Featured ಅಂಕಣ

ಕ್ವಿಟ್ ಇಂಡಿಯಾ ಕತೆ – 1 : ಎಷ್ಟು ಮಾತ್ರಕ್ಕೂ ಬ್ರಿಟಿಷರ ವಿರುದ್ಧ ಕೈಯೆತ್ತಬಾರದು ಎಂದವರು ನೆಹರೂ!

“ಭಾರತ ಬಿಟ್ಟು ತೊಲಗಿ” ಚಳವಳಿ ನಡೆದು 75 ವರ್ಷಗಳು ಸಂದ ನೆನಪಿನಲ್ಲಿ ಲೋಕಸಭೆಯಲ್ಲಿ ನಡೆದ ಸ್ಮರಣ ಕಾರ್ಯಕ್ರಮದಲ್ಲಿ ಮಾತಾಡುತ್ತ ಪ್ರಧಾನಿ ನರೇಂದ್ರ ಮೋದಿ ಹೇಳಿದರು: “1942ರಲ್ಲಿ ಚಳವಳಿ ನಡೆದರೆ, ಐದು ವರ್ಷಗಳ ಬಳಿಕ ಭಾರತ ಸ್ವತಂತ್ರವಾಯಿತು. ಸಣ್ಣದಾಗಿ ಹುಟ್ಟಿದ್ದ ಸ್ವರಾಜ್ಯದ ಕಿಡಿ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಪ್ರಜ್ವಲಿಸುತ್ತ ಬೆಳೆಯುತ್ತ ಹೋದದ್ದರಿಂದಲೇ 1947ರ ಆಗಸ್ಟ್ 15ಕ್ಕೆ ನಾವು ಬಿಳಿಯರ ದಬ್ಬಾಳಿಕೆಯ ಕೈಗಳಿಂದ ನಮ್ಮನ್ನು ಬಿಡಿಸಿಕೊಳ್ಳಲು ಸಾಧ್ಯವಾಯಿತು. ಈಗ 2017ನೇ ಇಸವಿ. ನಮ್ಮ ಹೋರಾಟ ಈಗಲೂ ಜಾರಿಯಲ್ಲಿದೆ. ಜಾತೀಯತೆ, ಕೋಮುವಾದ, ಭ್ರಷ್ಟಾಚಾರ, ಬಡತನ, ಮಾಲಿನ್ಯ, ಕೊಳಚೆ, ಭಯೋತ್ಪಾದನೆ ಎನ್ನುತ್ತ ಇಂದಿಗೂ ನೂರಾರು ಸಮಸ್ಯೆಗಳ ಜೊತೆ ಹಗಲುರಾತ್ರಿ ಹೊಡೆದಾಡುತ್ತಿದ್ದೇವೆ. 75 ವರ್ಷಗಳ ಹಿಂದಿನ ಕ್ವಿಟ್ ಇಂಡಿಯಾ ಉತ್ಸಾಹವನ್ನು ನಾವು ಈಗಲೂ ತೋರಿಸಿಯೇವೇ? ಈ ಎಲ್ಲ ಸಮಸ್ಯೆಗಳ ಜೊತೆ ಗುದ್ದಾಡಿ 2022ರ ಹೊತ್ತಿಗೆ ಭಾರತವನ್ನು ಅವೆಲ್ಲದರಿಂದ ಮುಕ್ತಗೊಳಿಸುವ ಸಂಕಲ್ಪವನ್ನು ತೊಟ್ಟೇವೇ?”

ಪ್ರಧಾನಿಗಳು ಒಂದು ಧನಾತ್ಮಕ ಚಿಂತನೆಯನ್ನು ದೇಶದ ಮುಂದೆ ಇಟ್ಟರು. ಹೆಚ್ಚಾಗಿ ನಮಗೆ ಇತಿಹಾಸವನ್ನು ಯಾಕೆ ಓದಬೇಕು ಎಂಬ ವಿಷಯದಲ್ಲೇ ಗೊಂದಲ ಇರುತ್ತದೆ. ನೂರು ವರ್ಷಗಳ ಹಿಂದಿನ ಯುದ್ಧ, ಕ್ರಾಂತಿ, ಹೊಡೆದಾಟ, ರಾಜವಂಶಗಳ ಕತೆಗಳನ್ನು ಈಗ ನಾವು ಯಾಕಾದರೂ ಅಭ್ಯಾಸ ಮಾಡಬೇಕು? ಯಾರೋ ಯಾರೊಂದಿಗೋ ಹೊಡೆದಾಡಿ ಸತ್ತರೆ ಅದನ್ನು ಆಮೂಲಾಗ್ರ ಅಧ್ಯಯನ ಮಾಡಿ ನಮಗೆ ಆಗಬೇಕಾದ್ದಾದರೂ ಏನು ಎಂಬ ಚಿಂತೆ-ಚಿಂತನೆಗಳೆರಡೂ ಮನಸ್ಸಲ್ಲಿ ಮೂಡುತ್ತವೆ. 75 ವರ್ಷಗಳ ಹಿಂದೆ ನಡೆದ ಕ್ವಿಟ್ ಇಂಡಿಯಾ ಹೋರಾಟದ ಕತೆಯನ್ನು ಓದಿದಾಗಲೂ ನಮಗೆ ಅಂಥದೊಂದು ಗೊಂದಲ ಕಾಡುವುದು ತೀರ ಸಹಜ. ಬಹುಶಃ ಅಂಥ ಸಂಶಯವನ್ನು ನಿವಾರಣೆ ಮಾಡುವುದಕ್ಕಾಗಿಯೇ ಪ್ರಧಾನಿಗಳು ಆ ಕಾಲದ ಜನರ ಪ್ರೇರಣೆಯನ್ನು ಈ ಕಾಲದ ಸಮಸ್ಯೆಗಳ ನಿವಾರಣೆಗಾಗಿ ಬಳಸಿಕೊಳ್ಳೋಣ ಎಂದು ಹೇಳಿರಬೇಕು. ಸಮಸ್ಯೆಗಳು ಬದಲಾಗಬಹುದು; ವೈರಿಗಳೂ ವೈರಿಗಳ ಸ್ವರೂಪಗಳೂ ಬದಲಾಗಬಹುದು; ಆದರೆ ಹೋರಾಟ ಎಂಬುದು ನಿರಂತರ – ಎಂಬ ಸಂದೇಶವನ್ನು ಕೂಡ ಮೋದಿಯವರು ತಮ್ಮ ಮಾತಿನ ಮೂಲಕ ಕೊಡಲು ಪ್ರಯತ್ನಿಸಿರಬಹುದು. ಇನ್ನೊಂದು ಶತಮಾನ ಕಳೆದರೂ ಭಾರತದಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ. ಬಡತನದ ಸಮಸ್ಯೆ ನಿವಾರಣೆಯಾದರೆ ಅದರ ಜಾಗದಲ್ಲಿ ಇನ್ನೊಂದು ಬಂದು ಕೂತಿರುತ್ತದೆ. ಜಗತ್ತಿನ ಸೂಪರ್ ಪವರ್ ಎನ್ನಿಸಿಕೊಳ್ಳುವ ಅಮೆರಿಕೆಗೆ ಅದರದ್ದೇ ಆದ ಸಮಸ್ಯೆಗಳು ಇಂದಿಗೂ ಇಲ್ಲವೆ, ಹಾಗೆ! ಏನೇ ಇರಲಿ, ಪ್ರಧಾನಿಗಳು ಆ ಕಾಲವನ್ನೂ ಈ ಕಾಲವನ್ನೂ ಸಮೀಕರಿಸಿ ಕ್ವಿಟ್ ಇಂಡಿಯಾ ಚಳವಳಿಯ ಕಾಲದ ಜನರ ಆತ್ಮವಿಶ್ವಾಸವನ್ನು ಇಂದೂ ನಾವು ತೋರಿಸೋಣ ಎಂಬ ಪಾಸಿಟಿವ್ ಚಿಂತನೆಯನ್ನು ಹರಿಯಬಿಟ್ಟ ವಿಶೇಷ ಅಧಿವೇಶನದಲ್ಲೇ ವಿರೋಧಪಕ್ಷ ನಾಯಕಿ ಸೋನಿಯಾ ಗಾಂಧಿ ಕೂಡ ಮಾತಾಡಿದರು. ಆದರೆ ಆಕೆಯ ಮಾತುಗಳು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂಬ ವೃತ್ತದಿಂದ ಅತ್ತಿತ್ತ ಸಾಗಲಿಲ್ಲ. ಕ್ವಿಟ್ ಇಂಡಿಯಾ ಚಳವಳಿಯನ್ನು ಹೇಗೆ ಕಾಂಗ್ರೆಸ್ ಪ್ರಾರಂಭಿಸಿತು; ಹೇಗೆ ಅದಕ್ಕಾಗಿ ಕಾಂಗ್ರೆಸ್ಸಿಗರು ತ್ಯಾಗ-ಬಲಿದಾನಗಳನ್ನು ಮಾಡಿದರು; ಹೇಗೆ ಆ ಕಾಲದ ಹೋರಾಟದಲ್ಲಿ ಕೆಲವೊಂದು ನಿರ್ದಿಷ್ಟ (ಕಾಂಗ್ರೆಸಿಗರಲ್ಲದ) ವ್ಯಕ್ತಿಗಳು ಭಾಗವಹಿಸದೆ ನುಣುಚಿಕೊಂಡರು ಎಂದು ಹೇಳುವುದಕ್ಕಷ್ಟೇ ಆಕೆಯ ಲಿಖಿತ ಭಾಷಣ ಸೀಮಿತಗೊಂಡಿತು. ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವುದು ಮತ್ತು ಎದುರಿನವರನ್ನು ವಾಚಾಮಗೋಚರ ಹಳಿಯುವುದು – ಇವೆರಡೇ ಕಾಂಗ್ರೆಸ್ ಅಧಿನಾಯಕಿಯ ಮಾತಿನ ಮೂಲೋದ್ದೇಶವಾಗಿದ್ದಂತೆ ಇತ್ತು. ಮೋದಿಯವರ ಮಾತುಗಳು ಹೇಗೆ ಒಬ್ಬನ ಆತ್ಮವಿಕಾಸ ಮಾಡುವ, ಆತ್ಮವಿಶ್ವಾಸ ಬಡಿದೆಬ್ಬಿಸುವ ಆಶಯ ಹೊಂದಿದ್ದವೋ ಅಷ್ಟೇ ಋಣಾತ್ಮಕ ವಿಷವನ್ನು ಭಾರತೀಯರ ಮನಸ್ಸಿನಲ್ಲಿ ತುಂಬಿಸುವ ಕೆಲಸವನ್ನು ಸೋನಿಯಾ ಗಾಂಧಿ ಮಾಡಿದರು. ಎಂದಿನಂತೆ, ಆಕೆಯ ಮಾತುಗಳು ಅಲ್ಲಿ ಸಂಸತ್ತಿನಲ್ಲಿ ಮೊಳಗುತ್ತಿರುವಾಗಲೇ ರಾಮಚಂದ್ರ ಗುಹಾರಂಥ ಕಾಂಗ್ರೆಸ್ ಇತಿಹಾಸಕಾರರು ಆರೆಸ್ಸೆಸ್, ಸಂಘ ಪರಿವಾರ, ಬಿಜೆಪಿ ಮತ್ತು ಮೋದಿ – ಎಲ್ಲರನ್ನೂ ಹಳಿಯಲು ನಿಂತುಬಿಟ್ಟರು. ಕ್ವಿಟ್ ಇಂಡಿಯಾ ಸಮಯದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಹೋರಾಟಗಾರರು ಜೈಲು ಸೇರಿದರು; ಆದರೆ ಒಬ್ಬನೇ ಒಬ್ಬ ಬಲಪಂಥೀಯ ಹಿನ್ನೆಲೆಯ ವ್ಯಕ್ತಿ ಜೈಲಿಗೆ ಹೋಗಲಿಲ್ಲ ಎಂದು ಗುಹಾ ತಮ್ಮ ಜಾಲತಾಣದ ಖಾತೆಗಳಲ್ಲಿ ಬರೆದುಕೊಂಡರು. ಅಂತೂ ದಿನಾಂತ್ಯಕ್ಕೆ, ಸ್ಮರಣೆಯ ಆಶಯ ಮಣ್ಣುಗೂಡಿತು; ಚರ್ಚೆ ದಿಕ್ಕುತಪ್ಪಿತು. ಕಾಂಗ್ರೆಸ್ಸಿಗೆ ಬೇಕಿದ್ದುದೂ ಅದೇ ಅಲ್ಲವೆ?

ಈ ಎಲ್ಲ ಹಿನ್ನೆಲೆಯಲ್ಲಿ ನಾವು ಕ್ವಿಟ್ ಇಂಡಿಯಾ ಚಳವಳಿಯ ಕಾಲದಲ್ಲಿ ನಡೆದ ಘಟನಾವಳಿಗಳ ಮರು-ಅವಲೋಕನ ಮಾಡಬೇಕಾಗಿದೆ. ಆ ಚಳವಳಿ ಯಾಕೆ ನಡೆಯಿತು ಎಂಬುದರ ಜೊತೆಗೆ, ಅದರ ಫಲಿತಾಂಶ ಏನು? ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅದರ ಕೊಡುಗೆ ಏನು? ಎಂಬುದರ ಮೌಲ್ಯಮಾಪನವನ್ನು ಕೂಡ ಮಾಡಬೇಕಾಗಿದೆ. ಕಳೆದ ಎಪ್ಪತ್ತು ವರ್ಷಗಳಿಂದ ನಾವು ಶಾಲೆ-ಕಾಲೇಜುಗಳಲ್ಲಿ ತಿರುಚಿದ ಇತಿಹಾಸವನ್ನಷ್ಟೇ ಪಠ್ಯವಾಗಿ ಓದುತ್ತ ಬಂದಿದ್ದೇವೆ. ನಮ್ಮನ್ನು ಸ್ವಾತಂತ್ರ್ಯ ಬಂದ ಅರವತ್ತು ವರ್ಷಗಳಲ್ಲಿ ಬಹಳಷ್ಟು ಅವಧಿಯನ್ನು ಕಾಂಗ್ರೆಸ್ಸೇ ಆಳಿದ್ದರಿಂದ ನಮ್ಮ ಪಠ್ಯಗಳಲ್ಲಿ ಕೂಡ ಕಾಂಗ್ರೆಸ್ ನಾಯಕರ ಕತೆಗಳಷ್ಟೇ ವಿರಾಜಿಸುತ್ತವೆ. ಬೇಟೆಗಾರನೇ ಕೃತಿ ಬರೆದಾಗ ಹುಲಿಯ ಸಾಹಸಗಳೂ ಬೇಟೆಗಾರನ ದೌರ್ಬಲ್ಯಗಳೂ ವಿವರಗಳಲ್ಲಿ ಕಾಣ ಸಿಕೊಳ್ಳುವುದಿಲ್ಲವಷ್ಟೆ!

1942ರ ಎಪ್ರಿಲ್ ತಿಂಗಳು. ಯುರೋಪಿನಲ್ಲಿ ಎರಡನೆ ಮಹಾಯುದ್ಧ ನಡೆಯುತ್ತಿದ್ದುದರಿಂದ ಇಡೀ ಜಗತ್ತಿಗೆ ಬರಗಾಲ ಆವರಿಸಿದಂತಿತ್ತು. ಜಗತ್ತಿನ ಮೂರನೇ ಒಂದು ಭಾಗವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಪ್ರಯಾಸಪಡುತ್ತಿದ್ದ “ಸೂರ್ಯ ಮುಳುಗದ ಸಾಮ್ರಾಜ್ಯ” ತನ್ನ ಜೊತೆ ಫ್ರಾನ್ಸ್, ಆಸ್ಟ್ರೇಲಿಯಾ, ಬೆಲ್ಜಿಯಮ್, ಬ್ರೆಜಿಲ್, ಕೆನಡಾ, ಚೀನಾ, ಡೆನ್ಮಾರ್ಕ್, ಗ್ರೀಸ್, ನೆದರ್‍ಲ್ಯಾಂಡ್, ನ್ಯೂಜಿಲ್ಯಾಂಡ್, ನಾರ್ವೆ, ಪೋಲಂಡ್, ದಕ್ಷಿಣ ಆಫ್ರಿಕಾ, ಯುಗೋಸ್ಲಾವಿಯಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ – ಇವಿಷ್ಟನ್ನು ಬೆನ್ನಿಗೆ ಕಟ್ಟಿಕೊಂಡು ಜರ್ಮನಿ, ಇಟೆಲಿ, ಜಪಾನ್, ಹಂಗೆರಿ, ರೊಮಾನಿಯಾ ಮತ್ತು ಬಲ್ಗೇರಿಯಾಗಳ ಮೇಲೆ ಮುಗಿಬಿದ್ದಿದ್ದ ಸಂದರ್ಭ. ಜಪಾನ್, ಜರ್ಮನಿ, ಇಟೆಲಿಯಂಥ ದೇಶಗಳಿಗೆ ಮೂಲತಃ ಹಗೆ ಇದ್ದದ್ದು ಬ್ರಿಟನ್ನಿನ ಮೇಲೆ. ಆದರೆ ಬ್ರಿಟನ್ ಸಾಮ್ರಾಜ್ಯದ ವಸಾಹತುಗಳು ಪ್ರಪಂಚದ ತುಂಬೆಲ್ಲ ಹಬ್ಬಿದ್ದುದರಿಂದ, ಅಂಥ ಯಾವ ವಸಾಹತು ನೆಲೆಯ ಮೇಲೆ ದಾಳಿ ಮಾಡಿದರೂ ಅದು ಬ್ರಿಟನ್ನಿನ ಮೇಲಿನ ದಾಳಿಯೆಂದೇ ಪರಿಗಣ ಸಲ್ಪಡುತ್ತಿತ್ತು. ಅದೇ ಕಾರಣಕ್ಕಾಗಿ ಜಪಾನ್ ತನ್ನ ಯುದ್ಧದ ಹಡಗುಗಳನ್ನು ಬ್ರಿಟನ್ನಿಗೆ ಬದಲಾಗಿ ಭಾರತದತ್ತ ತಿರುಗಿಸಿತು. ಚೀನಾದ ಪೂರ್ವಕ್ಕಿದ್ದ ಜಪಾನಿಗೆ, ದ್ರಾವಿಡ ಪ್ರಾಣಾಯಾಮ ಮಾಡಿಕೊಂಡು ಇಂಗ್ಲೆಂಡಿಗೆ ಹೋಗಿ ಅವರ ನೆಲದಲ್ಲಿ ಹೊಡೆದಾಡುವುದಕ್ಕಿಂತ ಪೂರ್ವ-ಆಗ್ನೇಯ ಏಷ್ಯದ ಬ್ರಿಟಿಷ್ ನೆಲೆಗಳ ಮೇಲೆ ಮುಗಿಬೀಳುವುದು ಸುಲಭವೂ ತಾರ್ಕಿಕವೂ ಆಗಿದ್ದ ನಡೆ. ಜಪಾನೀಯರು ಏಷ್ಯದ ಹಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆಂದೂ ಬ್ರಿಟಿಷರನ್ನು ಓಡಿಸಿ ಅಲ್ಲೆಲ್ಲ ವ್ಯಾಪಕ ಹಿಂಸಾಚಾರಗಳನ್ನು ನಡೆಸಿದ್ದಾರೆಂದೂ ಪ್ರತಿದಿನ ಸುದ್ದಿ ಬರತೊಡಗಿದವು. ಜಪಾನೀ ಸೇನೆ ಭಾರತದ ನೆಲದ ಮೇಲೆ ಕಾಲಿಟ್ಟದ್ದೇ ಆದರೆ ಇಲ್ಲೂ ಕಂಡುಕೇಳರಿಯದ ಹಿಂಸಾಚಾರಗಳು ನಡೆದುಹೋಗುತ್ತವೆ ಎಂದು ಭಾರತೀಯರೂ ಬಿಳಿಯರೂ ಸಮಾನವಾಗಿ ಹೆದರತೊಡಗಿದರು. ಇಂಥ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಯೋಚಿಸಿದ್ದು – ಜಪಾನೀಯರಿಗೆ ಬೇಕಿರುವುದು ಬ್ರಿಟಿಷರಷ್ಟೇ ತಾನೇ? ಅವರನ್ನು ಈ ನೆಲದಿಂದ ಓಡಿಸಿಬಿಟ್ಟರೆ ಜಪಾನೀಯರ ದಾಳಿಯ ಭೀತಿಯಿಂದ ಪಾರಾಗಬಹುದು; ಮಾತ್ರವಲ್ಲ ನಮ್ಮ ಸ್ವಾತಂತ್ರ್ಯವನ್ನೂ ಘೋಷಿಸಿಕೊಳ್ಳಬಹುದು! ಒಂದೇ ಕಲ್ಲಿನಿಂದ ಎರಡು ಹಲಸಿನ ಹಣ್ಣುಗಳನ್ನು ಕೆಳಬೀಳಿಸುವ ಈ ಯೋಜನೆಯಿಂದ ಸ್ವತಃ ಗಾಂಧಿಯವರಿಗೆ ಅದೆಷ್ಟು ರೋಮಾಂಚನವಾಯಿತೆಂದರೆ ಕೂಡಲೇ ಕಾಂಗ್ರೆಸ್ಸಿನ ಉಳಿದ ನಾಯಕರನ್ನು ಕರೆದು ತನ್ನ ವಿಚಾರವನ್ನು ಹಂಚಿಕೊಂಡರು.

ಉಳಿದ ನಾಯಕರಿಗೆ ಇದೊಂದು ಒಳ್ಳೆಯ ಯೋಚನೆ ಅನ್ನಿಸಿದರೂ ಒಪ್ಪುವಂಥ ಯೋಚನೆ ಅನ್ನಿಸಲಿಲ್ಲ. ಅದಕ್ಕೆ ಕಾರಣ ಹಲವಿದ್ದವು. ಒಂದು – ಸ್ವಾತಂತ್ರ್ಯ ಹೋರಾಟ ಇಂದು ನಿನ್ನೆ ಪ್ರಾರಂಭವಾದದ್ದಲ್ಲ; ಹಲವು ದಶಕಗಳಿಂದ ಜಾರಿಯಲ್ಲಿದೆ. ಪ್ರಥಮ ಮಹಾಯುದ್ಧದ ಸಂದರ್ಭದಲ್ಲೇ ಬ್ರಿಟಿಷರು ಭಾರತವನ್ನು ತ್ಯಜಿಸಿದವರಲ್ಲ. ಹಾಗಿರುವಾಗ ಈಗ ನಮ್ಮ ಒಂದೇ ಒಂದು ಹೋರಾಟದಿಂದ ಬ್ರಿಟಿಷರನ್ನು ಓಡಿಸಬಹುದೆಂಬುದು ಒಪ್ಪುವಂಥ ಮಾತೇ? ಭಾರತೀಯರ ಪ್ರತಿಭಟನೆಗೆ ಬೆದರಿ ಬ್ರಿಟಿಷರು ಕಾಲ್ಕಿತ್ತರೆಂದೇ ಭಾವಿಸೋಣ; ಅವರು ಬಿಟ್ಟುಹೋದ ದೇಶವನ್ನು ಜಪಾನೀಯರು ಅನಾಯಾಸವಾಗಿ ಬಂದು ಆಕ್ರಮಿಸಿಕೊಳ್ಳುವುದಿಲ್ಲ ಎಂದು ನಂಬುವುದು ಹೇಗೆ? ಶತ್ರುವೊಬ್ಬ ಪಲಾಯನ ಮಾಡಿದಾಗ ಆತನ ಕೈಯಲ್ಲಿದ್ದ ಭೂಮಿಯನ್ನು ಸೂರೆ ಹೊಡೆಯುವುದು ಪ್ರತಿ ಸೈನ್ಯವೂ ಮಾಡುವ ಸಹಜ ಕೆಲಸ ಅಲ್ಲವೆ? ಇದು ಒಂದು ಬಣದ ವಾದವಾದರೆ, ಇನ್ನೊಂದು ಕಡೆಯವರು ಬ್ರಿಟಿಷರನ್ನು ಹಾಗೆಲ್ಲ ಏಕಾಏಕಿ ಓಡಿಸಿಬಿಟ್ಟರೆ ಭಾರತ ಇದುವರೆಗೆ ಗಳಿಸಿದ ಘನತೆ ಏನಾಗಬೇಕು ಎಂದು ಕೇಳಿದರು. ಹಾಗೆ ಕೇಳಿದವರು ಬೇರಾರೂ ಅಲ್ಲ; ಸ್ವತಃ ಗಾಂಧಿಯವರ ಬಲಗೈಬಂಟ ಎಂದು ಗುರುತಿಸಿಕೊಂಡಿದ್ದ ಜವಹರ್‍ಲಾಲ್ ನೆಹರೂ! “Launching a civil disobedience campaign at a time when Britain is engaged in life and death struggle would be an act of derogatory to India’s honour” (ಬ್ರಿಟಿಷ್ ಸಾಮ್ರಾಜ್ಯ ಅಲ್ಲಿ ಜೀವನ್ಮರಣದ ಹೋರಾಟ ಮಾಡುತ್ತಿರುವಾಗ ನಾವು ಇನ್ನೊಂದು ಕಡೆಯಿಂದ ಅಸಹಕಾರ ಚಳವಳಿ ಪ್ರಾರಂಭಿಸಿ ಅವರನ್ನು ಅಡಕತ್ತರಿಯಲ್ಲಿಟ್ಟರೆ ಭಾರತ ಇದುವರೆಗೆ ಗಳಿಸಿದ ಘನತೆ-ಗೌರವಗಳ ಕತೆ ಏನು?) ಎಂದು ಕೇಳಿದರು ನೆಹರೂ. ಮತ್ತೂ ಮುಂದುವರಿದು ಹೇಳಿದರು: “ಬ್ರಿಟನ್ನು ನತದೃಷ್ಟ ಸನ್ನಿವೇಶದಲ್ಲಿ ಒದ್ದಾಡುತ್ತಿರುವಾಗ ಪರಿಸ್ಥಿತಿಯ ಲಾಭ ಪಡೆಯುವುದು ಎಷ್ಟು ಮಾತ್ರಕ್ಕೂ ಸಲ್ಲ. ನಮ್ಮ ಮುಂದಿರುವ ಆಯ್ಕೆಗಳು ಎರಡು – ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಬ್ರಿಟನ್ ಹಾಗೂ ಫ್ಯಾಸಿಸಂ ಮತ್ತು ದಬ್ಬಾಳಿಕೆಯನ್ನು ಪ್ರತಿಪಾದಿಸುವ ಜರ್ಮನಿ. ಬೇಷರತ್ ಆಗಿ ನಾವು ನಿಲ್ಲಬೇಕಾದದ್ದು ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವವರ ಪಕ್ಷದ ಜೊತೆ. ಅವರ ಗೆಲುವಿಗಾಗಿ ಭಾರತ ತನ್ನ ಸಂಪೂರ್ಣ ಸಹಕಾರ ನೀಡಬೇಕಾದ್ದು ಸದ್ಯದ ಅಗತ್ಯ”!

ತಮಾಷೆ ನೋಡಿ, ಬ್ರಿಟನ್ ಆಗಿನ ಸಂದರ್ಭದಲ್ಲಿ ಸ್ವಾತಂತ್ರ್ಯವನ್ನೂ ಪ್ರತಿಪಾದಿಸುತ್ತಿರಲಿಲ್ಲ; ಪ್ರಜಾಪ್ರಭುತ್ವದ ಭರವಸೆಯನ್ನೂ ಭಾರತಕ್ಕೆ ಕೊಟ್ಟಿರಲಿಲ್ಲ! ಆದರೂ ನೆಹರೂ, ಅತ್ತ ಜಪಾನೀಯರು ಭಾರತದ ಮೇಲೆ ಏರಿ ಬರುತ್ತಿದ್ದ ಹೊತ್ತಲ್ಲೂ ಕೂಡ ಬ್ರಿಟನ್ನಿಗೆ ಸಹಾಯ ಮಾಡುವ ಮಾತುಗಳನ್ನು ಆಡುತ್ತಿದ್ದರು. ಭಾರತವೇನಾದರೂ ಬ್ರಿಟಿಷರ ವಿರುದ್ಧ ತನ್ನ ಹೋರಾಟವನ್ನು ತೀವ್ರಗೊಳಿಸಿದರೆ ಅತ್ತ ಬ್ರಿಟಿಷರ ಸಹಾಯವೂ ಇಲ್ಲದೆ ಇತ್ತ ಜಪಾನೀಯರ ಮೇಲೆ ಯುದ್ಧ ಮಾಡುವುದಕ್ಕೂ ಆಗದೆ ಸಂಕಷ್ಟಕ್ಕೆ ಈಡಾಗುತ್ತದೆಂಬ ಭಾವನೆ ಇದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರು ಗಾಂಧಿಯ ಜೊತೆಗಿನ ವೈಮನಸ್ಯ ಬಿಗಡಾಯಿಸಿದ ಮೇಲೆ ಕಾಂಗ್ರೆಸ್ಸಿನ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಹೊರಬಂದರು. ಬ್ರಿಟಿಷರ ಜೊತೆ ಸೌಹಾರ್ದದ ಸಂಬಂಧ ಬೆಳೆಸಲು ಯತ್ನಿಸುತ್ತಿದ್ದ ಮುಸ್ಲಿಮ್ ಲೀಗ್, ಗಾಂಧಿಯವರ ಯೋಚನೆಯನ್ನು ಸಾರಾಸಗಟಾಗಿ ವಿರೋಧಿಸಿ ಹೊರನಡೆಯಿತು. ಭಾರತವನ್ನು ಎರಡು ತುಂಡಾಗಿ ವಿಭಜಿಸಬೇಕು; ಮುಸ್ಲಿಮ್ ಮತ್ತು ಹಿಂದೂಗಳಿಗೆ ಪ್ರತ್ಯೇಕ ಭಾಗಗಳನ್ನು ಹಂಚಬೇಕು ಎಂಬ ಚಿಂತನೆ ಅದಾಗಲೇ ಕ್ರಿಪ್ಸ್ ಕಮೀಷನ್ ಮೂಲಕ ಗರಿಗೆದರಿತ್ತು ನೋಡಿ! ಹಾಗಾಗಿ, ಪ್ರತ್ಯೇಕ ರಾಷ್ಟ್ರದ ಬೇಡಿಕೆಯೆಂಬ ಬೀಜ ತಾನಾಗಿ ಮೊಳಕೆಯೊಡೆದಿರುವಾಗ ಅದರ ಮೇಲೆ ಹೋರಾಟವೆಂಬ ಕಲ್ಲು ಎತ್ತಿಹಾಕಲು ಮುಸ್ಲಿಮ್ ಲೀಗ್ ಸರ್ವಥಾ ಸಿದ್ಧವಿರಲಿಲ್ಲ. ಹೀಗೆ ಎಲ್ಲರೂ ಅವರವರ ದೃಷ್ಟಿಯಲ್ಲಿ ಲಾಭವೆತ್ತುವ ಯೋಚನೆ ಮಾಡುತ್ತಿದ್ದಾಗ ಗಾಂಧಿ ತನ್ನ ಅಭಿಪ್ರಾಯಕ್ಕೆ ಅಂಟಿಕೊಂಡರು. “ಇದು ಆಗಲೇಬೇಕು. ನಾವು ಸಂಪೂರ್ಣ ಸ್ವಾತಂತ್ರ್ಯಕ್ಕೆ ಈಗ ಒತ್ತಾಯಿಸಲೇಬೇಕು. ಈಗ ಅಲ್ಲವಾದರೆ ಮುಂದೆಂದೂ ಸಾಧ್ಯವಿಲ್ಲ. ಬ್ರಿಟಿಷರನ್ನು ಎಲ್ಲ ದಿಕ್ಕುಗಳಿಂದ ದಿಕ್ಕೆಡಿಸುವುದೇ ಸದ್ಯಕ್ಕೆ ನಮ್ಮ ಯೋಜನೆಯಾಗಬೇಕು” ಎಂದು ಗಾಂಧಿ ಪಟ್ಟುಹಿಡಿದು ಕೂತುಬಿಟ್ಟರು. “I am not just now thinking of India’s deliverence. It will come. But what will it be worth if England and France fall, or if they come out victorious over Germany, ruined and humbled?” (ನಾನು, ಭಾರತ ಬಂಧನದ ಬೇಡಿಗಳಿಂದ ಕಳಚಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಯೋಚಿಸುತ್ತಿಲ್ಲ. ಭಾರತದ ಸ್ವಾತಂತ್ರ್ಯ ಇಂದಲ್ಲ ನಾಳೆ ದಕ್ಕುವ ಸಂಗತಿಯೇ. ಆದರೆ, ಮಹಾಯುದ್ಧದಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಒಂದು ವೇಳೆ ಸೋತದ್ದೇ ಆದರೆ ಭಾರತದ ಸ್ವಾತಂತ್ರ್ಯಕ್ಕೆ ಏನು ಬೆಲೆ? ಅಥವಾ, ಇಂಗ್ಲೆಂಡ್, ಫ್ರಾನ್ಸ್‍ಗಳು ಜರ್ಮನಿಯ ವಿರುದ್ಧ ಗೆದ್ದರೂ ಸಾಕಷ್ಟು ಸಾವುನೋವುಗಳಿಗೆ ಎರವಾಗಿ ಗೆಲುವಿನ ಸಂಭ್ರಮಾಚರಣೆ ಮಾಡುವಂಥ ಸ್ಥಿತಿಯೂ ಇರದೇ ಹೋದರೆ ಆಗ ಭಾರತ ಸ್ವಾತಂತ್ರ್ಯ ಪಡೆದರೂ ಅದಕ್ಕೇನರ್ಥ?) ಎಂದು ಕೇಳಿದ್ದ ಗಾಂಧಿಯೇ ಈಗ ಭಾರತೀಯರಿಗೆ “ಮಾಡು ಇಲ್ಲವೇ ಮಡಿ” ಎಂದು ಕರೆ ಕೊಡಲು ಹೊರಟಿದ್ದಾರೆಯೇ ಎನ್ನುತ್ತ ಕಾಂಗ್ರೆಸಿಗರು ಅವರನ್ನು ಅಚ್ಚರಿಯಿಂದ ನೋಡುವಂತಾಯಿತು.

(ಮುಂದುವರಿಯುವುದು)

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!