ಅಂಕಣ

ಯಾರು ಮಹಾತ್ಮ?- ೧೩

ಹಿಂದಿನ ಭಾಗ:

ಯಾರು ಮಹಾತ್ಮ-೧೨

ದಾಳಿಕೋರರ ವಿರುದ್ಧ ಸಶಸ್ತ್ರ ಹೋರಾಟವೇ ನಮ್ಮ ಮಾರ್ಗ. ಶತ್ರುವನ್ನು ನಿಗ್ರಹಿಸುವುದು, ಅನಿವಾರ್ಯವಾದರೆ ತೊಡೆದುಹಾಕುವುದು ನಮ್ಮ ನಿಯಮ. ಚತುರೋಪಾಯಗಳಾದ ಸಾಮ, ದಾನ, ಭೇದ ಹಾಗೂ ದಂಡ ಇವು ನಮಗೆ ಸಮ್ಮತವೇ. ನಮ್ಮಲ್ಲಿ ವಿವೇಚನೆ ಇರುವುದು ಧರ್ಮ-ಅಧರ್ಮಗಳ ನಡುವೆ ಮಾತ್ರ. ಹಿಂಸೆ-ಅಹಿಂಸೆಗಳ ಕುರಿತಂತೆ ಅಲ್ಲ. ನಾರದ ಪರಿವ್ರಾಜಕ ಉಪನಿಷದ್ ಹಾಗೂ ಮನುಸ್ಮೃತಿಗಳಲ್ಲಿ

“ದ್ರುತಿ ಕ್ಷಮಾ ದಾಮಸ್ತೇಯಮ್ ಶೌಚಮಿಂದ್ರಿಯ ನಿಗ್ರಹ

ಹ್ರೀರ್ವಿದ್ಯಾ ಸತ್ಯಮಾಕ್ರೋಧೋ ದಶಮಮ್ ಧರ್ಮ ಲಕ್ಷಣಮ್” ಎಂದಿದೆ. ಅಂದರೆ ಸಂತಸ, ಕ್ಷಮೆ, ಆತ್ಮನಿಗ್ರಹ, ಕಳ್ಳತನ ಮಾಡದಿರುವುದು, ಶುಚಿತ್ವ, ಬ್ರಹ್ಮಚರ್ಯ, ಗ್ರಂಥಗಳ ರಹಸ್ಯ ಅರಿಯುವುದು, ಸ್ವಯಂಜ್ಞಾನ, ಸತ್ಯ, ಶಾಂತಚಿತ್ತತೆ ಇವೇ ಧರ್ಮದ ಹತ್ತು ಲಕ್ಷಣಗಳು. ಅಹಿಂಸಾ ಪರಮೋ ಧರ್ಮ ಎನ್ನುವುದು ಬ್ರಾಹ್ಮಣ ಮತ್ತು ಸಂನ್ಯಾಸ ಧರ್ಮಗಳಲ್ಲಿ ಮಾತ್ರ ಉಲ್ಲೇಖಿಸಲ್ಪಟ್ಟಿದೆಯೇ ಹೊರತು ಇಡೀ ಸಮಾಜಕ್ಕಲ್ಲ. ಅಲ್ಲದೆ “ಅಹಿಂಸಾ ಪರಮೋ ಧರ್ಮ” ಎನ್ನುವುದು “ಧರ್ಮ ಹಿಂಸಾ ತಥೈವಚಾ” ಎಂದು ಮುಂದುವರೆಯುತ್ತದೆ. ಅಂದರೆ ಧರ್ಮ ರಕ್ಷಣೆಗೆ ಹಿಂಸೆ ಅನಿವಾರ್ಯವಾದಲ್ಲಿ ಮಾಡಲೇಬೇಕು. ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟ ಹೆಸರು “ಶಿವಾಜಿ”! ಭಾರತದಲ್ಲಿ ಮುಸ್ಲಿಮರ ಆಡಳಿತಕ್ಕೆ ಸಿಂಹಸ್ವಪ್ನನಾಗಿ ಅವರನ್ನು ಧ್ವಂಸಗೊಳಿಸಿದ್ದು ಛತ್ರಪತಿ ಶಿವಾಜಿ ಮಹಾರಾಜರು ಆರಂಭಿಸಿದ ವೀರೋಚಿತ ಹೋರಾಟ. ಸ್ವಾಭಿಮಾನಿ ರಾಣಾಪ್ರತಾಪನ ಹೆಸರು ಕೇಳಿದರೇನೇ ಮೈ ರೋಮಾಂಚನವಾಗುತ್ತದೆ. ಗುಬ್ಬಚ್ಚಿಗಳನ್ನು ಗಿಡುಗಗಳನ್ನಾಗಿ ಬದಲಿಸಿ ಧರ್ಮರಕ್ಷಣೆ ಮಾಡಿದ ತ್ಯಾಗಿ ಗುರುಗೋವಿಂದ ಸಿಂಗ್. ನಮ್ಮ ದೇಶದ ಮೇಲಿನ ವಿದೇಶೀಯರ ಆಕ್ರಮಣವನ್ನು ಪ್ರತಿಭಟಿಸಿದ, ಮತಾಂಧರ ದುಷ್ಕೃತ್ಯ,ಅತ್ಯಾಚಾರಗಳಿಂದ ದೇಶೀಯರನ್ನು ರಕ್ಷಿಸಿದ, ತಾಯ್ನಾಡನ್ನು ದಾಳಿಕೋರರಿಂದ ಮರಳಿ ಗೆದ್ದ ಇಂತಹ ಮಹಾನ್ ನಾಯಕರು ಗಾಂಧಿಯ ಕಣ್ಣಲ್ಲಿ ದಾರಿ ತಪ್ಪಿದ ದೇಶಭಕ್ತರಾಗಿಬಿಟ್ಟರು. ಅಲ್ಲದೆ ಅಲ್ಲೂರಿ ಸೀತಾರಾಮ ರಾಜು ಅವರ ವೀರೋಚಿತ ಸಾಹಸಗಳನ್ನು ವಿಕೃತ ಕ್ರಮಗಳು ಎಂದು ಟೀಕಿಸಿದರು(ಗಾಂಧೀಜಿ ಇನ್ ಆಂಧ್ರಪ್ರದೇಶ-ತೆಲುಗು ಅಕಾಡೆಮಿ). ಇದೇ ಕಾರಣವೊಡ್ಡಿ ಗಾಂಧಿ ಭಗತನ ಗಲ್ಲು ಶಿಕ್ಷೆ ತಪ್ಪಿಸುವ ಮನವಿಗೆ ಸಹಿ ಹಾಕಲು ನಿರಾಕರಿಸಿದ್ದು(1931ರ ಮಾರ್ಚಿನಲ್ಲಿ ನಡೆದ ಕರಾಚಿ ಅಧಿವೇಶನ).

              ಭಾರತದ ಸ್ವಾತಂತ್ರ್ಯ ಪಡೆವ ಇಚ್ಛೆಯನ್ನು ದ್ವಿಗುಣಗೊಳಿಸಿದ್ದು ವಂದೇ ಮಾತರಂ. ವಂಗಭಂಗವಾದಾಗ ದೇಶೀಯರನ್ನು ಬಡಿದೆಬ್ಬಿಸಿದ ರಣಕಹಳೆಯದು. ಮುಂಜಾನೆಯ ಸಮಯದಲ್ಲಿ ಅಲೌಕಿಕ ಭಾವದಲ್ಲಿ ದೃಷ್ಟಾರ ಬಂಕಿಮರಿಗೆ ಮೂಡಿದ ದರ್ಶನ ವಂದೇಮಾತರಂ. ಬ್ರಿಟಿಷರೆದೆಯನ್ನು ನಿದ್ದೆಯಲ್ಲೂ ಢವಗುಟ್ಟಿಸಿದ ಮಂತ್ರವದು. ಬ್ರಿಟಿಷರೆಷ್ಟು ಬೆದರಿದ್ದರೆಂದರೆ ವಂದೇಮಾತರಂ ಗಟ್ಟಿಗಂಟಲಿನಲ್ಲಿ ಹೇಳುವುದನ್ನೇ ನಿಷೇಧಿಸಿದ್ದರು. ಮುಸ್ಲಿಮರನ್ನು ಸಂತೈಸುವ ಏಕೈಕ ಉದ್ದೇಶದಿಂದ ಇಂತಹ ಸ್ವಾತಂತ್ರ್ಯ ಮಂತ್ರವನ್ನು ಜನರ ಮನಸ್ಸಿನಿಂದ ಮರೆಯಾಗುವಂತೆ ಮಾಡಲು ಪಾಕಿಸ್ತಾನ ಸೃಷ್ಟಿಗೆ ಮೂಲಕಾರಣಕರ್ತೃಗಳಲ್ಲೊಬ್ಬನಾದ ಮಹಮ್ಮದ್ ಇಕ್ಬಾಲನ “ಸಾರೆ ಜಹಾಂಸೆ ಅಚ್ಛಾ” ಹಾಡನ್ನು ವಂದೇ ಮಾತರಂ ಜೊತೆ ಹಾಡುವುದನ್ನು ಗಾಂಧಿ ನೇತೃತ್ವದ ಕಾಂಗ್ರೆಸ್ ಜನಪ್ರಿಯಗೊಳಿಸಿತು. ಮಾತ್ರವಲ್ಲ ದೇಶವನ್ನು ತಾಯಿ ಎಂದು ಒಪ್ಪಿಕೊಳ್ಳದ ಮುಸ್ಲಿಮರ ಮನೋಭೂಮಿಕೆಯನ್ನು ಸಂತೈಸುವ ಸಲುವಾಗಿ ವಂದೇಮಾತರಂನ ಮೊದಲೆರಡು ಚರಣಗಳನ್ನಷ್ಟೇ ಉಳಿಸಿಕೊಂಡು ಉಳಿದವುಗಳನ್ನು ಕೈಬಿಟ್ಟಿತು. “ವಂದೇ ಮಾತರಂನ ಮಧ್ಯ ಮತ್ತು ಕೊನೇ ಚರಣಗಳಲ್ಲಿ ಭಾರತದ ಅನ್ಯ ಮತೀಯರ ಧಾರ್ಮಿಕ ಸಿದ್ಧಾಂತಗಳಿಗೆ ಅನುಕೂಲಕರವಲ್ಲದ ಸೂಚನೆ ಮತ್ತು ಧಾರ್ಮಿಕ ತತ್ವಗಳಿವೆ. ಹೀಗಾಗಿ ವಂದೇ ಮಾತರಂಗೆ ಪರ್ಯಾಯವಾಗಿ ಅಥವಾ ಹೆಚ್ಚುವರಿಯಾಗಿ ಯಾವುದೇ ಆಕ್ಷೇಪಣೆಗಳಿಲ್ಲದೆ ಹಾಡು ಹಾಡುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ವಾತಂತ್ರ್ಯವಿದೆ.” ಎಂದು ಗಾಂಧಿ ನೇತೃತ್ವದ ಕಾಂಗ್ರೆಸ್ ನಿರ್ಣಯ ಕೈಗೊಂಡಿತು. “ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಸ್ಥಳದಲ್ಲಿ ಸೇರಿದಾಗ ವಂದೇ ಮಾತರಂ ಹಾಡುವ ಕುರಿತಾಗಿ ಜಗಳ ಉಂಟಾದರೆ ನಾನು ಸಹಿಸುವುದಿಲ್ಲ. ಹೀಗಾಗಿ ಸಾರ್ವಜನಿಕ ಸ್ಥಳದಲ್ಲಿ ವಂದೇ ಮಾತರಂ ಹಾಡಬಾರದು” ಎಂದು 1938ರ ಮಾರ್ಚ್ 17ರಂದು ಗಾಂಧಿ ನೆಹರೂವಿಗೆ ಸಲಹೆ ನೀಡಿದರು.(ವಂದೇ ಮಾತರಂ ಗಾಥಾ- ಸೇವಿಕಾ ಪ್ರಕಾಶನ). ವಿಪರ್ಯಾಸವೆಂದರೆ 1930ರ ದಶಕದಲ್ಲಿ ನಡೆದ ಖಿಲಾಫತ್ ಆಂದೋಲನದಲ್ಲಿ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಬದಲಿಗೆ “ಅಲ್ಲಾ ಹೋ ಅಕ್ಬರ್” ಎಂದು ಕೂಗುವಾಗ ಗಾಂಧಿಗೆ ಧಾರ್ಮಿಕ ತತ್ವಗಳ ವೈರುಧ್ಯ ನೆನಪಿಗೆ ಬರಲಿಲ್ಲ! ಆಗ ದೇಶಕ್ಕೆ ಸಂಬಂಧ ಪಡದುದನ್ನು ಚಳುವಳಿಯಾಗಿ ತೆಗೆದುಕೊಂಡ ಗಾಂಧಿಗೆ ಈಗ ದೇಶವನ್ನೇ ತಾಯಿ ಎಂದು ಪೂಜಿಸುವ ಮಂತ್ರವೊಂದು ದೇಶವನ್ನು ಸ್ವತಂತ್ರಗೊಳಿಸುವ ಕಾರ್ಯಕ್ಕೆ “ಮುಸಲ್ಮಾನರ ಕಾರಣದಿಂದ” ಬೇಡವಾದುದು ವಿಪರ್ಯಾಸವಲ್ಲದೆ ಇನ್ನೇನು. ತುಷ್ಟೀಕರಣದ ಗುರು ಗಾಂಧಿ ಎಂದರೆ ತಪ್ಪಾದೀತೇ?

             1923ರ ಕಾಂಗ್ರೆಸ್ ಕಾಕಿನಾಡ ಅಧಿವೇಶನದಲ್ಲಿ ಮಹಾರಾಷ್ಟ್ರದ ವಿಷ್ಣುದಿಗಂಬರ ಪಲುಸ್ಕರ್ ವಂದೇ ಮಾತರಂ ಹಾಡಲು ಅನುವಾದಾಗ ಅಧ್ಯಕ್ಷ ಮಹಮ್ಮದ್ ಅಲಿ ಇಸ್ಲಾಮಿನಲ್ಲಿ ಸಂಗೀತ ಹಾಡುವುದನ್ನು ನಿಷೇಧಿಸಲಾಗಿದೆ. ತಾವು ವಂದೇ ಮಾತರಂ ಹಾಡಲು ಅವಕಾಶ ಕೊಡುವುದಿಲ್ಲ ಎಂದಾಗ ಯಾರೂ ಮಾತಾಡಲಿಲ್ಲ. ಆದರೆ ಪಲುಸ್ಕರ್ “ಇದೇನು ಮಸೀದಿಯಲ್ಲ. ರಾಷ್ಟ್ರೀಯ ಕಾಂಗ್ರೆಸಿನ ಅಧಿವೇಶನ. ನಾನು ವಂದೇ ಮಾತರಂ ಹಾಡುವುದನ್ನು ತಡೆಯಲು ನಿಮಗೆ ಅಧಿಕಾರವಿಲ್ಲ. ಇಲ್ಲಿ ಹಾಡುವುದು ನಿಮ್ಮ ಮತದ ತತ್ವಕ್ಕೆ ವಿರುದ್ಧವಾಗುತ್ತದೆಯೆಂದಾದರೆ ನಿಮ್ಮ ಅಧ್ಯಕ್ಷೀಯ ಮೆರವಣಿಗೆಯಲ್ಲಿ ಸಂಗೀತವನ್ನು ಹೇಗೆ ಸಹಿಸಿಕೊಂಡಿರಿ” ಎಂದು ಕೇಳಿದಾಗ ಮೌಲಾನ ಬಳಿ ಉತ್ತರವಿರಲಿಲ್ಲ. ಪಲುಸ್ಕರ್ ಗಾಯನ ಮುಂದುವರಿಸಿದಾಗ ಆತ ವೇದಿಕೆಯಿಂದ ನಿರ್ಗಮಿಸಿದ. ಪವಿತ್ರ ರಾಷ್ಟ್ರಗೀತೆಗೆ ಕಾಂಗ್ರೆಸ್ ಅಧ್ಯಕ್ಷರಿಂದ ಅಗೌರವ ಪ್ರದರ್ಶಿತವಾಗುತ್ತಿದ್ದರೂ ಕಾಂಗ್ರೆಸ್ ಮಾರ್ಗದರ್ಶಿ ಗಾಂಧಿ ಮೂಕಪ್ರೇಕ್ಷಕರಾಗಿ ಕುಳಿತಿದ್ದರು! ಹಾಗೆಯೇ ಇನ್ನೊಂದು ವಿಚಾರವನ್ನು ಗಮನಿಸಿ: ದೇಶದ ಸ್ವಾತಂತ್ರ್ಯ ಹೋರಾಟಕ್ಕೆಂದು ರೂಪಿತವಾದ ಕಾಂಗ್ರೆಸ್ ಸಂಘಟನೆ ಅಧಿವೇಶನಕ್ಕೆ ಅಧ್ಯಕ್ಷರನ್ನು ಭಾಜಾಭಜಂತ್ರಿಗಳೊಂದಿಗೆ ಮೆರವಣಿಗೆಯಲ್ಲಿ ಬರಮಾಡಿಕೊಳ್ಳುತ್ತಿತ್ತು. ಯಾರದ್ದೋ ಹಣ, ಎಲ್ಲಮ್ಮನ ಜಾತ್ರೆ! ದೇಶೀಯರು ಸ್ವಾತಂತ್ರ್ಯ ಚಳವಳಿಗಾಗಿ ಕೊಟ್ಟ ಹಣ ಕಾಂಗ್ರೆಸ್ಸಿಗರ ಮೋಜುಮಸ್ತಿಗಾಗಿ ಬಳಕೆಯಾಗುತ್ತಿದ್ದ ಬಗೆ ಇದು. ಅಂತಹ ದುಸ್ತರ ಸನ್ನಿವೇಶದಲ್ಲಿ ಈ ಮೆರವಣಿಗೆ, ಮೆರೆದಾಟಗಳ ಅಗತ್ಯವಿತ್ತೇ?

             ಪಾವಿತ್ರ್ಯತೆ, ಪೂರ್ಣತೆ ಹಾಗೂ ಪರಿಪೂರ್ಣ ರಾಷ್ಟ್ರ ಜೀವನವನ್ನು ಜೀವಂತವಾಗಿ ಅಭಿವ್ಯಕ್ತಿಸುವ ಭಗವಾಧ್ವಜ ನಮ್ಮ ರಾಷ್ಟ್ರಧ್ವಜ. ನಮ್ಮ ಧರ್ಮ, ಸಾಂಸ್ಕೃತಿಕ ಪರಂಪರೆ, ಆದರ್ಶಗಳನ್ನು ಪ್ರತಿನಿಧಿಸುವ ಇದು ಬಲಿದಾನದ ಸಂದೇಶ ನೀಡುತ್ತದೆ. ಬಲಿದಾನದ ಪವಿತ್ರ ಅಗ್ನಿ ಹಾಗೂ ಕತ್ತಲೆಯನ್ನು ಬೆನ್ನತ್ತಿರುವ ಕೇಸರಿ ಸೂರ್ಯಕಿರಣದ ವರ್ಣವನ್ನಿದು ಒಳಗೊಂಡಿದೆ. ವೇದ, ಪುರಾಣ ಹಾಗೂ ಮಹಾಕಾವ್ಯಗಳಲ್ಲಿ ವರ್ಣಿಸಲ್ಪಟ್ಟಿರುವ ರಾಮ, ಕೃಷ್ಣ, ಶಿವಾಜಿ, ಪ್ರತಾಪರಾದಿಯಾಗಿ 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಬಳಕೆಯಾದದ್ದು ಇದೇ ಧ್ವಜವೇ. ನಮ್ಮ ರಾಷ್ಟ್ರೀಯತೆಯ ಏಕಮಾತ್ರ ನೈಜ ಸಂಕೇತವದು. 1931ರಲ್ಲಿ ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಧ್ವಜ ಆಯ್ಕೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಏಳು ಜನರ ಸಮಿತಿಯೊಂದರ ನೇಮಕವಾಯಿತು. ಸರ್ದಾರ್ ಪಟೇಲ್, ಮೌಲಾನ ಆಜಾದ್, ತಾರಾ ಸಿಂಗ್, ನೆಹರೂ, ಕಾಲೇಕರ್, ಹರ್ಡೀಕರ್, ಪಟ್ಟಾಭಿ ಈ ಸಮಿತಿಯಲ್ಲಿದ್ದ ಸದಸ್ಯರು. ಈ ಸಮಿತಿ ಎಲ್ಲಾ ಕಾಂಗ್ರೆಸ್ ಸಮಿತಿಗಳು ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಿತು. ಧ್ವಜವು ಯಾವುದೇ ಕೋಮು ಚಿಹ್ನೆ ಹೊಂದಿರಬಾರದು ಎನ್ನುವುದು ಸಮಿತಿಯ ಸರ್ವಸಮ್ಮತ ಅಭಿಪ್ರಾಯವಾಗಿತ್ತು. “ಹೊಸ ಧ್ವಜವನ್ನು ಶಿಫಾರಸ್ಸು ಮಾಡುವಾಗ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ಕಲಾತ್ಮಕವಾದ, ಆಯತಾಕಾರದ, ಏಕಬಣ್ಣದ,  ಕೋಮುಯೇತರವಾದುದನ್ನು ಅಂಗೀಕರಿಸಬೇಕು. ದೇಶದ ಸುದೀರ್ಘ ಪರಂಪರೆಯೊಂದಿಗೆ ಸಹಯೋಗ ಹೊಂದಿರುವ, ಬೇರೆ ಎಲ್ಲಾ ವರ್ಣಗಳಿಂದ ಭಿನ್ನವಾದ ವರ್ಣವಾದ ಕೇಸರಿಯನ್ನು ನಾವು ಶಿಫಾರಸ್ಸು ಮಾಡುತ್ತೇವೆ” ಎಂದು ಧ್ವಜ ಸಮಿತಿ ಹೇಳಿತು(ದಿ ಟ್ರ್ಯಾಜಿಕ್ ಸ್ಟೋರಿ ಆಫ್ ಪಾರ್ಟೀಷನ್-ಹೊ.ವೆ. ಶೇಷಾದ್ರಿ)

              ಆದರೆ ಧ್ವಜ ಸಮಿತಿಯ ನಿರ್ಣಯವನ್ನು ಗಾಂಧಿ ತಿರಸ್ಕರಿಸಿದರು. ನಮ್ಮ ಪಾರಂಪರಿಕ ಧ್ವಜವನ್ನು ಬದಿಗೆ ತಳ್ಳಿದರು. ಬದಲಾಗಿ ತ್ರಿವರ್ಣ ಧ್ವಜವನ್ನು ಪರಿಚಯಿಸಿದರು. ಆ ಧ್ವಜದಲ್ಲಿ ಕೇಸರಿ ಹಿಂದೂಗಳನ್ನು, ಹಸಿರು ಮುಸ್ಲಿಮರನ್ನು, ಬಿಳಿ ಕ್ರೈಸ್ತರನ್ನು ಹಾಗೂ ಇತರ ಸಮುದಾಯಗಳನ್ನು ಪ್ರತಿನಿಧಿಸಬೇಕೆಂದು ಅವರು ಸಲಹೆ ಮಾಡಿದರು. ಹೀಗೆ ಭಾರತ ಭಿನ್ನ ರಾಷ್ಟ್ರಗಳ ಸಂಯೋಜನೆ ಎನ್ನುವ ಬ್ರಿಟಿಷರ ವಾದವನ್ನು ಗಾಂಧಿ ಪುರಸ್ಕರಿಸಿದಂತಾಯಿತು. ಗಾಂಧಿ ಆಯ್ಕೆಗೆ ಆಕ್ಷೇಪ ವ್ಯಕ್ತಪಡಿಸಲು ಸಮಿತಿಗೆ ಧೈರ್ಯವೇ ಇರಲಿಲ್ಲ. ಹೈಕಮಾಂಡ್ ಸಂಸ್ಕೃತಿ ಇಲ್ಲಿಂದಲೇ ಆರಂಭವಾಯಿತು. ಮೆಕಾಲೆ ಶಿಕ್ಷಣದ ಪ್ರಭಾವ ಗಾಂಧಿಯವರನ್ನೂ ಬಿಟ್ಟು ಹೋಗಲಿಲ್ಲ. ತ್ರಿವರ್ಣ ಧ್ವಜದಲ್ಲಿ ನೂಲುವ ಚಕ್ರದ ಬದಲು ಅಶೋಕ ಚಕ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ನಿರ್ಣಯಿಸಿತ್ತು. “ಅಶೋಕ ಚಕ್ರ ನೂಲುವ ಚಕ್ರದ ಜೊತೆ ಯಾವುದೇ ಸಾಮ್ಯ ಹೊಂದಿಲ್ಲ. ನೂಲುವ ರಾಟೆ ವೃದ್ಧೆಯೊಬ್ಬಳ ಸಮಾಧಾನ ಮತ್ತು ಗಾಂಧಿಯ ಗೊಂಬೆ. ಆದರೆ ಸ್ವರಾಜ್ಯ ಕೇವಲ ವೃದ್ಧೆಗೆ ಸೇರಿದ್ದಲ್ಲ. ಅದು ಯೋಧರಿಗೆ ಸಂಬಂಧಿಸಿದ್ದು. ಹೀಗಾಗಿ ನಾವು ಸಿಂಹಗಳಿಂದ ಸುತ್ತುವರಿಯಲ್ಪಟ್ಟ ಅಶೋಕ ಚಕ್ರವನ್ನು ಬಯಸುತ್ತೇವೆ. ನಾವು ಸಾಕಷ್ಟು ಹೇಡಿತನ ಪ್ರದರ್ಶಿಸಿದ್ದೇವೆ. ಕೇವಲ ಸಿಂಹ ಮಾತ್ರ ಕಾಡಿನ ರಾಜ. ಆಡು, ಕುರಿಗಳೆಲ್ಲಾ ಅದರ ಆಹಾರ” ಎಂದು ಕಾಂಗ್ರೆಸ್ಸಿಗರೊಬ್ಬರು ತೀಕ್ಷ್ಣವಾಗಿ ಹೇಳಿದಾಗಲೂ ಗಾಂಧಿ ಬದಲಾವಣೆಗೆ ಸಮ್ಮತಿಸಲಿಲ್ಲ. “ಈಗ ನಡೆಯುತ್ತಿರುವ ವ್ಯಾಖ್ಯಾನದಂತೆ ನಡೆಯುತ್ತಿರುವ ಧ್ವಜ ಎಷ್ಟೇ ಕಲಾತ್ಮಕವಾಗಿದ್ದರೂ ಅದಕ್ಕೆ ವಂದನೆ ಸಲ್ಲಿಸಲು ನಾನು ನಿರಾಕರಿಸುತ್ತೇನೆ” ಎಂದು ಕೆಟ್ಟ ಹಠ ಪ್ರದರ್ಶಿಸಿದರು(ಮಹಾತ್ಮಗಾಂಧಿ-ದಿ ಲಾಸ್ಟ್ ಫೇಸ್:ಪ್ಯಾರೇಲಾಲ್). ಹೀಗೆ ಒಬ್ಬನ ಹಠಕ್ಕೆ ಒಂದು ದೇಶದ ಧ್ವಜವೇ ಬದಲಾಯಿತು!

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!