Featured ಅಂಕಣ

ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 4: ಚೀನಾದ ಸಾಮ್ರಾಜ್ಯಶಾಹಿ ಅಹಂಕಾರದ ಹೆಡೆಮುರಿ ಕಟ್ಟಿದ ಭಾರತ

ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 1

ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 2  

ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ 3

ಈಗ ಡೊಕ್ಲಮ್ನಲ್ಲಿ ಚೀನಾದ ರಸ್ತೆ ನಿರ್ಮಾಣ ನಿಂತಿದೆ. ಉತ್ತರಖಂಡದ ಕಾಲಾಪಾನಿಗೆ ಹೊಕ್ಕುತೇವೆಂದರೂ ಅಷ್ಟೇ, ಯುದ್ಧಕ್ಕೆ ಸನ್ನದ್ಧರಾಗಿ ಎಂದರೂ ಅಷ್ಟೇ, ಭಾರತ ತಮ್ಮ ನ್ಯಾಯಯುತ ನೆಲೆಯಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಸಮಸ್ಯೆ ನಿವಾರಣೆಗೆ ಮಾತುಕತೆಯ ಪರಿಹಾರ ಸಿಗಬೇಕಾದರೆ ಭಾರತ ಅಲ್ಲಿಂದ ಜಾಗ ಖಾಲಿಮಾಡಬೇಕೆಂಬ ಚೀನಾದ ಬೇಡಿಕೆ ಸೋತಿದೆ. ಪ್ರತಿಯೊಂದು ಸಂದರ್ಭದಲ್ಲಿ ಟಿಪಾಯಿ ಮೇಲೆ ಏನಿರಬೇಕೆಂದು ನಿರ್ಧರಿಸುವ ಚೀನಾದ ಷರತ್ತು ಬಾರಿ ಚಲಾವಣೆಯಾಗಿಲ್ಲ. ಭರತಚೀನಾ ಗಡಿಯ ಲಡಾಕ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ, “ಮ್ಯಾಕ್ ಮೋಹನ್ಗಡಿ ಅಸ್ಪಷ್ಟ ಕಾಲ್ಪನಿಕ ರೇಖೆಯೆಂಬ ಕಾರಣನೀಡಿ ಆಗಾಗ ಸೇನೆಗಳ ನಡುವೆ ಸಣ್ಣ ಮಟ್ಟಿನ ಗಡಿದಾಟುವಿಕೆ ಸಹಜವೆಂಬಂತೆ ನಿರಂತರವಾಗಿ ನಡೆದಿತ್ತು. ಆದರೆ ಡೊಕ್ಲಮ್ ಬಿಕ್ಕಟ್ಟನ್ನು ಅವುಗಳಿಗೆ ಹೋಲಿಸಲಾಗುವುದಿಲ್ಲ. ಇದೊಂದು ವಿಶೇಷ ಸಂದರ್ಭ.

ಇಲ್ಲಿ ಬಹುಮುಖ್ಯ ಸಂಗತಿಯೊಂದಿದೆ, ಅದೆಂದರೆ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೀನಾದ ಸೊಕ್ಕು ಮುರಿಯುವ ಪ್ರಯತ್ನವನ್ನು ಭಾರತ ಮಾಡುತ್ತಿದೆ. ಅದು ಅಮೆರಿಕದ ಸ್ನೇಹದಿಂದ ಹಿಡಿದು, ದಲೈ ಲಾಮಾ, ಅಮೆರಿಕದ ರಾಯಭಾರಿ ರಿಚರ್ಡ್ ವರ್ಮಾರ ತವಾಂಗ್ ಭೇಟಿ, ಒಬಿಒಆರ್ ಪಾಕ್ ಆಕ್ರಮಿತ ಕಾಶ್ಮೀರದಿಂದ ಹೋಗುತ್ತದೆ ಎಂದು ಪ್ರತಿಭಟಿಸಿ ಅದರಿಂದ ಹೊರಗುಳಿದ ರೀತಿ.. ಇಂತಹ ಅನೇಕ ಕಾರಣಗಳು ಚೀನಾ ಮಾತಿಗೆ ಮುಂಚೆ ಹಾಕುತ್ತಿದ್ದ ಷರತ್ತುಗಳನ್ನು ಹೆಡೆಮುರಿಕಟ್ಟಿದೆ. ಕಾಲಪಾನಿಗೆ ಹೊಕ್ಕರೂ, ಡೊಕ್ಲಮ್ನಲ್ಲಿ ಹೋದ ಮಾನ ಹಿಂತಿರುಗದು ಎಂಬ ಸತ್ಯ ಚೀನಾ ಇನ್ನಷ್ಟೇ ಅರಿಯಬೇಕಿದೆ.

ಯಾವುದೇ ರಾಜಕಾರಣಕ್ಕೆ ಲವಲೇಶವೂ ಇಲ್ಲದಂತೆ ಒಂದು ಗುರುತರ ವಾಸ್ತವ ಸತ್ಯವನ್ನು ಭಾರತೀಯರೆಲ್ಲರೂ ಗಮನಿಸಬೇಕು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಭಾರತ ದೇಶ, ಭಾರತ ಸೇನೆ, ಸಾಮ್ರಾಜ್ಯಶಾಹಿ ಚೀನಾದ ಸವಾಲಿಗೆ ಅಷ್ಟೇ ಧೈರ್ಯದಿಂದ ಪ್ರತ್ಯುತ್ತರ ಕೊಡುವುದಕ್ಕೆ ಎದೆಕೊಟ್ಟು ನಿಂತಿವೆ. ಇದು ಭಾರತದ ಶಕ್ತವರ್ಧನೆ, ಭರವಸೆ, ಹಾಗೂ ಸ್ವ ಸಾಮರ್ಥ್ಯ ಸ್ಥಾಪನೆಗೆ 21ನೇ ಶತಮಾನದಲ್ಲಿ ಹಾಕುತ್ತಿರುವ ಅಡಿಗಲ್ಲು ಎಂದೇ ಭಾವಿಸಬೇಕು. ನಾವು ಕೇವಲ ಪಾಕಿಸ್ತಾನದ ಮುಂದಷ್ಟೇ ಪರಾಕ್ರಮಿಗಳಲ್ಲ, ಅಗತ್ಯಬಿದ್ದರೆ ಚೀನಾವನ್ನು ಹಿಮ್ಮೆಟ್ಟಿಸಬಲ್ಲೆವು ಎಂಬುದನ್ನು 55ದಿನಗಳ ಅವಧಿಯಲ್ಲಿ ಚೀನಾ ಹಾಗೂ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದೆ.

ಮುಂದಿನ ಹಾದಿ:

ಜುಲೈ ತಿಂಗಳಿನಲ್ಲಿ ನಡೆದಿದ್ದ G20 ಶೃಂಗ ಸಭೆಯಲ್ಲಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆದಿಲ್ಲ. ಮುಂಬರುವ ಬ್ರಿಕ್ಸ್ ಸಮಾವೇಶದಲ್ಲೂ ಇದು ನಡೆಯುವುದು ಅನುಮಾನ. ಇದರಿಂದ ಚೀನಾ ಕಡೆಯಿಂದ ಬರುತ್ತಿರುವ ಸಂದೇಶ ಸ್ಪಷ್ಟವಾಗಿದೆ. ಚೀನಾದ ಪೂರ್ವ ಷರತ್ತನ್ನು ಒಪ್ಪದ ಹೊರತು ಚೀನಾ, ನಾಯಕ ಮಟ್ಟದ ಮಾತುಕತೆಗೆ ಸಿದ್ಧವಿಲ್ಲ. ಯಾವುದೇ ಪೂರ್ವ ಷರತ್ತುಗಳನ್ನು ವಿಧಿಸದಿದ್ದರೆ ಭಾರತ ಮಾತುಕತೆಗೆ ಸದಾ ಸಿದ್ಧ. ವ್ಯತ್ಯಾಸ ಎರಡೂ ದೇಶಗಳ ಪ್ರತಿಕ್ರಿಯೆಗಳಲ್ಲೂ ವ್ಯಕ್ತವಾಗಿದೆ. ತನ್ನ ಷರತ್ತನ್ನು ಇತರರು ಒಪ್ಪಬೇಕೆಂಬ ಚೀನಾದ ತೀವ್ರಗಾಮಿ ನಡೆ ಬಹಳ ಹಿಂದಿನದ್ದು. ಮೊದಲಿನಿಂದಲೂ ಸಮಯದ ಅನಿವಾರ್ಯತೆಗೆ ತಕ್ಕಂತೆ ತೂಕದ ಪ್ರತಿಕ್ರಿಯೆ; ಹಿತಮಿತವಾಗಿ ಉತ್ತರಿಸುವ ಭಾರತದ ಧೋರಣೆಯೂ ಇಲ್ಲಿ ಸ್ಪಷ್ಟ.

ರಾಜತಾಂತ್ರಿಕ ಮಾತುಕತೆಗಳಲ್ಲಿ ಬಗೆಹರಿಯದ ಸಮಸ್ಯೆಯೇ ಇಲ್ಲ. ಅದಕ್ಕೆ ಬೇಕಿರುವುದು ಕಕ್ಷಿದಾರರ ಇಚ್ಛಾಶಕ್ತಿ. ಸಧ್ಯದ ಪರಿಸ್ಥಿತಿಯಲ್ಲಿ ಡೊಕ್ಲಮ್ ಸಮಸ್ಯೆಯ ಪರಿಹಾರಕ್ಕೂ ಉಭಯ ದೇಶಗಳವಿಶೇಷ ಪ್ರತಿನಿಧಿಗಳ ಸಭೆ ಮೊರೆ ಹೋಗುವುದು ಒಂದು ಉತ್ತಮ ಆಯ್ಕೆಯಾಗಿ ತೋರುತ್ತದೆ. ಇದರಲ್ಲಿ ಚೀನಾಭೂತಾನಭಾರತ ಮೂರೂ ದೇಶಗಳಿಗೂ ಲಾಭವಾಗದಿದ್ದರೂ, ಮೂರೂ ದೇಶಗಳು ಆಯ್ಕೆಯ ಸಾಧ್ಯತೆಗಳನ್ನು ಬಳಸಿಕೊಳ್ಳುವುದರಿಂದ ಯಾವುದೇ ನಷ್ಟವಾಗುವುದಿಲ್ಲ. ಯಾವುದೇ ದೇಶದ ಅಭಿವೃದ್ಧಿಗೆ ಯುದ್ಧ ಮಾರ್ಗಕ್ಕಿಂತ ಪೂರ್ವ ಷರತ್ತುಗಳಿಲ್ಲದ ಮುಕ್ತ ಮಾತಿನ ಮಾರ್ಗವೇ ಉತ್ತಮ.

ದ್ವಿಪಕ್ಷೀಯವಾಗಿ ಚೀನದಷ್ಟೇ ಆಕ್ರಮಣಕಾರಿ ಹಾಗೂ ಬಹುಪಕ್ಷೀಯ ಸಂಬಂಧದಲ್ಲಿ ಚೀನಾರಹಿತ ವ್ಯವಹಾರ:

ಪರಿಸ್ಥಿತಿಗಳು ಬದಲಾದ ಕಾಲದಲ್ಲಿ ಭಾರತ ಚೀನಾದೊಂದಿಗೆ ವ್ಯವಹರಿಸುವಾಗ ಮಹತ್ವದ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ದ್ವಿಪಕ್ಷೀಯ ವ್ಯವಹಾರದ ನೆಲೆಯಲ್ಲಿ ಭಾರತ ಚೀನಾದ ಆಕ್ರಮಣಶೀಲತೆಗೆ ಸರಿಸಾಟಿಯಿಲ್ಲದಂತೆ ಆಕ್ರಮಣಶೀಲವಾಗಬೇಕಿದೆ. ಅಂದರೆ ಚೀನಾ ಪ್ರತೀ ನಡೆಗೂ ಭಾರತದ ಪ್ರತಿ ನಡೆಯನ್ನು ಇಡಬೇಕು. ಇದನ್ನು ಸರಳವಾಗಿ ಅಥೈಸಿಕೊಳ್ಳಲು ಪ್ರಾಯಶಃ ಚದುರಂಗ ಆಟದ ಸೂತ್ರಗಳು ನಮ್ಮ ಸಹಾಯಕ್ಕೆ ಬರಬಹುದು.

ಇನ್ನು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕವಾಗಿ ಚೀನಾವನ್ನು ಎದುರಿಸುವಾಗ, ಚೀನಾವನ್ನು ಮೀರಿಸುವ ಯಾವುದೇ ಅವಕಾಶವನ್ನು ಭಾರತ ಬಿಡಬಾರದು. ಆದರೆ ಅದೇ ಹೊತ್ತಿಗೆ ದ್ವಿಪಕ್ಷೀಯ ಸಂಬಂಧದಲ್ಲಿ ತೋರಬೇಕಾದ ವರ್ತನೆ ಭಿನ್ನವಾಗಿ ಸರಳ ನಾಯತ್ವದ ತಂತ್ರವನ್ನು ಅಳವಡಿಸಿಕೊಳ್ಳಬೇಕು. 21ನೇ ಶತಮಾನದಲ್ಲಿ ಚೀನಾವನ್ನು ಆರ್ಥಿಕವಾಗಿ ಮಣಿಸಲು ಚೀನಾ ಸಾಮಾಗ್ರಿಗಳನ್ನು ಬಹಿಷ್ಕರಿಸುವ ಅನಿವಾರ್ಯವಿರುವಂತೆ, ಭಾರತದ(ಹಾಗೂ ದಕ್ಷಿಣ ಏಷ್ಯಾ ದೇಶಗಳ) ಆಂತರಿಕ ಭದ್ರತೆ, ಸಾರ್ವಭೌಮತೆ ಮತ್ತು ಆರ್ಥಿಕತೆಯ ರಕ್ಷಣೆಯಾಗಬೇಕಾದರೆ ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಚೀನಾದ ಮಹತ್ವವನ್ನು ಶೂನ್ಯಕ್ಕಿಳಿಸಬೇಕು. ಸಾರ್ಕ್, ಸಾಸೆಕ್, ಬಿಬಿಐಎನ್, ಸಾಗರ್ ಮೊದಲಾದ ಬಹುಪಕ್ಷೀಯ ಪ್ರಾದೇಶಿಕ ಸಂಘಟನೆಗಳನ್ನು ಗಟ್ಟಿಗೊಳಿಸಿ, ಅಲ್ಲಿ ಭಾರತ ತನ್ನ ನಾಯಕತ್ವವನ್ನೂ, ಮಾರ್ಗದರ್ಶಕ ಸ್ಥಾನವನ್ನೂ ಮತ್ತು ಪ್ರಾದೇಶಿಕವಾಗಿ ಚೀನಾರಹಿತವಾಗಿ ಉಳಿದವರೆಲ್ಲರ ಜೊತೆಯಾಗಿ, ಒಗ್ಗಟ್ಟಿನಲ್ಲಿ ಬೆಳೆಯಬೇಕಾದ ಮಾರ್ಗವನ್ನು ಪುನರ್ ಸಂಘಟಿಸಬೇಕಾದ ತುರ್ತು ಅನಿವಾರ್ಯತೆಯಿದೆ.

ಮುಗಿಯಿತು.

Shreyanka S Ranade

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!