Featured ಅಂಕಣ

ಕ್ವಿಟ್ ಇಂಡಿಯಾ ಕತೆ – 2: ಕ್ರಾಂತಿಕಾರಿಗಳಿಂದ ರೈಲ್ವೇ ಇಲಾಖೆಗೆ ಆದ ನಷ್ಟವೇ 52 ಲಕ್ಷ ರುಪಾಯಿ!

ಕ್ವಿಟ್ ಇಂಡಿಯಾ ಕತೆ – 1 : ಎಷ್ಟು ಮಾತ್ರಕ್ಕೂ ಬ್ರಿಟಿಷರ ವಿರುದ್ಧ ಕೈಯೆತ್ತಬಾರದು ಎಂದವರು ನೆಹರೂ!

 

ಅತ್ತ ಇಂಗ್ಲೆಂಡ್ ಜರ್ಮನ್ನರಿಗೆ ಸೋತುಬಿಟ್ಟರೆ ಗತಿಯೇನು ಎಂದು ಹೇಳುತ್ತಿದ್ದ ಮಹಾತ್ಮಾ ಗಾಂಧಿಯವರೇ ಇತ್ತ ಬ್ರಿಟಿಷರನ್ನು ಭಾರತದಿಂದ ಓಡಿಸಬೇಕು ಎಂಬ ಹೋರಾಟ ರೂಪಿಸುತ್ತಿದ್ದರು. ಇಂಗ್ಲೆಂಡ್, ನಾಝಿ ಪಡೆಯ ಕೈಯಲ್ಲಿ ಸೋತುಹೋದರೆ; ಅಥವಾ ಗೆದ್ದರೂ ಆ ಗೆಲುವನ್ನು ಸಂಭ್ರಮಿಸುವಷ್ಟು ಚೈತನ್ಯ ಉಳಿಸಿಕೊಳ್ಳಲಿಲ್ಲವಾದರೆ ಅಂಥ ಸಂದರ್ಭದಲ್ಲಿ ಭಾರತ ಸ್ವಾತಂತ್ರ್ಯ ಪಡೆದರೂ ಅದಕ್ಕೇನು ಮೌಲ್ಯ? ಎಂದು ಕೇಳಿದ್ದ ಗಾಂಧಿಯ ಚಿಂತನೆ ಯಾವ ಕಡೆಯಲ್ಲಿ ಸಾಗುತ್ತಿದೆ ಎಂದೇ ಅನೇಕರಿಗೆ ತಿಳಿಯಲಿಲ್ಲ. ಪಕ್ಷದ ಒಳಗೆ ಮತ್ತು ಹೊರಗೆ ಹಲವು ವ್ಯಕ್ತಿ/ಸಂಸ್ಥೆಗಳಿಂದ ಪ್ರಬಲ ವಿರೋಧವಿದ್ದರೂ ಗಾಂಧಿ “ಭಾರತ ಬಿಟ್ಟು ತೊಲಗಿ” ಅಭಿಯಾನವನ್ನು ಮುಂದುವರಿಸುವ ನಿರ್ಧಾರ ಮಾಡಿದರು. ಕಾಂಗ್ರೆಸ್‍ನೊಳಗೆ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದ ರಾಜಾಜಿ, ಗಾಂಧಿಯವರ ಈ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಹೊರನಡೆದರು. ಕಾಂಗ್ರೆಸ್‍ನಲ್ಲಿ ಅದಾಗಷ್ಟೇ ಯುವನಾಯಕನಾಗಿ ಗುರುತಿಸಿಕೊಂಡಿದ್ದ ಜಯಪ್ರಕಾಶ ನಾರಾಯಣರಿಗೆ ಕ್ವಿಟ್ ಇಂಡಿಯಾ ಬಿಡಿ, ಗಾಂಧಿಯವರ ಇಡಿಯ ನಿರಾಯುಧ ಹೋರಾಟದಲ್ಲೇ ನಂಬಿಕೆ-ಗೌರವಗಳು ಇರಲಿಲ್ಲ. ಅವರು ಪಕ್ಷದೊಳಗಿದ್ದೂ ಬೆಕ್ಕಿನ ಬಿಡಾರ ಬೇರೆ ಎಂಬಂತೆ ತನ್ನ ಪಾಡಿಗೆ ತಾನು ಕ್ರಾಂತಿಕಾರಿ ಮಾರ್ಗದಲ್ಲಿ ಮುನ್ನಡೆಯುತ್ತಿದ್ದರು. ಇನ್ನು, ಬ್ರಿಟಿಷರನ್ನು ಯುದ್ಧದ ಸಂದರ್ಭದಲ್ಲಿ ಕಟ್ಟಿಹಾಕುವುದು ಸರಿಯಲ್ಲ; ಇದು ಯುದ್ಧನೀತಿ ಅಲ್ಲ ಎಂದು ಬಿಳಿಯರ ಪರವಾಗಿ ಪ್ರಬಲವಾಗಿ ವಾದ ಮಾಡುತ್ತಿದ್ದವರ ಪೈಕಿ ಮುಖ್ಯರಾದವರು ಸ್ವತಃ ಗಾಂಧಿಯವರ ರಾಜಕೀಯ ಶಿಷ್ಯರಾಗಿದ್ದ ನೆಹರೂ. ಬ್ರಿಟಿಷರನ್ನು ಎದುರು ಹಾಕಿಕೊಂಡರೆ ಮುಂದಿನ ರಾಜಕೀಯ ದಾರಿ ದುರ್ಗಮವಾಗುತ್ತದೆ ಎಂಬುದನ್ನು ಮುಂದಾಲೋಚಿಸಿದ್ದ ಚಾಣಾಕ್ಷರು ನೆಹರೂ.

ಇಷ್ಟೆಲ್ಲ ವಿರೋಧ, ಅಸಹಕಾರಗಳಿದ್ದರೂ ಗಾಂಧಿ ತಾನು ಹೇಳಿದ್ದೇ ವೇದವಾಕ್ಯ ಎಂಬಂತೆ ಮುನ್ನಡೆದರು. 1942ರ ಆಗಸ್ಟ್ 8ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣ  ಸಭೆ ಮುಂಬೈಯಲ್ಲಿ ನಡೆಯಿತು. ಸಭೆಯ ಉದ್ದೇಶ ಕ್ವಿಟ್ ಇಂಡಿಯಾ ಹಕ್ಕೊತ್ತಾಯಕ್ಕೆ ಪಕ್ಷದ ಒಪ್ಪಿಗೆಯ ಅಧಿಕೃತ ಮುದ್ರೆಯನ್ನು ಒತ್ತಾಯಿಸಿ ಪಡೆದುಕೊಳ್ಳುವುದೇ ಆಗಿತ್ತು. ಈ ಸಭೆಯ ಹಿಂದಿನ ದಿನ, ಮುಂಬೈಯ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ (ಅದು ಮುಂದೆ “ಆಗಸ್ಟ್ ಕ್ರಾಂತಿ ಮೈದಾನ್” ಎಂದು ಹೆಸರಾಯಿತು) ಒಂದು ಬೃಹತ್ ಸಮಾವೇಶ ಆಯೋಜನೆಯಾಯಿತು. ಗಾಂಧಿಯೇ ಸಭೆಯ ಕೇಂದ್ರಬಿಂದು. “ನಮಗೆ ಪರಕೀಯರ ದಾಸ್ಯ ಸಾಕಾಗಿದೆ. ನಾವು ಸ್ವತಂತ್ರರಾಗಬೇಕು. ಪರಿಪೂರ್ಣ ಸ್ವರಾಜ್ಯವೇ ನಮ್ಮ ಬೇಡಿಕೆ. ಈ ಬೇಡಿಕೆಯ ಈಡೇರಿಕೆಗಾಗಿ ಭಾರತೀಯರು ಎಂಥ ತ್ಯಾಗಕ್ಕೂ ಸಿದ್ಧರಾಗಬೇಕು. ಮಾಡು ಇಲ್ಲವೇ ಮಡಿ – ಇದು ನಮ್ಮ ಘೋಷವಾಕ್ಯವಾಗಬೇಕು”, ಗಾಂಧಿಯ ಮಾತುಗಳು ಹೊರಹೊಮ್ಮಿದವು. ಮಾಡು ಇಲ್ಲವೇ ಮಡಿ – ಡೂ ಆರ್ ಡೈ – ಕರೋ ಯಾ ಮರೋ – ಇದೇ ಮರುದಿನದ ಪತ್ರಿಕೆಗಳ ಸುದ್ದಿಶೀರ್ಷಿಕೆಯಾಯಿತು. ಒಂದೋ ಈ ದೇಶದಿಂದ ಬ್ರಿಟಿಷರನ್ನು ಒದ್ದೋಡಿಸಬೇಕು; ಇಲ್ಲವೇ ಆ ಪ್ರಕ್ರಿಯೆಯಲ್ಲಿ ಪ್ರಾಣತ್ಯಾಗ ಮಾಡಬೇಕು ಎಂಬ ಬೀಜಮಂತ್ರ ಸ್ವಾತಂತ್ರ್ಯ ಹೋರಾಟಗಾರರ ಧಮನಿ ಧಮನಿಗಳಲ್ಲಿ ಹೊಮ್ಮಿತು.

ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಎರಡು ದಿನಗಳು ಕಳೆದ ಮೇಲೆ, ಅಂದರೆ ಆಗಸ್ಟ್ 9ನೇ ತಾರೀಖು ಗಾಂಧಿಯ ಬಂಧನವಾಯಿತು. ಬ್ರಿಟಿಷ್ ಸರಕಾರ ಅವರನ್ನು ಆಗಾಖಾನ್ ಅರಮನೆಯಲ್ಲಿ ಗೃಹಬಂಧನದಲ್ಲಿರಿಸಿತು. ಗಾಂಧಿಯ ಬಂಧನವಾದ್ದರಿಂದ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಕ್ವಿಟ್ ಇಂಡಿಯಾ ಚಳವಳಿಯನ್ನು ಮುಂದುವರಿಸುವುದು ಹೇಗೆಂದು ತಿಳಿಯಲಿಲ್ಲ. ಗಾಂಧಿ ಹೇಳಿದ್ದಾರೆ – ಬ್ರಿಟಿಷರಿಂದ ಸ್ವರಾಜ್ಯವನ್ನು ಕಿತ್ತುಪಡೆಯುವುದೇ ನಮ್ಮ ಅಂತಿಮ ಗುರಿಯಾಗಬೇಕು. ಆದರೆ ಸ್ವರಾಜ್ಯವನ್ನು ಕಿತ್ತುಗಳಿಸುವುದಾದರೂ ಹೇಗೆ? ಸ್ವರಾಜ್ಯವೇ ಭಾರತೀಯರ ಅಂತಿಮ ಗುರಿ ಎಂಬುದರಲ್ಲಿ ದೇಶದ ಯಾವ ಸ್ವಾತಂತ್ರ್ಯಪ್ರೇಮಿಗೂ ಗೊಂದಲಗಳಿರಲಿಲ್ಲ. ಯಾಕೆಂದರೆ ಬಾಲಗಂಗಾಧರ ತಿಲಕರು ಮೂವತ್ತು ವರ್ಷಗಳ ಹಿಂದೆಯೇ ಮಾಡಿದ್ದ ಘೋಷಣೆ ಅದು. “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು” ಎಂದು ತಿಲಕ್ ಹೇಳಿದ್ದರ ಮುಂದುವರಿಕೆಯೇ ಗಾಂಧೀಜಿಯವರ ಸ್ವಾತಂತ್ರ್ಯಹೋರಾಟ. ಆದರೆ ಆ ಸ್ವರಾಜ್ಯವನ್ನು ಹಕ್ಕಿನಿಂದ ಪಡೆದುಕೊಳ್ಳುವುದು ಹೇಗೆಂಬ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅನಿಶ್ಚಿತತೆ, ಗೊಂದಲ ಇದ್ದವು. ದೇಶದ ಬಹುತೇಕ ಹೋರಾಟಗಾರರು ಗಾಂಧಿಯ ಮಾಡು ಇಲ್ಲವೇ ಮಡಿ ಎಂಬ ಘೋಷಣೆ ಹಿಂಸಾರೂಪದ ಪ್ರತಿಭಟನೆಗೆ ಕೊಟ್ಟ ಕರೆ ಎಂದೇ ಭಾವಿಸಿದರು. ದೇಶದ ಮೂಲೆಮೂಲೆಗಳಲ್ಲಿ ಹಿಂಸಾತ್ಮಕ ಹೋರಾಟಗಳು ಶುರುವಾದವು.

ಹಾಗೆ ಜನರು ಭಾವಿಸಬೇಕೆಂಬುದು ಗಾಂಧಿಯ ಬಯಕೆಯೂ ಆಗಿತ್ತು ಎಂಬ ಒಂದು ವಾದವುಂಟು. ಅದನ್ನು ಒಪ್ಪದಿರಲು ಎಷ್ಟು ಕಾರಣಗಳನ್ನು ಕೊಡಬಹುದೋ ಅಷ್ಟೇ, ಅಥವಾ ತುಸು ಹೆಚ್ಚೇ ಕಾರಣಗಳನ್ನು ಒಪ್ಪುವುದಕ್ಕೂ ಕೊಡಬಹುದು. 1942ರಲ್ಲಿ ಬ್ರಿಟಿಷ್ ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಗಾಂಧಿ ಮಾತಿನ ಮಧ್ಯೆ ಹೇಳಿದ್ದರು: “ಈ ಹೋರಾಟ ಹಳ್ಳಿ ಹಳ್ಳಿಗೂ ಪಸರಿಸುತ್ತದೆ. ಜನಸಾಮಾನ್ಯರು ಕಂದಾಯ ಕಟ್ಟುವುದಕ್ಕೆ ನಿರಾಕರಿಸುತ್ತಾರೆ. ಹೋರಾಟದ ಮುಂದಿನ ಹಂತವಾಗಿ ತಮ್ಮ ಜಮೀನುಗಳನ್ನು ಮರಳಿಪಡೆಯುತ್ತಾರೆ”. ಪ್ರಶ್ನೆ ಕೇಳುತ್ತಿದ್ದ ಪತ್ರಕರ್ತ ಫಿಶರ್, “ಹಾಗೆ ಮಾಡಲು ಹಿಂಸೆಯ ದಾರಿ ತುಳಿಯಬೇಕಾದರೆ?” ಎಂದು ಕೇಳಿದಾಗ ಗಾಂಧಿ, “ಆಗುವುದೇ ಆದರೆ ಅದೂ ಆಗಲಿ” ಎಂದು ಉತ್ತರಿಸಿದ್ದರು. ಈ ಮಾತಿನ ಅಂತರಾರ್ಥವೇನಿತ್ತು ಎಂಬುದನ್ನು ತಿಳಿಯುವುದು ಕಷ್ಟವೇನಲ್ಲ. ಮುಂಬೈಯಲ್ಲಿ ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸುತ್ತ ಮಾಡಿದ ಭಾಷಣದಲ್ಲಿ ಕೂಡ ಗಾಂಧಿ ಸೂಚ್ಯವಾಗಿ ಹೇಳಿದ್ದು ಅದನ್ನೇ. A time may come when it may not be possible to issue instructions to reach our people, and when no Congress committees can function. When this happens every man and woman who is participating in this movement must function for himself or herself within the four corners of the general instructions issued. Every Indian who desires freedom and strives for it must be his own guide.  (ಹೋರಾಟದಲ್ಲಿ ಭಾಗವಹಿಸುತ್ತಿರುವ ಮಂದಿಗೆ ಪ್ರತಿಯೊಂದು ಸಂಗತಿಯ ಬಗ್ಗೆ ನಾವು ಸೂಚನೆ ಕೊಡಲು, ಮಾರ್ಗದರ್ಶನ ಮಾಡಲು ಸಾಧ್ಯವಾಗದಿರುವ ಸಂದರ್ಭ ಬರಬಹುದು. ಕಾಂಗ್ರೆಸ್ ಪಕ್ಷವೇ ಹೋರಾಟದಲ್ಲಿ ತೊಡಗಿಸಿಕೊಳ್ಳಲಾರದ ಸನ್ನಿವೇಶವೂ ಉದ್ಭವಿಸಬಹುದು. ಅಂಥ ಸಂದರ್ಭ ಬಂದಾಗ ಈ ಹೋರಾಟದಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರೂ ನಾವು ಹಾಕಿಕೊಟ್ಟಿರುವ ಚೌಕಟ್ಟನ್ನು ಮನಸ್ಸಿಗೆ ತಂದುಕೊಂಡು ಕೆಲಸ ಮಾಡಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಪ್ರತಿಯೊಬ್ಬ ಭಾರತೀಯನೂ ತನಗೆ ತಾನೇ ಮಾರ್ಗದರ್ಶಕನೂ ಗುರುವೂ ಆಗಿ ಕೆಲಸ ಮಾಡಬೇಕು. ಆತ್ಮಸಾಕ್ಷಿಗೆ ಕಿವಿಗೊಟ್ಟು ಮುನ್ನಡೆಯಬೇಕು) – ಇದು ಕಾಂಗ್ರೆಸ್‍ನ ನಾಯಕರು ಜನರಿಗೆ ಕೊಟ್ಟ ಸಂದೇಶ. ಗಾಂಧಿ ಅಹಿಂಸೆಯ ಪ್ರತಿಪಾದನೆ ಮಾಡಿದರು; ಆದರೆ ಹಿಂಸಾತ್ಮಕ ಹೋರಾಟದ ಸಾಧ್ಯತೆಯನ್ನು ಅಲ್ಲಗಳೆಯಲೂ ಇಲ್ಲ; ಅದು ಬೇಡ ಎಂದು ಹೇಳಲೂ ಇಲ್ಲ. ಹೋರಾಟದ ದಾರಿಯಲ್ಲಿ ನಿಮಗೆ ಏನು ಸರಿಕಾಣುತ್ತದೋ ಅದನ್ನು ಮಾಡಿ – ಎಂಬುದು ಅವರಿಂದ ಹೊರಟ ಭರತವಾಕ್ಯ. ಹೋರಾಟಕ್ಕೆ ಕರೆಕೊಟ್ಟ ಕ್ಷಣದಲ್ಲೇ ತಮ್ಮ ಬಂಧನವಾಗುವ ಸೂಚನೆ ಗಾಂಧಿಗೆ ಸಿಕ್ಕಿತ್ತೆಂದು ಕಾಣುತ್ತದೆ. ಹಾಗಾಗಿ, ತನ್ನ ಬಂಧನವಾದ ಸಂದರ್ಭದಲ್ಲಿ ದೇಶದಲ್ಲಿ ಹಿಂಸಾರೂಪದ ಹೋರಾಟ ನಡೆದುಹೋದರೂ ಅದರ ಪಾಪವನ್ನು ತಾನು ಹೊರಬೇಕಿಲ್ಲ ಎಂಬ ಸಮಾಧಾನದ ನಿಟ್ಟುಸಿರನ್ನೂ ಗಾಂಧಿ ಅನುಭವಿಸಿದರಿರಬೇಕು.

ಬಹುಶಃ ಕಾಂಗ್ರೆಸ್ ಬಯಸಿದಂತೆ ಮತ್ತು ಗಾಂಧಿ ಊಹಿಸಿದಂತೆ, ಆಗಸ್ಟ್ 9ರಂದು ಗಾಂಧಿ ಮತ್ತು ಕಾಂಗ್ರೆಸ್‍ನ ಇತರ ಪ್ರಮುಖ ನಾಯಕರ ಬಂಧನವಾಗುತ್ತದಲೇ ದೇಶದಲ್ಲಿ ಹಿಂಸಾಚಾರ ಪ್ರಾರಂಭವಾಯಿತು. ದೇಶದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ತಮಗೆ ತಿಳಿದಂತೆ, ತಮಗೆ ತೋಚಿದಂತೆ ಹೋರಾಟ ಪ್ರಾರಂಭಿಸಿದರು. ಸಾಮೂಹಿಕ ಅಸಹಕಾರದ ರೀತಿಯಲ್ಲಿ ಪ್ರಾರಂಭವಾದದ್ದು ಕೆಲವೇ ದಿನಗಳಲ್ಲಿ ಹೊಡಿಬಡಿ ಮಾದರಿಗೆ ತಿರುಗಿತು. ಸಾವಿರಾರು ರೈಲುಪಟ್ಟಿಗಳನ್ನು ಜನ ಎಳೆದುಹಾಕಿದರು. ಟೆಲಿಗ್ರಾಫ್ ಕಂಬಗಳನ್ನು ಬೀಳಿಸಿದರು. ಪೊಲೀಸ್ ಠಾಣೆಗಳಿಗೆ ರಾತ್ರೋರಾತ್ರಿ ಬೆಂಕಿಹಚ್ಚಲಾಯಿತು. ಪೊಲೀಸ್ ಠಾಣೆಗಳನ್ನೂ ಬ್ಯಾಂಕುಗಳನ್ನೂ ಲೂಟಿ ಮಾಡಲಾಯಿತು. ಪೋಸ್ಟ್ ಆಫೀಸುಗಳನ್ನು ಒಡೆದುಹಾಕಲಾಯಿತು. ಸರಕಾರೀ ಅಧಿಕಾರಿಗಳನ್ನು, ಪೊಲೀಸ್ ಅಧಿಕಾರಿಗಳನ್ನು, ಪೇದೆಗಳನ್ನು ಬೀದಿಗಳಲ್ಲಿ ಎಳೆದಾಡಲಾಯಿತು. ಗಾಯದ ಮೇಲೆ ಸ್ಯಾಂಡ್ ಪೇಪರ್ ಉಜ್ಜಿದಂತೆ, ಹೊರಗೆ ಇಷ್ಟೆಲ್ಲ ಗಲಭೆ-ದೊಂಬಿ ತಾರಕಕ್ಕೇರಿದ್ದಾಗಲೇ ದೇಶಾದ್ಯಂತ ಕಾರ್ಮಿಕ ಮುಷ್ಕರವೂ ಪ್ರಾರಂಭವಾಯಿತು. ಭಾರತದಿಂದ ಹೊರಕ್ಕೆ ಹೋಗಬೇಕಿದ್ದ ಸರಕುಗಳೆಲ್ಲ ಬಂದರುಕಟ್ಟೆಗಳಲ್ಲಿ, ರೈಲ್ವು ನಿಲ್ದಾಣಗಳಲ್ಲಿ ಪೇರಿಸಲ್ಪಟ್ಟವು. ಅವನ್ನು ಅತ್ತಿಂದಿತ್ತ ಸಾಗಿಸುವುದಕ್ಕೆ ಕೂಲಿಕಾರ್ಮಿಕರು ಬಿಲ್‍ಕುಲ್ ಒಪ್ಪದೆ ಹರತಾಳ ಆಚರಿಸಿದರು. ಮುಂಬೈಯಂಥ ನಗರಗಳಲ್ಲಿ ಬಾಂಬ್ ಸ್ಫೋಟ ದಿನನಿತ್ಯದ ವರ್ತಮಾನವಾಯಿತು. ಸರಕಾರೀ ಕಚೇರಿಗಳಿಗೆ ದಿನಬೆಳಗಾದರೆ ಜನ ಗುಂಪುಗುಂಪಾಗಿ ನುಗ್ಗಿ ಮುತ್ತಿಗೆ ಹಾಕಿ ಅಲ್ಲಿನ ಕುರ್ಚಿಮೇಜುಗಳನ್ನು ಎಳೆದಾಡಿ ಅಧಿಕಾರಿಗಳ ಕೊರಳುಪಟ್ಟಿ ಹಿಡಿದು ಜಗ್ಗಾಡಿ ಬೀದಿಗೆ ಚೆಲ್ಲಿ ಅಲ್ಲಿದ್ದ ಕಡತಗಳಿಗೆ ಬೆಂಕಿಹಚ್ಚಿ ಸ್ವರಾಜ್ಯದ ಘೋಷಣೆ ಕೂಗತೊಡಗಿದರು.

ದೇಶದಲ್ಲಿ ಇಷ್ಟೆಲ್ಲ ಅಶಾಂತಿ ಭುಗಿಲೆದ್ದಾಗ ಬ್ರಿಟಿಷರು ಕಡಲೇಕಾಯಿ ತಿನ್ನುತ್ತ ಕೂತಿದ್ದರೆಂದೇನೂ ಅರ್ಥವಲ್ಲ. ಬ್ರಿಟಿಷರ ಕಡೆಯಿಂದ 57 ಬೆಟಾಲಿಯನ್ ಪಡೆಗಳು ಬೀದಿಗಿಳಿದು ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಪಟ್ಟವು. ಇಂಗ್ಲೆಂಡಿನಿಂದ ರಾಯಲ್ ಏರ್‍ಫೋರ್ಸ್ ಬಂತು. ನಗರ ಪ್ರದೇಶದಲ್ಲಿ ನಡೆಯುತ್ತಿದ್ದ ಹಿಂಸಾರೂಪದ ಪ್ರತಿಭಟನೆಯನ್ನು ಒಂದೆರಡು ವಾರಗಳಲ್ಲಿ ಬ್ರಿಟಿಷರು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಆದರೆ, ಹಳ್ಳಿಕಡೆಯ ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಬ್ರಿಟಿಷ್ ಪಡೆ ಹಣ್ಣುಗಾಯಿ ನೀರುಗಾಯಿಯಾಯಿತು. ಊಹಿಸಲಿಕ್ಕೇ ಆಗದಂಥ ರೀತಿಯಲ್ಲಿ ಅನಿರೀಕ್ಷಿತವಾಗಿ ಮೈಮೇಲೆ ಎರಗಿಬರುತ್ತಿದ್ದ ಅನಾಹುತಗಳಲ್ಲಿ ಬ್ರಿಟಿಷ್ ತುಕಡಿಗಳು ಸಿಕ್ಕಿಕೊಳ್ಳಬೇಕಾಯಿತು. 1942ರ ಆಗಸ್ಟ್‍ನಲ್ಲಿ ಪ್ರಾರಂಭವಾದ ಗೆರಿಲ್ಲಾ ಮಾದರಿಯ ಯುದ್ಧಗಳು ದೇಶದ ಸಾವಿರಾರು ಹಳ್ಳಿಗಳಲ್ಲಿ 1945ರವರೆಗೂ ನಡೆದವು. ದೇಶದಲ್ಲಿ ಪ್ರಾರಂಭವಾದ ಗಲಭೆಗಳಿಗೆಲ್ಲ ಗಾಂಧಿಯೇ ಕಾರಣ; ಇವಕ್ಕೆಲ್ಲ ಪ್ರಚೋದನೆ ಕೊಟ್ಟದ್ದು ಗಾಂಧಿಯೇ ಎಂದು ಬ್ರಿಟಿಷ್ ಸರಕಾರ ಆರೋಪ ಮಾಡಿದಾಗ ಅತ್ಯಂತ ಸ್ಪಷ್ಟವಾಗಿ ಗಾಂಧಿ ಅವನ್ನು ಅಲ್ಲಗಳೆದರು. “ನಾನು ಅಹಿಂಸೆಯ ಪ್ರತಿಪಾದಕ. ಈ ಗಲಭೆಗಳಿಗೂ ನನಗೂ ಸಂಬಂಧವೇ ಇಲ್ಲ. ನೀವು ಶಿಕ್ಷಿಸಬೇಕಿರುವುದು ಯಾರು ಕಾನೂನನ್ನು ಕೈಗೆತ್ತಿಕೊಂಡಿದ್ದಾರೋ ಅವರನ್ನು. ನನ್ನನ್ನೇಕೆ ಪ್ರಶ್ನಿಸುತ್ತೀರಿ?” ಎಂದು ಗಾಂಧಿ ಕೇಳಿದಾಗ ಮಾರುತ್ತರ ಕೊಡಲಾಗದೆ ಕೈ ಹಿಸುಕಿಕೊಂಡರು ಬ್ರಿಟಿಷರು.

ಸ್ವಾರಸ್ಯವೆಂದರೆ ದೇಶದಲ್ಲಿ ವ್ಯಾಪಕವಾಗಿ ಕಾಳ್ಗಿಚ್ಚಿನಂತೆ ಹಬ್ಬಿದ ಹಿಂಸಾಚಾರವನ್ನು ತಕ್ಷಣ ನಿಲ್ಲಿಸುವ ಯಾವ ಕ್ರಮಕ್ಕೂ ಗಾಂಧಿ ಮುಂದಾಗಲಿಲ್ಲ. 1942ರ ಆಗಸ್ಟ್ ತಿಂಗಳಿಂದ 1943ರ ವರ್ಷಾಂತ್ಯದವರೆಗೆ ಭಾರತದಲ್ಲಿ ಕ್ರಾಂತಿಕಾರಿಗಳಿಂದ ಕೊಲ್ಲಲ್ಪಟ್ಟ ಬ್ರಿಟಿಷ್ ಸೇನಾ ಅಧಿಕಾರಿಗಳು, ಸೈನಿಕರು ಒಟ್ಟು 63 ಮಂದಿ. ಆದರೆ, ಹೋರಾಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬ್ರಿಟಿಷರು ತಮ್ಮ ಸೇನಾದಳ, ವಾಯುದಳಗಳನ್ನು ಬಳಸಿಕೊಂಡು ಕೊಂದುಹಾಕಿದ್ದು ಬರೋಬ್ಬರಿ 763 ಭಾರತೀಯರನ್ನು. ಈ ಒಂದೂವರೆ ವರ್ಷದ ಅವಧಿಯಲ್ಲಿ ನಡೆದ ವಿವಿಧ ಗಲಭೆಗಳಲ್ಲಿ 1941 ಭಾರತೀಯರೂ 2012 ಬ್ರಿಟಿಷರೂ ಗಾಯಾಳುಗಳಾದರು. ದೇಶದ ಉದ್ದಗಲದಲ್ಲಿ ಒಟ್ಟು 208 ಪೊಲೀಸ್ ಸ್ಟೇಷನ್ನುಗಳನ್ನು ಭಾರತೀಯ ಕ್ರಾಂತಿಕಾರಿಗಳು ಈ ಅವಧಿಯಲ್ಲಿ ಸುಟ್ಟುಹಾಕಿದರು. 945 ಅಂಚೆಕಚೇರಿಗಳೂ 749 ಸರಕಾರೀ ಕಟ್ಟಡಗಳೂ ಕ್ರಾಂತಿಕಾರಿಗಳ ಗಲಭೆಯ ಬೆಂಕಿಗೆ ಆಹುತಿಯಾದವು. ಟೆಲಿಗ್ರಾಫ್‍ಗಾಗಿ ನೆಟ್ಟ ಕಂಬಗಳನ್ನು ಮುರಿಯುವುದು, ಕೇಬಲ್ ಕತ್ತರಿಸುವುದು ಮುಂತಾದ ಪ್ರಕರಣಗಳಲ್ಲಿ ಗಂಭೀರ ಎಂದು ನಮೂದಿಸಲ್ಪಟ್ಟವುಗಳೇ 12,286! ಕರ್ನಾಟಕವೊಂದರಲ್ಲೇ 1600 ಕೇಬಲ್ ಕತ್ತರಿಸಿದ ಗಂಭೀರ ಪ್ರಕರಣಗಳು ಪೊಲೀಸ್ ದಫ್ತರಗಳಲ್ಲಿ ದಾಖಲಾದವು. 1942-43ರ ನಡುವಿನ ಒಂದೂವರೆ ವರ್ಷದ ಅವಧಿಯಲ್ಲಿ ಒಟ್ಟು 554 ಬಾಂಬ್ ಸ್ಫೋಟ ಪ್ರಕರಣಗಳು ದಾಖಲಾದವು. 332 ರೈಲ್ವೇನಿಲ್ದಾಣಗಳು ನಾಮಾವಶೇಷವಾದವು. ರೈಲ್ವೇ ಹಳಿಗಳನ್ನು ಹೋರಾಟಗಾರರು ಸಿಕ್ಕಸಿಕ್ಕಲ್ಲಿ ತುಂಡರಿಸಿ ಬೇರ್ಪಡಿಸುತ್ತಿದ್ದುದರಿಂದ ಆ 16 ತಿಂಗಳ ಕಾಲಾವಧಿಯಲ್ಲಿ ಒಟ್ಟು 66 ರೈಲುಗಳು ಹಳಿತಪ್ಪಿ ಬಿದ್ದವು. 213 ಜನ ಈ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡರು. ಅಕ್ಟೋಬರ್ 1942ರಿಂದ ಡಿಸೆಂಬರ್ 1943ರವರೆಗಿನ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿಗಳು ಒಟ್ಟು 411 ಪ್ರಕರಣಗಳಲ್ಲಿ ರೈಲು ಹಳಿ ತಪ್ಪಿಸಿದ ಪ್ರಕರಣಗಳನ್ನು ಪತ್ತೆಹಚ್ಚಿ ರೈಲು ಅಪಘಾತವನ್ನು ತಪ್ಪಿಸಿದರು. ಕ್ವಿಟ್ ಇಂಡಿಯಾ ಚಳವಳಿಯ ಕಾಲದಲ್ಲಿ ಭಾರತದಲ್ಲಿ ಕ್ರಾಂತಿಕಾರಿಗಳಿಂದಾಗಿ ಬ್ರಿಟಿಷ್ ಸರಕಾರಕ್ಕೆ ರೈಲ್ವೇ ಇಲಾಖೆಯೊಂದರಲ್ಲಿ ಆದ ನಷ್ಟವೇ 52 ಲಕ್ಷ ರುಪಾಯಿ!

ಗಾಂಧಿಯ ಅಹಿಂಸೆಯೆಂಬ ಬಡ್ಡುಕತ್ತಿಯಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತೆಂಬ ಸುಳ್ಳನ್ನು ಮೆರೆಸಲು ನಮ್ಮ ಪಠ್ಯಪುಸ್ತಕಗಳು ಅದೆಷ್ಟು ಸತ್ಯಗಳನ್ನು ಮುಚ್ಚಿಟ್ಟಿವೆ ನೋಡಿ!

(ಮುಂದುವರಿಯುವುದು)

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!