ಕನ್ನಡದ ಶ್ರೇಷ್ಠ ಸಹಿಷ್ಣು ಸಾಹಿತಿಗಳಾದ ಕುಂ.ವೀರಭದ್ರಪ್ಪನವರಿಗೆ ನಮಸ್ಕಾರಗಳು.
ಇತ್ತೀಚಿಗೆ ತಾವು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವೊಂದರಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡುತ್ತಾ “ರಾಮಚಂದ್ರಾಪುರ ಮಠದ ಸ್ವಾಮೀಜಿಗಳಿಗೆ ಸೆಗಣಿ ಅಂದರೆ ಗೊತ್ತಿಲ್ಲ,ಆದರೆ ಹಸುಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ,ಕನ್ನಡ ಗೋಪಾಲಕರಿಂದ ಉಳಿದಿದೆ” ಎಂದಿದ್ದೀರಿ ಎನ್ನುವ ಸುದ್ದಿ ಹಲವಾರು ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದು ಸರಿಯಷ್ಟೆ.
ಆ ಬಗ್ಗೆ ಈ ನಾಡಿನ ಜನ ಸಾಮಾನ್ಯನಾಗಿ ನಿಮ್ಮಲ್ಲಿ ನಾನೊಂದಷ್ಟು ಪ್ರಶ್ನೆಗಳನ್ನು ಕೇಳಲಿಕ್ಕಿದೆ.ದಯಮಾಡಿ ಉತ್ತರಿಸುವಿರಾಗಿ ನಂಬಿರುತ್ತೇನೆ.
ಅದಕ್ಕೂ ಮೊದಲು ಯಾವತ್ತೂ ರಾಮಚಂದ್ರಾಪುರ ಮಠಕ್ಕೆ ಭೇಟಿ ಕೊಟ್ಟಿರದ,ಯಾವತ್ತೂ ರಾಮಚಂದ್ರಾಪುರ ಮಠದ ಸ್ವಾಮಿಗಳನ್ನು ಹತ್ತಿರದಿಂದ ನೋಡಿರದ,ಆ ಮಠ ಅಥವಾ ಆ ಸ್ವಾಮೀಜಿಗಳಿಗೆ ಯಾವುದೇ ರೀತಿಯಲ್ಲೂ ಸಂಬಂಧಪಡದ ನಾನು ತಿಳಿದಂತೆ ಸ್ವಾಮಿಗಳು ಗೋ ರಕ್ಷಣೆಯ ಬಗ್ಗೆ ಮಾಡಿರುವ ಒಂದಷ್ಟು ಕೆಲಸಗಳನ್ನು ನಿಮಗೆ ತಿಳಿಸಬಯಸುತ್ತೇನೆ.
ಶ್ರೀ ರಾಘವೇಶ್ವರ ಸ್ವಾಮೀಜಿ ಮಠದ ಭಕ್ತರಿಗೆ ‘ಗೋವಿಗಾಗಿ ವಾರದಲ್ಲಿ ಒಂದು ಹೊತ್ತಿನ ಊಟ ಬಿಡಿ’ ಎಂದು ಕರೆ ನೀಡಿದ್ದಾರೆ. ಒಂದು ಹೊತ್ತಿನ ಊಟ ಬಿಟ್ಟು ಅದರ ದುಡ್ಡನ್ನು ಗೋವುಗಳಿಗೆ ಆಹಾರ ಪೂರೈಸಲು ಭಕ್ತರು ನೀಡಿದರೆ ಆ ಹಣವನ್ನು ಗೋವುಗಳಿಗೆ ಮೇವು ಒದಗಿಸಲು ವಿನಿಯೋಗಿಸಲಾಗುತ್ತಿದೆ.ತೀವ್ರ ಬರಗಾಲವಿರುವ ಇಂದಿನ ಸಂಧರ್ಭದಲ್ಲಿ ಶ್ರೀಗಳ ಈ ಯೋಜನೆ ಹಲವಾರು ಹಸು ಕರುಗಳ ಜೀವ ಉಳಿಸುವಲ್ಲಿ,ಆ ಮೂಲಕ ಗೋಪಾಲಕರ ಜೀವನವನ್ನು ಉಳಿಸುವಲ್ಲಿ,ಆ ಮೂಲಕ ಕನ್ನಡವನ್ನು ಉಳಿಸುವಲ್ಲಿ ನೆರವಾಗುತ್ತಿದೆ.
ತೀವ್ರ ಬರದಿಂದಾಗಿ ಮಲೆಮಹದೇಶ್ವರ ಬೆಟ್ಟದ ಆಸುಪಾಸಿನಲ್ಲಿ ಮೇವಿನ ಕೊರತೆ ಎದುರಿಸುತ್ತಿರುವ ಗೋವುಗಳಿಗೆ ‘ಗೋ ಪ್ರಾಣ ಭಿಕ್ಷಾ’ ಯೋಜನೆ ಆರಂಭಿಸಿದ್ದಾರೆ. ಮಲೆಮಹದೇಶ್ವರ ಬೆಟ್ಟದ ತಪ್ಪಲು ಪ್ರದೇಶದ ಹತ್ತಾರು ಕೇಂದ್ರಗಳಲ್ಲಿ ನಿತ್ಯವೂ ಮೇವು ವಿತರಿಸಲಾಗುತ್ತಿದೆ.ಇದುವರೆಗೂ ಸಾವಿರಾರು ಟನ್ ಮೇವು ವಿತರಿಸಲಾಗಿದ್ದು ಇದರಿಂದಾಗಿ ಹತ್ತಾರು ಸಾವಿರ ಜಾನುವಾರುಗಳ ಜೀವಗಳು ಉಳಿದಂತಾಗಿದೆ.ಇದಿಷ್ಟೇ ಅಲ್ಲದೇ ಕೇರಳ,ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲೂ ಗೋಶಾಲೆಗಳನ್ನು ತೆರೆದು ಗೋವುಗಳ ಮತ್ತು ಗೋಪಾಲಕರ ಜೀವನಕ್ಕೆ,ಆ ಮೂಲಕ ಕನ್ನಡದ ಉಳಿವಿಗೆ ಆಧಾರವಾಗಿದ್ದಾರೆ.
ಇದಿಷ್ಟೇ ಅಲ್ಲದೇ ದೇಶಿ ಗೋ ಸಾಕಣೆಯ ಕುರಿತು ಜಾಗೃತಿ ಕಾರ್ಯಕ್ರಮಗಳು,ಗೋ ತಳಿಗಳ ಅಭಿವೃದ್ಧಿ ಮುಂತಾದ ಕಾರ್ಯಗಳನ್ನು ಧೀರ್ಘ ಸಮಯದಿಂದ ನಡೆಸಿಕೊಂಡು ಬರುತ್ತಿದ್ದಾರೆ.ವಿಶ್ವ ಗೋ ಸಮ್ಮೇಳನ ನಡೆಸಿ ಭಾರತವಷ್ಟೇ ಅಲ್ಲದೇ ಇಡೀ ವಿಶ್ವಕ್ಕೇ ಗೋಪಾಲನೆಯ ಮಹತ್ವವನ್ನು ಸಾರಿದ್ದಾರೆ…..
ಹೇಳುತ್ತಾ ಹೋದರೆ ಇನ್ನೂ ಹತ್ತು ಪುಟಗಳಿಗಾಗುವಷ್ಟಿದೆ.ಆದರೆ ಈಗ ನಿಮಗೊಂಡಷ್ಟು ಪ್ರಶ್ನೆ:
ಮೊದಲನೆಯದಾಗಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ವಾಮೀಜಿಗಳ ಹೆಸರನ್ನು ಅಥವಾ ಸೆಗಣಿಯನ್ನೋ,ಗಂಜಲವನ್ನೋ ಎಳೆದು ತರುವ ನಿಮ್ಮ ಉದ್ದೇಶವಾದರೂ ಏನಿತ್ತು? ಸಾಹಿತ್ಯ ಸಮ್ಮೇಳನದಲ್ಲಿ ಸೆಗಣಿಯನ್ನು ಹೊರತುಪಡಿಸಿ ನಿಮ್ಮ ತಲೆಯಲ್ಲಿ ಸಾಹಿತ್ಯದ ಬಗ್ಗೆ ಮಾತನಾಡಲು ಯಾವುದೇ ಸರಕೂ ಉಳಿದಿರಲಿಲ್ಲವೇ?
ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯದ ಬಗ್ಗೆ ಭಾಷಣ ಮಾಡುವುದನ್ನು ಬಿಟ್ಟು ರಾಮಚಂದ್ರಾಪುರದ ಸ್ವಾಮಿಗಳ ಮೇಲೆ ಸೆಗಣಿ ಎರಚಿದಿರಲ್ಲಾ…!
ಹಾಗಾದರೆ ನೀವು ಇದುವರೆಗೆ ಎಷ್ಟು ಸಾವಿರ ಗೋವುಗಳಿಗೆ ಮೇವೊದಗಿಸಿದ್ದೀರಿ?ನೀವು ಎಷ್ಟು ಕೊಟ್ಟಿಗೆಗಳಲ್ಲಿ ಸೆಗಣಿ ಬಾಚಿದ್ದೀರಿ?ನಿಮ್ಮ ಸಾಹಿತ್ಯದಿಂದ ಎಷ್ಟು ಸಾವಿರ ಹಸುಗಳ ಹೊಟ್ಟೆ ತುಂಬಿಸಿದ್ದೀರಿ?ನಿಮ್ಮ ಭಾಷಣಗಳಿಂದ ಎಷ್ಟು ಸಾವಿರ ಗೋಪಾಲಕರ ಬದುಕು ಉದ್ಧಾರ ಮಾಡಿದ್ದೀರಿ?ನೀವು ಎಷ್ಟು ಗೋ ತಳಿಗಳನ್ನು ಅಭಿವೃದ್ಧಿಪಡಿಸಿದ್ದೀರಿ?ನಿಮ್ಮ ಕರೆಗೆ ಓಗೊಟ್ಟು ಅದೆಷ್ಟು ಸಾವಿರ ಜನರು ಗೋವುಗಳ ಮೇವಿನ ಸಲುವಾಗಿ ಒಂದು ಹೊತ್ತಿನ ಊಟ ಬಿಟ್ಟು ಅದರಿಂದ ಉಳಿತಾಯವಾಗುವ ಹಣವನ್ನು ನೀಡಲು ಸಿದ್ಧರಿದ್ದಾರೆ?ಅದೆಷ್ಟು ಲಕ್ಷ ಜನರಿಂದ ಗೋವುಗಳ ಉಳಿವಿಗೆ,ಆ ಮೂಲಕ ಗೋಪಾಲಕರ ಉಳಿವಿಗೆ,ಆ ಮೂಲಕ ಕನ್ನಡದ ಉಳಿವಿಗೆ ದಿನಕ್ಕೊಂದು ರೂಪಾಯಿಯಂತೆ ಹಣ ಸಂಗ್ರಹಿಸಲು ನಿಮ್ಮಿಂದ ಸಾಧ್ಯವಿದೆ?
ಈ ಪತ್ರ ತಲುಪಿಯೇ ಇಲ್ಲವೇನೋ ಎನ್ನುವಂತೆ ಸುಮ್ಮನಿದ್ದು ಬಿಡುತ್ತೀರೇ ಹೊರತೂ ನೀವಿದಕ್ಕೆ ಖಂಡಿತಾ ಉತ್ತರಿಸುವುದಿಲ್ಲವೆಂದು ನಮಗೆ ಗೊತ್ತು.ಆದರೆ ದೂರದ ಗುಜರಾತಿನಲ್ಲಿ ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತನ್ಯಾರೋ ತನ್ನ ಮನೆಕೆಲಸದವನಿಗೆ ಬೈದರೆ ಗೊತ್ತಾಗುವ ಕರ್ನಾಟಕದ ಸಮಸ್ತ ಸಹಿಷ್ಣು ಸಾಹಿತಿಗಳಿಗೆ ಕರ್ನಾಟಕದಲ್ಲಿಯೇ,ಕನ್ನಡದಲ್ಲಿಯೇ,ನೇರವಾಗಿ ತಮ್ಮನ್ನುದ್ದೇಶಿಸಿಯೇ ಬರೆದ ಪತ್ರ ತಲುಪುವುದಿಲ್ಲ ಎಂದರೆ ನಂಬಲು ಯಾರೂ ತಯಾರಿಲ್ಲ.ಆದ್ದರಿಂದ ಉತ್ತರಿಸದೇ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ದಯವಿಟ್ಟು ಮಾಡಬೇಡಿ.
ಒಂದು ವೇಳೆ ಉತ್ತರಿಸಿದರೂ ಏನೆಂದು ಉತ್ತರಿಸುತ್ತೀರಿ ಎನ್ನುವುದನ್ನೂ ನಾವು ಊಹೆ ಮಾಡಬಲ್ಲೆವು. “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೀಗಲೇ ಕ್ಷಮೆ ಕೇಳಿದ್ದು ಇದರ ಬಗ್ಗೆ ಇನ್ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ”ಎನ್ನುತ್ತೀರಿ!
ಆದರೆ ನೀವು ಕ್ಷಮೆ ಕೇಳಿದ ಮೇಲೂ ಆ ಸಮ್ಮೇಳನದಲ್ಲಿ ಪಾಲ್ಗೊಂಡಿರದ ಇಡೀ ರಾಜ್ಯದ ಜನತೆಗೆ ನಿಮ್ಮ ಸೆಗಣಿ ಭಾಷಣ ತಲುಪುವಂತೆ ನೋಡಿಕೊಂಡಿದ್ದೀರಿ ಎಂದರೆ ಅದೂ ಕೂಡಾ ನಿಮ್ಮ ಪ್ರಚಾರ ಚಾತುರ್ಯವೇ ಸರಿ.ಆದ್ದರಿಂದ ನಿಮ್ಮ ಮೇಲ್ಕಂಡ ಸಮಜಾಯಿಷಿಯನ್ನು ಈ ನಾಡಿನ ಜನಸಾಮಾನ್ಯರು ಒಪ್ಪುವ ಸಾಧ್ಯತೆ ಖಂಡಿತಾ ಇಲ್ಲ.ಆದ್ದರಿಂದ “ಈಗಾಗಲೇ ನನ್ನ ಹೇಳಿಕೆಗೆ ಕ್ಷಮೆ ಕೇಳಿದ್ದೇನೆ”ಎನ್ನುವ ತೇಪೆ ಹಚ್ಚುವ ತಂತ್ರವನ್ನು ದಯವಿಟ್ಟು ಮಾಡಬೇಡಿ.
ಉತ್ತರಿಸಲೇಬೇಕೆಂದು ನನ್ನಂತಹಾ ಜನಸಾಮಾನ್ಯರು ಒತ್ತಾಯಿಸಿದರೆ ಶ್ರೀಗಳ ವಿರುದ್ಧದ ಹಳೇ ಪ್ರಕರಣವನ್ನೆಳೆದು ಈ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಕೂಡಾ ಮಾಡಬಹುದು ಎನ್ನುವುದನ್ನು ಸಹಿಷ್ಣು ಸಾಹಿತಿಗಳ ಇದುವರೆಗಿನ ವರ್ತನೆಗಳನ್ನು ನೋಡಿ ತಿಳಿದ ಯಾರೇ ಆದರೂ ಊಹಿಸಬಹುದು.ಆದರೆ ಈ ಪ್ರಶ್ನೆಗಳು ನಿಮ್ಮದೇ ಭಾಷಣದಲ್ಲಿ ಹೇಳಿದಂತೆ ಗೋವು ಮತ್ತು ಗೋಪಾಲಕರ ಬಗ್ಗೆ ಮಾತ್ರ ಇರುವುದಾದ್ದರಿಂದ ನಿಮ್ಮ ಉತ್ತರಗಳೂ ಇಲ್ಲಿ ಕೇಳಿರುವ ಪ್ರಶ್ನೆಗಳಿಗಷ್ಟೇ ಸೀಮಿತವಾಗಿರಬೇಕೆಂದು ಬಯಸುತ್ತೇವೆಯೇ ಹೊರತೂ ಇನ್ಯಾವುದೋ ವಿಷಯ ತಂದು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಯತ್ನಗಳನ್ನು ನಾವು ಪ್ರೋತ್ಸಾಹಿಸುವುದಿಲ್ಲ.ಹಾಗೊಂದು ವೇಳೆ ಗೋ ರಕ್ಷಣೆಯ ವಿಷಯದ ಚರ್ಚೆಯಲ್ಲಿ ಶ್ರೀಗಳ ವೈಯುಕ್ತಿಕ ವಿಚಾರವನ್ನು ತಂದರೆ ಸಹಿಷ್ಣು ಸಾಹಿತಿಗಳ ವೈಯುಕ್ತಿಕ ವಿಚಾರಗಳೂ ಸಾಕಷ್ಟಿವೆ ಮತ್ತು ಅವುಗಳನ್ನು ಜನ ಸಾಮಾನ್ಯರೂ ಎಳೆದು ತರಬಲ್ಲರು ಎನ್ನುವುದು ನೆನಪಿರಲಿ.
ಆದ್ದರಿಂದ ಕನ್ನಡ ನಾಡಿನ ಸಮಸ್ತ ಪ್ರಜ್ಞಾವಂತ ನಾಗರೀಕರ ಪರವಾಗಿ ಎತ್ತಿದ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿ ಈ ನಾಡಿನ ಗೋವುಗಳ,ಗೋಪಾಲಕರ ಮತ್ತು ಆ ಮೂಲಕ ಕನ್ನಡದ ಉಳಿವಿಗೆ ರಾಮಚಂದ್ರಾಪುರ ಮಠದ ಸ್ವಾಮಿಗಳಿಗಿಂತಾ ನೀವೆಷ್ಟು ಹೆಚ್ಚು ದುಡಿದಿದ್ದೀರಿ ಎನ್ನುವುದನ್ನು ಸಾಬೀತುಪಡಿಸಿ.
ವಂದನೆಗಳೊಂದಿಗೆ
-ಪ್ರವೀಣ್ ಕುಮಾರ್ ಮಾವಿನಕಾಡು
(ಸಮಸ್ತ ಪ್ರಜ್ಞಾವಂತ ಕನ್ನಡಿಗರ ಪರವಾಗಿ)
ಚಿತ್ರ ಕೃಪೆ: http://kulalworld.com