Featured ಪ್ರಚಲಿತ

ತುರ್ತು ಪರಿಸ್ಥಿತಿಗಿಂತ ಸಾವಿರ ಪಾಲು ವಾಸಿಯಲ್ಲವೇ ಈಗಿನ ಪರಿಸ್ಥಿತಿ?

ಬ್ಯಾಂಕ್‌ಗಳ ಮುಂದೆ ಜನಗಳ ಪರದಾಟ, ಹಾಗಂತೆ, ಹೀಗಂತೆ, ಚಿನ್ನ, ಆಸ್ತಿ ಮೇಲೂ ಆದಾಯ ತೆರಿಗೆ ಇಲಾಖೆಯವರ ಕಣ್ಣು ಅಂತ ಬ್ರೇಕಿಂಗ್ ನ್ಯೂಸ್ ಮೇಲೆ ನ್ಯೂಸ್ ಕೊಟ್ಟು ಜನಗಳನ್ನು ಹೆದರಿಸಿ ಟೀಆರ್ಪಿ ಬಾಚುತ್ತಿರುವ ಮಾಧ್ಯಮಗಳು.. ಎಲ್ಲಾದಕ್ಕೂ ಮೋದಿನೇ ಕಾರಣ ಅಂತ ಹೋದಲ್ಲಿ ಬಂದಲ್ಲಿ ಬಾಯಿ ಬಡಿದುಕೊಳ್ಳುತ್ತಿರುವ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಮತ್ತವರ ಚೇಲಾಗಳು.. ತಮ್ಮ ಬ್ಯಾಂಕುಗಳಲ್ಲಿ ದುಡ್ಡು ಇದ್ದರೂ ಕಪ್ಪು ಹಣವನ್ನು ಬಿಳಿ ಮಾಡುವ ದಂಧೆಯಲ್ಲಿ ಶಾಮೀಲಾಗಿ  ಜನಗಳಿಗೆ ಅವರ ದುಡ್ಡನ್ನು ಕೊಡಲು ನಿರಾಕರಿಸುತ್ತಿರುವ ಕೆಲವೊಂದು ಭ್ರಷ್ಟ ಬ್ಯಾಂಕ್ ಅಧಿಕಾರಿಗಳು.. ಇವಿಷ್ಟೂ ನಮ್ಮ ದೇಶದಲ್ಲಿ ನವೆಂಬರ್ ೮ರ ರಾತ್ರಿಯಿಂದ ಕಂಡು ಬರುತ್ತಿರುವ ದಿನನಿತ್ಯದ ಘಟನಾವಳಿಗಳು. ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಅನಾಣ್ಯೀಕರಣ(ಡಿಮಾನಿಟೈಸೇಶನ್) ಕಾರ್ಯಕ್ರಮ ಎಲ್ಲೋ ಒಂದು ಕಡೆ ಜನಗಳ ಸಹನೆಗೆ ದೊಡ್ಡ ಪರೀಕ್ಷೆ ಅಂದರೆ ಅತಿಶಯೋಕ್ತಿಯಾಗಲಾದರು. ದೇಶದ ಬಹುತೇಕ ಜನರು ಸರ್ಕಾರದ ಈ ನಿರ್ಧಾರದಿಂದ ವೈಯಕ್ತಿಕವಾಗಿ ಸ್ವಲ್ಪ ಕಷ್ಟ ಅನುಭವಿಸಿದರೂ ಸರ್ಕಾರದ ನಡೆಯನ್ನು ಬೆಂಬಲಿಸಿ ಕಪ್ಪುಹಣ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ತಮ್ಮದೂ ಸಾಥ್ ಇದೆ ಅಂತ ತೋರಿಸಿದ್ದಾರೆ. ಆದರೆ ಪೂರ್ವಾಗ್ರಹಪೀಡಿತ ಮಾಧ್ಯಮಗಳು ಹಾಗೂ ಕೇಜ್ರಿವಾಲ್, ಮಮತಾ, ರಾಹುಲ್, ಅಖಿಲೇಶ್ ಯಾದವ್ ಮತ್ತಿತರ ಕಚ್ಚೆಹರುಕ ರಾಜಿಕಾರಣಿಗಳು ಮಾತ್ರ ದೇಶದಲ್ಲೇನೋ ದೊಡ್ದ ಗಂಡಾಂತರವೇ ನಡೆದು ಹೋಗಿದೆ ಅಂತ ಜನರನ್ನು ಯಾಮಾರಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ಮೋದಿ ಸರ್ಕಾರದ ಈ ನಿರ್ಧಾರದ ಬಳಿಕ ಇವರೆಲ್ಲಾ ಸೇರಿ ಏನೆಲ್ಲಾ ನಾಟಕಗಳನ್ನಾಡುತ್ತಿದ್ದಾರೆ ಅನ್ನುವುದನ್ನು ನೋಡೋಣ.

೨೦೦೦ ಮುಖಬೆಲೆಯ ಹೊಸ ನೋಟನ್ನು ಯಾರೋ ಒಂದಿಬ್ಬರು ಕಲರ್ ಜೆರಾಕ್ಸ್ ಮಾಡಿ ಜನರನ್ನು ವಂಚಿಸಲು ಯತ್ನಿಸಿದರು ಅಂದ ಕೂಡಲೇ ಅದನ್ನು ಮೋದಿ ಸರಕಾರದ ವಿಫಲತೆ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಮೋದಿ ಸರ್ಕಾರ ಹೊಸ ನೋಟನ್ನು ಕಲರ್ ಪ್ರಿಂಟ್ ಮಾಡಲು ಗುತ್ತಿಗೆ ಕೊಡುತ್ತೇನ್ರೀ? ೨೦೦೦ ನೋಟು ಸೆಕ್ಯೂರ್ ಅಲ್ಲ ಅನ್ನೋ ಗುಲ್ಲನ್ನೂ ಹಬ್ಬಿಸುವ ಯತ್ನವಾಯಿತು. ಅಲ್ಲದೆ ಕೆಲವೊಂದು ಆಸ್ಪತ್ರೆ ಮತ್ತು ಪೆಟ್ರೋಲ್ ಬಂಕ್ಗಳಲ್ಲಿ ಹಳೆಯ ೫೦೦ ಮತ್ತು ೧೦೦೦ ನೋಟನ್ನು ಸ್ವೀಕರಿಸುತ್ತಿಲ್ಲ ಅಂದ ಕೂಡಲೇ ಅದಕ್ಕೂ ಮೋದಿ ಸರ್ಕಾರ ಕಾರಣ ಅಂತ ಆಪಾದನೆ ಮಾಡಲಾಯಿತು. ಯಾವ ಆಸ್ಪತ್ರೆಗಳು ಹಳೆಯ ನೋಟನ್ನು ಸ್ವೀಕರಿಸುತ್ತಿಲ್ಲವೋ ಅವುಗಳ ವಿರುದ್ಧ ದೂರು ದಾಖಲಿಸುವ ಬದಲು ಇದೇನಾ ಅಚ್ಚೇದಿನ್ ಅಂತ ಕೇಂದ್ರ ಸರಕಾರದ ಮೇಲೆ ಬೆಟ್ಟು ಮಾಡಲಾಯಿತು. ರಾಜ್ಯದಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ತೆಪ್ಪಗೆ ಕೂತಿದ್ದ ಗಂಜಿಗಿರಾಕಿಗಳು ನೋಟುಗಳ ಅನಾಣ್ಯೀಕರಣ ಆದ ಮೇಲೆ ರೈತರ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಕ್ರೆಡಿಟ್ ಕಾರ್ಡ್ ಮುಖಾಂತರ ಹಾಕಿದರೆ ಫ್ಯೂಯೆಲ್ ಸರ್ಚಾರ್ಜ್ ಅಂತ ೨.೫-೩.೦% ಶುಲ್ಕ ಮೊದಲಿಂದಲೇ ಜಾರಿಯಲ್ಲಿದೆ. ಅದನ್ನೂ ಮೋದಿ ಸರಕಾರದ ಈ ನಿರ್ಧಾರಕ್ಕೆ ಲಿಂಕ್ ಮಾಡುತ್ತಿರುವುದನ್ನು ನೋಡಿದರೆ ಹೇಗಾದರೂ ಮಾಡಿ ಮೋದಿ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸಲು ಕಾಣದ “ಕೈ”ಗಳು ಹವಣಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ದೆಹಲಿ ಜನ ಚಿಕೂನಗುನ್ಯಾದಲ್ಲಿ ನರಳುತ್ತಿದ್ದಾಗ ಸಂಪುಟ ಸಭೆ ಬಿಟ್ಟಾಕಿ, ದೆಹಲಿಯಲ್ಲೇ ಇಲ್ಲದಿದ್ದ ಕೇಜ್ರಿವಾಲ್ ಸರ್ಕಾರ, ಮೋದಿ ಸರ್ಕಾರದ ಅನಾಣ್ಯೀಕರಣದ ನಿರ್ಧಾರ ಹೊರಬಂದ ಕೂಡಲೇ ತುರ್ತುಪರಿಸ್ಥಿತಿ ಉಂಟಾಗಿದೆ ಎಂದು ಹೇಳಿಕೆ ನೀಡಿ ತುರ್ತು ಸಂಪುಟ ಸಭೆ ಕರೆಯುತ್ತಾರೆ. ಅಖಿಲೇಶ್ ಯಾದವ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಪ್ಪು ಹಣ ರಿಸೆಷನ್ ಸಂದರ್ಭದಲ್ಲಿ ದೇಶಕ್ಕೆ ಆರ್ಥಿಕ ಭದ್ರತೆ ಒದಗಿಸಬಲ್ಲದು ಅಂತ ಹೇಳಿಬಿಟ್ಟರು. ಮಮತಾ ಬ್ಯಾನರ್ಜಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸಿದರು. ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್ ಉರಿ ದಾಳಿಯಲ್ಲಿ ಸತ್ತ ಸೈನಿಕರ ಸಂಖ್ಯೆ ನೋಟು ಬಂದ್ ಆದ ಮೇಲೆ ಸತ್ತವರ ಸಂಖ್ಯೆಗಿಂತ ಕಮ್ಮಿ ಅಂತ ಹೇಳಿಕೆ ಕೊಡುತ್ತಾರೆ ರಾಜ್ಯಸಭೆಯಲ್ಲಿ!! ಭಯೋತ್ಪಾದಕರ ಕೈಯಲ್ಲಿ ಸತ್ತ ಜನರ ಸಂಖ್ಯೆಗಿಂತ ಸರ್ಕಾರದ ನಿರ್ಧಾರದಿಂದ ಸತ್ತ ಜನರ ಸಂಖ್ಯೆ ಜಾಸ್ತಿ ಅಂತ ಹೇಳಿಕೆ ನೀಡಿ ಭಯೋತ್ಪಾದಕರಿಗೆ ಸರ್ಟಿಫಿಕೇಟ್ ಕೊಡ್ತಾರೆ ಅಂದರೆ ಯೋಚಿಸಿ ಮೋದಿ ಸರ್ಕಾರದ ಈ ನಿರ್ಧಾರದಿಂದ ಇವರೆಲ್ಲಾ ಅದೆಷ್ಟು ಉರ್ಕೊಂಡಿದ್ದಾರೆ ಅಂತ. ಪಟ್ಟಿ ಮಾಡಿದರೂ ಮುಗಿಯದ ಹಿಂದಿನ ಕಾಂಗ್ರೆಸ್ ಸರ್ಕಾರದ ದೊಡ್ಡ ಹಗರಣಗಳಲ್ಲಿ ಒಂದಾದ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಾಜಿ ವಾಯುಸೇನಾ ಮುಖ್ಯಸ್ಥ ಎಸ್.ಪಿ. ತ್ಯಾಗಿ ಅವರನ್ನು ಬಂಧಿಸಿ ಈ ಹಗರಣದಲ್ಲಿ ತಿಂದು ತೇಗಿದ್ದ ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಿದಾಗ, ಅನಾಣ್ಯೀಕರಣದ ಗಮನವನ್ನು ಬೇರೆಡೆ ಸೆಳೆಯಲು ಮೋದಿ ಸರ್ಕಾರ ಸಿಬಿಐಯನ್ನು ಬಳಸುತ್ತಿದೆ ಅಂತ ಹೊಸರಾಗವನ್ನು ಎಳೆಯಿತು ಕಾಂಗ್ರೆಸ್. ವಿರೋಧ ಪಕ್ಷದ ಕಾಳಧನದ ಕುಳಗಳೆಲ್ಲಾ ಒಂದಾಗಿ ಸಂಸತ್ತಿನ ಮುಂದೆ ಪ್ರತಿಭಟನೆಗೆ ಇಳಿದರು. ಆಕ್ರೋಶ್ ದಿವಸಕ್ಕೆ ಕರೆ ಕೊಟ್ಟರು. ಜಪ್ಪಯ್ಯ ಅಂದರೂ ಜನ ಸೇರಲಿಲ್ಲ ಅಂದಾಗ ಮತ್ತಷ್ಟು ಭ್ರಮನಿರಸನಗೊಂಡರು. ಛೇ.. ದುಡ್ಡು ಕೊಟ್ಟು ಜನ ಸೇರ್ಸೋಣಾ ಐಟಿ ಅಧಿಕಾರಿಗಳ ಕಾಟ ಬೇರೆ!!

ರಾಹುಲ್ ಗಾಂಧಿಯ ಟ್ವಿಟ್ಟರ್ ಖಾತೆ ಹ್ಯಾಕ್ ಆದ ಕೂಡಲೇ ಡಿಜಿಟಲ್ ಬ್ಯಾಂಕಿಂಗ್ ಸುರಕ್ಷಿತವಲ್ಲ ಅನ್ನೋ ಗುಲ್ಲನ್ನೂ ವ್ಯವಸ್ಥಿತವಾಗಿ ಹಬ್ಬಿಸುವ ಪ್ರಯತ್ನ ಮಾಡಲಾಯಿತು. ಅಲ್ಲಾ ನೀವೇ ಹೇಳಿ, ನಮ್ಮ ಪಾಸ್ವಾರ್ಡ್ಗಳನ್ನು ಸುರಕ್ಷಿತವಾಗಿಟ್ಟಿಲ್ಲದಿದ್ದರೆ ಆನ್ಲೈನ್ ಬ್ಯಾಂಕಿಂಗ್ ಏನು, ಫೇಸ್ಬುಕ್ ಖಾತೆಯೂ ಹ್ಯಾಕ್ ಆಗಬಹುದು. ಆಕ್ಸಿಸ್ ಬ್ಯಾಂಕ್ ಕಪ್ಪು ಹಣವನ್ನು ಬಿಳಿ ಮಾಡುವ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಬಹಿರಂಗವಾದಾಗ ಆ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದ ಜನರನ್ನು ಹೆದರಿಸೋ ಪ್ರಯತ್ನ ಕೂಡಾ ಮಾಡಲಾಯಿತು. ರಾಜ್ ದೀಪ್ ಸರ್ದೇಸಾಯಿ, ಬರ್ಕಾ ದತ್ ಮುಂತಾದ ಮೋದಿ ವಿರೋಧಿ ಪತ್ರಕರ್ತರು ಮೈಕ್ ಹಿಡಿದು ಜನರ ಬಾಯಿಂದ ಮೋದಿ ಸರ್ಕಾರಕ್ಕೆ ಬೈಗುಳ ಬರಲಿ, ಅನಾಣ್ಯೀಕರಣ ಮಾಡಿದ್ದು ತಪ್ಪು ಅನ್ನೋ ಅಭಿಪ್ರಾಯ ಜನಗಳು ವ್ಯಕ್ತಪಡಿಸಲಿ ಅಂತ ಹಗಲು ರಾತ್ರಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಹೊಸ ನೋಟುಗಳು ಸಿಕ್ಕುತ್ತಾ ಇಲ್ಲ ಅಂತ ಬಾಯ್ಬಿರಿಯುತ್ತಿದ್ದ ಎಡಚರರು ಮತ್ತು ಕಾಂಗ್ರೆಸ್ ಚೇಲಾಗಳು ಕರ್ನಾಟಕದ ಮುಖ್ಯಮಂತ್ರಿಗಳ ಆಪ್ತರು ಎನ್ನಲಾದ ಅಧಿಕಾರಿಗಳ ಬಳಿ ಅಪಾರ ಪ್ರಮಾಣದ ೨೦೦೦ರ ನೋಟುಗಳನ್ನು ಐಟಿ ಅಧಿಕಾರಿಗಳು ಪತ್ತೆ ಹಚ್ಚಿದಾಗ ಮಾತೇ ಹೊರಡದೆ ಬಿಲಗಳಲ್ಲಿ ಅಡಗಿ ಕುಳಿತಿದ್ದರು. ಲೇಟೆಸ್ಟ್ ಆಗಿ ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಬರೋ ೫೦೦ ಮತ್ತು ೧೦೦೦ ಮುಖಬೆಲೆಯ ನೋಟುಗಳಿಗೆ ತೆರಿಗೆ ವಿನಾಯಿತಿ ನೀಡಿರೋ ಬಗ್ಗೆಯೂ ಪುಂಖಾನುಪುಂಖ ಕಥೆಗಳನ್ನು ಹರಿಯ ಬಿಡಲಾಗುತ್ತಿದೆ. ಕಾದು ನೋಡೋಣ, ಈ ವಿನಾಯಿತಿಯಲ್ಲೂ ಯಾವುದಾದರೂ ತಿರುವುಗಳಿರಬಹುದು.

ಜನಧನ್ ಯೋಜನೆ ಬಂದಾಗ ವಿಪಕ್ಷಗಳು ಅದನ್ನು ವಿಫಲ ಯೋಜನೆ ಎಂದು ಹಳಿದವು. ಹಳ್ಳಿ ಹಳ್ಳಿಗಳಲ್ಲಿ ಜನಧನ್ ಮುಖಾಂತರ ಖಾತೆಗಳನ್ನು ತೆರೆಯಲಾಯಿತು. ತಮ್ಮ ಹಲವಾರು ಭಾಷಣಗಳಲ್ಲಿ ಮೋದಿಯವರು ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಮಾತನಾಡುತ್ತಾ ಬಂದಿದ್ದರು. ಜನಧನ್ ಮೂಲಕ ದೇಶದ ಎಲ್ಲರೂ ಖಾತೆಗಳನ್ನು ಹೊಂದಿದ್ದರೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಮೊರೆ ಹೋಗಿರುತ್ತಿದ್ದರೆ ಜನರ ಪಡುತ್ತಿರುವ ಸ್ವಲ್ಪ  ಕಷ್ಟವೂ ಇಲ್ಲದಾಗಿರುತ್ತಿತ್ತು. ಸ್ಮಾರ್ಟ್ ಫೋನ್ಗಳು ಇರೋದು ಕೇವಲ ಫೇಸ್‌ಬುಕ್ ಮತ್ತು ವಾಟ್ಸಾಪ್ ಬಳಕೆ ಮಾಡಲು ಅಂತ ಯೋಚಿಸದಿದ್ದರೆ ಇಂದು ಭಾರತ ಭಾಗಷಃ ಡಿಜಿಟಲ್’ಮಯವಾಗಿರುತ್ತಿತ್ತು. ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಶಕ್ತಿ ಪಡೆಯುವ ಬಿಜೆಪಿಯ ಶಕ್ತಿಕೇಂದ್ರಗಳು ಶಕ್ತಿ ಬಿಡಿ, ಜೀವವೇ ಇಲ್ಲದಂತೆ ಬೆಚ್ಚಗೆ ಮಲಗಿವೆ. ಪ್ರತೀ ಬೂತಿನಲ್ಲಿ ಜನಾಂದೋಲನ ಮಾಡಿ ಜನರಿಗೆ ತಿಳುವಳಿಕೆ ಉಂಟು ಮಾಡುವ ಕೆಲಸ ಮಾಡಬಹುದು. ವಿರೋಧ ಪಕ್ಷಗಳ ಸುಳ್ಳು, ಅಪಪ್ರಚಾರ, ಕ್ಯಾಶ್ ಲೆಸ್ ಎಕಾನಮಿಯ ಬಗ್ಗೆ ತಿಳಿ ಹೇಳಿ ಜನರನ್ನು ಜಾಗೃತ ಗೊಳಿಸಬಹುದು.

ಹಾಗಾದ್ರೆ ಸರಕಾರದ ಈ ನಿರ್ಧಾರದಿಂದ ಜನಕ್ಕೆ ತೊಂದರೆಯೇ ಆಗಿಲ್ಲ ಅಂತ ನನ್ನ ಅಭಿಪ್ರಾಯವಲ್ಲ. ದೂರದೃಷ್ಟಿ ಇರೋ ಯೋಜನೆಯಲ್ಲಿ ಕೆಲವೊಂದು ತೊಡಕಾಗುವುದು ಸಹಜವಲ್ಲವೇ? ಕಾಂಗ್ರೆಸ್ ಸರ್ಕಾರದ ಹಲವಾರು ಸಾವಿರ ಕೋಟಿಗಳ ಹಗರಣ ಸಮಯದಲ್ಲಿ ದಂಗೆ ಏಳದವರು ದೇಶದ ಒಳಿತಿಗಾಗಿ ತೆಗೆದುಕೊಂಡ ಈ ನಿರ್ಧಾರಕ್ಕೆ ವಿರೋಧ ಸೂಚಿಸಿಯಾರೆ? ತುರ್ತು ಪರಿಸ್ಥಿತಿ ಹೇರಿ ಸರ್ಕಾರದ ವಿರುದ್ಧ ಮಾತಾಡಿದ ಜನರನ್ನು ಕತ್ತಲ ಕೋಣೆಯೊಳಗೆ ತಳ್ಳಿ ಅಧಿಕಾರದ ದರ್ಪ ತೋರಿಸಿದ ಕಾಂಗ್ರೆಸ್ ಸರಕಾರದ ಸರ್ವಾಧಿಕಾರಿ ನಿರ್ಧಾರದ ಮುಂದೆ ಇದೇನೂ ಅಲ್ಲ. ೭೦ ವರ್ಷಗಳಿಂದ ದೇಶವನ್ನು ಕೊಳ್ಳೆ ಹೊಡೆದವರು ಮಾತ್ರ ಇವತ್ತು ಹೋದಲ್ಲಿ ಬಂದಲ್ಲಿ ಸರ್ಕಾರದ ನಿರ್ಧಾರವನ್ನು ವಿರೋಧ ಮಾಡುತ್ತಿರುವುದು. ಇವತ್ತಿನ ಪರಿಸ್ಥಿತಿಯಲ್ಲಿ ಕೇವಲ ಹಣದ ಕೊರತೆ ಉಂಟಾಗಿರಬಹುದು, ಆದರೆ ಒಮ್ಮೆ ಯೋಚಿಸಿ, ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಸರಕಾರ ಅಧಿಕಾರದಲ್ಲಿದ್ದರೆ ಪ್ರತಿಭಟನೆ ಮಾಡೋ ಅವಕಾಶವೂ ವಿರೋಧ ಪಕ್ಷಗಳಿಗಿರುತ್ತಿರಲಿಲ್ಲ. ಭಯೋತ್ಪಾದಕರಿಗೆ, ನಕ್ಸಲರಿಗೆ, ಗಲಭೆ ದೊಂದಿ ಮಾಡುವವರಿಗೆ ಹಣಕಾಸಿನ ವ್ಯವಸ್ಥೆ ಮಾಡುವವರಿಲ್ಲದೇ ಹೈರಾಣಾಗಿದ್ದಾರೆ. ನ್ಯಾಯಯುತವಾದ ಹೂಡಿಕೆ ಪ್ರಮಾಣದಲ್ಲಿ ಏರಿಕೆಯಾಗಿ ಗೃಹಸಾಲದ ಬಡ್ಡಿದರ, ಚಿನ್ನದ ದರಗಳ ಇಳಿಕೆಯಾದರೆ ಅದೇ ಅಚ್ಚೆದಿನ್ ಅಲ್ಲವೇ?

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!