ಪ್ರತೀ ತಿಂಗಳು ಮನೆಯಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಸಂಗ ನನ್ನ ಹೇರ್ ಕಟಿಂಗ್ ಬಗ್ಗೆ ಸುಧೀರ್ಘ ಚರ್ಚೆ. ನಮ್ಮ ಕಾಲೇಜಿನಲ್ಲಿ ಪ್ರತೀ ದಿನ ಒಬ್ಬಬ್ಬರೂ ಒಂದಂದು ರೀತಿ ಹೇರ್ ಸ್ಟೈಲ್ ಮಾಡಿಕೊಂಡು ಬರುವಾಗ ನನಗೆ ಹೊಟ್ಟೆ ಉರಿಯುತ್ತಿತ್ತು. ಹೇರ್ ಕಟ್ ಮಾಡಿಸಿ ಒಂದು ತಿಂಗಳಾದ ಮೇಲೆ ಏನೋ ಅಲರ್ಜಿಯಿಂದ ಒಂದು ಸೀನು ಬಂದ್ರೆ ಸಾಕು ಶುರು ಆಗ್ತದೆ ಮಾಮೂಲಿ ವರಸೆ. “ಹೋಗು, ಬೇಗ ಕಟಿಂಗ್ ಮಾಡಿಸಿಕೊಂಡು ಬಾ. ಶೀತ ಶುರುವಾದರೆ ನನಿಗಾಗುದಿಲ್ಲ ಮದ್ದು ಮಾಡ್ಲಿಕೆ” ಅಂತ. ನಾನು ನಾಲ್ಕು ವರ್ಷ ಇರುವಲ್ಲಿಂದ ಸಲೂನ್ ಹೋಗಿ ಕಟಿಂಗ್ ಮಾಡಿಸ್ಲಿಕೆ ಶುರು ಮಾಡಿದ್ದು. ಅದರ ಮುಂಚೆ ಮನೆಗೆ ಒಬ್ರು ಅಜ್ಜಯ್ಯ ಬಂದು ನನ್ನ ತಲೆ ಕೆತ್ತಿ ಹೋಗುತ್ತಿದ್ದ ನೆನಪು. ಒಂದು ಮರದ ಕುರ್ಚಿಯ ಕೈಯ್ಯಲ್ಲಿ ಒಂದು ರಟ್ಟು ಇಟ್ಟು ಅದರ ಮೇಲೆ ನನ್ನನ್ನು ಕೂರಿಸಿ ಅರ್ಧ ಗಂಟೆ ಕತ್ತರಿಸಿ ಬಲ್ಲೆಯಂತಿದ್ದ ಕೂದಲನ್ನು ನೋಡಲಾಗುವಂತೆ ಮಾಡುತ್ತಿದ್ದರು. ಆ ಅಜ್ಜಯ್ಯ ಈಗಲೂ ತಮ್ಮ ಅಟ್ಲಾಸ್ ಸೈಕಲ್ ತುಳಿದು ಹೋಗಿಯೇ ತಮ್ಮ ಕೆಲವು ಮಾಮೂಲಿ ಗಿರಾಕಿಗಳ ತಲೆ ಕತ್ತರಿಸಿ ಬರುತ್ತಾರೆ.
ಕಟಿಂಗ್ ಮಾಡಿಸಿ ತಿಂಗಳಾಗುತ್ತ ಬಂದಾಗ ಏನೂ ಒಂದು ಸೀನು ಬಂತು ಎಂದರೆ ಅದೆಲ್ಲಿರುವರೋ ಗೊತ್ತಿಲ್ಲ ಓಡಿಬರುವ ಅಮ್ಮ. “ಹೋಗು, ಇವತ್ತೆ ತೆಗಿಸ್ಕೊಂಡು ಬಾ ಆ ಕೂದಲನ್ನು” ಅಂತ ಆಜ್ಞೆ ಆಗುತ್ತಿತ್ತು. ನನ್ನ ತಲೆಯಲ್ಲಿರುತ್ತಿದ್ದುದೆ ಎಣಿಸಬಹುದದಷ್ಟು ಕೂದಲು. ಇದನ್ನು ತೆಗೆದರೆ ಬಾಚಲೂ ಏನೂ ಇರುವುದಿಲ್ಲ. ಆದರೇನು ಮಾಡುದು. ಹೈ ಕಮಾಂಡ್ ಆರ್ಡರ್ ಕೊಟ್ಟಾಗ ಹೋಗಲೇ ಬೇಕಾಗುತ್ತದೆ. ಮನಸಿಲ್ಲದ ಮನಸಿನಲ್ಲಿ ಹೊರಡುತ್ತಿದ್ದೆ. ನಾನು ಸಲೂನ್ ಹೋಗಿ ಏನೂ ಹೇಳಬೇಕಾಗಿಯೇ ಇಲ್ಲ. ನಾಲ್ಕು ವರ್ಷ ಇರುವಾಗ ಹೇಗೆ ಕೆತ್ತುತ್ತಿದ್ದರೋ ಹಾಗೆಯೇ. ಹೋಗಿ ಕೂರುವುದು. ಉದಯವಾಣಿ ಪೇಪರ್ ಇರುತ್ತಿತ್ತು. ಹಾಗೆಯೇ ಉದಯವಾಣಿಯ ಸ್ಪೋರ್ಟ್ಸ್ ಪೇಜ್ ಓದುವಾಗಲೇ ಸಲೂನ್ ಓನರ್ ಕರೆಯುತ್ತಿದ್ದರು. ಮುಂಚೆ ಬಂದಿದ್ದವರು ನಿನ್ನನ್ನು ಈಗಲೇ ಮುಗಿಸಿಬಿಡುತ್ತೇನೆ ಎಂಬಂತೆ ನೋಡುತ್ತಿದ್ದರು. ನಾನು ಸುಮ್ಮನೆ ಹೋಗಿ ಕೂರುತ್ತಿದ್ದೆ . ಸೈಡ್ ಗೆ ಮಷಿನ್ ಹಾಕಿ ನಿಧಾನಕ್ಕೆ ಕತ್ತರಿಸಲು ಶುರುಮಾಡುತ್ತಿದ್ದರು . ಈಗ ನೋಡಿ ಶುರುವಾಗುವುದು ತೊಂದರೆಗಳ ಸುರಿಮಳೆ. ಯಾವತ್ತೂ ಇಲ್ಲದ ತುರಿಕೆ ಆ ಸೀಟ್ ಅಲ್ಲಿ ಕುಳಿತಾಗ ಒಕ್ಕರಿಸ್ಕೊಳ್ತದೆ.ಏನೇನೋ ಸಾಹಸ ಮಾಡಿ ತುರಿಸುವಲ್ಲಿ ತಿರುಗಿ ಕೈ ಇಡುವಾಗ ಭಂಡಾರಿ ತಲೆ ಹಿಡಿದು ತಿರುಗಿಸಿಬಿಡ್ತಾರೆ. ತುರಿಕೆಯೇನೋ ಸ್ವಲ್ಪ ಹೊತ್ತಲ್ಲಿ ಕಮ್ಮಿ ಆಗುತ್ತದೆ ಆದ್ರೆ ನಂತರ ಶುರು ಆಗ್ತದೆ ನೋಡಿ ಮೂಗಿನಲ್ಲಿ ಸುರಿಲಿಕೆ. ಬೆಳಿಗ್ಗೆ ಏನೋ ಸೀನು ಬಂತು, ಅಲರ್ಜಿ ಇಂದ ಇರಬೇಕು ಅಷ್ಟೇ ಅಂದುಕೊಂಡು ಕರ್ಚೀಫ್ ಮನೆಯಲ್ಲಿಯೇ ಬಿಟ್ಟೆ ಬಂದಿರುವುದು ರೂಢಿ. ಬೇರೆ ಯಾವತ್ತೂ ಈ ರೀತಿ ಆಗದೆ ನಾನು ಸಲೂನಲ್ಲಿ ಕೂತಿರಬೇಕಾದರೆಯೇ ಮುಹೂರ್ತ ಅದಕ್ಕೆ. ನಾಚಿಕೆ ಬೇರೆ. ಯಾರಿಗೂ ಗೊತ್ತಾಗದ ಹಾಗೆ ಒಂದು ಸಲ ಬಲಬದಿಗೆ ಇನ್ನೊಂದು ಸಲ ಎಡಬದಿಗೆ ಎಳೆದುಕೊಂಡು ಹೇಗೂ ಕಟಿಂಗ್ ಆಗುವವರೆಗೆ ಸಹಿಸಿಕೊಡು ಕೂತುಬಿದುವುದು. ಹಾಗೋ ಹೀಗೋ ಕಟಿಂಗ್ ಒಂದು ಕಾಲು ಗಂಟೆಯಲ್ಲಿ ಮುಗಿದಿರುತ್ತದೆ. ನನ್ನ ತಂದೆಯನ್ನು ಎಲ್ಲರಿಗೂ ಪರಿಚಯ ಇದ್ದ ಕಾರಣವೋ ಏನೂ ಅರುವತ್ತು ರೂಪಾಯಿಯ ಕಟಿಂಗ್ ಐವತ್ತು ರೂಪಾಯಿಗೆ ಆಗಿ ಅಲ್ಲಿಂದ ಹೊರಬೀಳುತ್ತಿದ್ದೆ. ದಾರಿಯಲ್ಲಿ ಸಿಗುವ ಪ್ರತಿಯೊಬ್ಬ ಪರಿಚಯಸ್ತರಿಗೂ ಹಲ್ಲು ಕಿರಿಯುತ್ತಾ ನಮಸ್ಕಾರ ಕೊಟ್ಟು ಮನೆಗೆ ಬಂದು ಮುಂದಿನ ತಿಂಗಳಿನ ಸೀನಿನವರೆಗೆ ನೆಮ್ಮದಿಯಿಂದ ಇರುತ್ತಿದ್ದೆ.
-ಚೈತನ್ಯ ಶರ್ಮಾ ಎಸ್
ಫೋಟೋ- ಡಾ|ವೇಣುಗೋಪಾಲ ಶರ್ಮಾ