ಕಥೆ

ಬಣ್ಣದ ಬದುಕು ಭಾಗ-೨

ಹಿಂದಿನ ಭಾಗ

ಎರಡೊ- ಎರಡೂವರೆ ವರ್ಷವೋ ಹೀಗೇ ಕಳೆಯಿತು. ದಿನದ ಕೂಳು ದಿನ ದುಡಿಯುವವರಿಗೆ ವಾರ ತಿಂಗಳು, ವರ್ಷಗಳ ಲೆಕ್ಕವೇಕೆ? ಇಂದು ಹೊಟ್ಟೆಗೆ ಸಿಕ್ಕಿದರೆ, ಇವತ್ತಿನ ದಿನ ಮುಗಿಯಿತು. ನಾಳೆಗೆ ಸಿಕ್ಕರೆ ಒಳ್ಳೆಯದು ಎಂಬ ಭರವಸೆಯಲ್ಲಿ ಮಲಗಿದರಾಯ್ತು. ಬಾಂಬೆ ಎಗ್ಗಿಲ್ಲದ ವೇಗದಲ್ಲಿ ಬೆಳೆಯುತ್ತಿತ್ತು. ಬಾಂಬೆಯೆಂಬ ಟ್ರೇನಿನಲ್ಲಿ ಒಂದಿಷ್ಟು ಶ್ರೀಮಂತರು ಎಸಿ ಬೋಗಿಯಲ್ಲಿ ಕುಳಿತು ಪಯಣವನ್ನು ಸವಿಯುತ್ತಿದ್ದರೆ, ಇನ್ನೊಂದಿಷ್ಟು ಜನ ಹೇಗೇಗೋ ಬಾಗಿಲಲ್ಲೇ ಜೋತಾಡುತ್ತ ಜೀವನ ಸಾಗಿಸುತ್ತಿದ್ದರು. ಗಾಲಿಯಡಿಗೆ ಒಂದಿಷ್ಟು ಜೀವಗಳು ನೂಚ್ಚುನೂರಾಗುತ್ತಿದ್ದರೂ ಟ್ರೇನಿನ ವೇಗಕ್ಕೇನೂ ತಡೆಯಿರಲಿಲ್ಲ.

ರವಿಯ ಜೀವನವೂ ಸಾಗುತ್ತಿತ್ತು. ರೋಡಿಗೆ ಕಪ್ಪು ಬಿಳಿ ಬಳಿಯುತ್ತಿದ್ದವನು ಈಗ ಮನೆ, ಬಿಲ್ಡಿಂಗುಗಳಿಗೆ ಬಣ್ಣ ಹೊಡೆಯುತ್ತಾನೆ. ಜುಹು ಬೀಚಿಗೆ ಹೋಗಿ ಆಗಾಗ ಬಂದ ಪ್ರವಾಸಿಗರ ಚಿತ್ರ ಬಿಡಿಸಿ ಕೊಟ್ಟು ಒಂದಿಷ್ಟು ದುಡಿಯುತ್ತಿದ್ದ. ಚೆಂಬೂರಿನಲ್ಲೊಂದು ಹತ್ತು ಬೈ ಎಂಟರ ಕೋಣೆಯೇ ಅವನ ಸಾಮ್ರಾಜ್ಯ. ಅಲ್ಲಿಲ್ಲಿ ಉಳಿದ ಬಣ್ಣ ತಂದು ಅಮಿತಾಭ್‍ನ, ರೇಖಾಳ ಮುಖಗಳನ್ನು ಬಿಡಿಸಲು ಒದ್ದಾಡುತ್ತಾನೆ. ಕೈಗಳಲ್ಲಿ ಮೊದಲಿನ ಚುರುಕಿಲ್ಲ. ರಸ್ತೆಯ ಡಾಂಬರು, ಬಿಲ್ಡಿಂಗಿನ ವೈಟ್ ವಾಷ್, ಮನೆಯ ರೆಡ್ ಅಕ್ಸೈಡುಗಳ ಬೆರಕೆಗೆ ಸೂಕ್ಷ್ಮತೆಯ ಸುಳಿವಿಲ್ಲ.

ಒಂದು ದಿನ ಪ್ರಭಾತ್ ನಗರದಲ್ಲಿದ್ದ ಸ್ಟುಡಿಯೋದ ಹಳೇ ಸೆಟ್ಟಿಗೆ ಹೊಸದಾಗಿ ಬಣ್ಣ ಹೊಡೆಸುತ್ತಿದ್ದರು. ರವಿ ಅದರ ಬೋರ್ಡಿಗೆ ಒಂದು ಸುಂದರ ಸೂರ್ಯಾಸ್ತದ ಚಿತ್ರ ಬಿಡಿಸುತ್ತಿದ್ದ. ಹಿಂದಿಂದ ಯಾರೋ ಬಂದು ನಿಂತು ಅವನ ಕೆಲಸ ನೋಡುತ್ತಿದ್ದರು. ಅವನು ಕೆಲಸ ಮುಗಿಸಿ ಏಣಿ ಇಳಿದು ಬಂದಾಗ ಅಲ್ಲಿದ್ದವನು,

“ರವಿ ತೂ ಹಿ ಹೈ ನಾ? ಕಾಮ್ ಅಚ್ಛಾ ಕರ್ತಾ ಹೈ ತೂ. ಮೇರೆ ಸಾಥ್ ಕಾಮ್ ಕರೇಗಾ?” ಎಂದ. ರವಿಗೆ ಚೂರು ಆಶ್ಚರ್ಯವಾದರೂ ಅದನ್ನು ತೋರಿಸಿಕೊಳ್ಳದೆ ಅಲಕ್ಷ್ಯದಿಂದ “ಕ್ಯಾ ಕಾಮ್?” ಎಂದು ಕೇಳಿದ.

“ಪೋಸ್ಟರ್ ಕಾ ಕಾಮ್ ಹೈ. ಪೈಸಾ ಭೀ ಅಚ್ಛಾ ಮಿಲೇಗಾ ಎಂದ.” ರವಿಗೆ ಅಂದು ಆದ ಸಂತೋಷ, ಆಶ್ಚರ್ಯ, ಖುಷಿಗಳಿಗ್ಯಾವುದಕ್ಕೂ ಮಿತಿಯಿರಲಿಲ್ಲ. ಅಂತೂ ಇಂತೂ ಬಾಂಬೆ ಅವನ ಕನಸು ನೆರವೇರಿಸಿತ್ತು.

ರವಿಗೆ ಕೆಲಸ ಕೊಟ್ಟ ದೇವಿ ಶೆಟ್ಟಿ, ಮೂಲತಃ ಕುಂದಾಪುರದವನು. ಹದಿನೈದನೇ ವಯಸ್ಸಿಗೇ ಬಾಂಬೆಗೆ ಬಂದವನು ಮಾಡದ ಕೆಲಸವಿರಲಿಲ್ಲ. ಈಗ ಸಿನೆಮಾದ ಪೋಸ್ಟರಿನ ಬಿಸಿನೆಸ್ಸಿಗೆ ಕೈ ಹಾಕಿ ಐದು ವರ್ಷವಾಗಿತ್ತು. ಅವನೇನು ಸ್ವತಃ ದೊಡ್ಡ ಪೇಂಟರಲ್ಲ, ಅವರಿವರ ಹತ್ತಿರ ಪೇಂಟಿಂಗಿನ ಕೆಲಸ ಮಾಡಿಸಿ ತಾನೊಂದಿಷ್ಟು ಕಮೀಷನ್ ಮುರಿದುಕೊಳ್ಳುತ್ತಿದ್ದುದಷ್ಟೇ ಆಗಿದ್ದರೂ ಅವನ ವ್ಯವಹಾರ ಸೂಕ್ಷ್ಮತೆಯಿಂದ ಅದು ಅವನಿಗೆ ಭಾರಿ ಲಾಭ ತಂದುಕೊಟ್ಟಿತ್ತು. ಕೆಲಸದ ವರ್ಕ್ ಲೋಡು ಜಾಸ್ತಿ ಆಗಿ ಪೇಂಟರು ಸಿಗದೇ ಒದ್ದಾಡುತ್ತಿದ್ದ ಅವನ ಕಣ್ಣಿಗೆ ರವಿ ಬಿದ್ದಿದ್ದ. ರವಿಯ ಕಥೆ ಅವರಿವರಿಂದ ಕೇಳಿ ಅರ್ಧ ಕನಿಕರಕ್ಕೇ  ಕೊಟ್ಟ ಕೆಲಸವಾಗಿತ್ತು ಅದು.

ಆದರೆ ರವಿಯ ಚಿತ್ರಗಳು ಅವನಿಗೂ ದಂಗು ಬಡಿಸುವಷ್ಟು ಚೆನ್ನಾಗಿರುತ್ತಿದ್ದವು. ಕಣ್ಣು ಸೆಳೆಯುವಂತಹ ಬಣ್ಣಗಳು, ದೊಡ್ಡ ದೊಡ್ಡ ಅಕ್ಷರಗಳಿಂದ ತುಂಬಿರುತ್ತಿದ್ದ ಪೋಸ್ಟರುಗಳಿಗೆ ಅವರ ಜೋಡಿ ಫೇಮಸ್ಸಾಗತೊಡಗಿತ್ತು. ರವಿಯ ಪ್ರತಿಭೆ ಬಳಸಿ ದೇವಿ ಶೆಟ್ಟಿ ತಾನೂ ಬೆಳೆದ, ತಮ್ಮ ಕಡೆಯವನೆಂಬ ಸಲಿಗೆಗೆ ರವಿಯನ್ನೂ ಬೆಳೆಸಿದ. ದುಡ್ಡು ಕಾಸು ಕೈ ಸೇರಿ ಜೀವನ ಸ್ವಲ್ಪ ಸುಧಾರಿಸಿದಂತೆ ರವಿಯ ಪೇಂಟಿಂಗುಗಳು ಇನ್ನೂ ಉತ್ತಮವಾದವು.

“ಭಗವಾನ್ ಜಬ್ ದೇತಾ ಹೈ ತೋ, ಛಪ್ಪರ್ ಫಾಡ್ ಕೆ ದೇತಾ ಹೈ” ಎನ್ನುತ್ತಿದ್ದ ದೇವಿ ಶೆಟ್ಟಿ. ಅವರಿಬ್ಬರೂ ವಾರಕ್ಕೆರಡು ಮೂರು ಬಾರಿ  ಯಾವುದಾದರೂ ಡಾನ್ಸ್ ಬಾರಿನಲ್ಲಿ ಕುಳಿತು ವಿಸ್ಕಿ ಕುಡಿಯುತ್ತ ಹರಟುತಿದ್ದರು. ಈಗಂತೂ ಪ್ರೊಡ್ಯುಸರ್’ಗಳು ದೇವಿ ಶೆಟ್ಟಿಯ ಆಫೀಸಿನೆದುರು ನಿಂತು ಸಾವಿರಾರು ರೂಪಾಯಿ ಕೊಟ್ಟು ಬುಕಿಂಗ್ ಮಾಡಿ ಹೋಗುತ್ತಿದ್ದರು. ಮೂರ್ನಾಲ್ಕು ವರ್ಷ ಹೀಗೆ ಕಳೆಯಿತು. ಇಬ್ಬರೂ ಸೇರಿ ಲಕ್ಷಾಂತರ ದುಡಿದರು. ರವಿ ಒಂದು ದಿನ ಬಾಂಬೆಯ ಪ್ರಸಿದ್ಧ ಮೆಟ್ರೋ ಥೇಟರಿನೆದುರು ನಿಂತು ತಾನು ಬಿಡಿಸಿದ್ದ ಪೋಸ್ಟರನ್ನು ಕಣ್ತುಂಬ ನೋಡಿ ಹೆಮ್ಮೆ ಪಟ್ಟಿದ್ದ.

ದೇವಿ ಶೆಟ್ಟಿ ಮದುವೆಯಾದ, ವ್ಯವಹಾರವೂ ಚೆನ್ನಾಗಿ ನಡೆಯುತ್ತಿತ್ತು. “ರವಿ, ಇತ್ತೀಚಿಗೆ ತುಂಬಾ ಕುಡಿತಿದ್ದಿ. ಎಕ್ ಶಾದಿ ಕರ್ ಲೋ.” ಎಂದು ಒಂದು ದಿನ ದೇವಿ ಶೆಟ್ಟಿ ಹೇಳಿದಾಗ, ರವಿಗೂ ಅವನಿಗೂ ಸ್ವಲ್ಪ ಜಗಳವಾಗಿತ್ತು. ರವಿಯ ಕುಡಿತ ಮಿತಿ ಮೀರುತಿತ್ತು. ಕುಡಿಯದಿದ್ದರೆ ಕೈ ನಡುಗುವುದು ನಿಲ್ಲುತ್ತಲೇ ಇರಲಿಲ್ಲ ಎಂಬ ಪರಿಸ್ಥಿತಿಗೆ ಬಂದಿದ್ದ. ದೇವಿ ಶೆಟ್ಟಿಗೂ ಅವನಿಗೂ ಮಾತು ಕತೆ ನಡೆಯುತ್ತಿದ್ದುದೂ ಅಷ್ಟಕ್ಕಷ್ಟೆ. ಇವನು ಹದಗೆಡುವುದನ್ನು ನೋಡಿ ದೇವಿ ಶೆಟ್ಟಿಗೆ ಬೇಸರವಾಗುತ್ತಿತ್ತು, ಆದರೇನೂ ಮಾಡುವಂತಿರಲಿಲ್ಲ. ಆದರೆ ಬರುತ್ತಿದ್ದ ದುಡ್ಡು ಅದನ್ನೆಲ್ಲ ಮರೆಸುತ್ತಿತ್ತು.

ಅಂತದ್ದರಲ್ಲಿ ಒಂದು ದಿನ ರವಿ ಅವನ ಆಫೀಸಿಗೆ ಬಂದು, ಸ್ವೀಟು ತುಂಬಿದ್ದ ಬಾಕ್ಸೋಂದನ್ನು ಕೊಟ್ಟು, “ಭಾಯಿ, ನಾನು  ಮದುವೆ ಆಗಬೇಕೂ ಅಂತ ಇದೀನಿ. ಹುಡುಗಿ ಮನೆಯವರೂ ಓಪ್ಪಿದ್ದಾರೆ. ಮುಂದಿನ ಶುಕ್ರವಾರ ಮದುವೆ. ನನಗೆ ಇಲ್ಲಿ ನೀವೆ ಎಲ್ಲಾ, ಬಂದು ಆಶೀರ್ವಾದ ಮಾಡಬೇಕು.” ಎಂದ. ದೇವಿ ಶೆಟ್ಟಿಗೆ ಅವತ್ತು ತುಂಬಾ ಖುಷಿಯಾಗಿತ್ತು. ಕುಡಿದು ಹಾಳಾಗುತ್ತಿದ್ದ ರವಿ ಸಂಸಾರಸ್ಥನಾಗುತ್ತಾನೆ. ಸ್ವಲ್ಪ ಉದ್ಧಾರವಾಗುತ್ತಾನೆ ಅಂತ ತುಂಬಾ ಖುಷಿಪಟ್ಟ.

ರವಿಯ ಮದುವೆಯಲ್ಲಿ ದೇವಿ ಶೆಟ್ಟಿಗೆ ಸ್ವಲ್ಪ ವಿಚಿತ್ರ ಎನಿಸಿತು. ಹೆಣ್ಣಿನ ಕಡೆಯವರಾರೂ ಇರಲಿಲ್ಲ. ರವಿಯ ಕಡೆಯಿಂದಲೂ ದೊಡ್ಡವರಾರೂ ಇರಲಿಲ್ಲ. ಇದ್ದವರು ರವಿಯ, ದೇವಿ ಶೆಟ್ಟಿಯ ಕೆಲವು ಮಿತ್ರರಷ್ಟೆ. ಅವನಿಗೆ ಹುಡುಗಿಯನ್ನು ಎಲ್ಲೋ ನೋಡಿದ್ದೇನೆ ಎನಿಸುತ್ತಿತ್ತಾದರೂ ಎಲ್ಲಿ ಎಂದು ನೆನಪಾಗಲಿಲ್ಲ.

ಮದುವೆ ಮುಗಿಸಿ, ಅವರಿಬ್ಬರನ್ನು ರವಿ ಮಾಡಿದ್ದ ಹೊಸ ಮನೆಗೆ ಕರೆದೊಯ್ದು ಬಿಟ್ಟು ಮನೆಗೆ ಬಂದ ದೇವಿ ಶೆಟ್ಟಿಗೆ ನೆನಪಾಯಿತು, ಅವಳು ತನ್ನ ಹಳೇಕಾಲದ ಗೆಳೆಯ, ಶಿಲ್ಪಾ ಥೇಟರಿನ ಗೇಟ್ ಕೀಪರಾಗಿದ್ದ, ಕರೀಂ ಮಾಮೂನ ಮಗಳು ಶಬಾನಾ ಎಂದು. ದೇವಿಶೆಟ್ಟಿ ಹೋಗಿ ಕರಿಂಮಾಮೂನನ್ನ ಕೇಳಿದಾಗ ಅವನು ಹೇಳಿದ್ದು, ರವಿ ಒಂದು ದಿನ ಶಬಾನಾಳ ಜೊತೆ ಬಂದು ನಾವಿಬ್ಬರೂ ಮದುವೆಯಾಗುತ್ತೆವೆ ಅಂದಿದ್ದನಂತೆ. ಸಾಮಾನ್ಯನಾಗಿದ್ದ ಕರಿಂಮಾಮೂ ದೇವರು ಧರ್ಮದಲ್ಲಿಟ್ಟಿದ್ದ ಅಪಾರ ಶ್ರದ್ಧೆಯಿಂದ ಬೇಡ ಅಂದನಂತೆ. ಮರುದಿನ ಯಾರೋ ಇಬ್ಬರು ಅಂಡರ್ ವರ್ಲ್ಡ್‍’ನ ಇಬ್ಬರು ಪುಡಿ ರೌಡಿಗಳು ಬಂದು ಇಪ್ಪತ್ತೈದು ಸಾವಿರ ಅವನಿಗೆಸೆದು, “ಛುಪ್ ರಹ್ ಜಾವೋ ಮಾಮೂ” ಎಂದಿದ್ದರಂತೆ. ಅವರಿಗೆ ಹೆದರಿ, ಇನ್ನೂ ಮೂರು ಹೆಣ್ಣು ಮಕ್ಕಳಿದ್ದ ಕರಿಂಮಾಮೂ ಸುಮ್ಮನಾಗಿದ್ದ.

ಇಷ್ಟೆಲ್ಲಾ ಮಾಡಿ ಮದುವೆಯಾದ ಶಬಾನಾಳನ್ನೂ ಸರಿಯಾಗಿ ಬಾಳಿಸಲಿಲ್ಲ. ಒಂದು ದಿನ ದೇವಿ ಶೆಟ್ಟಿ ಸಿಕ್ಕಿದಾಗ ಅವಳು ರಸ್ತೆಯಲ್ಲೇ ಅತ್ತು ಬಿಟ್ಟಿದ್ದಳು. ಅವಳ ಕೆನ್ನೆಯ ಮೇಲೆ ಬೆರಳ ಗುರುತುಗಳಿದ್ದವು. ರವಿಯಂತೂ ಈಗ ಬ್ರಷ್ ಹಿಡಿಯುವ ಪರಿಸ್ಥಿತಿಯಲ್ಲೂ ಇರುತ್ತಿರಲಿಲ್ಲ. ಕೇವಲ ನಿಂತು ಹೀಗೆ ಮಾಡು ಹಾಗೆ ಮಾಡು ಎನ್ನುತ್ತಿದ್ದ. ಇತ್ತ ವ್ಯವಹಾರವೂ ಕುಸಿಯಲಾರಂಭಿಸಿತ್ತು. ದೇವಿ ಶೆಟ್ಟಿಗೆ ರವಿಯ ಬಗ್ಗೆ ತಡೆಯಲಾರದಷ್ಟು ಅಸಹ್ಯ ಹುಟ್ಟಿತ್ತು, ಆದರೆ ಶಬಾನಾಳ ಮುಖ ನೆನೆಸಿಕೊಂಡು ಅವನ್ನು ಸುಮ್ಮನಾಗಿದ್ದ.

ಊರಿಗೆ ಬಂದ ಮಾರಿ ಇಡೀ ಊರನ್ನೇ ನಾಶ ಮಾಡುವಂತೆ, ಡಿಜಿಟಲ್ ಪೋಸ್ಟರುಗಳು ಬ್ರಷ್ಶು ಪೇಂಟಿನ ಸಾಮ್ರಾಜ್ಯವನ್ನು ನಾಶ ಮಾಡಿದವು. ತಿಂಗಳಿಗೆ ಲಕ್ಷಾಂತರ ದುಡಿಯುತ್ತಿದ್ದ ದೇವಿ ಶೆಟ್ಟಿ ಸಹ ಆಫೀಸ್ ಬಾಗಿಲಿಗೆ ಬೀಗ ಜಡಿದು, “ಕಲ್ ಸೆ ಕಾಮ್ ನಹೀ.” ಎಂದುಬಿಟ್ಟ.

                                       —————- *** —————-

ಪೋಸ್ಟರಿನ ದುಡಿಮೆಯಲ್ಲಿ ಆಕಾಶಕ್ಕೇರಿ ಕುಳಿತಿದ್ದ ರವಿ, ಕೆಲಸ ನಿಂತಾಕ್ಷಣ ಭೂಮಿಯ ಗುರಾತ್ವಾಕರ್ಷಣೆಗೆ ಸಿಕ್ಕಿ ನಾಶವಾಗುವ ಧೂಮಕೇತುವಿನಂತೆ ನೆಲಕ್ಕುರುಳಿದ. ಒಂದಿಷ್ಟು ದಿನ ಹಳೇ ಗೆಳೆಯರೊಂದಿಗೆ ಕುಳಿತು ಕುಡಿದ. ಒಮ್ಮೊಮ್ಮೆ ತನ್ನ ಜೀವನದ ಬಗ್ಗೆಯೇ ರೇಜಿಗೆ ಹುಟ್ಟುತಿತ್ತು. ಆವಾಗ ಇನ್ನೊಂದಿಷ್ಟು ಕುಡಿದ.

ಒಂದು ದಿನ ಬೆಳಿಗ್ಗೆ ಅವನಿಗೆ ಎಚ್ಚರಾದಾಗ ಆಗಸದಲ್ಲಿನ ರವಿ ತನ್ನ ಹಾದಿಯ ಮುಕ್ಕಾಲು ಭಾಗ ಕ್ರಮಿಸಿಯಾಗಿತ್ತು. ಎದ್ದವನು ಮುಖಕ್ಕೆ ನೀರು ಸಹ ಹಾಕದೇ, ಸೀದಾ ಬಾರಿನತ್ತ ನಡೆದ. ಅಲ್ಲಿ ಕುಳಿತು ಪೇಪರು ತಿರುಗಿಸುತ್ತಾ ಭಾರತ ಮತ್ತೊಂದು ಟೆಸ್ಟ್ ಸೋತಿದ್ದಕ್ಕೊಂದಿಷ್ಟು ಬೈದು, “ಏಕ್ ಬೋತಲ್ ವಿಸ್ಕಿ” ಎಂದ. ಬಾರಿನ ಗಲ್ಲೆಯ ಮೇಲಿದ್ದವನು ಒಳಗಿದ್ದವನನ್ನು ಕೂಗಿ, “ಸುರೇಶ್, ಎಕ್ ಬೋತಲ್ ವಿಸ್ಕಿ ಲಾವೊ.” ಎಂದ.  ರವಿ ಒಳಗಿನಿಂದ ಬಂದವನನ್ನೇ ದಿಟ್ಟಿಸಿ ನೋಡಿದ. ಯಾವನೋ ಇಪ್ಪತ್ತು ಇಪ್ಪತ್ತೈದರ ಯುವಕ, ತಂದು ವಿಸ್ಕಿ ಬಾಟಲ್ ಅವನೆದುರಿಗಿಟ್ಟ. ರವಿಗೇನೋ ಸಂಕಟವಾದಂತಾಯಿತು. ಹಾಗೆಯೇ ಎದ್ದು ನಡೆದ. ಮನೆಗೆ ಬಂದು ಕೂತವನಿಗೆ, ತನಗೇಕೆ ಹಾಗನ್ನಿಸಿತು ಎಂಬುದೇ ಅರ್ಥವಾಗಲಿಲ್ಲ. ಆ ಯುವಕನನ್ನೆಲ್ಲಾದರೂ ನೋಡಿದ್ದೇನೆಯೇ? ಎಂದು ಯೋಚಿಸಿದ. ನೆನಪಾಗಲಿಲ್ಲ. ಬಾಂಬೆಗೆ ಬಂದು ಹದಿನೈದು ವರ್ಷವಾಯಿತು. ಎಲ್ಲವೂ ಎಲ್ಲಿ ನೆನಪಿರಬೇಕು ಎಂದುಕೊಂಡ.

ಅವನ ದೃಷ್ಟಿ ಅಲ್ಲಿಯೇ ಆಡುತ್ತಿದ್ದ ಮಗಳತ್ತ ಹರಿಯಿತು. ಅವನು ಅವಳ ಮುಖ ಸರಿಯಾಗಿ ನೋಡಿದ್ದೆ ಆವತ್ತಿರಬೇಕು. ‘ಎಷ್ಟು ಮುದ್ದಾಗಿದ್ದಾಳೆ ನನ್ನ ಮಗಳು’ ಎಂದು ಕೊಳ್ಳುತ್ತಿದ್ದಾಗಲೇ, ಅವಳು ಇವನನ್ನು ನೋಡಿ ಓಡಿ ಹೋಗಿ ಶಬಾನಾಳ ಹಿಂದೆ ಅಡಗಿಕೊಂಡಳು. ರವಿಗೆ ತನ್ನ ಬಗ್ಗೆಯೇ ಒಂದು ಅಸಹ್ಯ ಹುಟ್ಟಿತು. ಮನೆಯಿಂದ ಎದ್ದು ಹೊರನಡೆದರೆ ಕಾಲುಗಳು ಸೀದಾ ಮತ್ತೊಂದು ಬಾರಿನೆಡೆ ಕೊಂಡೊಯ್ದವು. ಅವನ ಅಸಹ್ಯ ಹೆಚ್ಚಾಯಿತು. ಹೋಗಿ ಯಾವುದೋ ಮುರುಕಲು ಬಿಲ್ಡಿಂಗಿನೆದುರು ಕುಳಿತ. ಮಗಳ ಮುಖ ಕಣ್ಮುಂದೆ ಬಂತು. ಅದರ ಹಿಂದೆಯೆ ಇನ್ನೊಂದು ಮುಖ ಮೂಡಿತು. ವಯಸ್ಸಾಗಿ ಸುಕ್ಕು ಬಿದ್ದು ಹಣ್ಣಾದ ಮುದುಕಿಯ ಮುಖ, ಎಲ್ಲಿಯೋ ನೋಡಿದ್ದೇನೆ ಎನಿಸಿತು, ಮುಖ ಇನ್ನಷ್ಟು ಸ್ಪಷ್ಟವಾಯಿತು. ರವಿ ದಿಟ್ಟಿಸಿ ನೋಡಿದ, ಆಗ ಗೊತ್ತಾಯಿತು ಆ ಮುದುಕಿ ತನ್ನ ಅಜ್ಜಿ ಎಂದು. ಅದರ ಹಿಂದೆ ಒತ್ತರಿಸಿ ಬಂದ ನೆನಪುಗಳ ಪ್ರವಾಹಕ್ಕೆ ರವಿ ನುಜ್ಜುಗುಜ್ಜಾಗಿ ಹೋದ.

‘ತನಗೂ ಊರೆಂಬುದೊಂತ್ತಿಲ್ಲವೇ? ಅದರ ನೆರಳ ಬದಿಗೂ ಸುಳಿಯದೇ ಹದಿನೈದು ವರ್ಷವಾಯಿತು. ಬರುವಾಗ ಅಪ್ಪ ಅಮ್ಮನ ಶ್ರಾದ್ಧಕ್ಕೆ ಬರುತ್ತೇನೆಂದು ಅಜ್ಜಿಗೆ ಹೇಳಿ ಬಂದಿದ್ದೆ. ಅವತ್ತು ಹೊಟ್ಟೆಗೆ ತಿನ್ನಲೂ ಕಾಸಿರಲಿಲ್ಲ. ಎಷ್ಟು ದಿನ ಹೊಟ್ಟೆಗಿಲ್ಲದೇ ಮಲಗಿದೆನೋ? ಆಗೆಲ್ಲ ಅಜ್ಜಿಯ ನೆನಪು ಬರುತ್ತಿತ್ತು, ಜೊತೆಗೆ ಅಣ್ಣನ ಮೇಲಿನ ಸಿಟ್ಟೂ. ಅಜ್ಜಿ ಹೇಗಿದ್ದಾಳೋ? ಆಗಲೇ ಅರವತ್ತು ದಾಟಿತ್ತು, ಇನ್ನೂ ಇದ್ದಾಳೋ? ಒಮ್ಮೆ ಬೇಡ ಎಂದಿದ್ದಕ್ಕೆ ಅಣ್ಣನನ್ನು ಅದೆಷ್ಟು ಬೈದೆನಲ್ಲ, ಅವನ ಮದುವೆ ಆಯಿತೋ? ಇಲ್ಲವೋ ಎಂದೆಲ್ಲ ಚಡಪಡಿಸಿದ.  ಇಷ್ಟು ವರ್ಷ ಅವರ್ಯಾರ ನೆನಪೂ ಇಲ್ಲದಂತೆ ಬದುಕಿದೆನೆಲ್ಲ ನನ್ನನ್ನು ಎಷ್ಟು ಕೆಡಿಸಿಬಿಟ್ಟಿತು ಈ ಬಾಂಬೆ. ಬಣ್ಣದ ಕನಸು ಹೊತ್ತು ಬಂದಿದ್ದ ನನಗೆ ಕೆಲಸ ಕೊಟ್ಟಿತು, ಕನಸು ಪೂರೈಸಿತು, ದುಡ್ಡು ಕೊಟ್ಟಿತು ಬದಲಿಗೆ ನನ್ನ ಮನುಷ್ಯತ್ವವನ್ನೇ ಕಿತ್ತುಕೊಂಡಿತು ಈ ಬಾಂಬೆ. ದುಡ್ಡಿನ ಘಮಲು, ವಿಸ್ಕಿಯ ಅಮಲಿನಲ್ಲಿ ಅಣ್ಣ ಅಜ್ಜಿಯರನ್ನು ನೆನೆಯಲಿಲ್ಲ, ಹೆಂಡತಿಯ ಬಗ್ಗೆ ಕಾಳಜಿ ತೋರಲಿಲ್ಲ, ಮಗಳನ್ನ ಪ್ರೀತಿಸಲಿಲ್ಲ. ನಾನೆಷ್ಟು ಹಾಳಾಗಿ ಹೋದೆನೆಲ್ಲ. ಇನ್ನು ಇಲ್ಲಿರಬಾರದು. ಈ ಊರಿನ ಸಹವಾಸವೇ ಬೇಡ’ ಎಂದು ಕೊಂಡು ಹಿಂತಿರುಗಿದ ರವಿ, ಮೂರು ದಿನಕ್ಕೆ ತನ್ನ ವ್ಯವಹಾರವನ್ನೆಲ್ಲ ಮುಗಿಸಿ ವಾಪಸ್ಸು ಹೋಗಲು ಟ್ರೇನು ಹತ್ತಿದ. ಅವನಂತಹ ಸಾವಿರ ಕೃತಘ್ನರನ್ನು ನೋಡಿದ್ದ ಬಾಂಬೆ ಅವನು ಸರಿದ ಜಾಗದಲ್ಲಿ ಮತ್ತೊಬ್ಬನ ಕನಸಿಗೆ ನೆಲೆ ನೀಡುತ್ತಾ ಮುಂದುವರೆಯಿತು.

ಮುಗಿಯಿತು…

*****

-ಎಸ್.ಜಿ ಅಕ್ಷಯ್ ಕುಮಾರ್

sgakshaykumar@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!