ರೈತನಾಗಿದ್ದ ರಾಮುವಿನ ತಂದೆ ತನ್ನ ಕೃಷಿಭೂಮಿಯನ್ನು ಮಗನ ಕೈಗೊಪ್ಪಿಸಿ ಕಣ್ಣು ಮುಚ್ಚಿಕೊಂಡರು. ಇದ್ದ ಒಂದು ಎಕರೆ ಜಾಗದಲ್ಲಿ ಮೊದಲು ಕೃಷಿ ಆರಂಭಿಸಿದ್ದ ರಾಮು ದಿನವೂ ತಾನೇ ಕಷ್ಟಪಟ್ಟು ಉತ್ತಿಬಿತ್ತಿ ಬೆಳೆ ತೆಗೆಯುತ್ತಿದ್ದ. ಅದಕ್ಕೆ ತಕ್ಕುದಾದ ಬೆಲೆಯೂ ಸಿಕ್ಕಿ ಹಂತಹಂತವಾಗಿ ಮೇಲಕ್ಕೆ ಬಂದ. ಒಂದು ದಿನ ತಾಯಿ “ವಯಸ್ಸಿಗೆ ಬಂದಿದ್ದೀ ,ಮದುವೆ ಆಗುವ ಯೋಚನೆ ಇಲ್ಲವೇ.? ಈಗ ನಿನಗೇನು ಕಡಿಮೆ ಆಗಿದೆ. ಎಲ್ಲವೂ ವ್ಯವಸ್ಥಿತವಾಗಿ ಸಾಗುತ್ತಿದೆ ತಾನೆ. ಮದುವೆಯಾಗಲು ಇದು ಸರಿಯಾದ ವಯಸ್ಸು. ಸೊಸೆಯೂ ಬಂದರೆ ನನಗೆ ಸ್ವಲ್ಪ ಸಹಾಯವಾಗುತ್ತದೆ ಎಂದು ಹೇಳಿದಳು. ಸರಿ ಎಂದು ತಾಯಿಯ ಮಾತಿಗೆ ಒಪ್ಪಿ ಯೋಗ್ಯ ವಧುವನ್ನು ನೋಡಿ ಮದುವೆಯಾದ. ವರುಷದೊಳಗೆ ಒಂದು ಮಗುವೂ ಆಯಿತು. ಹಾಗೇಯೇ ಮಗು ಹುಟ್ಟಿದ ಗಳಿಗೆಯಲ್ಲಿ ಮತ್ತೊಂದಷ್ಟು ಎಕರೆ ಭೂಮಿ ಖರೀದಿಸಿ ಕೃಷಿ ಕೆಲಸ ಅಭಿವೃದ್ದಿ ಮಾಡಿದ. ಕಷ್ಟಪಟ್ಟು ನ್ಯಾಯಯುತವಾಗಿ ದುಡಿದು ಹತ್ತಿಪ್ಪತ್ತು ಜನರಿಗೆ ಕೆಲಸ ನೀಡಿ ಊರಿಗೆ ದಣಿಯೆಂದೆನಿಸಿದ. ಹೆಂಡತಿಯೂ ಸಹನೆಯಿಂದ ಗಂಡನ ಎಲ್ಲಾ ಕೆಲಸದಲ್ಲಿಯೂ ಜೊತೆಜೊತೆಗೆ ಹೆಜ್ಜೆ ಹಾಕುತ್ತಿದ್ದಳು. ಏಳುಬೀಳಿನಲ್ಲಿ ಧೈರ್ಯ ನೀಡುತ್ತಾ ಬರುತ್ತಿದ್ದಳು.
*
ವರುಷಗಳು ಉರುಳಿದಂತೆ ಮಗನು ಓದಿನ ಕಡೆ ಗಮನ ಕೊಡದೇ ತಂದೆಯ ಹಣವನ್ನು ಖರ್ಚು ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದ.. ” ನನಗೇನು ಕೈತುಂಬ ಹಣವಿದೆ, ಓದಿ ಕೆಲಸಕ್ಕೆ ಸೇರಬೇಕೆಂದೇನಿಲ್ಲ, ನಾನು ಸಾಯುವವರೆಗೂ ಕುಳಿತೇ ತಿನ್ನಬಹುದು” ಎಂದು ಗೆಳೆಯರಲ್ಲಿ ಬೀಗುತ್ತಿದ್ದ. ಹಣದ ಮತ್ತಿನಲ್ಲಿ ಕುರುಡನಾಗಿ ದುಂದುವೆಚ್ಚ ಮಾಡಲು ಶುರು ಮಾಡಿದ. ಕಂಡ ಕಂಡಲ್ಲಿ ಜೂಜು ಆಟವಾಡಿ ಹಣ ಕಳೆದುಕೊಂಡು ಕೈಸುಟ್ಟುಕೊಂಡು ಮಾನ,ಮರ್ಯಾದೆಯನ್ನೂ ಕಳೆದುಕೊಂಡು ಮನೆಗೆ ಹಿಂದಿರುಗುತ್ತಿದ್ದ. ರಾಮುವಿನ ಕಿವಿಗೂ ಈ ವಿಷಯ ತಲುಪಿ ಮಗನಿಗೆ ಬುದ್ಧಿವಾದ ಹೇಳಿದರೂ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಒಮ್ಮೆ ಮಗನನ್ನು ಬದಲಾಯಿಸಲು ಏನಾದರೂ ಮಾಡಲೇಬೇಕು ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದ. ಹೆಂಡತಿ ಜೊತೆ ಗಾಢವಾದ ಚರ್ಚೆ ಮಾಡಿದ. ಮಗನನ್ನು ಕರೆದು ಬಹು ಕಟುವಾಗಿ ಮಾತನಾಡಿದ. “ಒಂದು ಎಕರೆ ಕೃಷಿ ಭೂಮಿಯನ್ನು ನೀನೇ ಉತ್ತಿ ಬಿತ್ತಿ ಬೆಳೆ ತೆಗೆದು ತೋರಿಸು ಇಲ್ಲವಾದರೆ ಈ ಮನೆಯಲ್ಲಿ ಜಾಗವಿಲ್ಲ , ನಿನ್ನ ಯೋಗ್ಯತೆಗೆ ಒಂದು ಹುಲ್ಲು ಕೂಡ ಬೆಳೆಯದು, ಅದು ನಮಗೇ ಗೊತ್ತೇ ಇದೆ. ಅಲ್ಲಿಯವರೆಗೆ ಮನೆ ಕಡೆ ಬರುವಂತಿಲ್ಲ. ನಮ್ಮ ಸಹಾಯ ಕೇಳುವಂತಿಲ್ಲ. ಅಯೋಗ್ಯನೇ ತೊಲಗಿಲ್ಲಿಂದ..” ಎಂದ. ತಾಯಿಗೆ ಹೆತ್ತ ಕರುಳು ಚುರುಕ್ ಎಂದರೂ ಸೆರಗೊಳಗೆ ಅಳುತ್ತಾ ಸುಮ್ಮನಾದಳು.. ಕೋಪಗೊಂಡ ಮಗರಾಯ ಅಹಂನಿಂದಲೇ ಕೃಷಿ ಭೂಮಿಗೆ ಇಳಿದ. ಕೃಷಿ ಕೆಲಸಕ್ಕೆ ತೊಡಗಿಸಿಕೊಂಡ. ಕೈಕಾಲು ಬೊಕ್ಕೆ ಬಂದಿತು. ಆದರೆ ಅವನಿಗೇ ಅದರ ಗಂಧಗಾಳಿಯೂ ಅರಿಯದ ಕಾರಣ ಕೈಸೋತುಹೋದ. ಅವರ ಮನೆ ಕೆಲಸದ ಆಳುಗಳೇ ಅಪಹಾಸ್ಯ ಮಾಡಲಾರಂಭಿಸಿದರು. ಆಗ ಕಣ್ಣಿಗಂಟಿದ್ದ ಅಹಂಕಾರದ ಪೊರೆ ಕಳಚಿತು. ತಂದೆಯ ಮೇಲೆ ಗೌರವ ಮೂಡಿ ತಾನು ಮಾಡಿದ್ದು ತಪ್ಪು ಎಂಬ ಅರಿವಾಯಿತು. ಬದಲಾಗಿ ಕ್ಷಮೆ ಕೋರಿ ಹೊಸ ಜೀವನ ನಡೆಸಲು ಶುರು ಮಾಡಿದ. ಮಗನ ಬದಲಾವಣೆ ನೋಡಿ ತಾಯಿಗೆ ತುಂಬಾ ಸಂತೋಷವಾಯಿತು.