಿ ನೋಡಿ ಆ್ಯಪಲ್ ಕೇವಲ ಮೂರು ತಾಸಿನಲ್ಲಿ ಒಪ್ಪಿಗೆ ಕೊಟ್ಟರೆ, ಗೂಗಲ್ ಒಂದೇ ತಾಸಿನಲ್ಲಿ!
ಡೆವಲಪ್ಮೆಂಟ್ ಆದಮೇಲೆ ಮಾರುಕಟ್ಟೆಗೆ ತರುವುದು ಸುಲಭವೇ? ಎಷ್ಟು ಬೇಗ ಜನರ ಮನ ತಲುಪಿದ್ದು ಹೇಗೆ? ಎಚ್ಡಿಎಫ್ಸಿ ಬ್ಯಾಂಕ್ ತನ್ನ ಖಾತೆದಾರರಿಗೆ, ಪೇಟಿಎಮ್ ತನ್ನ ಆ್ಯಪ ನಲ್ಲಿ, ಶಾಲೆಯಿಂದ ಮಕ್ಕಳಿಗೆ- ಪಾಲಕರಿಗೆ, ಕಂಪನಿಗಳು ತಮ್ಮ ನೌಕರಿದಾರರಿಗೆ, ಗಾನಾ ತನ್ನ ಗ್ರಾಹಕರಿಗೆ, ಟ್ವಿಟರ್ ಮೂಲಕ ನಾಯಕರು ಹೀಗೆ ಎಲ್ಲರೂ ಈ ಆ್ಯಪ್ ಜನರ ತನಕ ಮುಟ್ಟಲು ಸಹಕಾರ ನೀಡಿದರು.‌ ಮೋದಿಜಿ ಸ್ವತಃ ಪಕ್ಷದ ಸಂಸ್ಥಾಪನಾ ದಿನದ ಭಾಷಣದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ನಲವತ್ತು ಜನರಿಗೆ ಈ ಆ್ಯಪ್ ಡೌನ್‌ಲೋಡ್ ಮಾಡಿಸುವಂತೆ ನೋಡಿಕೊಳ್ಳಲು ಆಗ್ರಹಿಸಿದ್ದಾರೆ. ಇದರ ಪ್ರಭಾವವೇ ಒಂದು ವಾರದಲ್ಲಿ ಎರಡು ಕೋಟಿ ಜನರನ್ನು ತಲುಪಿದೆ! ಹೆಚ್ಚು ಆ್ಯಪ್ ಬಳಸಿದಷ್ಟು ನಮ್ಮ ದೇಶ ಸೇಫ್.
‘ಆರೋಗ್ಯ ಸೇತು’ ಏನು ಮಾಡುತ್ತದೆ?
ಇದು ನಿಮ್ಮ ಮೊಬೈಲ್ ನಲ್ಲಿ ಹೆಚ್ಚು ಜಾಗ ತಗೆದುಕೊಳ್ಳುವುದಿಲ್ಲ. ಕೇವಲ ಮೂರು ಎಂಬಿ ಆ್ಯಪ್ ಅಷ್ಟೇ. ಒಂದು ನಿಮಿಷ ಸಾಕು ಇನ್ಸ್ಟಾಲ್ ಮಾಡಲು. ಒಮ್ಮೆ ಆ್ಯಪ್ ಇನ್ಸ್ಟಾಲ್ ಆಯಿತೆಂದರೆ ನೀವು ಈ ಆ್ಯಪ್ ಬಳಸಿ‌ ಸ್ವತಃ ಪರೀಕ್ಷೆ ಮಾಡಿಕೊಳ್ಳಬಹುದು. ಉದಾಹರಣೆಗೆ, ನೀವು ವಿದೇಶಕ್ಕೆ ಹೋಗಿ ಬಂದಿದ್ದೀರಾ? ಮಧುಮೇಹ ಇದೆಯಾ? ಜ್ವರ ಇದೆಯೇ? ಇಂತಹ ಹಲವು ಪ್ರಶ್ನೆಗೆ ಉತ್ತರಿಸಿದಾಗ ನೀವು ಎಷ್ಟು ಸುರಕ್ಷಿತ ಎನ್ನುವುದು ಗೊತ್ತಾಗುತ್ತದೆ. ಸುರಕ್ಷತೆಯ ಬಗ್ಗೆ ಮಾಹಿತಿ ಇದೆ.
ನೀವು ಹೊರಗಡೆ ಹೋದಾಗ ನೀವು ಸುರಕ್ಷಿತವಾಗಿದ್ದೀರಾ ಅಥವಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದೀರಾ ಎನ್ನುವುದು ಗೊತ್ತಾಗುತ್ತದೆ. ನಿಮ್ಮನ್ನು ಕೋರೊನಾದಿಂದ ಕಾಪಾಡುವುದೇ ಇದರ ಮುಖ್ಯ ಉದ್ದೇಶ.
ಆರೋಗ್ಯ ಸೇತು ರಾಮಬಾಣವೇ? 
ಕೊರೋನಾ ನಿಯಂತ್ರಣ ಪರಿಣಾಮಕಾರಿಯಾಗಲು ಈ ಆ್ಯಪನ್ನು ಎಷ್ಟು ಶೇಕಡಾ ಜನರು ಬಳಸಬೇಕು? ಎನ್ನುವುದು ಪ್ರಶ್ನೆ. ಉತ್ತರಿಸುವುದು ಸ್ವಲ್ಪ ಕಷ್ಟ! ಬೇರೆ ಬೇರೆ ತಜ್ಞರು ಹೇಳುವಂತೆ ನಮ್ಮ ದೇಶದ 40-70% ಜನರು ಬಳಸಬೇಕಂತೆ. ಹೌ ದ್ಯಾಟ್ಸ್ ಪಾಸಿಬಲ್? ನಮಗೆ ಎಲ್ಲರೂ ಸ್ಮಾರ್ಟ್ ಪೋನ್ ಬಳಸುತ್ತಾರೆ ಎನಿಸಬಹುದು ಆದರೆ ವಾಸ್ತವಿಕವಾಗಿ ನಮ್ಮಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರು ಕೇವಲ ನಾಲ್ಕು ಕೋಟಿ. ಅದರಲ್ಲಿ ಎಲ್ಲರಿಗೂ ಇಂಟರ್ನೆಟ್ ಲಭ್ಯವಾಗುವುದಿಲ್ಲ. ಶಹರಗಳಲ್ಲಿ 51% ಆದರೆ ಹಳ್ಳಿಗಳಲ್ಲಿ ಕೇವಲ 27% ಜನರಿಗೆ ಅಂತರ್ಜಾಲ ಸಿಗುತ್ತದೆ. ಅರೋಗ್ಯ ಸೇತು ಕೊರೋನಾ ತಡೆಗೆ ರಾಮಬಾಣ ಆಗಬೇಕಾದರೆ ಮುಂದೆ ಹೋದಂತೆ ಬ್ಲೂಟೂತ್ ಇಲ್ಲದ ಮೊಬೈಲ್ ಕೂಡ ಈ ಸೇವೆಯನ್ನು ಬಳಸುವಂತಾಗಬೇಕು. ಆ ದಿಶೆಯಲ್ಲಿ ಕೆಲಸ ಸಾಗುತ್ತಿದೆ. ಲಾಕ್ ಡೌನ್ ಮುಗಿಯುವುದರಲ್ಲಿ ಹೊಸ ವರ್ಷನ್ ಬರಬಹುದು.
ಆ್ಯಪ್ ಬಳಕೆಗೆ ಮನಸ್ಥಿತಿಯ ಸವಾಲು!
ಭಾರತದಲ್ಲಿ ದೊಡ್ಡ ಸವಾಲೆಂದರೆ ಜನರು ಸರಕಾರದ ಮಾತನ್ನು ಸುಲಭವಾಗಿ ಕೇಳುವುದಿಲ್ಲ, ಆ ಶಿಸ್ತು ಇಲ್ಲ. ಸಿಂಗಾಪುರ್ ದಲ್ಲಿ ಮನೆಯಲ್ಲಿ ಇರಿ‌ ಅಂದಕೂಡಲೇ ಜನರು ಸಂಪೂರ್ಣವಾಗಿ ಸ್ಪಂದಿಸಿದರು, ಹಾಗೆಯೇ ಚೀನಾದಲ್ಲಿ ಕೂಡ. ಇದೇ ನಡವಳಿಕೆ ಆ್ಯಪ್ ಬಳಕೆಯಲ್ಲಿ‌ ಕೂಡಾ ಪ್ರತಿಬಿಂಬವಾಗುತ್ತದೆ. ಆದರೆ ನಮ್ಮಲ್ಲಿ ಇಂಟರ್ನೆಟ್ ಇದ್ದರೂ, ಸ್ಮಾರ್ಟ್ ಫೋನ್‌ಇದ್ದರೂ ‘ಯಾಕೆ ಬಳಸಬೇಕು‌?’ ಎಂದು‌ ಪ್ರಶ್ನಿಸುವರೇ ಹೆಚ್ಚು!
ಇದರಿಂದಾಗಿ ಇಂತಹ ಆ್ಯಪ್ ವಿನ್ಯಾಸದಲ್ಲಿ ಎರಡು ರೀತಿಯ ತತ್ವವಿದೆ. ಮೊದಲನೇಯದು ಜನರ ಮೇಲೆ ನಂಬಿಕೆ ಇಲ್ಲದೆ ತಂತ್ರಜ್ಞಾನ ಬಳಸಿ ಅವರ ಮೇಲೆ ನಿರಂತರವಾಗಿ ನಿಗಾ ಇಡುವುದು. ಇನ್ನೊಂದು ಜನರು ಸರಕಾರದ ಮಾತನ್ನು ಪಾಲಿಸುತ್ತಾರೆ ಎಂದು ನಂಬಿಕೆ ಇಡುವುದು. ಅದಕ್ಕೆ ತಕ್ಕ ವಿನ್ಯಾಸ. ಮೊದಲ ತತ್ವದಲ್ಲಿ ಕೊರೋನಾ ರೋಗಿಯ ಮನೆಯ ಸುತ್ತ ಡಿಜಿಟಲ್ ಬೇಲಿ ಹಾಕಲಾಗುತ್ತದೆ. ಅದನ್ನು‌ ‘ಜಿಯೋ ಫೆನ್ಸಿಂಗ್’ ಎನ್ನುತ್ತಾರೆ. ಆತ ಬೇಲಿ ದಾಟಿ‌ ಹೋದರೆ ಗೊತ್ತಾಗುತ್ತದೆ ಆಗ ಆತನನ್ನು ಹಿಡಿಯಬಹುದು. ಪ್ರಶ್ನೆ ಅದಲ್ಲ, ಜನರು ಬಹಳ ಸ್ಮಾರ್ಟ್ – ಮೊಬೈಲ್ ಇಟ್ಟು ಅಡ್ಡಾಡಿದರೆ? ಅದಕ್ಕಾಗಿ ಪ್ರತಿ‌ದಿನ‌ ಮೂರು ಬಾರಿ ಡಿಜಿಟಲ್ ಸಿಗ್ನೇಚರ್ ಕಳಿಸು ಎನ್ನುವುದು ಅಥವಾ ಗೂಗಲ್‌ ಮ್ಯಾಪ್‌ ಮೂಲಕ ಎಷ್ಟು ಹೊತ್ತಿನಿಂದ ಒಂದೇ ಕಡೆ ಇದ್ದಾನೆ‌ ಎನ್ನುವುದನ್ನು ಪರೀಕ್ಷಿಸುವುದು ಇತ್ಯಾದಿ ವಿಧಾನದ ಬಳಕೆ ಆಗಬಹುದು. ಇದರಲ್ಲಿ ತುಂಬಾ ನಿರ್ಬಂಧಗಳಿವೆ.
ಎರಡನೇಯದು ಜನರು‌ ಸರಕಾರದ ಮಾತನ್ನು ನಂಬುತ್ತಾರೆ ಎನ್ನುವ ತತ್ವದ ಆಧಾರದ ಮೇಲೆ ಆ್ಯಪ್ ಡೆವಲಪ್ಮೆಂಟ್ ಮಾಡುವುದು. ಆರೋಗ್ಯ ಸೇತು ಎರಡನೆಯ ತತ್ವದ ಮೇಲಿದೆ. ಇದು ಎಷ್ಟು ಫಲಕಾರಿ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡಬೇಕು!
ಡಾಟಾ ಪ್ರೈವಸಿ ಬಗ್ಗೆ ಚಿಂತೆಯಾಕೆ? 
ನಮ್ಮ‌ ದೇಶದಲ್ಲಿ ಡಾಟಾ ಪ್ರೈವಸಿ ಬಗ್ಗೆ ಬಹಳ ಚರ್ಚೆ ನಡೆಯುತ್ತದೆ. ಆಧಾರ್ ಕಾರ್ಡ್ ನ್ನು ಪಾನ್‌ ಕಾರ್ಡ್ ಜೊತೆ ಲಿಂಕ್ ಮಾಡಿ ಎಂದಿದ್ದೇ ಜನ ಎದ್ದೆದ್ದು ಬಂದಿಲ್ಲವೆ? ನಮಗೆ ಫೇಸ್‌ಬುಕ್‌, ಟ್ವೀಟರ್ ಹಾಗೂ ವಾಟ್ಸಾಪ್ ನಲ್ಲಿ ನಮ್ಮ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಲು ಯಾವುದೇ ತೊಂದರೆಯಿಲ್ಲ ಆದರೆ ಸರಕಾರ ಏನಾದರೂ ಹೇಳಿದರೆ ಕೆಲವರು ನೇರವಾಗಿ ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತುತ್ತಾರೆ. ಇಲ್ಲೂ ಅದೇ ಸಮಸ್ಯೆ – ಸಂಶಯ.
ಆರೋಗ್ಯ ಸೇತುವಿನಲ್ಲಿ ನೀವು ಯಾರನ್ನ ಯಾವಾಗ ಭೇಟಿ ಮಾಡಿದಿರಿ ಎನ್ನುವುದು ಗೊತ್ತಾಗುತ್ತದೆ. ಇದು ಬಹಳ ವೈಯಕ್ತಿಕ ಮಾಹಿತಿ. ಇದು ಮಹತ್ವದ ವಿಷಯ ಆಗಿರಬಹುದು ಆದರೆ ಅದನ್ನು ಅಗತ್ಯ ಬೀಳುವ ತನಕ ಯಾರೂ ಬಳಸುವುದಿಲ್ಲ.‌ಚಿಂತೆ ಯಾತಕ್ಕೆ? ಹಾಗಿದ್ದರೆ ಇದು ಮೊದಲಬಾರಿಗೆ ನಾವು ಹಂಚಿಕೊಳ್ಳುತ್ತಿದೆವೆಯೇ? ಉಬರ್, ಓಲಾ ಆ್ಯಪ್, ವಾಟ್ಸಾಪ್, ಫೇಸ್‌ಬುಕ್‌ ಎಲ್ಲದೂ ಅದೇ ಅಲ್ಲವೆ? ನೀವು ಆ ಆ್ಯಪ್‌ಗೆ ಜಾಗವನ್ನು ಗುರುತಿಸಲು, ಕರೆಯನ್ನು ರೆಕಾರ್ಡ್ ಮಾಡಲು, ಫೋನ್ ನಂಬರ್ ಎಲ್ಲವನ್ನೂ ಕೊಟ್ಟಿದ್ದೀರಿ. ಅವರಿಗೆ ಈ ಮಾಹಿತಿ ಬೇಕು ಅಂದರೆ ಯಾವತ್ತೂ ಪಡೆಯಬಹುದು. ಹೀಗಾಗಿ ಸೇತುವಿನ ಮೂಲಕ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಯಾವುದೇ ತೊಂದರೆ ಇಲ್ಲ.‌
ಇನ್ನೊಂದ ವಿಷಯ ಅಂದರೆ ಡಾಟಾ ಮೂವತ್ತು ದಿನಗಳ ನಂತರ ಮೊಬೈಲ್ ನಲ್ಲೇ ಡಿಲೀಟ್ ಆಗುತ್ತದೆ. ಬ್ಲೂಟೂತ್ ಡಾಟಾವು ಫೋನಿನಲ್ಲಿ ಸಂಗ್ರಹ ಆಗುತ್ತದೆ. ನೀವು ಕೊರೋನಾ ಸೋಂಕಿತ ವ್ಯಕ್ತಿಯ ಹತ್ತಿರ ಬಂದರೆ ಮಾತ್ರ ಆ ಮಾಹಿತಿ ಕೇಂದ್ರಿತ ಗಣಕಯಂತ್ರಕ್ಕೆ ಹೋಗುತ್ತದೆ. ಅವರು ಆ‌ ಕ್ಷಣ ಏನು ಅಗತ್ಯವೋ ಆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಇದು ಇಬ್ಬರಿಗೂ ಗೆಲುವು. ಮೂವತ್ತು ದಿನಗಳು ನೀವು ಯಾವುದೇ ಕೋರೊನಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬರದೇ ಹೋದರೆ ಆ ಡಾಟಾ ಫೋನಿನಲ್ಲೇ ಡಿಲೀಟ್ ಆಗುತ್ತದೆ. ಹೀಗಾಗಿ ಖಾಸಗಿ ಮಾಹಿತಿಯ ರಕ್ಷಣೆಯನ್ನು ಆ್ಯಪ ಮಾಡುವಾಗಲೇ ಯೋಚಿಸಿ ಅಳವಡಿಸಲಾಗಿದೆ. ಯಾರೂ ಹೆದರುವ ಅವಶ್ಯಕತೆ ಇಲ್ಲ!
ಭವಿಷ್ಯದಲ್ಲಿ ಹೇಗೆ ಬಳಕೆ ಆಗುವುದು?
ಇವತ್ತು ಇ-ಪಾಸ್ ಬೇಕು ಅಂದರೆ ಅದಕ್ಕೆ ಬೇರೆ ಪ್ರಕ್ರಿಯೆ. ಸರಕಾರಿ ವೆಬ್ ಸೈಟ್ ಗೆ ಹೋಗಬೇಕು, ಅಲ್ಲಿ ಎಲ್ಲಾ ಮಾಹಿತಿ ಕೊಡಬೇಕು. ‌ಎಷ್ಟು ಕಟಕಟೆ. ಪ್ರಧಾನಿಯವರದ್ದು ಸರಳ ವಿಚಾರ – ಯಾರು ಆರೋಗ್ಯ ಆ್ಯಪ್ ಬಳಸುತ್ತಾರೆಯೋ ಅವರು ಆರೋಗ್ಯವಾಗಿರುವುದು ಗೊತ್ತಾದಾಗ ಅವರಿಗೆ ಸೇತು ಆ್ಯಪ್ ಮೂಲಕವೇ ಇ-ಪಾಸ್ ಕೊಡಬಹುದಲ್ಲ? ಇದೊಂದು ವಿಚಾರ ಅಷ್ಟೇ. ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.
ಇವತ್ತು ಮನೆಯಲ್ಲೇ ಇದ್ದೇವೆ, ನಾಳೆ ಲಾಕ್ ಡೌನ್ ಮುಗಿದ ಮೇಲೆ ಈ ಆ್ಯಪ್ ಎಷ್ಟು ಮುಖ್ಯವಾಗುತ್ತದೆ ಎನ್ನುವುದನ್ನು ಯೋಚನೆ ಮಾಡಿ. ಅಷ್ಟೇ ಅಲ್ಲ ನಾವು ಹೆಚ್ಚು ಹೆಚ್ಚು ಈ ಆ್ಯಪ್‌ ಮೂಲಕ ಮಾಹಿತಿ ಕೊಟ್ಟರೆ ಸರಕಾರ ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತಗೆದುಕೊಳ್ಳಲು ಸಹಾಯವಾಗುತ್ತದೆ.
ಕೇಂದ್ರಿತ ಗಣಕಯಂತ್ರದ ಡಾಟಾ ಬಳಸಿ ಆರೋಗ್ಯ, ಸಾರಿಗೆ, ಇಂಧನ, ಆಹಾರ, ಸಮಾಜಕಲ್ಯಾಣ ಅಥವಾ ಇನ್ನೊಂದು ಯಾವುದೋ ಇಲಾಖೆ ಹೊಸ ನೀತಿ ರೂಪಿಸಲು ಅದಕ್ಕೂ ಪ್ಲಾಟ್ ಫಾರ್ಮ್ ತಯಾರಿದೆ. ಮಾಹಿತಿಯನ್ನು ಎನ್ಕ್ರಿಪ್ಟ್ ಮಾಡಿ ಸಂಖ್ಯಾಶಾಸ್ತ್ರದ ಅಧ್ಯಯನಕ್ಕೂ ಬಳಸಬಹುದು. ಎಲ್ಲಿ ಜಾಸ್ತಿ ತೊಂದರೆ ಇದೆಯೋ ಅಲ್ಲಿಗೆ ಬೇಕಾದ ವ್ಯವಸ್ಥೆ, ಯಾರಿಗೆ ತುಂಬಾ ತೊಂದರೆ ಇದೆಯೋ ಅವರಿಗೆ ಸಹಾಯ, ತುರ್ತುಪರಿಸ್ಥಿತಿ ನಿರ್ವಹಣೆ, ಇತ್ಯಾದಿ. ದೀರ್ಘ ಕಾಲದಲ್ಲಿ, ಇವತ್ತು ಭೀಮ್ ಆ್ಯಪ್ ಅಥವಾ ಯುಪಿಐ ಹೇಗೆ ಒಂದು ಜಾಗತಿಕ ಮಟ್ಟದಲ್ಲಿ ಹಣಕಾಸಿನ ರಂಗದಲ್ಲಿ ಉದಾಹರಣೆ ಆಗಿದೆಯೋ ಆರೋಗ್ಯ ಸೇತು ಕೂಡ ಜಗತ್ತಿಗೇ ಮಾದರಿ ಆಗಬಹುದು! ಇದು ನಮ್ಮ ಕೈಯಲ್ಲಿದೆ. ಇಂದೇ ಡೌನ್‌ಲೋಡ್ ಮಾಡಿಕೊಳ್ಳಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!