ಹರೀಶ ಸೀದಾ ಆಫೀಸ್’ನಿಂದ ಬಂದವನೆ ಸೋಫಾ ಮೇಲೆ ವೀಕೆಂಡ್ ಮೂಡ್’ನಲ್ಲಿ ಹಾಯಾಗಿ ಕೂತು ‘ಮಗಳೇ’ ಎಂದು ಮಮಕಾರದಿಂದ ಕೂಗಿದ .
ರೂಮಿನಲ್ಲಿ ಏನೋ ಗೀಚ್ತಾಯಿದ್ದ ಮಗು ಅಪ್ಪನ ಧ್ವನಿ ಕೇಳಿ ಮುದ್ದಾಗಿ ಅಲ್ಲಿಂದಲೇ ಅಪ್ಪಾ ಎಂದು ಕೂಗುತ್ತ ಹರೀಶನ ಬಳಿ ಓಡಿ ಬಂದು ಆತನ ಹೆಗೆಲ ಸಿಂಗರಿಸಿತು . ಹೀಗೆ ಅಪ್ಪ ಮಗಳ ನಡುವೆ ಚೆಂದದ ಸಂವಾದ ಏರ್ಪಟ್ಟಿತು. ಈ ನಡುವೆ ಅಡುಗೆ ಮನೆಯಿಂದ ಒಂದು ಗ್ಲಾಸ್ ನೀರು ತೆಗೆದುಕೊಂಡು ಹರೀಶನ ಹೆಂಡತಿ ಶುಭ ಬಂದು ದಿಢೀರನೇ ಮಗಳಿಗೆ ಬಯ್ಯಲು ಶುರುಮಾಡಿದಳು ನಿಮ್ಮ ಮಗಳು ಎಷ್ಟು ತಲಹರಟೆ ಗೊತ್ತಾ ? ಹೋಂವರ್ಕ್ ಮಾಡು ಎಂದರೆ ಸಾಕು ಮಾಡೋಲ್ಲ ಅಂತಾಳೆ, ಬರೀ ಕೆಟ್ಟ ಬುದ್ದಿ ಕಲಿತಿದ್ದಾಳೆ . ಚೆನ್ನಾಗಿ ಓದಬೇಕು ಅಂದ್ರೆ ಮಾತೇ ಕೇಳೋಲ್ಲ ಅಂತಾಳೇ ಎಂದು ಹರೀಶನ ಮುಂದೆ ವದರಿದಳು.
ಇದನ್ನು ಕೇಳಿಸಿಕೊಂಡ ಮಗು , ಗದರಿದ ಅಮ್ಮನ ಮೇಲೆ ಕೊಂಚ ಕೋಪ ಮಾಡಿಕೊಂಡು ಅಮ್ಮನಿಗೆ ಸಿಟ್ಟಿನಿಂದ ಆಟಾಡಿಸಲೆಂದೆ ಒಂದೆರೆಡು ಏಟನ್ನು ಆಕೆಯ ಬೆನ್ನಿನ ಮೇಲೆ ಪಟಪಟನೆ ಬಾರಿಸಿತು. ಇದನ್ನು ನೋಡಿದ ಹರೀಶ ಮಗಳೇ ಅಮ್ಮಗೆ ಹಾಗೆಲ್ಲ ಹೊಡಿತಾರ ? ಹಾಗೆಲ್ಲ ಹೊಡಿಯೋದು ತಪ್ಪು ಕಂದಾ. ಅಮ್ಮ ಯಾರ ಒಳ್ಳೆದಿಕ್ಕೆ ಹೇಳಿದ್ದು? ಅಮ್ಮ ದೇವರು ಪುಟ್ಟ ಸಾರಿ ಕೇಳು ಮುದ್ದು ಎಂದ ಅಪ್ಪನ ಬುದ್ದಿಮಾತನ್ನು ಕೇಳಿ ಮತ್ತೆ ಅಪ್ಪನಿಗೆ ಮಗು ಹಿಂತಿರುಗಿಸಿ ಕೇಳಿತು.
ಅಪ್ಪಾ……..
ಅಮ್ಮ ದೇವರು ತಾನೇ ?
ಹೌದು ಕಂದಾ !
ದೇವರಿಗೆ ಹೊಡಿದ್ರೆ ಸಾರಿ ಕೇಳಬೇಕಲ್ವಾ ಅಪ್ಪಾ ?
ಹೌದು ಮಗಳೇ ಖಂಡಿತಾ!
ಈ ಮಾತನ್ನು ಸೂಕ್ಷವಾಗಿ ಕೇಳಿಸಿಕೊಂಡ ಮಗು ತನ್ನ ರೂಮಿಗೆ ಹೋಗಿ ಅಲ್ಲಿಂದ ಒಂದು ಫೋಟೋ ತಂದು
ಅಪ್ಪನ ಮುಂದೆ ನಿಂತು..
ಅಪ್ಪಾ … ಸಾರಿ ಕೇಳಪ್ಪ ಎಂದಿತು !
ಇದೇನು ಮಗಳು ತನ್ನ ಅಜ್ಜಿಯ ಫೋಟೋ ಹಿಡಿದು ಈ ರೀತಿ ಹೇಳುತ್ತಿದ್ದಾಳಲ್ಲ ಎಂದು ಕ್ಷಣಕಾಲ ತಬ್ಬಿಬ್ಬಾದ .
ಆದರೆ ತನ್ನ ಪಟ್ಟು ಬಿಡದ ಮಗು ಅಪ್ಪ ನಿನಗೆ ಅಜ್ಜಮ್ಮ ದೇವರು ತಾನೇ ? ಅವತ್ತು ನಾನು ಮೆಟ್ಟಲ ಮೇಲೆ ನಿಂತು ನೋಡ್ತಾ ಇದ್ದೆ ಆಗ ನೀನು ಅಫೀಸ್’ದೇನೋ ಕೆಲಸ ಮಾಡ್ತಾ ಇದ್ಯಾ , ಇದನ್ನು ಬೆಡ್ ಮೇಲೆ ಮಲಗಿದ್ದ ಅಜ್ಜಮ್ಮ ನೋಡಿ ಬೇಜಾರು ಮಾಡ್ಕೊಂಡು ಟೈಮಿಗೆ ಸರಿಯಾಗಿ ಊಟ ಮಾಡ್’ಬೇಕಪ್ಪಾ ಟೆನ್ಷನ್ ಮಾಡ್ಕೊಬೇಡ ಪುಟ್ಟ ಅಂತಾ ತುಂಬಾ ಸಾರಿ ಹೇಳ್ತಾಯಿತ್ತಾ ಇದನ್ನ ನೀನು ಕೇಳಿಸಿಕೊಂಡು ಇವೆಲ್ಲಾ ನನಗೆ ಗೊತ್ತಿರೋದೆ ಪದೇ-ಪದೇ ಯಾಕೇಳಿ ಪ್ರಾಣ ತಿಂತ್ಯಾ ? ನನ್ನ ಕಷ್ಟ ನನಗೆ ಅಂತ ಕೋಪದಲ್ಲಿ ಅಜ್ಜಮ್ಮ ಬೆನ್ನ ಮೇಲೆ ಹೊಡೆದು ಎದ್ದೊದ್ಯಾ. ಆಗ ಅಜ್ಜಮ್ಮ ಒಳ್ಳೆದಿಕ್ಕೆ ಹೇಳಿದ್ರು ನೀನು ಕೇಳೊದಿಲ್ವಲ್ಲೋ ಹರೀಶ ಅಂತ ಅಳ್ತಾಯಿತ್ತು! ಆದಾದ ಮೇಲೆ ಅಜ್ಜಮ್ಮ ದೇವರತ್ರ ಹೋದ್ರು ಅಲ್ವಾ ನೀನು “ಸಾರಿ” ಕೇಳಿದ್ದು ನಾನು ನೋಡಲೇ ಇಲ್ಲ ಅಪ್ಪಾ
ಒಂದ್ ಸಾರಿ ಹೇಳಿಬಿಡಪ್ಪಾ ..
ಸಾರಿ ಅಂತಾ !
ಅಮ್ಮನಿಗೆ ಹೊಡೆಯೋದು ತಪ್ಪು ಅಂತ ನೀನೇ ಹೇಳಿದ್ದು ಅಲ್ವಾ ಅಪ್ಪಾ ?
ಅಜ್ಜಮ್ಮ ನಿನ್ನ ಒಳ್ಳೆದಿಕ್ಕೆ ಹೇಳಿದ್ದಲ್ವಾ ಅಪ್ಪಾ ?
ಅಜ್ಜಮ್ಮ ನಿನಗೆ ದೇವರಲ್ವಾ ಅಪ್ಪಾ ?
ಮತ್ತೆ ಕೇಳ್ತದೀನಿ ಸಾರಿ ಕೇಳಪ್ಪಾ !
ಮುದ್ದಾದ ಮಗುವಿನ ಮಾತು ಕೇಳಿದ ಹರೀಶ ನಿಟ್ಟುಸಿರ ನಡುವಲ್ಲಿ ಸ್ತಬ್ಧನಾದ!
-ಆಕಾಂಕ್ಷಾ ಶೇಖರ್.
ಹೆಚ್.ಡಿ.ಕೋಟೆ.