ಹೋಟೆಲ್ಲಿನ ಮಾಣಿ ಬೆಳಗ್ಗೆ ಎಲ್ಲ ಟೇಬಲ್ಲಿನ ಧೂಳು ಝಾಡಿಸಿ ಒರೆಸಿದ. ತಿಂಡಿಗಳೆಲ್ಲ ತಯಾರಾಗಿದ್ದವು. ಬಿಸಿಬಿಸಿ ವಡಾ, ಇಡ್ಲಿ, ದೋಸೆ, ಟೀ, ಕಾಫಿ, ಸಜ್ಜಿಗೆ, ರವಾ ಕೇಸರಿ, ಬೋಂಡ, ತಯಾರಾದ ಎಲ್ಲ ತಿಂಡಿಯ ಪಟ್ಟಿ ತಯಾರಿಸಿ, ಬೆಲೆಪಟ್ಟಿ ಹಾಕಿ ಹೊಟೆಲ್ಲಿನ ಮುಂದೆ ಬೋರ್ಡ್ ನೇತು ಹಾಕಿ ಗಲ್ಲಾಪೆಟ್ಟಿಗೆ ಮೇಲೆ ಕೂರುತ್ತಿದ್ದಂತೆ…
“ಅರೆರೆರೆ! ನೀವು? ನಮ್ಮ ಹೊಟೆಲ್ಲಿಗೆ ಬರೂದಾ? ದೇವರು ಬಂದ ಹಾಗಾಯ್ತು ಸ್ವಾಮಿ. ಬನ್ನಿ,ಬನ್ನಿ, ಏನ್ ಬೇಕು? ದೋಸೆ ಬಿಸಿಬಿಸಿಉಂಟು. ಮಸಾಲೆ ದೋಸೆ ಆದೀತಾ? ಏ ಸಿದ್ದಾ! ಬೇಗ ಎರಡ್ ಮಸಾಲೆ ದೋಸೆ ತಗಂಡ್ ಬಾ.” ಗಲ್ಲಾಪೆಟ್ಟಿಗೆಯಿಂದ ಜಿಗಿದಂತೆ ಎದ್ದು ಸುತ್ತೂರಿಗೆಲ್ಲ ಸಿರಿವಂತರೆಂದೇ ಹೆಸರಾಗಿರುವ ಕಾವಡಿ ವೀರಾಸ್ವಾಮಿಯವರನ್ನು ಕಾರಿನ ಬಳಿಯೇ ಹೋಗಿ ಕರೆತಂದು ಕೂಡ್ರಿಸಿದರು ಹೊಟೆಲ್ ಯಜಮಾನ ಬಾಬುಗೋಪಾಲ. ತಿಂಡಿ ತಿಂದ ವೀರಾಸ್ವಾಮಿಯವರು ದುಡ್ಡು ಎಷ್ಟು ಎಂದು ಕೇಳುತ್ತಿದ್ದಂತೆ “ಅರೆ, ನೀವು ದುಡ್ಡು ಕೊಡೂದಾ? óಛೇ! ಛೇ!” ಕೈಮುಗಿದು ಕಾರಿನವರೆಗೂ ಬೀಳ್ಕೊಟ್ಟು ಬಂದವರಿಗೆ ಮೂಲೆಯಲ್ಲಿ ಆಗತಾನೇ ಬಂದು ಕುಳಿತ ಬಂಗಿ ಮಾದಪ್ಪ ಕಣ್ಣಿಗೆ ಬೀಳಬೇಕೆ! ಮಾದಪ್ಪ ಆ ಊರಿನ ಬಂಗಿ. ಊರಿನ ಹೊಲಸನ್ನೆಲ್ಲ ಬಳಿದು ಹೊಟ್ಟೆ ತುಂಬಿಸಿಕೊಳ್ಳುವಾತ. ಹೊಲಸು ಅಂಗಿ ಹಾಕಿಕೊಂಡೆ ಕೆಲಸಕ್ಕೆ ಹೊರಟಿದ್ದ ಅವನಿಗೆ ಸಕತ್ ಹಸಿವಾಗಿತ್ತು. ದುಡ್ಡು ಇದೆಯೋ ಇಲ್ಲವೋ ನೋಡುವಷ್ಟೂ ವ್ಯವಧಾನವಿರಲಿಲ್ಲ. ಹೊಟೆಲ್ಲಿಗೆ ನುಗ್ಗಿದ್ದ.
“ಏಯ್, ಮಾದ! ಮೊದ್ಲು ದುಡ್ಡು ಕೊಡು, ಆಮೇಲೆ ತಿನ್ನು”
ಮಾದ ಜೇಬು ತಡಕಾಡಿದ. ಒಂದಷ್ಟು ಚಿಲ್ಲರೆ ಇತ್ತು ಸದ್ಯ.. ಕೊಟ್ಟು ಎರಡು ಇಡ್ಲಿ ತಿಂದು ನೀರು ಕುಡಿದು ವೀರಾಸ್ವಾಮಿಯವರ ಮನೆಗೆ ಕೆಲಸಕ್ಕೆ ಹೋದ.
ಟೈಮಿಲ್ಲ
ಪತಿ ತೀರಿಕೊಂಡು ವರುಷಗಳಾಗಿ ಹೋಗಿದೆ. ಇದ್ದ ಒಬ್ಬನೇ ಮಗ ದೂರದ ಕೆನಡದಲ್ಲಿ ಒಳ್ಳೆ ನೌಕರಿಯಲ್ಲಿದ್ದಾನೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಸ್ವಂತ ಮನೆಯಲ್ಲಿ ಈಕೆ ಒಬ್ಬಳೇ ಇದ್ದಾಳೆ. ಇತ್ತೀಚೆಗೆ ಯಾಕೋ ಮೈಯಲ್ಲಿ ಸದಾ ಆರಾಂ ಇರುವುದಿಲ್ಲ. ವೈದ್ಯರಿಗೆ ತೋರಿಸಿದಾಗ ಕ್ಯಾನ್ಸರ್ ಎರಡನೇ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. ಹೇಳಿ ಸ್ವಲ್ಪ ದಿನಗಳಾಗಿವೆ. ಮಗನಿಗೆ ಹೇಳಬೇಕೆಂದು ಬಹಳಸಲ ಪ್ರಯತ್ನಪಟ್ಟಿದ್ದಾಳೆ. ಯಾವಾಗ ಫೋನ್ ಮಾಡಿದಾಗಲೂ ಅಮ್ಮಾ ಕೆಲಸ, ಪ್ರೊಜೆಕ್ಟ್ ಮುಗಿಯಲಿ, ಬಿಡುವು ಮಾಡಿಕೊಂಡು ಮಾತನಾಡುವೆ ಎಂದೇ ಹೇಳುತ್ತಿದ್ದಾನೆ.
ಒಂದುವಾರದಿಂದ ಸದಾ ಕೆಮ್ಮು, ಅಡಿಗೆ ಮಾಡಿಕೊಳ್ಳಲೂ ಆಗದಷ್ಟು ನಿಶ್ಯಕ್ತಿ. ಮಗನಿಗೆ ಫೋನ್ ಮಾಡಲೂ ಆಗದಷ್ಟು ಸುಸ್ತು, ಹೇಗೋ ಪ್ರಯತ್ನಪಟ್ಟು ಫೋನ್ ಮಾಡಿದಾಗ ಅಲ್ಲಿ ರಾತ್ರಿ 11 ಗಂಟೆ. ಮಗನಿಗೆ ವಿಪರೀತ ನಿದ್ದೆ. ನಾಳೆ ಮಾತಾಡಮ್ಮ ಎಂದ. ಫೋನ್ ಧಡ್ ಎಂದಿತು.
ಮಗನ ಪ್ರಾಜೆಕ್ಟ ಮುಗಿದ ಖುಷಿ, ಕೆಲಸದ ದಣಿವಾರಿಸಿಕೊಳ್ಳಲು ಮಾರನೇ ದಿನವೇ ಹವಾಯ್ ದ್ವೀಪಕ್ಕೆ ಕುಟುಂಬದೊಡನೆ ಹೋದ. ಫ್ಲಾಟಿನಿಂದ ಬರುವ ವಾಸನೆ ಪಕ್ಕದ ಮನೆಗೆ ಬಡಿಯಿತು. ಮುನಸಿಪಾಲಟಿಯವರು ಮೂಗು ಮುಚ್ಚಿಕೊಂಡು ಶವಸಂಸ್ಕಾರ ಮುಗಿಸಿದರು. ಮಗನ ಪ್ರವಾಸ ಮುಗಿದು ಈಗ ಅಮ್ಮನ ನೆನಪಾಯ್ತು. ಫೋನ್ ಮಾಡಿದ, ಸುದ್ದಿಯಿಲ್ಲ, ಸದ್ದಿಲ್ಲ, ಮಾರನೇ ದಿನವೂ. ವಾರಾಂತ್ಯದಲ್ಲಿ ಮಗನ ಸ್ನೇಹಿತ ಬಂದ. ಪಕ್ಕದ ಮನೆಯವರು ತಾವೇ ಹಾಕಿದ ಬೀಗ ಕೊಟ್ಟರು. ತಾಯಿ ನಡುಗುವ ಕೈಯಿಂದ ಬರೆದ ಪತ್ರ, ವೈದ್ಯರ ರಿಪೊರ್ಟ್, ಸಮಸ್ತ ಆಸ್ತಿಯನ್ನೂ ಮಗನಿಗೆ ಬರೆದ ವಿಲ್ ಹಾಸಿಗೆಯಿಂದಲೇ ಅತ್ತು ಕಣ್ಣು ಒರೆಸಿಕೊಂಡವು.
ಬಿಂಬ-ಪ್ರತಿಬಿಂಬ
ಕೆರೆ ಏರಿಯ ಮೇಲೆ ಕುಳಿತುಕೊಂಡರು ರತ್ನಾ ಮತ್ತು ಅವಳ ಪತಿ. ಪತಿಯ ತಲೆಯನ್ನು ತನ್ನ ಮಡಿಲಲ್ಲಿರಿಸಿಕೊಂಡಳು ಸಮಾಧಾನಿಸುವಂತೆ. ಕೆರೆ ನೀರು ಶಾಂತವಾಗಿತ್ತು. ಮಗಳು ತಾನು ಪ್ರೀತಿಸಿದವನನ್ನೇ ಮದುವೆಯಾಗುವೆನೆಂದು ಹಠ ಹಿಡಿದದ್ದು ಅವರಿಬ್ಬರ ಬೇಸರಕ್ಕೆ ಕಾರಣವಾಗಿತ್ತು. ಅವನನ್ನು ನೋಡಿದರೆ ಅವಳಿಗೆ ಹೇಗೆ ಪ್ರೀತಿ ಬಂತೋ ಅನ್ನಿಸದೇ ಇರುತ್ತಿರಲಿಲ್ಲ. ಅವಳ ಭವಿಶ್ಯ ನೆನೆದು ರತ್ನಳ ಉದ್ಗೇಗ ಹೆಚ್ಚಾಯ್ತು. ಥಟ್ ಎಂದು ನೆಲ ಬಗೆದಳು. ದೊಡ್ಡ ಕಲ್ಲೊಂದು ಸಿಕ್ಕಿತು, ಬೀಸಿ ಒಗೆದಳು. ಶಾಂತ ಸರೋವರದಲ್ಲಿ ಹತ್ತಾರು ಅಲೆಗಳೆದ್ದವು. ಕೆರೆಯ ನೀರಿಗೆ ಬಗ್ಗಿದಳು, ತಾನು ಅಮ್ಮ ಎದುರು ಬದುರಾಗಿ ಕುಳಿತದ್ದು ಕಂಡಿತು. ಪತಿಗೆ ತೋರಿಸಿದಳು, ಅವನೂ ಬಗ್ಗಿದ, ತಾನು ತನ್ನ ತಂದೆ ಎದುರುಬದುರಾಗಿ ಕುಳಿತದ್ದು ಕಂಡಿತು. ಉದ್ಗೇಗ ಹೆಚ್ಚಾಯ್ತು. ನೆಲ ಬಗೆದರು, ಮುಷ್ಟಿಕಲ್ಲು ಸಿಕ್ಕಿತು, ಬೀಸಿ ಒಗೆದರು, ಅಲೆ ಏಳಲಿಲ್ಲ. ಕೆರೆ ನೀರಿಗೆ ಬಗ್ಗಿ ನೋಡಿದರು. ತಮ್ಮದೇ ಬಿಂಬ ಪ್ರತಿಬಿಂಬ ಕಾಣಿಸಿತು. ಪತಿಯನ್ನು ಮನೆಗೆ ಬೀಳ್ಕೊಟ್ಟ ರತ್ನಾ ಹೋದಳು ತನ್ನನ್ನು ಹೂತ ಕಡೆಗೆ.