ದೃಷ್ಟಿ ಹಾಯಿಸಿದಷ್ಟು ದೂರ ಮರಳಿನದೇ ಸಾಮ್ರಾಜ್ಯ. ಅಲ್ಲಲ್ಲಿ ಜಾಲಿಮರಗಳ ಹಸಿರು. ನಟ್ಟನಡುವೆ ಗವ್ವೆಂದು ಮೈಚಾಚಿ ಮಲಗಿರುವ ಕಪ್ಪು ರಸ್ತೆಯ ಮೇಲೆ ಶರವೇಗದಲ್ಲಿ ಧಾವಿಸುವ ವಾಹನಗಳು.ಆ ಬಿರುಬಿಸಿಲಿನಲ್ಲೂ ತನಗೂ ಇದಕ್ಕೂ ಏನೂ ಸಂಬಂಧವಿಲ್ಲವೆಂಬಂತೆ ಒಡೆಯನೊಡನೆ ನಡೆಯುತ್ತಿರುವ ಒಂಟೆಗಳು… ಹೌದು ಈ ದೃಶ್ಯವೈಭವ ಅನಾವರಣಗೊಂಡದ್ದು ಜೈಸಲ್ಮೇರ್ ಎಂಬ ಸುವರ್ಣನಗರಿಯಲ್ಲಿ.
ಜೈಸಲ್ಮೇರ್ ಭಾರತದ ಪಶ್ಚಿಮದ ಗಡಿಯ ಕೊನೆಯ ನಗರ. ಥಾರ್ ಮರುಭೂಮಿಯ ನಟ್ಟನಡುವೆ ಇರುವ ಈ ನಗರದಿಂದ ೧೦೦ ಕಿ.ಮೀ ಸಾಗಿದರೆ ಭಾರತ-ಪಾಕ್ ಗಡಿ ಆರಂಭವಾಗುತ್ತದೆ.ವಿಶ್ವಪರಂಪರೆಯ ತಾಣವೆಂದು ಘೋಷಿತವಾಗಿರುವ ಜೈಸಲ್ಮೇರ್ ರಾಜಸ್ತಾನದ ರಾಜಧಾನಿ ಜೈಪುರದಿಂದ ೫೭೫ಕಿ.ಮೀ ಪಶ್ಚಿಮಕ್ಕಿದೆ. ಮರಳುಗಾಡಿನ ಈ ನಗರದಲ್ಲಿ ಸಹಜವಾಗಿಯೇ ಮಳೆಯಿಲ್ಲ, ನೀರಿಲ್ಲ, ಕೃಷಿ- ಹೈನುಗಾರಿಕೆ ಅಪರೂಪ ,ದೊಡ್ಡ ಕೈಗಾರಿಕೆಗಳಿಲ್ಲ… ಆದರೆ ಈ ಜನರನ್ನು ನೋಡಿ. ಇಲ್ಲಗಳ ನೆಪವೊಡ್ಡಿ ಕೈಚೆಲ್ಲಿ ಕುಳಿತಿಲ್ಲ ಅವರು.ತಮ್ಮಲ್ಲಿರುವ ಮೈ ನವಿರೇಳಿಸುವ ಸಂಗೀತ-ನೃತ್ಯ ಪರಂಪರೆ,ಅದ್ಭುತವಾದ ಕಸೂತಿ ಕಲೆ ಮತ್ತು ಭಾರತದಲ್ಲಿ ಎಲ್ಲೂ ಕಾಣದ ವಿಶಾಲವಾದ ಮರುಭೂಮಿಯನ್ನೇ ಬಂಡವಾಳವಾಗಿರಿಸಿಕೊಂಡು ಪ್ರವಾಸೋದ್ಯಮವೆಂಬ ಏಕೈಕ ಆಸರೆಯನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಮರುಭೂಮಿಯಲ್ಲಿ ಟೆಂಟುಗಳನ್ನು ನಿರ್ಮಿಸಿ ಅಲ್ಲೊಂದು ದಿನ ಕಳೆದು ಸಂತಸಪಡಿ ಎಂದು ಪ್ರವಾಸಿಗರನ್ನು ಆದರದಿಂದ ಸ್ವಾಗತಿಸುತ್ತಾರೆ.
ಅಚ್ಚಬಿಳಿಬಟ್ಟೆಯಿಂದ ,ದೃಢವಾದ ಬಿಳಿಹಗ್ಗ ಬಳಸಿ ನಿರ್ಮಿಸಿದ ಟೆಂಟುಗಳು ಜೈಸಲ್ಮೆರ್ ಪ್ರವೇಶಿಸುತ್ತಿದ್ದಂತೆಯೇ ನಿಮಗೆದುರಾಗುತ್ತವೆ. ಊಟ-ತಿಂಡಿಯ ಉಪಚಾರವೂ ಇರುವ ಟೆಂಟ್ ಹೋಟೆಲ್ ಎಂದು ಕರೆಯಬಹುದಾದ ಇಲ್ಲಿ ವೃತ್ತಾಕಾರದಲ್ಲಿ ಸುಮಾರು ೨೦ ರಿಂದ ೩೦ ಟೆಂಟುಗಳಿರುತ್ತವೆ. ಸಿಮೆಂಟಿನ ಅಡಿಪಾಯದ ಮೇಲೆ ಬಟ್ಟೆಯೇ ಗೋಡೆಗಳಾಗಿ ಕಟ್ಟಿರುವ ಪ್ರತಿ ಟೆಂಟಿನ ನಡುವೆ ಐದು ಅಡಿಯ ಅಂತರ. ಮುಂದುಗಡೆ ಎರಡು ಕುರ್ಚಿಗಳಿರಿಸಬಹುದಾದ ಪುಟ್ಟ ಜಗಲಿ. ಬಟ್ಟೆಯ ಬಾಗಿಲನ್ನು ಸರಿಸಿ ಒಳಗಡೆ ಹೋದರೆ ಅಚ್ಚುಕಟ್ಟಾಗಿ ಎರಡು ಮಂಚಗಳು, ಒಂದು ಮೇಜು, ಒಂದು ದೀಪ, ಟೇಬಲ್ ಫಾನ್ ಗಳ ಸ್ವಾಗತ. ಮತ್ತೊಂದು ಬಟ್ಟೆಯ ಬಾಗಿಲನ್ನು ಸರಿಸಿ ಸ್ನಾನಕ್ಕೆ- ಶೌಚಕ್ಕೆ ವ್ಯವಸ್ಥೆ! ಅಕ್ಟೋಬರ್ ತಿಂಗಳಲ್ಲಿ ನಾನು ಹೋದಾಗ ಅತ್ಯಂತ ಹಿತಕರ ಹವೆ ಇತ್ತು. ಮಧ್ಯಾಹ್ನ ರುಚಿಯಾದ ರಾಜಸ್ತಾನೀ ಶೈಲಿಯ ಊಟ ಮುಗಿಸಿ ಹಾಗೆ ಅಡ್ಡಾದೆ.ಮಂದವಾದ ಗಾಳಿ ಮುದನೀಡುತ್ತಿತ್ತು. ನಿದ್ದೆಯಿಂದ ಎದ್ದಾಗ ಸಾಯಂಕಾಲದ ಇಳಿಬಿಸಿಲು ಕಚಗುಳಿ ಇಡುತ್ತಿತ್ತು. ಹಾಗೇ ಹೊರಗಡೆ ಬಂದಾಗ ಒಂಟೆಗಳ ಒಡೆಯರು ಪ್ರವಾಸಿಗರಿಗಾಗಿ ಕಾಯುತ್ತಿದ್ದರು.ಇನ್ನೇಕೆ ತಡ ಎಂದುಕೊಂಡು ಪ್ರವಾಸಿಗಳ ಗುಂಪಿನೊಡನೆ ಒಂಟೆಯ ಬೆನ್ನೇರಿ ಹೊರಟೇಬಿಟ್ಟೆ. ಓಹ್… ಆ ಸುಖಕರ ಬಿಸಿಲಿನಲ್ಲಿ, ಸುಯ್ಯೆಂದು ಬೀಸುವ ಗಾಳಿಯೊಡನೆ, ಒಂಟೆ ಗಂಭೀರವಾಗಿ ಮರಳಿನ ದಿಬ್ಬಗಳ ಮೇಲೆ ನಡೆಯುತ್ತಿದ್ದರೆ ಮಜವೋ ಮಜಾ.. ಸುಮಾರು ದೂರ ಪ್ರವಾಸಿಗರನ್ನು ಕರೆದೊಯ್ದ ಒಂಟೆಗಳ ಮಾಲೀಕರು ಪ್ರಶಸ್ತವಾದ ಸ್ಥಳವೊಂದರಲ್ಲಿ ಗುಂಪನ್ನು ಇಳಿಸಿದರು. ಆ ಎತ್ತರವಾದ ದಿಬ್ಬದ ಮೇಲೆ ಕಾಲು ಚಾಚಿ ಕುಳಿತುಕೊಂಡು, ಸೂರ್ಯ ದಿನದಪಯಣವನ್ನು ಮುಗಿಸಿ ಮರಳಸಮುದ್ರದಲ್ಲಿ ಮರೆಯಾಗುವ ಆ ಅದ್ಭುತ ದೃಶ್ಯವನ್ನು ನಾವೆಲ್ಲಾ ಕಣ್ತುಂಬಿಕೊಂಡೆವು. ಸ್ವಲ್ಪಹೊತ್ತು ಮರಳಲ್ಲಿ ಅಡ್ಡಾಡಿ ಟೆಂಟಿಗೆ ಮರಳಿದೆವು. ಸರಿ ರಾತ್ರಿಯಾಗುತ್ತಿದ್ದಂತೆಯೇ ಮಧ್ಯದಲ್ಲಿ ನಿರ್ಮಿಸಿದ ಬಯಲು ರಂಗಮಂದಿರದಲ್ಲಿ ಕಿನ್ನರಲೋಕವೊಂದು ಸೃಷ್ಟಿಯಾಯಿತು. ಕಲಾವಿದರ ತಂಡವೊಂದು ರಾಜಸ್ತಾನೀ ಜಾನಪದ ಸಂಗೀತ – ನೃತ್ಯದ ರಸದೌತಣವನ್ನು ನಮಗೆ ಉಣಬಡಿಸಿತು. ರಾತ್ರಿ ರುಚಿಕಟ್ಟಾದ ಊಟಮುಗಿಸಿ ಟೆಂಟಿನ ಜಗಲಿಯಲ್ಲಿ ಕುಳಿತುಕೊಂಡರೆ ಸುತ್ತಲೂ ನೀರವ ಮೌನ.. ಆಕಾಶದ ತುಂಬೆಲ್ಲಾ ಅಸಂಖ್ಯಾತ ತಾರೆಯರು… ಸುಖವಾಗಿ ಬೀಸುವ ಗಾಳಿ… ಯಾವುದೋ ಬೇರೆಯೇ ಲೋಕದಲ್ಲಿರುವ ಅನುಭವ…
ಜೈಸಲ್ಮೆರ್, ಬಂದೇಜ್/ ಬಾಂಧನಿ ಸೀರೆಗಳ ತವರೂರು. ಬೇಸಗೆಯಲ್ಲಿ ಇಲ್ಲಿ ಹೊರಗೆ ಕಾಲಿಡಲಾರದಂಥ ಬಿರುಬಿಸಿಲು.ಸಮಯ ಕಳೆಯಲು ಇಲ್ಲಿನ ಮಹಿಳೆಯರು ಆರಂಭಿಸಿದ ಹವ್ಯಾಸ ಇಂದು ಬೃಹತ್ ಉದ್ದಿಮೆಯಾಗಿ ಬೆಳೆದು ನಿಂತಿದೆ. ಬಿಳಿಬಟ್ಟೆಯನ್ನು ಅಲ್ಲಲ್ಲಿ ದಾರದಿಂದ ಕಟ್ಟಿ ಬಣ್ಣಗಳಲ್ಲಿ ಅದ್ದಿ ತೆಗೆದಾಗ ದಾರಕಟ್ಟಿದ ಜಾಗ ಬಿಳಿಯಾಗೇ ಉಳಿದು ಅದ್ದಿದ ಬಣ್ಣದ ನಡುವೆ ಸುಂದರ ಚಿತ್ತಾರ ಮೂಡಿಸುತ್ತದೆ. ಇಂಥ ಸೀರೆಗಳು, ಡ್ರೆಸ್ ಮೆಟೀರಿಯಲ್ ಗಳು ಕೊಳ್ಳುಗರನ್ನು ಮಂತ್ರಮುಗ್ಧಗೊಳಿಸುತ್ತವೆ.ಅಲ್ಲದೆ ಮೃದುವಾದ ಹತ್ತಿಬಟ್ಟೆಯ ಹೊದಿಕೆ – ಹಾಸುಗಳು, ಒಂಟೆಯ ಉಣ್ಣೆಯಿಂದ ತಯಾರಿಸಿದ ಅತ್ಯಂತ ಹಗುರವಾದ[೧೦೦ಗ್ರಾಮ್ ತೂಕ]ರಜಾಯಿಗಳು,ಬಣ್ಣದ ಬಟ್ಟೆತುಂಡುಗಳನ್ನು ಕಲಾತ್ಮಕವಾಗಿ ಜೋಡಿಸಿ ತಯಾರಿಸಿದ ಕೌದಿಗಳನ್ನು ನೋಡಿದವರ ಜೇಬು ಖಾಲಿಯಾಗುವುದು ನಿಶ್ಚಿತ.ಜೊತೆಗೆ ಅಲಂಕಾರಿಕ ಬಿಳಿತಗಡಿನ ಕಿವಿಯೋಲೆಗಳು,ಡಾಬು,ಬಳೆಗಳ ಥಳಕಿನ ಜಗತ್ತು ಕಣ್ಣುಕುಕ್ಕುತ್ತದೆ. ಇಂಥ ವಸ್ತುಗಳನ್ನು ಬೆಂಗಳೂರಿನಲ್ಲಿ ಕಂಡಿದ್ದ ಎರಡರಷ್ಟು ದುಡ್ಡು ಕೊಟ್ಟು ಕೊಂಡಿದ್ದ ನನಗೆ ಇಲ್ಲಿ ಇವುಗಳ ಬೆಲೆ ಕೇಳಿ ಅಚ್ಚರಿಯಾಯಿತು. ನೀವು ಶಾಪಿಂಗ್ ಖಯಾಲಿಯವರಾದರೆ ಜೈಸಲ್ಮೇರ್ ಗೆ ಹೋಗುವಾಗ ಖಾಲಿ ಚೀಲವನ್ನೂ, ಕೈತುಂಬಾ ಹಣವನ್ನು ಒಯ್ಯಲು ಮರೆಯದಿರಿ.ನಿಮ್ಮ ಹಣಕ್ಕೆ ಖಂಡಿತ ಮೋಸವಿಲ್ಲ.
ಇನ್ನೊಂದು ವಿಷಯ ಗೊತ್ತೇ ?ಇಲ್ಲಿನ ಜನ ಕಲ್ಲನ್ನು ಕೂಡ ಮಾರಬಲ್ಲ ಚಾಣಾಕ್ಷರು.’ ಹಬುರ್’ ಎಂಬ ಸ್ಥಳೀಯವಾಗಿ ಸಿಗುವ ಕಂದುಬಣ್ಣದಕಲ್ಲು ವಿಶ್ವಪ್ರಸಿದ್ಧ. ಈ ಕಲ್ಲು ಚೂರನ್ನು ಹಾಲಿನಲ್ಲಿ ಹಾಕಿದರೆ ಕೆಲ ಗಂಟೆಗಳಲ್ಲಿ ಮೊಸರು ಸಿದ್ಧ![ ಇದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಿಂದ ಪ್ರತಿಪಾದಿಸಲ್ಪಟ್ಟಿದೆ- ವಿವರಗಳಿಗೆ-www.iisc.ernet.in/currsci/sep102005/729.pdf.]. ಇದನ್ನು ದಿನವೂ ಕುಡಿಯುವ ನೀರಿನಲ್ಲಿ ಹಾಕಿ [ ಅಥವಾ ಈ ಲೋಟದಲ್ಲಿ ನೀರು ಹಾಕಿ] ೮ ಗಂಟೆಗಳ ಬಳಿಕ ಕುಡಿಯಿರಿ. ಮೂರುತಿಂಗಳಲ್ಲಿ ಸಂಧಿವಾತ, ಕೊಲಸ್ಟರಾಲ್, ಬಿ.ಪಿ ಗಳಿಂದ ಮುಕ್ತರಾಗಿ! ಹೀಗೆ ನಾನಾ ಗುಣವಿಶೇಷಗಳನ್ನು ಹೊತ್ತ ಹಬುರ್ ನ ಲೋಟಗಳು, ಪಾತ್ರೆಗಳು,ಪಿರಾಮಿಡ್ ಗಳು ಇಲ್ಲಿ ಲಭ್ಯ. ನಾನು ಕೂಡಾ ಲೋಟವೊಂದನ್ನು ತಂದಿದ್ದೇನೆ. ಮೊಸರಾಗುವುದು ನಿಜ. ಉಳಿದ ಈ ಕಾಯಿಲೆಗಳು ನನ್ನ ಸ್ನೇಹಿತರಲ್ಲ. ಆದ್ದರಿಂದ ಈ ಬಗ್ಗೆ ಏನೂ ಹೇಳಲಾರೆ.
ಜೈಸಲ್ಮೇರ್ ನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ’ತ್ರಿಕೂಟಗೃಹ’ ಕೋಟೆ. ರಾಜಾ ಜಯಸಾಲನಿಂದ ೧೧೫೬ರಲ್ಲಿ ನಿರ್ಮಿತವಾದ ಈ ಕೋಟೆಯಿಂದಾಗಿಯೇ ಜೈಸಲ್ಮೇರ್ ಎಂಬ ಹೆಸರು ಬಂದಿದೆ. ಮೇರು ಎಂದರೆ ಬೆಟ್ಟ. ಬೆಟ್ಟವೊಂದರ ಮೇಲೆ ಜಯಸಾಲನಿಂದ ಕಟ್ಟಲ್ಪಟ್ಟ ಕೋಟೆಯಿರುವ ಸ್ಥಳ ’ಜಯಸಾಲಮೇರು”ಕಾಲಕ್ರಮೇಣ ಜೈಸಲ್ಮೇರ್ ಆಯಿತು. ಸಂಪೂರ್ಣವಾಗಿ ಹಳದಿಕಲ್ಲಿನಿಂದ ಕಟ್ಟಿದ ಈ ಕೋಟೆ ಭವ್ಯವಾಗಿದೆ.ಅರಮನೆಯನ್ನು ಸುಸ್ಥಿತಿಯಲ್ಲಿ ರಕ್ಷಿಸಲಾಗಿದೆ. ಒಳಗೆ ಪ್ರವೇಶಿಸಿದರೆ ಮುಂದಿನ ಬಾಗಿಲು ಕಾಣದಂತೆ ಜಿಗ್ ಜಾಗ್ ಮಾದರಿಯ ನಿರ್ಮಾಣದ ಹಿಂದೆ ಶತ್ರು ಅಕಸ್ಮಾತ್ ಪ್ರವೇಶಿಸಿದರೂ ಈ ಚಕ್ರವ್ಯೂಹದಿಂದ ಹೊರಬರಲಾಗದೇ ಕಂಗಾಲಾಗಲಿ ಎಂಬ ಉದ್ದೇಶವಿದೆ. ಭಾರತದ ಇತಿಹಾಸದಲ್ಲೇ ಯಾವುದೇ ರಾಜನಿಂದ ಆಕ್ರಮಣಕ್ಕೆ ಒಳಗಾಗದ ಕೋಟೆ ಎಂಬ ಹೆಗ್ಗಳಿಕೆ ಇದರದ್ದು.[ ಹನಿನೀರಿಲ್ಲದ ಈ ಪ್ರದೇಶದ ಮೇಲೆ ಯುದ್ಧಸಾರುವ ಭಂಡಧೈರ್ಯವನ್ನು ಯಾವ ಮೂರ್ಖರಾಜ ತಾನೇ ಮಾಡುತ್ತಾನೆ ಹೇಳಿ!]ಕೋಟೆಯ ಒಳಗೆ ನಿರ್ಮಿತವಾಗಿರುವ ಐದು ಬಾವಿಗಳಲ್ಲಿ ನೀರು ಕಂಡು ಆಶ್ಚರ್ಯವಾಯಿತು.ಈಗ ಬೆಳೆಯುತ್ತಿರುವ ಜನಸಂಖ್ಯೆಗೆ ಈ ಬಾವಿಗಳ ನೀರು ಸಾಲದಿರುವುದರಿಂದ ದೂರದ ಹಿಮಾಲಯದಿಂದ ಇಂದಿರಾಗಾಂಧಿ ಕಾಲುವೆಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟು ಜನ ಈಗಲೂ ಕೋಟೆಯೊಳಗೇ ವಾಸಿಸುತ್ತಿದ್ದಾರೆ. ಕೋಟೆಯೊಳಗೆ ಪ್ರವೇಶಿಸಿ ರಾಜನ ಅರಮನೆಯನ್ನು ನೋಡಿಕೊಂಡು ತುದಿಯನ್ನು ತಲುಪಿ ದೃಷ್ಟಿಹಾಯಿಸಿದರೆ ಚಿನ್ನದ ಮರಳಿನ ನಡುವೆ ಚಿನ್ನದ ಬಣ್ಣದ ಕಲ್ಲುಕಟ್ಟಡಗಳಿಂದ ಕಂಗೊಳಿಸುವ ’ಗೋಲ್ಡನ್ ಸಿಟಿ’ ಎಂಬ ಹೆಸರು ಹೊತ್ತ ಜೈಸಲ್ಮೇರ್ ನ ವಿಹಂಗಮ ನೋಟವನ್ನು ಸವಿಯಬಹುದು.
ಜೈಸಲ್ಮೇರ್ ಗೆ ಉತ್ತಮವಾದ ಸಂಪರ್ಕ ವ್ಯವಸ್ಥೆ ಇದೆ. ೩೦೦ ಕಿ.ಮಿ ದೂರದ ಜೋಧ್ ಪುರದ ವರೆಗೆ ವಿಮಾನದಲ್ಲಿ ಹಾರಿ ನಂತರ ರೈಲು-ಬಸ್ಸುಗಳಲ್ಲಿ ಹೋಗಬಹುದು . ಅಲ್ಲದೇ ಎಲ್ಲ ಪ್ರಮುಖ ನಗರಗಳಿಂದ ರೈಲು-ಬಸ್ ವ್ಯವಸ್ಥೆ ಇದೆ. ಇನ್ನೂ ಸ್ಥಳೀಯ ಸಂಸ್ಕೃತಿ ಜೀವಂತವಾಗಿರುವ, ಮರುಭೂಮಿಯ ಜೀವನದ ಅನುಭವವನ್ನು ಕೊಡುವ ಜೈಸಲ್ಮೇರ್ ಗೆ ಒಮ್ಮೆ ಭೇಟಿ ಕೊಡುವುದನ್ನು ಮರೆಯಬೇಡಿ.
– ವೇದಾ ಅಠವಳೆ, ಬೆಂಗಳೂರು