“ಅಪ್ಪಾ ನಾಳೆಯೇ ನನ್ನ ಫೀಸ್ ಕಟ್ಟೊದಕ್ಕೆ ಕೊನೇ ದಿನ. ಇಪ್ಪತ್ತೈದು ಸಾವಿರ ತುಂಬದಿದ್ದರೆ ಈ ವರುಷ ಪೂರ್ತಿ ಮನೆಯಲ್ಲೆ ಇರಬೇಕಪ್ಪ.” ಮಗ ಹೇಳಿ ಫೋನ್ ಕೆಳಗಿಟ್ಟರೂ ಗಂಗಪ್ಪ ಮಾತ್ರ ಕೈಯಲ್ಲಿದ್ದ ಫೋನ್ ಹಾಗೇ ಹಿಡಿದಿದ್ದ. ಅಪ್ಪನ ಆಸ್ಪತ್ರೆ ಖರ್ಚಿಗೆಂದು ಮೊನ್ನೆ ತಾನೇ ಎಲ್ಲ ಪಗಾರವನ್ನೂ ಕಳಿಸಿ ಕೈಯೆಲ್ಲ ಖಾಲಿ ಆಗಿಹೋಯ್ತಲ್ಲ. ಏನು ಮಾಡಲಿ? ಮಗನ ಭವಿಷ್ಯದ ಪ್ರಶ್ನೆ. ಅವನನ್ನು ಓದಿಸಲೇಬೇಕು ಎನ್ನುವ ಹಠದಿಂದ ತಾನು ಮುಂದೆ ಹೆಜ್ಜೆ ಇಟ್ಟಾಗಿದೆ. ಅವನೂ ಓದಲಿಕ್ಕೆ ಚುರುಕಾಗಿದ್ದಾನೆ. ಓದಲಿ ಎಂದು ತನ್ನಾಸೆ. ಈಗ ಫೀಸ್ ತುಂಬದಿದ್ದರೆ? ತಲೆಯೆಲ್ಲ ಬಿಸಿಯಾದಂತಾಯ್ತು. ಒಮ್ಮೆ ತಲೆಹಿಡಿದುಕೊಂಡು ಸುಮ್ಮನೆ ಕುಳಿತ ಗಂಗಪ್ಪನಿಗೆ ಆ ಮನೆ ನೆನಪಾಯ್ತು. ತಿರುಗಿ ಯೋಚಿಸದೇ ಆ ಕಡೆಗೆ ಹೆಜ್ಜೆ ಹಾಕತೊಡಗಿದ.
****************************
ಹೊಸದಾಗಿ ಕಟ್ಟಿದ ಆ ನಾಲ್ಕಂತಸ್ತಿನ ಬಂಗಲೆ ಇಂದು ದೀಪದ ಮಾಲೆ, ತೆಂಗಿನ ಮುಂಬಾಗಿಲ ತೋರಣ, ಹೂವಿನ ಮಾಲೆ ಹೊದ್ದು ಗೃಹಪ್ರವೇಶಕ್ಕೆ ಸಿಂಗರಗೊಂಡು ನಿಂತಿತ್ತು. ಮನೆಯ ಒಳಹೊರಗೆಲ್ಲ ಸಂಬಂಧಿಕರ, ಸ್ನೇಹಿತರ ಓಡಾಟ, ಮನೆ ಮಂದಿಯ ಸ್ವಾಗತದ ನುಡಿ ಇವೆಲ್ಲ ದೂರದವರೆಗೂ ಕಾಣುವಷ್ಟು, ಕೇಳುವಷ್ಟು ಜೋರಾಗಿತ್ತು. ಹೊಸದಾಗಿ ಕಟ್ಟಿದ ಪುಟ್ಟ ಈಜುಗೊಳದಲ್ಲಿ ಕಾಲಾಡಿಸುತ್ತಾ, ಹೊಸದಾಗಿ ಹಾಕಿದ ಲಾನ್ ಮೇಲೆ ಕುಳಿತು ಮಾತನಾಡುತ್ತಾ ಕ್ಷೇಮ ಸಮಾಚಾರ ಕೇಳುವವರ ನಡುವೆಯೇ, ಭರ್ಜರಿ ರೇಶ್ಮೆ ಸೀರೆ, ಒಡವೆ ಧರಿಸಿ ಮೈಯನ್ನು ಕುಲುಕುಲು ಅಲುಗಾಡಿಸುತ್ತಾ ಬಂದವರನ್ನೆಲ್ಲ ಮಾತನಾಡಿಸುವ, ವಿಶೇಷ ಉಡುಗೆ ಧರಿಸಿ ಊರಿನ ಗಣ್ಯರನ್ನೆಲ್ಲ ಕೈಕುಲುಕುತ್ತಾ ಸ್ವಾಗತಿಸುವ ಮನೆಯ ಯಜಮಾನ ಪ್ರಸಿದ್ಧ ಉದ್ಯಮಿ ಸೀತಾರಾಮ ರಾಯುಡು ಹಾಗೂ ಅವರ ಪತ್ನಿ ಯಶೋದಮ್ಮ ಸಮಾರಂಭದ ಯಶಸ್ಸಿಗೆ ಶ್ರಮಿಸುತ್ತಿದ್ದರು. ಊರಿನ ಗಣ್ಯರೆಲ್ಲ ಬರುವವರಿದ್ದು, ತಮ್ಮ ಪ್ರತಿಷ್ಠೆಯನ್ನೂ ಸಹ ತೋರಿಸಿಕೊಳ್ಳಲು ಇದೊಂದು ಅವಕಾಶ ಅವರ ಪಾಲಿನದಾಗಿತ್ತು.
ಉದ್ಯಮಿ ಸೀತಾರಾಮ ರಾಯುಡು ಅವರ ತಂದೆ ಸಣ್ಣದಾಗಿ ಕಾಂಟ್ರ್ಯಾಕ್ಟ್ ಮಾಡಿಕೊಂಡಿದ್ದವರು. ಮಗ ತಂದೆಯ ವ್ಯವಹಾರವನ್ನು ವಿಸ್ತರಿಸಿದರು. ಕೇವಲ ಕಾಂಟ್ರ್ಯಾಕ್ಟ್ ಮಾತ್ರವಲ್ಲದೇ ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಮಾಡುತ್ತಿದ್ದರು. ವ್ಯವಹಾರದಲ್ಲಿ ಪಳಗಿದ ಬುದ್ಧಿಯವರಾದ ರಾಯುಡು ಅವರು ತಮ್ಮ ಅಂತಸ್ತನ್ನು ಹೆಚ್ಚಿಸಿಕೊಳ್ಳುತ್ತಲೇ ಬ್ಯುಸಿನೆಸ್ ಕ್ಷೇತ್ರದಲ್ಲಿ ಗಟ್ಟಿಸ್ಥಾನ ಗಳಿಸಿದ್ದರು. ಬ್ಯುಸಿನೆಸ್ ಎಂದರೆ ಹಣ ದ್ವಿಗುಣವಾಗಬೇಕು. ದ್ವಿಗುಣವಾದ ಹಣವನ್ನು ಇನ್ನೊಂದರಲ್ಲಿ ತೊಡಗಿಸಬೇಕು; ಅವರ ಯಶಸ್ಸಿನ ಹಿಂದೆ ಈ ಗುಟ್ಟು ಅಡಗಿತ್ತು. ಇಂತಹ ಜಾಣ್ಮೆಯಿಂದಲೇ ರಾಯುಡು ಸಮಾಜದಲ್ಲೂ ಒಂದು ಅಂತಸ್ತನ್ನು ಗಳಿಸಿದ್ದು ಈಗ ಕಟ್ಟಿದ ಮನೆಯೂ ಅವರ ಅಂತಸ್ತಿಗೆ ತಕ್ಕ ಹಾಗೆ ಇತ್ತು.
‘ತಾನೊಂದು ಮಹಲ್ ಕಟ್ಟಬೇಕು’ ಇದು ಸೀತಾರಾಮ ರಾಯುಡು ಅವರ ಬಹುವರುಷದ ಕನಸು. ಅವರ ವ್ಯವಹಾರ ಬೆಳೆದಂತೆ ತಮ್ಮ ಕನಸಿನ ಮಹಲ್ಗೂ ಕೈ ಹಾಕಿದ್ದರು. ಜೊತೆಜೊತೆಗೆ ನಗರದ ಬಹುತೇಕ ಯೋಜನೆಗಳನ್ನೆಲ್ಲ ತಮ್ಮದಾಗಿಸಿಕೊಂಡು ಅದನ್ನೂ ಯಶಸ್ವಿಯಾಗಿ ಮಾಡಿ ಮುಗಿಸಿದ್ದರು. ಇನ್ನು ರಾಯುಡು ಪರಿಶ್ರಮಿ ಎನ್ನುವದರಲ್ಲಿ ಎರಡು ಮಾತಿರಲಿಲ್ಲ. ಹಾಗೆಯೇ ವ್ಯವಹಾರದಲ್ಲೂ ಭಾರಿ ಚಾಣಾಕ್ಷತೆ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿತ್ತು. ಚಿಕ್ಕಚಿಕ್ಕ ವಿಚಾರವನ್ನೂ ಸೂಕ್ಷ್ಮವಾಗಿ ಗಮನಿಸುವ ಅವರು ಮನೆ ಕಟ್ಟುವ ವಿಷಯದಲ್ಲೂ ಅಷ್ಟೇ ಕುಶಲತೆ ತೋರಿದ್ದರು. ಜನರಿಂದ ಕೆಲಸ ತೆಗೆಸುವ ಮಾತಿನ ಜಾಣ್ಮೆಯಿಂದಾಗಿ ಅವರ ಕನಸಿನ ಮಹಲ್ ಸುಂದರವಾಗಿ ಎದ್ದು ನಿಂತಿತ್ತು. ನಗರದ ಎಲ್ಲ ಗಣ್ಯರೂ ಬಂದು ಮನೆ ನೋಡಿ ಶುಭ ಹಾರೈಸುತ್ತಿದ್ದರು. ಅವರೆಲ್ಲರ ಕೈಕುಲುಕುತ್ತಾ ಮುಖದ ತುಂಬಾ ನಗೆ ಚೆಲ್ಲುತ್ತಾ ರಾಯುಡು ದಂಪತಿಗಳೂ ಸಹ ತಮ್ಮದೇ ಅವಸರದಲ್ಲಿದ್ದರು.
***************
ಗಂಗಪ್ಪ ಜೋರಾಗಿ ಹೆಜ್ಜೆಹಾಕುತ್ತಾ ಮಹಲ್ ಕಡೆ ಬಂದಾಗ ಆತನಿಗೆ ಆ ಮನೆಯ ಗೃಹಪ್ರವೇಶದ ಸಂಭ್ರಮ ಕಾಣ ಸಿತು. ತನ್ನೂರಲ್ಲಾದರೆ ಮನೆ ಕಟ್ಟಿದವರಿಗೆ ಗೃಹಪ್ರವೇಶದ ದಿನ ಹೊಟ್ಟೆ ತುಂಬಾ ಊಟ ಹಾಕಿ, ಕೈ ತುಂಬಾ ಉಡುಗೊರೆ ನೀಡಿ ಸತ್ಕರಿಸುವದು ಸಂಪ್ರದಾಯ. ಇಲ್ಲಿ ಮಾಡಿದ ಕೆಲಸಕ್ಕೆ ದುಡ್ಡು ನೀಡಿದರೆ ಆಯ್ತು, ಆ ಮನೆಗೂ ಅವನಿಗೂ ಸಂಬಂಧವಿರುವದೇ ಇಲ್ಲ; ಒಂದು ನಿಟ್ಟಿಸಿರು ಹೊರಬಂತು. ಅದನ್ನು ಕಟ್ಟಿಕೊಂಡು ತನಗೇನಾಗಬೇಕು? ತನ್ನ ಕೆಲಸ ಇಂದೇ ಆಗಬೇಕು, ರಾಯುಡು ಎಷ್ಟು ಔದಾರ್ಯವಂತರೆಂದು ತಾನು ನೋಡಿದ್ದೇನಲ್ಲ. ಖಂಡಿತ ತನ್ನ ಕಷ್ಟ ಕೇಳುತ್ತಾರೆ ಅವರಿಗೆ ಪುರುಸೊತ್ತಾಗಲಿ, ಆಗ ಕೇಳೋಣ ಎಂದುಕೊಂಡು ಅಲ್ಲೇ ದೂರದಲ್ಲಿ ಒಂದು ಕಟ್ಟೆ ಮೇಲೆ ಕೂತ.
ಮನೆ ಅಲ್ಲ, ಮಹಲ್, ತಾನು ಗಾರೆ ಕೆಲಸ ಮಾಡಿದ ಮಹಲ್ ಅದು, ಮನಸ್ಸಿನಲ್ಲೇ ಹೆಮ್ಮೆ ಉಕ್ಕಿ ಬಂತು. ತಾನು ಹಡೆದ ಮಕ್ಕಳ ಮೇಲಿನ ಮಮತೆ ಅದು. ಸುತ್ತಲೂ ನೋಡಿದ. ಆ ಮನೆ ಕಟ್ಟಿದ ಯಾವ ಕೆಲಸಗಾರರೂ ಕಾಣಲಿಲ್ಲ. ಯಾಕೆ ಬರುತ್ತಾರೆ? ಆ ನೆಲದ ಕೆಲಸ ಮಾಡುವ ಮೋಹನ, ಬಣ್ಣ ಬಳಿಯುವ ಚಿನ್ನು, ಇಲೆಕ್ಟ್ರಿಕ್ ಕೆಲಸ ಮಾಡುವ ಹನುಮ ಇವರೆಲ್ಲ ಇನ್ನೂ ತಾನು ಕೆಲಸ ಮಾಡುವ ಕಡೆಯೇ ಇದ್ದಾರೆ. ಆದರೆ ಆ ಗೋಡೆ ಕಟ್ಟುವ ರಾಮ ಮಾತ್ರ ಎಲ್ಲಿದ್ದಾನೋ? ತನಗೂ ಅವನಿಗೂ ಒಳ್ಳೆ ಸ್ನೇಹ ಇತ್ತು. ಮಹಾ ಕುಡುಕನಾದರೂ ತುಂಬಾ ಚೆನ್ನಾಗಿ ಗೋಡೆ ಕಟ್ಟುತ್ತಿದ್ದ. ಈ ಮಹಲ್ ಕಟ್ಟುವ ವೇಳೆಗೆ ಅದೆಷ್ಟು ಕಷ್ಟ ಆಯಿತು, ಗೋಡೆ ಕಟ್ಟುವದಂತೂ, ಅಬ್ಬಾ! ರಾಮ ಒಳ್ಳೆ ಪಳಗಿದವನಾದರೂ ಸೋತು ಸುಣ್ಣವಾಗಿ ಹೋಗಿದ್ದ. ಅದೆಷ್ಟು ಅಂಕುಡೊಂಕು, ಅಂಚು, ತುದಿ ಎಲ್ಲ ನೋಡಿ ನೋಡಿ ಕಟ್ಟಬೇಕು. ಈ ಸಾಹೇಬರೋ, ಮೂಲೆ ಮೂಲೆಯನ್ನೂ ನೋಡಿ ತಿದ್ದಿತೀಡಿ ಸ್ವಲ್ಪ ತಪ್ಪಾದರೂ ಮೇಸ್ತ್ರಿಗೆ ಹಿಡಿದು ಝಾಡಿಸುತ್ತಿದ್ದರು. ಸಿಕ್ಕಾಪಟ್ಟೆ ಅಲಂಕಾರಿಕವಾಗಿ ಇರಬೇಕೆನ್ನುವ ಬೇಡಿಕೆ ಬೇರೆ. ದುಡ್ಡು ನೀಡುತ್ತಿದ್ದರೂ ರಾಮ ಆಗಾಗ್ಗೆ ‘ದುಡ್ಡು ಬಂದು ಗೋಡೆ ಕಟ್ಟುವದಿಲ್ವಲ್ಲ‘ ಎಂದು ಗೊಣಗಾಡುತ್ತಿದ್ದ.
ನಡುವೆಯೇ ಒಂದು ದುಃಖದ ಘಟನೆ ಆಗಿಹೋಯ್ತಲ್ಲ; ಗಂಗಪ್ಪ ಆ ಘಟನೆ ನೆನಪಾದಂತೆ ಮಡಿಚಿ ಕೂತಿದ್ದ ಕಾಲನ್ನು ಎಳೆದು ನೀಡಿಕೊಂಡ. ಉಸಿರು ದೀರ್ಘವಾಗಿ ಹೊರಬಂತು. ಕ್ಷಣಕಾಲ ಆ ಘಟನೆಯನ್ನು ನೆನಪಿಸಿಕೊಂಡ.
‘ಆಗಿನ್ನೂ ತಾನು ಅಲ್ಲಿ ತಳದಲ್ಲಿರುವ ಗ್ಯಾರೇಜ್ನ ಭಾಗದ ಗಾರೆ ಕೆಲಸ ಶುರು ಮಾಡಿದ್ದೆ. ಮೇಲೆ ಮಹಡಿಯ ಭಾಗದ ಗೋಡೆಯನ್ನು ರಾಮ ಆತನ ಸಹಾಯಕನ ಜೊತೆ ಕಟ್ಟುತ್ತಿದ್ದ. ಒಂದೊಂದೇ ಇಟ್ಟಿಗೆಯನ್ನು ಕೆಳಗಿನಿಂದ ಗಡಗಡೆ ಮಾಡಿ ಬಾವಿಯಿಂದ ನೀರು ಸೇದುವ ಹಾಗೆ ಇಟ್ಟಿಗೆಯನ್ನು ನೀಡುತ್ತಿದ್ದ ನತ್ತು ಎನ್ನುವ ಹುಡುಗ. ರಾಮನ ಬಳಿ ನಿಂತ ಇಪ್ಪತ್ತರ ಹರೆಯದ ಶಿವ ಅದನ್ನು ತೆಗೆದುಕೊಳ್ಳುತ್ತಿದ್ದ. ಮಹಡಿಗೆ ತುಂಬಾ ಅಂಕುಡೊಂಕಿನ ಟೆರೇಸ್ ಬೇಕೆಂದು ಮಾಡಿಸಿದ್ದರು. ಶಿವೂನಿಗೆ ಆಯತಪ್ಪಿ ಹೋಯ್ತು. ಧಡ್ ಎನ್ನುವ ಸದ್ದು ಮಾತ್ರ ನಮ್ಮ ಕಿವಿಗೆ ಬಿದ್ದಿತ್ತು. ಶಿವೂ ಕ್ಷಣಮಾತ್ರದಲ್ಲಿ ಇಲ್ಲವಾಗಿದ್ದ. ಕೆಳಗಡೆ ಇರುವ ಕಲ್ಲು ತಲೆಗೆ ಬಡಿದು ಎಲ್ಲರೂ ನೋಡುವಷ್ಟರಲ್ಲಿ ರಕ್ತ ಚಿಮ್ಮಿ ಶಿವೂನ ಪ್ರಾಣಪಕ್ಷಿ ಹಾರಿಹೋಗಿತ್ತು. ಎಲ್ಲರ ಎದೆ ಝಲ್ಲೆಂದು ಚೀರಿತ್ತು. ಎಲ್ಲರನ್ನೂ ನಗುನಗುತ್ತಾ ಮಾತನಾಡಿಸಿಕೊಂಡಿದ್ದ ಶಿವು ಇನ್ನಿಲ್ಲ ಎನ್ನುವದನ್ನು ನಂಬುವದಕ್ಕೇ ಮನಸ್ಸು ಬಾರದಾಗಿತ್ತು. ಕಣ್ಣೆದುರೇ ದುರಂತ ನಡೆದುಹೋಗಿತ್ತು. ಎಲ್ಲರೂ ಬಂದರು. ರಾಯುಡು ದಂಪತಿಗಳೂ ಬಂದು ಗೋಳಾಡುತ್ತಿದ್ದ ಶಿವೂನ ತಾಯಿಯನ್ನು ತಬ್ಬಿ ಸಂತೈಸಿ ಕೈಗೆ ಐವತ್ತು ಸಾವಿರ ಕೊಟ್ಟದ್ದು ನೋಡಿ ತನಗೆ ಅವರ ಔದಾರ್ಯದ ಪರಿಚಯವಾಗಿತ್ತು. ಮುಂದೆ ಯಥಾಪ್ರಕಾರ ಕೆಲಸ ಸಾಗಿತ್ತು’.
ಕೆಲವು ದಿನಗಳಾದ ಮೇಲೆ ಟೈಲ್ಸ್ ಕೆಲಸಕ್ಕೆ ಮೋಹನ ಬಂದಾಗ ಈ ಮಾತು ನಮ್ಮ ನಡುವೆ ಬಂದಿತ್ತು. ಆತ ಹೇಳಿದ್ದು ಬೇರೆಯೇ ಇತ್ತು.
“ಅಲ್ಲಾ ಶಿವೂನ ಕಡೆಯವರ್ಯಾರೂ ಬರಲಿಲ್ಲವೇ?”
“ಸಾಹೇಬರು ದುಡ್ಡು ಕೊಟ್ಟರು. ಬಳಿಕ ಆತನ ತಾಯಿಯಿಂದ ಕೇಳಿ ಅವನ ಕಡೆಯವರನ್ನು ಕರೆಸಿದರು. ಅವರು
ಬಂದು ಹೆಣ ತೆಗೆದುಕೊಂಡು ಹೋದರು.”
“ಇಂತಹ ದುರಂತ ಪೊಲೀಸ್ ಕೇಸ್ ಎನಿಸಿಕೊಳ್ಳುತ್ತದೆ. ಪೊಲೀಸರು ಬರಬೇಕು, ಮಹಜರು ನಡೆಸಬೇಕು; ಸಾಹೇಬರು ಪರಿಹಾರ ನೀಡಬೇಕು. ಇದೆಲ್ಲ ಸಕತ್ ತೊಂದರೆ ಕೊಡುವ ವಿಚಾರ. ಅದಕ್ಕಾಗಿಯೇ ಅವರು ಮೊದಲು ದುಡ್ಡು ಕೊಟ್ಟು ಕೈತೊಳೆದುಕೊಂಡರು. ಪರವಾಗಿಲ್ಲ ದೊಡ್ ಮನಸ್ರ ಕತೆನೇ ಇಷ್ಟು”
ತಾನು ಮಾತ್ರ ನಂಬಿರಲಿಲ್ಲ. ತನ್ನ ಮನಸ್ಸು ಆತನ ವಿಚಾರವನ್ನು ಒಪ್ಪಿರಲಿಲ್ಲ. ಆ ನಂಬಿಕೆಯಿಂದಲೇ ಇಂದು ತಾನಿಲ್ಲಿಗೆ ಬಂದಿರುವದಲ್ಲವೇ. ಕೂತ ಕಾಲು ಎಳೆದುಕೊಂಡ ಗಂಗಪ್ಪ.
*********************
ಗಂಗಪ್ಪನಿಗೆ ಕೂತು ಕೂತು ಕಾಲು ನೋಯತೊಡಗಿತ್ತು. ಅಲ್ಲೇ ಇದ್ದ ಒಂದು ಒಣ ತುಂಡನ್ನು ತಂದು ಇನ್ನೊಂದು ಕಾಲನ್ನು ಅದರ ಮೇಲೆ ಇಟ್ಟು ಸ್ವಲ್ಪ ಆರಾಂ ಆಗುವ ಹಾಗೆ ಕೂತುಕೊಂಡ. ಇನ್ನೆಷ್ಟು ಹೊತ್ತು ಕಾಯಬೇಕೋ ಎಂದು ಮನಸ್ಸಿನಲ್ಲೇ ಹೇಳಿಕೊಂಡು ಅರೆಗಳಿಗೆ ಕಣ್ಣು ಮುಚ್ಚಿದ. ಕೂತಲ್ಲೇ ತನ್ನ ಮನೆ ನೆನಪಾಗತೊಡಗಿತ್ತು. ದಾವಣಗೆರೆಗೆ ದೂರವೂ ಅಲ್ಲದ ಸಮೀಪವೂ ಅಲ್ಲದ ಹಳ್ಳಿಯಾದ ತನ್ನೂರು ಅಲ್ಲೆ ನೆಲಸಿರುವ ತನ್ನ ಪತ್ನಿ ರುಕ್ಮಾ, ಮಕ್ಕಳು, ತಂದೆ ನೆನಪಾದರು. ತಂದೆ ಹಾಸಿಗೆ ಹಿಡಿದಿದ್ದರಿಂದಾಗಿ ದುಡಿದ ಹಣವೆಲ್ಲ ನೀರಿನಂತೆ ಖರ್ಚಾಗಿ ಹೋಗುತ್ತಿತ್ತು. ಇಲ್ಲವಾದರೆ ತಾನು ಈ ರೀತಿ ಪರರಲ್ಲಿ ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಸರ್ಕಾರೀ ಕಾಲೇಜಿನಲ್ಲಿ ಮಗ ಓದಿನಲ್ಲಿ ಚುರುಕಾಗಿದ್ದಾನೆ. ಜಾತಿಯಲ್ಲಿ ತನ್ನದು ಸಾಮಾನ್ಯವರ್ಗ ಮಾಡುವದು ಮಾತ್ರ ಗಾರೆ ಕೆಲಸ. ಮಗನಾದರೂ ಈ ಗಾರೆ ಕೆಲಸದಿಂದ ಮುಕ್ತಿ ಪಡೆಯಲಿ ಎಂದು ತನ್ನ ಹಂಬಲ. ಹೇಗಾದರೂ ಹೊಂದಿಸುತ್ತೇನೆ ಎಂದು ಮನಸ್ಸಿನಲ್ಲೇ ಛಲ ತಂದುಕೊಂಡು ಕುಳಿತಲ್ಲೇ ಕಾಲು ಬದಲಿಸಿಕೊಂಡು ಕುಳಿತ. ಕೂತಲ್ಲೇ ಅವನಿಗೆ ತನ್ನ ಮೂಲವೆಲ್ಲ ನೆನಪಾಗತೊಡಗಿತ್ತು.
ಗಂಗಪ್ಪನ ಅಜ್ಜ ಯಾವೂರಿನಿಂದಲೋ ಈ ಊರಿಗೆ ವಲಸೆ ಬಂದದ್ದು. ಅವರದೆನ್ನುವ ಜಮೀನು ಇರಲಿಲ್ಲವಾಗಿ ಪರರ ಜಮೀನಿನಲ್ಲಿ ದುಡಿಯುತ್ತಿದ್ದ. ಆಗ ಹಳ್ಳಿಯಲ್ಲಿ ಕಟ್ಟುವ ಮನೆಗಳು ಸಾಕಷ್ಟಿತ್ತು. ಆದರೆ ಗಾರೆ ಕೆಲಸದವರ ಕೊರತೆ ಇತ್ತು. ಇದನ್ನು ಕಂಡುಕೊಂಡ ಆತನ ಅಜ್ಜ ಗಾರೆ ಕೆಲಸ ಮಾಡತೊಡಗಿದ. ಕೆಲವು ದಿನಗಳಲ್ಲೇ ಅದರಲ್ಲಿ ಪಳಗಿ ಎಲ್ಲ ಮನೆಗಳಿಗೂ ಗಾರೆ ಕೆಲಸ ಮಾಡತೊಡಗಿದ. ಅವನಿಗೆ ಗಾರೆ ವೆಂಕಪ್ಪ ಎಂದೇ ಹೆಸರು ಬಿತ್ತು. ಮನೆಯಲ್ಲಿ ತೀರಾ ಬಡತನವಿಲ್ಲದಿದ್ದರೂ ಹೇಳಿಕೊಳ್ಳುವಂತಹ ಸಿರಿತನವೇನೂ ಇರಲಿಲ್ಲ. ಹಾಸಿಗೆಗೆ ತಕ್ಕಂತೆ ಕಾಲುಚಾಚುವ ಗುಣ ಇವರದಾಗಿತ್ತು ಅಷ್ಟೆ. ಹಾಗೆ ನಡೆದುಕೊಂಡು ಹೋಗುತ್ತಿತ್ತು. ಮುಂದೆ ಹಳ್ಳಿಯಲ್ಲಿ ಕಟ್ಟುವ ಮನೆಗಳ ಸಂಖ್ಯೆ ಕಡಿಮೆ ಆಯ್ತು. ಗೋಡೆ ಗಾರೆ, ನೆಲದ ಗಾರೆ, ಪಕ್ಕದ ಊರಿನಲ್ಲೂ ಇವರ ಹೆಸರು ಇದ್ದ ಕಾರಣ ಕೆಲಸಕ್ಕೇನೂ ಕೊರತೆ ಕಾಡಲಿಲ್ಲ. ವೆಂಕಪ್ಪ ತನ್ನ ಮಗ ರಾಮಚಂದ್ರನಿಗೂ ಈ ಕೆಲಸವನ್ನೇ ಹೇಳಿಕೊಟ್ಟ. ಇನ್ಯಾವುದೇ ಆಸ್ತಿಪಾಸ್ತಿ ಇದ್ದ ಮನೆತನ ಅವರದಲ್ಲ. ಅನಾಥ, ವಲಸೆ ಕುಟುಂಬ. ಮಗ ರಾಮಚಂದ್ರ ಅಕ್ಕಪಕ್ಕದ ಹಳ್ಳಿಗೂ ಹೋಗಿ ಗಾರೆ ಕೆಲಸ ಮಾಡತೊಡಗಿದ. ಅಲ್ಲೆ ನಳಿನಾಕ್ಷಿ ಎನ್ನುವ ಹೆಣ್ಣು ಸಿಕ್ಕಳು. ಈತ ಗಾರೆ ರಾಮಪ್ಪನಾಗಿ ಬದುಕು ಮುಗಿಸಿ ಈಗ ಹಾಸಿಗೆಯಲ್ಲಿದ್ದಾನೆ. ಮಗ ಗಂಗಾಧರ ವಿದ್ಯೆಯಲ್ಲಿ ಅಷ್ಟಕ್ಕಷ್ಟೆ. ಆದರೆ ಗಾರೆ ಕೆಲಸವನ್ನು ನಾಜೂಕಾಗಿ ಮಾಡುತ್ತಿದ್ದ. ಅಪ್ಪ ಕಲಿಸಿದ ಕಸುಬನ್ನೇ ಬದುಕಾಗಿಸಿಕೊಂಡು ಗಾರೆ ಗಂಗಪ್ಪನಾದ. ದೊಡ್ಡ ನಗರಕ್ಕೆ ಬಂದರೆ ಕೈತುಂಬ ದುಡ್ಡು ದೊರಕುತ್ತದೆ ಎಂದು ಎಲ್ಲೋ ಹೋದಾಗ ಕೇಳಿ ಬೆಂಗಳೂರಿಗೆ ಬಂದು, ಈಗ ಬೆಂಗಳೂರಿನ ಒಂದು ಭಾಗವಾಗಿದ್ದಾನೆ. ಕುಟುಂಬ ಇವನ ದುಡಿಮೆಯನ್ನೇ ನೆಚ್ಚಿಕೊಂಡು ಊರಲ್ಲಿದೆ. ದುಡಿವ ಕೈ ಒಂದು, ತಿನ್ನುವ ಕೈ ನಾಲ್ಕು.
ಮುಂದುವರಿಯುವುದು