Featured ಸಿನಿಮಾ - ಕ್ರೀಡೆ

ಹೆಸರಲ್ಲಷ್ಟೇ ಅಲ್ಲ ಮೈದಾನದ ಒಳಗೆ ಮತ್ತು ಹೊರಗೂ “ಗಂಭೀರ”ನೀತ!

2009ರ ನ್ಯೂಜಿಲೆಂಡ್ ವಿರುದ್ಧದ ನೇಪಿಯರ್ ಟೆಸ್ಟ್. ದ್ರಾವಿಡ್, ಸಚಿನ್, ಲಕ್ಷ್ಮಣ್ ಉತ್ತಮ ಆಟದ ಹೊರತಾಗಿಯೂ ಭಾರತ ಫಾಲೋ ಆನ್ ಪಡೆದಿತ್ತು. ಇನ್ನೂ ಎರಡು ದಿವಸಗಳ ಆಟ ಬಾಕಿ ಉಳಿದಿದ್ದರಿಂದ ಮತ್ತು ನ್ಯೂಜಿಲೆಂಡ್ ಚಳಿಯಲ್ಲಿ ಆಡುವುದು ಬಹಳ ಕಷ್ಟವಾಗಿದ್ದರಿಂದ ಭಾರತೀಯರು ಪಂದ್ಯ ಉಳಿಸಿಕೊಳ್ಳುವುದು ಅಸಾಧ್ಯ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಊಹಿಸಲಸಾಧ್ಯವಾದ ರೀತಿಯಲ್ಲಿ ಭಾರತ ಆ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ವಿವಿಎಸ್ ಲಕ್ಷ್ಮಣ್ ಮತ್ತು ಆ ಸಮಯದಲ್ಲಿ ತನ್ನ ಕ್ರಿಕೆಟ್ ಜೀವನದ ಉತ್ಕೃಷ್ಟ ಫಾರ್ಮಿನಲ್ಲಿದ್ದ ಆಟಗಾರನೊಬ್ಬ ಶತಕ ಬಾರಿಸಿ ಭಾರತವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದರು! ಮಾಡಿದ್ದು 137 ರನ್ನಾದರೂ ಅದಕ್ಕಾಗಿ ಆತ ಎದುರಿಸಿದ್ದು ಬರೋಬ್ಬರಿ 436 ಎಸೆತಗಳನ್ನು. ಇನ್ನಿಂಗ್ಸ್ ಕಟ್ಟಲು ತೆಗೆದುಕೊಂಡದ್ದು ಭರ್ತಿ 643 ನಿಮಿಷಗಳನ್ನು! ಆ ಕ್ರಿಕೆಟಿಗ ಬೇರಾರು ಅಲ್ಲ. ದೆಹಲಿ ಮೂಲದ ಸ್ಟೈಲಿಶ್ ಎಡಗೈ ದಾಂಡಿಗ ಗೌತಮ್ ಗಂಭೀರ್!!

ಗಂಭೀರ್ 2003 ರಲ್ಲಿ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗುತ್ತಾನಾದರೂ ಮುಂದಿ‌ನ ಒಂದೆರಡು ವರ್ಷ ತಂಡದಲ್ಲಿ ಸ್ಥಾನ ಗಳಿಸಲು ಬಹಳ ಕಷ್ಟ ಪಡುತ್ತಾನೆ. 2007ರ ಸೀಮಿತ ಓವರ್ ಗಳ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದಿದ್ದರೂ, ತನ್ನ ಛಲ ಹಾಗೂ ದೇಶೀಯ ಕ್ರಿಕೆಟ್ ಸಾಧನೆಯಿಂದ ಮತ್ತೆ ಆಯ್ಕೆಗಾರರ ಗಮನ ಸೆಳೆದು 2007ರ ಟಿ20 ವಿಶ್ವಕಪ್ ಮೂಲಕ ಕಮ್ ಬ್ಯಾಕ್ ಮಾಡಿದ ಗಂಭೀರ್ ಮತ್ತೆ ಹಿಂತಿರುಗಿ ನೋಡಲಿಲ್ಲ. 2007 ಟಿ-20 ವಿಶ್ವಕಪ್ ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಮತ್ತು ಅದೇ ಪಂದ್ಯಾವಳಿಯ ಫೈನಲಿನಲ್ಲಿ ಪಾಕ್ ವಿರುದ್ಧ ಬಹುಮೂಲ್ಯ 75 ರನ್ ಸಿಡಿಸಿ ಭಾರತಕ್ಕೆ ಮೊದಲ ಟಿ-20 ವಿಶ್ವಕಪ್ ಬರುವಂತೆ ಮಾಡಿದ ಗಂಭೀರ್ ಕ್ರಿಕೆಟ್‌ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದುಕೊಂಡ. 2011 ವಿಶ್ವಕಪ್ ಫೈನಲ್’ನಲ್ಲಿ ಸೆಹ್ವಾಗ್ ಮತ್ತು ಸಚಿನ್ ವಿಕೆಟ್ ಬಿದ್ದಾಗ ಪಂದ್ಯ ಭಾರತದ ಕೈತಪ್ಪಿ ಹೋಯಿತೆಂದೇ ಹಲವರು ಭಾವಿಸಿದ್ದರು. ಆದರೆ 97 ರನ್ ಗಳ ಅದ್ಭುತ ಇನ್ನಿಂಗ್ನ್ ಗೌತಮ್ ಗಂಭೀರ್ ಕಟ್ಟಿದ್ದ. ಆದರೆ ಧೋನಿಯ ಇನ್ನಿಂಗ್ಸ್ ಮುಂದೆ ಗಂಭೀರ್ ಕೊಡುಗೆ ಸಪ್ಪೆಯಾಗಿ ಬಿಡುತ್ತದೆ! ಭಾರತ ಎರಡು ವಿಶ್ವಕಪ್ ಗೆಲ್ಲುವುದರಲ್ಲೂ ಗಂಭೀರ್ ಪಾಲು ಮಹತ್ತರ. ಇವಿಷ್ಟೇ ಅಲ್ಲದೇ ಈಡನ್ ಗಾರ್ಡನ್ಸ್’ನಲ್ಲಿ ಶ್ರೀಲಂಕಾ ವಿರುದ್ದ ಏಕದಿನ ಪಂದ್ಯದಲ್ಲಿ 150 ರನ್, ಆಸ್ಟ್ರೇಲಿಯಾ ವಿರುದ್ಧದ ದೆಹಲಿ ಟೆಸ್ಟ್‌ ನಲ್ಲಿ ದ್ವಿಶತಕ, ಐಪಿಎಲ್ ನಲ್ಲಿ ಅತೀ ಹೆಚ್ಚು ಅರ್ಧಶತಕ ಇವು ಗಂಭೀರ್ ಕ್ರಿಕೆಟ್‌ ಜೀವನದ ಹೈಲೈಟ್ಸ್!

ಗಂಭೀರ್ ಅಂದ್ರೆ ಯಾವಾಗಲೂ ಸಿಡುಕು ಮೂತಿ, ಆತ ಜಗಳಗಂಟ ಅನ್ನೋರೇ ಹೆಚ್ಚು. ಆದರೆ ಕೋಲ್ಕತ್ತಾದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯವೊಂದರಲ್ಲಿ ಕ್ರಿಕೆಟ್ ನಲ್ಲಿ ಅವಾಗಷ್ಟೇ ಅಂಬೆಗಾಲಿಕ್ಕುತ್ತಿದ್ದ ಕೊಹ್ಲಿ ಜೊತೆಗೂಡಿ ಭಾರತವನ್ನು ಜಯಶಾಲಿಯನ್ನಾಗಿಸಿದಾಗ ತನಗೆ ಸಿಕ್ಕಿದ್ದ ಪಂದ್ಯಪುರುಷ ಪ್ರಶಸ್ತಿಯನ್ನು ಕೊಹ್ಲಿ ಜೊತೆ ಹಂಚಿಕೊಂಡು ಬೇರೆಯವರಿಗೆ ಮಾದರಿಯಾಗಿದ್ದ ಗಂಭೀರ್! ಟೀಮ್ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಗ್ರ ಸ್ಥಾನಕ್ಕೆ ಏರಿದ ಸಮಯದಲ್ಲಿ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದವ ಗಂಭೀರ್. 2007 ರಿಂದ 2009ರ ನಡುವೆ ಭಾರತ ತಂಡದ ಗೆಲುವಿನ ಜೈತ್ರಯಾತ್ರೆಯಲ್ಲಿ ಗಂಭೀರ್ ಕೊಡುಗೆ ಮಹತ್ತರ. ಸೆಹ್ವಾಗ್ ಮತ್ತು ಗಂಭೀರ್ ಜೋಡಿ ಎದುರಾಳಿ ಬೌಲರ್ಸಗಳನ್ನು ಹೊಡೆದಾಡುವುದನ್ನು ನೋಡುವುದೇ ನಯನ ಮನೋಹರ. ಟಿ20, ಟೆಸ್ಟ್ ಅಥವಾ ಏಕದಿನ ಮೂರೂ ವಿಭಾಗದಲ್ಲಿಯೂ ಗಂಭೀರ್ ತನ್ನ ಪ್ರಾಬಲ್ಯ ಮೆರೆದಿದ್ದ. ವಿಕೆಟ್ ಬಿದ್ದು ಒತ್ತಡವಿದ್ದಾಗ ನಿಧಾನವಾಗಿಯೂ ಆಡಲು ಸೈ ಅನ್ನಿಸಿಕೊಂಡಿದ್ದ. ಇನ್ನು ಅವಶ್ಯಕತೆ ಬಿದ್ದಾಗ ಹೊಡಿಬಡಿಯ ಬ್ಯಾಟಿಂಗ್ ಕೂಡಾ ಮಾಡುತ್ತಿದ್ದ. ಇನ್ ಸೈಡ್ ಔಟ್, ಸ್ಕ್ವೇರ್ ಕಟ್, ಡ್ರೈವ್ ಶಾಟ್ ಎಲ್ಲಾ ಚೆನ್ನಾಗಿ ಆಡ್ತಾ ಇದ್ದ. ಭಾರತದ ಹೊರಗೂ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಆಟಗಾರನಾಗಿ ಹೊರಹೊಮ್ಮಿದ್ದ.

ಹೀಗೆ ಗಂಭೀರ್ ವೃತ್ತಿ ಬದುಕಿನ ಉತ್ತುಂಗದಲ್ಲಿದ್ದಾಗಲೇ ಭಾರತ ತಂಡ ಇಂಗ್ಲೆಂಡ್ ಮತ್ತು ಅಸ್ಟ್ರೇಲಿಯಾ ಪ್ರವಾಸ ಮಾಡಿತು. ಗಂಭೀರ್ ತಂಡದ ಉಪನಾಯಕನಾಗಿದ್ದ. ಇಂಗ್ಲಂಡ್ ಮತ್ತು ಅಸ್ಟ್ರೇಲಿಯಾ ಪ್ರವಾಸದಲ್ಲಿ ವಿಫಲನಾದ ಗೌತಮ್ ಗಂಭೀರ್ ತಂಡದಿಂದಲೇ ಮರೆಯಾಗಿ ಬಿಡುತ್ತಾನೆ!
ರೋಹಿತ್ ಶರ್ಮಾ, ಶಿಖರ್ ಧವನ್, ಮುರಳಿ ವಿಜಯ್ ಮುಂತಾದ ಯುವಕರ ಪಡೆಯೇ ಆರಂಭಿಕ ಸ್ಥಾನಕ್ಕೆ ಲಗ್ಗೆ ಇಟ್ಟಿತು.! ಟೀಂ ಇಂಡಿಯಾದಿಂದ ಕೊಕ್ ಕೊಟ್ಟ ಮೇಲೆ ಕೈ ಕಟ್ಟಿ ಕೂರಲಿಲ್ಲ ಗಂಭೀರ್! ಐಪಿಎಲ್ ನ ಹಿಂದಿನ ಆವೃತ್ತಿಗಳಲ್ಲಿ ಸೋತು ಸುಣ್ಣವಾಗಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ತಂಡವನ್ನು ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿಸುತ್ತಾನೆ. ಐಪಿಎಲ್ ನಲ್ಲಿ ಗಂಭೀರ್ ಪ್ರದರ್ಶನ ಯಾವತ್ತೂ ಕಳಪೆಯಾಗಿರಲಿಲ್ಲ. ಅವನೊಬ್ಬ ಎಗ್ರೆಸಿವ್ ಕ್ಯಾಪ್ಟನ್. ಎದುರಾಳಿ ಬ್ಯಾಟ್ಸ್‌ಮನ್ ಎಷ್ಟೇ ಪ್ರಸಿದ್ಧಿಯನ್ನು ಹೊಂದಿದ್ದರೂ ಫಾರ್ವರ್ಡ್ ಶಾರ್ಟ್ ಲೆಗ್ ನಲ್ಲಿ ಸ್ವತಃ ತಾನೇ ನಿಲ್ಲುತ್ತಿದ್ದ. ಸ್ಲಾಗ್ ಓವರ್ ಗಳಲ್ಲಿ ಸ್ಪಿನ್ನರ್ಸ್ ಬಳಿ ಬೌಲಿಂಗ್ ಮಾಡಿಸೋ ರಿಸ್ಕ್ ತೆಗೆದುಕೊಳ್ಳುತ್ತಿದ್ದ. ಒಂದು ವೇಳೆ ಗಂಭೀರ್ ತಂಡದಿಂದ ಹೊರದಬ್ಬಿಸಿಕೊಳ್ಳದೇ ಇರುತ್ತಿದ್ದರೆ ಇಂದು ಭಾರತ ತಂಡದ ನಾಯಕನಾಗಿರುತ್ತಿದ್ದ!

ಟೀಮ್ ಇಂಡಿಯಾದಿಂದ ಗಂಭೀರ್ ಮರೆಯಾದರೂ ಕ್ರಿಕೆಟ್ ಬಗೆಗಿನ ಆತನ ತುಡಿತ ಎಳ್ಳಷ್ಟೂ ಕಡಿಮೆಯಾಗಿಲ್ಲ. ಆದರೆ ಗಂಭೀರ್ ವರ್ತನೆ ಆತನ ಕ್ರಿಕೆಟ್ ಬದುಕಿಗೆ ಮುಳುವಾಯಿತು ಎಂದನ್ನಿಸುತ್ತದೆ. ಸ್ಲೆಡ್ಜಿಂಗ್ ನಲ್ಲಿ ಗಂಭೀರ್ ಪ್ರವೀಣ. ಪಾಕಿಸ್ತಾನ, ಆಸ್ಟ್ರೇಲಿಯಾ ಆಟಗಾರಲ್ಲದೇ ದೇಶೀ ಪಂದ್ಯಾವಳಿಗಳಲ್ಲಿ ವಿರಾಟ್ ಕೊಹ್ಲಿ,ಮನೋಜ್ ತಿವಾರಿ ಹಾಗೂ ಇನ್ನೂ ಕೆಲವರಲ್ಲಿ ಗಂಭೀರ್ ಮ್ಯಾಚ್ ಸಂಬಂಧ ಜಗಳವಾಡಿದ್ದ. ಟೀಮ್ ಇಂಡಿಯಾದಿಂದ ಗಂಭೀರ್ ಹೊರಬೀಳಲು ಕಾರಣಗಳು ಅನೇಕ. ಕ್ರೀಡಾಂಗಣದ ಹೊರಗಿನ ಕೋಪವನ್ನು ಮೈದಾನದಲ್ಲಿ ತೋರಿಸುವುದು, ನಿಷ್ಠುರ ನಡೆ, ಆಯ್ಕೆ ಮಂಡಳಿಯ ರಾಜಕೀಯ ಹಾಗೂ ಧೋನಿ ಮತ್ತು ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯ ಇದರಲ್ಲಿ ಪ್ರಮುಖವಾದದ್ದು ಎಂದು ಹೇಳಲಾಗುತ್ತದೆ.

ಕ್ರಿಕೆಟ್ ಹೊರತಾಗಿಯೂ ಒಬ್ಬ ಜವಾಬ್ದಾರಿಯುತ ಸೆಲೆಬ್ರಿಟಿಯಾಗಿ ಗಂಭೀರ್ ನಡೆದುಕೊಂಡದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಯೊಬ್ಬ ಯೋಧರೊಬ್ಬರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಗಂಭೀರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ. ಯೋಧರ ಮೇಲೆ ನಡೆಯುವ ಒಂದೊಂದು ಹಲ್ಲೆಗೂ 100 ಜಿಹಾದಿಗಳನ್ನು ಹತ್ಯೆ ಮಾಡಿ ಎಂದು ಟ್ವೀಟ್ ಮಾಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಛತ್ತೀಸ್‌ಗಢದ ಸುಕ್ಮಾದಲ್ಲಿ ಇತ್ತೀಚಿಗೆ ನಡೆದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ನ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಗಂಭೀರ್ ಘೋಷಿಸಿದ್ದಾನೆ. ಲಿವರ್ ಕ್ಯಾನ್ಸರ್ ಪೀಡಿತ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್ ಡಿಂಕೊ ಸಿಂಗ್ ಕುಟುಂಬಕ್ಕೆ ಗಂಭೀರ್ ಆರ್ಥಿಕ ಸಹಾಯ ಮಾಡಿದ್ದಾನೆ. ಈ ಮೂಲಕ ಮೈದಾನದಾಚೆಗೂ ತಾನೊಬ್ಬ ಜಂಟಲ್ ಮ್ಯಾನ್ ಅನ್ನುವುದನ್ನು ತೋರಿಸಿದ್ದಾನೆ ಗಂಭೀರ್.

ದೇಶೀ ಪಂದ್ಯಾವಳಿಗಳಲ್ಲಿ ಮತ್ತು ಐಪಿಎಲ್ ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದರೂ, ಅತ್ಯುತ್ತಮ ನಾಯಕನೆಂಬ ಪಟ್ಟ ಪಡೆದರೂ, ಎರಡು ಬಾರಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರೂ ಗಂಭೀರ್ ಆಯ್ಕೆಮಂಡಳಿಯ ಕೃಪಾಕಟಾಕ್ಷಕ್ಕೆ ಒಳಗಾಗದೇ ಇರುವುದು ದೊಡ್ಡ ಸೋಜಿಗವೇ ಸರಿ. ರೋಹಿತ್ ಶರ್ಮ, ಶಿಖರ್ ಧವನ್, ರೈನಾ ಅದೆಷ್ಟೇ ವೈಫಲ್ಯ ಕಂಡರೂ ಕೂಡ ಆಯ್ಕೆ ಮಂಡಳಿ ಗಂಭೀರ್ ಕಡೆಗೆ ನೋಡಲೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಮುರಳಿ ವಿಜಯ್ ಮತ್ತು ಅಜಿಂಕ್ಯ ರಹಾನೆ ವಿಫಲರಾಗುತ್ತಿದ್ದರೂ ಗಂಭೀರ್ ಭಾರತ ತಂಡವನ್ನು ಮತ್ತೆ ಸೇರಿಕೊಳ್ಳಲಾಗುತ್ತಿಲ್ಲ. ವಿಜಯ್, ಧವನ್, ರೈನಾಗೆ ಸಿಕ್ಕ ಅರ್ಧದಷ್ಟು ಅವಕಾಶಗಳೂ ಗಂಭೀರ್ ಗೆ ಸಿಗಲಿಲ್ಲ. ಈ ಸಾಲಿನ ಐಪಿಎಲ್ ನಲ್ಲೂ ಗಂಭೀರ್ ಮತ್ತವನ ತಂಡದ ಪ್ರದರ್ಶನ ಅತ್ಯುತ್ತಮವಾಗಿದೆ. ಆದರೂ ಗಂಭೀರ್ ಮತ್ತೆ ಯಾವಾಗ ಟೀಂ ಇಂಡಿಯಾಕ್ಕೆ ಮರಳುತ್ತಾನೆ ಅನ್ನುವುದನ್ನು ಕಾಲವೇ ಉತ್ತರಿಸಬೇಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!