ಅಲ್ಲೊಂದು ಪಾರ್ಕ್ ಇತ್ತು, ಆ ಪಾರ್ಕಿನ ಸುತ್ತಮುತ್ತಲೂ ಸಾಫ್ಟ್ವೇರ್ ಕಂಪನಿಗಳೇ ತುಂಬಿಕೊಂಡಿದ್ದವು. ಅಲ್ಲೊಬ್ಬ ತಳ್ಳುಗಾಡಿಯನ್ನ ಪಾರ್ಕಿನ ಪಕ್ಕದಲ್ಲಿರಿಸಿಕೊಂಡು ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯಾಪಾರ ನಡೆಸಿಕೊಂಡಿದ್ದ.ಪ್ರತಿದಿನ ಸಾಫ್ಟ್ವೇರ್ ಇಂಜಿನಿಯರ್ಗಳು, ಜತೆಗೆ ಬೇರೆ ಬೇರೆ ವೃತ್ತಿಯವರು ಇವನ ಗ್ರಾಹಕರಾಗಿದ್ದರು. ದಿನಕ್ಕೆ ಏನಿಲ್ಲವೆಂದರೂ 3ರಿಂದ 4 ಸಾವಿರ ಲಾಭ ಗಳಿಸುತ್ತಿದ್ದ. ಸುಮಾರು 5-6 ವರ್ಷ ಹೀಗೆ ಕಷ್ಟಪಟ್ಟು ದುಡಿದ, ಕಾಲ ಸಾಗುತ್ತಿತ್ತು. ಹೀಗಿರಲಾಗಿ ಒಂದು ದಿನ ತಾನಿದ್ದ ರಸ್ತೆಯ ಕೊನೆಯಲ್ಲಿದ್ದ ಬಿಲ್ಡಿಂಗ್ ಲೀಸಿಗೆ ಇದೆ ಎಂದು ತಿಳಿಯಿತು, ತನ್ನಲ್ಲಿದ್ದ ದುಡ್ಡನ್ನ ಸುರಿದು ಅಲ್ಲೊಂದು ಹೋಟೆಲ್ ಶುರು ಮಾಡಿದ. ಪರಿಚಯವಿದ್ದ ಗ್ರಾಹಕರೆಲ್ಲಾ ಈತನ ಹೋಟೆಲ್ಲಿಗೆ ಬರತೊಡಗಿದರು, ಹೋಟೆಲ್ ವ್ಯವಹಾರ ಭರ್ಜರಿಯಾಗೇ ಸಾಗಿತು. ಒಂದೆರಡು ವರ್ಷಗಳ ತರುವಾಯ ನಯಾಪೈಸೆ ತೆರಿಗೆ ಕಟ್ಟದ ದುಡ್ಡಿನಲ್ಲಿ ಆ ಬಿಲ್ಡಿಂಗ್ ಕೊಂಡುಕೊಂಡ. ಬಂದ ಬಂಡವಾಳದಿಂದ ಬೇರೆ ಬೇರೆ ಏರಿಯಾದಲ್ಲಿ ಹೋಟೆಲ್ ಶುರು ಮಾಡಿದ. ಈಗ ಅವನು ಹಲವಾರು ಹೋಟೆಲ್ಗಳ ಒಡೆಯ.
ಇದು ಟ್ಯಾಕ್ಸ್ ಕಟ್ಟದೆ ಕೋಟ್ಯಾಧಿಪತಿಯಾದವನ ಯಶೋಗಾಥೆ. ರಾಜಕಾರಣಿಗಳು ರಾಜಾರೋಷವಾಗಿ ಲೂಟಿ ಮಾಡಿದರೆ, ಇಂತಹವರು ಗೊತ್ತಿಲ್ಲದಂತೆ ಲೂಟಿ ಮಾಡುತ್ತಾರೆ. ಇಂತಹ ಹಲವಾರು ರಿಯಲ್ ಲೈಫ್ ಹೀರೊಗಳನ್ನ ನೀವು ಎಲ್ಲೆಡೆಯೂ ನೋಡಿರಬಹುದು.