ಪಂಚರಾಜ್ಯ ಚುನಾವಣೆಗಳಲ್ಲಿ ದೇಶದ ರಾಜಕೀಯ ಪ್ರಿಯರಲ್ಲಿ ಬಹಳ ಕುತೂಹಲವನ್ನು ಮನೆ ಮಾಡಿಸಿದ್ದ, ಹಾಗೂ ೨೦೧೯ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಪರ ಅಲೆ ಇತ್ತಾದರೂ ಇಷ್ಟೊಂದು ಬೃಹತ್ ಮಟ್ಟದಲ್ಲಿ ಗೆಲುವು ದಕ್ಕುತ್ತದೆಂದು ಸ್ವತಃ ಕೇಸರಿ ಬ್ರಿಗೇಡ್ ಭಾವಿಸಿರಲಿಕ್ಕಿಲ್ಲ. ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತಾದರೂ ಎಲ್ಲರ ಚಿತ್ತ ಬಹಳ ದೊಡ್ದ ಮಟ್ಟದಲ್ಲಿ ತನ್ನತ್ತ ಸೆಳೆದದ್ದು ಮಾತ್ರ ಉತ್ತರಪ್ರದೇಶ. ದೇಶದ ಎಲ್ಲಾ ರಾಜಕೀಯ ಪ್ರಿಯರ ಬಾಯಲ್ಲಿ ಹರಿದಾಡುತ್ತಿದ್ದದ್ದು ಯುಪಿಯಲ್ಲಿ ಏನಾಗಬಹುದು ಅನ್ನುವ ಮಾತು. ಲೋಕಸಭೆ ಚುನಾವಣೆಯಲ್ಲಿ ಶೇ.೪೨ರಷ್ಟು ಮತಗಳಿಸಿ ದಿಗ್ವಿಜಯ ಸಾಧಿಸಿದ್ದ ಕೇಸರಿಪಡೆಗೆ ಉತ್ತರಪ್ರದೇಶ ಚುನಾವಣೆ ನಿಜಕ್ಕೂ ಸವಾಲಿನ ವಿಷಯವಾಗಿತ್ತು. ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೆಹಲಿ ಮತ್ತು ಬಿಹಾರದಲ್ಲಿ ಬಿಜೆಪಿ ಮುಗ್ಗರಿಸಿದ ಮೇಲಂತೂ ಉತ್ತರ ಪ್ರದೇಶ ಚುನಾವಣೆ ಬಹಳ ಪ್ರತಿಷ್ಠೆಯ ವಿಷಯವಾಗಿತ್ತು ಮೋದಿ ಮತ್ತು ಅಮಿತ್ ಶಾ ಜೋಡಿಗೆ.

೨೦೧೪ರ ಲೋಕಸಭಾ ಚುನಾವಣೆಯಲ್ಲಿ ಸೋತು ಮಣ್ಣು ಮುಕ್ಕಿದ್ದ ಕಾಂಗ್ರೆಸ್ ಪಕ್ಷಕ್ಕೆ ಮೈ ಕೊಡವಿ ಎದ್ದೇಳಲು ಇದ್ದ ಕೊನೆಯ ಅವಕಾಶ ಉತ್ತರಪ್ರದೇಶ ಚುನಾವಣೆ ಅಂದರೆ ತಪ್ಪಾಗಲಾರದು. ಉತ್ತರ ಪ್ರದೇಶದ ಚುನಾವಣೆ ಮೋದಿಗೆ ಸೆಮಿಫೈನಲ್ ಆಗಿತ್ತಾದರೆ ರಾಹುಲ್ ಗಾಂಧಿಗೆ ಫೈನಲ್ ಟೆಸ್ಟ್ ತರ ಇತ್ತು. ರಾಜಕೀಯಕ್ಕೆ ಬಂದು ದಶಕಗಳೇ ಉರುಳಿದರೂ ರಾಹುಲ್ ತಮ್ಮ ರಾಜಕೀಯ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಶೇಕಡಾ ೧೫-೨೦ರಷ್ಟಿರುವ ಬ್ರಾಹ್ಮಣರ ವೋಟುಗಳನ್ನು ಮನಸ್ಸಲ್ಲಿಟ್ಟುಕೊಂಡೇ ಚುನಾವಣಾ ಘೋಷಣೆಗೂ ಮುನ್ನವೇ ಶೀಲಾ ದೀಕ್ಷಿತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕರೆತಂದಿತ್ತು ಕಾಂಗ್ರೆಸ್. ಆದರೆ ಯಾವಾಗ ಎರಡಂಕಿಯ ಸ್ಥಾನ ಸಿಗುವುದೂ ಅನುಮಾನವಾಯಿತೋ ಸಮಾಜವಾದಿ ಪಕ್ಷದ ಸೈಕಲ್ ಏರಿ ಬಿಟ್ರು ರಾಹುಲ್ ಗಾಂಧಿ!. ಈ ಮೈತ್ರಿಯಿಂದ ಹರಿದು ಹಂಚಿ ಹೋಗಲಿದ್ದ ಮುಸ್ಲಿಂ ಮತಗಳು ಧ್ರುವೀಕರಣಗೊಂಡು ಬಿಜೆಪಿ ಸೋಲುವುದು ಪಕ್ಕಾ ಅನ್ನೋ ಲೆಕ್ಕಾಚಾರ ಹರಿದಾಡಿತ್ತು. ಆದರೆ ಮುಸ್ಲಿಂ ಮತದಾರರು ಹೆಚ್ಚಿರೋ ಕ್ಷೇತ್ರದಲ್ಲಿಯೂ ಜನ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಅಂದರೆ ಯೋಚಿಸಿ ಮೋದಿ ಬಗ್ಗೆ ಜನರಿಗಿರೋ ಭರವಸೆ. ಬಿಹಾರದ ಮಹಾಘಟ್ಬಂದನ್ ಜೊತೆಗೆ ಉತ್ತರ ಪ್ರದೇಶದ ಕಾಂಗ್ರೆಸ್ ಸಮಾಜವಾದಿ ಪಕ್ಷದ ಮೈತ್ರಿಯನ್ನು ತುಲನೆ ಮಾಡುವುದು ಸರಿಯಲ್ಲ ಎಂದು ಉತ್ತರ ಪ್ರದೇಶದ ಮತದಾರ ತೋರಿಸಿಕೊಟ್ಟಿದ್ದಾನೆ. ಇನ್ನು ಚುನಾವಣಾ ಪ್ರಚಾರದಲ್ಲಿ ರಾಹುಲ್ ಮಾಡಿದ ಎಡವಟ್ಟುಗಳು ಒಂದೆರಡಲ್ಲ‌. ಮೊದಲು ಉತ್ತರ ಪ್ರದೇಶದಲ್ಲಿ ಆಲೂ ಫ್ಯಾಕ್ಟರಿ ಸ್ಥಾಪನೆ ಮಾಡುವುದಾಗಿ ಹೇಳಿಕೆ ನೀಡಿ, ನಂತರ ಜಾನ್ಪುರದಲ್ಲಿ ತಯಾರಿಸಿದ ಪಾತ್ರೆಗಳನ್ನು ಬರಾಕ್ ಒಬಾಮ ಅವರ ಪತ್ನಿ ಉಪಯೋಗಿಸುವ ಕಾಲ ಬರುತ್ತದೆ ಮತ್ತೆ ಯುಪಿಯಲ್ಲಿ ತಯಾರಿಸಿದ ಮೊಬೈಲ್ಗಳು ಇನ್ನೈದು ವರ್ಷದಲ್ಲಿ ಅಮೇರಿಕಾದಲ್ಲಿ ಉಪಯೋಗಿಸಲ್ಪಡುತ್ತವೆ ಹಾಗೂ ಮಣಿಪುರದಲ್ಲಿ ತೆಂಗಿನಕಾಯಿ ಜ್ಯೂಸ್ ಬಗ್ಗೆ ಮಾತನಾಡಿ ನಗೆಪಾಟಲಿಗೀಡಾಗಿದ್ದರು ರಾಹುಲ್!. ಈ ಎಲ್ಲಾ ವಿಷಯಗಳು ಮತದಾರರ ಮೇಲೆ ಪ್ರಭಾವ ಬೀರಿದ್ದು ಸುಳ್ಳಲ್ಲ.

ಸಮಾಜವಾದಿ ಪಕ್ಷದ ಐದು ವರ್ಷದ ದುರಾಡಳಿತವನ್ನು, ಆಡಳಿತ ವಿರೋಧಿ ಅಲೆಯನ್ನು ಜನರ ಮನಸ್ಸಿಂದ ಮರೆಮಾಚಲು ಪಕ್ಷದ ಚಿನ್ಹೆಗಾಗಿ ಅಪ್ಪ ಮಗ ಕೋರ್ಟ್ ಮೆಟ್ಟಿಲೇರಿದರು. ಕಾರ್ಯಕರ್ತರು ಸಾರ್ವಜನಿಕ ವೇದಿಕೆಗಳಲ್ಲಿ ಕೈ ಕೈ ಮಿಲಾಯಿಸಿಕೊಂಡರು. ಕಾಂಗ್ರೆಸ್ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದ್ದರೂ ಎಷ್ಟೋ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ಹಾಕಿದ್ದವು. ಗೂಂಡಾ ನಾಯಕರೆಂದೇ ಕರೆಯಲ್ಪಡುವ ಅಜಂ ಖಾನ್, ಅತೀಕ್ ಅಹ್ಮದ್, ರಾಜಾ ಭಯ್ಯಾ ಮತ್ತಿತರರು ಸಮಾಜವಾದಿ ಪಕ್ಷದಲ್ಲಿ ಅಧಿಕಾರ ಅನುಭವಿಸಿದ್ದರು. ಗೂಂಡಾಗಳು ಹಾಡಹಗಲೇ ಎಸ್ಪಿ, ಇನ್ಸ್‌ಪೆಕ್ಟರ್ ಗಳನ್ನು ಹತ್ಯೆ ಮಾಡುತ್ತಿದ್ದರೂ ಮುಖ್ಯಮಂತ್ರಿ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರಷ್ಟೇ. ಗೂಂಡಾ ರಾಜಕಾರಣ, ಮುಜಫರ್ ನಗರ, ಕೈರಾನಾದ ಕೋಮು ದಳ್ಳುರಿ, ಮಹಿಳೆಯರ ಅಪಹರಣ ಮತ್ತು ಬಲಾತ್ಕಾರ ಹಾಗೂ ಕೊಲೆ, ಪೋಲೀಸರ ಕಗ್ಗೊಲೆಯಿಂದ ಜನ ಬೇಸೆತ್ತಿದ್ದರು. ರಾಹುಲ್ ಗಾಂಧಿ ಅಖಿಲೇಶ್ ಯಾದವರನ್ನು ಹಾದಿಬೀದಿಯಲ್ಲಿ ತೆಗಳಿದ್ದರೂ ಕೊನೆಗೆ ಅದೇ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರು ಸಮಾಜವಾದಿಗಳು. ಅಪ್ಪನ ಜೊತೆಗಿನ ಅಖಿಲೇಶ್ ಭಿನ್ನಾಭಿಪ್ರಾಯ, ಟಿಕೆಟ್ ಹಂಚಿಕೆಯಲ್ಲಿ ವಿಳಂಬ, ಕಾಂಗ್ರೆಸ್ ಜೊತೆಗೆ ಕೊನೆಕ್ಷಣದ ಮೈತ್ರಿಯೂ ಸಮಾಜವಾದಿ ಪಕ್ಷಕ್ಕೆ ಮುಳುವಾಯಿತು.

ಮಾಯಾವತಿಯವರ ಬಿಎಸ್ಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಪರಿಸ್ಥಿತಿ ಚುನಾವಣೆಗೆ ಮುನ್ನವೇ ಬಂದೊದಗಿತ್ತು. ಬಿಎಸ್ಪಿಯ ಸಾಲು ಸಾಲು ನಾಯಕರು ಬಿಜೆಪಿ ಕಡೆ ವಾಲಿದ್ದರು. ಮಾಯಾವತಿ ಒಬ್ಬರೇ ಹಲವಾರು ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಪಾಪ ಬರೆದು ಕೊಟ್ಟ ಭಾಷಣ ಓದಲೂ ಮಾಯಾವತಿಯವರು ತ್ರಾಸ ಪಡುತ್ತಿದ್ದದ್ದು ಕಾಣುತ್ತಿತ್ತು. ಮುಜಫರ್ ನಗರ್ ಮತ್ತು ಕೈರಾನ ಗಲಭೆಯಿಂದ ಮುಸ್ಲಿಮರು ಸಮಾಜವಾದಿ ಪಕ್ಷದಿಂದ ದೂರಾಗಿದ್ದರು. ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ಮಾಯಾವತಿ ೯೭ ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದು. ಆದರೆ ಯಾವಾಗ ಕಾಂಗ್ರೆಸ್ ಸಮಾಜವಾದಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತೋ ಅಲ್ಲಿಗೆ ಮಾಯಾವತಿಯವರ ಲೆಕ್ಕಾಚಾರ ತಲೆಕೆಳಗಾಗಿತ್ತು. ಮುಸ್ಲಿಮರ ವೋಟುಗಳು ಹಂಚಿ ಹೋದವು. ಹಾಗೆ ನೋಡಿದರೆ ಮೋದಿ, ರಾಹುಲ್ ಮತ್ತು ಅಖಿಲೇಶ್ ಗಿಂತಲೂ ಮಾಯಾವತಿಯವರಿಗೆ ಇದು ಮಾಡು ಇಲ್ಲವೇ ಮಡಿ ಚುನಾವಣೆಯಾಗಿತ್ತು. ಆದರೆ ಮೋದಿ ಅಲೆ ಮುಂದೆ ಆನೆ ಖೆಡ್ಡಾಕ್ಕೆ ಬಿದ್ದಿದೆ. ತಾನೂ ಬೀಳುವುದಲ್ಲದೇ ಮಾಯಾವತಿಯವರ ರಾಜಕೀಯ ಜೀವನವನ್ನೂ ದೊಪ್ಪೆಂದು ಬೀಳಿಸಿದೆ.

ನೋಟು ಬಂದಿ, ಅಭಿವೃದ್ಧಿ, ಅಖಿಲೇಶ್ ಸರಕಾರದ ದುರಾಡಳಿತ, ಮೋದಿ ಸರಕಾರದ ಎರಡೂವರೆ ವರ್ಷದ ಸಾಧನೆ, ಗೂಂಡಾರಾಜ್ ಅಂತ್ಯ ಬಿಜೆಪಿಯ ಚುನಾವಣಾ ವಿಷಯಗಳಾಗಿದ್ದವು. ಗಾಜಿಯಾಬಾದ್ ನಿಂದ ಪೂರ್ವಾಂಚಲದ ಗೋರಖ್ ಪುರ, ವಾರಣಾಸಿಯವರೆಗೆ ಮೋದಿಯವರು ಸತತ ಪ್ರಚಾರ ಕಾರ್ಯ ಕೈಗೊಂಡಿದ್ದರು. ಜಾತಿ ಸಮೀಕರಣ, ಕೋಮು ಧ್ರುವೀಕರಣಗಳ ಜತೆಗೆ ಮೋದಿಯವರ ಜನಪ್ರಿಯತೆ ಮತ್ತು ಮತ್ತು ಕೇಂದ್ರದ ಅಭಿವೃದ್ಧಿ ಕಾರ್ಯಕ್ರಮಗಳು ಬಿಜೆಪಿಗೆ ಅನುಕೂಲಕರವಾಗಿದೆ. ಮೇಲ್ವರ್ಗದ ಸಾಂಪ್ರದಾಯಿಕ ಮತದಾರರಲ್ಲದೇ ಜಾಟರು, ಯಾದವರು, ಓಬಿಸಿ ಸಮುದಾಯ, ಮತ್ತು ದಲಿತರು ಬಿಜೆಪಿಯನ್ನು ಬೆಂಬಲಿಸಿದ್ದರ ಪರಿಣಾಮವೇ ಈ ದಿಗ್ವಿಜಯ. ಕೊನೆಯ ಚರಣದ ಮತದಾನ ನಡೆದ ವಾರಣಾಸಿಯಲ್ಲಿ ಸತತ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿದ್ದ ಮೋದಿ ರೋಡ್ ಶೋ, ಪಾದಯಾತ್ರೆ, ಸಾರ್ವಜನಿಕ ರ್ಯಾಲಿ ಮೂಲಕ ಜನರ ಮನಸ್ಸನ್ನು ಗೆಲ್ಲಲು ಶ್ರಮ ವಹಿಸಿದ್ದರು. ಎಲ್ಲಾ ಸಾರ್ವಜನಿಕ ರ್ಯಾಲಿಗಳಲ್ಲಿ ಜನ ಸಾಗರೋಪಾದಿಯಲ್ಲಿ ಸೇರಿ ಮೋದಿಯವರಿಗೆ ತಮ್ಮ ಬೆಂಬಲ ಸೂಚಿಸಿದ್ದರು. ಕೊನೆಯ ಚರಣದ ೪೦ ಸ್ಥಾನಗಳಲ್ಲಿ ಪ್ರಧಾನಿ ಮೋದಿಯವರು ಸಂಸದರಾಗಿರುವ ವಾರಣಾಸಿಯ ಎಂಟು ಸ್ಥಾನಗಳಲ್ಲಿ ಶತಾಯಗತಾಯ ಗೆಲ್ಲುವುದು ಎಲ್ಲಾ ಪಕ್ಷಗಳ ಸಿಂಗಲ್ ಪಾಯಿಂಟ್ ಅಜೆಂಡಾ ಆಗಿತ್ತು. ತಮ್ಮ ಒಂದು ಭಾಷಣದಲ್ಲಿ ‘ಹಾರ್ವರ್ಡ್‌ಗಿಂತ ಹಾರ್ಡ್‌ ವರ್ಕ್‌ ಮುಖ್ಯ’ ಎನ್ನುವ ಬಾಣ ಮೋದಿ ಬಿಟ್ಟಿದ್ದರು. ಕೊನೆಯ ಎರಡು ಚರಣದ ಮತದಾನ ಬಾಕಿ ಇರುವಂತೆಯೇ ಹಿಂದೂ ಮತಗಳ ಧ್ರುವೀಕರಣಕ್ಕೆ ಪ್ರಧಾನಿ ಮೋದಿ ಮುಂದಾಗಿದ್ದೂ ಬಿಜೆಪಿ ಪರ ಫಲಿತಾಂಶ ಬರಲು ಇನ್ನೊಂದು ಪ್ರಮುಖ ಕಾರಣ. ಗ್ರಾಮವೊಂದರಲ್ಲಿ ಕಬ್ರಿಸ್ತಾನ ನಿರ್ಮಾಣ ಮಾಡಿದರೆ, ಶ್ಮಶಾನದ ನಿರ್ಮಾಣವೂ ಆಗಲೇಬೇಕು. ಸಮಾನತೆ ಪ್ರಮುಖ ಧ್ಯೇಯವಾಗಿರಬೇಕು ಎಂದು ಹಿಂದೂ ಮುಸ್ಲಿಂ ಐಕ್ಯತೆ ಬಗ್ಗೆ ಮಾತಾಡಿದ್ದರು.

ಅಸಲಿಗೆ ಉತ್ತರಪ್ರದೇಶದಲ್ಲಿ ಬಿಜೆಪಿಯ ಗೆಲುವಿನ ವಾಸನೆ ಒರಿಸ್ಸಾ ಮತ್ತು ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದಾಗಲೇ ಬಡಿದಿತ್ತು. ಮೋದಿ ಜನಪ್ರಿಯತೆ ಎಳ್ಳಷ್ಟೂ ಕುಗ್ಗಿಲ್ಲ ಅನ್ನುವುದಕ್ಕೆ ಉತ್ತರಪ್ರದೇಶದ ಈ ಅಭೂತಪೂರ್ವ ಗೆಲುವೇ ಸಾಕ್ಷಿ. ಮೋದಿ ಸರಕಾರ ಅಧಿಕಾರ ವಹಿಸಿಕೊಂಡ ಕೆಲದಿನಗಳ ಮೇಲೆ ಶುರುವಾದ ಅಸಹಿಷ್ಣುತೆ, ಪ್ರಶಸ್ತಿ ವಾಪಸಾತಿ ಮಹಾನಾಟಕದ ಬಗ್ಗೆ ನಿಮಗೆಲ್ಲಾ ನೆನಪಿರಬಹುದು. ಆ ಫಟನೆಯ ಕೇಂದ್ರ ಬಿಂದುವಾಗಿದ್ದದ್ದು ಉತ್ತರಪ್ರದೇಶದ ದಾದ್ರಿ. ಎಡಚರರು, ಮೋದಿ ವಿರೋಧಿಗಳು ಸುಖಾಸುಮ್ಮನೇ ಅದೆಷ್ಟೇ ಬೊಂಬಡಾ ಹೊಡೆದುಕೊಂಡರೂ ಉತ್ತರಪ್ರದೇಶದ ಜನ ಅವರ ಹಾರಾಟ ಹೋರಾಟಕ್ಕೆ ಸೊಪ್ಪೇ ಹಾಕಲಿಲ್ಲ. ಉತ್ತರಪ್ರದೇಶದಲ್ಲಿ ಬಿಜೆಪಿಗೆ ಪ್ರಚಂಡ ಬಹುಮತ ಕೊಡುವ ಮೂಲಕ ಅವರೆಲ್ಲರಿಗೂ ಕ್ಯಾಕರಿಸಿ ಮಕ್ಕುಗೀದಿದ್ದಾರೆ. ನೋಟ್ ಬಂದಿ, ಸರ್ಜಿಕಲ್ ಸ್ಟ್ರ‍ೈಕ್, ಅಸಹಿಷ್ಣುತೆಯ ಬಗ್ಗೆ ಎದ್ದಿದ್ದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪ್ರದೇಶದ ಜನ ಕೊಟ್ಟ ಉತ್ತರಕ್ಕೆ ಮೋದಿ ವಿರೋಧಿಗಳು ಚೆಲ್ಲಾಪಿಲ್ಲಿಯಾಗಿದ್ದಾರೆ. ಹಿಂದುತ್ವದ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್, ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಸಧ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳು. ಗೆದ್ದೇ ಬಿಡುತ್ತೇವೆಂದು ಹಾರಕ್ಕೆ ಕೊರಳು ಸಿದ್ಧ ಮಾಡುತ್ತಿದ್ದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಹಳ ದೊಡ್ಡ ಆಘಾತವಾಗಿದೆ‌. ಉತ್ತರ ಪ್ರದೇಶದ ಫಲಿತಾಂಶದ ಮೂಲಕ ಒಂದಂತೂ ಸ್ಪಷ್ಟವಾಗಿದೆ. ಮೋದಿಯವರ ಬಗ್ಗೆ ವಿರೋಧಿಗಳು ಅದೇನು ಅಪಪ್ರಚಾರ ಮಾಡಿದರೂ ಮತದಾರ ಪ್ರಭು ಇನ್ನೂ ಮೋದಿಯವರ ಪರವಾಗಿದ್ದಾನೆ ಎಂದು ತೋರಿಸಿದೆ ಈ ಚುನಾವಣೆ. ಮೋದಿ ಸರಕಾರದ ಕಾರ್ಯವೈಖರಿಯ ಬಗ್ಗೆ ಎದ್ದಿದ್ದ ಎಲ್ಲಾ ಪ್ರಶ್ನೆಗಳಿಗೂ ಸ್ಪಷ್ಟವಾದ ಉತ್ತರ ಕೊಟ್ಟಿದ್ದಾನೆ ಉತ್ತರಪ್ರದೇಶದ ಮತದಾರ. ಈಗಿನ ಪರಿಸ್ಥಿತಿಯಲ್ಲಿ ೨೦೧೯ರಲ್ಲಿ ಮೋದಿಯವರ ಅಲೆ ಸುನಾಮಿಯಾಗಿ ವಿರೋಧಪಕ್ಷಗಳನ್ನು ಮಣ್ಣುಮುಕ್ಕಿಸುವುದರಲ್ಲಿ ಅನುಮಾನವೇ ಇಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!