ಸಂಜೆಯ ವಾತಾವರಣ ಆಹ್ಲಾದವಾಗಿತ್ತು ಹೊರ ಪ್ರಪಂಚಕ್ಕೆ ಮನಸ್ಸು ಅದರ ಸವಿಯನ್ನು ಉಣ್ಣಲಾಗದ ತಲೆಯಲ್ಲಿರುವ ನೂರಾರು ಗೊಂದಲ ಭಯಕ್ಕೆ ಸೋತು ಹೋಗಿತ್ತು,ಹೆಣ್ಣಿನ ದೇಹಕ್ಕಾಗಿ ಇಂತಹ ನೀಚ ಕೆಲಸಕ್ಕೂ ಕೈ ಹಾಕುವವರಿಗೆ ಒಂದಿಷ್ಟು ಮರುಕಪಟ್ಟಳು ಶ್ಯಾಮಲೆ,,ಹ್ಮ್!ಹೆಣ್ಣಿಗಾಗಿ ಅದೆಷ್ಟು ರಾಜವಂಶಗಳೇ ನಶಿಸಿ ಹೋಗಿದೆ ಎನ್ನುವ ಎಲ್ಲೋ ಓದಿದ ನೆನಪು ಬಂದಾಗ ಕುಬ್ಜಳಾಗಿದ್ದಳು, ಹೆಣ್ಣೊಂದು ಕಾಮ ಮಾತ್ರನಾ? ಅದೆಷ್ಟು ಅಸಹ್ಯತೆಯ ಕೋಪಯುಕ್ತ ಪ್ರಶ್ನೆಗಳು ಶ್ಯಾಮಲೆಯ ಮಸ್ತಿಷ್ಕವನ್ನು ಛೇಧಿಸಿಹೋಗಿತ್ತು..
ಹೌದು!..ಗಂಡಿನ ಬಯಕೆಯೇ ಹೆಣ್ಣಿನ ದೇಹದ ಮೋಹ ಅದೂ ಅಲ್ಪಕ್ಷಣದ ಸುಖಕ್ಕಾಗಿ!!!!
ಸುಖ.!!???ಅದ್ಹೇಗೆ ಸುಖವಾಗುತ್ತೆ ಇಬ್ಬರೂ ಸಂತೃಪ್ತಿಯಿಂದ ಆಸ್ವಾದಿಸಿ ಅನುಭವಿಸಿದರೆ ತಾನೆ ಅದು ಸುಖವಾಗುವುದು!?ಹಾ ಬಲಾತ್ಕಾರ!ಥೂ…ಬಲತ್ಕಾರದಲ್ಲೂ ತೃಷೆಯ ತೀರಿಸುವ ಅತೃಪ್ತ ಮನಸಾಕ್ಷಿಗಳಿಗೆ ಗರಿಷ್ಟ ಮಟ್ಟದ ಮೌನ ಪ್ರಾರ್ಥನೆಯ ಅಗತ್ಯವಿದೆ…
ಆದರೂ ಮನುಷ್ಯ ಅದರಲ್ಲೂ ಗಂಡು ಸಭ್ಯತೆಯ ಗೋಜಿನಲ್ಲಿ,ತನ್ನ ತುಮುಲಗಳನ್ನು,ತನ್ನ ಕಾಮ ಭಾವನೆಯನ್ನು ಹೆಣ್ಣಿನ ಮುಂದೆ ಅತೀ ಸಣ್ಣ ಸಮಯಾವಕಾಶ ಸಿಕ್ಕರೂ ಪ್ರಚುರ ಪಡಿಸುತ್ತಾನೆ ಅಲ್ಲವೇ!?ಹೊರ ಜಗತ್ತಿಗೆ ಬರದಂತಹ ಅದೆಷ್ಟು ಪ್ರಕರಣಗಳು,ಸಭ್ಯತೆ,ಕಟ್ಟುಪಾಡು,ಉಪಕಾರ,ಪ್ರೇಮ,ಜವಾಬ್ದಾರಿ,ಅನಿವಾರ್ಯತೆ ಇಂತಹ ಕೆಲವು ಆಯಾಮಗಳ ಕೊನೆ ಕಾಮದಲ್ಲಿ ಆಗುತ್ತದೆ,ಯಾರು ತಾನೇ ಅಬಲೆಯ ಆಳ ಅಧ್ಯಯನ ಮಾಡಿ ನಿವೇದನೆ ಮಾಡ್ತಾರೆ,ಇಲ್ಲ…ಬಲತ್ಕಾರದಲ್ಲಿ ತೃಪ್ತಿ ಹೊಂದುವವರು,ಮೇಲೆ ತಿಳಿಸಿದ ಜಾಯಮಾನದವರು ಒಂದೇ ಅನ್ನುವ ಸಂಶಯ ಶ್ಯಾಮಲೆಗೆ ಬಲವಾಗುತ್ತಿದೆ..!
ಆದರೆ ಪ್ರೀತಿ!?ಇಬ್ಬರ ಒಪ್ಪಿಗೆ ಇರದ್ದು ಪ್ರೀತಿ ಆಗುತ್ತದೆಯೇ!?…ಹಾ..ಇಲ್ಲ ನನ್ನ ಉದ್ದೇಶ ಪ್ರೀತಿಯ ಮುಖವಾಡ ಅದೂ ನ್ಯಾಯದ ಸೋಗಿನಲ್ಲಿ ಅಲ್ಲೂ ವಸ್ತುನಿಷ್ಟ ಮಾತುಕತೆ ಇಲ್ಲದೇ ಸಿಗುವ ಒಂದು ತುಂಡು ದಾರಿಯನ್ನು ಬೇಕಾದಂತೆ ಬದಲಾಯಿಸೋ ಊಸರವಳ್ಳಿಗಳು…
ಶ್ಯಾಮಲೆ ಸಂಪೂರ್ಣ ಗೊಂದಲಮಯವಾಗಿದ್ದಳು,ಪ್ರೀತಿ,ಪ್ರೇಮ,ಪ್ರಣಯಗಳೆಲ್ಲವೂ ಕಾಮದ ಕೋರಿಕೆ ಹಾಕುವ ಮಣೆ ಅನ್ನೋದನ್ನು ಅರಗಿಸಿಕೊಳ್ಳದೇ ಒಪ್ಪಲೂ ಆಗದೇ,ತನ್ನ ಅನಾನುಭವಕ್ಕೆ ಹಿಡಿ ಶಾಪ ಹಾಕುತ್ತಾ ಗಂಡು ಜಾತಿಯೆಂದರೆ ತಿರಸ್ಕರಿಸಲ್ಪಟ್ಟ ವಸ್ತುಗಳ ಸಾಲಿನಲ್ಲಿ ಸಾಗಹಾಕಬೇಕಾದ ಸಾಮಾಗ್ರಿ ಎಂಬ ದೃಢ ನಿರ್ಧಾರಕ್ಕೆ ಬಂದಿದ್ದಳು…
ಆದರೆ…!?ನಾನೀಗ..!? ಒಬ್ಬಂಟಿ ಏನು ಮಾಡಲಿ!?ಅವನ ಗಡುವು ಹತ್ತಿರವಾಗುತ್ತಿದೆ,ಖಂಡಿತ ಅವನು ಸಮಯ ಪಾಲಿಸುವವನು ಈ ದಿನಕ್ಕೆ ನಾಗರನಂತೆ ಕಾದು ಕುಳಿತವನು..ಯಾವ ದೇವರ ಮೊರೆ ಹೋದರು ಅವನ ಮನ ಪರಿವರ್ತನೆ ಆಗದು,ನನ್ನ ದೇಹವನ್ನು ಕೊಡದೇ ಬೇರೆ ದಾರಿಯೇ ಇಲ್ಲವೇ..!??
ಹ್ಮ್!.ಕೊಡಬಹುದಲ್ಲವೇ!..?
ನನ್ನನ್ನೇ ಕೊಟ್ಟರೇ ಏನಾಗುತ್ತದೆ..!?ಪ್ರಮೀಳಾಳ ಒಂದು ಮಾತು ನೆನಪಿಗೆ ಬರುತ್ತಿದೆ *”ನಾವಿಲ್ಲಿ ಬದುಕಬೇಕಾದರೆ ಸುಳ್ಳನ್ನು ಸತ್ಯದಂತೆಯೂ,ಸತ್ಯವನ್ನು ಗೋರಿಯ ತಳದಲ್ಲಿರುವಂತೆಯೂ ನೋಡಬೇಕು,ಸಭ್ಯರ ಮುಂದೆ ಅವರ ದಿರಿಸು ತೊಟ್ಟು,ಕಾರ್ಯಸಾಧಿಸಲು ಎಷ್ಟು ಅಸಭ್ಯಗಳನ್ನು ಬೇಕಾದರೂ ಮಾಡಬಹುದು,ಮಾಡಬೇಕು,ಮಾಡುತ್ತಾರೆ,ಇರುವ ಒಂದೇ ಜೀವನ ಕಟ್ಟುಪಾಡು,ಸಮಾಜ,ನಾಳೆ,ಮರ್ಯಾದೆ ಅನ್ನುವ ಕಂಬಿಯೊಳಗೆ ಇಟ್ಟರೆ ಬಿಡಿಸಲಾರದೆ ಕೊಳೆಯಬೇಕಾಗುತ್ತದೆ.!!!!”*..
ಹೌದು ನಿಜವಿದೆ,ಆದರೆ ಆತ್ಮಸಾಕ್ಷಿಗೆ.!?ಎಲ್ಲರಿಗೂ ಮುಖವಾಡ ಹಾಕಬಹುದು ಆತ್ಮಸಾಕ್ಷಿಗೆ,ಕಲಿತ ಸಂಸ್ಕೃತಿಗೆ!? ಅಂತಃಕರಣಕ್ಕೆ.!? ಏನು ಮಾಡಲಿ!?.. ಜೀವನದ ಕೆಲ ಘಳಿಗೆಗಳು ಜೀವಚ್ಛವವಾಗಿ ಅಂಗಾತ ಬೀಳುವುದು ದೊಡ್ಡ ವಿಷಯವೇನಲ್ಲ,ಆದರೆ ಅದರ ನಂತರದ ನಾನು!?ಏನ್ಮಾಡೋದು!?ಪ್ರಶ್ನೆ,ಪ್ರಶ್ನೆ,ಪ್ರಶ್ನೆ!!!???ಸಂಪೂರ್ಣ ಸೋತ ಶ್ಯಾಮಲೆಗೆ ಏನೂ ತೋಚದಾಯಿತು,,
ಗಡಿಯಾರವು ತನ್ನ ಕಾಯಕವನ್ನು ಚಾಚು ತಪ್ಪದೇ ಪಾಲಿಸುತ್ತಿದೆ,ಆ ದಿನದ ಹದಿನೆಂಟನೇ ತಾಸು ಆಗಿರುವುದಕ್ಕೆ ಆರೆಂದು ಬಂದು ಗುಣುಗುಣಿಸಿತು…
ಇಲ್ಲಾ ಬರೀ ಪ್ರಶ್ನೆಯಲ್ಲಿ ನನ್ನನ್ನು ಕೊಲ್ಲುವುದು ಬೇಡ ಏನಾದರೂ ಮಾಡಬೇಕು,ನನ್ನನ್ನು ಉಳಿಸಿಕೊಳ್ಳಬೇಕು,ನನ್ನತನವನ್ನು ಯಾರಿಗೂ ಬಿಟ್ಟುಕೊಡಲಾರೆ..ಅದಕ್ಕಿರುವ ಒಂದೇ ದಾರಿ….
*ಮರಣ……..*
ಶ್ಯಾಮಲೆ ಮಂತ್ರಿಸಿ ಬಿಟ್ಟವರಂತಾಗಿದ್ದಳು ಹೌದು ಅವಳ ಮನಸ್ಸು ಬೇಸರ,ಆತಂಕ,ದುಗುಡಗಳ ಎಲ್ಲೆ ಮೀರಿ ಪ್ರಬುದ್ಧ ಚಿಂತನೆಗಳಿಗೆ ಅಣಿಯಾಗುತ್ತಿದೆ,ತನ್ನ ಸಂಕಷ್ಟಕ್ಕೆ ಪರಿಹಾರ ಕಂಡು ಹಿಡಿಯಲು ಇರುವ ಸಮಯ ಕನಿಷ್ಟ ಮಟ್ಟದ್ದು ಅದರೊಳಗೆ ಏನಾದರೂ ಮಾಡಲೇಬೇಕು,ಧೃತಿಗೆಡಬಾರದೆಂದು ಮೌನಿಯಾಗಿಯೇ ಮನಸ್ಸನ್ನು ಸದೃಢಗೊಳಿಸುತ್ತಿದ್ದಾಳೆ,ಪ್ರಾಪಂಚಿಕ ಜ್ಞಾನದ ಕೊರತೆ ವಯಸ್ಸಿನ ಪರಿಧಿಯಲ್ಲಿ ಸಂಕುಚಿತವಾಗಿದ್ದರೂ,ತನಗೆರುಗುವ ಅಪಾಯವನ್ನು,ಕಳೆದುಕೊಳ್ಳಬೇಕಾಗಿರುವ ಮಾನಸಿಕ ನೆಮ್ಮದಿಯ ರೌದ್ರಯಾತನೆಯನ್ನು ನೆನೆಯುವಾಗ ಆಕೆ ಪ್ರಬುದ್ದತೆಯೆಡೆಗೆ ವಾಲುತಿದ್ದಾಳೆ,ಮನಸ್ಸನ್ನು ಗಟ್ಟಿಗೊಳಿಸಿ,ಬುದ್ಧಿ ಶಕ್ತಿಗೆ ಕೆಲಸ ಕೊಡಬೇಕಾಗಿದೆ ಶ್ಯಾಮಲೆ…ಹೌದು ಅದೇ ಪ್ರಕ್ರಿಯೆಗೆ ವರಾಂಡದ ಹೊರಗಿನ ದೃಶ್ಯವನ್ನು ನೋಡುವಂತೆಯೇ ಚಿಂತೆಯ ಒಲೆಗೆ ಬೆಂಕಿ ಹಚ್ಚುತ್ತಿದ್ದಾಳೆ,ಮೆದುಳಿನ ಕ್ಷಿಪ್ರ ಚಟುವಟಿಕೆಯಿಂದ ಅವಳ ಎದುರು ಬಂದ ಉತ್ತರ ಮತ್ತು ತನ್ನ ಕಷ್ಟಕ್ಕಿರುವ ಪರಿಹಾರವೇ *ಮರಣ*…
ಮರಣ ಯಾರ ಮರಣ!!?ಎನಿಸಿದಷ್ಟು ಹೆದರುಪುಕ್ಕಲು ಅಲ್ಲ ಶ್ಯಾಮಲೆ ಆಶಾವಾದಿ ವ್ಯಕ್ತಿತ್ವ ಅವಳದು,ತಾನು ಮಾಡೇ ಮಾಡುತ್ತೇನೆ ಅನ್ನುವ ಆತ್ಮಸ್ಥೈರ್ಯ ಹೆಚ್ಚೇ ಇದೆ,,,ರಾಕೇಶ್ ಕೊನೆಯದಾಗಿ ಹೋಗುವಾಗ *ಡೀಲ್ ಓಕೆ ಅಲ್ವ* ಎನ್ನುವಾಗ ಅಳುಕಿಲ್ಲದೇ ಹ್ಮ್..!!ಎಂದಿದ್ದಳು,ಆದರೂ ಸ್ತ್ರೀ ಸಮುದಾಯವಲ್ಲವೇ,ಒಂದಿಷ್ಟು ಆತಂಕಗೊಳಗಾಗುವುದು ಸರ್ವೇ ಸಾಮಾನ್ಯ,ಅದೇ ಇವಳಿಗೂ ಹಾಗಿದ್ದು,ಶ್ಯಾಮಲೆ ಖಿನ್ನತೆಗೊಳಗಾಗಲಾರಳು..
ಮರಣ,ತನ್ನ ಮರಣವಲ್ಲ,ಸಾಯಬೇಕಾಗಿರುವುದು ಅಮಾಯಕ ಹುಡುಗೀಯರ ಬಾಳಿನಲ್ಲಿ ಕಂಟಕ ತಂದು,ಎಲ್ಲಿಗೂ ಹೋಗಲಾರದೇ,ತನ್ನ ಬೇಳೆ ಬೇಯಿಸುವಂತಹ ರಾಕೇಶಂತವರು ಸಾಯಬೇಕು,ಉಪಕಾರವೆಂದು ಭಾರತೀಯ ನಾರಿಯರು ಕಟ್ಟಿ ಕಾಪಾಡಿಕೊಂಡು ಬಂದ ಶೀಲ,ಸಂಸ್ಕೃತಿಗೆ ಭಂಗ ತರುವಂತಹ ನೀಚ ಮನಸ್ಥಿತಿಗಳು ಸಾಯಬೇಕು..!!!ಹೌದು ರಾಕೇಶನ ಮರಣ ತನ್ನ ಜೀವನದ ಮರು ಹುಟ್ಟು ಇಲ್ಲವೇ ಮಾನಸಿಕವಾಗಿ ಸತ್ತು ಬರೀ ಜೀವಚ್ಛವವಾಗಿ ಬಾಳಬೇಕು,ಆ ಪರಿಸ್ಥಿತಿಯಲ್ಲಿ ಶ್ಯಾಮಲೆ ಒಂದು ನಿಮಿಷವೂ ಸಹ ತನ್ನ ಜೀವನವನ್ನು ಕಳೆಯಲಾರಳು,ಅಂತೆಯೇ ಭಾರತೀಯ ಸಂಸ್ಕೃತಿ ಕಲಿತು,ಬಾಳಿ ಬದುಕಿದ ಯಾವ ಹೆಣ್ಣು ಕೂಡ…!!
ಉತ್ತರ ಸಿಕ್ಕಾಯ್ತು,ಆದರೆ ಕಾರ್ಯ ರೂಪಕ್ಕೆ ತರುವುದು ಹೇಗೆ,,!?ಸಮಯ ಸರಿಯಾಗಿ ಇನ್ನು ಎರಡು ಗಂಟೆ ಬಾಕಿ ಇದೆ ಅದರೊಳಗೆ ತನ್ನ ಕಾರ್ಯ ಸಾಧನೆಗೆ ದಾರಿ ಹುಡುಕಬೇಕು..ಎಲ್ಲಾ ಕಳೆದುಕೊಂಡು ಗೋಗರಿಯುವರಂತಿರುವ ತಂದೆ ತಾಯಿಯ ಮುಖವನ್ನೊಮ್ಮೆ ತಿರುಗಿ ನೋಡಿದಳು ಶ್ಯಾಮಲೆ,ಹೆಜ್ಜೆಯನ್ನು ನಟರಾಜನ ಕಡೆ ಕೇಂದ್ರೀಕರಿಸಿ ಮುನ್ನಡೆದಳು..
“ಪಪ್ಪಾ.!ನನ್ನನ್ನು ಕ್ಷಮಿಸಿ”
“ಮಗಳೇ,ನೋಡು ಈಗ ಕ್ಷಮೆ ಕೇಳಿ ಅಥವಾ ನಾ ಕ್ಷಮಿಸಿ ಏನೂ ಪ್ರಯೋಜನವಿಲ್ಲ,ಆ ರಾಕ್ಷಸನ ಬಲೆಯಿಂದ ಹೇಗೆ ಪಾರಾಗುವುದು,ಹೇಳು”..ಅಳುತ್ತಲೇ ಪ್ರಶ್ನಿಸಿದ ನಟರಾಜ್..
“ಇದೇ ಪಪ್ಪಾ,ದಾರಿ ಇದೆ,ನನ್ನ ಜೀವನ ಸುಖವಾಗಿ ಇರಬೇಕೆಂದರೆ ಅವನು ಈ ಭೂಮಿ ಮೇಲೆಯೇ ಇರಕೂಡದು,ಒಂದು ವೇಳೆ ಅವನು ಹೇಳಿದ್ದೇ ನಡೆದರೆ ನಾ ಬದುಕುವ ನೈತಿಕತೆಯಿರುವುದಿಲ್ಲ ಪಪ್ಪಾ..!!
ಒಮ್ಮೊಮ್ಮೆ ಮಕ್ಕಳ ಮಾತು ನಮಗಿಂತಲೂ ತೀಕ್ಷ್ಣವಾಗಿ,ಪ್ರಬುದ್ಧವಾಗಿ ಹೊರಬಂದರೆ ಒಂದು ಕ್ಷಣ ನಾವೇ ಮೂಕವಿಸ್ಮಿತರಾಗುತ್ತೇವೆ,ಶ್ಯಾಮಲೆಯ ಮಾತು ಕೇಳಿ ನಟರಾಜನಿಗೂ ಅದೇ ಅನುಭವವಾಯ್ತು..
“ಏನಮ್ಮಾ.!!ಏನ್ಹೇಳ್ತಿದಿಯಾ.!?ನಿನ್ನ ಮಾತಿನ ಅರ್ಥವೇನು ಅವನನ್ನು ಕೊಲೆ ಮಾಡುವುದಾ!???ನಟರಾಜ್ ಉದ್ಗರಿಸಿದ.!
“ಯೆಸ್ ಪಪ್ಪಾ.!ಯೆಸ್,ಹಿ ಶುಡ್ ಡೈ. ಬೇರೆ ದಾರಿಯಿಲ್ಲ” ಹೌದಮ್ಮ,ಅವನಂತಹ ನೀಚ ಸಾಯಲೇಬೇಕು.!!ಆದರೆ!?ಹೇಗೆ!?
ಅವನನ್ನು ಕೊಂದು ಜೈಲಿಗೆ ಹೋಗಬೇಕಾಗುತ್ತೆ ಅಲ್ವ!!!.???
“ಇಲ್ಲ,ನಮ್ಮಲ್ಲಿ ಬರೋಬ್ಬರಿ ನೂರಿಪ್ಪತ್ತು ನಿಮಿಷಗಳು ಇವೆ,ಆಲೋಚನೆ ಮಾಡುವ ಏನಾದರೂ ಪ್ಲಾನ್,ಸಿಗದೇ ಇರಲ್ಲ,ನಾ ಪ್ರಮೀಳನ್ನು ಕರೀತೇನೆ, ಖಂಡಿತಾ ಅವಳಲ್ಲದೇ ಈ ಕ್ಷಣಕ್ಕೆ ನನಗೆ ಬೇರೆ ಯಾರೂ ಸಹಾಯ ಮಾಡ್ತಾರೆಂದು ಅನಿಸ್ತಿಲ್ಲ”..!!..ಎಂದವಳೇ ಪ್ರಮೀಳಳಿಗೆ ಕರೆ ಮಾಡಿ ಆದಷ್ಟು ಬೇಗ ಮನೆಗೆ ಬಾ ಅಂತ ಕರೆದಳು,..
ಶ್ಯಾಮಲೆ ಎದ್ದು ಮನೆಯ ಹೊರಗಡೆ ಸುಮ್ಮನೇ ನೋಡುತ್ತಾ ಅದೇನೋ ತಟ್ಟನೇ ನೆನಪಾದವಳಂತೆ ಮಹಡಿಯ ಪಾರ್ಕಿಂಗ್ ದಾರಿಯಾಗಿ ನಡೆದಳು..ಅವಳ ಕಣ್ಣು ಆ ಪ್ಲಾಟಿನ ಸಿಸಿ ಕ್ಯಾಮೆರಗಳನ್ನು ಹುಡುಕುತ್ತಿತ್ತು….
ಶ್ಯಾಮಲೆಗೇನೋ ತೋಚುತ್ತಿದೆ,ಏನೋ ಪ್ಲಾನ್ ಮಾಡುವ ಯೋಚನೆಯಲ್ಲಿದ್ದಾಳೆ..ಪಾರ್ಕಿಂಗ್ ಸ್ಥಳಕ್ಕೆ ಹೋದವಳೇ ಒಂದು ಬಾರಿ ಸುತ್ತಲೂ ತಿರುಗಿ ನೋಡಿದಳು.ಆ ಪಾರ್ಕಿಂಗ್ ನಲ್ಲಿ ಎರಡು ಸಿಸಿ ಕ್ಯಾಮೆರಾ ಇದ್ದವು ಅದನ್ನು ಗಮನಿಸಿದ್ದಾಳೆ ಶ್ಯಾಮಲೆ…ಕಂಟ್ರೋಲ್ ರೂಮ್ ಕೂಡ ಅದೇ ಪಾರ್ಕಿಂಗ್ ಕಡೆ ಇರುವುದರಿಂದ ಸಿಸಿ ಕ್ಯಾಮೆರ ಎಷ್ಟು ದೂರದ್ದು,ಮತ್ತು ಎಷ್ಟು ವಿಸ್ತಿರ್ಣದಲ್ಲಿ ಸೆರೆ ಹಿಡಿಯುತ್ತೆ ಅನ್ನೋದನ್ನು ನೋಡಲಾಗಿ ನಡೆದಾಡುತ್ತಿದ್ದಾಳೆ.. ಪಾರ್ಕಿಂಗ್’ನ ಎಲ್ಲಾ ಕಡೆ ನಡೆದ ಮೇಲೆ ಸ್ವಲ್ಪ ಸಾವಧಾನಿಸಿದಳು,,ನಾನು ಮಾಡಲಾರೆ,ಹೇಗೆ ತಂತ್ರ ಹೆಣೆಯೋದು ಬರೀ ಛಲದಿಂದ ಕಾರ್ಯ ಸಾಧನೆ ಆಗಲ್ಲ,ಸರಿಯಾದ ಮಾರ್ಗದರ್ಶನ ಬೇಕು ಆಲೋಚನಾ ಲಹರಿ ಕಿಚ್ಟಿಡಿದು ತಲೆಯೇ ಸ್ಫೋಟಗೊಳ್ಳುವಷ್ಟು ಮಟ್ಟಿಗೆ ಬಂದು ನಿಂತಿದೆ..ತುಂಬಾ ವೇಗವಾಗಿ ಒಂದು ಸ್ಕೋಡಾ ಕಾರು ರುಯ್ಯನೆ ಬಂದು ನಿಂತಿತು,ಬಂದ ವೇಗದಷ್ಟೇ ವೇಗವಾಗಿ ಎರಡೂ ಕಡೆಯಿಂದ ಕಾರಿನ ಡೋರ್ ತೆರೆದು ನಾಲ್ಕು ಗಡ್ಡಧಾರಿಗಳು ಸರಸರ ಇಳಿದು ಕಾರಿನಲ್ಲಿರುವವನಿಗೆ ತುಸು ಬಗ್ಗಿ ಸಲಾಂ ಹೊಡೆಯುತ್ತಾ ಲಿಪ್ಟ್ ಕಡೆ ಹೋದರು..
ಅಷ್ಟೋತ್ತಿಗೆ ಪ್ರಮೀಳಾಲ ಸ್ಕೂಟಿ ಬರುವ ಸದ್ಧು ಕೇಳಿಸಿತು ಶ್ಯಾಮಲೆಗೆ..ಇದನ್ನೆಲ್ಲಾ ನೋಡುತ್ತಿದ್ದ ಪ್ಲಾಟಿನ ಗಾರ್ಡ್ ಕಂ ಕಂಟ್ರೋಲರ್ ನಜೀಬ್,ಶ್ಯಾಮಲೆಯ ಹತ್ತಿರ ಬರುತ್ತಿದ್ದಾನೆ,,ತೀರಾ ಪರಿಚಯ ಅಲ್ಲದಿದ್ದರೂ ನಜೀಬ್ ಯಾವಾಗಲೊಮ್ಮೆ ಶ್ಯಾಮಲೆಯ ಜೊತೆ ಮಾತನಾಡುತ್ತಿದ್ದ,ಚುರುಕಿನ ಹುಡುಗ,ಚೆನ್ನಾಗಿಯೇ ಕಲಿಯುತ್ತಿದ್ದರೂ ತಂದೆಯ ಅಕಾಲಿಕ ಮರಣದಿಂದ ಅದನ್ನು ಅರ್ಧದಲ್ಲಿ ಮೊಟಕುಗೊಳಿಸಿ ಈ ಕೆಲಸಕ್ಕೆ ಸೇರಿದ್ದ,ಮನೆಯ ಪರಿಸ್ಥಿತೀನೂ ಹಾಗೆಯೇ ಇತ್ತು ಎರಡು ಕನ್ಯಾ ಅಕ್ಕಂದಿರು….
“ಏನಾಯ್ತು,ಯಾಕೆ ಆಚೆ ಈಚೆ ನಡೆಯುತ್ತಿದ್ರಿ,ಏನಾದರೂ ಕಳೆದು ಹೋಗಿದೆಯೇ!?”…ತನ್ನ ಸಹಾಯದ ಅವಶ್ಯಕತೆ ಇರಬಹುದೇನೋ ಅಂತ ನಜೀಬ್ ವಿನಮ್ರವಾಗಿ ಕೇಳಿದ..
“ಹಾಂ.!!ಇಲ್ಲ ಏನಿಲ್ಲ..ಹಾಗೆ ಸುಮ್ಮನೇ ನೋಡ್ತಾ ಇದ್ದೆ.!.ಅಸ್ಪಷ್ಟವಾಗಿತ್ತು ಶ್ಯಾಮಲೆಯ ಮಾತು..
ಇನ್ನೇನು ಎರಡನೇ ಮಾತಿಗೆ ಬಾಯಿ ತೆರೆಯಬೇಕು ನಜೀಬ್,ಪ್ರಮೀಳಳ ಗಾಡಿ ಬಂದು ನಿಂತಿತು,
“ಹಾ..ಪ್ರಮೀಳ ಹಾಯ್.!ಬಾ ಬೇಗ ಮೇಲೆ ಹೋಗೋಣ,ತುಂಬಾ ಮಾತನಾಡೋದಿದೆ.!
“ಸರಿ ಪಾರ್ಕ್ ಮಾಡಿ ಬರ್ತೀನಿ!”
ಸ್ಕೂಟಿ ನಿಲ್ಲಿಸಿದ ಮೇಲೆ ಇಬ್ಬರೂ ಬಿರುಸಿನ ಹೆಜ್ಜೆ ಹಾಕಲು ಅಣಿಯಾದರು.!
“ಮೇಡಂ,!!ಏನಾದ್ರೂ ಬೇಕಾದ್ರೆ ಕೇಳಿ ನಾನಿಲ್ಲೇ ಇದೇನಿ!!” ನಜೀಬನಿಗೆ ಅವಳ ನಡತೆಯಲ್ಲಿ ಅದೇನೋ ವ್ಯತ್ಯಾಸ ಕಂಡಿರಬಹುದು,ಏನಾದರೂ ಹೇಳ್ತಾರಾ ಅಂತ ನೋಡೋಕೆ ಹೇಳಿದ
“ಸರಿ,ಸರಿ,!”ಮುಖಾನು ತಿರುಗಿಸಿದೇ ಶ್ಯಾಮಲೇ ಉತ್ತರಿಸಿದಳು…
“ದೇಖ್ ಭಾಯ್,ಮೇರಾ ಕಾಮ್ ಹೋಗಯಾ ಯೇ,ಅಬ್ ಯಹಾ ಕೈಸೇ ಮೇ ರುಖೂ,ಮುಜೇ ಅಭಿ ಸೆ ಅಭಿ ಜಾನಾ ಹೈ ಯಹಾಂಸೆ,ಮುಜೆ ಖತ್ರ ಲಗ್ರಹಾ ಹೈ ಯಹಾ.!”
(ನೋಡಣ್ಣ,ನನ್ನ ಕೆಲ್ಸ ಮುಗಿದಿದೆ,ನಾನಿಲ್ಲಿ ಹೇಗೆ ಇರಲೀ!?ನನಗೆ ಇಲ್ಲಿಂದ ಈವಾಗ್ಲೇ ಹೋಗ್ಬೇಕು,ನನಗಿಲ್ಲಿ ಅಪಾಯ ಎಂದೆನಿಸುತ್ತಿದೆ”)..
ಇವರ ಹೆಜ್ಜೆ ಸಪ್ಪಳ ಕೇಳುತ್ತಿದ್ದಂತೆಯೇ ಅವರ ಮಾತೂ ನಿಂತೋಯಿತು,ಅಲ್ಲಿ ಇದ್ದದು ಇಬ್ಬರೇ ಮೊದಲು ಬಂದ ನಾಲ್ಕು ಮಂದಿಯಲ್ಲಿ ಇಬ್ರೂ ಆಗ್ಲೇ ರೂಮ್ ಹೋಗಿರಬೇಕು,ಶ್ಯಾಮಲೆ ಪ್ರಮೀಳ ಇವರ ಮುಖ ನೋಡಿದರೇ ವಿನಃ ಏನೂ ಯೋಚ್ನೇ ಮಾಡಿಲ್ಲ ಅಲ್ಲದೇ ಹಿಂದಿಯ ಮಾತನ್ನು ಅರ್ಥಮಾಡ್ಕೋವಷ್ಟು ವ್ಯವಧಾನವಿರಲಿಲ್ಲ ಕಾರಣ ಇವರುಗಳ ತಲೆ ಈಗ ಬೆಳಕಿನ ವೇಗದಲ್ಲಿ ಕೆಲಸ ಮಾಡಬೇಕಿದೆ,ಬೇರೆ ಯಾವ ವಿಷಯದ ಬಗ್ಗೆ ಚಿಂತಿಸಿ ಕಾಲಹರಣ ಮಾಡಲು ಸುತರಾಂ ಸಮಯವಿಲ್ಲ ಇವರ ಬಳಿ..!!!!
(ಮುಂದುವರೆಯುವುದು…)
–ಅವಿಜ್ಞಾನಿ