ಕಥೆ

ನೆನಪು ಭಾಗ – 2

ಮೊದಲನೆ ಭಾಗ:

ನೆನಪು ಭಾಗ -೧

ಗಿಜಿ ಗಿಜಿ ಗುಡುವ ಜನ ಜಂಗುಳಿಯ ಮಧ್ಯೆ ಕಾಲದ ಪರಿವೆಯೆ ಇಲ್ಲದೆ ಅದು ಹೇಗೆ ಇಷ್ಟೊಂದು ವರ್ಷ ಬದುಕಿಬಿಟ್ಟೆ? ಯಾರೊ ಕಟ್ಟಿದ ಮನೆ ಅದ್ಯಾರ್ಯಾರು ಬಂದು ಉಳಿದು ಹೋದ ಮನೆಯೊ ಏನೊ ಶಿಥಿಲಾವಸ್ಥೆಯಲ್ಲಿ ಈಗಲೊ ಆಗಲೊ ಅಂತಿರುವ ಮನೆಗೆ ಬಹುಶಃ ನಾನೇ ಕೊನೆಯ ಬಾಡಿಗೆಯವಳಾಗಿರಬೇಕು. ಈಗ ಗೊತ್ತಾಗುತ್ತಿದೆ ಮನೆಯ ಅವಸ್ಥೆ. ಇಷ್ಟು ದಿನ ಗಮನಿಸಿರಲೇ ಇಲ್ಲ‌. ಅದು ಯಾವಾಗಲೂ ಹಾಗೆ ಅಲ್ವ. “ಯಾವಾಗ ಅದರ ಅಗತ್ಯ ಇಲ್ಲವೊ ಆಗ ಒಂದೊಂದೆ ಕೊಂಕು ಮನಸ್ಸಿನಿಂದ ಹೊರಗೆ ಬರೋದು‌. ”

ಪಾಪ ಮನೆಯ ಮಾಲಿಕರು ಅದೆಷ್ಟು ಒಳ್ಳೆಯವರು‌. ಅಜ್ಜಿ ತಾತ ಇಬ್ಬರ ಮಧ್ಯೆ ನಾನೊಬ್ಬಳು ಒಂಟಿ ಅಂತ ಅನಿಸಲೆ ಇಲ್ಲ‌. ಯಾವ ಭಯವಿಲ್ಲದೆ ಇಷ್ಟು ದಿನ ಇರುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಈಗ ಮನೆ ಖಾಲಿ ಮಾಡಿ ಊರಿಗೆ ಹೋಗುತ್ತೇನೆ ಅಂದಾಗ ಅಜ್ಜಿಗೆ ಅದೆಷ್ಟು ಬೇಜಾರಾಗಿದೆ. ಅವರ ಆರನೇ ಮಗ ಹೇಳುತ್ತಿದ್ದ, “ಅಕ್ಕವ್ರೆ, ನೀವು ಹೋಗುತ್ತಿರೋದು ಅಮ್ಮನಿಗೆ ತುಂಬಾ ನೋವಾಗಿದೆ. ನೋಡಿ ದಿನಾ ಅಳುತ್ತಿದ್ದಾರೆ. ಮತ್ತೆ ನೀವು ವಾಪಸ್ಸು ಬರೋದಿಲ್ಲ ಅಂತ.”

ನನಗೂ ಹಾಗೆ ಆಗುತ್ತಿದೆ. ಆದರೆ ಮನಸ್ಸು ಒಂದು ನಿರ್ಧಾರಕ್ಕೆ ಬಂದ ಮೇಲೆ ವಾಪಸ್ಸು ಬರುವ ಜಾಯಮಾನ ಅಲ್ಲ. ಏನು ಮಾಡಲಿ ಅದು ನನ್ನ ಹುಟ್ಟು ಗುಣ. ಅವರಿಗೆ ಏನಾದರೂ ಹೇಳಿ ಸಮಾಧಾನ ಮಾಡಬೇಕು. ಊರಲ್ಲಿ ಅಮ್ಮ ಒಬ್ಬಳೇ ಇದ್ದಾಳೆ. ಇತ್ತೀಚೆಗೆ ಮನಸ್ಸು ಆ ಕಡೆ ಎಳಿತಿದೆ. ಯಾವಾಗ ಹೋಗುತ್ತೇನೆ ಅನ್ನುವಂತಾಗಿದೆ.

ರಾತ್ರಿ ನಿದ್ದೆ ಬರದೆ ಹೊರಳಾಡುತ್ತ ನೆನಪುಗಳ ಬುತ್ತಿ ಬಿಚ್ಚಿಕೊಂಡಾಗ ಜೋರಾಗಿ ಸಂತೂ… ಅಂತ ಕರಿಬೇಕು ಅನ್ನಿಸುತ್ತಿದೆ‌. ಕ್ಷಣ ಕ್ಷಣಕ್ಕೂ ನಿನ್ನ ನೆನಪು ಸಿಕ್ಕಾಪಟ್ಟೆ ಬರುತ್ತಿದೆ ಕಣೊ‌.

ನೀನೇನೊ ನಿನ್ನ ನಗಾರಿ ಬಾರಿಸಿದೆ ಆ ದಿನ. ಆದರೆ ಒಂದು ಚೂರು ನನ್ನ ಬಗ್ಗೆ ಯೋಚಿಸಿಲ್ಲ ಅಂತ ಅದೆಷ್ಟು ಬೈಕೊಂಡೆ ಗೊತ್ತಾ? ಯಾಕೊ ಇತ್ತೀಚೆಗೆ ನನ್ನ ಜೀವನದ ಘಟನೆಗಳೆಲ್ಲ ಬಿಚ್ಚಿಕೊಳ್ಳುತ್ತ ಹೋದ ಹಾಗೆ ನಿನ್ನ ಬಗ್ಗೆ ಗೌರವ ತುಂಬಾ ಜಾಸ್ತಿ ಆಗುತ್ತಿದೆ. ನೀನು ಆ ದಿನ ಅಷ್ಟೊಂದು ಬುದ್ದಿ ಮಾತು ಹೇಳದೆ ಇದ್ದಿದ್ದರೆ ಇವತ್ತು ನಾನು ಈ ಮಟ್ಟಕ್ಕೆ ಬೆಳಿತಿರಲಿಲ್ಲ. ಒಂದಷ್ಟು ದಿನ ಅದೆಷ್ಟು ಅಳುತ್ತಿದ್ದೆ. ಆಮೇಲೆ ಬದುಕಲ್ಲಿ ಬಂದ ಚಿತ್ರ ವಿಚಿತ್ರ ಜನಗಳು. ಆದರೆ ನಿನ್ನಂಥವನನ್ನು ನಾನೆಲ್ಲೂ ಕಾಣಲಿಲ್ಲ. ಅಪ್ಪಟ ಚಿನ್ನ ಕಣೊ ನೀನು. ತಂಪು ಹೊತ್ತಿನಲ್ಲಿ ನಿನ್ನ ನೆನಪಿಸಿಕೊಳ್ಳಬೇಕು. ಈಗ ನನಗೇನು ಅನಿಸುತ್ತೆ ಗೊತ್ತಾ?

ಯಾವ ಪಲ್ಲಕ್ಕಿಯಲ್ಲಿ

ಇಟ್ಟು ನಿನ್ನ ಪೂಜಿಸಲಿ

ಕಣ್ಣು ಮಂಜಾಗುವುದು

ಗೆಳೆಯಾ ನಿನ್ನೊಳಗಿನ

ನಿಷ್ಕಲ್ಮಶ ಪ್ರೀತಿಗೆ

ಸಚ್ಛಾರಿತ್ರದ ನಡೆಗೆ

ಅವಕಾಶಗಳು ಇದ್ದರೂ

ದುರುಪಯೋಗ ಪಡಿಸಿ

ಕೊಳ್ಳದಿರುವ ಮನಸ್ಸಿಗೆ

ಲೋಕದಲ್ಲಿ ಇಂಥವರೂ

ಇದ್ದಾರಾ ಅನ್ನುವ ಖುಷಿಗೆ

ಅದ್ಭುತ ವ್ಯಕ್ತಿಯನ್ನು

ಪ್ರೀತಿಸಿದೆ ಎಂಬ ಹೆಮ್ಮೆಗೆ

ನನ್ನ ಸಂತೂ..ಅಪರೂಪಕ್ಕೊಬ್ಬ

ಅನ್ನುವ ಅಹಂಕಾರಕ್ಕೆ

ನಿನ್ನ ಪೂಜಿಸಬೇಕು

ಹೇಳು ನಾನೆಲ್ಲಿ

ನಿನ್ನ ಕೂಡಿಸಲಿ?

ಅಮ್ಮನ ಒತ್ತಾಯ. ಓದಿದ್ದಾಯಿತಲ್ಲ, ಮದುವೆ ಮಾಡಿಕೊ. ನಾನೂ ಹೂಂ ಅಂದೆ. ಆಗಿನ ಮನಸ್ಥಿತಿಯಲ್ಲಿ ನಿನ್ನ ಬಗ್ಗೆ ಸಿಟ್ಟು ಬರುತ್ತಿತ್ತು. ಹೊ, ಇವನೊಬ್ಬನೆ ಊರಿಗೆಲ್ಲ ಗಂಡು. ಮೆಡಿಕಲ್ ಸೀಟು ಸಿಕ್ಕಿದೆ, ಸಂತೋಷದಿಂದ ಹೇಳಲು ಹೋದರೆ ಹಾಗಾ ಮಾತಾಡೋದು. ಕಂಗ್ರ್ಯಾಟ್ಸ್ ಹೇಳೋದು ಬಿಟ್ಟು. ಉರ್ಕೊಂಡು ಎದ್ದು ಬಂದಿದ್ದೆ ಹೇಳದೇನೆ‌.

ನಾನು ಈಗ ಡಾಕ್ಟರ್ ಆಗಿದೀನಿ. ಜೀವನ ತುಂಬಾ ಚೆನ್ನಾಗಿ ನಡೆಸಬೇಕು ಹಾಗೆ ಹೀಗೆ ಅಂತ‌ ಕಂಡವರ ಜೊತೆ ಕನಸು ಕಂಡೆ. ಆಮೇಲೆ ಬಂದ ಗಂಡುಗಳಿಂದ ಎಂತೆಂಥ ಅನುಭವ. ಛೆ, ಒಬ್ಬರಲ್ಲಾದರೂ ನಿಜವಾದ ಪ್ರೀತಿ ಕಾಣಲಿಲ್ಲ. ಎಲ್ಲ ನನ್ನ ರೂಪ, ದೇಹ, ದುಡಿಯುವ ಹಣದ ಮೇಲೆ ಕಣ್ಣು.

“ಒಬ್ಬ ಅಂತಾನೆ ನಿನ್ನ ಅಪ್ಪನ ಮನೆ ಆಸ್ತಿ ಎಲ್ಲ ನಮಗೆ ಅಲ್ವ?” ಇನ್ನೂ ನಾ ಪೂರ್ತಿ ಒಪ್ಪಿಲ್ಲ. ಮದುವೆ ಮೊದಲು ಇವನ ಸ್ವಭಾವ ಹೇಗೆ ಅಂತ ತಿಳಿಯೋದಕ್ಕೆ ಪಾರ್ಕ್’ಗೆ ಮಾತಾಡಲು ಹೋದರೆ , ಮದುವೆನೆ ಆಗೋಯಿತು ಅನ್ನೋ ಹಾಗೆ‌. ಮೈಯ್ಯೆಲ್ಲ ಪರಚಿಬಿಡುವಷ್ಟು ಸಿಟ್ಟು ಬಂದಿತ್ತು.

ಇನ್ನೊಬ್ಬ ಮೊದ ಮೊದಲು ಸರಿಯಾಗೆ ಇತ್ತು ನಡೆ, ನುಡಿ‌. ಯಾವಾಗ ಯಾರೂ ಇಲ್ಲದಾಗ ಮನೆಗೆ ಬಂದನೊ ಗೊತ್ತಾಯಿತು ಬಂಡವಾಳ. ಉಗಿದು ಕಳಿಸಿದೆ.

ಹೀಗೆ ಹಲವಾರು ನಾನಾ ರೀತಿಯ ಜನ, ಆಸ್ಫತ್ರೆಯ ಕೆಲಸ. ಅಲ್ಲೂ ಹಲ್ಲು ಕಿರಿಯುವ ಜನಕ್ಕೇನು ಕಮ್ಮಿ ಇಲ್ಲ‌.

ಒಮ್ಮೊಮ್ಮೆ ಅನಿಸುತ್ತೆ. “ನಿಜವಾಗಲೂ ಗಂಡಿನ ಬಣ್ಣ ತಿಳಿಬೇಕು ಅಂದರೆ ಹೆಣ್ಣಾಗಿ ಹುಟ್ಟಬೇಕು‌. ” ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ಬೇಕು‌.

ಇಂಥವರ ಮಧ್ಯೆ ಸಂತೂ.. ನಿನ್ನ ನೆನಪಾಗದೆ ಇರಲು ಸಾಧ್ಯನಾ ಹೇಳು. ಈ ರೀತಿ ಅವಕಾಶವಿದ್ದರೂ ಒಂದು ದಿನವೂ ತಪ್ಪಾಗಿ ನಡೆದುಕೊಳ್ಳಲಿಲ್ಲ. ನೋಡು ಒಬ್ಬಳೆ ಮಾತಾಡಿಕೊಳ್ಳುತ್ತಿದ್ದೇನೆ. ಇದು ನನಗೆ ರೂಢಿಯಾಗೋಗಿದೆ ಕಣೊ. ಎಷ್ಟು ವರ್ಷ ಆಯಿತು, ಮಾತಿಲ್ಲದೆ, ಭೇಟಿಯಾಗದೆ. ನನ್ನೊಳಗಿನ ಮಾತುಗಳೆಲ್ಲ ಅದುಮಿ ಅದುಮಿ ಇಟ್ಟುಕೊಳ್ಳುವ ಸ್ವಭಾವ ನನಗಿಲ್ಲ. ಅದಕ್ಕೆ ನನ್ನೊಳಗೆ ನೀನಿದಿಯಾ ಅನ್ನುವ ಭಾವನೆಗಳು ಮನಸ್ಸಿನಲ್ಲಿ ತಳವೂರಿಬಿಟ್ಟಿದೆ. ಮೌನಿಯಾಗಿ ಮಾತಾಡುತ್ತೇನೆ. ಅದಕ್ಕೆ ಹದಿಮೂರು ವರ್ಷ ಕಳೆದರೂ ನೆನಪಲ್ಲಿ ಇದೀಯಾ!

ಯಾಕೊ ಈ ರೀತಿಯ ಜನರನ್ನು ಮದುವೆಯಾಗಿ ದಿನವೂ ಸಾಯುತ್ತ ಇಷ್ಟವಿಲ್ಲದ ಬಾಳು ಬಾಳೋದಕ್ಕಿಂತ ಹೀಗೆ ಇದ್ದುಬಿಡೋಣ ನಿನ್ನ ನೆನಪಲ್ಲಿ, ನಿನ್ನೊಂದಿಗೆ ಅನಿಸಿಬಿಟ್ಟಿತು ಕಣೊ.

ನಾನು ಒಂಟಿ ಅಲ್ಲ, ನನ್ನ ಹೃದಯದಲ್ಲಿ ನೀನಿದಿಯಾ. ನಿನ್ನ ಹತ್ತಿರ ಹೇಳಬೇಕಾದ ಮಾತುಗಳೆಲ್ಲ ನನ್ನ ಕವನಗಳಲ್ಲಿ ಬರೆದಿಡುತ್ತಿದ್ದೇನೆ. ನನ್ನ ನೂರು ಕವನಗಳ ಸರದಾರ ನೀನು. ಯಾವತ್ತು ನೂರು ಕವನ ಪೂರ್ತಿ ಮಾಡುತ್ತೇನೊ ಆ ದಿನ ಖುಷಿಯಿಂದ ನನಗೊಂದು ಮುತ್ತು ಕೊಡುತ್ತೀಯಾ! ನಿನ್ನಿಂದಲೆ ನಾ ಬರೆಯುವ ಕಲೆ ರೂಢಿಸಿಕೊಂಡಿರೋದು. ಒಂದಲ್ಲ ಒಂದು ದಿನ ನೀ ನನಗೆ ಸಿಕ್ಕೇ ಸಿಗ್ತೀಯಾ. ಆ ನಂಬಿಕೆ ನನಗಿದೆ. ಆದರೆ ನಿನಗೆ ಮದುವೆ ಆಗಿ ಹೆಂಡತಿ ಮಕ್ಕಳು ಇರಬಹುದು‌. ಊರಿಗೆ ಯಾವಾಗಲೊ ಬರುತ್ತಿದ್ದೆ. ಆದರೆ ನಿನ್ನ ಕಾಣುವ ಪ್ರಯತ್ನ ಮಾಡಲೇ ಇಲ್ಲ‌. ಯಾಕೆ ಗೊತ್ತಾ? ಮೊದಮೊದಲು ನಿನ್ಮೇಲೆ ತುಂಬಾ ಕೋಪ ಬರುತ್ತಿತ್ತು; ನನ್ನನ್ನು ದೂರ ಮಾಡಿದ್ದಕ್ಕೆ. ಆಗ ಈಗಿನಷ್ಟು ನಿನ್ನ ಮಾತನ್ನು ಅರ್ಥಮಾಡಿಕೊಳ್ಳುವ ತಿಳುವಳಿಕೆ ನನಗಿರಲಿಲ್ಲ. ಆಮೇಲೆ ನನ್ನಿಂದ ನಿನಗೆ ತೊಂದರೆ ಬೇಡ ಅಂತ‌‌…‌.‌.

ಈಗ ಹೊರಟಿದೀನಿ ನೋಡು. ನಿಜಕ್ಕೂ ನೀನು ಆಶ್ಚರ್ಯ ಪಡುವಷ್ಟು ಬದಲಾಗಿದಿನಿ ನಾನು. ಆದರೆ ಮಾತಾಡೋದು ನಿನ್ನೊಂದಿಗೆ ಮಾತಾಡಿಕೊಂಡೇ ಕಲಿತುಬಿಟ್ಟಿದೀನಿ. ಜಗತ್ತೆಲ್ಲ ಅದೆಷ್ಟು ಸುಂದರ ಅನಿಸುತ್ತಿದೆ.

ಇನ್ನೂ ನೂರು

ಜನ್ಮ ಎತ್ತಬೇಕು

ಅಲ್ಲೆಲ್ಲ ನೀನೇ

ನನ್ನವನಾಗಿರಬೇಕು!

ಆದರೆ ಇನ್ನ್ಮೇಲೆ ಹೀಗೆ ದೂರದ ಊರಲ್ಲಿ ಒಬ್ಬಳೆ ಬದುಕಲಾರೆ. ಮನಸ್ಸಿನ ನಿರ್ಧಾರ, ವಿಚಾರಗಳನ್ನು ಹೇಳಲು ಕಾತರ ಕಣೊ!

“ಶಾಮಲಾ” ಅಜ್ಜಿಯ ಕೂಗು. ಬೆಳಗಿನ ಸುಪ್ರಬಾತ ಬಾಗಿಲ ಚಿಲಕ ಟಕ್ ಟಕ್. ಇದು ಡಿಟ್ಟೊ ಅಜ್ಜಿ ಸೌಂಡ. ಮನಸ್ಸಿನಲ್ಲಿ ನಗು ಬಂತು. ಅಷ್ಟೇ ದುಃಖನೂ ಒತ್ತರಿಸಿ ಬಂತು. “ಮಗಾ ಬಾಗಿಲು ತೆಗಿ.” ಅಜ್ಜಿಯ ಮುಖ ಬಾಡಿತ್ತು. ಕಣ್ಣಲ್ಲಿ ಪ್ರೀತಿ ತುಂಬಿತ್ತು. ಕೈಯಲ್ಲಿ ತಟ್ಟೆ ತುಂಬಾ ದೋಸೆ, ಪಲ್ಯ. ಗಮ್ಮ್ ಅಂತ.

“ಯಾಕಜ್ಜಿ ಇವೆಲ್ಲ ತಂದಿರಿ?” ” ಇನ್ನೆಲ್ಲಿ ತರುತ್ತೀನಮ್ಮ.” ಅಜ್ಜಿ ಗಂಟಲು ಒತ್ತಿ ಬಂದಿರಬೇಕು. ಮಾತಲ್ಲಿಗೆ ನಿಂತಿತು. ಕಲಿತ ಮಾತೆಲ್ಲ ಉಪಯೋಗಿಸಿ ಸಮಾಧಾನ ಮಾಡಿದ್ದಾಯಿತು. “ಆಗಾಗ ಬರುತ್ತಿರುತ್ತೇನೆ. ಮಗಳಂತೆ ಕಂಡ ನಿಮ್ಮನ್ನು ಹೇಗೆ ಮರೆಯಲು ಸಾಧ್ಯ!”

ಸಾಮಾನೆಲ್ಲ ಗಂಟು ಕಟ್ಟಿ ರಾತ್ರಿ ಪ್ರಯಾಣಕ್ಕೆ ಸಜ್ಜಾದೆ. ಮೆಡಿಕಲ್ ಮುಗಿಸಿ ಬೆಂಗಳೂರು ಸೇರಿದಾಗ ಕೆಲಸ ಸೇರಿದ ಉತ್ಸಾಹದಲ್ಲಿದ್ದೆ. ಈಗ ಕೆಲಸಕ್ಕೆ ಗುಡ್ ಬೈ ಹೇಳಿ ಹೊರಟೆ. ಬೆಂಗಳೂರು ಋಣ ತೀರಿತು. ನಮ್ಮಳ್ಳಿಗೆ ಹೋಗೊ ಉತ್ಸಾಹದಲ್ಲಿ ಯಾಕೊ ಗಡಿಯಾರ ಇನ್ನೂ ಆರು ಗಂಟೆ ತೋರಿಸುತ್ತಿದೆಯಲ್ಲ‌ ಮನಸ್ಸಿನ ತುಡಿತ, ಏನೊ ಆತಂಕ, ಹೇಳಲಾರದ ಸಂತೋಷ, ಗಟ್ಟಿ ಮನಸ್ಸಿನ ತುಂಬ ಕಂಡ ಕನಸುಗಳ ಮೆರವಣಿಗೆ!

ಮುಂದುವರಿಯುವುದು…

-ಗೀತಾ ಹೆಗಡೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!