*ಡೀಲ್ ಓಕೆ ಅಲ್ವಾ…!!!???*
ಬಾಲ್ಕನಿಯಿಂದ ತುಂಬಾ ಚಟುವಟಿಕೆಯಿರುವ ಹೊರ ಪ್ರಪಂಚವನ್ನೇ ದಿಟ್ಟಿಸುತ್ತಿದ್ದ ಶ್ಯಾಮಲೆಯ ಕಿವಿಗೆ ಯಾರೋ ಕೂs!ಅಂತ ಕಿರುಚಿದಂತೆ ಈ ಮೊದಲೇ ಕೇಳಿದ ಸ್ವರ ಪುನರಾವರ್ತನೆಯಾದಂತಿತ್ತು…ಎಸ್ಕಲೇಟರಿನ ಕೊನೆಯಾಗುವಾಗ ಮುಂದೆ ನೆಲದ ಮೇಲೆ ಕಾಲಿಡುವ ಅಂತಿಮ ಘಟ್ಟಕ್ಕೆ ಅಭ್ಯಾಸದ ಕೊರತೆಯಿರುವ ಶರೀರ ಒಮ್ಮೊಮ್ಮೆ ಹಿಂದಕ್ಕೆ ವಾಲಿದಂತಾಗುವ ಅನುಭವ ಶ್ಯಾಮಲೆಗೂ ಆಯಿತು..
ನಟರಾಜ್ ಕುಳಿತಲ್ಲಿಂದಲೇ”ಮಗಳೇ ನಿನ್ನ ನಂಬರ್ ತಾನೇ ಹಾಕಿದ್ದು,ಏನಮ್ಮ ಇದು ನನಗೆ ನಂಬೋಕೆ ಆಗ್ತಿಲ್ಲ” ರೇಣುಕಾದೇವಿ ಅವನ ಮಾತಿಗೆ ‘ಹೂಂ ನನಗೂ’ ಸೇರಿಸಿದಳು..!!
ಅವಳಲ್ಲಿ ಅದು ನನ್ನದೇ ಸಂಖ್ಯೆ ಅನ್ನೋ ಹರ್ಷೋದ್ಗಾರ ಎದುರು ನೋಡಿದ್ದ ನಾಲ್ಕು ಕಣ್ಣುಗಳಿಗೂ ನಿರಾಶೆ ಕಾದಿತ್ತು..ಶ್ಯಾಮಲೆ ಪ್ರತ್ಯುತ್ತರ ನೀಡಲೇ ಇಲ್ಲ..
ಏನೋ ಎಡವಟ್ಟಾಗಿರಬಹುದೆಂದು ಮನಸ್ಸಲ್ಲೇ ಊಹಿಸಿದ ನಟರಾಜ್.
ಇಬ್ಬರೂ ಹತ್ತಿರ ಹೋಗಿ ಮಮತೆಯ ಧ್ವನಿಯಲ್ಲಿ ನಟರಾಜ್ “ವಾಟ್ ಹ್ಯಾಪೆಂಡ್ ಪುಟ್ಟಾ!!..ಏನಾಯ್ತು,,ಸೀ ಯು ಹ್ಯಾವ್ ಗಾಟ್ ರಾಂಕ್ ಮಗಳೇ.!
ತನ್ನ ಸಂತೋಷವನ್ನು ವ್ಯಕ್ತಪಡಿಸಿದ..ರೇಣುಕಾದೇವಿಯೂ ಪ್ರಶ್ನಾರ್ಥಕ ಸ್ವರದಲ್ಲಿ “ಹೇಳಮ್ಮ,ಪಪ್ಪಾ ಕೇಳ್ತಿರೋದು ಕೇಳಿಲ್ವ,,ಸಂತೋಷದ ಹೊತ್ತಲ್ಲಿ ಯಾಕೀತರ ಇದೀಯಾ!.?ನಾವೇನೂಂತ ಅರ್ಥ ಮಾಡ್ಕೋಬೇಕು ನೀ ಈ ರೀತಿ ಮುಖ ಹಾಕೊಂಡಿದ್ರೇ!!.? ಒಂದೇ ಮಾತಲ್ಲಿ ಲೊಚ ಲೊಚ ಅಂತ ಎಲ್ಲಾ ಕೇಳಿ ಬಿಟ್ಟಳು ಮನೆಯೊಡತಿ..ಸಾಧಾರಣವಾಗಿ ಈ ಸ್ತ್ರೀ ಸಮುದಾಯನೇ ಹಾಗೇನೇ ಬಿಡಿ ಪ್ರಶ್ನೆ ಕೇಳೋಕೆ ಶುರುವಿಟ್ಟರೇ ಎಲ್ಲಾ ಕೇಳಿ ಬಿಡ್ತಾರೆ ಪಾಪ ಉತ್ತರ ಕೊಡ್ಬೇಕಾದವರಿಗೆ ಯೋಚಿಸುವ ಸಮಯ ಕೂಡ ಕೊಡೋದಿಲ್ಲ..ಅದಿಕ್ಕೆ ನಮ್ಮಲ್ಲಿ ಜಾಸ್ತಿ ಗಂಡಸರು ಪತ್ನಿಗೆ ಪ್ರಶ್ನೆ ಮಾಡೋ ಥರ ಯಾವ ಕಿತಾಪತಿಯ ಪುರಾವೆಯನ್ನು ಉಳಿಸಲ್ಲ,,ಏನಾದ್ರು ಅವರ ಕಿತಾಪತಿ ಗೊತ್ತಾದರೆ ಕಿವಿಗೆ ಹತ್ತಿ ಇಟ್ಟರೂ ರಕ್ತ ಬರುವಂತೆ ಕೇಳಿ ಬಿಟ್ತಾರೆ ಪ್ರಶ್ನೆಗಳನ್ನ!!.
ರೇಣುಕಾದೇವಿಯ ಮಾತು ನಿಂತ ಕೂಡಲೇ ಅಲ್ಲಿಯ ಮೌನ ಅಪಾರ್ಟ್’ಮೆಂಟಿನಿಂದ ಮೂನ್ನೂರು ಚದರ ಮೀಟರ್ ದೂರದಲ್ಲಿ ಹಿಂದಿ ಹುಡುಗನೊಬ್ಬ ಬೊಂಬಾಯಿ ಮಿಠಾಯಿ ಕೂಗೋದು ಹತ್ತಿರದಂತಿತ್ತು,ಇಷ್ಟೆಲ್ಲ ಪ್ರಕ್ರಿಯೆ ನಡೆಯುತ್ತಿದ್ದಾಗಲೂ ಶ್ಯಾಮಲೆಯ ನೋಟ ಮತ್ತು ದೇಹ ನಿಶ್ಚಲವಾಗಿತ್ತು ಯಾವುದೇ ಹೊಸತನವಾಗಲಿ ಇವರುಗಳಿಗೆ ಉತ್ತರಿಸಬೇಕೆಂಬ ಜವಾಬ್ದಾರಿಯಾಗಲಿ ಕಾಣುತ್ತಿರಲಿಲ್ಲ ಬಹುಶಃ ನಮಗನ್ನಿಸಿದ್ದು ಆಗಿರಬಹುದು ತಲೆಯಲ್ಲಿ ಏನೇನು ಓಡುತ್ತಿದ್ದೆಯೋ ಯಾರಿಗೆ ಗೊತ್ತು!? ಕೊಂಚವೂ ಮಿಸುಕಾಡದವಳ ತೊಳನ್ನು ಎಡಗೈಯಿಂದ ರೇಣುಕಾ ದೇವಿ ಮೆಲ್ಲನೇ ತಿರುಗಿಸುವಾಗ ಅವಳ ಮುಖ ರಾತ್ರಿಯೆಲ್ಲ ನಿದ್ದೆಗೆಟ್ಟು ಯಕ್ಷಗಾನ ನೋಡಿದವಳಂತೆ ಕೆಂಪಗಾಗಿತ್ತು..ಅಳು ಬರುವ ಮುನ್ಸೂಚನೆ ಕೊಡುತಿದ್ದದ್ದು ಅವಳ ಚೆಹರೆ ಸ್ಪಷ್ಟಪಡಿಸುತ್ತಿತ್ತು.. “ಹೇಯ್!?ಏನಿದು!?ಕಣ್ಣೆಲ್ಲಾ ಕೆಂಪಾಗಿದೆ,ಏನಾಯ್ತೇ ನಿನಗೆ..ಬಾಯಿ ತೆರೆಯೇ!?”..ಈ ಬಾರಿ ತುಸು ಗೊಂದಲಮಿಶ್ರಿತ ಭಯದ ವಾತಾವರಣವಿತ್ತು ತಾಯಿಯ ಮಾತಿನಲ್ಲಿ. ನಟರಾಜನಿಗೆ ಇಲ್ಲಿ ನಡೆಯುವ ಕಾರ್ಯಕ್ರಮ ಏನು ಅನ್ನೋದು ಸಹ ಸ್ಪಷ್ಟವಾಗಿಲ್ಲ ಆದರೂ ಮಗಳ ಅಂಕ ನೋಡಿ ಆದ ಖುಷಿ ಸತ್ತು ತುಂಬಾ ಹೊತ್ತಾಗಿತ್ತು…
ಅಲ್ಲಿಗೆ ಶ್ಯಾಮಲೆಯ ಸ್ವಶಕ್ತಿಯು ಮುಗಿದು ಗಂಡನ ಮನೆಗೆ ಹೋಗುವ ಮದುವಣಗಿತ್ತಿಯಂತೆ ಅಳುವಿನ ಕಟ್ಟೆಯೂ ಒಡೆಯಿತು ರೇಣುಕಾದೇವಿಯ ಬಾಚಿ ತಬ್ಬಿಕೊಂಡು ಗೋಗರೆದು ಅತ್ತು ಅಸ್ಫಷ್ಟವಾಗಿ ಏನೋ ಹೇಳುತ್ತಿದ್ದಳು ಮಮ್ಮೀsss…ನಾ..ಪ್ಪು..ಮಾಡಿ..ಟ್ಟೇ…!!
ಮುಂದಿನ ಕೆಲವು ನಿಮಿಷಗಳು ಅಳುವಿನ ಕಾರ್ಯಕ್ರಮ ಜರುಗಿತು..ಗೊಂದಲಮಯದ ಮನಸ್ಥಿತಿಯಲ್ಲಿದ್ದರೂ ನಟರಾಜ ಏನನ್ನೂ ಕೇಳಲು ಹೋಗಿಲ್ಲ ಕೇಳಿದರೂ ಪ್ರಯೋಜನವಿಲ್ಲ ಅನ್ನೋದನ್ನು ಮೊದಲೇ ಊಹಿಸಿದ್ದ..ಎದೆಗೆ ಚಿಕ್ಕ ಮಕ್ಕಳಂತೆ ಒರಗಿದ್ದ ಶ್ಯಾಮಲೆಯನ್ನು ಅದೇ ಸ್ಥಿತಿಯಲ್ಲಿ ಅಲ್ಲೇ ಇದ್ದ ಸೋಫಾದವರೆಗೂ ಕರೆದುಕೊಂಡು ಬಂದಳು ತಾಯಿ ರೇಣುಕಾದೇವಿ.ಅವಳ ಅಳು ನಿಲ್ಲದೇ ಮುಂದೆ ಯಾವುದೇ ವಿಷಯ ಮಾತಾಡಬಾರದೆಂಬ ಒಡಂಬಡಿಕೆ ದಂಪತಿಗಳಿಬ್ಬರೂ ಕಣ್ಣ ಸನ್ನೆಗಳಲ್ಲೇ ಮಾಡಿದ್ದರೋ ಏನೋ ಅನ್ಯೋನ್ಯ ಪ್ರೀತಿಗೆ ಅಂಗಾಗಳು ಮಾತಾನಾಡುವುದು ಕೇಳಿಸುವುತಂತೆ ನಿಜಾನೇ ಇರಬೇಕು..ಇಬ್ಬರೂ ತುಟಿಕ್ ಪಿಟಿಕ್ ಅನ್ನದೇ ಅವಳ ಅಳುವಿನ ಎಪಿಸೋಡಿಗೆ ಭಂಗ ತಂದಿಲ್ಲ….
ಕೊನೆಗೆ ಶ್ಯಾಮಲೆಯ ನೀರು ಸುರಿಯುವ ಮೂಗನ್ನು ಅಲ್ಲೇ ಇದ್ದ ಟವೆಲ್’ನಲ್ಲಿ ಒರೆಸುತ್ತಾ ಅಳುವನ್ನು ತಡೆಯಲು ಪ್ರಯತ್ನಿಸಿದಳು ಮೊದಲಿಗೆ ಆಗದಿದ್ದರೂ ಒಂದೆರಡು ಬಾರಿ ಮಾಡಿ ಒಂದು ವಿಧದಲ್ಲಿ ನಿಲ್ಲಿಸಿದಳು..
ನಟರಾಜ ಸೀದಾ ಹೋಗಿ ಫ್ರೀಡ್ಜಿಂದ ತಂಪು ನೀರು ತಂದು ಕೊಟ್ಟು ಕುಡಿ ಅಂದ..ನೀರಿನ ಬಾಟಲ್ ಕೈಯಲ್ಲಿಡಿದು ಮತ್ತೊಮ್ಮೆ ಉಕ್ಕಿ ಬಂದ ಅಳುವನ್ನು ನುಂಗಿ ನೀರು ಎತ್ತಿ ಒಂದು ಗುಟುಕು ಹೊಟ್ಟೆಗೆ ಹಾಕಿಕೊಂಡಳು ಶ್ಯಾಮಲೆ..
*”ಪಪ್ಪಾ ನಂಗೆ ತುಂಬಾ ಭಯವಾಗ್ತಿದೆ ಪಪ್ಪಾ..”*!!ಇದೇನು ಕಥೆ ಅನ್ನೋದು ಸಹ ನಟರಾಜನ ಕಲ್ಪನೆಯಲ್ಲಿ ಇಲ್ಲ,ಮಗಳು ರಾಂಕ್ ತಗೊಂಡಿದ್ದನ್ನು ಭರ್ಜರಿಯಾಗಿ ಆಚರಣೆ ಮಾಡಬೇಕಾದವರು ಈ ರೀತಿ ಅಳುತ್ತಾ ಕೂತಿರೋದು ಸಂಬಂಧವಿಲ್ಲದ ತಕರಾರು ಎಂದನಿಸುತ್ತಾ ಇತ್ತು..ಆದರೂ ಮಗಳ ಅವಸ್ಥೆ ನೋಡಿದ್ರೆ ಗೊಂದಲ ಅಳು ಎಲ್ಲಾನು ಬರುತ್ತೇ…!!
****
ತನ್ನ ಗೊಂದಲವನ್ನು ಮರೆಮಾಡುತ್ತಾ ಸಮಾಧಾನವಾಗಿ ಹೇಳು ಎಂದ…
“ನಾನೇನು ಬುದ್ಧಿವಂತೆಯಾಗಿಲ್ಲ ಪಪ್ಪಾ,ನಿಮ್ಮ ಕನಸು ನನಸು ಮಾಡಿ,ನನ್ನ ಭಯವನ್ನು ಹೋಗಲಾಡಿಸಲು ಒಂದು *ಡೀಲ್* ಗೆ ಒಪ್ಪಿಕೊಂಡೆ,ಅದರ ಪರಿಣಾಮ ಮತ್ತು ಸಮಯ ಹತ್ತಿರವಾಯ್ತು ಅನ್ನೋದು ಗೊತ್ತಾದಾಗ ಭಯ ಜಾಸ್ತೀನೆ ಆಗಿದೆ ಪಪ್ಪಾ. ಪ್ಲೀಸ್ ಎಕ್ಸ್’ಕ್ಸೂಸ್ ಮೀ ಪಪ್ಪಾ..!!..ಶ್ಯಾಮಲೆ ಹೇಳುತಾನೆ ಅಳುವಿನ ತಾರಕ ಮಟ್ಟಕ್ಕೆ ಹೋಗಿದ್ದಳು….
ಮನುಷ್ಯನ ಮನಸ್ಸು ಕ್ಷಣಕ್ಕೆ ಎಷ್ಟೇ ವಿಷಯದ ಸುತ್ತ ಗಿರಕಿ ಹೊಡೆದರೂ ನಿಶ್ಚಿತವಾಗಿ ಏಕಾಗ್ರತೆಯಿಂದ ಒಂದು ವಿಷಯವನ್ನು ಮಾತ್ರ ತರ್ಕಿಸಲು ಸಾಧ್ಯ ನಟರಾಜನಿಗೆ ಮಾತ್ರ ತಾನು ಯಾವ ವಿಷಯದ ಬಗ್ಗೆ ತರ್ಕಿಸಬೇಕೆಂಬುದೇ ಇನ್ನೂ ಅರಿವಿಗೆ ಬಂದಿಲ್ಲ,ಫಲಿತಾಂಶ ನೋಡುವ ಮೊದಲು ತನ್ನ ತಲೆಯಲ್ಲಿದ್ದ ಗುರಿ ಸಾಧನೆ ಕನಸುಗಳೆಲ್ಲವೂ ಒಂದು ಭ್ರಮೆಯೆಂದೆನಿಸಿತು..
*ಡೀಲ್*..ಏನದು…!? ಸಾಮಾನ್ಯ ಮಹಿಳೆಯ ಭಯಯುಕ್ತ ಕಂಠದಲ್ಲಿ ಕಣ್ಣುಗಳೆರಡು ದೊಡ್ಡದು ಮಾಡುತ್ತಾ ಕೇಳಿದಳು ತಾಯಿ…ಏನೇ ಆಗಲಿ ನೀನು ಸರಿಯಾಗಿ ಹೇಳಮ್ಮಾ,ತಂದೆಯಾದವನ ಕಾಳಜಿ ವಿಷಯವನ್ನು ಸರಿ ಅರ್ಥಮಾಡಿಕೊಳ್ಳಬೇಕೆಂಬ ಇರಾದೆ ನಟರಾಜನ ಮಾತಿನಲ್ಲಿ ಸ್ಪಷ್ಟವಾಗಿತ್ತು…
*******
ರಾಕೇಶ್ ಆರ್ಟ್ಸ್’ನಲ್ಲಿ ಕಲಿಯುವ ಪುಂಡ ಹುಡುಗ,ಎಲ್ಲಾ ಕಾಲೇಜುಗಳಲ್ಲಿರುವ ಪುಂಡರ ಗ್ಯಾಂಗಿನಂತೆ ಆ ಕಾಲೇಜಿನಲ್ಲೂ ಇತ್ತು,ಅದರ ನಾಯಕನೇ ಈ ರಾಕೇಶ್,ಆದರೆ ಇನ್ನೊಬ್ಬರಿಗಿಂತ ಇವನು ಸ್ವಲ್ಪ ವ್ಯತ್ಯಸ್ತ.ಸಾಧಾರಣವಾಗಿ ಗ್ಯಾಂಗ್ ಸೇರೋರು ಕಟ್ಟೋರು ದಡ್ಡರಾಗಿರುತ್ತಾರೆ,ಇವನ ಬುದ್ಧಿವಂತ,ತನ್ನ ಏರಿಯಾದಲ್ಲಿ ಖದೀಮರ ಒಡನಾಟ ಜಾಸ್ತಿ ಇರೋದರಿಂದಲೇ ಇವನೂ ಆ ತರವಾಗಿತ್ತು..ಇವನ ಬುದ್ಧಿವಂತಿಕೆಗೆ ಇನ್ನೊಂದು ಸಾಕ್ಷಿ ಇವನ ಗ್ಯಾಂಗ್ ಮೆಂಬರ್ಸ್’ಗಳೂ ಅತೀ ಬುದ್ಧಿವಂತರು ಎಲ್ಲರೂ ಇವನಿಗಿಂತ ಮೇಲಿನ ಕ್ಲಾಸಿನವರು ಮತ್ತು ಸ್ಟ್ಯಾಂಡರ್ಡ್ ಕುಟುಂಬದವರು…ಅವರಲ್ಲಿ ಹೆಚ್ಚು ಮಂದಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು…ಇವನನ್ನು ನಾಯಕ ಮಾಡಲು ಇದ್ದ ಒಂದೇ ಕಾರಣ ಇವನ ಏರಿಯಾ ಪುಡಿ ಡಾನ್’ಗಳು,ಯಾವುದೇ ಕಿತಾಪತಿ ಹೊರಗೆ ಬಂದರೆ ರಿಯಲ್ ಕ್ವಾಟರ್ ಡಾನ್’ಗಳು ಬಂದು ತಾರಮಾರಿ ಮಾಡುತ್ತಿದ್ದರು ಅದರಿಂದಲೇ ಇಡೀ ಕಾಲೇಜಿಗೆ ರಾಕೇಶ್ ಒಂದು ಬಗೆಯ ಡಾನ್ ಆಗಿದ್ದು..!!.
ಇವರೆಷ್ಟು ಬುದ್ಧಿವಂತರೋ ಅಷ್ಟೇ ನೀಚರು ಬೇರೆಯವರಂತೆ ಕೇವಲ ರಾಗಿಂಗ್ ಮಾಡೋದು,ತಮಾಷೆ ಮಾಡೋದು ಮಾತ್ರ ಅಲ್ಲ ಇವರ ಉದ್ಧೇಶ ಕಾಲೇಜಿನಲ್ಲಿ ಸುಲಭವಾಗಿ ತೆಕ್ಕೆಗೆ ಬೀಳುವ ಹೆಣ್ಣು ಮಕ್ಕಳನ್ನು ಅನುಭವಿಸುವುದು,ಆದರೂ ಇವರಲ್ಲಿ ಒಂದು ವೃತ್ತಿ ಧರ್ಮವಿತ್ತು ಮಾನಭಂಗ ಮಾಡುತ್ತಿರಲಿಲ್ಲ ಅವರಾಗಿಯೇ ಬರುವಂತೆ ಮಾಡುತ್ತಿದ್ದರು..ಅದಕ್ಕೆ ಬೇಕಾದ ಮಾನಸಿಕ ಭಂಗ ಮಾಡಿರುತ್ತಿದ್ದರು ಅದು ಬೇರೆ ವಿಷಯ,,ಯಾವುದಾದರೂ ವಿಷಯದಲ್ಲಿ ಹುಡ್ಗಿಯನ್ನು ಸಿಕ್ಕಿಸಿ ತಂತ್ರಜ್ಞಾನದ ಸಹಾಯದಿಂದ ಅವಳನ್ನು ಮಾನಸಿಕವಾಗಿ ಕುಗ್ಗಿಸಿ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದ ನೀಚ ವಿದ್ಯಾರ್ಥಿಗಳು..ಈ ಕೃತ್ಯ ಮಾತ್ರ ಹೊರಗಿನ ಪ್ರಪಂಚಕ್ಕೆ ಗೊತ್ತಾಗದ ಹಾಗೇಯೇ ಮಾಡುತ್ತಿದ್ದದ್ದು ಇವರ ಬುದ್ದಿವಂತಿಕೆ
ರಾಕೇಶನ ಬಯೋಡಾಟ ಸಿಗುವ ಹೊತ್ತಿಗೆ ಶ್ಯಾಮಲೆ ಡೀಲ್’ನಲ್ಲಿ ಸಿಕ್ಕಿ ಬಿದ್ದಾಗಿತ್ತು…
ಶ್ಯಾಮಲೆಯ ಪೀಠಿಕೆ ಕೇಳಿ ಹಾರರ್ ಸಿನಿಮಾ ನೋಡಿದ ತರ ಇಬ್ಬರೂ ಬೆವೆತು ಹೋಗಿದ್ದರು..ನಟರಾಜನಿಗೆ ಇಷ್ಟು ವಿಷಯಗಳನ್ನು ಜೋಡಿಸಿ ಒಂದು ನಿರ್ದಿಷ್ಟ ತರ್ಕಕ್ಕೆ ಈಗಲೂ ಬರಲಾಗಲಿಲ್ಲ,ಯಾರಿದು ರಾಕೇಶ್,ಇವಳ ಅಳುವಿಗೂ,ಬಂದಿರುವ ಮಾರ್ಕಿಗೂ,ನಾವು ಬೆವೆತು ಹೋಗಿದ್ದಕ್ಕೂ ಎತ್ತಿಂದೆತ್ತ ಸಂಬಂಧ!!?
ಶ್ಯಾಮಲೆ ಕೂತಲ್ಲಿಂದ ಎದ್ದು ಪುನಃ ಬಾಲ್ಕನಿ ಕಡೆಗೆ ಕಾಲ್ಕಿತ್ತಲು,,ಇವಳು ನಿಂತ ಕಡೆ ನಿಲ್ಲದಾಗಲೇ ಗೊತ್ತಾಗುತ್ತೆ ಇವಳಲ್ಲಿ ಏಕಾಗ್ರತೆಯ ಕೊರತೆ ಬೇಕಾದಷ್ಟು ಇದೆಯೆಂಬುದು….
(ಮುಂದುವರೆಯುವುದು…)
-ಅವಿಜ್ಞಾನಿ