ಕಥೆ

ಊರ ಕಾಡಿಗೆ ಹುಲಿ ಬಂದ ಕಥೆ..

“ಹ್ವಾಯ್.. ಹೆಗಡೇರು ನಿಮ್ಮತ್ರ ಬರುಕೆ ಹೇಳಿರಂತೆ, ನಾರಾಯಣ ಡೇರಿಗೆ ಹಾಲು ತರುಕೆ ಹೋದಾಗ ಹಾಲು ಕೊಡುಕೆ ಬಂದ ಹೆಗಡೇರು ಹೇಳಿ ಕಳ್ಸಿರಂತೆ.. ನೆನ್ನೆ ರಾತ್ರಿ ಅವ್ರ ಮನೆ ನಾಯಿನ ಹುಲಿ ಕಚ್ಗಂಡು ಹೋಯ್ತಂತೆ…” ಎನ್ನುತ್ತಾ ಒಳಗೆ ಬಂದಳು ನಾಗಿ.. ಹುಲಿ ಕಚ್ಗಂಡು ಹೋಯ್ತಂತೆ ಅನ್ನೊ ಮಾತು ಕೇಳಿದ ತಕ್ಷಣ, ಲೋಟದಲ್ಲಿದ್ದ ಗುಟುಕು ಚಹವನ್ನು ಗಡಿಬಿಡಿಯಲ್ಲಿ ಖಾಲಿ ಮಾಡಿದ್ದ ಮುತ್ತ “ಅಂಡ್ಗೊಕ್ಕೆ ತಕ ಬಾ..” ಎನ್ನುತ್ತಾ ಚಹ ಲೋಟ ತೊಳೆಯಲು ಎದ್ದ..  “ಈ ಹುಲಿ ಎಲ್ಲಿಂದ ಬಂತು..? ಅದು ಹುಲಿನೇಯಂಬ್ರ..? ಆ ನಾರಾಯಣಂಗೆ ಸರಿ ಕಿವಿ ಕೇಂತಿಲ್ಲ, ಎಂತಾ ಕೇಳ್ಕಂಡು ಎಂತಾ ಹೇಳಿದ್ನ ಏನ…?” ಎನ್ನುತ್ತಾ ಎಲೆ ಅಡಿಕೆ ಸಂಚಿ ತೆಗೆದ ಮುತ್ತ. “ಅದೆಲ್ಲ ನಂಗ್ ಗೊತ್ತಿರ್ತಾ..? ಅವ ಹೇಳಿದ್ ಹೇಳ್ದೆ.. ಊರ್ ತುಂಬಾ ಇದೇ ಸುದ್ದಿ.. ನೀವ್ ಬೇಗ ಹೋಗಿ” ಎಂದು ಗಡಬಡಿಸಿದಳು ನಾಗಿ.. ಮನೆಯಿಂದ ಹೊರಬಿದ್ದ ಮುತ್ತ, ಹಿಮ್ಮಡಿ ಹರಿದ ಹವಾಯಿ ಚಪ್ಪಲಿ ಧರಿಸಿ ಹೆಗಡೆರ ಮನೆಯತ್ತ ಹೊರಟ..

 

ಹುಲಿಯ ಸುದ್ದಿ ಊರೆಲ್ಲ ಸುದ್ದಿಯಾಗಿದೆ ಎಂದು ಹೆಂಡತಿ ಹೇಳಿದ ಮಾತು ನಿಜ ಅನ್ನಿಸಿತು ಮುತ್ತನಿಗೆ.. ಎಲ್ಲರ ಬಾಯಿಂದಲೂ ಹುಲಿಯ ಸುದ್ದಿಯೇ ಬರುತ್ತಿತ್ತು.. ಹಳ್ಳಿಯ ಸುದ್ದಿ, ಪೇಟೆಯ ಮಾಧ್ಯಮದವರ ಬ್ರೇಕಿಂಗ್ ನ್ಯೂಸಿಗಿಂತ ಬೇಗ ಹರಡುತ್ತೆ.. ದಾರಿಯಲ್ಲೇ ಸಿಕ್ಕ ಸತೀಶ ಮುತ್ತನ ಜೊತೆ ಹೆಗಡೇರ ಮನೆಗೆ ಹೊರಟ.. ಆದರೆ ಮುತ್ತನಿಗೆ ಹುಲಿಯೆಂದರೆ ನಂಬಲು ಆಗುತ್ತಿಲ್ಲ.. “ಇತ್ತೀಚೆಗೆ ಹುಲಿ ಇತ್ತ ಬಂದ ಸುದ್ದಿ ತಾನು ಕೇಳಿಲ್ಲ.. ನಾನು ಮದುವೆಯಾದ ವರ್ಷ ಬಂದಿತ್ತು.. ಆಗ ಏನೂ ತೊಂದರೆ ಆಗಿರಲಿಲ್ಲ.. ಕಾರ್ತೀಕ ಅಮವಾಸ್ಯೆ ಮರುದಿನ ಬಂದಿದ್ದರಿಂದ, ಊರಿನ ದೇವರು ಹುಲಿಯಪ್ಪನೇ ಪೂಜೆಯಿಂದ ಸಂತೃಪ್ತಿಗೊಂಡು ಬಂದಿದ್ದಾನೆ ಎಂದಿದ್ದರು ಭಟ್ಟರು.. ಆಮೇಲೆ ಹುಲಿಯ ಸುದ್ದಿಯಿರಲಿಲ್ಲ.. ಈಗ ನೋಡಿದ್ರೆ ಹೆಗಡೇರು ಹುಲಿ ಬಂದಿದೆ ಎಂದು ಹೇಳಿ ಕಳಿಸಿದ್ದಾರೆ.. ಹಾಗಂತ ಸುತ್ತಮುತ್ತಲ ಊರಿನವರೂ ಹುಲಿಯ ಸುದ್ದಿ ಹೇಳಿದಂತಿಲ್ಲ. ಹೀಗಿರುವಾಗ ಇಲ್ಲಿ ಹೇಗೆ ಬರಲು ಸಾಧ್ಯ..?” ಮುತ್ತನ ಮನಸ್ಸಲ್ಲೇ ಎಲ್ಲವನ್ನು ವಿಚಾರ ಮಾಡುತ್ತಿದ್ದ.. ಒಂದು ವೇಳೆ ಹುಲಿ ಬಂದಿದ್ದೇ ಆದಲ್ಲಿ ಏನು ಮಾಡೋದು ಎನ್ನುವ ಚಿಂತೆಯೂ ಸಹ ಕತ್ತಲೆಯ ಕಾಡಲ್ಲಿ ಮೂಲೆಯ ಪೊದೆಯೊಳಗೆ ಬೆಳಗುವ ಮಿಂಚು ಹುಳದಂತೆ ಮನದ ಮೂಲೆಯಲ್ಲಿ ಬೆಳಗುತ್ತಿತ್ತು. ಯಾವುದಕ್ಕೂ ಹೋಗಿ ನೋಡೋದು ಒಳ್ಳೆಯದೆಂದು, ಸತೀಶನ ಜೊತೆ ಹೆಜ್ಜೆ ಹಾಕಿದ.

ದಾರಿಯಲ್ಲಿ ಸತೀಶ ಮಾತಿಗಿಳಿದ. ಸತೀಶ ಎಂದರೆ ಮಾತಿಗೆ ಪ್ರಸಿದ್ಧವಾದ ಮನುಷ್ಯ.. “ಸಣ್ಣೋನಾಗಿದ್ದಾಗ ಏನು ತಿನ್ನಿಸಿದ್ದೀಯವ್ವಾ..? ಮರದ ಬಾಯಿ ಆಗಿದ್ರೆ ಒಡೆದು ಹೋಗ್ತಿತ್ತೇನೊ..” ಎಂದು ಊರಿನಲ್ಲಿ ಎಲ್ಲರೂ ಹೇಳುವುದುಂಟು. ಹದಿನೆಂಟರ ಹರೆಯದ ಸತೀಶ, ಮುತ್ತನ ತಂಗಿಯ ಮಗ.. ಅಳಿಯ ಅನ್ನೋ ಪ್ರೀತಿ ಸ್ವಲ್ಪ ಹೆಚ್ಚಿದ್ದರಿಂದ, ಎಲ್ಲಿಗೆ ಹೋಗುವುದಾದರೂ ಆತನನ್ನು ಬೆನ್ನಿಗೆ ಕಟ್ಟಿಕೊಂಡು ಹೋಗೋದು ಮುತ್ತನ ರೂಢಿ. ವಿದ್ಯೆ ತಲೆಗೆ ಹತ್ತದ್ದರಿಂದ ಮುತ್ತನ ಜೊತೆ ಹೆಗಡೇರ ಮನೆಗೆ ಕೆಲಸಕ್ಕೆ ಆತ ಖಾಯಂ ಕೆಲಸಗಾರನಾಗಿ ಬಿಟ್ಟಿದ್ದ. ಕೆಲಸಗಾರರ ಕೊರತೆ, ಜೊತೆಗೆ ಊರಿನ ಮಕ್ಕಳೆಲ್ಲ ಪೇಟೆಯ ಹಾದಿ ಹಿಡಿಯುತ್ತಿದ್ದಾರೆ. ಹೀಗಿರುವಾಗ ಹೆಗಡೇರಾದರೂ ಸತೀಶನಿಗೆ ಕೆಲಸಕ್ಕೆ ಬರಬೇಡ ಎಂದು ಹೇಗೆ ಹೇಳಿಯಾರು..? ಇಪ್ಪತ್ತು ವರ್ಷದಿಂದ ಕೆಲಸ ಮಾಡ್ತಾ ಇರುವ ಮುತ್ತ ನಿವೃತ್ತಿ ಘೋಷಿಸಿದ ನಂತರ ಆತನ ಜಾಗಕ್ಕೆ ಒಬ್ಬರು ಬೇಕಲ್ಲ..? ಹಾಗಾಗಿ ಆತ ಬಂದರೆ ತಮಗೇ ಒಳ್ಳೆಯದು ಎಂಬ ಲೆಕ್ಕಾಚಾರ ಅವರದ್ದು.

ಮಾತು ಆರಂಭಿಸಿದ ಸತೀಶ “ಮಾವಾ.. ಹಂದಿ ಕಾಟ ಮುಗಿತು ಹೇಳ್ವತಿಗೆ ಇದೆಂತದು ಹುಲಿಕಥೆ..? ಅಲ್ಲ.. ಹೆಗಡೇರಿಗೆ ಹುಲಿ ಅಂತ ಹ್ಯಾಂಗ್ ಗೊತ್ತಾಯ್ತು..? ಅವ್ರಿಗ್ ಕಂಡಿತ್ತಾ..? ಈ ಊರಾಗೆ ಎಂತಿತ್ ಹೇಳಿ ಹುಲಿ ಬರತ್..? ಹಾರ್ಬೆಕ್ ತಿಂಬುಕೇಯಾ ಅಲ್ದಾ..?” ಎಂದು ಪ್ರಶ್ನೆಗಳ ಮಳೆಯನ್ನ ಸುರಿಸತೊಡಗಿದ. ಮನೆಯಿಂದ ಹೊರಡುವಾಗ ಹಾಕಿದ್ದ ಎಲೆ ಅಡಿಕೆ ಕೆಂಪಡರಿ ತುಟಿ ಮುತ್ತಿತ್ತು. ಬಾಯಿ ತುಂಬಿದ್ದ ಎಲೆ ಅಡಿಕೆ ರಸವನ್ನು ಉಗಿದ ಮುತ್ತ “ಹೆಗಡೇರ ಮನಿಗ್ ಹೋಗಿ ಎಂತ ಹೇಳಿ ಕಾಂಬ.. ಅವ್ರು ಹೇಳ್ತ್ರಲ ಹ್ಯಾಂಗೂ.. ನೋಡಿದ್ಮೇಲೆ ವಿಚಾರ ಮಾಡ್ವಾ.. ಕಿರುಬ ಆದ್ರೂ ಆಗಿರುಕೆ ಸಾಕು.. ಅವಾದ್ರೆ ನಾಯಿಗಳು ಕೂಗೂದೂ ಇಲ್ಲ. ಮೊನ್ನೆ ಗದ್ದೆಮನೆ ಭಟ್ರು ಸಿಕ್ದಾಗ ಅವ್ರ ಮನೆ ನಾಯಿನ ಕಿರುಬ ಕಚ್ಗಂಡ್ ಹೋಗಿತ್ ಹೇಳಿ ಹೇಳ್ತಿದ್ರು.. ಅದೇ ಬಂದಿರುಕ್ ಸಾಕು..” ಎಂದು ಹೇಳಿದ.. “ಹೂ.. ಅದೂ ಆಗಿರುಕ್ ಸಾಕು.. ಹೆಗಡೇರು ಎಂತಾ ಕಂಡ್ರ ಏನ..” ಎನ್ನುತ್ತ ನಡಿಗೆಯನ್ನು ಜೋರು ಮಾಡಿದ ಸತೀಶ. ಎಲೆ ಅಡಿಕೆ ಜಗಿಯುತ್ತ “ಈ ಹಿರಿಯಣ್ಣನ್ ಅಂಗಡಿ ತಂಬಾಕು ಸರಿಯಿಲ್ಲ ಅಲಾ..? ಸಂಜೆ ಹೇಳ್ಕಾಯ್ತ್ ಅವ್ನತ್ರ…” ಎಂಬ ತನ್ನ ಅಸಮಾಧಾನವನ್ನು ಸತೀಶನ ಜೊತೆ ಹೇಳುತ್ತ ಮುನ್ನಡೆದ ಮುತ್ತ..

ಹೆಗಡೇರಮನೆ ತಲುಪುವ ಹೊತ್ತಿಗೆ ಅವರು ತನ್ನ ಮಗನ ಜೊತೆ, ನಾಯಿ ಕೊನೇ ಬಾರಿ ಮಲಗಿದ್ದ ಜಾಗದಲ್ಲಿ ನಿಂತು ಪಂಚನಾಮೆ ಮಾಡುತ್ತಿದ್ದರು. ರಾಮಚಂದ್ರ ಹೆಗಡೆ ಅಂತ ಅವರ ಪೂರ್ಣ ಹೆಸರು. ಊರಿನ ಜನರು ಅವರಿಗೆ ಎಂದು ಹಿಡಿಯಷ್ಟು ಗೌರವವನ್ನು ಎತ್ತಿಟ್ಟಿದ್ದಾರೆ. ಅದು ಎಂದಿಗೂ ಕಡಿಮೆಯಾಗದು ಮತ್ತು ಕಾಣೆಯಾಗದು ಕೂಡ. ಅದರಂತೆಯೇ ಹೆಗಡೇರು ಸಹ ಅದನ್ನು ಉಳಿಸಿಕೊಂಡಿದ್ದಾರೆ. ಹೆಗಡೆರ ಮಗ ವಿನಾಯಕ. ದೇಹದಲ್ಲಿ ಮತ್ತು ಗುಣದಲ್ಲಿ ತಂದೆಯ ಪಡಿಯಚ್ಚು, ಆದರೆ ವಿಜ್ಞಾನ ಹೆಚ್ಚು ಕಲಿತು ಸಂಪ್ರದಾಯವನ್ನು, ನಂಬಿಕೆಗಳನ್ನು ವಿರೋಧಿಸುವ ಚಟವೊಂದಿದೆ ಎಂಬುದು ಎಲ್ಲರ ಅಭಿಪ್ರಾಯ. ದೂರದೊಂದು ಪೇಟೆಯ ಕಾಲೇಜಿನಲ್ಲಿ ಪ್ರಾಧ್ಯಾಪಕ. ಊರಿಗೆ ಬರುವ ಒಲವಿದ್ದರೂ ಪರಿಸ್ಥಿತಿ ಅನುಕೂಲ ಮಾಡಿಕೊಡುತ್ತಿಲ್ಲ. ಆಗಾಗ ರಜೆಗೆ ಬರುತ್ತಿದ್ದ. ತಂದೆ ಮಗ ಸೇರಿ ಪಂಚನಾಮೆ ಮಾಡುತ್ತಿದ್ದುದನ್ನು ನೋಡಿದ ಮುತ್ತ, ಮನೆಯ ಅಂಗಳದಿಂದಲೇ “ಅಮ್ಮಾ, ಇಬ್ಬರಿಗೆ ಚಾ ಮಾಡಿ” ಎಂದು ಹೆಗಡೆಯವರ ಮಡದಿಗೆ ಕೇಳುವಂತೆ ಕೂಗಿ, ತಂದೆ ಮಗ ಇರುವಲ್ಲಿಗೆ ಸತೀಶನ ಜೊತೆಗೂಡಿ ಸಾಗುವ ಹೊತ್ತಿಗೆ ಘಂಟೆ ಒಂಭತ್ತಾಗಿತ್ತು.

“ಓಹೋ.. ಸಣ್ಣ ಹೆಗಡೇರು.. ಯಾವತ್ ಬಂದ್ರಿ..?” ಎನ್ನುತ್ತ ಹೆಗಡೆರ ಪಕ್ಕ ಬಂದು ನಿಂತ ಮುತ್ತ. “ಇವತ್ತು ಬೆಳಿಗ್ಗೆ ಬಂದೆ ಮುತ್ತ.. ಬರ್ತಾ ಇದ್ದಾಂಗೇ ನಿನ್ ಹೆಗಡೇರು ಹುಲಿ ಹೇಳಿ ಶಾಕ್ ಕೊಟ್ರು ನೋಡು” ಎಂದು ನಕ್ಕ ವಿನಾಯಕ. “ಹೌದಲ್ರ.. ನೋಡ್ವಾ ಎಂತ ಬಂದಿದ್ದು ಹೇಳಿ..” ಎಂದ ಮುತ್ತ, ವಿನಾಯಕನ ನಗುವಿಗೆ ಜೊತೆಕೊಟ್ಟ. “ಮುತ್ತ.. ಮೊನ್ನೆ ಭರತನಹಳ್ಳಿ ರಾಮಚಂದ್ರ ಭಟ್ರು ಸಿಕ್ಕಿದಾಗ ಊರಿನ ಕಡೆ ಹುಲಿ ಬಂದ ಸುದ್ದಿ ಹೇಳಿದ್ರು.. ಮೂರ್ಸಂಜೆ(ಮುಸ್ಸಂಜೆ) ಹೊತ್ತಿಗೆ ಕೂಗ್ತಾ ಇತ್ತಂತೆ. ಭರತನಹಳ್ಳಿ ಏನೂ ಅಮೇರಿಕಾ ಅಲ್ಲ ಅಲ್ದ..? ನಾಕು ಮೈಲಿ ದೂರದ ಊರು.. ನಾನೂವ ಮೊದಲು ನೆನ್ನೆ ನಾಯಿ ಕೊಂದದ್ದು ಕಿರುಬನೊ, ತೋಳನೊ  ಅಂದ್ಕೊಂಡೆ.. ಆದರೆ ನಾಯಿ ತುಂಬಾ ಒದ್ದಾಡಿದೆ. ಕಿರುಬ ಆದ್ರೆ ನಾಯಿ ಒಂಚೂರು ಒದ್ದಾಡದೇ ಶರಣಾಗುತ್ತೆ, ಮತ್ತೆ ಮೊನ್ನೆ ಮೊನ್ನೆ ಶಿಕಾರಿ ಮಾಡಿದ್ದಕ್ಕೆ ಕಿರುಬ ಬರೊಕೆ ಸಾಧ್ಯ ಇಲ್ಲ. ಇದು ಹುಲಿಯದ್ದೇ ಕೆಲಸ..” ಎಂಬ ವಾದ ಮಂಡಿಸಿದ್ರು.  ಮುತ್ತನಿಗೆ ಏನು ಹೇಳೋದು ಅಂತ ತಿಳಿಯದೇ ಸುಮ್ಮನಾದ, ಯಾಕೆಂದರೆ ಅವನಿಗಿನ್ನೂ ನಂಬಿಕೆ ಬಂದಿಲ್ಲ. ಆದರೆ ಅದೇ ದಿನ ಸಂಜೆ ಊರ ತುದಿಯ ಏರಿಯ ಹಿಂಬದಿಯ ಕಾಡಿನಿಂದ ಕೇಳಿ ಬಂದ ಘರ್ಜನೆಯೊಂದು ಊರನ್ನೇ ನಡುಗಿಸಿತ್ತು.

ಹುಲಿಯ ಕಾಟದಿಂದ ತುಂಬ ತೊಂದರೆಯಾಗಿದ್ದು ಮಾತ್ರ ಊರಿನವರ ನಿತ್ಯಕರ್ಮಕ್ಕೆ.. ಮುಂಜಾನೆ ಎದ್ದು ಕೈನಲ್ಲೊಂದು ತಂಬಿಗೆ, ಬಾಯಲ್ಲೊಂದು ಬೀಡಿ ಇಟ್ಟು ಕಾಡಿನತ್ತ ಓಡುತ್ತಿದ್ದವರ ಗೋಳಂತೂ ಹೇಳತೀರದು.. ಊರಿನ ಶಿಸ್ತು ಕಾಪಾಡುವ ಸಲುವಾಗಿ ಕಾಡಿನೊಳಗಣ ಪೊದೆಗಳ ನಡುವೆ ಕೂತು ಉಸ್ಸಪ್ಪ ಹೇಳುವವರು ಒಂದು ಹಂತದಲ್ಲಿ ನಿರಾಶ್ರಿತರಾಗಿ ಬಿಟ್ಟರು. ಒಂದೊಮ್ಮೆ ಮುಂಜಾನೆ ತಂಬಿಗೆ ಹಿಡಿದು ಹೊರಟಿದ್ದ ಶೇರುಗಾರನೊಬ್ಬ ಹುಲಿಕೂಗಿಗೆ ಹೆದರಿ ಹೊಳೆ ಹಾರಿದ್ದ. ಹೀಗೆ ನಾಲ್ಕಾರು ದಿನಗಳು ಸಾಗಿತ್ತು, ಜನಗಳಿಗೂ ಉಪಾಯವಿಲ್ಲ. ಇದು ಹುಲಿಗೂ ಧೈರ್ಯ ತಂದಿತ್ತೊ ಏನೊ, ಹಗಲುದರೋಡೆ ಆರಂಬಿಸತೊಡಗಿತು. ನಾಯಿ, ನರಿಗಳ ಬೇಟೆಗೆ ಸೀಮಿತವಾಗಿದ್ದ ಅದರ ಕಣ್ಣು ಊರಿನ ಹಸು ಎತ್ತುಗಳ ಮೇಲೆ ಬಿತ್ತು.. ಊರೆಂದರೆ ಹೆಚ್ಚಿನ ಜನರದು ರೈತಾಪಿ ಬದುಕು. ಹಸು ಎತ್ತುಗಳೇ ಅವರ ಆಧಾರ, ರೈತನ ಪರಿಶ್ರಮದಲ್ಲಿ ಭಾಗಿಯಾಗುವ ಮೂಕಜೀವಿಗಳು ಅವು. ಒಂದು ಎತ್ತು ಮತ್ತು ಒಂದು ಹಸುವನ್ನು ಹಾಡು ಹಗಲೇ ಬೇಟೆಯಾಡಿತ್ತು ಹುಲಿ.

ಹುಲಿ ದನವನ್ನು ಹಿಡಿದದ್ದು ಮಾತ್ರ ಊರಿನವರಿಗೆ ತಲೆನೋವು ತಂದಿದ್ದು ನಿಜ. ಮನೆಯಲ್ಲೇ ದನಗಳನ್ನು ಕಟ್ಟಿಕೊಂಡು ಹೇಗೆ ಸಾಕೋದು..? ಒಂದೆರಡು ದಿನವಾದರೆ ಹುಲ್ಲು ಕಡಿದು ತಂದು ಹಾಕಬಹುದು, ಆದರೆ ಪ್ರತೀ ದಿನ ತರುವುದು ಕಷ್ಟವಲ್ಲವೇ..? ಎಂಬ ಪ್ರಶ್ನೆ ಊರಿನವರ ಮನಸ್ಸಿನಲ್ಲಿ ಹುಟ್ಟಿತ್ತು.. ಅದೇ ದಿನ ಸಂಜೆ ಒಒರಿಗೆ ಒಒರೇ ಒಂದು ಅಘೋಶಿತ ಸಭೆ ಸೇರಿತ್ತು… ಕೆಲವರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸುವ ಅಭಿಪ್ರಾಯ ಒಂದೆಡೆಯಾದರೆ, ಒಂದಷ್ಟು ಜನ ಹುಡುಗರು ರಾತ್ರಿ ಶಿಕಾರಿ ಮಾಡೊ ಉತ್ಸಾಹ ತೋರಿದರು.. ಆದರೆ ಹಿರಿಯರಿಗೆ ಮಕ್ಕಳನ್ನು ಶಿಕಾರಿ ಕಳಿಸೋಕೆ ಭಯ. ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸೊ ನಿರ್ಧಾರ ಒಳ್ಳೆಯದೆಂಬ ನಿರ್ಧಾರಕ್ಕೆ ಬರಲಾಯಿತು. ಅದೇ ಸಮಯಕ್ಕೆ ಊರ ಹಿರಿಯ ನರಸಿಂಹಜ್ಜ ಎಲೆ ಅಡಿಕೆ ಉಗಿದು “ಯಾವುದಕ್ಕೂ ದೊಡ್ಡ ಗಣಪತಿ ದೇವಸ್ಥಾನದ ಶಾಸ್ತ್ರಿಗಳತ್ರ ಕೇಳದು ಒಳ್ಳೆದು ಅನ್ನಿಸ್ತು…” ಅನ್ನೊ ಮಾತು ಹೇಳಿದ. ಅದನ್ನು ಕೇಳಿ ವಿನಾಯಕ ಜೋರಾಗಿ ನಕ್ಕುಬಿಟ್ಟ.. “ಎಂತ ಅಜ್ಜಾ…  ಹುಲಿಕಾಟಕ್ಕೆ ಜ್ಯೋತಿಷಿ ಅಂಜನ ಪರಿಹಾರ ಹೇಗೆ ಸಾಧ್ಯ… ನಿಂಗೆ ಮಳ್ಳು ಹಿಡಿಯೊಕೆ ಜಾಗ ಇಲ್ಲಾ” ಎಂಬ ಕುಹಕ ಹೊರ ಬಿದ್ದಿತ್ತು. ಆದರೆ ಕೆಲವರಿಗೆ ಸರಿ ಅನ್ನಿಸಿತ್ತು.. ಅರಣ್ಯ ಇಲಾಖೆಗೆ ತಿಳಿಸೋದು ಮತ್ತು ಅದರ ಜೊತೆ ಜೊತೆಗೇ ಶಾಸ್ತ್ರಿಗಳ ಹತ್ತಿರವೂ ಮಾತನಾಡೋದು ಎಂಬ ನಿರ್ಧಾರದೊಂದಿಗೆ ಅಂದಿನ ಸಭೆಗೆ ತೆರೆ ಎಳೆಯಲಾಯಿತು. ಆದರಂತೆ ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿಯೂ ಆಯಿತು.

ಅರಣ್ಯ ಇಲಾಖೆಯವರು ಹುಡುಕಿಸಿದಾಗ ಸಹ ಕಾಡಿನಲ್ಲಿ ಹುಲಿಯ ಬಣ್ಣದ ಬೆಕ್ಕೂ ಸಿಗಲಿಲ್ಲ… ಅಷ್ಟರಲ್ಲಿ ಕೋಣವೊಂದು ಹುಲಿಗೆ ಆಹಾರವಾಯ್ತು. ಊರಿನವರ ಚಿಂತೆ ಮತ್ತೂ ಹೆಚ್ಚತೊಡಗಿತು. ಜಾನುವಾರುಗಳ ಬೆನ್ನು ಬಿದ್ದ ಈ ಹುಲಿ ನಾಳೆ ನಮ್ಮ ಬೆನ್ನು ಬೀಳಲಾರದು ಎಂಬ ನಂಬಿಕೆಯೆಲ್ಲಿ..? ಅರಣ್ಯ ಇಲಾಖೆಯವರೂ ಬೇಸತ್ತು, ಇನ್ನು ಇದನ್ನು ಬೇಟೆಯಾಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದರು. ಅದೇ ಸಮಯಕ್ಕೆ ಊರಿನ ಕೆಲವು ಪರಿಣಿತ ಶಿಕಾರಿ ಮಾಡುವ ಮಂದಿ ಜೊತೆ ಸೇರಿ, ತಾವು ಬಂದೂಕು ಹಿಡಿಯುವ ಎಂದು ಮಾತನಾಡಿಕೊಂಡರು ಮತ್ತು ಅದೇ ದಿನ ರಾತ್ರಿ ಶಿಕಾರಿಗೆ ಹೊರಟೂ ಬಿಟ್ಟರು. ಎರಡು ನಿರಂತರ ರಾತ್ರಿಗಳ ಹುಡುಕಾಟದ ನಂತರ ಮೂರನೇ ದಿನದ ಮಧ್ಯರಾತ್ರಿ ಟಾರ್ಚಿಗೆ ಕಣ್ಣು ಕೊಟ್ಟಿತ್ತು ಹುಲಿ. ಆದರೆ ಪರಿಣಿತನ ಕೈ ನಡುಗಿ ಬಂದೂಕಿನ ಗುರಿ ತಪ್ಪಿತ್ತು. ಹಾರಿದ ಗುಂಡು ಹುಲಿಯನ್ನು ಗಾಯ ಮಾಡಿತೇ ಹೊರತು ಸಾಯಿಸಲಿಲ್ಲ. ವಾಪಸ್ಸು ಬಂದು ಊರವ್ರಿಗೆ ವಿಷಯ ತಿಳಿಸಿದ ಮೇಲೆ ಜನರ ಆತಂಕ ಇನ್ನೂ ಹೆಚ್ಚಾದದ್ದು ದಿಟ. ಗಾಯಗೊಂಡ ಹುಲಿ ಮತ್ತೂ ಅಪಾಯಕಾರಿ. ಕೆಲವರು ಹುಲಿ ಗಾಯಗೊಂಡಿದೆ ಎಂದರೆ ಊರು ಬಿಡುತ್ತೆ ಎಂದರೆ, ಇನ್ನು ಕೆಲವರು ಹುಲಿಯ ರೋಷ ಹೆಚ್ಚಾಗಿದೆ, ಇದು ನರಭಕ್ಷಕನೇ ಆಗುತ್ತೆ ಎಂದರು. ಹುಲಿಕಾಟದಿಂದ ಪಾರಾಗಲು, ಊರ ಹೆಂಗಸರು ಗ್ರಾಮದೇವರು ಹುಲಿಯಪ್ಪನಿಗೆ, ಕಾರ್ತೀಕ ಅಮವಾಸ್ಯೆಗೆ ನೂರೊಂದು ಹಣತೆ ಬೆಳಗವ ಹರಕೆಯನ್ನೂ ಕಟ್ಟಿದರು.

ಆದರೆ ದೇವಸ್ಥಾನದ ಶಾಸ್ತ್ರಿಗಳು ಮಾತ್ರ “ನಿಮ್ಮ ಊರಿನ ದೇವರ ಮೂರ್ತಿ ಭಗ್ನವಾಗಿದ್ದು, ಪೂಜೆಯೂ ಸರಿಯಾಗಿ ಆಗದೇ ಇದ್ದುದರಿಂದ ನಿಮ್ಮ ಮೇಲೆ ದೇವರು ಮುನಿಸಿಕೊಂಡಿದ್ದಾನೆ.. ಮೂರ್ತಿಯನ್ನು ಪುನರ್ ಪ್ರತಿಷ್ಠೆ ಮಾಡಿದರೆ ಮಾತ್ರ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ” ಎಂದು ಹೇಳಿದರು. ಶಾಸ್ತ್ರಿಗಳ ಮಾತು ಸುನಾಮಿಯಂತೆ ಹರಡಿತ್ತು. ಹಲವರು ದುಡ್ಡಿಗಾಗಿ ಬಾಯಿಗೆ ಬಂದಂತೆ ಹೇಳಿದ್ದಾರೆ ಎಂದರೆ, ಇನ್ನುಳಿದವರು ಶಾಸ್ತ್ರಿಗಳ ಜ್ಞಾನಕ್ಕೆ ತಲೆದೂಗಲೇಬೇಕು ಎಂಬ ಪಟ್ಟಿಗೆ ಬಿದ್ದರು… ಏನಾದರೂ ಆಗಲಿ, ಈಗಿರುವ ಮೂರ್ತಿ ಭಗ್ನವಾಗಿದ್ದಂತೂ ನಿಜ. ಹಾಗಾಗಿ ಪ್ರತಿಷ್ಠಾಪನೆ ಮಾಡಿಬಿಡೋಣ ಎಂಬ ನಿರ್ಧಾರಕ್ಕೆ ಬಹುಮತದ ಅಭಿಪ್ರಾಯಕ್ಕೆ ಬರಲಾಯಿತು. ಸಮೀಪಕ್ಕೆ ಇದ್ದ ಒಳ್ಳೆಯ ದಿನವೊಂದನ್ನು ನೋಡಿ ಗ್ರಾಮದೇವತೆ ಹುಲಿಯಪ್ಪನ ಪ್ರತಿಷ್ಠೆ ಕಾರ್ಯಕ್ರಮವನ್ನು ನಿಶ್ಚಯಿಸಿಯೂ ಆಯಿತು. ಭವಿಷ್ಯ ನುಡಿದ ಶಾಸ್ತ್ರಿಗಳಿಗೆ ಅದರ ಉಸ್ತುವಾರಿ ವಹಿಸಲಾಯ್ತು.. ಹುಲಿಯಪ್ಪ ಕರಿಗಲ್ಲಿನ ಮೂರ್ತಿಯಾಗಿ ಹೊಳೆಯುತ್ತಿದ್ದ. ಅದನ್ನು ಮಾಡಿ ತಂದದ್ದು ಕೇರಳದಿಂದ.. ಉತ್ಸವದ ದಿನ, ಸಿಡಿಮದ್ದಿನ ಬದಲಾಗಿ ಊರಿನ ಮಠದ ಜಾತ್ರೆಯಂದು ಸಿಡಿಸುವ ಖಜಿನಿ ಹೊಡೆಯುವ ನಿರ್ಧಾರವಾಯ್ತು ಮತ್ತು ಅದನ್ನು ಜಾತ್ರೆಯಲ್ಲಿ ಹೊಡೆಯುವ ಪಕ್ಕದ ಊರಿನ ಬಾಬಣ್ಣನಿಗೂ ಹೇಳಿಕಳಿಸಲಾಯ್ತು… ಅಂತೂ ಇಂತೂ ಹುಲಿಯಿಂದ ಪಾರಾಗಲು ಎಲ್ಲರೂ ಒಗ್ಗಟ್ಟಾಗಿ ಪ್ರತಿಷ್ಠಾಪನೆ ತಯಾರಿ ಮಾಡತೊಡಗಿದರು…

ಪ್ರತಿಷ್ಠಾಪನಾ ಕಾರ್ಯ ಜೋರಾಗೇ ನಡೆದಿತ್ತು. ಕಾಕತಾಳೀಯವೋ, ಕೃಪೆಯೋ ಗೊತ್ತಿಲ್ಲ. ಊರು ಮಾತ್ರ ಹುಲಿಯ ಕಾಟದಿಂದ ಮುಕ್ತವಾಗಿತ್ತು. ಅಂದಿನಿಂದ ಹುಲಿಯ ಕೂಗನ್ನು ಮತ್ತು ಅದರಿಂದ ಉಪಟಳವನ್ನು ಯಾರೂ ಅನುಭವಿಸಲಿಲ್ಲ. ಎಲ್ಲರೂ ಶಾಸ್ತ್ರಿಗಳನ್ನು ಕೊಂಡಾಡುತ್ತಿದ್ದರೆ, ಹೆಗಡೇರ ಮಗ ವಿನಾಯಕ ಮತ್ತು ಅವನ ಸಮವಯಸ್ಕರು “ಉತ್ಸವದ ಅಬ್ಬರ, ಖಜಿನಿಯ ಗದ್ದಲಕ್ಕೆ ಹೆದರಿದ ಹುಲಿ ಊರು ಬಿಟ್ಟಿದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹೆಗಡೇರು ಮಾತ್ರ ಒಮ್ಮೆ ನಿರಾಳವಾದದ್ದಂತೂ ನಿಜ. ಹುಲಿ ಹೆದರಿತೊ ಅಥವಾ ಹುಲಿಯಪ್ಪ ಕೃಪೆ ತೋರಿದನೋ ಎಂಬ ಚಿಂತೆಯೇಕೆ..? ಪ್ರತಿಷ್ಠಾಪನಾ ಕಾರ್ಯದಿಂದ ನೆಮ್ಮದಿಯಂತೂ ಪ್ರತಿಷ್ಠಾಪನೆ ಆಯಿತಲ್ಲವೇ…?

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Hegde

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಹಳ್ಳಿ ಇವರ ಮೂಲ.. ಉಡುಪಿಯಲ್ಲಿ MSc ಮಾಡಿ ಒಂದು ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿ ಈಗ NITK ಸುರತ್ಕಲ್’ನಲ್ಲಿ PhD ಮಾಡುತ್ತಿದ್ದಾರೆ... ಓದಿದ್ದು ಕಂಪ್ಯೂಟರ್ ಆದರೂ ಸಾಹಿತ್ಯದಲ್ಲಿ ಆಸಕ್ತಿ.. ಬರೆಯುವುದು ಹವ್ಯಾಸ.. ವಿಜ್ಞಾನದ ಬರಹಗಳು, ಕಥೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯುವ ಆಸಕ್ತಿ ಹೆಚ್ಚು..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!