’ಪುಷ್ಪಕ ವಿಮಾನ’ – ರಮೇಶ್ ಅರವಿಂದ್ ಎಂಬ ಕನ್ನಡ ಚಿತ್ರರಂಗದ ಎವರ್’ಗ್ರೀನ್ ಸುಂದರಾಗನ ನೂರನೇ ಚಿತ್ರ. ರವೀಂದ್ರನಾಥ್ ಎಂಬ ನಿರ್ದೇಶಕನ ಮೊದಲ ಚಿತ್ರ. ಈ ಇಬ್ಬರ ಸಮ್ಮಿಲನದಲ್ಲಿ ತಯಾರಾಗಿರುವ ಸಿನಿಮಾ ವಿಮಾನ ಈಗ ಹಾರಾಡುತ್ತಿರುವುದು ಪ್ರೇಕ್ಷಕನ ಎದೆಯ ಬಾಂದಳದಲ್ಲಿ.
ಒಬ್ಬ ಬುದ್ಧಿಮಾಂದ್ಯ ಅಪ್ಪ ಹಾಗೂ ಚೂಟಿ ಮಗಳ ನಡುವಿನ ಬಾಂಧವ್ಯ ಈ ಸಿನಿಮಾದ ಕಥಾ ಹಂದರ. ಅಪ್ಪ ಮಗಳು ಇಬ್ಬರಿಗೂ ವಿಮಾನ ಅಂದರೆ ಒಮ್ದು ಮುಗ್ಧ ಹುಚ್ಚು. ವಿಮಾನದ ಶಬ್ದ ಕೇಳುತ್ತಿದ್ದಂತೆ ಅದನ್ನರಸಿ ಹೋಗಿ “ಟಾಟಾ…” ಎನ್ನುತ್ತಾ ಜಗತ್ತನ್ನೇ ಮರೆತು ಕುಣಿಯುವ ಅಪ್ಪ ಮಗಳು ನಮಗೇ ಅರಿಯದೇ ನಮ್ಮ ಮುಗುಳ್ನಗುವಿನ ಪ್ರತಿಬಿಂಬವಾಗಿಬಿಡುತ್ತಾರೆ. ’ಅನಂತರಾಮಯ್ಯ’ ಎನ್ನುವ ಪಾತ್ರ ’ಅಪ್ಪ’ ಎನ್ನುವ ಪದಕ್ಕೆ ಒಂದು ಹೊಸ ಅರ್ಥ ಕೊಡುತ್ತದೆ. ಯಾವುದೋ ಕುತಂತ್ರಕ್ಕೆ ಬಲಿಯಾಗಿ ಮುಗ್ಧ ಅಪ್ಪ ಅನುಭವಿಸುವ ಸಂಕಷ್ಟಗಳು, ಅವುಗಳೆಲ್ಲದನ್ನೂ ಮೀರಿ ಕೇವಲ ಮಗಳ ಕುರಿತಾಗೇ ಮಿಡಿಯುವ ಅಪ್ಪನ ಮಮತೆಯ ಮನಸು ಮನೋಜ್ಞವಾಗಿ ಚಿತ್ರಿತವಾಗಿದೆ. ತನ್ನ ಮುಗ್ಧತೆಯ ಪ್ರತಿಫಲವಾಗಿ ತನಗೇ ಅರಿಯದೇ ಮಗಳಿಂದ ದೂರವಾಗುವ ನಿರ್ಧಾರ ಕೈಗೊಳ್ಳುವ ಅನಂತರಾಮಯ್ಯ ಕೊನೆಗೆ ತೊರೆದು ಹೋಗುಬೇಕಾದ ಸಂದರ್ಭದಲ್ಲಿ ಮಗಳನ್ನು ಬಿಟ್ಟು ಹೋಗಲಾರೆ ಎಂದು ಪರಿಪರಿಯಾಗಿ ವಿಡಂಬಿಸುವಾಗ ಕರಗದೇ ಹೋಗುವ ಕಲ್ಲುಮನಸ್ಸು ಬಹುಶಃ ಎಲ್ಲೂ ಸಿಗಲಾರದು.
ಚಿತ್ರರಂಗದಲ್ಲಿ ನೂರನೇ ಚಿತ್ರ ಒಂದು ಮೈಲಿಗಲ್ಲು. ಅಂತಹ ನೂರನೇ ಚಿತ್ರವನ್ನು ಒಬ್ಬ ಮೊದಲನೇ ಬಾರಿ ನಿರ್ದೇಶನಕ್ಕೆ ಅಡಿಯಿಟ್ಟಿರುವ ಯುವ ನಿರ್ದೇಶಕನಿಗೆ ಒಪ್ಪಿಸಿ ಅಭಿನಯಿಸುವ ನಿರ್ಧಾರಕ್ಕೆ ರಮೇಶ್ ಅವರನ್ನು ಅಭಿನಂದಿಸಲೇಬೇಕು. ಬಹುಶಃ ಅದು ರಮೇಶ್ ಅಂತಹವರಿಗೆ ಮಾತ್ರ ಸಾಧ್ಯ. ಬುದ್ಧಿಮಾಂದ್ಯ ಅಪ್ಪನ ಪಾತ್ರದ ಅವರ ಅಭಿನಯದಲ್ಲಿ ಒಬ್ಬ ಅನುಭವಿ ಕಲಾವಿದ ಕಾಣಸಿಗುತ್ತಾನೆಯೇ ಹೊರತು ನೂರು ಸಿನಿಮಾಗಳಲ್ಲಿ ಅಭಿನಯಿಸಿರುವ ಒಬ್ಬ ನಾಯಕ ಕಾಣಿಸುವುದೇ ಇಲ್ಲ. ಅದಕ್ಕೇ ರಮೇಶ್ ಅರವಿಂದ್ ನನಗೆ ಮತ್ತೆ ಮತ್ತೆ ಪ್ರಿಯವಾಗುವುದು. ಅವರು ಎಲ್ಲರೂ ಹೇಳುವಂತೆ ’ಡೈರೆಕ್ಟರ್’ಸ್ ಆಕ್ಟರ್’ ಎಂಬುದು ಮತ್ತೆ ಸಾಬೀತಾಗಿದೆ. ’ಅನಂತರಾಮಯ್ಯ’ ಕನ್ನಡ ಚಿತ್ರರಂಗದಲ್ಲಿ ಒಂದು ಮರೆಯಲಾಗದಂತಹ ಪಾತ್ರವಾಗಿ ಉಳಿಯಲಿದೆ ಎಂಬುದಂತೂ ನಿಜ. ಹಾಗೆಯೇ ರಮೇಶ್ ಅರವಿಂದ್ ಎಂಬ ನಟ ಕೂಡ. ಇನ್ನು ಪುಟ್ಟುಲಕ್ಷ್ಮಿ ಎಂಬ ಪುಟಾಣಿ ಮಗಳಾಗಿ ಕಾಣಿಸಿಕೊಂಡಿರುವ ಯುವಿನಾಳ ಚೂಟಿ ಅಭಿನಯಕ್ಕೆ ಮನ ಸೋಲದೇ ಉಳಿಯಲು ಸಾಧ್ಯವಿಲ್ಲ. ಅವಳ ಆ ಚಿಟಪಟ ಮಾತುಗಳು, ವಿಧವಿಧವಾದ ಹಾವಭಾವಗಳು ಇಡೀ ಚಿತ್ರಕ್ಕೆ ಒಂದು ಮೆರುಗಿದ್ದಂತೆ. ಖೈದಿಗಳಾಗಿ ಕಾಣಿಸಿಕೊಂಡಿರುವ ಪ್ರದೀಪ್ ಪೂಜಾರಿ, ಮಂಜುನಾಥ್, ವಿರಾಜ್, ನಿಶಾಂತ್ ಗುಡಿಹಳ್ಳಿ, ಹಾಗೂ ರಾಕ್ ಲೈನ್ ಸುಧಾಕರ ಇವರುಗಳು ಚಿತ್ರದ ಭಾವನಾತ್ಮಕ ಪ್ರಯಾಣಕ್ಕೆ ಒಂದಿಷ್ಟು ಹಾಸ್ಯದ ಲೇಪನವನ್ನಿತ್ತು ಮೆರುಗು ನೀಡುವವರು. ಜೊತೆಜೊತೆಗೇ ಈ ಪಯಣದ ಭಾಗವಾಗಿ ಮನಸ್ಸಿಗೆ ಹತ್ತಿರವಾಗುವವರು. ಇನ್ನು ಪುಟ್ಟುಲಕ್ಷ್ಮಿ ದೊಡ್ಡವಳಾದಾಗಿನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಚಿತಾರಾಮ್ ತಮ್ಮ ಪಾತ್ರವನ್ನು ಯಾವುದೇ ಕುಂದು ಬರದಂತೆ ಅಭಿನಯಿಸಿದ್ದಾರೆ.
ಮೊಟ್ಟ ಮೊದಲ ಚಿತ್ರ ನಿರ್ದೇಶಿಸಿರುವ ರವೀಂದ್ರನಾಥ್ ಅವರು ವಿಭಿನ್ನವಾದ ಚಿತ್ರಕತೆಯ ಮೂಲಕ ಗಮನ ಸೆಳೆಯುತ್ತಾರೆ. ಭುವನ್ ಗೌಡ ಅವರ ಛಾಯಾಗ್ರಹಣ ಪ್ರತಿ ದೃಶ್ಯವೂ ಆತ್ಮೀಯವಾಗುವಂತೆ ನೋಡಿಕೊಳ್ಳುತ್ತವೆ. ಚಿತ್ರದ ಸಂಭಾಷಣೆಯಲ್ಲೂ ಒಂದು ವಿಭಿನ್ನತೆಯನ್ನು ಕಾಣಬಹುದು. ಒಂದು ಭಾವನಾತ್ಮಕ ಎಳೆಯಲ್ಲಿ ರೂಪುಗೊಳ್ಳುವ ಸಿನಿಮಾದಲ್ಲಿ ಒಂದಿಷ್ಟು ಹಾಸ್ಯವನ್ನು ಅಚ್ಚುಕಟ್ಟಾಗಿ ಬೆರೆಸಿ ಸಂಭಾಷಣೆಯನ್ನು ಚುರುಕಾಗಿಸಿರುವುದು ಗುರುಪ್ರಸಾದ್ ಕಶ್ಯಪ್. ಅಲ್ಲಲ್ಲಿ ಡಬಲ್ ಮೀನಿಂಗ್’ಗಳಿದ್ದರೂ ಅತಿ ಎಂದೆನಿಸುವುದಿಲ್ಲ.
“ಎರಡು ಕೈಯಿನ ರಾಕ್ಷಸ ನಿನ್ನ ಹಳ್ಳಕ್ಕೆ ತಳ್ಳಿದ್ರೆ, ನಾಲ್ಕು ಕೈಯಿರೋ ದೇವರು ಕಾಪಾಡದೇ ಇರ್ತಾನಾ” ಎಂದು ಅನಂತರಾಮಯ್ಯ ತನ್ನ ಮಗಳಿಗೆ ಹೇಳಿದಾಗ ತಕ್ಷಣ ನನಗೆ ನೆನಪಾಗಿದ್ದು ಸಂಭಾಷಣೆಕಾರ.
“ಒಂಟಿ ಅನ್ನಿಸಿದಾಗ ಸೂರ್ಯನನ್ನು ನೋಡು, ಅವನು ಕೂಡ ಒಂಟಿನೇ ಆದ್ರೆ ಹೇಗೆ ಹೊಳಿತಾನಲ್ವ” ಎನ್ನುವ ಮಾತುಗಳು ಮತ್ತೆಮತ್ತೆ ಕಾಡುತ್ತವೆ.
ಇನ್ನು ಚಿತ್ರದ ಮುಖ್ಯ ಆಕರ್ಷಣೆ ಚಿತ್ರ ಸಂಗೀತ ಹಾಗೂ ಸಾಹಿತ್ಯ. ಚಿತ್ರದಲ್ಲಿನ ಸಾಂದರ್ಭಿಕ ಹಾಡುಗಳಿಗೆ ಅಷ್ಟೇ ಸೂಕ್ತ ಎನ್ನುವಂತೆ ಚಿತ್ರ ಸಂಗೀತ ಬೆಸೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಚರಣ್ ರಾಜ್’ರ ಶ್ರಮ ಶ್ಲಾಘನೀಯ.
“ಮುಗಿಲು ಬೆಳ್ಮುಗಿಲು… ನನ್ನ ಈ ಮಗಳು, ದೇವರಿಗಿಂತ ಮಿಗಿಲು…” ಎಂಬ ಪ್ರೇಮಕವಿ ಕಲ್ಯಾಣರ ಸಾಲುಗಳು ಪ್ರತಿ ತಂದೆಯ ಮನಸಿನ ಮಾತುಗಳಂತಿವೆ.
ಕಿರಣ್ ಕಾವೇರಪ್ಪ ಬರೆದಿರುವ “ಜೋಗುಳವೇ…” ಹಾಡು ಚಿತ್ರದಲ್ಲಿನ ಭಾವತೀವ್ರತೆಯನ್ನು ಪ್ರೇಕ್ಷಕನಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡುತ್ತದೆ.
“ಬಾನ ತೊರೆದು ನೀಲಿ ಮರೆಯಾಯಿತೇತಕೆ…? ಕರಗೀತೇ ಈ ಮೋಡ ನಿಟ್ಟುಸಿರ ಶಾಖಕೆ…?”
“ಈಗ ಬರುವೆನೆಂದು ಮರೆಯಾದ ಜೀವವೆ…ನನಗೂ ನಿನಗೂ ನೆನಪೊಂದೇ ಈಗ ಸೇತುವೆ…”
ಈ ಹಾಡಿನ ಸಾಹಿತ್ಯವನ್ನು ಆಲಿಸುತ್ತಾ ಆಲಿಸುತ್ತಾ, ಮತ್ತೊಮ್ಮೆ ಜಯಂತ್ ಕಾಯ್ಕಿಣಿಯವರ ಸಾಲುಗಳ ಜಾತ್ರೆಯಲ್ಲಿ ಕಳೆದುಹೋದ ಮಗುವಂತಾಗಿದ್ದೆ ನಾನು. ಈ ಸಾಲುಗಳಿಗೆ ಅತ್ಯಂತ ಸುಮಧುರ ಎನಿಸುವ ಸಂಗೀತ ನೀಡಿತುವ ಚರಣ್’ರಾಜ್ ಹಾಗೂ ಹಾಡಿರುವ ಸಿದ್ಧಾರ್ಥ ಬೆಳ್ಮಣ್ಣು ಅವರಿಗೆ ಒಂದು ಹೃತ್ಪೂರ್ವಕ ಧನ್ಯವಾದ.
“ಈ ಸೃಷ್ಟಿಯಾ ಆ ಮುಗ್ಧತೆಯ ಮರುಸೃಷ್ಟಿಯೇ ಮಗಳು…” ಆಹ್, ಅದೆಷ್ಟು ಸುಂದರ ಕಲ್ಪನೆ. ಈ ಕಲ್ಪನೆಗೆ ಧನಂಜಯ್ ಅವರಿಗೊಂದು ಶರಣು. ಈ ಹಾಡಿಗೆ ದನಿಯಾಗಿರುವ ಗಣೇಶ್ ಕಾರಂತ್ ಅವರ ಕಂಠ ತುಂಬಾ ಇಷ್ಟವಾಯಿತು.
ಒಟ್ಟಾರೆಯಾಗಿ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಸುಂದರ ಸೃಜನಶೀಲ ಚಿತ್ರ ಸೇರ್ಪಡೆಯಾಗಿದೆ. ರಮೇಶ್ ಎಂಬ ಅದ್ಭುತ ನಟನ ನೂರನೇ ಚಿತ್ರಕ್ಕೆ ವಿಭಿನ್ನವಾದ ರಂಗನ್ನು ಕೊಟ್ಟಿರುವುದು ’ಪುಷ್ಪಕ ವಿಮಾನ’ ಚಿತ್ರದ ಹೆಗ್ಗಳಿಕೆ. ಈ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವುದು ನಿರ್ದೇಶಕ ರವೀಂದ್ರನಾಥ್ ಹಾಗೂ ಚಿತ್ರತಂಡ. ಕೆಲವೇ ಕೆಲವು ಪಾತ್ರಗಳನ್ನಿಟ್ಟುಕೊಂಡು ಹೆಣೆದಿರುವ ಕಥೆಯನ್ನು ರಂಜನೀಯವಾಗಿ ಹಾಗೂ ಜೊತೆಜೊತೆಗೇ ಚಿತ್ರದ ಭಾವತೀವೃತೆಯನ್ನು ಪ್ರೇಕ್ಷಕನ ಮನಸ್ಸಿಗೆ ನಾಟುವಂತೆ ತಲುಪಿಸುವಲ್ಲಿ ಇಡೀ ತಂಡ ಯಶಸ್ವಿಯಾಗಿದೆ. ಕೆಲವೊಂದು ಸನ್ನಿವೇಶಗಳಂತೂ ಕಣ್ಣಂಚಿನ ಕಂಬನಿಯನ್ನು ತಡೆಹಿಡಿಯುವ ಪ್ರೇಕ್ಷಕನ ಪ್ರಯತ್ನವನ್ನು ವಿಫಲವಾಗಿಸುತ್ತವೆ. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲರೂ ತಪ್ಪದೇ ನೋಡಿ.