ಆಗಲೇ ಎಂಟು ಗಂಟೆಯಾಗಿದೆ ಎಂದು ಆತುರಾತುರವಾಗಿ ಡಬ್ಬಿಗಳಲ್ಲಿ ಊಟ ತುಂಬುತ್ತಿದ್ದೆ. ಒಂದು ಸಣ್ಣ ಬಾಕ್ಸ್’ನಲ್ಲಿ ಚಿನ್ನುವಿಗೆ ಉಳಿದ ಎರಡು ಬಾಕ್ಸ್’ಗಳಲ್ಲಿ ಒಂದು ಕುಮಾರನಿಗೆ ಮತ್ತು ನನಗೆ. ಬೆಳಗ್ಗೆ ೫ ಗಂಟೆಗೆ ಎದ್ದು ಎಲ್ಲವೂ ಅನುವು ಮಾಡುವಷ್ಟರಲ್ಲಿ ಸಾಕಾಗಿತ್ತು. ಚಿನ್ನು ಕಾಲಿಗೆ ಶೂ ಹಾಕಿಕೊಳ್ಳುತ್ತಿದ್ದಳು. ಹೊರಗಡೆ ಅವಳ ಸ್ಕೂಲ್ ಬಸ್ ಹಾರ್ನ್ ಕೇಳಿಸಿತು. ಸಣ್ಣ ಬಾಕ್ಸ್’ನ ಒಂದು ಬ್ಯಾಗ್ನಲ್ಲಿ ತುರುಕಿ ಚಿನ್ನು ಕೈಹಿಡಿದು ಗೇಟ್ ಹತ್ತಿರ ಬಂದೆ. ಡ್ರೈವರ್ ಗೊಣಗಾಡುತ್ತಿದ್ದ. “ದಿನವೂ ಇದೇ ಗೋಳು”. ಚಿನ್ನು ಬಸ್ ಹತ್ತುತ್ತಿದ್ದಂತೆ ಅಡಿಗೆ ಮನೆಯತ್ತ ಓಡಿದೆ.
ಕುಮಾರ ಸ್ನಾನ ಮುಗಿಸಿ ಸಿದ್ಧವಾಗುತ್ತಿದ್ದ. ಡೈನ್ನಿಂಗ್ ಟೇಬಲ್ ಮೇಲಿದ್ದ ಉಪ್ಪಿಟ್ಟನ್ನು ತೆಗೆದುಕೊಂಡು ತಟ್ಟೆಗೆ ಹಾಕಿಕೊಂಡ. ಊಟದ ಬಾಕ್ಸ್’ಗಳನ್ನು ಟೇಬಲ್ ಮೇಲೆ ಇರಿಸಿ ಸಿದ್ಧವಾಗಲು ಬೆಡ್’ರೂಮ್’ಗೆ ನಡೆದೆ. ಕುಮಾರ ಹೊರಟ ೧೦ ನಿಮಿಷದಲ್ಲಿ ನಾನೂ ಹೊರಡಬೇಕು. ಟೇಬಲ್ ಮೇಲಿದ್ದ ನನ್ನ ಮೊಬೈಲ್ ಗುಣುಗುಣಿಸಿತು. ” ಲೇ ಸುಮಾ ನಿನ್ನ ಫ್ರೆಂಡ್ ರಂಜಿತಾ ಫೋನ್ ಮಾಡಿದ್ದಾಳೆ ನೋಡು” ಎಂದು ಕೂಗಿದ . “ಹಾಳಾದವನು ಫೋನ್ ಮಾಡಬೇಡ ಅಂದರೂ ಮತ್ತೆ ಮತ್ತೆ ಫೋನ್ ಮಾಡ್ತಾನೆ” ಮನಸಿನಲ್ಲೇ ಬೈದುಕೊಂಡು “ಈಗ ಟೈಮ್ ಇಲ್ಲ ಆಮೇಲೆ ಮಾತಾಡ್ತೀನಿ” ಎಂದು ಹೇಳಿ ಸೀರೆಗಳ ವಾರ್ಡ್ರೋಬ್ ತೆಗೆದೆ. ಕುಮಾರನ ಸ್ಕೂಟರ್ ಶಬ್ದ ವಾಯಿತು. ಹೊರಡುವ ಮುನ್ನ ಕನ್ನಡಿಯ ಮುಂದೆ ನಿಂತೆ. ರಂಜಿತ್ ಹೇಳಿದ ಮಾತು ನೆನಪಾಯಿತು ” ನಿಮ್ಮನ್ನು ನೋಡಿದವರಿಗೆ ನಿಮಗೆ ೫ ವರ್ಷದ ಮಗಳಿದ್ದಾಳೆ ಎಂದರೆ ಯಾರೂ ನಂಬಲ್ಲ. ಅಂತಹ ಎಳಸುತನ ನಿಮ್ಮ ಮುಖದಲ್ಲಿ ಅದೇ ಕಾಂತಿ ನಿಮ್ಮ ರೂಪ ” ಅವನ ಮಾತು ಮುಜುಗರವಾದರೂ ಹೆಮ್ಮೆಯಿಂದ ಕನ್ನಡಿಯತ್ತ ನೋಡಿದೆ. ನಿಜ ನಾನು ಚೆಲುವೆ ಆದರೆ ೩೩ರ ವಯಸ್ಸು ಕಮ್ಮಿಯೇನಲ್ಲ. ಮನೆಯ ಒಳಗೆ ಹೊರಗೆ ದುಡಿತ . ಯೋಚಿಸುತ್ತ ಮನೆಗೆ ಬೀಗ ತಗಲಿಸಿ ಬಸ್ ಸ್ಟಾಂಡ್’ನತ್ತ ಹೊರಟೆ .
ಪಕ್ಕದಲ್ಲಿ ಆ ದೊಡ್ಡ ಕಾರು ನಿಂತಿತು. ರಂಜಿತ್ ಡ್ರೈವರ್ ಸೀಟಿನಿಂದ ಕೂಗಿದ ” ಬನ್ನಿ ಮೇಡಂ ” ನಾನು ಬೇಡ ಬೇಡ ಅನ್ನುತ್ತಾ ಕಾರಿನ ಮುಂದುಗಡೆ ಸೀಟ್ನಲ್ಲಿ ಕುಳಿತೆ. ಇದೇನು ಮೊದಲ ಸಲವಲ್ಲ. ಎರಡು ತಿಂಗಳಿಂದ ದಿನವೂ ರಂಜಿತ್ ಬರುತ್ತಿದ್ದ . ವಿಂಡೋ ಗ್ಲಾಸ್ ಏರಿಸಿ ಎ ಸಿ ಹಾಕಿದ. ಜೊತೆಗೆ ಎಫ್ ಎಂ’ನಲ್ಲಿ ಮಧುರವಾದ ಹಾಡು. ಮೈ ಮನಸಿಗೆ ಹಾಯೆನಿಸಿ ಕಣ್ಣು ಮುಚ್ಚಿದೆ.
ಅಂದು ಸೌಂದರ್ಯ ಜ್ಯೂವೆಲರಿಗೆ ಹೋಗಿದ್ದೆ. ನನ್ನ ಬಹುದಿನದ ಆಸೆ ಕೆಂಪು ಕಲ್ಲಿನ ಬಳೆ. ಆ ಬಳೆಗಳು ತುಂಬಾ ಸುಂದರವಾಗಿತ್ತು . ಕೈ ಅಳತೆ ನೋಡುವ ನೆಪದಲ್ಲಿ ಎರಡು ಬಾರಿ ಕೈಗಳಿಗೆ ಹಾಕಿಕೊಂಡೆ. ತೂಕ ನೋಡಿದಾಗ ೫೦ ಗ್ರಾಂ ಇತ್ತು. ನನ್ನ ಹಳೆಯ ಬಳೆಗಳನ್ನು ಕೊಟ್ಟರೂ ೪೦ ರಿಂದ ೫೦ ಸಾವಿರ ಹೊಂದಿಸಬೇಕು. ಯೋಚಿಸುತ್ತ ನಿಂತಿದ್ದೆ. ರಂಜಿತ್ ನನ್ನ ಬಳಿ ಬಂದು “ನಿಮ್ಮ ಸುಂದರವಾದ ಕೈಗಳಿಗೆ ತುಂಬಾ ಚನ್ನಾಗಿ ಒಪ್ಪತ್ತೆ ಅಪ್ಪನಿಗೆ ಹೇಳಿ ಪೇಮೆಂಟ್’ಗೆ ಸ್ವಲ್ಪ ಸಮಯ ಕೊಡುಸ್ತೀನಿ” ಎಂದ. ನಾನು “ಈಗ ಆಗಲ್ಲ ಒಂದೆರಡು ತಿಂಗಳ ನಂತರ ಯೋಚಿಸುತ್ತೇನೆ” ಹೇಳಿದೆ. ಒಂದು ಕಾಗದದ ಮೇಲೆ ಮೊಬೈಲ್ ನಂಬರ್ ಮನೆ ಅಡ್ರೆಸ್ ಬರೆದು ಕೊಟ್ಟೆ. ಅವನ ಕಣ್ಣುಗಳಲ್ಲಿ ನನ್ನ ಸೌಂದರ್ಯ ಹೀರುತ್ತಿದ್ದ. ಮುಜುಗರದಿಂದ ಹೊರ ಬಂದಿದ್ದೆ.
“ಮೇಡಂ ನಿಮ್ಮ ಬಸ್ ಸ್ಟಾಂಡ್ ಬಂತು ” ರಂಜಿತ್ ಮಾತು ಕೇಳಿ ಕಣ್ಣು ಬಿಟ್ಟೆ. ಕೆಳಗಿಳಿದು ಧನ್ಯವಾದ ಹೇಳಿದೆ. “ಎರಡು ತಿಂಗಳಿಂದ ಈ ಡ್ರೈವರ್ ಸೇವೆ ಮಾಡುತ್ತಿದ್ದಾನೆ ರಾಣಿಯವರಿಗೆ ಕೃಪೆ ಬರಲಿಲ್ಲ” ನಾಟಕೀಯವಾಗಿ ಹೇಳಿ ಹೊರಟುಹೋದ. ಬಸ್’ನಲ್ಲಿ ಸೀಟ್ ಸಿಕ್ಕಿತು. ನಾನು ಯೋಚಿಸತೊಡಗಿದೆ. ನಾನೇಕೆ ಇವನ ಮಾತಿಗೆ ಸೋಲುತ್ತಿದ್ದೇನೆ. ಅವನ ಮಾತುಗಳು ಸಭ್ಯತೆಯ ಗಡಿ ದಾಟಿದರೂ ಹುಸಿ ಮುನಿಸು ತೋರಿಸುತ್ತಿದ್ದೆ. ಮಾತು ಮಾತಿಗೂ ಮೈ ಕೈ ಮುಟ್ಟುತ್ತಿದ್ದ ಮನಸ್ಸು ಮತ್ತೆ ಮತ್ತೆ ಅಂತಹ ಮಾತು ಕೇಳಲು ಬಯಸುತ್ತಿತ್ತು. ರಂಜಿತ್ ಮೊಬೈಲ್ ನಂಬರ್ “ರಂಜಿತಾ” ಎಂದು ನನ್ನ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡಿದ್ದೆ. ಕುಮಾರ ಎಂದೂ ನನ್ನ ಮೊಬೈಲ್ ಮುಟ್ಟಿದವನಲ್ಲ. ಆದರೂ ಅವನಿಗೆ ಸಂಶಯ ಬರಬಾರದು ಅನಿಸಿತ್ತು.
ಆಫೀಸ್ನಲ್ಲಿ ನೂರಾರು ಕರೆಗಳನ್ನು ಸ್ವೀಕರಿಸಿ ಉತ್ತರ ಕೊಡಬೇಕಿತ್ತು. ೮ ವರ್ಷದಿಂದಲೂ ಅದೇ ಕೆಲಸ ಸಂಬಳ ೧೨ ಸಾವಿರ ದಾಟಿರಲಿಲ್ಲ. ಮುಂದಿನ ಭಾನುವಾರಕ್ಕೆ ಮದುವೆಯಾಗಿ ೭ ವರ್ಷಗಳು ತುಂಬುತ್ತದೆ. ಕುಮಾರ ಒಂದು ಕಾರ್ ಶೋರೂಮ್ನಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದ . ಸಂಬಳವೂ ಹೆಚ್ಚೇನಿರಲಿಲ್ಲ. ಚಿನ್ನು ಹುಟ್ಟಿದ ಮೇಲೆ ನನ್ನ ಆಸೆ ಆಕಾಂಕ್ಷೆಗಳು ಮೂಲೆ ಸೇರಿದ್ದವು . ರಜಾ ದಿನಗಳನ್ನು ಬಿಟ್ಟರೆ ಜೀವನ ಯಾಂತ್ರಿಕವಾಗಿತ್ತು. ಕುಮಾರ ಅವನ ಕೆಲಸದಲ್ಲಿ ಮುಳುಗಿರುತ್ತಿದ್ದ , ಚಿನ್ನು ಇಲ್ಲದಿದ್ದರೆ ಜೀವನ ನೀರಸವಾಗುತ್ತಿತ್ತೋ ಏನೋ ಎಂದು ಅನಿಸುತ್ತಿತ್ತು.
ರಂಜಿತ್ ಕನಕಪುರ ರೋಡ್’ನಲ್ಲಿ ಒಂದು ಸುಂದರ ರೆಸಾರ್ಟ್ ಇದೆ ಅಲ್ಲಿ ರೈನ್ ಡಾನ್ಸ್ ಚೆನ್ನಾಗಿರತ್ತೆ . ನಿಮ್ಮ ಜೊತೆ ಹೋಗುವ ಅವಕಾಶ ಅದೃಷ್ಟ ನನಗೆ ಇದೆಯಾ?. ನಾನು “ಇಲ್ಲ ನಾನು ಬರುವುದಿಲ್ಲ” ಎಂದೆ. “ನಾಳೆ ಶನಿವಾರ ರೆಡಿಯಾಗಿರಿ ನೀವು ಬಂದೇ ಬರುತ್ತೀರಾ” ಎಂದು ಹೇಳಿದ್ದ. ನನಗೆ ರೆಸಾರ್ಟ್, ರೈನ್ ಡಾನ್ಸ್ ಅಂದರೆ ತುಂಬಾ ಆಸೆಯಿತ್ತು. ಕುಮಾರ ಯಾವುದೊ ಕಾರಣಗಳಿಂದ ಅದನ್ನು ತಪ್ಪಿಸಿದ್ದ. ರೈನ್ ಡಾನ್ಸ್’ನಲ್ಲಿ ಮೈ ಮರೆತು ಕುಣಿಬೇಕು ಎಂಬ ಆಸೆ ಆಸೆಯಾಗಿಯೇ ಇತ್ತು.
ಮರುದಿನ ಎಂದಿನಂತೆ ಆಫೀಸಿಗೆ ಹೊರಟಿದ್ದೆ. ರಂಜಿತ್ ಕಾರು ಕನಕಪುರ ರೋಡ್ ಕಡೆಗೆ ತಿರುಗಿಸಿದ. ನಾನು ಬೇಡ ಬೇಡ ಅಂತ ಹೇಳಿದೆ. ಅವನು “ನಿಮಗೊಂದು ಸರಪ್ರೈಜ್ ಇದೆ. ಅವನ ಕಣ್ಣುಗಳ ಅತೀವ ಬೇಡಿಕೆಗೆ ಮೌನವಾದೆ.
ರೆಸಾರ್ಟ್’ನಲ್ಲಿ ಹಿನ್ನೆಲೆ ಹಾಡುಗಳು ರಂಗೇರಿತ್ತು. ರೈನ್ ಡಾನ್ಸ್ ಆರಂಭವಾಗಿತ್ತು. ರಂಜಿತ್ ನನ್ನ ಕೈ ಹಿಡಿದು ಬನ್ನಿ ಬನ್ನಿ ಎನ್ನುತ್ತಿದ್ದ. ಯಾಕೋ ಕುಮಾರನ ನೆನಪಾಯಿತು. ಬಟ್ಟೆ ಒದ್ದೆಯಾದರೆ ಬೇರೆ ಇಲ್ಲ ಎಂದು ಹೇಳಿ ಮೆಟ್ಟಿಲುಗಳ ಮೇಲೆ ಕುಳಿತೆ. ರಂಜಿತ್ ಎರಡು ತಟ್ಟೆಗಳಲ್ಲಿ ಬಫೆ ಊಟ ತೆಗೆದುಕೊಂಡು ಬಂದ . ಒಳ್ಳೆಯ ಊಟ ಸುತ್ತಲೂ ಮಳೆಯಲ್ಲಿ ನೃತ್ಯ ಹಿನ್ನೆಲೆಯಲ್ಲಿ ಹಾಡುಗಳು ಮತ್ತು ಬರಿಸುವಂತೆ ಇತ್ತು. ಊಟದ ನಂತರ ರಂಜಿತ್ ಜೇಬಿನಿಂದ ಒಂದು ಪೊಟ್ಟಣ ತೆಗೆದ. ಅದರಲ್ಲಿ ಆ ಕೆಂಪು ಕಲ್ಲಿನ ಬಳೆ. ನೋಡುತ್ತಾ ಅದನ್ನು ಅವನ ಕೈಯಿಂದ ತೆಗೆದುಕೊಂಡೆ. ಆ ಕೆಂಪು ಕಲ್ಲುಗಳು ಕಣ್ಣಿಗೆ ಕೋರೈಸುತ್ತಿದ್ದವು. ರಂಜಿತ್ ಅದನ್ನು ಕೈಗೆ ತೆಗೆದುಕೊಂಡು “ಈ ಅಂದದ ಕೈಗಳಿಗೆ ನಾನು ತೊಡಿಸುತ್ತೇನೆ ” ಎಂದ. ಬಹುಶ ನಾನು ಅವನ ತೋಳುಗಳ ಮಧ್ಯೆ ಇದ್ದೆ ಅನಿಸಿತು. ಯಾವುದೋ ಮತ್ತಿನ ಭಾವ ಆವರಿಸಿತು. ನನ್ನ ಮೊಬೈಲ್ ಗುಣುಗುಣಿಸಿತು . ಹಾಗೆಯೇ ಚಾಚಿ ಮೊಬೈಲ್ ಎತ್ತಿಕೊಂಡೆ. ” ಮಮ್ಮಿ , ಮಮ್ಮಿ, ನನಗೆ ಜ್ವರ ಬಂದು ಬಿಟ್ಟಿದೆ ” ಚಿನ್ನು ಮುದ್ದು ಮುದ್ದಾದ ಧ್ವನಿ ಕೇಳಿಸಿತು. ತಕ್ಷಣ ಬೆಚ್ಚಿಬಿದ್ದೆ. ರಂಜಿತ್’ನ ಕೈ ಬಿಡಿಸಿಕೊಂಡು ವೇಗವಾಗಿ ಹೊರನಡೆದೆ. “ಮೇಡಂ ಏನಾಯಿತು ? ಕೆಂಪಿನ ಬಳೆಗಳು” ರಂಜಿತ್ ಮಾತುಗಳು ಮುಗಿಯುವ ಮುನ್ನವೇ ಹೊರನಡೆದಿದ್ದೆ. ಗೇಟಿನ ಬಳಿ ಆಟೋ ಹಿಡಿದು ಮನೆಯತ್ತ ಸಾಗಿದೆ. ತಣ್ಣನೆಯ ಗಾಳಿ ಮುಖಕ್ಕೆ ಎರಚಿದಂತೆ ಬುದ್ದಿ ಜಾಗೃತವಾಯಿತು. ರಂಜಿತ್’ನ ಮೊಬೈಲ್ ನಂಬರ್ ಡಿಲೀಟ್ ಮಾಡಿದೆ.
ಚಿನ್ನು ಸ್ವಲ್ಪ ಮೈ ಬೆಚ್ಚಗಾದರು “ಮಮ್ಮಿ ನನಗೆ ಜ್ವರ ಬಂದಿದೆ ” ಅಂತ ಬ್ರೆಡ್ ತಿನ್ನಲು ಉಪಾಯ ಮಾಡುತ್ತಿದ್ದಳು. ಆದರೆ ಹಿಂದಿನ ದಿನ ಮಳೆಯಲ್ಲಿ ಆಡಿದ್ದು ನಿಜಕ್ಕೂ ಜ್ವರ ಬಂದಿರಬೇಕು ಅನಿಸಿತು. ಅವಳ ಸ್ಕೂಲ್’ನಿಂದ ಬೇಗ ಕಳಿಸಿರಬೇಕು. ಕುಮಾರನಿಗೂ ಸ್ಕೂಲ್’ನಿಂದ ಫೋನ್ ಮಾಡಿರಬೇಕು. ಯೋಚಿಸುತ್ತ ಆಟೋದವನಿಗೆ ಬೇಕರಿ ಪಕ್ಕ ನಿಲ್ಲಿಸಲು ಹೇಳಿದೆ. ಒಂದು ಬ್ರೆಡ್ ಜೊತೆಗೆ ಜಾಮ್ ಕೊಂಡುಕೊಂಡೆ. ಪಕ್ಕದಲ್ಲಿ ಕಣ್ವ ಮಾರ್ಟ್ ಇತ್ತು. ತಕ್ಷಣ ಕುಮಾರನ ನೆನಪಾಯಿತು. ನಾಳೆ ಮದುವೆಯ ಆನಿವರ್ಸರಿ. ಕುಮಾರನಿಗೊಂದು ಶರ್ಟ್ ತೆಗೆದುಕೊಂಡು ಮನೆಯತ್ತ ಸಾಗಿದೆ.
ಮನೆಗೆ ಬಂದಾಗ ಚಿನ್ನು ಬೆಚ್ಚಗೆ ಮಲಗಿದ್ದಳು. ಕುಮಾರ ಯಾವುದೊ ಪುಸ್ತಕ ಓದುತ್ತಿದ್ದ. ನಾನು ಚಿನ್ನುಗೆ ಹಾಲು ತೆಗೆದುಕೊಂಡು ಅವಳನ್ನು ಎಬ್ಬಿಸಿದೆ. ಬ್ರೆಡ್ ನೋಡಿದ ತಕ್ಷಣ ಅವಳ ಮುಖ ಅರಳಿತು. ನನ್ನಲಿ ಅಪರಾಧಿ ಭಾವನೆಯಿಂದ ತಲೆ ತಗ್ಗಿಸಿ ಕುಳಿತಿದ್ದೆ . ಕುಮಾರ ನನ್ನ ಬೆನ್ನ ಹಿಂದೆ ನಿಂತು ನನ್ನ ಹೆಗಲ ಮೇಲೆ ಸೀರೆಯನ್ನು ಹರಡಿದ್ದ. ದಟ್ಟ ನೀಲಿ ನನಗೆ ಇಷ್ಟದ ಬಣ್ಣ . ಮೈಸೂರ್ ಸಿಲ್ಕ್ ನನಗೆ ಅರಿವಿಲ್ಲದಂತೆ ಕಣ್ಣಲ್ಲಿ ನೀರು ತುಂಬಿತ್ತು. ಕುಮಾರ “ಇದೇನಿದು ಮಗಳಿಗೆ ಜ್ವರ ಬಂದ್ರೆ ಅಳ್ತೀಯಾ ” ಹೇಳಿದ. ನಾನು ಒಂದು ಕಡೆ ಚಿನ್ನುವನ್ನು ಇನ್ನೊಂದು ಕಡೆ ಕುಮಾರನನ್ನು ಅಪ್ಪಿದೆ. “ಲೇ ಹುಚ್ಚಿ ನಿನಗೆ ಸೀರೆ ತರದಿದ್ದರೂ ಅಳ್ತೀಯಾ ತಂದರೂ ಅಳ್ತೀಯಾ ” ತಲೆಯ ಮೇಲೆ ಕೈಯಾಡಿಸಿ ಗಟ್ಟಿಯಾಗಿ ನಕ್ಕ.
ಚಿತ್ರ: ಇಂಟರ್’ನೆಟ್