ನಾವು ನಮ್ಮ ಸ್ನೇಹಿತರನ್ನು ಆಯ್ಕೆಗೆ ತಕ್ಕಂತೆ ಬದಲಾಯಿಸಬಹುದು. ಆದರೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ನೆರೆಹೊರೆಯ ದೇಶ–ಪ್ರದೇಶಗಳನ್ನಲ್ಲ. “ನಾ ಕೊಡೆ ಎನ್ನುವ ಭಾರತ, ತಾ ಬಿಡೆ ಎನ್ನುವ ಚೀನಾ ಹಠ. ಮಧ್ಯದಲ್ಲಿ ಬಿಕ್ಕಟ್ಟಿಗೆ ಸಿಲುಕಿರುವ ಡೊಕ್ಲಮ್ ಪ್ರದೇಶದ ವಾರಸುದಾರ ಭೂತಾನ್“. 1962ರ ಪರಿಸ್ಥಿತಿ ಈಗಿಲ್ಲ. ಎರಡೂ ಪರಮಾಣುಶಕ್ತಿಯ ಶಕ್ತಿಶಾಲಿ ದೇಶಗಳು. ಅದೇ ಹೊತ್ತಿಗೆ ಇಬ್ಬರೂ ನ್ಯೂಕ್ಲಿಯರ್ ಶಸ್ತ್ರಗಳ “ಮೊದಲ ಬಳಕೆ ಇಲ್ಲ“(ನೋ ಫಸ್ಟ್ ಯೂಸ್) ಎಂಬ ತತ್ವ ಪಾಲಿಸುವ ಜವಾಬ್ದಾರಿ ಹೊತ್ತಿವೆ. ಅಂದಿಗೆ “ಹುಲ್ಲುಕಡ್ಡಿಯೂ ಬೆಳೆಯದ ಬರಡು ಭೂಮಿ“(1962, ಅಂದಿನ ಪ್ರಧಾನ ಮಂತ್ರಿ, ನೆಹರೂ ಜವಾಹರ್ ಲಾಲ್ ಮಾತುಗಳು, ಚೀನಾದ ಅತಿಕ್ರಮಣ ಪ್ರವೇಶಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿನ ಹೇಳಿಕೆ) ಎಂದು ನಿರ್ಲಕ್ಷಿಸಲಾಗಿದ್ದ, ಆದರೆ ಇಂದಿಗೆ ಚೀನಾದ ಸಾರ್ವಭೌಮತೆಯ ಪ್ರತಿಷ್ಟೆ ಹಾಗೂ ಭಾರತದ ಆಂತರಿಕ ಭದ್ರತೆಯ ಅನಿವಾರ್ಯತೆಯ ದೃಷ್ಟಿಯಿಂದ ಅಸ್ಪಷ್ಟ ಗಡಿಯಲ್ಲಿನ ಆಯಕಟ್ಟಿನ ಪ್ರದೇಶಗಳು ಈವರೆಗಿನ ಭಾರತ–ಚೀನಾ ಗಡಿ ವಿವಾದದ ಜ್ವಲಂತತೆಗೆ ಮೂಲ. ಅದೀಗ “ಡೊಕ್ಲಮ್” ಕಾರಣದಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಬೂದಿಮುಚ್ಚಿದ ಕೆಂಡದಂತಿರುವ ಈ ಸರ್ವಋತು ಸಮಸ್ಯೆ 52 ದಿನಗಳ ಬಿಗಿ ಸಂಘರ್ಷಾತ್ಮಕ ವಾತಾವರಣದಿಂದ ಬದಲಾವಣೆಯ ಮುಂದಿನ ದಾರಿಕಾಣದೆ ವಿಚಲಿತವಾಗಿದೆ. -*
ನವೆಂಬರ್ 6, 2016: ಭಾರತೀಯ ಸೇನೆ ಪೂರ್ವ ಲಡಾಕ್‍ನ ಡೆಮ್ಚೊಕ್ ಪ್ರದೇಶದ ಹಳ್ಳಿಗಳ ಜನರಿಗಾಗಿ ನೀರಾವರಿ ಪೈಪ್ಲೈನ್ಗಳನ್ನು ಯಶಸ್ವಿಯಾಗಿ ಅಳವಡಿಸಿತ್ತು. ಈ ಯಶಸ್ಸು ಭಾರತಕ್ಕೆ ಮುಖ್ಯವಾಗಿತ್ತು. ಯಾಕೆಂದರೆ 2014ರ ನಂತರ ಚೀನಾದ ಪೀಪಲ್ ಲಿಬರೇಶನ್ ಆರ್ಮಿ ಎರಡನೇ ಬಾರಿಗೆ ಭಾರತದ ಭೂಪ್ರದೇಶದೊಳಗೆ ದೀರ್ಘವಾಗಿ ಪ್ರವೇಶಿಸಿ ನಮ್ಮದೇ ನೀರಾವರಿ ಯೋಜನೆಯನ್ನು ತೀವ್ರವಾಗಿ ಪ್ರತಿಭಟಿಸಿತ್ತು. ಇದಾಗಿ 17 ದಿನಗಳ ಮುಂಚೆ ಅಂದರೆ ಅಕ್ಟೋಬರ್ 19, 2016ರಂದು ಶಕ್ತಿಶಾಲಿ ಏಷ್ಯಾವನ್ನು ಕಟ್ಟುವ ಉದ್ದೇಶದೊಂದಿಗೆ ಮೊತ್ತ ಮೊದಲ ಬಾರಿಗೆ ಭಾರತ–ಚೀನಾ ಸೇನೆಗಳು ಒಟ್ಟಾಗಿ ಜಮ್ಮು ಕಾಶ್ಮೀರದಲ್ಲಿ ಕವಾಯತು – “ಲಡಾಕ್ ಡ್ರಿಲ್” ನಡೆಸಿದ್ದವು.
ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಭಾರತ ಮತ್ತು ಚೀನಾದ ಸಂಬಂಧ ಸ್ನೇಹ–ಜಗಳಗಳ ಸಂಬಂಧ. ಅದನ್ನೇ ಇತ್ತೀಚೆಗೆ ದಲೈಲಾಮಾ, ನೆಹರೂ ಕಾಲದ 1950ರ ದಶಕದ ಪ್ರಸಿದ್ಧ ಉಕ್ತಿ “ಹಿಂದಿ–ಚೀನೀ ಭಾಯಿ ಭಾಯಿ“ಯನ್ನು ಪುನರುಚ್ಛರಿಸಿ, ಈ ದೇಶಗಳ ನಡುವೆ ಯುದ್ಧವಾಗುವುದಿಲ್ಲ ಎಂದು ಹೇಳಿದ್ದು. 1962ರ ನೇರ ಯುದ್ಧವನ್ನು ಹೊರತುಪಡಿಸಿ 1965ರಲ್ಲೊಮ್ಮೆ ಬಿಟ್ಟರೆ ಈವರೆಗೂ ಗಡಿ ವಿಚಾರವಾಗಿ ಭಾರತ ಮತ್ತು ಚೀನಾದ ನಡುವೆ ಒಂದೇ ಒಂದು ಗುಂಡುಹಾರಿಲ್ಲವೆಂಬುದೇ ಇದಕ್ಕೆ ಸಾಕ್ಷಿ. ಚೀನಾ ತನ್ನ ನೆರೆಹೊರೆಯ ಯಾರನ್ನೂ ನೆಮ್ಮದಿಯಿಂದರಲು ಬಿಡುವುದಿಲ್ಲ. ತನ್ನ ಸುತ್ತಮುತ್ತಲಿನ ಪ್ರತಿಯೊಬ್ಬರೂ ಚೀನಾ ಪ್ರಭುತ್ವವನ್ನು ಒಪ್ಪಿಕೊಳ್ಳಬೇಕೆಂಬುದು ಅದರ ಮಹತ್ವಾಕಾಂಕ್ಷೆ. ಬುದ್ಧರ ಟಿಬೆಟ್ ಮೇಲೆ ಸಾರ್ವಭೌಮತ್ವ ಸಾಧಿಸಿದಂತೆ ಜಪಾನ್, ತೈವಾನ್, ತೈಪೆ, ವಿಯೆಟ್ನಾಂ, ಭೂತಾನ್, ಭಾರತದ ಪ್ರದೇಶಗಳ ಮೇಲೆ. ಅಷ್ಟೇ ಏಕೆ ಯಾವುದೇ ಕಾರಣ ಸಿಗದಿದ್ದಾಗ ಚೀನಾವನ್ನು ಆಳಿದ್ದ ಚೆಂಗೀಸ್ಖಾನ್ ಅಲ್ಲಿಯವನೆಂಬ ಕಾರಣದಿಂದ ಮಂಗೋಲಿಯಾದಂತಹ ಬಡ ದೇಶವನ್ನೂ ಬಿಡುತ್ತಿಲ್ಲ ಈ ಚೀನಾ.
ಅನರ್ಘ್ಯ ಮಿಲಿಟರಿ ಶಕ್ತಿ ಹಾಗೂ ಮಾರುಕಟ್ಟೆಗಳನ್ನು ನಾಶಗೊಳಿಸುವ ಆರ್ಥಿಕ ಏಕಸ್ವಾಮ್ಯದ ಮೂಲಕ ಸಾರ್ವಭೌಮತೆಯನ್ನೇ ತನ್ನ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳತ್ತಲೂ ಸ್ಥಾಪಿಸಿ, ತನ್ನ ದೇಶದ ಭೂಭಾಗವನ್ನು ಇತರೆಡೆಗೂ ವಿಸ್ತರಿಸಿ, ವಿಶಾಲ ಚೀನಾ ಸಾಮ್ರಾಜ್ಯವನ್ನು ಕಟ್ಟಬೇಕೆಂಬ ತೀವ್ರಗಾಮಿ, ವೈಪರಿತ್ಯದ ಹಂಬಲದಿಂದ ಕೂಡಿರುವ ಚೀನಾದ ನಡೆಗಳು ರಾಜಕಾರಣ ಹಾಗೂ ಮಹತ್ವಾಕಾಂಕ್ಷೆ 1930ರ ದಶಕದ ನಾಜಿ ಜರ್ಮನಿ ಹಾಗೂ ಜಪಾನ್ಗಳ ಸರ್ವಾಧಿಕಾರಿ, ಸಾಮ್ರಾಜ್ಯಶಾಹಿ ನಡೆಗಳಷ್ಟೇ ಅಪಾಯಕಾರಿ.
ಭಾರತದ ಉತ್ತರಕ್ಕೆ ಹಿಮಾಲಯದ ಆ ಭಾಗದಲ್ಲಿರುವ ಚೀನಾ ಶಾಂತವಾಗಿ ಕಾದುಕುಳಿತ ಡ್ರ್ಯಾಗನ್. ಈ ಸತ್ಯ ವಿಶ್ವದ ಪ್ರತಿಯೊಬ್ಬರಿಗೂ ಗೊತ್ತಿದೆ. ಕೆಲವರಿಗೆ ಇದು ಗೊತ್ತಿದ್ದರೂ ಒಪ್ಪುವುದು ಕಷ್ಟ. ಅಂಥವರಿಗೆಲ್ಲಾ ಚೀನಾ ಸಾಕುತಂದೆ. ಪಾರಂಪರಿಕವಾಗಿದ್ದಂತೆ ಈಗ ಯಾವುದೇ ದೇಶವನ್ನು ಗೆಲ್ಲುವುದಕ್ಕೆ ಯುದ್ಧವನ್ನೇ ಮಾಡಬೇಕಿಲ್ಲ. ಆರ್ಥಿಕತೆ, ಬೌದ್ಧಿಕ ನಿಗ್ರಹಣ, ಮಾಹಿತಿ ಹಾಗೂ ಸಂಪರ್ಕ ಸೇವೆ, ನದಿಗಳ ನಿಯಂತ್ರಣದ ಮೂಲಕ, ತಂತ್ರಜ್ಞಾನದ ಏಕಸ್ವಾಮ್ಯತೆ, ವ್ಯಾಪಾರ–ವಹಿವಾಟಿನ ಮೂಲಕ (ಕಳಪೆಗುಣಮಟ್ಟದ ಅಗ್ಗದ ಪದಾರ್ಥಗಳ ರಫ್ತು), ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಶಾಲಿ ಸ್ಥಾನದಿಂದ ದಬ್ಬಾಳಿಕೆ ನಡೆಸುವ ಮೂಲಕ (ಪರಮಾಣು ಪೂರೈಕೆದಾರರ ಗುಂಪು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಸೇರಬಾರದೆಂದು ನಡೆಸುವ ಹುನ್ನಾರ), ಇನ್ನೂ ಕೆಳಗಿಳಿದು, ಭಾರತದೊಂದಿಗೆ ಕಳ್ಳಯುದ್ಧದಲ್ಲಿ ತೊಡಗಿರುವ ಪಾಕಿಸ್ತಾನದ ಕ್ರಮಗಳನ್ನು ಪೋಷಿಸುತ್ತಾ ಭಾರತದ ವಿರುದ್ಧ ಅದು ನಡೆಸುತ್ತಿರುವ ವಿನಾಶಕಾರಿ ಯುದ್ಧಕ್ಕೆ ಪರೋಕ್ಷ ಬೆಂಬಲ ನೀಡುವ ಚಾಣಾಕ್ಯನ “ಶತ್ರುವಿನ ಶತ್ರು ಮಿತ್ರ” ಎಂಬ ನೀತಿ. ಚೀನಾ–ಪಾಕಿಸ್ತಾನ ಕಾರಿಡಾರ್, ಒಂದು ರಸ್ತೆ ಒಂದು ಬೆಲ್ಟ್, ಮಿಲಿಟರಿ ಹಣಕಾಸು ನೆರವು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಇತ್ಯಾದಿ ನೆರವು ನೀಡುವ ಮುಖವಾಡದ ಮೂಲಕ ಚೀನಾ ಪಾಕಿಸ್ತಾನದ ಪರಮಮಿತ್ರವಾಗಿದೆ. ಒಮ್ಮೆ ಚರಿತ್ರೆಯ ಪುಟವನ್ನು ತೆಗೆದು ನೋಡಿ. ಕಾರ್ಗಿಲ್ ಕದನ ಆರಂಭವಾಗುವ ಹೊತ್ತಿಗೆ ಪಾಕಿಸ್ತಾನದ ಜನರಲ್ ಪರ್ವೆಜ್ ಮುಷರಫ್ ಎಲ್ಲಿದ್ದರು? ಚೀನಾದಲ್ಲಿ!
ಚೀನಾದ ಈ ಗತಿಶೀಲ ನಡೆಗಳನೆಲ್ಲ ವಿರೋಧಿಸುತ್ತಿರುವ ಏಕೈಕ ದೇಶ ಭಾರತ. ಒಂದು ರಸ್ತೆ ಒಂದು ಬೆಲ್ಟ್ ಯೋಜನೆಯ ಕುರಿತು ಮೊದಲಿಗೆ ಸಂಶಯದ ಧ್ವನಿಯೆತ್ತಿದ್ದು ಭಾರತ. ಭಾರತ ಮತ್ತು ಭೂತಾನ್ ಈ ಯೋಜನೆಯಿಂದ ದೂರ ಉಳಿದವು. ಶ್ರೀಲಂಕಾದ ಹಂಬಂಟೋಟ ಬಂದರಿನ ಮೂಲಕ ಭಾರತವನ್ನೂ, ಹಿಂದೂ ಮಹಾಸಾಗರವನ್ನು ಎಲ್ಲ ರೀತಿಯಿಂದಲೂ ನಿಯಂತ್ರಿಸಬೇಕೆಂಬ ಹಂಬಲಕ್ಕೆ ತಣ್ಣೀರೆರೆಚುತ್ತಿರುವುದು ಭಾರತ. ಶ್ರೀಲಂಕಾದ ಹಿಂದಿನ ರಾಷ್ಟ್ರಪತಿ ಮಹಿಂದಾ ರಾಜಪಕ್ಸೆ ಚೀನಾದೆಡೆ ವಾಲಿದಾಗ ಮೈತ್ರಿಪಾಲ ಶಿರಿಸೇನಾ ಶ್ರೀಲಂಕಾದ ರಾಷ್ಟ್ರಪತಿಯಾಗುವಂತೆ ಮಾಡಿದ್ದು ಭಾರತ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮಾಲ್ಡೀವ್ಸ್ಗೆ ತೆರಳಿ ಅಸಂಖ್ಯ ಪ್ರಮಾಣದಲ್ಲಿ ನೀರನ್ನು ಒದಗಿಸಿದರೂ ಮಾಲ್ಡಿವ್ಸ್ ದೇಶಕ್ಕೆ ಭಾರತವೇ ಮೊದಲ ಗೆಳೆಯ ಎಂಬಂತಹ ವಾತಾವರಣವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಚೀನಾದ ಯೋಜನೆಗಳನ್ನು ಸ್ವಾಗತಿಸುತ್ತಿದ್ದ ಮಾಲ್ಡಿವ್ಸ್ನಲ್ಲಿ ಅಧಿಕಾರ ಬದಲಾಗಲು ಭಾರತ ಕಾರಣ. ಬಾಂಗ್ಲಾದೇಶದ ಅವಾಮಿ ಲೀಗ್‍ನ ಶೇಖ್‍ಹಸೀನ ಸರಕಾರ ಚೀನಾದಿಂದ ಸಮಾನ ಅಂತರ ಕಾಯ್ದುಕೊಳ್ಳುವಲ್ಲಿ ಭಾರತದ ಪಾಲು ಅಪಾರ. ಇಂತಹ ಅನೇಕ ಕಡೆಗಳಲ್ಲಿ ಭಾರತದ ಮಧ್ಯಸ್ಥಿಕೆಯಿಂದಲೋ, ಪ್ರತ್ಯಕ್ಷ ಅಥವಾ ಪರೋಕ್ಷ ಪಾಲ್ಗೊಳ್ಳುವಿಕೆಯಿಂದಲೋ ಚೀನಾದ ಮಹತ್ವಾಕಾಂಕ್ಷೆಗಳಿಗೆ ಭಾರತ ತಡೆಯೊಡ್ಡುತ್ತಿದೆ. ಇಲ್ಲೆಲ್ಲ ಭಾರತ ದೊಡ್ಡಣ್ಣನ ನೀತಿಯನ್ನು ಪಾಲಿಸುತ್ತಿಲ್ಲ. ಬದಲಾಗಿ ಪ್ರಾದೇಶಿಕ ಸಹಕಾರ, ಒಗ್ಗಟ್ಟು ಹಾಗೂ ಪರಸ್ಪರ ಮೈತ್ರಿಯ ನಂಬಿಕೆಯ ಮೇಲೆ ಭಾರತ ದಕ್ಷಿಣ ಏಷ್ಯಾದಲ್ಲಿ ಮಾರ್ಗದರ್ಶಕ ದೇಶವಾಗಿ ಬೆಳೆದಿದೆ. ಪಾಕಿಸ್ತಾನವನ್ನು ಹೊರತುಪಡಿಸಿದರೆ ಬಹುತೇಕ ಎಲ್ಲಾ ದೇಶಗಳು ಭಾರತವನ್ನೇ ಅನುಸರಿಸುತ್ತವೆ. ಈ ಎಲ್ಲಾ ಕಾರಣಗಳಿಂದ, ಚೀನಾ ಏಷ್ಯಾದ ಏಕಮೇವಾದ್ವಿತಿಯ ಸೂಪರ್ ಪವರ್ ಆಗುವ ಮುನ್ನ ಭಾರತ ಶಕ್ತಿಯುತವಾಗಿರುವುದು ಅದಕ್ಕೆ ಸಹಿಸಲಸಾಧ್ಯ.
ಆದರೆ ಭಾರತ ಎಲ್ಲ ವಿಧವಾದ ಸವಾಲುಗಳಿಗೂ ತೆರೆದುಕೊಳ್ಳುವ ಆದರೆ ಅಷ್ಟೇ ಕಠಿಣ ಸಾಧನೆಯಿಂದ ಆ ಸಮಸ್ಯೆಗಳಿಂದ ಹೊರಬರುವ ದೇಶ ಎಂಬುದು ಚೀನಾದ ಅರಿವಿಗೆ ಬಂದಿದೆ. ಹಾಗಾಗಿಯೇ ಭಾರತದ ಮೇಲೆ ಅಂದರೆ ಆಯಕಟ್ಟಿನ ಪ್ರದೇಶದಿಂದಲೇ ಭಾರತದ ಶಕ್ತಿಯ ಮೂಲಗಳನ್ನು ನಿಯಂತ್ರಿಸುವ ಹುನ್ನಾರ ಅದರದ್ದು. ಇದಕ್ಕೆ ಬ್ರಹ್ಮಪುತ್ರ ನದಿಗೆ ಕಟ್ಟುತ್ತಿರುವ ಸಾಲು ಸಾಲು ಅಣೆಕಟ್ಟೆಗಳು ಒಂದು ಸಣ್ಣ ಉದಾಹರಣೆ ಅಷ್ಟೇ. ಅದೇ ರೀತಿ ಭಾರತಕ್ಕೆ ಅತ್ಯಂತ ಪ್ರಮುಖವಾಗಿರುವ ಚುಂಬಿ ಕಣಿವೆಯನ್ನು ಕತ್ತರಿಸುವುದು. ಡೊಕ್ಲಮ್ ಪ್ರಸ್ಥಭೂಮಿಯಲ್ಲಿ ಸರ್ವಋತು ರಸ್ತೆ ನಿರ್ಮಿಸಿ ಅದರ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದು ಅಂದರೆ ಸ್ವತಃ ಭೂತಾನ್ ಹಾಗೂ ನೇರವಾಗಿ ನಮ್ಮ ದೇಶದ ಮುಖ್ಯಭೂಮಿ ಹಾಗೂ ಸಪ್ತ ಸೋದರಿ ಈಶಾನ್ಯ ರಾಜ್ಯಗಳನ್ನು ಬೆಸೆಯುವ “ಕೋಳಿಯ ಕತ್ತಿನಂತಿರುವ (ಚಿಕನ್ ನೆಕ್) ಸಿಲಿಗುರಿ ಕಾರಿಡಾರ್” ರಸ್ತೆ ಸಂಪರ್ಕದ ಮೇಲೆ ಪ್ರತ್ಯಕ್ಷ ಹಿಡಿತ ಸಾಧಿಸುವುದು ಅದರ ಮೂಲ ಉದ್ದೇಶ. ಇದರಿಂದ ಯಾವುದೇ ಕ್ಷಣದಲ್ಲಾದರೂ ಭಾರತವನ್ನು ಆರ್ಥಿಕ ಹಾಗೂ ಮಿಲಿಟರಿ ನೆಲೆಯಲ್ಲಿ ನಿಯಂತ್ರಣದಲ್ಲಿಡಬಹುದೆಂಬ ದುರಾಲೋಚನೆ ಅದರದ್ದು. ಅಸಲಿಗೆ ಡೊಕ್ಲಮ್ ಅದಕ್ಕೊಂದು ಕಾರಣವಷ್ಟೇ. ಭಾರತಕ್ಕೆ ಬಹುಮುಖ್ಯವಾದ ಟಿಬೆಟ್ನಿಂದ ಸಿಕ್ಕಿಂನೊಳಗೆ ಇಳಿದಿರುವ “ಚುಂಬಿ ಕಣಿವೆ“ಯ ಮೇಲಿನ ಹಿಡಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಅದರ ಮತ್ತೊಂದು ಉದ್ದೇಶ. ಹಾಗಾಗಿಯೇ ಅದು ಡೊಕ್ಲಮ್ ನೆಪದಲ್ಲಿ ಮಾನಸ ಸರೋವರಕ್ಕೆ ತೆರಳಲು ಇದ್ದ ಸರಳ ರಸ್ತೆ ಮಾರ್ಗ ಸಿಕ್ಕಿಂನಿಂದ ಹಾದು ಹೋಗುವ “ನಾಥುಲಾ” ಕಣಿವೆಯನ್ನು ಮುಚ್ಚಿದ್ದು.
ಇವೆಲ್ಲವೂ ಚೀನಾ ದೇಶವನ್ನು ಅದರ ಉತ್ಪನ್ನಗಳಂತೆಯೇ ಎಂದಿಗೂ ನಂಬಲರ್ಹವಲ್ಲದ ಮಿತ್ರನನ್ನಾಗಿಸಿದೆ. “ಮೈಟ್ ಈಸ್ ರೈಟ್” ಅಂದರೆ ನಾನು ಮಾಡಿದ್ದೆಲ್ಲವೂ ಸರಿ ಅಥವಾ ನಾನಷ್ಟೇ ಸರಿ ಎಂಬ ಚೀನಾದ ಅಹಂಕಾರದ ಧೋರಣೆಯ ಬಗ್ಗೆ ದಕ್ಷಿಣ ಏಷ್ಯಾ ಹಾಗೂ ಆಗ್ನೇಯ ಏಷ್ಯಾದ ಎಲ್ಲಾ ದೇಶಗಳಿಗೂ ತಿಳಿದಿದೆ. ಜಪಾನ್, ಫಿಲಿಪೈನ್ಸ್, ವಿಯೆಟ್ನಾಂ ದೇಶಗಳು ಫೆಸಿಫಿಕ್ ಮಹಾಸಾಗರದ ಪೂರ್ವ ಚೀನಾ ಸಮುದ್ರ ಹಾಗೂ ದಕ್ಷಿಣ ಚೀನಾ ಸಮುದ್ರದೊಳಗಿನ ಅಂತರಾಷ್ಟ್ರೀಯ ಜಲ (ಅಥವಾ ಸಾಗರದಲ್ಲಿನ ಅಂತರಾಷ್ಟ್ರೀಯ “ಮೀಸಲು ಆರ್ಥಿಕ ವಲಯ“. ಇದು ದೇಶದ ಭೂಪ್ರದೇಶದಿಂದ 200 ನಾಟಿಕಲ್ ಮೈಲುಗಳನ್ನು ದಾಟಿದ ಜಲಭಾಗ.) ಹಾಗೂ ತಮ್ಮದೇ ದೇಶದ ಜಲಭಾಗದ ಹಕ್ಕಿಗಾಗಿ (12 ನಾಟಿಕಲ್ ಮೈಲುಗಳು) ನ್ಯಾಯಯುತ ಹೋರಾಟ ಮಾಡುತ್ತಿವೆ. ಕಳೆದ ವರ್ಷ ಅಂತಾರಾಷ್ಟ್ರೀಯ ನ್ಯಾಯಾಲಯ “10 ಡ್ಯಾಶ್ ಗೆರೆಯ” ಸಾಗರ ಪ್ರದೇಶ ಹಾಗೂ ಅಲ್ಲಿನ ದ್ವೀಪ ಪ್ರದೇಶಗಳು ಚೀನಾ ದೇಶಕ್ಕೆ ಸೇರಿಲ್ಲ ಎಂಬ ಆದೇಶ ನೀಡಿದೆ. ಆ ಆದೇಶವನ್ನೂ ಚೀನಾ ಒಪ್ಪುತ್ತಿಲ್ಲ. ಯಾಕೆಂದರೆ ಯಾವಾಗಲೂ ಚೀನಾ ಹೇಳುವುದು ಮತ್ತು ಮಾಡಿದ್ದೆಲ್ಲವೂ ಸರಿ ಎಂಬ ಹುಂಬ ಧೋರಣೆ.
ಭೂತಾನ, ನೇಪಾಳ, ಮಂಗೋಲಿಯಾ, ಲಾವೊಸ್, ತಜಕಿಸ್ತಾನ, ವಿಯೆಟ್ನಾಂನಂತಹ, ಸ್ವಾಯತ್ತತೆ, ಭದ್ರತೆ ಮತ್ತು ಪ್ರಾದೇಶಿಕ ಸದೃಢತೆಗಾಗಿ ತವಕಿಸುತ್ತಿರುವ ಸಣ್ಣ ಸಾರ್ವಭೌಮ ದೇಶಗಳಿಗೂ ಈ ಬಗ್ಗೆ ಅಪಾರ ಆತಂಕವಿದೆ. ಪೋರ್ಚುಗೀಸರ ವಸಾಹತು “ಮಕಾವೊ” ಮತ್ತು ಬ್ರಿಟೀಷರ ವಸಾಹತುವಾಗಿದ್ದ “ಹಾಂಗ್‍ಕಾಂಗ್“ನ ಜನತೆ ತಮ್ಮ ಸ್ವಾತಂತ್ರ್ಯಕ್ಕಾಗಿ ಬೇಡಿಕೆ ಇಡದ ಸಂದರ್ಭವೇ ಇಲ್ಲ. ಅಲ್ಲಿ ಚೀನಾ ಸ್ವಾಯತ್ತ ಆಡಳಿತಕ್ಕೆ ಅವಕಾಶ ಮಾಡಿಕೊಟ್ಟಿದ್ದರೂ, ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯದ ಭಿನ್ನ ಕೂಗುಗಳನ್ನು ನಿರಂತರವಾಗಿ ಹತ್ತಿಕ್ಕುತ್ತಾ ಬಂದಿದೆ. ಈ ಎರಡೂ ಪ್ರಾಂತ್ರ್ಯಗಳಲ್ಲಿ ವಸಾಹತು ಪೋಷಕ ದೇಶಗಳೊಂದಿಗೆ ಚೀನಾ ಮಾಡಿಕೊಂಡಿರುವ ಒಪ್ಪಂದ 2047ರಲ್ಲಿ ಕೊನೆಯಾಗಲಿದೆ. ಒಪ್ಪಂದದ ಅವಧಿಯ ತುವಾಯವೂ ಎರಡೂ ಭೂಭಾಗಗಳ ಸ್ವತಂತ್ರ ಅಸ್ಮಿತೆ ಎಂಬ ಮರಿಚಿಕೆ ಮುರುಟಿಹೋಗಲಿದೆ. ಯಾಕೆಂದರೆ ಒಪ್ಪಂದದ ಅವಧಿಯ ನಂತರ ಅವುಗಳ ಭವಿಷ್ಯದ ಬಗೆಗೆ ಯಾವುದೇ ಸ್ಪಷ್ಟ ಚಿತ್ರಣವನ್ನು ಎಲ್ಲೂ ನೀಡಲಾಗಿಲ್ಲ. ಮಕಾವೊ, ಹಾಂಗ್ಕಾಂಗ್ಗಳನ್ನು ಚೀನಾದ ಸಾರ್ವಭೌಮತೆಯಡಿಯಲ್ಲಿ ಶಾಶ್ವತವಾಗಿ ತರಬೇಕೆನ್ನುವುದು ಚೀನಾದ ದೂರದೃಷ್ಟಿ ಯೋಜನೆ. ಅಂತರಾಷ್ಟ್ರೀಯ ಮಟ್ಟದ ಇಂತಹ ಅನೇಕ ದೌರ್ಜನ್ಯ, ದಬ್ಬಾಳಿಕೆಗಳನ್ನು ಸಹಿಸಿಕೊಂಡು ಬರುತ್ತಿರುವ ಯಾವ ದೇಶಗಳೂ ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಬಹುದೊಡ್ಡ ಶಕ್ತಿಯಾದ ಚೀನಾದ ನಡೆಗಳನ್ನು ಅಲ್ಲಲ್ಲಿ ರಾಜತಾಂತ್ರಿಕ ಮಾಧ್ಯಮಗಳ ಮುಖೇನ ಪ್ರತಿಭಟಿಸಿರುವುದು ಬಿಟ್ಟರೆ, ದೈತ್ಯ ದೇಶವನ್ನು ಎದುರಿಸಿ ನಿಲ್ಲುವ ಸಾಹಸಿಕ ಪ್ರಯತ್ನವನ್ನು ಮಾಡಲಾಗಲಿಲ್ಲ. ಇದು ನಯವಂಚಕ ಚೀನಾ ರಾಜತಾಂತ್ರಿಕತೆ.
ಅಷ್ಟೇ ಏಕೆ 1962ರಲ್ಲಿ ಜವಹರಲಾಲ್ ನೆಹರೂ ಚೀನಾವನ್ನು ಸೋದರ ದೇಶವೆಂದು ಹಾಡಿಹೊಗಳಿ ಕುಣಿಯುತ್ತಿದ್ದಾಗ ಅದು ಅವರನ್ನು ಅಚಾನಕ್ಕಾಗಿ ಶೀರ್ಷಾಸನ ಹಾಕುವಂತೆ ಮಾಡಿತ್ತು. ರಾತ್ರೋ ರಾತ್ರಿ ಯಾರೂ ನಂಬಲು ಸಾಧ್ಯವಿಲ್ಲದಂತೆ ಅರುಣಾಚಲ ಪ್ರದೇಶವನ್ನು ಹೊಕ್ಕಿತ್ತು. ಇದು ನೆಹರೂ ಕಾಲದ ಭ್ರಮನಿರಸನದಲ್ಲೊಂದಾದ, ಅವರೂ ಇನ್ನಿಲ್ಲದಂತೆ ನಂಬಿ ಮೋಸ ಹೋಗಿದ್ದ ನೆರೆಯ ಚೀನಾದ ಕಥೆ. ಪ್ರಾಯಶಃ ಆ “ನಂಬಿಕೆ ದ್ರೋಹದ?” ಖಿನ್ನತೆಯೇ ಅವರ ಸಾವಿಗೆ ಪರೋಕ್ಷ ಕಾರಣವಾಯಿತು.
ಭಾರತ–ಚೀನಾದ ಗಡಿ ಸಮಸ್ಯೆ ಇಂದು–ನಿನ್ನೆಯ ಕಥೆಯಲ್ಲ. ಆದ್ದರಿಂದಲೇ ಪ್ರಾರಂಭದಿಂದಲೂ ವಿದೇಶಿ ರಾಜತಾಂತ್ರಿಕ ತಜ್ಞರಿಗೆ ಚೀನಾದ “ಡೊಕ್ಲಮ್ ಸವಾಲು” ಗಂಭೀರವಾದ ಸಮಸ್ಯೆಯಾಗಿ ತೋರಲಿಲ್ಲ. ನಿರಂತರವಾಗಿ ಚೀನಾ ಭಾರತದ ಗಡಿಯೊಳಕ್ಕೆ ಬರುವುದು, ಚಳಿಗಾಲದ ಹೊತ್ತಿಗೆ ಭಾರತ ಅವರ ಗಡಿಯನ್ನು ಹೊಕ್ಕುವ ವರದಿಗಳು ಸದ್ದುಮಾಡುತ್ತಿರುತ್ತವೆ. ಉದಾಹರಣೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭಾರತ ಪ್ರವಾಸದಲ್ಲಿದ್ದ ಸಮಯದಲ್ಲೂ ಚೀನಾ ಸೇನೆ ಭಾರತದ ಭೂಭಾಗವನ್ನು ಹೊಕ್ಕಿತ್ತು. ಆಗೆಲ್ಲ ರಾಜತಾಂತ್ರಿಕ ಮಾರ್ಗದ ಮೂಲಕ ಶಾಂತವಾಗಿಯೇ ಆದರೆ ಕಠಿಣ ಪದಗಳಲ್ಲಿ ಪ್ರತಿಭಟಿಸುತ್ತಿತ್ತು. ಆದರೆ ಈ ಬಾರಿ ದೇಶದ ಆಂತರಿಕ ಭದ್ರತೆ, ಸ್ವಾಯತ್ತತೆ ಹಾಗೂ ತನ್ನನ್ನು ನೆಚ್ಚಿರುವ ಭೂತಾನ್ ಅಸ್ಮಿತೆಯ ಮತ್ತು ಸಿಕ್ಕಿಂನ ಅಸ್ತಿತ್ವಕ್ಕೆ ಮುಂಬರಬಹುದಾದ ಕುತ್ತನ್ನು ಗುರುತಿಸಿದ ಭಾರತ, ಡೊಕ್ಲಮ್ನಲ್ಲಿ ಭುತಾನದೊಂದಿಗಿನ ದ್ವಿಪಕ್ಷೀಯ ರಕ್ಷಣಾ ಒಪ್ಪಂದದಂತೆ ತನ್ನ ಸ್ಥಾನದಲ್ಲಿ ಅಚಲವಾಗಿ ನಿಂತಿತು. ಚೀನಾದ ಪೀಪಲ್ ಲಿಬರೇಶನ್ ಆರ್ಮಿ(ಪಿ.ಎಲ್.ಎ) ರಸ್ತೆಯ ನಿರ್ಮಾಣಕ್ಕೆ ಡೊಕ್ಲಮ್ ಹೊಕ್ಕಾಗ ಅದನ್ನು ಮೊದಲಿಗೆ ವಿರೋಧಿಸಿದ್ದು ಅಲ್ಲಿದ್ದ ಭೂತಾನ್ ಸೇನೆ. ಆದರೆ ಚೀನಾ ಅವರನ್ನು ಹಿಮ್ಮೆಟ್ಟಿಸಿ ನಿಂತಾಗ, ಭೂತಾನ್ ಬೆಂಬಲಕ್ಕೆ ಬಂದಿದ್ದು ಭಾರತೀಯ ಸೇನೆ. ಆಗಲೇ ನೋಡಿ ಡೊಕ್ಲಮ್ನಲ್ಲಿ ಚೀನಾದ ಮಹತ್ವಾಕಾಂಕ್ಷೆಯ ಗಡಿವಿಸ್ತರಣಾ ಯೋಜನೆಗೆ ತಣ್ಣೀರು ಬಿದ್ದಂತಾಗಿದ್ದು.
ಪ್ರಾರಂಭದ ವರ್ಷಗಳಲ್ಲಿ ಬ್ರಿಟಿಷರು ಗುರುತಿಸಿದ್ದ ಭಾರತ–ಚೀನಾ ನಡುವಿನ “ಮ್ಯಾಕ್ ಮೋಹನ್” ಗಡಿಯನ್ನು ಒಪ್ಪಿದ್ದ ಚೀನಾ, ನಂತರದ ವರ್ಷಗಳಲ್ಲಿ ಅದಕ್ಕೆ ತನ್ನ ಒಪ್ಪಿಗೆಯಿಲ್ಲ ಎಂಬ ವರಸೆಯನ್ನು ಮುಂದಿಡುತ್ತಾ ಬಂದಿದೆ. 1890ರ ಬ್ರಿಟಿಶ್ ಆಳ್ವಿಕೆಯ ಭಾರತ–ಚೀನಾ ನಡುವಿನ “ಟಿಬೆಟ್–ಸಿಕ್ಕಿಂ” ಒಪ್ಪಂದ ಭೂತಾನ್‍ಗೂ ವಿಸ್ತರಣೆಯಾಗುತ್ತದೆ ಎಂಬ ಹೊಸ ಹುರುಳಿಲ್ಲದ ವಾದವನ್ನು ಮುಂದಿಟ್ಟಿದೆ. ವಾಸ್ತವದಲ್ಲಿ 1890ರ ಈ ಗಡಿ ಒಪ್ಪಂದದಲ್ಲಿ ಸಿಕ್ಕಿಂ ಹಾಗೂ ಭೂತಾನ್‍ಗಳು ಈ ಒಪ್ಪಂದದಲ್ಲಿ ಪಾಲುದಾರರೇ ಅಲ್ಲ! ಚೀನಾ ಬಹಳ ಪ್ರಜ್ಞಾಪೂರ್ವಕವಾಗಿ ಈ ಸತ್ಯ ಸಂಗತಿಗಳನ್ನು ತಿರುಚುವ ಕೆಲಸ ಮಾಡುತ್ತಿದೆ. ಇದಕ್ಕೊಂದು ಸಾಕ್ಷಿ, 1959ರಲ್ಲಿ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ತಮ್ಮ “ಸೋದರ ಸಂಬಂಧಿ ದೇಶ!” ಪೀಪಲ್ ರಿಪಬ್ಲಿಕ್ ಆಫ್ ಚೀನಾದ ಮೊದಲ ಪ್ರಧಾನಿ ಚೌಎನ್ಲೆಗೆ ಆಪ್ತವಾಗಿ ಬರೆದಿರುವ ಪತ್ರದ ದಾಖಲೆ. ಇದರಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿರುವಂತೆ, “ಸಿಕ್ಕಿಂ ಮತ್ತು ಟಿಬೆಟ್ ಗಡಿಗಳ ಸಮಸ್ಯೆ ಪರಿಹಾರವಾಗಿರುದನ್ನು ಒಪ್ಪಲಾಗಿದೆ. ಮತ್ತು ಭಾರತ–ಭೂತಾನ್–ಚೀನಾ ಈ ಮೂರು ದೇಶಗಳ ತ್ರಿಕೋನ ಪ್ರದೇಶದ ಆಯಕಟ್ಟಿನ ಗಡಿ ಗೊಂದಲವನ್ನು ಮಾತುಕತೆಯ ಮೂಲಕ ಬಗೆಹರಿಸಲು ತೀರ್ಮಾನಿಸಲಾಗಿದೆ ಹಾಗೂ ಅಲ್ಲಿಯವರೆಗೂ ಈಗಿನ ತಟಸ್ಥ ನಿಲುವನ್ನೇ ಕಾದಿರಿಸಲು ಎರಡೂ ದೇಶಗಳು ಒಪ್ಪಿವೆ“.
ಇಷ್ಟೇ ಅಲ್ಲದೆ ಚೀನಾ ಬಹಳ ಬುದ್ಧಿವಂತರಂತೆ 2006ರ ಎರಡೂ ದೇಶಗಳ “ಸ್ಪೆಶಲ್ ರೆಪ್ರಸಂಟೇಟಿವ್” (ಗಡಿ ಗೊಂದಲವನ್ನು ಮಾತುಕತೆಯ ಮೂಲಕ ಪರಿಹರಿಸಲು ಎರಡೂ ದೇಶಗಳಿಂದ ನೇಮಕಗೊಂಡ ವಿಶೇಷ ಪ್ರತಿನಿಧಿಗಳು) ಮಾತುಕತೆಯನ್ನೇ ಮುನ್ನೆಲೆಗೆ ತಂದು ಡೊಕ್ಲಮ್ ಮೇಲಿನ ತನ್ನ ಅನಧಿಕೃತ, ಕಾನೂನುಬಾಹಿರ ಅಧಿಕಾರದ ಹಕ್ಕನ್ನು ಸಮರ್ಥಿಸುತ್ತಿದೆ. ಆದರೆ ಈ ನಡೆಯಲ್ಲಿ ಚೀನಾ 2012ರ ಎರಡೂ ದೇಶಗಳ “ಸ್ಪೆಶಲ್ ರೆಪ್ರಸಂಟೇಟಿವ್“ಗಳ ಒಪ್ಪಂದವನ್ನು ಮರೆತಿರುವಂತೆ ಸುಳ್ಳನ್ನು ಸಾರುತ್ತಿದೆ. 2012ರಲ್ಲಿ ಎರಡೂ ದೇಶದ ಅಧಿಕೃತ ಪ್ರತಿನಿಧಿಗಳು ಒಪ್ಪಿರುವಂತೆ “ತ್ರಿವಳಿ ದೇಶಗಳ ನಡುವಿನ ಸಂಗಮ ಸ್ಥಾನ (ಜಂಕ್ಷನ್)ನಲ್ಲಿನ ಗಡಿಯ ಗೊಂದಲವನ್ನು ಮಾತುಕತೆಯ ಮೂಲಕವೇ ಪರಿಹರಿಸಲಾಗುವುದು. ಈ ಮಾತುಕತೆಯ ಸಂಧಾನ ಪ್ರಕ್ರಿಯೆಯಲ್ಲಿ ಮೂರನೇ ಕಕ್ಷಿದಾರ ರಾಷ್ಟ್ರ ಭೂತಾನವನ್ನೂ ಸೇರಿಸಿಕೊಳ್ಳಲಾಗುವುದು. ಅಲ್ಲಿಯವರೆಗೂ ಕಡ್ಡಾಯವಾಗಿ ಈ ಮೊದಲು ಜಾರಿಯಲ್ಲಿರುವ ತಟಸ್ಥತೆಯನ್ನೇ ಕಾಯ್ದಿರಿಸಿಕೊಳ್ಳಬೇಕು” ಎಂಬುದಾಗಿ ದಾಖಲಿಸಲಾಗಿದೆ. ಅಂದರೆ ಸರಳ ಭಾಷೆಯಲ್ಲಿ ತನಗೆ ಮಾತ್ರ ಲಾಭವಾಗುವ ಏಕಮುಖಿಯಾದ “ಸೆಲೆಕ್ಟಿವ್ ಸತ್ಯ“ದ ಮೂಲಕ ವಾದಕಟ್ಟುವ ಪ್ರತಿಭೆಯನ್ನು ಕಮ್ಯುನಿಷ್ಟ್ ಚೀನಾದ ಮೂಲಕ ಮಾತ್ರ ಕಲಿಯಲು ಸಾಧ್ಯ. ಇತಿಹಾಸದ ದಾಖಲೆಗಳನ್ನೇ ದಾರಿತಪ್ಪಿಸುವಂತೆ ಸುಳ್ಳುಗಳ ಕಟ್ಟುಕತೆಯನ್ನು ಅದೇ ಪರಮ ಸತ್ಯವೆಂದು ಸಾರುತ್ತಿದೆ. ಒಂದು ಕಡೆಯಿಂದ ವಿಶೇಷ ಪ್ರತಿನಿಧಿಗಳ ಮೂಲಕ ಶಾಂತಿಯ ಮಾತುಕತೆ. ಇನ್ನೊಂದೆಡೆ ತ್ರಿವಳಿ ದೇಶಗಳ ಸಂಕೀರ್ಣ ಗಡಿಪ್ರದೇಶ ತನ್ನದೇ ಹಿಡಿತದಲ್ಲಿರಬೇಕು ಎಂಬ ಆಶಯದಿಂದ “ಡೊಕ್ಲಮ್” ತನಗೆ ಸೇರಿದ್ದು, ಇದನ್ನು ಭೂತಾನ್ ಒಪ್ಪಬೇಕು ಎಂದು ಚೀನಾ–ಭೂತನ್ ನಡುವೆ ನಡೆದಿರುವ 24 ಸುತ್ತುಗಳ ದ್ವಿಪಕ್ಷೀಯ ಮಾತುಕತೆಗಳಲ್ಲಿ ಅನೇಕ ಬಾರಿ ಪ್ರಸ್ತಾಪಿಸುತ್ತಲೇ ಇದೆ. ಪ್ರತೀ ಬಾರಿ ಭಾರತದೊಂದಿಗಿನ ತನ್ನ ಮೈತ್ರಿಯ ಹಿತಾಸಕ್ತಿಯ ಕಾರಣದಿಂದ ಭೂತನ್, ಚೀನಾದ ಹಿತಾಸಕ್ತಿಯನ್ನು ನಿರಾಕರಿಸುತ್ತಲೇ ಬಂದಿದೆ. ಇದರಿಂದ ಹತಾಶಗೊಂಡ ಚೀನಾ, “ಡೊಕ್ಲಮ್ ಚೀನಾದ ಪ್ರದೇಶ ಎಂಬುದನ್ನು ಭೂತಾನ್ ಒಪ್ಪಿಕೊಂಡಿದೆ” ಎಂಬ ಹಸಿ ಸುಳ್ಳನ್ನು ಹೇಳುತ್ತಿದೆ. ಆದರೆ ಇದೇ ಮೊದಲಬಾರಿ ಭೂತಾನ್ ಅಂತಹ ಯಾವುದೇ ಒಪ್ಪಿಗೆಯನ್ನು ಚೀನಾಕ್ಕೆ ನೀಡಿಲ್ಲ ಎಂಬ ಸತ್ಯವನ್ನು ವಿಶ್ವದ ಮುಂದೆ ತೆರೆದಿಟ್ಟಿದೆ.
ಇಂದಿನ ಚಿಂತೆಯ ವಿಷಯವಾಗಿರುವ “ಡೊಕ್ಲಮ್” ಭೂತಾನದ ಭೂಭಾಗವೆಂದು ಗೊತ್ತಿದ್ದರೂ ಅದು ತನ್ನದೇ ಭೂಭಾಗವೆಂದು ಅಲ್ಲಿ ರಸ್ತೆ ನಿರ್ಮಿಸಿ, ರೈಲ್ವೆ ಸಂಪರ್ಕವನ್ನು ಸ್ಥಾಪಿಸಿ, 21ನೇ ಶತಮಾನದ “ಒಂದು ರಸ್ತೆ–ಒಂದು ಬೆಲ್ಟ್ ಯೋಜನೆ“ಗೆ ಪೂರಕವಾಗುವಂತೆ ತನ್ನ ಸಾರ್ವಭೌಮತೆಯನ್ನು ಮೆರೆಯಲು ಹೊರಟಿದೆ. ಹಿಂದೆ ಟಿಬೆಟ್ ಅನ್ನು ಹೇಗೆ ಕಬಳಿಸಿತ್ತೋ ಅದೇ ರೀತಿ ಡೊಕ್ಲಮ್ ಪ್ರದೇಶವನ್ನು ತನ್ನ ಸುಪರ್ದಿಗೆ ತಂದುಕೊಳ್ಳುವ ಸರಳ ಹುನ್ನಾರ ನೀತಿಯಿದು. ನಂಬಿಕೆ ಎನ್ನುವುದು ಚೀನಾಕ್ಕೆ ತನ್ನ ಗುರಿಸಾಧನೆಯ ಮಾರ್ಗವಷ್ಟೇ. ಅಪನಂಬಿಕೆ ಅದರ ಮೂಲ ಧರ್ಮ. ಕರಗುತ್ತಿರುವ ಆರ್ಥಿಕತೆ ಹಾಗೂ ಹೊಸ ಚಿಂತನೆಯ ಸಾಮಾಜಿಕ ಪಲ್ಲಟದ ಜೊತೆಗೆ ಈ ಸಾಮ್ರಾಜ್ಯಶಾಹಿ ಅಹಂಕಾರವೇ ಅದನ್ನು ಅಧಃಪತನದತ್ತ ಕೊಂಡೊಯ್ಯಲಿದೆ. ಇದನ್ನು ಮಣಿಸಲು ಚೀನಾದೊಳಗೆ ಮತ್ತೊಂದು ಕ್ರಾಂತಿಕಾರಕ ಸಾಂಸ್ಕೃತಿಕ ಚಳುವಳಿಯಾಗಬೇಕಿದೆ. ಇದಕ್ಕೆ ಪೂರಕವೆಂಬಂತೆ ಚೀನಾದಲ್ಲಿ ಈಗ ಮತ್ತೊಮ್ಮೆ ಕನ್ಫ್ಯೂಶಿಯಸ್ ಪ್ರಜ್ಞೆ ಪ್ರಬಲವಾಗಿ ಜಾಗೃತವಾಗತೊಡಗಿದೆ.