ಕಥೆ

ಈ ಕಥೆ ಕೇವಲ ಕಾಲ್ಪನಿಕ

ಹೌದು ಈ ಕಥೆ ಕೇವಲ ಕಾಲ್ಪನಿಕ.. ಆದರೆ ಕಥೆಯಲ್ಲಿ ಬರುವ ಪಾತ್ರಗಳು..?? ತಿಳಿದೊ ತಿಳಿಯದೆಯೋ ಯಾರಿಗಾದರೂ ಹೋಲಿಕೆಯಾಗಬಹುದೇನೊ.. ಹಾಗೇನಾದರೂ ಆದಲ್ಲಿ ಒಂದು ಕ್ಷಮೆ ಇರಲಿ.. ಇಲ್ಲಿ ನಾನು ಎಂಬ ಪಾತ್ರ ನಾನಲ್ಲ, ನನ್ನಲ್ಲಿ ಹುಟ್ಟಿದ ಕಲ್ಪನೆಯ ಕಥೆಗೆ ರೂವಾರಿ ಅಷ್ಟೇ.. ಬರೆದು ಮುಗಿದ ಬರಿದು ಹಾಳೆಯ ಭವಿತದ ಪುಟ ಈ ಕಥೆ. ಇದರ ಪ್ರೇರಣೆ ನೂರು ಜನರ ಬದುಕಿನ ಸೋಲು ಎಂಬ ವಿಷಾದ ನನ್ನೊಳಗೆ ಕಥೆ ಹುಟ್ಟಿದಾಗಿನಿಂದ ಕಾಡುತ್ತಲೇ ಇದೆ.. ಮುಂದೊಮ್ಮೆ ಇದನ್ನು ಮತ್ತೆ ಓದುವಾಗಲೂ ಕಾಡುತ್ತೆ.. ಆ ನೋವಲ್ಲಿ ಸುರಿಯುವ ಹನಿ ನೀರು ಅವರೆಲ್ಲ ಶಾಂತಿಗಾಗಿ ಸ್ಮರಿಸುತ್ತೆ… ಈ ತಪ್ಪಿಗೆ ಕ್ಷಮೆ ಇರಲಿ..


ನನ್ನ ಬದುಕಿಗೆ ಏನೂ ತೊಂದರೆ ಮಾಡಿಕೊಳ್ಳದಂತೆ ಬದುಕುತ್ತಿರೊ ಒಬ್ಬ ಲೆಕ್ಚರರ್ ನಾನು.. ಕಳೆದ ಹದಿನೈದು ವರ್ಷಗಳಿಂದ ಈ ವೃತ್ತಿ ಮಾಡ್ತಾ ಇದ್ದೇನೆ.. ಹೇಳಿದ್ನಲ್ಲ ಆಗಲೇ, ನನ್ನ ಬದುಕಿಗೆ ಏನೂ ಕೊರತೆ ಆಗದಷ್ಟು ಸಂಬಳವಿದೆ.. ನ್ಯಾಶನಲ್ ಹೈವೆ 66 ರಲ್ಲಿ ಹೋಗುತ್ತಾ ಇದ್ದೆರೆ, ಉಡುಪಿ ಮಂಗಳೂರಿನ ಮಧ್ಯದಲ್ಲೆಲ್ಲೊ ನನ್ನ ಕಾಲೇಜು ಸಿಗುತ್ತೆ.. ಮನೆಯಿಂದ ಕಾಲೇಜಿಗೆ ಪ್ರತಿನಿತ್ಯ ಒಂದು ಘಂಟೆ ಪ್ರಯಾಣ, ಕಾಲೇಜು ಮುಗಿಸಿ ಮತ್ತೆ ಮನೆ ಕಡೆ ಪ್ರಯಾಣ.. ನನ್ನ ಮನೆಯಲ್ಲಿ ನಾನೊಬ್ಬನೇ.. ಹಂಗಿಲ್ಲದ ಜೀವನ ಯಾಕೋ ಹಿಂಸೆ. ಹಸಿವಾದರೆ ಊಟ, ಅದಕ್ಕೊಂಚೂರು ಅಡುಗೆ. ಒಂದು ಎಲೆ ಅಡಿಕೆ ಬಾಯಲ್ಲಿಟ್ಟು ಅಗಿದು ಮುಗಿಸುವ ಹೊತ್ತಿಗೆ ಮಹಮ್ಮದ್ ರಫಿ “ಅಭಿ ನಾ ಜಾವೋ ಛೋಡ್ ಕರ್, ಕೆ ದಿಲ್ ಅಭೀ ಭರಾ ನಹೀ” ಎಂದು ಮೂರು ಬಾರಿ ಹಾಡಿ ಮುಗಿಸಿರುತ್ತಾನೆ. ಒಬ್ಬನ ಹೊಟ್ಟೆ ತುಂಬುವಷ್ಟು ಅಡಿಗೆ ಮಾಡೋಕೆ ಅಷ್ಟು ಸಮಯ ಸಾಕಲ್ಲವೇ…? ಬರೆಯೋಕೆ ಬರುತ್ತೆ ಅಂತ ತೋರಿಸಿಕೊಳ್ಳೋಕೆ ಒಂದಷ್ಟು ಬಿಳಿ ಹಾಳೆಯ ಮೇಲೆ ಶಾಯಿ ಚೆಲ್ಲಿ ಹಾಸಿಗೆಯ ಮೇಲೆ ದೇಹ ಹರಡಿಬಿಟ್ಟರೆ ಆ ದಿನಕ್ಕೊಂದು ಗುಡ್ ಬೈ.. ಮತ್ತೆ ಮುಂಜಾವಿನಲ್ಲೆದ್ದು ನ್ಯಾಶನಲ್ ಹೈವೆ 66 ರಲ್ಲಿ ಸಾಗುತ್ತೆ ಬದುಕು..

ಬಸ್ಸಿನಲ್ಲಿ ಕಿಟಕಿ ಪಕ್ಕ ಕೂತು ಸಾಗುವಾಗ ಬೀಸೋ ಗಾಳಿ ಮತ್ತು ಅಕ್ಕ ಪಕ್ಕ ಇರೊ ಆ ಗದ್ದೆಗಳು ಅದೆಷ್ಟೋ ನೆನಪುಗಳನ್ನು ತೆನೆಯೊಡುವಂತೆ ಮಾಡುತ್ತೆ.. ನಿಮಗೂ ಆಗುತ್ತಾ..? ಅದೇಕೆ ಎಂಬುದು ಇನ್ನೂ ಅರ್ಥವಾಗಿಲ್ಲ. ಆದರೆ ಈ ಹೈವೆ ನನ್ನ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದೇನೊ.. ನನ್ನ ಕಾಲೇಜಿನ ದಿನಗಳಿಂದಲೂ ಸ್ವಲ್ಪವೂ ಬದಲಾವಣೆ ಆಗದಿರುವ ನನ್ನ ಯೋಚನೆ, ತತ್ವ ಸಿದ್ಧಾಂತಗಳಂತೆ ಈ ಹೈವೆ ಕೂಡ ಬದಲಾಗಿಲ್ಲ.. ಮನದ ನೋವಿಗೆ ನಗುವ ತೇಪೆ ಹಾಕಿದಂತೆ ಈ ಹೈವೇ ಕೂಡ ಮೂಡಿದ ಹೊಂಡಕ್ಕೆ ಮಾಸಿದ ತೇಪೆ ಹಚ್ಚಿ ಕೂತಿದೆ.. ಅದೆಷ್ಟೊ ಜನರನ್ನು ಪರಿಚಯ ಮಾಡಿಸಿರೊ ಈ ಹಾದಿ, ಜೊತೆ ಇರುವೆ ನೀ ನಡೆವಾಗ ಎಂದ ಸಂಗಾತಿಯನ್ನೂ ನೀಡಿತ್ತು..

ಅವಳನ್ನು ನೋಡಿದ ಕ್ಷಣವೇ ಯಾಕೊ ಆಕೆ ಇಷ್ಟವಾಗಿದ್ದಳು.. ಮಾತನಾಡಬೇಕು ಅನ್ನಿಸಿತ್ತು.. ಹೆದ್ದಾರಿಯ ಮೇಲೆ ನನಗಿದ್ದ ಪ್ರೀತಿಯನ್ನು ತಡೆಯಲಾರದೇ, ಅದನ್ನು ಹಂಚಿಕೊಳ್ಳಲು ಮತ್ತೊಬ್ಬರನ್ನು ಕಳಿಸಿರಬಹುದೇನೊ ಅನ್ನಿಸಿತ್ತು. ದಿನವೂ ಒಂದೊಂದು ಬಸ್ಸನ್ನು ಹಿಡಿದು ಹೋಗುತ್ತಿದ್ದವ ಆಕೆ ಹತ್ತುತ್ತಿದ್ದ ಬಸ್ಸನ್ನೇ ಗುರಿಯಾಗಿಸಿ ಹೋಗತೊಡಗಿದೆ. ನನಗೇ ತಿಳಿಯದೆ ನನ್ನ ದಿನಚರಿ ಬದಲಾಗುತ್ತಿತ್ತು.. ಆಕೆ ಹತ್ತುತ್ತಿದ್ದ ಬಸ್ಸಿನಲ್ಲಿ ಜನಸಂಖ್ಯೆ ಸ್ವಲ್ಪ ಹೆಚ್ಚು.. ಇದು ಆಕೆಯ ಜೊತೆ ಮಾತನಾಡುವ ನನ್ನ ಆಸೆಯನ್ನು ಸಾಯಿಸುತ್ತಿತ್ತು. ಕೊನೆಗೊಂದು ದಿನ ನನ್ನ ಪಕ್ಕದಲ್ಲೇ ನಿಂತಾಗ ಧೈರ್ಯ ಮಾಡಿ ಬ್ಯಾಗ ಹಿಡಿದುಕೊಳ್ಳಲೇ ಎಂದು ಕೇಳಿದ್ದೆ.. ಒಂದು ಸಣ್ಣ ಮುಗುಳ್ನಗುವಿನ ಜೊತೆ ಬ್ಯಾಗ್ ಕೊಟ್ಟಿದ್ದಳು.. ಅದೇ ನಮ್ಮ ಸ್ನೇಹದ ಬುನಾದಿ. ನಂತರ ಅದು ರೂಢಿಯಾಯಿತು. ಆದರೂ ಒಂದು ಮುಗುಳ್ನಗು ಮತ್ತೊಂದು ಥ್ಯಾಂಕ್ಸ್ ಬಿಟ್ಟರೆ ಮತ್ತೇನೂ ಇಲ್ಲ. ದಿನ ಹೀಗೇ ಸಾಗುತ್ತಿತ್ತು.

ದಿನ ಕಳೆದಂತೆ ಥ್ಯಾಂಕ್ಸ್ ದಾಟಿ ಒಂದೆರಡು ಮಾತುಗಳತ್ತ ಸಾಗಿತ್ತು ಸ್ನೇಹ. ಆಕೆಗೂ ನನ್ನ ಸ್ನೇಹ ಇಷ್ಟವಾಗುತ್ತಿತ್ತೇನೊ. ಹಾಗಾಗಿ ಸಂಜೆ ತಿರುಗಿ ಬರುವ ಬಸ್ಸು ಯಾವುದೆಂದು ತಿಳಿಯುವಂತಾಯ್ತು. ಸಂಜೆಯ ಬಸ್ಸಿನಲ್ಲಿ ಸೀಟಿಗೆ ಕೊರತೆ ಇರಲಿಲ್ಲ. ಇದು ಪರಿಚಯ ಬೆಳೆಸಿಕೊಳ್ಳಲು ಅನುಕೂಲವಾಗಿತ್ತು. ಆಕೆಯ ಬಗ್ಗೆ ಎಲ್ಲವೂ ತಿಳಿದಿತ್ತು. ಆದರೆ ಆಕೆಯ ಮನೆಯವರ ಬಗ್ಗೆ ಏನೂ ಹೇಳಿರಲಿಲ್ಲ, ನನಗೂ ಕೇಳಲು ಕಸಿವಿಸಿ. ಕೊನೆಗೊಂದು ದಿನ ಹೇಗೊ ಕೇಳುವ ಧೈರ್ಯ ಮಾಡಿದ್ದೆ. ಅದಕ್ಕವಳು ನಾನು ಬರೋದು ಆಶ್ರಮದಿಂದ, ನನಗ್ಯಾರೂ ಇಲ್ಲ, ಚಿಕ್ಕಂದಿನಲ್ಲಿ ಅಪ್ಪ ಅಮ್ಮ ಬೇರೆಯಾದಾಗ ಆಶ್ರಮದಲ್ಲಿ ಬಿಟ್ಟು ಹೋದ್ರಂತೆ ಎಂದು ನಗುತ್ತಲೇ ಉತ್ತರಿಸಿದ್ದಳು, ನಾನು ಮಾತ್ರ ಸ್ವಲ್ಪ ಭಾವುಕನಾಗಿದ್ದೆ. ಆದರೆ ಸ್ನೇಹ ಮಾತ್ರ ತುಂಬಾ ಗಾಢವಾಗಿತ್ತು. ಕೊನೆಗೊಂದು ದಿನ ತುಂಬಾ ಸಾಧಾರಣವಾಗಿಯೇ ನನ್ನ ಮದುವೆ ಆಗ್ತೀಯಾ ಅಂತ ಕೇಳಿದ್ದೆ. ಆಶ್ರಮದಲ್ಲಿ ಕೇಳು ಎಂಬ ಸೀದಾ ಸಾದಾ ಉತ್ತರ ಬಂದಿತ್ತು. ಆಶ್ರಮದಿಂದಲೂ ಆಕ್ಷೇಪವಿಲ್ಲ. ಅದು ಬಂದಿದ್ದು ನಮ್ಮ ಮನೆಯಿಂದಲೇ.. ಕೊನೆಗೆ ಮನೆಯ ವಿರೋಧದ ನಡುವೆಯೇ ಸಿಂಪಲ್ಲಾದ ಮದುವೆ ಆಗಿತ್ತು. ಎರಡು ಸಹಿಯಲ್ಲಿ ನಮ್ಮ ಮದುವೆ ಮುಗಿದಿತ್ತು.

ಮದುವೆಯ ಹೊಸತು.. ಮನೆಯ ವಿರೋಧ ಎಂಬುದು ಸಂಬಂಧಿಕರಿಂದ ನಮ್ಮನ್ನು ದೂರವಿಟ್ಟಿತ್ತು.. ನನಗೆ ಆಗ ತಾನೇ ಕೆಲಸ ಸಿಕ್ಕಿದ್ದು.. ಲೆಕ್ಚರರ್ ಕೆಲಸ ಅಂದರೆ ಸಂಬಳಕ್ಕೇನೂ ಕೊರತೆ ಇಲ್ಲ ಅನ್ನೊ ಮಾತಿದೆ.. ಖಾಯಂ ಆಗದ ಮ್ಯಾನೇಜ್’ಮೆಂಟ್ ಸಂಬಳ ಕೊಡದ ಪ್ರೈವೇಟ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಸೇರಿಕೊಂಡವ ನಾನು.. ತಿಂಗಳ ಖರ್ಚು ಸರಿದೂಗುವಷ್ಟು ಸಂಬಳ.. ಆದರೆ ಬದುಕಬೇಕು ಅಂತ ಹೊರಟೋರಿಗೆ ಅದೊಂದು ಸಮಸ್ಯೆಯಂತೆ ಅನ್ನಿಸಲೇ ಇಲ್ಲ.. ಬಡವನಾದರೆ ಏನು ಪ್ರಿಯೆ, ಕೈ ತುತ್ತು ತಿನಿಸುವೆ ಅಂತ ನಗಾಡುತ್ತಲೇ ಬದುಕು ಸಾಗುತ್ತಿತ್ತು.. ನಾನೂ ಕೆಲಸಕ್ಕೆ ಹೋಗ್ತೇನೆ ಎಂದಾಗ ಬೇಡ ಎಂದಿದ್ದೆ.. ಆದರೆ ಕೆಲವು ಅನಿವಾರ್ಯತೆಗಳು ಕೆಲಸಕ್ಕೆ ಹೋಗು ಎಂದು ಹೇಳುವಂತೆ ಮಾಡಿತ್ತು.. ಕೆಲಸಕ್ಕೆ ಹೊರಟ ನಂತರ ಮನೆ ಸ್ಥಿತಿ ಸುಧಾರಿಸಿತ್ತು.. ಹಣವಿಲ್ಲದಿದ್ದರೂ ಸಹ ಕೊರತೆ ಅಂತ ಯಾವುದೂ ಇರಲಿಲ್ಲ… ಅಷ್ಟಕ್ಕೆ ನಾವು ತೃಪ್ತರು..

ಅವಳಿಗೆ ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ತಾ ಇತ್ತು.. ಅದೇನೂ ತೊಂದ್ರೆ ಇಲ್ಲ ಬಿಡು ಅಂತ ಅವಳು ನಿರ್ಲಕ್ಷಿಸಿ ಕೆಲಸಕ್ಕೆ ಹೋಗುತ್ತಿದ್ದಳು ಮತ್ತು ಅದಕ್ಕೆ ನಾನೂ ತಲೆದೂಗಿದ್ದೆ.. ಆದರೆ ಒಂದು ದಿನ ಮಾತ್ರ ಆಫೀಸಿನಲ್ಲೇ ಹೊಟ್ಟೆ ನೋವು ಜೋರಾಯ್ತು.. ಹೊಟ್ಟೆ ಹಿಡಿದು ಬಿದ್ದಳಂತೆ.. ತಕ್ಷಣ ಆಸ್ಪತ್ರೆಗೂ ಸೇರಿಸಿದ್ದಾರೆ.. ಆಸ್ಪತ್ರೆಗೆ ನಾನು ಹೋಗುವ ಹೊತ್ತಿಗೆ ಎಕ್ಸ್ ರೇ, ಸ್ಕ್ಯಾನಿಂಗ್ ಅಂತೆಲ್ಲ ಬ್ಯೂಸಿ..  ಸಧ್ಯಕ್ಕೆ ಕರೆದುಕೊಂಡು ಹೋಗಿ ಎಂದ ಡಾಕ್ಟರ್ ಮತ್ತೆ ಬರುವಂತೆ ಮೂರು ದಿನದ ನಂತರ ಹೇಳಿದರು.. ಸಣ್ಣ ಹೊಟ್ಟೆನೋವಿಗೆ ಇರೊ ಬರೊ ಟೆಸ್ಟ್ ಎಲ್ಲಾ ಮಾಡಿ ಬಿಲ್ ಮಾಡ್ಬಿಟ್ರು ಅಂತ ಆಕೆ ನಗಾಡಿದ್ರೂ ನನ್ನ ಆತಂಕ ಹೆಚ್ಚಾಗುತ್ತಲೇ ಇತ್ತು.. ಮೂರನೆ ಜಾವ ಎದ್ದು ಆಕೆಯನ್ನು ಆಸ್ಪತ್ರೆಗೆ ಹೊರಡಿಸುವ ಹೊತ್ತಿಗೆ ನಾನು ಸುಸ್ತಾಗಿದ್ದೆ.. ಮುಂದೇನಾಗಬಹುದು ಎಂಬ ಪರಿಕಲ್ಪನೆಯೂ ಇಲ್ಲದ ನಮಗೆ ಆಸ್ಪತ್ರೆಗೆ ಹೋದ ಮೇಲೆ ತಿಳಿದದ್ದು ಆಕೆಯಲ್ಲಿ ಬೆಳೆಯುತ್ತಿರುವ ರೋಗ ಕ್ಯಾನ್ಸರ್ ಎಂದು.. ಸುಂದರ ಸ್ವಪ್ನ ಹೊತ್ತ ಎರಡು ಜೀವಗಳ ಬದುಕಿಗೆ ಕ್ಯಾನ್ಸರ್ ಒಳಹೊಕ್ಕಿದ್ದು ಹೀಗೆ..

ನಾನಂತೂ ಸಂಪೂರ್ಣ ಇಳಿದು ಹೋಗಿದ್ದೆ.. ಸ್ಥಬ್ದ ಗಡಿಯಾರದಂತೆ ಚಲನೆಯೇ ಇಲ್ಲದಂತಾಗಿತ್ತು.. ನೀವೇನೂ ಹೆದರಬೇಡಿ, ಇದು ಗುಣಪಡಿಸಲಾಗದ ಖಾಯಿಲೆಯಲ್ಲ.. ಟ್ರೀಟ್ಮೆಂಟ್ ಆರಂಭ ಮಾಡೋಣ ಎಂದು ಧೈರ್ಯ ತುಂಬಿದವರು ಡಾಕ್ಟರ್.. ಬಹುಷಃ ಅವರು ಕೇವಲ ಧೈರ್ಯ ತುಂಬೋದಕ್ಕೆ ಮಾತ್ರ ಅದನ್ನು ಹೇಳಿದ್ದಾ ಅಂತ ಈಗಲೂ ಅನ್ನಿಸುತ್ತಿರುತ್ತೆ.. ನಾನೂ ಹೂ ಹೇಳಿದೆ.. ಆಕೆಯನ್ನು ಉಳಿಸಿಕೊಳ್ಳೊ ಆತುರ ನನ್ನದು.. ಆಕೆ ಮಾನಸಿಕವಾಗಿ ಕುಗ್ಗಿದ್ದಳಾ..? ಗೊತ್ತಿಲ್ಲ.. ನನ್ನೆದುರು ಮಾತ್ರ ಏನೂ ಆಗಲ್ಲ ಧೈರ್ಯವಾಗಿರು ಎಂದೇ ಹೇಳಿದ್ದಳು… ಕೀಮೊಥೆರಪಿ ಆರಂಭವಾಗುವಾಗ, ಡಾಕ್ಟರ್ ಅವಳ ಸೊಂಟಕ್ಕಿಂತ ಕೆಳಗೆ ಧುಮುಕುತ್ತಿದ್ದ ಕರಿಡಾಂಬರಿನ ರಸ್ತೆಯಂಥ ಕೂದಲನ್ನು ನೋಡಿ, ಇದರ ಆಸೆ ಬಿಟ್ಬಿಡು ಮಗಳೇ ಎಂದಿದ್ದರು.. ಕೂದಲುರುದುರುತ್ತೆ ಎಂದಾಗ ಆಕೆ ಟ್ರೀಟ್ಮೆಂಟ್ ತೆಗೆದುಕೊಳ್ಳಲು ಹೆದರಿದ್ದಳು.. ವಿಧಿಯಿಲ್ಲ ಎಂದು ಅವಳಿಗೂ ಗೊತ್ತು.. ಆಗ ಅಲ್ಲೇ ಪಕ್ಕದಲ್ಲಿ ಇದ್ದ ಗಾರ್ಡನ್’ನಲ್ಲಿ ನಿಂತು ಒಂದು ಫೋಟೊ ತೆಗಿಯೊ, ಮುಂದೆ ಕೂದಲು ಇಷ್ಟುದ್ದ ಇರಲ್ಲ, ಫೋಟೊ ನೋಡ್ಕೊಂಡಾದ್ರೂ ಖುಷಿ ಪಡ್ತೇನೆ ಅಂತ ಪರಿಶುದ್ಧ ನಗು ಚೆಲ್ಲಿ ಫೋಟೊ ತೆಗೆಸಿದ್ದನ್ನು ಪ್ರಿಂಟ್ ಹಾಕಿಸಿ ನನ್ನ ರೂಮಲ್ಲಿ ಹಾಕಿಕೊಂಡಿದ್ದೇನೆ…

ಚಿಕಿತ್ಸೆ ಮುಂದುವರಿದಂತೆ ನಾನು ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತ ಅವಳಿಗೆ ಧೈರ್ಯ ತುಂಬುವುದನ್ನು ಮುಂದುವರಿಸಿದ್ದೆ.. ಇದೊಂದು ರೋಗವೇ ಅಲ್ಲ ಅನ್ನುವಂತೆ ಮಾತನಾಡಿದ್ದೆ.. ಕ್ಯಾನ್ಸರ್ ಸರ್ವೈವರ್ ಕಥೆಗಳನ್ನು ಎಲ್ಲೆಲ್ಲಿಂದಲೋ ಓದಿ ಅದರ ಬಗ್ಗೆ ಹೇಳ್ತಾ ಇದ್ದೆ.. ಯುವರಾಜ್ ಸಿಂಗ್ ಸಹ ಕ್ಯಾನ್ಸರ್ ಸರ್ವೈವರ್.. ಅವನಂತೆ ನೀನೂ ಆಗ್ತೀಯಾ.. ಕ್ಯಾನ್ಸರ್ ಕಾಟ ಮುಗಿದ ಮೇಲೆ ಇಬ್ಬರೂ ಸೇರಿ ನಮ್ಮ ಅನುಭವಗಳನ್ನು ಪುಸ್ತಕದ ರೂಪದಲ್ಲಿ ತರೋಣ.. ನಾಲ್ಕು ಜನ ನಮ್ಮ ಕಥೆಗಳನ್ನು ಓದಲಿ ಎನ್ನುತ್ತಿದ್ದೆ.. ಚಿಕಿತ್ಸೆಯ ಸಮಯದಲ್ಲಿ ಉಂಟಾಗುತ್ತಿದ್ದ ಆರ್ಥಿಕ ಸಮಸ್ಯೆಯೂ ಕೂಡ ನನ್ನನ್ನು ಚಿಂತೆಗೀಡಾಗುವಂತೆ ಮಾಡಿತ್ತು.. ಆದರೆ ಸ್ನೇಹಿತರು ಇದಕ್ಕೆ ಜೊತೆ ನೀಡಿ ನನ್ನ ಋಣಭಾರ ಹೆಚ್ಚಿಸಿ ಬಿಟ್ಟರು.. ಆದರೆ ಆಕೆ ದಿನ ಹೋದಂತೆ ಕೃಷವಾಗುತ್ತಲೇ ಇದ್ದಳು.. ನಾಲ್ಕನೇಯ ಕೀಮೊಥೆರಪಿಯ ಹೊತ್ತಿಗೆ ಆಕೆ ಉಳಿಯುವ ಅನುಮಾನವೂ ಹೆಚ್ಚಾಗಿತ್ತು… ಆದರೆ ಹೋರಾಟ ನಿಂತಿರಲಿಲ್ಲ.. ಕೊನೇಯ ದಿನಗಳಲ್ಲಂತೂ ಕೇವಲ ಎಲುಬು ಚರ್ಮಗಳು ಮಾತ್ರ ಕಾಣುವಂತಾಗಿದ್ದಳು.. ತೂಕ ಅರ್ಧದಷ್ಟು ಮಾತ್ರವಿತ್ತು.. ಹೊಟ್ಟೆಗೆ ಹೋದ ಆಹಾರವೆಲ್ಲ ವಾಂತಿಯಾಗುತ್ತಿತ್ತು. ಆಕೆಯ ನೋವನ್ನು ನೋಡಲಾಗದೇ ಕರ್ಕೊಂಡು ಬಿಡು ದೇವರೇ ಅಂತಲೂ ನಾನು ಪ್ರಾರ್ಥಿಸಿದ್ದೆ…

ಕೊನೇಯ ದಿನಗಳಲ್ಲಿ ಆಕೆಗೇ ಬದುಕು ಹಿಂಸೆ ಅನ್ನಿಸುವಂತಾಗಿಬಿಟ್ಟಿತ್ತು.. ಆಕೆ ಬಿಟ್ಟು ಹೋದ ನಂತರ ಜೊತೆ ನೀಡಿದ ಗೆಳೆಯರು ಎಂದೂ ಜೊತೆ ಇರ್ತೇವೆ ಅನ್ನೊ ಭರವಸೆ ನೀಡಿದವರಂತೆ ವರ್ತಿಸಿದರು.. ಈ ವಿಷಯವನ್ನು ಮನೆಯವರಿಗೆ ತಿಳಿಸಬೇಕಾ..? ತಿಳಿಸಿದರೇನು ಪ್ರಯೋಜನ..? ಅನ್ನೊ ಅನುಮಾನಗಳೆಲ್ಲ ಕಾಡುತ್ತವೆ.. ಗೊಂದಲದಲ್ಲೇ ಎರಡು ವರ್ಷ ಕಳೆದು ಬಿಟ್ಟೆ.. ಬದುಕು ಅದಾಗದೇ ಸುಧಾರಿಸಿಕೊಳ್ಳಲಿ ಅಂತ ಬಿಟ್ಟು ಬದುಕುತ್ತಿದ್ದೇನೆ.. ಶಾಪಗ್ರಸ್ತ ಅಪ್ಸರೆಯೊಬ್ಬಳು ಬದುಕು ಮುಗಿಸಿದಳು ಅನ್ನೊ ಸಮಾಧಾನದ ಅಲ್ಪ ವಿರಾಮ…  ಬೆಳೆಸೋಕೆ ಅಂತ ಮಕ್ಕಳನ್ನೂ ಹೆರಲಿಲ್ಲ, ಬದಲಾಗಿ ಆಕೆಯೇ ಮಗುವಾಗಿದ್ದವಳು.. ಹೆಂಡತಿ ಅಂದರೆ ಹಾಗೇ ಅಲ್ಲವೇ..? ತಾಯಿ, ಮಗು, ಸ್ನೇಹಿತೆ ಹೀಗೆ ಒಂದೇ ವ್ಯಕ್ತಿಯ ಹತ್ತು ಪಾತ್ರಗಳು.. ಇದೆಲ್ಲ ನೆನಪಾಗಿ ಮೌನಿಯಾಗಿಬಿಡುತ್ತೇನೆ.. ಚಿಕಿತ್ಸೆ ಚಿಕಿತ್ಸೆ ಎಂದು ಆಕೆಗೆ ನೀಡಿದ ಹಿಂಸೆ ಇಂದಿಗೂ ಕಾಡುತ್ತೆ.. ಕ್ಷಣ ಕ್ಷಣವೂ ಮಾಡಿದ ಹೋರಾಟ, ಎದುರಿಸಿದ ಸ್ಥಿತಿಗಳು, ಅನುಭವಗಳು ಎಲ್ಲವನ್ನು ಸೇರಿಸಿ ಸಾವಿರ ಸಾವಿರ ಪುಟ ತುಂಬುವ ಗೃಂಥವೊಂದನ್ನೇ ರಚಿಸಿಬಿಡಬಹುದು.. ಆದರೇನು ಪ್ರಯೋಜನ..? ಸೋತು ಮಲಗಿದ ಬದುಕು ಪ್ರೇರಣೆಯಾಗದು..

ಆಕೆಯ ದೇಹದ ಕ್ಯಾನ್ಸರ್ ನನ್ನ ಬದುಕಿನ ಕ್ಯಾನ್ಸರ್ ಆಗಿ ಬದಲಾದದ್ದು ನನ್ನದೇ ನಸೀಬು.. ಆಕೆ ಬಿಟ್ಟು ಹೋದದ್ದು ನನ್ನ ಸೋಲಲ್ಲವೇ..?  ಸಾವನ್ನು ನಾಲ್ಕು ದಿನಕ್ಕೆ ಮರಿಬೋದು.. ಸೋಲನ್ನು ಮರೆಯಲಾಗುತ್ತಾ…? ಅರ್ಥವಿಲ್ಲದ ನೂರಾರು ಪ್ರಶ್ನೆಗಳು.. ಮತ್ತೊಂದು ಮದುವೆ ಆಗಬಹುದಲ್ಲ ಗೆಳೆಯಾ ಎಂಬ ಮಾತನ್ನು ಹಿಂಜರಿಕೆಯಿಂದಲೇ ಸ್ನೇಹಿತರು ಹೇಳಿದ್ದಾರೆ.. ಆದರೇಕೊ ಮನ ಒಪ್ಪದು.. ಜೊತೆಗಾರರಿಲ್ಲದ ಬದುಕು ಸಾಗದೇ..? ನೋಡೇ ಬಿಡೋಣ ಎಂದೆಣಿಸಿ ಸಾಗುತ್ತಿದ್ದೇನೆ.. ಎರಡು ವರ್ಷಗಳಲ್ಲಿ ನನ್ನೊಳಗೆ ಆದ ಬದಲಾವಣೆ ತುಂಬಾ.. ನ್ಯಾಶನಲ್ ಹೈವೆ 66 ಹೊಸ ರೂಪ ಪಡೆದಂತೆ ಒಂಟಿ ಬದುಕೂ ಹೊಸ ರೂಪ ಪಡೆದಿದೆ.. ಬದಲಾಗದ ಸಿದ್ಧಾಂತಗಳು ಯಾವುದೋ ಮೂಲೆ ಸೇರಿದೆ.. ದಿನಚರಿಯಲ್ಲಿ ಬದಲಾವಣೆ ಆಗಿ ಬಹಳ ಕಾಲವಾಯ್ತು.. ಉಪ್ಪು ಖಾರ ಇಲ್ಲದ ಅಡುಗೆಯಂತೆ ರುಚಿಯಲ್ಲಿ ಬದಲಾವಣೆಯಿಲ್ಲದ ಸಪ್ಪೆ ಬದುಕು.. ಸಪ್ಪೆ ಅಡುಗೆ ಆರೋಗ್ಯಕ್ಕೆ ಒಳ್ಳೆಯದಲ್ಲವೇ…?? ಆದರೂ ಆಕೆ ಬಿಟ್ಟು ಹೋದದ್ದು ಸಹಿಸಲಾಗದು.. ರಫಿಯ ಅದೇ ಹಾಡು ನೆನಪಾಗುತ್ತೆ “ಅಭಿ ನಾ ಜಾವೋ ಛೋಡ್ ಕರ್, ಕೆ ದಿಲ್ ಅಭೀ ಭರಾ ನಹೀ”. ಅದರ ಅರ್ಥ ಇಷ್ಟೇ ಈಗ ನನ್ನನ್ನು ಬಿಟ್ಟು ಹೋಗಬೇಡ, ಯಕೆ ಅಂದ್ರೆ ನನ್ನ ಹೃದಯವಿನ್ನೂ ತುಂಬಿಲ್ಲ…

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Hegde

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಹಳ್ಳಿ ಇವರ ಮೂಲ.. ಉಡುಪಿಯಲ್ಲಿ MSc ಮಾಡಿ ಒಂದು ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿ ಈಗ NITK ಸುರತ್ಕಲ್’ನಲ್ಲಿ PhD ಮಾಡುತ್ತಿದ್ದಾರೆ... ಓದಿದ್ದು ಕಂಪ್ಯೂಟರ್ ಆದರೂ ಸಾಹಿತ್ಯದಲ್ಲಿ ಆಸಕ್ತಿ.. ಬರೆಯುವುದು ಹವ್ಯಾಸ.. ವಿಜ್ಞಾನದ ಬರಹಗಳು, ಕಥೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯುವ ಆಸಕ್ತಿ ಹೆಚ್ಚು..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!