ಕಥೆ

ಕೌದಿ ಅಮ್ಮಾ ಕೌದಿ

ಅಂದು ಶನಿವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಇರಬಹುದು.  ಹೆಂಗಸೊಬ್ಬಳು “ಕೌದಿ ಅಮ್ಮ ಕೌದಿ” ಎಂದು ಕೂಗುತ್ತ ಸಾಗುತ್ತಿದ್ದಳು ಮನೆ ಮುಂದಿನ ರಸ್ತೆಯಲ್ಲಿ.  ಅಡಿಗೆ ಮನೆಯಲ್ಲಿ ಇದ್ದ ನನ್ನ ಕಿವಿ ನೆಟ್ಟಗಾಯಿತು.  ಉರಿಯುವ ಒಲೆ ಪಟಕ್ಕೆಂದು ಆರಿಸಿ ಒಂದೇ ನೆಗೆತಕ್ಕೆ ಗೇಟಿನ ಹತ್ತಿರ ಓಡಿ ಬಂದೆ.  ಮನಸಲ್ಲಿ ಅವಳೆಲ್ಲಿ ಹೋಗಿಬಿಟ್ಟರೆ ಅನ್ನುವ ಆತಂಕ.   ಕೌದಿ ನನಗಷ್ಟು ಇಷ್ಟ ಹಲವು ವರ್ಷಗಳ ಹಿಂದೆ ಕಂಡ ನನ್ನ ಕಣ್ಣುಗಳು ಇನ್ನೂ ಮರೆತಿಲ್ಲ. ಅದೇ ಘಾಶಿ, ರಜಾಯಿ ಎಂದು ಕೆಲವರು ಕರೆದರೆ ಸಾಮಾನ್ಯವಾಗಿ ವಾಡಿಕೆಯಲ್ಲಿ ಇರುವುದು ಕೌದಿ ಎಂದೇ ಕರೆಯುವುದು.

“ಏಯ್ ಕೌದಿ ಬಾಮ್ಮ ಇಲ್ಲಿ ” ಕರೆದೆ ಜೋರಾಗಿ.   ಅವಳೊ ನನ್ನ ನೋಡಿದವಳೆ ಖುಷಿಯಿಂದ “ಕೌದಿ ಹೊಲಿಸ್ತೀರಾ ಅವ್ವಾ?.  ಕೊಡಿ ಹಳೆ ಸೀರೆ ಬೆಡ್ಶೀಟ್.” ಹೇಳುತ್ತ ಬಂದೇ ಬಿಟ್ಟಳು ಗೇಟಿನ ಮುಂದೆ.  ನನನಗೊ ಇತ್ತ ಅಡಿಗೆ ಬೇರೆ ಮಾಡೋದಿದೆ ; ಮನಸಲ್ಲೆ ಚಕಚಕನೆ ಗುಣಾಕಾರ ಭಾಗಾಕಾರ ಹಾಕಿ ಹೇಳಿದೆ  “ನೋಡು ನನಗೀಗ ಟೈಮಿಲ್ಲ.  ನೀನೊಂದು ಎರಡು ಎರಡೂವರೆ ಗಂಟೆಗೆ  ಬರೋದಾದರೆ ನಾನು ಹೊಲಿಸುತ್ತೇನೆ.  ಬಟ್ಟೆ ತೆಗೆದಿರಿಸುತ್ತೇನೆ.  ಚಂದವಾಗಿ ಹೊಲಿಬೇಕು ಆಯ್ತಾ?”

ಏಕೆಂದರೆ ಅವಳು ಮತ್ತೆ ಬರದಿದ್ದರೆ!  ಗಟ್ಟಿ ಆಸೆ ಹುಟ್ಟಿಸಿದೆ☺

” ನೋಡಿ ಅವ್ವಾ ಒಂದು ತಾಸು ಬಿಟ್ಟು ಬರುತೀನವ್ವ.  ಎಲ್ಲಾ ತೆಗೆದಿಡ್ರಿ”  ಅಂತಂದು ಹೋದಳು.  ನನಗೊ ಇತ್ತ ಸಡಗರ ಹೊಸ ಸೀರೆ ಮನೆಗೆ ತರುವಾಗಿನ ಗಳಿಗೆಯಂತೆ.  ಪಟಪಟ ಅಡಿಗೆ ಮಾಡಿ ಉಂಡುಟ್ಟು ಇರೊ ಬರೊ ಬೆಡ್ಶೀಟ್ ಸೀರೆ ಎಲ್ಲ ಒಂದು ಕಡೆ ಪೇರಿಸಿಟ್ಟೆ.

ಕೈನಲ್ಲಿ ಪೆನ್ನು ಪುಸ್ತಕ ಮರೆಯಲಿಲ್ಲ.  ಅದು ಇತ್ತೀಚೆಗೆ ಬರೆಯೊ ಚಾಳಿ ತಗಲಾಕ್ಕೊಂಡ ಮೇಲೆ ರೂಢಿಯಾಗಿಬಿಟ್ಟಿದೆ.  ಎಲ್ಲಿ ಹೋದರೂ ಅಲ್ಲೊಂದು ವಿಷಯ ಕಣ್ಣಿಗೆ ಬಿದ್ದರೆ ಹಾಗೆ ಗೀಟಾಕೋದು, ಮನೆಗೆ ಬಂದು ಟ್ಯಾಬಲ್ಲಿ ಜಮಾಯಿಸೋದು.  ಆದರಂತೆ ಇಲ್ಲಿ ಕೂಡಾ ನೋಟ್ ಮಾಡಿಕೊಳ್ಳಬೇಕಲ್ಲ ಅವರ ಜೀವನ ಶೈಲಿಯ ಮಾಹಿತಿ  ಹೀಗೆ ಏನೇನೋ ಲೆಕ್ಕಾಚಾರ.

ಅಂತೂ ನಿರೀಕ್ಷೆಯಂತೆ ಇಬ್ಬರು ಹೆಂಗಸರು ಬಂದರು.  ಪಾರ್ಕಿಂಗ್ ಜಾಗದಲ್ಲಿ ಜಾಗ ಮಾಡಿಕೊಟ್ಟು ಬಟ್ಟೆಗಳನ್ನು ಮುಂದಿಟ್ಟೆ.  “ಅವ್ವಾವ್ರೆ ನೋಡಿ ಒಂದೊಳ್ಳೆ ಸೀರೆ ಕೊಡ್ರಿ ದಿವಾನದ ಮೇಲೆ ಹಾಕಲು ಚಂದ ಇರ್ತವ್ರಿ.  ಸಿಂಗಲ್ ಕೌದಿಗೆ ಮುನ್ನೂರು ರೂಪಾಯಿ ಆಕತ್ರಿ. ಡಬ್ಬಲ್ ಕೌದಿ ಹೊಲಿಯಾಕ ನಾನೂರೈವತ್ತು ಕೊಡ್ಲಬೇಕ ಮತ್ತ ; ನಾವು ಮೊದಲ ರೇಟು ಫಿಕ್ಸ ಮಾಡ್ಬುತ್ತೀವ್ರಿ.  ಆಮೇಲ ನಮಗೂ ನಿಮಗೂ ಮಾತು ಬ್ಯಾಡಾ ನೋಡ್ರಿ.”   ಕಟ್ನಿಟ್ ವ್ಯವಹಾರ!

ನನಗೋ ಒಳಗೊಳಗೆ ಖುಷಿ.  ಇಷ್ಟು ಕಡಿಮೆ ಕೇಳ್ತಾರಾ?  ಅಷ್ಟೊಂದು ನೇಯ್ಗೆ ಹಾಕಿ ಹೊಲಿಯಲು! ಆದ್ರೂ ಸಣ್ಣ ಕಂಜೂಸ್ತನ ; “ಸ್ವಲ್ಪ ಕಡಿಮೆ ಮಾಡಮ್ಮಾ, ಅದೇನು ಇಷ್ಟೊಂದು ಹೇಳ್ತೀರಲ್ಲಾ”

” ಇಲ್ಲ ತಾಯಿ, ನಮಗೆ ಗಿಟ್ಟೋದಿಲ್ಲ.”

“ಸರಿ ಹೊಲಿರಿ, ಛಂದ ಹೊಲೀಬೇಕಾ ಮತ್, ನೋಡದವರು ನಾವೂ ಹೊಲಿಸ್ತೀವಿ ಅನ್ಬೇಕಾ ಮತ್ತೆ” ಬ್ಯಾಡ್ ಬ್ಯಾಡಾ ಅಂದರೂ ಭಾಷೆ ಅವರಂತಾಯಿತು ನನಗೇ ಗೊತ್ತಿಲ್ದೆ. ಆಯ್ತು ಬೀರುವಿನಿಂದ ಒಂದೊಳ್ಳೆ ಬಣ್ಣದ ಸೀರೆನೂ ಹೊರ ಬಂತು.

ಮೊಬೈಲು, ಪೆನ್ನು,ಪುಸ್ತಕ ನೋಡಿದ ಒಬ್ಬಳು “ಇದೇನು ಬರ್ಕತ್ತೀರಿ.  ಫೋಟೊ ತೆಗಿತೀರಾ?”  ಖುಷಿಯಿಂದ ರೆಡಿ ಆದಂತಿತ್ತು ಅವರುಗಳ ಹಾವ ಭಾವ.  ಎಷ್ಟು ಸೂಕ್ಷ್ಮ ಮತಿಗಳು ಅಂದರೆ ಆಗಲೆ ಎಲ್ಲೋ ನಡೆದ ಪುರಾಣ ಬಿಚ್ಚಿಟ್ಟರು ಹೆಮ್ಮೆಯಿಂದ ತಮಗೇನು ಇದು ಹೊಸತಲ್ಲ ಎನ್ನುವಂತೆ!  ಬಲು ಘಾಟಿ ಅಂದುಕೊಂಡೆ.

” ಅವರು ಟೀವಿಯಲ್ಲಿ ಕೆಲಸ ಮಾಡುವವರು,ನಮ್ಮ ಫೋಟೊ ತೆಗೆದು, ನಮ್ಮ ಹತ್ತಿರ ಊರು, ಕೇರಿ ಅದೂ ಇದೂ ಎಲ್ಲ ವಿಚಾರಿಸಿ ಟೀವಿಯಲ್ಲಿ ಹಾಕ್ತೀನಿ ಅಂದವ್ರೆ.  ಅವ್ವಾ ನೀವೂ ಟೀವಿಯವರಾ?”

“ಅಲ್ಲಾ ನಾ ಬರೆಯೋದಷ್ಟೆ.”

“ಮತ್ತೆ ಮೊಬೈಲ್ ಯಾಕೆ? “

ಪಾಪ! ನಿರಾಸೆಯಾದಂತಂತಿತ್ತು ಮುಖ.  ” ನಿಮ್ಮ ಫೋಟೊ ತೆಗೆಯೋಕೆ”  ಮತ್ತದೆ ಸಡಗರ.  ಒಂದೊಂದೇ ಮಾಹಿತಿ  ಮಾತುಗಾತಿಯರಿಂದ ಪಡೆದೆ.

“ಊರು ಹೊಸದುರ್ಗ ತಾಲ್ಲೂಕು ಅಂತರ್ಗಟ್ಟಿ. ಹೆಸರು ಗಂಗಮ್ಮ ಇನ್ನೊಬ್ಬಳ ಹೆಸರು ಹುಲುಗೆಮ್ಮ..  ಮನೆಯಲ್ಲಿ ನಾಲ್ಕು ಐದು ಜನ ಇರೋದು.  ಮಕ್ಕಳು ಗೌರ್ನಮೆಂಟ್ ಶಾಲೆಗೆ ಹೋಗ್ತಾರೆ.  ಮನೆಯ ಹಿರಿಯರು ಅತ್ತಿ ಮಾವ ಅವರನ್ನು ನೋಡ್ಕೋತಾರೆ. ನಾವು 15 ರಿಂದ 20 ಜನ ಬೆಂಗಳೂರಿನ ಒಂದು ಕಡೆ ಬಂದು ಟೆಂಟ್ ಹಾಕೋದು.  ಬೇಸಿಗೆಯಲ್ಲಿ ಮಾತ್ರ ಈ ಕೆಲಸ.  ಬೆಳಗ್ಗೆ ಎದ್ದು ರೊಟ್ಟಿ  ಮಾಡ್ತೀವಿ ಮನೆಯಲ್ಲಿ ಇದ್ದರೆ.  ಈಗ ಇಲ್ಲಿ ಮುದ್ದೆ ಸಾರು ಮಾಡೋದು.  ಬೆಳಿಗ್ಗೆ ಏಳಕ್ಕೆಲ್ಲ ಮನೆ ಬಿಡ್ತೀವಿ.  ನಾವಿಲ್ಲಿ ಟೆಂಟಲ್ಲಿ ವಾಸ ಮಾಡೋದು.   ಸೀರೆಯಿಂದ ತಾಡಪಾಲ್ ತರ ಹೊಲಿದು ಟೆಂಟ್ ಮಾಡ್ಕಂತೀವಿ.  ಮಧ್ಯಾಹ್ನದ ಊಟ ಕೌದಿ ಹೊಲಿಸುವವರ ಮನೆಯಲ್ಲಿ ಏನಾರು ಸಿಕ್ಕರೆ ಸಂಜೆ ನಾಲ್ಕಕ್ಕೆಲ್ಲ ಟೆಂಟ್ ಸೇರ್ಕತ್ತೀವಿ.  ಕತ್ತಲಾಗೋದರೊಳಗೆ ಅಡಿಗೆ ಮಾಡಬೇಕು.  ದೀಪ ಇಲ್ಲರಿ.  ಕುಣಿಗಲ್ ಬೈಪಾಸ್ ನೆಲಮಂಗಲದಲ್ಲಿ ನಾಲ್ಕು ಇದೆರಿ ನಮ್ಮ ಟೆಂಟು.”

“ಕೌದಿ ಹೊಲಿಯುವ ದಾರ ಅಂಗಡೀಲಿ ಎಂಟುನೂರು ರೂಪಾಯಿ ಕೇಜಿಗೆ.  2 – 3 ಉಂಡೆ ಒಂದು ತಿಂಗಳು ಬರುತ್ತದ್ರಿ. ಮ್ಯಾಚಿಂಗ್ ಕಲರ್ ದಾರ ಹಾಕಿ ಹೊಲಿಯೋದ್ರಿ. ಎರಡೆಳೆ ದಾರದಲ್ಲಿ ಕಿರಿ ಹೊಲಿಗೆ ಹೇಳೋದು.  ಹುಟ್ಟಿ ಬೆಳೆದಿದ್ದೇ ಈ ಹೊಲಿಗೆಯಲ್ಲಿ.  ನಮ್ಮ ಜೀವನವೇ ಇದು.  ನಮ್ಮ ಹೆರಿಗೆಯೆಲ್ಲ ನಮ್ಮ ಮನೆಯಲ್ಲಿ ಆಗಿರೋದು.  ಈಗ ಎಲ್ಲ ಆಸ್ಪತ್ರೆಯಲ್ಲಿ.  20-21ಕ್ಕೆಲ್ಲ ಮದುವೆಯಾಗಿ ಇಬ್ಬರಿಗೂ ನಾಲ್ಕು ಜನ ಮಕ್ಕಳಿದ್ದಾರಿ. ಗರ್ಭಕೋಶ ತೆಗೆಸ್ಬಿಟ್ವಿ.  ಹೊಟ್ಟೆ ನೋವಿತ್ರಿ. ನಾವು ಸ್ಕೂಲಿಗೆ ಹೋಗಿಲ್ರಿ.   ಇಲ್ಲಿ ನಮಗೆ ಒಗ್ಗಿ ಬರೋದಿಲ್ರಿ, ನಮ್ಮೂರೇ ನಮಗೆ ಚೊಲೊ.  ಮರಾಠಿ ನಮ್ಮ ಕಡೆ ಜಾಸ್ತಿ ಇರೋದು.  ಬೆಳಗಾಂ ಹಿಂದೀ ಭಾಷೆ ಅಡ್ಜೆಸ್ಟ ಆಗಲ್ಲ.  ದಿನಕ್ಕೆ  ಐನೂರು ಸಿಗುತ್ತದ್ರಿ.  ಎಲ್ಲಾ ಖರ್ಚು ಕಳೆದು ಎರಡು ನೂರು ಉಳೀತದ್ರಿ.  ತಿಂಗಳಿಗೊಮ್ಮೆ ಊರಿಗೆ ಹೋಗಿ ಮಕ್ಕಳು ವಯಸ್ಸಾದವರನ್ನು ಮಾತಾಡಿಸಿಕೊಂಡು ದುಡ್ಡು ಕೊಟ್ಟು ಬರ್ತೀವ್ರಿ. ಗ್ಯಾಸ್ ಒಲಿ ಅಡಿಗಿ ಹಿಡಿಸೋದಿಲ್ರಿ.  ಸೌದಿ ಒಲಿ ಅಡಿಗೇನೆ ಮಾಡೋದ್ರಿ.  ಕಾಡಿಗೆ ಹೋಗಿ ಜಾಲಿ ಮುಳ್ಳು ತರೋದು.  ತೆಂಗಿನ ಮರದ ಸೌದೆ ಉಪಯೋಗಿಸಿ ಅಡಿಗೆ ಮಾಡೋದ್ರಿ ಊರಾಗ.”

“ಮಳೆಗಾಲದಲ್ಲಿ ಊರಲ್ಲೆ ಇದ್ದು ಕೆಲಸ ಮಾಡೋದ್ರಿ. ನಮ್ಮ ಕಡೆ ರಗಡ್ ಹಳಿ ಸೀರೆ ಸಿಗ್ತಾವ್ರಿ.  ಆಶ್ರಮದವರು ದೊಡ್ಡ ದೊಡ್ಡ ಸಂತೆಯಲ್ಲಿ ಹರಾಜಾಕ್ತಾರಿ ; ಅಲ್ಲಿ ಬಟ್ಟೆ ತಗೊಂಡು ಮಳೆಗಾಲದಲ್ಲಿ ಊರಲ್ಲಿ ಕೌದಿ ಹೊಲಿತೀವ್ರಿ.  ಐನೂರಕ್ಕೆಲ್ಲ ರಗಡ್ ಬಟ್ಟಿ ಸಿಗ್ತಾವ್ರಿ.  ಪಗಡೆ ಕೌದಿ ಹೊಲಿಯೋದರಿ.  ಐದು ತಿಂಗಳು ಆಗುತ್ರಿ ಒಂದು ಕೌದಿ ಹೊಲಿತೀವ್ರಿ.  ಪೀಸ್ ಪೀಸ್ ಹಚ್ಚಿ ಹೊಲಿಬೇಕ್ರಿ.  ಇನ್ನೊಂದು ದಟ್ಟ ಕೌದಿ.  ಹಳೆ ಸೀರೆ ಬೆಡ್ಶೀಟ್ ಸೇರಿಸಿ ಹೊಲಿಯೋದ್ರಿ.”

“ಮತ್ತೆ  ಅಂತರ್ಗಟ್ಟಿ, ಹಿರಿಯೂರು,ಪೀರಾಪುರ ಇಲ್ಲೆಲ್ಲ ಜಮೀನಿನಾಗ ಕೂಲಿ ಮಾಡಲು ಹೋಗ್ತೀವ್ರಿ.  ದಿನಕ್ಕೆ ಇನ್ನೂರು ಉಟ ತಿಂಡಿ ಕೊಟ್ಟ ಕೊಡ್ತಾರಿ.  ಗೌರ್ನಮೆಂಟನವರು ಮನಿ ಕಟ್ಕೊಟ್ಟಿದಾರ್, ಹಂಚಿನ ಮನೆ.  ಹಾಲು,ಅಡಿಗೆ ಮನಿ.  ಎಕ್ಸಟೆಂಡ್ ಮಾಡಿವ್ರಿ.  ಮಕ್ಕಳು ದೊಡ್ಡೋರಾದ ಮೇಲೆ ದೊಡ್ಡ ಮನಿ ಕಟ್ಬೌದು.  ನಮ್ಮೂರಲ್ಲಿ ಎಸ್ಎಸ್ಏಲ್ಸಿ, ಬಿಎ, ಎಂಎ ಆದವರೆಲ್ಲ ಕೆಲಸ ಸಿಗಲಿಲ್ಲ ಅಂತ ಊರಲ್ಲಿ ಸಾಲ ಮಾಡಿ ಅಂಗಡಿ ಇಟ್ಟವರು ಇದ್ದಾರಿ.  ಸಾಲಿ ಕಲಿಲಾರದವರು ಸ್ಟೋವ್ ರಿಪೇರಿ ಅದೂ ಇದೂ ಕಲಿತು ಜೀವನ ಮಾಡ್ತಾರಿ.”

“ಅಲ್ಲಾ ಈಗ ಮೋದಿ ಎಲ್ಲರಿಗೂ ಗ್ಯಾಸು ಕೊಡ್ತಾರಂತೆ ತಗಳಲ್ವಾ?”

“ಅವರ್ಯಾರು ನಮಗೊತ್ತಿಲ್ಲ ತಾಯಿ. ನಮ್ಮೂರ ಸಾಹೇಬರು ಮಾತ್ರ ಗೊತ್ತು ತಾಯಿ.” (ಅಂತೂ ಮೋದೀಜಿ ಯಾರಂತ ಗೊತ್ತಿಲ್ಲದವರು ಇದ್ದಾರೆ ಅಂತಾಯಿತು!) ನಮಗೇನಿದ್ರೂ ಅವರೆ ಮಾಡೋದು ತಾಯಿ.”

“ಕೌದಿ ಹೊಲಿಸ್ತೀರಾ ಅಂತ ಬೀದಿ ಬೀದಿ ಓಡಾಡೋದು.  ಸಿಟಿಗೆ ಬರೋದು.  ರಾತ್ರಿ ಆಯ್ತಂದ್ರ ಗುಂಪುಗಳಿಗೆ ಹೇಳಾಕ ಬೇಕು ಮೊಬೈಲಲ್ಲಿ ಒಬ್ಬರಿಗೊಬ್ಬರು ಕಂಟಾಕ್ಟನಲ್ಲಿ ಇರ್ತೀವಿ.  ಕಾಲ ಕೆಟ್ಟೋಗೈತಿ ತಾಯಿ.  ಒಬ್ಬರೇ ಓಡಾಡೋದು ಭಯ ತಾಯಿ.  ನಮಗೆ ಒತ್ತೋಕೆ ಬರಲ್ಲ, ಅವರು ಮಾತಾಡಿದರೆ ಮಾತಾಡ್ತೀವಿ.  ಕುಡಿತ ಏನೂ ಇಲ್ಲ.  ಹೊಟ್ಟೆ ತುಂಬ ಎರಡೊತ್ತು ಊಟ ಇದ್ದರೆ ಸಾಕು.  ಕೂಲಿ ಮಾಡಿ ಜೀವನ ಸಾಗಿಸೋದು ಸಾಕಾಗಿದೆ ತಾಯಿ.  ಮದುವೆಗಳಿಗೆ ಕೈ ಸಾಲ ಮಾಡಿ ತಿಂಗಳು ತಿಂಗಳು ಕಟ್ಟಿ ತೀರಿಸ್ತೀವಿ.  ಇನ್ನು ಬ್ಯಾಂಕಲ್ಲಿ ಎಲ್ಲಿ ಇಡನ ತಾಯಿ.  ಕಾಲ್ ಲೀಟರ್ ಎಣ್ಣೆ ಹತ್ತೊಂಬತ್ತು ರೂಪಾಯಿ, ಅಕ್ಕಿ ಮೂವತ್ತು ರೂಪಾಯಿಗೆ ಕೇಜಿ ಇಲ್ಲಿ ಖರ್ಚು.  ಇನ್ನು ಟೀ ಕುಡಿಯೋಣ ಅಂದರೆ ಹತ್ತು ರೂಪಾಯಿ ಅಂತಾರೆ.   ಏನ್ಮಾಡೋದು ತಾಯಿ ಮನಷಾ ಅನ್ಮೇಲೆ ಬದುಕಿನಾಗ ಕಷ್ಟ ಬರಲಿ ಸುಃಖ ಬರಲಿ ಒಟ್ಟ ಸಹಿಸ್ಕೊಂಡು ಅನುಸರಿಸಿಕೊಂಡು ಹೋಗಲೆ ಬೇಕಲ್ರಿ.”

“ಮಾತಾಡ್ತಾ ಮಾತಾಡ್ತಾ ಆಗಲೇ ಕೌದೀನೂ ರೆಡಿಯಾಗ್ತಾ ಬಂತು ನೋಡಿ. ಇನ್ನೇನು ಸ್ವಲ್ಪ ಇದೇರಿ”

“ಇದೇನ್ರೆ ಹೀಗ ಇಷ್ಟಿಟ್ಟು ದೂರ ದೂರ ಹೊಲಿಗೆ ಹಾಕಿದ್ದೀರಾ?  ಕೌದಿ ಅಂದರೆ ತುಂಬಾ ಹತ್ತಿರ ಹತ್ತಿರ ಹೊಲಿಗೆ ಹಾಕಬೇಕಲ್ವಾ? “

“ನಾವು ಹೊಲಿಯಾದೆ ಹೀಗರಿ.  ನೀವು ಹೇಳೊ ಹೊಲಿಗೆ ಹಾಕದ್ರ ಪಗಡೆ ಕೌದಿ ಆಗತ್ತರಿ.  ಅದಕೆ ಬಹಳ ಠೈಮು ಬೇಕ, ರೊಕ್ಕನೂ ಭಾಳಾ ಅಗ್ತದ್ರಿ. “

“ಅಯ್ಯೋ ಶಿವನೆ!  ಬರೀ ಮನಸಲ್ಲಿ ಮಂಡಿಗೆ ತಿಂದಿದ್ದೇ ಬಂತು.  ನೆಟ್ಟಗೆ ಹತ್ತು ಹೊಲಿಗೆ ಹಾಕದೆ ಸುತ್ತ ಬಟ್ಟೆ ಸೇರಿಸಿ ಹೊಲಿದು ಮದ್ಯ ಮದ್ಯ ಅಡ್ಡ ಉದ್ದ ಗೀಟಾಕಿದಂತೆ ಹೊಲಿದು ಆಯ್ತು ಕೌದಿ ಹೊಲಿದಿದ್ದು ಅಂತೀರಲ್ಲಾ?” ಅಂತಂದು ಸುಮ್ಮನಾದೆ.

ಆದರೆ ನಾ ನೋಡಿದ ಕೌದಿಯೆಲ್ಲಿ ; ಇದೆಲ್ಲಿ.  ನನ್ನ ಕಲ್ಪನೆಯ ಕೌದಿ ಇದಾಗಿರಲಿಲ್ಲ.  ಇದನ್ನು ನೋಡಿ ತುಂಬಾ ನಿರಾಸೆ ಆಗಿದ್ದಂತೂ ನಿಜ.  ಮತ್ತೆ ನಾನು ಏನೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.  ಕಾರಣ ನನ್ನಂತೆ ಹೆಣ್ಣಾದ ಅವರ ದುಡಿಯುವ ವೈಖರಿ, ಅವರ ಕಷ್ಟದ ಜೀವನ ಮನಸ್ಸು ಮಂತ್ರ ಮುಗ್ಧವಾಗುವಂತೆ ಮಾಡಿತ್ತು.

ಏನೂ ಹೇಳದೆ ಅವರು ಕೇಳಿದಷ್ಟು ದುಡ್ಡು ಕೊಟ್ಟು, ಟೀ ಜೊತೆಗೆ ಬಿಸ್ಕತ್ತು ಕೊಟ್ಟೆ.  ಹೊರಡುವಾಗ ಜೊತೆಗೆ ಮಕ್ಕಳಿಗೆ ಒಂದಷ್ಟು ಹಳೆಯ ಬಟ್ಟೆ ಅವರಿಬ್ಬರಿಗೂ ಒಂದೊಂದು ಸೀರೆ ಕೊಟ್ಟೆ.  ಖುಷಿಯಿಂದ ಹೊರಟ ಅವರು ” ನಿಮ್ಮ ಹತ್ತಿರ ಮಾತಾಡ್ತಾ ಠೈಮು ಹೋಗಿದ್ದೇ ಗೊತ್ತಾಗ್ಲಿಲ್ರೀ, ಹೋಗ್ತಾ ಅಲ್ಲಿ ಇಲ್ಲಿ ಸೌದಿ ಒಟ್ಟಾಂಕ್ಕಂಡು ಕತ್ತಲಾಗೋದ್ರೊಳಗ ಅಡಿಗಿ ಮಾಡ್ಬೇಕ್ರಿ.  ಬಹಾಳ್ ತಡ ಆಯ್ತ್ರಿ. ಅಮ್ಮ ಬರ್ತೀವಿ, ನಿಮ್ಮ ಹೊಟ್ಟೆ ತಣ್ಣಗಿರಲಿ ಕಂಡ್ರವ್ವಾ. ಸಂದಾಕಿರಿ.”

ಅವರ ಮಾತು ಕೇಳಿ ಕಣ್ಣು ತುಂಬಿ ಬಂತು.  ಮತ್ತೆ ಬಂದರೆ ಕೌದಿ ಹೊಲಿಸುವ ಮನಸ್ಸು, ನನ್ನ ಕಲ್ಪನೆಯ ಕೌದಿಯ ಆಸೆಗಲ್ಲ , ನನ್ನಿಂದ ಅವರಿಗೆ ಕಿಂಚಿತ್ತು ಜೀವನಕ್ಕೆ ಸಹಾಯ ಆಗಬಹುದಲ್ಲಾ ಅನ್ನುವ ಯೋಚನೆಯಲ್ಲಿ!

  • Geetha Hegde

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!