ಅದು ಆರು ಮಹಡಿಯ ಸುಂದರ ಅಪಾರ್ಟ್ ಮೆಂಟ್..ಅದರ ಮೂರನೇ ಮಹಡಿಯ ಎರಡನೇ ಮನೆಯಲ್ಲಿ ಯಾರಾದರೂ ಒಳಹೊಕ್ಕರೆ ಸೂತಕದ ಛಾಯೆ ಕಾಣಸಿಗಬಹುದು ಅಷ್ಟು ನೀರವ ಮೌನ,ಮನೆಯಲ್ಲಿರುವ ಮೂರು ತಲೆಗಳು ಮನಸ್ಸಿಗೆ ಬರುವ ಆಲೋಚನ ಲಹರಿಗೆ ನಾಕಬಂಧಿ ಹಾಕಿ ನಿಲ್ಲಿಸಿದಂತೆ ಏಕಚಿತ್ತದಿಂದ ಏನನ್ನೋ ಕಾಯುತ್ತಿದೆ,ಯಾರಲ್ಲೂ ಮಾತಿಲ್ಲ..ಹೊಸದಂತೆ ಕಾಣುವ ಜಪಾನೀಸ್ ತಯಾರಿಕಾ ಸಂಸ್ಥೆಯ ಸ್ಯಾಮ್ ಸಂಗ್ ಲ್ಯಾಪ್’ಟಾಪ್,ಅವರದೇ ಸಂಸ್ಥೆಯ ಮೂರು ಸ್ಮಾರ್ಟ್ ಪೋನುಗಳು ಯುದ್ಧಕ್ಕೆ ಅಣಿಯಾದ ಶಸ್ತಾಸ್ತ್ರದಂತೆ ಆಜ್ಞೆಗೆ ಕಾಯುತ್ತಿದೆ..ಉತ್ತಮ ಗುಣಮಟ್ಟದ ಸೋಫಾ ಸೆಟ್ಟಿನಲ್ಲಿ ಮುನಿವರ್ಯರ ಭಂಗಿಯಂತೆ ಶ್ಯಾಮಲೇ ಕೈಗಳನ್ನು ಗಲ್ಲಕ್ಕೆ ಪಿಲ್ಲರಾಗಿಸಿ ಕೂತಿದ್ದಾಳೆ..ಅಮ್ಮ ರೇಣುಕಾದೇವಿ ಅರ್ಧ ಬೆಂಡಾಗಿ ಗೋಡೆ ಸಹಾಯಕ್ಕೆ ಮೊರೆ ಹೋಗಿದ್ದಾಳೆ,,ಮನೆಯಜಮಾನ ನಟರಾಜ್ ವರ್ಚಸ್ಸಿಗೆ ಧಕ್ಕೆ ಬರದಂತೆ ಗಂಭೀರತೆ ಉಳಿಸಿಕೊಂಡಿದ್ದಾರೆ..ಶ್ಯಾಮಲೆಯ ಕಣ್ಣುಗಳು ಪದೇ ಪದೇ ಅಪರಾಹ್ನ ನಾಲ್ಕಕ್ಕೆ ಎರಡು ನಿಮಿಷವಿರುವ ಗಡಿಯಾರವನ್ನು ಇಣುಕ್ಕುತ್ತಿದೆ..ಈ ದಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಭವಿಷ್ಯತ್ತು ನಿರ್ಧರಿಸುವ ದಿನ ಅಂದರೆ ಪರೀಕ್ಷೆಯ ಫಲಿತಾಂಶದ ದಿನ.!!
ಮುಂದುವರಿದ ಲೋಕದ ಉದಾಹರಣೆಯಂತೆ ಕುಳಿತಲ್ಲಿಯೇ ಫಲಿತಾಂಶವನ್ನು ಅಂತರ್ಜಾಲದ ಮೂಲಕ ನೋಡಲು ಇವರ ಕಾತುರ….
ಮನೆಯೊಳಗೆ ಪ್ಯಾನ್ ರೊಯ್ರನೆ ಸುತ್ತುತ್ತಿದ್ದರೂ ಗಾಳಿ ಮಿಸುಕಾಡದೇ ಶಾಂತಸಾಗರದಂತೆ ಇದೆ ಅನ್ನೋದಕ್ಕೆ ನಟರಾಜನ ನೆತ್ತಿ ಮೇಲೆ ಉತ್ಪತ್ತಿಯಾಗುವ ಬೆವರ ಹನಿಗಳೇ ಸಾಕ್ಷಿ..ತನ್ನ ಮಗಳ ಭವಿಷ್ಯತ್ತು ಅವಳ ಮೇಲಿಟ್ಟಿರುವ ನಂಬಿಕೆ,ಪ್ರೀತಿ,ಮಗಳ ಓದಿಗೆಂದೇ ಬ್ಯಾಂಕ್ ಲೋನುಗಳಿಗೂ ಈ ಮುಂಚೆಯೇ ಅರ್ಜಿ ಹಾಕಿದ್ದ, ಮುಂದೆ ಅವಳನ್ನು ಡಾಕ್ಟರ್ ಮಾಡುವ ಕನಸು ದಂಪತಿ ಈರ್ವರೂ ಕಟ್ಟಿಕೊಂಡಿದ್ದಾರೆ..ಸ್ಫರ್ಧಾತ್ಮಕ ಯುಗದಲ್ಲಿ ಡಿಸ್ಷಿಂಕ್ಷನ್ ಇಲ್ಲದಿದ್ದರೆ ಏನೂ ಪ್ರಯೋಜನವಿಲ್ಲವೆಂಬುದು ಒಬ್ಬ ಬ್ಯಾಂಕ್ ಉದ್ಯೋಗಿಯಾಗಿರುವ ನಟರಾಜನಿಗೆ ಚೆನ್ನಾಗಿಯೇ ಗೊತ್ತಿತ್ತು..ಇರುವುದೇನೋ ಅಪಾರ್ಮೆಂಟ್’ನಲ್ಲಾದರೂ ಕೆಲಸಕ್ಕೆ ಹೋಗಿ ಬರುವುದು ಬಸ್ಸಿನಲ್ಲಿಯೇ,ಬಳಿ ಒಂದು ಮೋಟಾರು ಗಾಡಿಯನ್ನು ತೆಗೆಯದೇ ಕುಟುಂಬ ಮತ್ತು ಮಗಳ ಭಾವಿ ಬಗ್ಗೆ ಅವನ ಕಾಳಜಿಗೆ ಉತ್ತಮ ನಿದರ್ಶನವಾಗಿತ್ತು..ಗೆಳೆಯರೆಲ್ಲರೂ ವಾರಕೊಮ್ಮೆಯಾದರೂ ಪಾರ್ಟಿಗೆ ಹೋಗೋಣವೆಂದರೆ ನಟರಾಜ ಮಗಳ ಡಾಕ್ಟರ್ ಸೀಟಿನ ಡೊನೇಶನ್ ವಿಷಯ ತೆಗೆದು ಅವರನ್ನು ಬಾಯಿ ಮುಚ್ಚಿಸುತ್ತಿದ್ದ.ಈತ್ತೀಚೆಗೆ ಗೆಳೆಯರು ಸಹ ಇವನನ್ನು ಕರೆಯುವುದನ್ನೂ ಬಿಟ್ಟಿದ್ದರು ಇವನ ಮುಂದಾಲೋಚನೆಯ ಭಾಷಣ ಕೇಳಿದರೆ ತಮಗೆಲ್ಲ ಜವಾಬ್ದಾರಿನೇ ಇಲ್ಲ ಅನ್ನೋ ತರಹದ್ದಾಗಿತ್ತು ನಟರಾಜನ ಕೊಂಕುನುಡಿಗಳು…
***********
ಅದಕ್ಕೂ ತುಂಬಾ ಕಾರಣಗಳಿವೆ..ನಟರಾಜ ಹುಟ್ಟಿದ್ದು ಪಕ್ಕಾ ಹಳ್ಳಿ..ಆ ಊರಿನಲ್ಲಿ ಓದುತ್ತಿರುವ ಬೆರಳೆಣಿಕೆ ಮಕ್ಕಳ ಪೈಕಿ ಟೈಲರಿಂಗ್ ಕೆಲಸ ಮಾಡುವ ಯಮುನಕ್ಕನ ಮಗ ನಟರಾಜನೂ ಒಬ್ಬ..ಚಿಕ್ಕವನಿರುವಾಗಲೇ ತಂದೆಯನ್ನು ಕಳೆದುಕೊಂಡ ಒಬ್ಬನೇ ಮಗನನ್ನು ಯಮುನಕ್ಕಾ ಯಾವುದೇ ಕೊರತೆ ಬರದೇ ಬೆಳೆಸುತ್ತಿದ್ದಳು..ಗಂಡನಿರುವಾಗಲೇ ಹೊಳೆ ಪಕ್ಕಾ ಕಾಲು ಜಾರಿ ಬೆನ್ನು ಮೂಳೆ ಮುರಿತಕ್ಕೊಳಗಾದ ಅವಳಿಗೆ ಗಂಡನ ಕಾಲವಾದ ಬಳಿಕ ತುಂಬಾನೇ ತಾಪತ್ರಯವಾಗಿತ್ತು..ಆದರೂ ಸಾಯುವ ಮೊದಲು ಕಷ್ಟಪಟ್ಟು ಹೆಂಡತಿಗೆಂದು ಒಂದು ಹೊಲಿಗೆ ಯಂತ್ರ ಹಾಗೂ ನಟರಾಜ ಈ ಎರಡು ಆಸ್ತಿಯನ್ನು ಬಿಟ್ಟು ಹೋಗಿದ್ದ ಗಂಡನ ಆಸ್ತಿಯಿಂದ ಬೆನ್ನು ನೋವನ್ನು ಬದಿಗಿಟ್ಟು ಊರ ಕೆಲವರು ಕೊಡುವಂತಹ ಹರುಕು ಮುರುಕು ಬಟ್ಟೆಗಳನ್ನು ಹೊಲಿದು ನಟರಾಜನನ್ನು ಬೆಳೆಸಿದಳು..ಚಿಕ್ಕವನಾದರೂ ತಾಯಿಯ ಪರಿಶ್ರಮವನ್ನು ಕಂಡ ನಟರಾಜನಿಗೆ ತಾಯಿಯ ಕಷ್ಟವನ್ನು ಹೇಗಾದರೂ ಮಾಡಿ ಕೊನೆಗೊಳಿಸಬೇಕೆಂದು ಶಾಲೆಗೆ ಹೋಗದೇ ಸಿಗುವ ಕೆಲಸ ಮಾಡುತ್ತೇನೆಂದು ಹೇಳಿದರೂ ಯಮುನಕ್ಕಾ ಸುತರಾಂ ಒಪ್ಪಲಿಲ್ಲ..”ನೀನು ಚೆನ್ನಾಗಿ ಕಲಿತು,ದೊಡ್ಡ ಮನುಷ್ಯನಾಗು ಮಗಾ” ಎಂದು ತನ್ನ ಆಶೆಯನ್ನು ಪದೇ ಪದೇ ಹೇಳಿ ಮಗನನ್ನು ಎಚ್ಚರಿಸುತ್ತಿದ್ದಳು..ಕ್ರಮೇಣ ಇವನಲ್ಲೂ ಕಲಿತು ಸಾಧನೆ ಮಾಡಬೇಕೆಂಬ ಹಟ ಸಾಧಾರಣವಾಗಿಯೇ ಹುಟ್ಟಿತು…ಮುಂದೆ ಕಾಲೇಜಿನ ಕಲಿಕೆಗೆ ಹೊರ ಊರಿಗೆ ಹೋದಾಗ ತಾಯಿಯ ಮರಣವಾದಾಗ ಸ್ವಲ್ಪ ವಿಚಲಿತನಾದರೂ ತಾಯಿಯ ಆಶೆಯನ್ನು ಈಡೇರಿಸಬೇಕೆಂದು ಓದಿನೊಟ್ಟಿಗೆ ತನ್ನ ಹಾಸ್ಟೆಲ್ ಮತ್ತು ಕಾಲೇಜಿನ ಖರ್ಚಿಗೆ ಹೋಟೆಲ್,ಪೇಪರ್,ಹಾಲು ಹಾಕುವ ಕೆಲಸ ಮಾಡಿ ಹಣ ಹೊಂದಿಸುತ್ತಿದ್ದ,ಎಲ್ಲರಲ್ಲಿಯೂ ಆತ್ಮೀಯವಾಗಿ ಬೆರೆಯುವುದರಿಂದ ಧನವಂತ ಸ್ನೇಹಿತರೂ ಆಗಾಗ ಇವನ ಸಹಾಯಕ್ಕೆ ನಿಲ್ಲುತ್ತಿದ್ದದ್ದು ನಟರಾಜನ ಕಲಿಕೆಗೆ ಹೆಚ್ಚು ಹುಂಬು ನೀಡುತ್ತಿತ್ತು..
ಗಡಿಯಾರ ನಾಲ್ಕರ ಮೇಲೇರುತ್ತಲೇ ಶ್ಯಾಮಲೆ ಗಲ್ಲಕ್ಕೆ ಇಟ್ಟ ಪಿಲ್ಲರನ್ನು ತೆಗೆದು ಪೋಲ್ಡ್ ಮಾಡಿಟ್ಟಂತಹ ಲ್ಯಾಪ್’ಟಾಪನ್ನು ತನ್ನ ನಡುಗುವ ಕೈಗಳಿಂದಾನೇ ತೆರೆದಳು,ತನಗಿಂತ ಮನೆಯಲ್ಲಿರುವ ಸ್ತ್ರೀ ಸಮುದಾಯವೇ ಹೆಚ್ಚು ಆತಂಕ,ಕಾತುರದಿಂರುವುದ ಕಂಡ ನಟರಾಜನಿಗೆ ತನ್ನ ಪರಿಶ್ರಮ ತ್ಯಾಗದ ಫಲ ಅವರಿಬ್ಬರ ಕಣ್ಣಿನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು,ರೇಣುಕಾದೇವಿ,ನಟರಾಜ್ ಇಬ್ಬರು ವಿಶ್ರಾಂತಿ ಮಾಡುತ್ತಿದ್ದ ತಮ್ಮ ಮೊಬೈಲ್ ಪೋನನ್ನು ಕೈಗೆತ್ತಿ,ಶ್ಯಾಮಲೆಯ ಮುಖದ ಕಡೆ ಆತ್ಮೀಯ ನೋಟ ಬೀರಿದರು..!!
ಮಗಳ ಕಲಿಕೆಗೆ ಬೇಕೆಂದೇ ಮನೆಯಲ್ಲಿ ಉತ್ತಮ ವೇಗದ ಬ್ರಾಡ್’ಬ್ಯಾಂಡ್ ಅಂತರ್ಜಾಲ ಸೇವೆಯನ್ನು ಹಾಕಿಸಿಕೊಂಡಿದ್ದ ನಟರಾಜ್..
ಮನೆಯಲ್ಲಿದ್ದರೆ ಎಲ್ಲವೂ ವೈಫೈಯಾಗಿರವುದರಿಂದ ಅಂತರ್ಜಾಲದ ಕಾರ್ಯಗಳಿಗೆ ತೊಡಕು ಆಗುತ್ತಿರಲಿಲ್ಲ..
ಹಿಂದೊಮ್ಮೆ ಹಳೆ ಮನೆಯಲ್ಲಿರುವಾಗ ಯಾವುದೋ ಒಂದು ಕಲಿಕಾ ಮಾಹಿತಿ ಪಿಡಿಎಪ್’ನ ಡೌನ್ಲೋಡ್ ಮಾಡೋಕೆ ಆಗದೇ ಕ್ಲಾಸಿಗೆ ಶ್ಯಾಮಲೆ ರಜೆ ಹಾಕಿದ್ದು ನಟರಾಜನಿಗೆ ಉತ್ತಮ ವೇಗದ ಅಂತರ್ಜಾಲ ಸೇವೆ ಪಡೆದುಕೊಳ್ಳಲು ಮನಸ್ಸಾಗಿದ್ದು..!!
ಏನೋ ಮರೆತಂತೆ ತಟ್ಟನೇ ಎದ್ದು ನಿಂತ ಶ್ಯಾಮಲೆ ಬಾಲ್ಕನಿಯ ಪಕ್ಕ ಇರುವ ತನ್ನ ಕೋಣೆಯ ಕಡೆ ಹೆಜ್ಜೆ ಹಾಕಿದಳು,..!
ಆ ಅಪಾರ್ಮೆಂಟ್ ಹೊಸದಾಗಿ ಬೆಳೆಯುತ್ತಿರುವ ಒಂದು ಕನ್’ಸ್ಟ್ರಕ್ಷನ್ ಕಂಪೆನಿಯವರ ಭೂಮಿಯಲ್ಲಾಗಿತ್ತು ತಲೆ ಎತ್ತಿದ್ದು..ಪ್ಲಾಟಿನ ವಿನ್ಯಾಸದಲ್ಲಿ ದೂಸ್ರ ಮಾತು ಇಲ್ಲ,ಅಚ್ಚು ಕಟ್ಟಾದ ಅರೇಬಿಯನ್ ಸ್ಟ್ರಕ್ಚರಾಗಿತ್ತು ,ಮನೆಗಳನ್ನು ವಿಶಾಲವಾಗಿನೇ ಕಟ್ಟಿಸಿದ್ದರು(ಅಷ್ಟೇ ಹಣ ಕೂಡ ಪಡಕೊಂಡಿದ್ದರು ಅದು ಬೇರೆ ವಿಷಯ ಬಿಡಿ).ಇವರ ಮನೆ ಮಹಡಿಯ ಮುಂಭಾಗ ಬರುವಂತಿತ್ತು ಬಾಲ್ಕನಿಯಿಂದ ನಿಂತು ನೋಡಿದರೆ ಕಣ್ಣಳತೆ ದೂರದಲ್ಲಿರುವ ಎಲ್ಲವನ್ನು ಸೆರೆ ಹಿಡಿಯಬಹುದಿತ್ತು,ನಟರಾಜ್ ಮಗಳ ಮನಸ್ಸು ಹರ್ಷಗೊಳ್ಳಲೆಂದೇ ಈ ಮನೆಯನ್ನು ನಿರ್ಮಾಣ ಹಂತದಲ್ಲೇ ಕಾಯ್ದಿರಿಸಿದ್ದೂಂತ ರೇಣುಕಾದೇವಿಗೆ ಗೊತ್ತಿಲ್ಲದ ವಿಷಯವಲ್ಲ….!
**
ತನ್ನ ಸ್ಟಡಿ ರೂಮಿನ ಒಳಗೆ ಒಂದೆರಡು ನಿಮಿಷ ತಡಕಾಡಿ ಹೊರಗಡೆ ಬಂದಳು..ಕೈಯಲ್ಲಿರುವ ಬಿಳಿ ಕಾಗದ ಪರೀಕ್ಷಾ ಹಾಲ್ ಟಿಕೆಟ್ ಅನ್ನೋದು ಅವಳ ಕೈಯನ್ನು ನೋಡಿದ ಯಾರಿಂದ ಬೇಕಾದರೂ ಊಹಿಸಬಹುದಿತ್ತು,ತನ್ನ ಫಲಿತಾಂಶ ನೋಡಲು ಸಂಖ್ಯೆ ನಮೂದಿಸ ಬೇಕಾದ್ದದರಿಂದ ಅದನ್ನು ತರಲು ಹೋಗಿದ್ದು ಶ್ಯಾಮಲೆ..!
ಫಲಿತಾಂಶ ಪ್ರಕಟವಾಗುವ ವೆಬ್’ಸೈಟಿನ ಹೆಸರನ್ನು ಕ್ರೋಮ್ ಬ್ರೌಸರ್’ನಲ್ಲಿ ತೆರೆಯಲು ಎಂಟರ್ ಗುಂಡಿ ಒತ್ತಿದಳು,,ಎಷ್ಟೇ ಪ್ರಯತ್ನಪಟ್ಟರೂ ಪುಟ ತೆರೆದುಕೊಳ್ತಾನೇ ಇಲ್ಲ..
ಎಲ್ಲರೂ ಫಲಿತಾಂಶ ಹೊರ ಬೀಳುತಿದ್ದಂತೆಯೇ ಒಂದೇ ವೆಬ್’ಸೈಟನ್ನು ತೆರೆಯುತ್ತಿದ್ದರೆ ಅದರ ಸರ್ವರ್’ನಲ್ಲಿ ಭಾರವಾದಂತೆ ಅದು ಸ್ಥಗಿತಗೊಳ್ಳುತ್ತದೆ.!
ಆ ವೇಳೆಯಲ್ಲಿ ನಾವು ಸ್ವಲ್ಪ ಹೊತ್ತು ಕಾದು ನಂತರ ಪ್ರಯತ್ನಿಸಿದರೆ ಚೆನ್ನ..ಆದರೆ ಕುತೂಹಲ ಕಾತರಕ್ಕೆ ಇದೆಲ್ಲ ಗೊತ್ತಾಗಲ್ಲ ಬಿಡಿ,ಗಡಿಬಿಡಿ ಮಾಡಿ ಒಟ್ರಾಸಿ ಒಂದೆರಡು ಬಾರಿ ನ್ಯೂ ಟಾಬ್(ಹೊಸ ಪುಟ)ತೆರೆದು ಅದರಲ್ಲಿಯೂ ಪ್ರಯತ್ನ ಮುಂದುವರಿಸುತ್ತೇವೆ,ಯಾವುದರಿಂದ ಮಾಡಿದರೂ ಹೊರೆ ಕಡಿಮೆಯಾದರೆ ಅಲ್ವೇ ಅದು ತೆರೆದು ಕೊಳ್ಳುವುದು!!?,ಅಷ್ಟು ಯೋಚಿಸುವ ಕನಿಷ್ಟ ತಾಳ್ಮೆ ಆ ಸಮಯದಲ್ಲಿರುವುದಿಲ್ಲ ಎಂಬುದು ವಾಸ್ತವ..!!
ಇವಳ ಗಡಿಬಿಡಿ ನೋಡಿ ನಟರಾಜ ಮತ್ತು ರೇಣುಕಾದೇವಿ ತಮ್ಮ ಪೋನಿನಿಂದ ಲಗ್ಗೆ ಇಡಲು ನೋಡುತ್ತಾರೆ,ಈ ಬಾರಿ ಎರಡು ಐ.ಪಿ(Internet protocol)ವಿಳಾಸಗಳು ಆ ಸರ್ವರ್’ಗೆ ಜಾಸ್ತಿ ಆಗುತ್ತೆ ಅನ್ನೋದು ಮರೆತು ವ್ಯರ್ಥ ಪ್ರಯತ್ನವನ್ನು ಚಾಲ್ತಿಯಲ್ಲಿಟ್ಟರು..!
ಸಾಮಾನ್ಯವಾಗಿ ಮನುಷ್ಯ ತನ್ನ ಆತುರದ ಬುದ್ದಿ ಹೇಳುವುದನ್ನು ಕೇಳುವಷ್ಟು ತಾಳ್ಮೆ ಸಾವಧಾನದ ಮಾತು ಕೇಳಲಾರ..ಯಾರೆಲ್ಲಾ ಇಂತಹ ಮನೋಬಲದಲ್ಲಿರುತ್ತಾರೋ ಅವರು ದುಡುಕಿನ ಹಾಗೂ ಅತೀ ಶೀಘ್ರದಲ್ಲಿ ನಿರ್ಧಾರ ತೆಗೆದು ಮುಂದೆ ಪ್ರಾಯಶ್ಚಿತ್ತ ಪಡುತ್ತಾರೆ ಅನ್ನುತ್ತೆ ಮನಃಶಾಸ್ತ್ರ..
****
ಕೆಲವು ನಿಮಿಷಗಳ ತರುವಾಯ ಹೇಗೋ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಂತೆ ಸರ್ವರಿನಲ್ಲಿರುವ ತೊಡಕು ನಿವಾರಣೆಯಾಗಿ ವೆಬ್’ಸೈಟ್ ತೆರೆದುಕೊಂಡಿತು..!!
ಇಲ್ಲಿ ನಾಗರಾಜ್ ಇನ್ನೊಂದು ವಿಷಯವನ್ನು ಗಂಭೀರವಾಗಿ ಅಲ್ಲಾಂದ್ರು ಯೋಚನೆ ಮಾಡುತ್ತಿದ್ದ..
ಸಾಮಾನ್ಯವಾಗಿ ಕೊನೇ ಪರೀಕ್ಷೆಯ ಫಲಿತಾಂಶದ ದಿನ ಶ್ಯಾಮಲೆ ಸ್ನೇಹಿತರ ಮನೆಗೆ ಹೋಗೋದು,ಮನೆಯಲ್ಲಿದ್ದರು ಹುಷಾರಿಲ್ಲವೆಂಬ ಕುಂಟುನೆಪ ಹೇಳಿ ಮಲಗಿಕೊಂಡವರಂತೆ ನಾಟಕ ಮಾಡೋದು ಸಹಜವಾಗಿತ್ತು..ಏಕೆಂದರೆ ಕಲಿಯುವಿಕೆಯಲ್ಲಿ ಅಷ್ಟೇನು ಬುದ್ಧಿವಂತಳಲ್ಲ.. ಹತ್ತನೇ ಕ್ಲಾಸ್’ನಲ್ಲಿ ಉತ್ತಮ ಅಂಕವಿಲ್ಲದಿದ್ದರೂ ವಿಜ್ಞಾನ ವಿಭಾಗಕ್ಕೆ ಸೇರಿಸುವಾಗ ಸುಮಾರು ಕೈಗಳ ಮೋರೆ ಹೋಗಬೇಕಾಗಿ ಬಂದಿತ್ತು..ಪಿಯು ಪ್ರಥಮ ವರ್ಷ ಕೂಡ ಅಂಕಗಳಿಕೆ ಅಷ್ಟಕಷ್ಟೇ..ಅದಕ್ಕೆ ದ್ವೀತೀಯ ವರ್ಷದ ಆರಂಭದಿಂದಾನು ಅವಳಿಗೆ ಬುದ್ಧಿ ಹೇಳಿ ಹೇಳಿ ಕಲಿಕೆಯಲ್ಲಿ ಮುಂದೆ ಹೋಗಬೇಕೆಂದು ದುಂಬಾಲು ಬಿದ್ದು..ಎಲ್ಲಾ ವಿಷಯದ ಕೋಚಿಂಗಿಗೂ ಸೇರಿಸಿದ್ದ..ಅಂಕವೇನಾದರೂ ಕಡಿಮೆ ಬಂದರೆ ಖಂಡಿತಾ ಮೆಡಿಕಲ್ ಸೀಟು ಸಿಗಲಾರದು,,ಸಿ ಇ ಟಿಯ ಬಗ್ಗೆ ಕೂಡ ನಂಬಿಕೆ ಕಳೆದುಕೊಳ್ಳಬೇಕಿತ್ತು..ಆದರೆ ಈ ದಿನ ಶ್ಯಾಮಲೆ ತಾನು ಏನೋ ಸಾಧನೆ ಮಾಡಿರುವಂತೆ ಸ್ವತಃ ಫಲಿತಾಂಶದ ನೋಡುವ ಮುತುರ್ವಜಿ ವಹಿಸಿಕೊಂಡಿದ್ದು ಸಂಶಯದೊಟ್ಟಿಗೆ ಸಂತೋಷಾನು ಆಗಿತ್ತು.. ಮಕ್ಕಳು ತಮ್ಮ ಕನಸನ್ನು ಈಡೇರಿಸಲು ಉತ್ಸುಹುಕರಾಗಿದ್ದು ಕಂಡರೆ ಹೆತ್ತವರಾದವರಿಗೆ ಅದಕ್ಕಿಂತ ದೊಡ್ಡ ಆನಂದ ಬೇಕೇ..!?
ತನ್ನ ಹಾಲ್ ಟಿಕೇಟಿನ ನಂಬರ್ ಒತ್ತಿ ಅಂತರ್ಜಾಲವೆಂಬ ಮಾಯಾಲೋಕಕ್ಕೆ ತನ್ನ ಭವಿಷ್ಯತ್ತನ್ನು ಮಾಯಾ ಪರದೆಯ ಮೇಲೆ ತರುವಂತೆ ಆಜ್ಞಾಪಿಸಿದಳು..
ಕ್ಷಣಾರ್ಧದಲ್ಲಿ ನಟರಾಜ್,ರೇಣುಕಾದೇವಿಯವರ ಕನಸಿನ ಕಟ್ಟಡಕ್ಕೆ ಬೇಕಾದ ಬೇಂಸ್ಮೆಂಟ್ 21″ ಇಂಚಿನ ಅರವತ್ತು ಪ್ರತಿಶತ ಬೆಳಕಿರುವ ಲ್ಯಾಪ್ ಟಾಪಿನ ಮೇಲೆ ಬಿತ್ತರವಾಗಿತ್ತು,,
ಶ್ಯಾಮಲೆಯ ಕಣ್ಣು ಉತ್ತೀರ್ಣ,ಅನುತ್ತೀರ್ಣಗಳನ್ನು ನೋಡದೇ ಕೊನೆಗೆ ಬರುವ ಒಟ್ಟು ಮೊತ್ತ ಹಾಗು ಪ್ರತಿಶತದ ಕಡೆಗೆ ದೌಡಾಯಿಸಿತು…ತಾನು ಪಾಸ್ ಆಗುತ್ತೇನೊ ಇಲ್ಲವೋ ಎಂದು ಪರೀಕ್ಷೆಗೆ ಮುಂಚೆ ಗೊತ್ತಿರುವ ಎಲ್ಲಾ ದೇವರಿಗೂ ಹರಕೆ,ಧಮ್ಕಿ ಹಾಕಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಫಲಿತಾಂಶದ ದಿನ ಮೊದಲು ತಾನು ಪಾಸ್ ಆಗಿದ್ದೇನೋ ಅನ್ನೋದನ್ನೇ ಮೊದಲು ನೋಡುತ್ತಾರೆ.ಅಂಕದ ಉಸಾಬರಿಯೆಲ್ಲಾ ಆಮೇಲೆ ಇತ್ಯರ್ಥ ಮಾಡುವಂತದ್ದು..!!
ಒಟ್ಟು ಮೊತ್ತವನ್ನು ನೋಡಿದ ಮೇಲೆ ಶ್ಯಾಮಲೆ ಅಲ್ಲಿಂದ ಎದ್ದು ಬಾಲ್ಕನಿ ಕಡೆಯನ್ನು ದಿಕ್ಕಾಗಿಸಿ ನಡೆದಳು..
ನಟರಾಜ್ ರೇಣುಕಾದೇವಿ ಅಂಕಗಳನ್ನು ನೋಡಿ ದಿಗ್ಭ್ರಾಂತಿಗೆ ಒಳಗಾಗಿದ್ದು ಸುಳ್ಳಲ್ಲ..ನಟರಾಜನೇ ಮೊದಲು ಚೇತರಿಸಿಕೊಂಡಿದ್ದು ತನ್ನ ಕಣ್ಣಿಗಿರುವ ಅಷ್ಟೂ ಶಕ್ತಿ ಉಪಯೋಗಿಸಿ ಮತ್ತೋಮ್ಮೆ ಪರದೆಯನ್ನು ದಿಟ್ಟಿಸಿ ನೋಡಿದ ಅಲ್ಲಿ ಮೊದಲೇ ಇದ್ದ 92% ಹಾಗೆಯೇ ಅಚ್ಚಾಗಿತ್ತು…
ಆ ಕ್ಷಣದ ಭಾವನೆ ಸಂತೋಷವೋ, ಭಯವೋ,ಯಾವ ಹಪಹಪಿ ಅನ್ನೋದು ತರ್ಕಕ್ಕೂ ನಿಲುಕದ ಸಂಭವ ಗತಿಸಿಹೋಗಿತ್ತು…
ನಮ್ಮಲ್ಲಿ ಕೆಲವು ರಾಂಕ್ ವಿದ್ಯಾರ್ಥಿಗಳು ಉದ್ದೇಶಿಸಿದ ಅಂಕ ಬರದಿದ್ದಾಗ ಏನೋ ಕಳೆದು ಕೊಂಡವರ ವಿಚಲಿತರಾಗೋದು ಸಾಮಾನ್ಯ,ಆದರೆ ಇಲ್ಲಿನ ಪರಿಸ್ಥಿತಿ ತೀರ ವಿರುದ್ಧವಾಗಿತ್ತು..ಕನಸಿನಲ್ಲಿಯೂ ತಮ್ಮ ಮಗಳು ಇಂತಹ ಸಾಧನೆ ಮಾಡಬಲ್ಲಳು ಅನ್ನೋದು ಊಹಿಸದವರಿಗೆ ಈ ಶಾಕ್ ಗಾಢವಾಗಿಯೇ ನಾಟಿತ್ತು..!!
(ಮುಂದುವರೆಯುವುದು…)
-ಅವಿಜ್ಞಾನಿ