ಕಥೆ

ಪರೀಕ್ಷೆ

ನಿನ್ನೆಯವರೆಗೆ ಬೆಳಗ್ಗೆ ಆರು ಮೂವತ್ತಕ್ಕೆ ಹೊಡೆದುಕೊಳ್ಳುತ್ತಿದ್ದ ಅಲರಾಂ ಇವತ್ತು ಐದು ಗಂಟೆಗೇ ಅರಚಲು ಶುರು ಮಾಡಿತ್ತು. ಅಪಾರ್ಟ್ಮೆಂಟ್’ನ  ಎರಡನೇ ಮಹಡಿಯ ಇನ್ನೂರ ಒಂದನೇ ನಂಬರಿನ ಫ್ಲಾಟ್’ನಿಂದ  ಬರುತ್ತಿದ್ದ  ಆ ಸದ್ದು ಸಂತೋಷನಿಗಾಗಿ ಹೊಡೆದುಕೊಳ್ಳುತ್ತಿದ್ದರೂ ಎದ್ದದ್ದು ಮಾತ್ರ ಅವನ ಅಮ್ಮ. ತನ್ನ ರೂಮಿನಿಂದ ಎದ್ದು ಬಂದ  ಅವಳು ಅಲರಾಂ ಆಫ್ ಮಾಡಿ ಸಂತೋಷನನ್ನು ಎಬ್ಬಿಸುತ್ತಾ,

” ಏಳೋ ಬೇಗ, ಇವತ್ತು ಫಿಸಿಕ್ಸ್ ಎಕ್ಸಾಮ್, ಗೊತ್ತಲ್ವಾ? ” ಎಂದಳು.

ಯಾಕಾದರೂ ಬೆಳಗಾಯಿತು ಅಂತಂದುಕೊಳ್ಳುತ್ತಾ ಕಣ್ಣು ನಿಧಾನಕ್ಕೆ ತೆರೆದು ಗಂಟೆ ನೋಡಿ ಎದ್ದು ಕೂತನು ಮನಸ್ಸಿಲ್ಲದ ಮನಸ್ಸಿನೊಂದಿಗೆ. ಫಿಸಿಕ್ಸ್ ಎಂದು ಕಿವಿಗೆ ಬಿದ್ದ ಕೂಡಲೇ ಮೂಡ್ ಆಫ್ ಆಗಿತ್ತು.

ಎಸ್ಸೆಸೆಲ್ಸಿಯಲ್ಲಿ ಏನೋ ಚೆನ್ನಾಗಿಯೇ ಮಾರ್ಕ್ಸ್ ಬಂದಿತ್ತು.  ಡಿಸ್ಟಿಂಗ್ಶನ್ನೊಂದಿಗೆ ಪಾಸಾಗಿದ್ದ. ಡಿಸ್ಟಿಂಗ್ಶನ್ ಅಂದ ಮೇಲೆ ಸಹಜವಾಗಿ ಸಯನ್ಸ್’ಗೆ ಸೇರಬೇಕೆಂಬುದು ಅಲಿಖಿತ ನಿಯಮ. ನಿನಗೇನು  ಕಲಿಯಲು ಇಷ್ಟ ಎಂದು ಅವನನ್ನು ಯಾರೂ ಕೇಳಲೂ ಇಲ್ಲ, ಅವನಿಗೇ ಏನು ಕಲಿಯಬೇಕೆಂದು ನಿರ್ದಿಷ್ಟವಾದ ಗುರಿಯೂ ಇರಲಿಲ್ಲ. ಹೇಗೋ ಒಂದು ಒಳ್ಳೇ ಪಿ.ಯು ಕಾಲೇಜಿನಲ್ಲಿ ಸಯನ್ಸ್’ಗೆ ಸೀಟು ಸಿಕ್ಕಿತ್ತು. ಫೀಸ್ ಸ್ವಲ್ಪ ಜಾಸ್ತಿಯಾದರೂ ಮಗ ಎoಜಿನಿಯರೋ, ಡಾಕ್ಟರೋ ಆದರೆ ಸಾಕೆಂಬ ತುಡಿತ ಅವನ ಅಪ್ಪ ಅಮ್ಮನಿಗೆ.

ಪಿಯುಸಿಯ ಮೊದಲ ದಿನಗಳಲ್ಲೇ  ಸಯನ್ಸ್ ಸಬ್ಜೆಕ್ಟ್’ಗಳು  ಸ್ವಲ್ಪ ಕಠಿಣವೆನಿಸತೊಡಗಿತ್ತು. ಅದಕ್ಕಾಗಿ ಕೋಚಿಂಗ್ ಕ್ಲಾಸಿಗೂ ಸೇರಿದ್ದಾಯಿತು. ಆದರೂ ಫಿಸಿಕ್ಸ್, ಮ್ಯಾತ್ಸ್’ಗಳು ಕಬ್ಬಿಣದ ಕಡಲೆಯಾಗೇ ಉಳಿದಿತ್ತು. ಕಾಲುವಾರ್ಷಿಕ ಪರೀಕ್ಷೆಯಲ್ಲಿ ಹೇಗೋ ಪಾಸ್ ಮಾಡಿದ್ದ. ಇಲ್ಲಿಯೂ ಡಿಸ್ಟಿಂಗ್ಶನ್ ನಿರೀಕ್ಷಿಸಿದ್ದ ಅಪ್ಪ ಅಮ್ಮ ನಿಂದ ಸಾಕಷ್ಟು ಮಂಗಳಾರತಿಯೂ ಆಗಿತ್ತು. ಇದೀಗ ಅರ್ಧ ವಾರ್ಷಿಕ ಪರೀಕ್ಷೆ ಆರಂಭವಾಗಿ ಮೊದಲೆರಡು ದಿನ ಭಾಷಾ ವಿಷಯಗಳನ್ನು ಮುಗಿಸಿದ್ದ. ಇಂದಿನಿಂದ ವಿಜ್ಞಾನದ ವಿಷಯಗಳು ಆರಂಭ. ಮೊದಲಿಗೇ ಫಿಸಿಕ್ಸ್  ಬೇರೆ ಅದಕ್ಕೆ ಅಲರಾಂ ಐದು ಗಂಟೆಗೇ ಇಟ್ಟಿದ್ದ.

ಆಲರಾಂನ  ಕಡೆ ನೋಡಿ ಒಂದು ದೊಡ್ಡ ನಿಟ್ಟುಸಿರು ಬಿಡುತ್ತಾ ಹಾಸಿಗೆಯಿಂದೆದ್ದು, ಬ್ರಷ್ ಮಾಡುತ್ತಾ  ಅವತ್ತಿನ ಎಕ್ಸಾಮ್ ಬಗ್ಗೆ ಯೋಚಿಸಿದ. ಸುಲಭದ ಪ್ರಶ್ನೆಗಳು ಬಂದ್ರೆ ಸಾಕಿತ್ತು ಅಂತ ಅಂದುಕೊಳ್ಳುತ್ತಾ, ಬ್ರಷ್  ಮುಗಿಸಿ ಟಾಯ್ಲೆಟ್’ಗೆ ಹೋದ.

ಆನಂತರ ಬಂದು ಕುರ್ಚಿಯಲ್ಲಿ ಕೂತು ಸಮಯ ನೋಡಿದರೆ ಈಗಾಗಲೇ ಐದೂವರೆ ಆಗಿತ್ತು. ಅಪ್ಪ ಅಮ್ಮ ಇನ್ನೂ ನಿದ್ರಿಸುತ್ತಿದ್ದಾರೆ. ಇನ್ನರ್ಧ ಗಂಟೆಯಲ್ಲಿ ಅಮ್ಮ ಎದ್ದು ಅಡುಗೆ ಶುರು ಮಾಡುತ್ತಾಳೆ. ಮಿಕ್ಸಿ, ಗ್ರೈ೦ಡರ್’ ನ ಸದ್ದು ಶುರುವಾಗುತ್ತೆ ಅಂತ ರೂಮಿನ ಬಾಗಿಲು ಕ್ಲೋಸ್ ಮಾಡಿ ಬೋಲ್ಟ್ ಹಾಕಿಕೊಂಡ.

ಬ್ಯಾಗಿನಿಂದ ಫಿಸಿಕ್ಸ್ ಟೆಕ್ಸ್ಟ್ ಮತ್ತು ನೋಟ್ಸ್ ತೆಗೆದು ಟೇಬಲ ಮೇಲಿಟ್ಟ. ಮೊದಲಿಗೆ ಟೆಕ್ಷ್ಟ್ ಬುಕ್ ಓಪನ್ ಮಾಡಿ ಓದಬೇಕಿರುವ ಚಾಪ್ಟರ್ ಗಳನ್ನು ಲೆಕ್ಕ ಹಾಕಿದ.  ಮೊದಲ ಆರು ಚಾಪ್ಟರ್ ಗಳನ್ನು ಓದಬೇಕಿತ್ತು. ಅಂದರೆ ಎಂಟೂ ಮೂವತ್ತರ ವರೆಗೆ  ಮೂರು ಗಂಟೆಗಳಲ್ಲಿ ಆರು ಚಾಪ್ಟರ್’ಗಳು ಮುಗಿಸಬೇಕು. ಒಂದು ಚಾಪ್ಟರ್’ಗೆ ಕೇವಲ ಅರ್ಧ ಗಂಟೆ, ಟೆಕ್ಷ್ಟ್ ಬುಕ್’ನಿಂದ ಓದಿದರೆ ಎರಡು ಚಾಪ್ಟರ್ ಮುಗಿಸುವುದು ಕಷ್ಟ . ನೋಟ್ಸೀ ಸರಿ ಅಂದು ನೋಟ್ಸ್ ಓಪನ್ ಮಾಡಿ ಓದಲು ಶುರು ಮಾಡಿದ.

ಇನ್ನೂ ಎರಡನೇ ಚಾಪ್ಟರ್ ಓದುತ್ತಿರುವಾಗಲೇ ನಿದ್ದೆ ತೂಗಲು ಪ್ರಾರ೦ಭವಾಯಿತು. ಹಾಗೆಯೇ ನಿದ್ದೆ ಹೋದ. ಸಮಯ ಏಳುವರೆ ಆಗಬೇಕಾದರೆ ಅವನ ಅಮ್ಮ ಬಾಗಿಲು ತಟ್ಟುತ್ತಾ ಜೋರಾಗಿ ಕರೆದಳು. ತಟ್ಟನೆ ಎಚ್ಚೆತ್ತ ಸಂತೋಷ ಗಡಿಯಾರ ನೋಡಿ ಹೌಹಾರಿದ. ಕೂಡಲೇ ಸಾವರಿಸಿಕೊಂಡು ಮುಖ ಉಜ್ಜಿಕೊಳ್ಳುತ್ತಾ ಬಾಗಿಲು ತೆರೆದ. ಅಮ್ಮ ಕಾಫಿ ಕೊಡುತ್ತಾ,

” ಎಷ್ಟು ಓದಿ ಆಯ್ತು? , ಇನ್ನು ಒಂದೇ ಗಂಟೆ ಇದೆ ಬೇಗ ಓದು ಟೈಮ್ ವೇಶ್ಟ್ ಮಾಡಬೇಡ” ಅಂತ ಹೇಳಿ ಅಡುಗೆ ಮನೆಗೆ ಹೋದಳು. ತಾನು ನಿದ್ದೆ ಹೋದದ್ದು ಗೊತ್ತಾಗ್ಲಿಲ್ಲ ಅಂತ ಸಮಾಧಾನ ಅಯ್ತು. ಅಪ್ಪ ಅಂತೂ ಓದು ಬರಿ ಅಂತ ಜಾಸ್ತಿ ತಲೆ ತಿನ್ನಲ್ಲ, ರಿಸಲ್ಟ್ ಬಂದ  ದಿನ ಮಾರ್ಕ್ಸ್ ನೋಡಿ ಸ್ವಲ್ಪ ಬೈತಾರೆ ಅಷ್ಟೇ. ಇನ್ನೇನು ಸ್ವಲ್ಪ ಹೊತ್ತಲ್ಲೇ  ಅವರು ಆಫೀಸಿಗೆ ಹೋದ್ರೆ ಮತ್ತೆ ಮನೆಗೆ ಬರೋದು ರಾತ್ರಿನೇ.

ಬಾಗಿಲು ಕ್ಲೋಸ್ ಮಾಡಿ ಮತ್ತೆ ಟೇಬಲ್ ಮುಂದೆ ಕೂತ. ಇನ್ನೊಂದು ಗಂಟೆಯಲ್ಲಿ ನಾಲ್ಕು ಚಾಪ್ಟರ್ ಓದೋದು ಅಷ್ಟರಲ್ಲೇ ಇದೆ. ಏನಪ್ಪ ಮಾಡೋದು ಅಂತ ಚಿಂತೆ ಪ್ರಾರಂಭವಾಯಿತು. ಆದದ್ದಾಯಿತು ಇನ್ನು ಕೆಲವು ಇಂಪಾರ್ಟೆಂಟ್ ಪ್ರಶ್ನೆಗಳನ್ನು ಮಾತ್ರ ಓದುವುದೆ೦ದು  ನಿರ್ಧಾರ ಮಾಡಿ, ಫಿಸಿಕ್ಸ್ ಲೆಕ್ಚರರ್ ಹೇಳಿದ್ದ ಆ ಪ್ರಶ್ನೆಗಳನ್ನು ತಾನು ಬರೆದಿಟ್ಟಿದ್ದ ರಫ್ ಬುಕ್ ಹುಡುಕತೊಡಗಿದ. ಎಷ್ಟು ಹುಡುಕಿದರೂ ಅದು ಸಿಗಲೇ ಇಲ್ಲ. ಕೂಡಲೇ ತನ್ನ ಸ್ನೇಹಿತ ಸಂದೀಪನಿಗೆ ಮೆಸೇಜ್ ಮಾಡಿ ಆ ಪ್ರಶ್ನೆಗಳನ್ನು ಕಳುಹಿಸಲು ಹೇಳಿದ. ಆ ಕಡೆಯಿಂದ ಏನೂ ಉತ್ತರವಿಲ್ಲ. ಐದಾರು ನಿಮಿಷಗಳು ಉರುಳಿದವು. ನಂತರ ತಡೆಯಲಾರದೇ ಫೋನ್ ಮಾಡಿದ. ಒಂದೆರಡು ಪ್ರಯತ್ನಗಳ ನಂತರ ಫೋನ್ ರಿಸೀವ್ ಮಾಡಿದ.

” ಹಲೋ, ಏನೂ ಇಷ್ಟು ಬೇಗ ಎಲ್ಲ ಓದಿ ಮುಗಿಸಿದ್ಯಾ ಗಾಂಧೀ? ಎಷ್ಟು ಸರ್ತಿ ಆಯ್ತು ರಿವಿಷನ್ನು?” ಅಂತ ಕಾಲೆಳೆದ ಸ೦ದೀಪ.

ಅದಕ್ಕೆ ” ಸಾವು, ರಿವಿಷನ್ನು ಬಿಟ್ಟು ಎರಡು ಚಾಪ್ಟರೂ ಆಗ್ಲಿಲ್ಲ ಮಾರೆ, ಓದಲು ಶುರು ಮಾಡುವಾಗಲೇ ನಿದ್ರೆ ಬ೦ತು, ಆ ಇಂಪಾರ್ಟೆಂಟ್ ಪ್ರಶ್ನೆ ಯಾವುದೆಲ್ಲ ಹೇಳು, ಈ ಸಲ ಕೆಂಪು ಗೆರೆ ಗ್ಯಾರೆಂಟಿ” ಅಂತ ಒಂದೇ ಉಸಿರಿನಲ್ಲಿ ತನ್ನ ಅಹವಾಲನ್ನ ತೋಡಿಕೊಂಡ ಸ೦ತೋಷ.

“ಇನ್ನು ಯಾವಾಗ ಆ ಇಪ್ಪತ್ತು ಪ್ರಶ್ನೆಗಳು ಕಲಿಯುದು ನೀನು, ಅದೆಲ್ಲ ಓದಿದರೆ ಸಿಲಬಸ್ ಎಲ್ಲ ಕವರ್ ಅಗ್ತತ್ದೆ. ನೀನು ಬೇಗ ನನ್ನ ಮನೆಗೆ ಬಾ, ಒಂದು ಐಡಿಯಾ ಇದೆ. “

” ಏನು ಐಡಿಯ?”

” ಸುಮ್ನೆ ಬಾ ಮಾರೆ , ಟೈಮ್ ಇಲ್ಲ. ಬೇಗ ಬಾ” ಅಂತ ಫೋನ್ ಕಟ್ ಮಾಡಿದ ಸ೦ದೀಪ.

ಇನ್ನು ಯೋಚಿಸಲು ಸಮಯ ಇಲ್ಲ ಅಂತಂದುಕೊಂಡು ಬುಕ್’ಗಳನ್ನು ಬ್ಯಾಗ್’ಗೆ ಹಾಕಿ ಸ್ನಾನ ಮಾಡಿ ಬೇಗ ಬೇಗನೆ  ತಿಂಡಿ ತಿಂದು ಮನೆಯಿಂದ ಹೊರಟ. ಸೀದಾ ಸಂದೀಪನ ಮನೆ ಬಾಗಿಲ ಮುಂದೆ ನಿಂತು ಡೋರ್ ಬೆಲ್ ಮಾಡಿದ. ಸ್ವಲ್ಪ ಹೊತ್ತಿನ ನಂತರ ಬಾಗಿಲು ತೆರೆದ ಸಂದೀಪ,

” ಬಾ ಒಳಗೆ”

“ಎಲ್ಲಾ ಓದಿ ಮುಗಿಸಿದ ಹಾಗಿದೆ ” ಅ೦ತನ್ನುತ್ತಾ ಒಳ ನಡೆದ ಸ೦ತೋಷ.

ಸಂದೀಪನ ತಂದೆ ತಾಯಿಯರು ಈಗಾಗಲೇ ಆಫೀಸ್ ಗೆ ಹೋಗಿ ಆಗಿತ್ತು. ಇಬ್ಬರೂ ಅವನ ಕೋಣೆ ಹೊಕ್ಕರು.

ಸಂತೋಷ ಕುತೂಹಲ ತಾಳಲಾರದೆ ” ಏನು ನಿನ್ನ ಮನೆ ಹಾಳು ಐಡಿಯಾ” ಅಂತ ಕೇಳುತ್ತಾ ಅಲ್ಲಿದ್ದ ಕುರ್ಚಿಯಲ್ಲಿ ಕುಳಿತ.

“ಇಲ್ಲಿ ನೋಡು” ಅಂತ ತಾನು ಕಷ್ಟ ಪಟ್ಟು ಮಾಡಿದ ಚೀಟಿಗಳನ್ನು ತೋರಿಸಿದ.

ಸಣ್ಣ ಸಣ್ಣ ಚೀಟಿಗಳಲ್ಲಿ ಎಲ್ಲಾ ಇಂಪಾರ್ಟೆಂಟ್ ಪ್ರಶ್ನೆಗಳಿಗೆ ಉತ್ತರ ಬರೆದು ಇಟ್ಟಿದ್ದ. ಅವನ ಕೈ ಬರಹ ಅಷ್ಟು  ಚೆನ್ನಾಗಿರಲಿಲ್ಲವಾದ್ದರಿಂದ ಗೋಜಲು ಗೊಜಲಾಗಿತ್ತು. ಇದುವರೆಗೂ ಚೀಟಿ ಮಾಡದ ಸಂತೋಷನಿಗೆ ಇದು ಯಾಕೋ ರಿಸ್ಕ್ ಎಂದೆನಿಸಿತು. ಸ್ವಲ್ಪ ಅಂಜುತ್ತಲೇ ,

” ಲೇಯ್ ನಂಗ್ಯಾಕೋ ಭಯ , ಸಿಕ್ಕಿ ಬಿದ್ರೆ ಮುಗೀತು ಕಥೆ “

” ಓದುವ ಟೈಮಲ್ಲಿ ನಿದ್ದೆ ಮಾಡು, ಈಗ ಬೇರೆ ಯಾವ ದಾರಿ ಇದೆ ನಿಂಗೆ. ಸುಮ್ನೆ ಚೀಟಿ ಇಟ್ಟುಕೋ ದೈರ್ಯ ಬಂದ್ರೆ ಮಾತ್ರ ತೆಗಿ” ಅಂತ ದೈರ್ಯ ತು೦ಬಿದ. ಹಾಗೆ ಮುಂದುವರಿಯುತ್ತಾ ” ಇದನ್ನೆಲ್ಲಾ ದಾರಿಯಲ್ಲಿ ಜೆರಾಕ್ಸ್ ಮಾಡುವ, ಒಂದು ಕಾಪಿ ನಂಗೆ ಇನ್ನೊಂದು ನಿಂಗೆ ಸರಿಯಾ? “

“ಆಯ್ತು” ಅಂತ ತಲೆ ಅಲ್ಲಾಡಿಸಿದ ಸಂತೋಷ. ನಂತರ ಅಲ್ಲಿಂದ ಹೊರಟರು.

ಜೆರಾಕ್ಸ್ ಅಂಗಡಿಯಲ್ಲಿ ಕಾಪಿ ಮಾಡಿಸಿಕೊಂಡು ಹಾಗೆ ಕಾಲೇಜು ಕ್ಯಾಂಟೀನ್ನ ಹಿಂಬಾಗಕ್ಕೆ ಬಂದು ಚೀಟಿಯನ್ನು ಎಲ್ಲೆಂದರಲ್ಲಿ  ಅಡಗಿಸಿ ಇಟ್ಟು ಎಕ್ಸಾಮ್ ಹಾಲ್’ನ ಕಡೆ ನಡೆದರು. ಇವತ್ತು ಯಾರಾದರೂ ಪಾಪದ ಲೆಕ್ಚರರ್ ಎಕ್ಸಾಮಿನರ್ ಆಗಿ ಬಂದರೆ ಸಾಕಿತ್ತು ಅಂತ ಮನಸ್ಸಲ್ಲೇ ಅಂದುಕೊಂಡ ಸಂತೋಷ . ಸಂದೀಪನ ಮುಖದಲ್ಲಿ ಯಾವುದೇ ಟೆನ್ಶನ್ ಕಾಣಲಿಲ್ಲ.

ಈ ಬಾರಿ ಸೀಟ್ ನಂಬರ್ ಹಾಲ್ ನ ಲಾಸ್ಟ್ ಬೆ೦ಚ್ ನಲ್ಲೇ ಸಿಕ್ಕಿತ್ತು.  ಇಬ್ಬರದೂ ರೋಲ್  ನಂಬರ್ ಒಟ್ಟೋಟ್ಟಿಗೇ  ಇರುವ ಕಾರಣ ಸಂತೋಷನ ಸರೀ ಹಿಂದಿನ ಬೆ೦ಚ್ ನಲ್ಲೇ ಸಂದೀಪನ ಸೀಟ್ ಇತ್ತು. ಎಲ್ಲರೂ ತಮ್ಮ ತಮ್ಮ ಸೀಟ್ನಲ್ಲಿ  ಕುಳಿತು ಕೊಳ್ಳುವಸ್ಟರಲ್ಲಿ ಎಕ್ಸಾಮಿನರ್ ನ ಪ್ರವೇಶ ವಾಯಿತು.

ಈ ಬಾರಿ ಸಂತೋಷನ ಅದೃಷ್ಟ ಚೆನ್ನಾಗಿತ್ತು.  ಎಕ್ಸಾಮಿನರ್ ಆಗಿ ಬಂದದ್ದು ಅವರ ಕನ್ನಡ ಲೆಕ್ಚರರ್ ನಾರಾಯಣ ಸಾರ್. ಅವರಾದರೂ ಬಾಯಲ್ಲಿ ವೀಳ್ಯ ಹಾಕಿ ಕುಳಿತರೆ ಎಕ್ಸಾಮ್ ಮುಗಿಯುವವರೆಗೆ ಕುರ್ಚಿಯಿಂದ ಅಲ್ಲಾಡುತ್ತಿರಲಿಲ್ಲ. ಹಿಂದೆ ತಿರುಗಿ ಸಂದೀಪನನ್ನು ನೋಡಿದ ಸಂತೋಷ.  ಅವನ ಮುಖ ಖುಷಿಯಿಂದ ಅರಳುತ್ತಿತ್ತು. ಹಾಗೆ ಸಂತೋಷನಿಗೆ ಥಂಬ್ಸ್ ಅಪ್ ಮಾಡಿ ತೋರಿಸಿದ. ಈಗ ಸಂತೋಷನಿಗೂ ಸ್ವಲ್ಪ ದೈರ್ಯ ಬನ್ದಿತ್ತು.

ಆನ್ಸರ್ , ಕ್ವೆಶ್ಚನ್  ಪೇಪರ್ ಗಳೆರಡೂ ಕೈ ಸೇರಿತ್ತು. ಗಡಿಬಿಡಿಯಿಂದಲೇ ಕ್ವೆಶ್ಚನ್  ಪೇಪರ್ ಗಳತ್ತ  ಕಣ್ಣಾಡಿಸಿದ ಸಂತೋಷ. ಹೆಚ್ಚಿನ ಪ್ರಶ್ನೆಗಳಿಗಿರುವ ಉತ್ತರ ಚೀಟಿಯಲ್ಲಿತ್ತು. ಹಿಂದೆ ತಿರುಗಿ ಸಂದೀಪನನ್ನು  ನೋಡಿದರೆ ಅವನು ಈಗಾಗಲೇ  ಚೀಟಿ ತೆಗೆದು ಬರೆಯಲಾರ೦ಭಿಸಿದ್ದ. ಅಳುಕುತ್ತಲೇ ಬೆಲ್ಟ್ ನಲ್ಲಿ ಸಿಕ್ಕಿಸಿದ್ದ ಚೀಟಿ ತೆಗೆದು ಕ್ವೆಶ್ಚನ್ ಮತ್ತು ಆನ್ಸರ್ ಪೇಪರ್ ಗಳ  ಮದ್ಯೆ ಇಟ್ಟು ಬರೆಯಲಾರಂಭಿಸಿದ. ಒಂದಾದ ನಂತರ ಒಂದು ಚೀಟಿ ಹೊರ ಬರಲಾರ೦ಭಿಸಿತು. ಮನದಲ್ಲಿದ್ದ ಅಳುಕು , ಹೆದರಿಕೆ ಎಲ್ಲ ಹೊರಟು ಹೊಗಿತ್ತು. ಪರೀಕ್ಷೆ ಮುಗಿಸಿ ಹೊರ ಬಂದಾಗ ಈ ಬಾರಿ ಫಸ್ಟ್ ಕ್ಲಾಸ್ ಗ್ಯಾರಂಟಿ ಅಂತಂದುಕೊಂಡ.

ಸಂದೀಪನಿಗೆ ಥ್ಯಾಂಕ್ಸ್ ಹೇಳಿ  ಮನೆ ಕಡೆ ಹೊರಡಬೇಕಾದರೆ ಸಂದೀಪ,

” ನಾಳೆಯ  ಕೆಮಿಸ್ಟ್ರಿ ಇಂಪಾರ್ಟೆಂಟ್ ಪ್ರಶ್ನೆಗಳನ್ನು ತಗೋ, ಎಲ್ಲದಕ್ಕೂ ಆನ್ಸರ್ ಚೀಟಿ ರೆಡಿ ಮಾಡು, ನಿನ್ನ ಹ್ಯಾಂಡ್ ರೈಟಿಂಗ್ ಚೆನ್ನಾಗಿದೆ, ಓದಲಿಕ್ಕೆ ಸುಲಭ. ” ಅಂತ ಪ್ರಶ್ನೆಗಳಿರುವ ತನ್ನ ರಫ್ ಪುಸ್ತಕ ಅವನ ಕೈಯ್ಯಲ್ಲಿಡುತ್ತಾ.

” ಸರಿ” ಅಂದು ಮನೆಗೆ ಬಂದ ಸಂತೋಷ. ಮನಸ್ಸು ಖುಷಿಯಿಂದ ಕುಣಿದಾಡುತಿತ್ತು. ಇನ್ನು ಓದೋ ಕಿರಿಕಿರಿ ಇಲ್ಲಾಂತ  ಚೆನ್ನಾಗಿ ನಿದ್ರೆ ಮಾಡಿದ. ಸಂಜೆ ಎದ್ದು ಕಾಫಿ ಕುಡಿದು ಓದಲು ಶುರು ಮಾಡ್ತೇನೆ ಅಂತ ರೂಮು ಸೇರಿ ಬಾಗಿಲೆಳೆದು ಲಾಕ್ ಮಾಡಿಕೊಂಡ. ಎಲ್ಲ ಪ್ರಶ್ನೆಗಳಿಗೂ ಚೀಟಿ ರೆಡಿ ಮಾಡಿದ. ರಾತ್ರಿ ಬೇಗನೆ ನಿದ್ದೆ ಹೋದ.

ಬೆಳಗ್ಗೆ ಐದು ಗಂಟೆಗೇ ಅಲಾರಂ ಆದರೂ ಎದ್ದು ಓದಲು ಕೂತವನ೦ತೆ ನಾಟಕ ಮಾಡಿ ಕುರ್ಚಿಯಲ್ಲೇ ಕೂತು ನಿದ್ದೆ ಹೋದ. ಎಂಟು ಗಂಟೆಗೇ  ಮನೆಯಿಂದ ಹೊರಟು  ಸಂದೀಪನ ಮನೆಗೆ ಬಂದು ಅಲ್ಲಿಂದ ಇಬ್ಬರೂ ಜೆರಾಕ್ಸ್ ಅಂಗಡಿಗೆ ಹೋಗಿ ಯಥಾ ಪ್ರಕಾರ ಚೀಟಿಗಳನ್ನು ಜೆರಾಕ್ಸ್ ಮಾಡಿ ಅಡಗಿಸಿ ಕೊಂಡು ಎಕ್ಸಾಮ್ ಹಾಲ್ ಪ್ರವೇಶಿಸಿದರು. ಈ ಬಾರಿಯೂ ಅದೃಷ್ಟ ಅವರ ಕಡೆಗಿತ್ತು. ಏನೂ ತೊಂದರೆ ಆಗದೇ ಪರೀಕ್ಷೆ ಕಳೆಯಿತು.

ಬಯಾಲಜಿ ಪರೀಕ್ಷೆಯೂ  ಚೆನ್ನಾಗಿಯೇ ಅಯಿತು. ಚೀಟಿ ಐಡಿಯಾ ಕೈಕೊಡಲಿಲ್ಲ. ಆದರೆ ಇದೀಗ ಕೊನೆಯ ಪರೀಕ್ಷೆ ಮ್ಯಾತ್ಸ್. ಇದ್ದುದರಲ್ಲೇ ಕಬ್ಬಿಣದ ಕಡಲೆಯಾಗಿತ್ತು. ಈ ಬಾರಿಯೂ ಚೀಟಿ ಯಶಸ್ವಿ ಆದರೆ ಒಳ್ಳೆ ಮಾರ್ಕ್ಸ್ ಬಂದೇ ಬರುತ್ತೆ ಅಂತ ಮನಸ್ಸಿನಲ್ಲೇ ಅಂದುಕೊಂಡ ಸಂತೋಷ. ಎಲ್ಲರೂ ಎಕ್ಸಾಮ್ ಹಾಲ್  ಪ್ರವೇಶಿಸಿ ತಮ್ಮ ತಮ್ಮ ಜಾಗದಲ್ಲಿ  ಕುಳಿತುಕೊಂಡರು. ಬೆಲ್ ಆಗುತ್ತಲೇ ಎಕ್ಸಾಮಿನರ್ ಆಗಿ ಕಾಲೇಜಿನಲ್ಲೇ ಅತ್ಯಂತ ಸ್ಟ್ರಿಕ್ಟ್ ಎಂದೆನ್ನಿಸಿಕೊಂಡಿದ್ದ ಮೇರಿ ಮೇಡಂ ಬ೦ದರು. ಸಂತೋಷ , ಸಂದೀಪ ಇಬ್ಬರ ಮುಖದಲ್ಲೂ ನಿರಾಸೆ ಮೂಡಿತ್ತು. ಕ್ವೆಶ್ಚನ್ ಪೇಪರ್ ಕೈ ಸೇರಿತ್ತು. ಹೆಚ್ಚಿನ ಉತ್ತರಗಳು ಚೀಟಿಯಲ್ಲಿದ್ದರೂ ಅದನ್ನು ಹೊರ ತೆಗೆಯುವುದು ಕಷ್ಟ ಸಾಧ್ಯವೇ. ಮೇರಿ ಮೇಡಂ ಒಂದೇ ಸಮನೆ ಎಕ್ಸಾಮ್ ಹಾಲ್ ನ ಮೂಲೆ ಮೂಲೆಗೂ ರೌಂಡ್ ಹೊಡೆಯುತ್ತಿದ್ದಳು. ಎಕ್ಸಾಮ್ ಶುರುವಾಗಿ ಮುಕ್ಕಾಲು ಗಂಟೆ ಕಳೆದರೂ ಒಂದೇ ಒಂದು ಚೀಟಿ ಹೊರ ತೆಗೆಯಲು ಸಾದ್ಯವಾಗಲಿಲ್ಲ. ಅದೇ ಸಮಯಕ್ಕೆ ಆಪತ್ಭಾ೦ಧವನಂತೆ ಬಂದ ಅಟೆಂಡರ್. ಮೇಡಂ ಅವನು ತಂದ ನೋಟೀಸ್ ಓದಿ,

” ಸ್ಟೂಡೆಂಟ್ಸ್ ಲಿಸನ್ ಹಿಯರ್ ಇ ವಿಲ್ ಬಿ ಬ್ಯಾಕ್ ಇನ್ ಫ್ಯು ಮಿನಿಟ್ಸ್. ಡೋಂಟ್ ಮೇಕ್ ನೋಯಿಸ್ ” ಅಂತ ಹೊರಟೇ ಬಿಟ್ಟಳು. ಇದು ಕೇಳಿದ್ದೆ ತಡ ಸಂದೀಪ ಸಂತೋಷರಿಬ್ಬರೂ ಚೀಟಿಗಳನ್ನು ತೆಗೆದು ಬೇಗ ಬೇಗನೆ ಬರೆಯಲು ಶುರು ಮಾಡಿದರು.

ಎಕ್ಸಾಮ್ ಹಾಲಲ್ಲಿ ಈಗಾಗಲೇ ಗುಸುಗುಸು ಶುರುವಾಗಿತ್ತು.  ಸ್ವಲ್ಪ ಹೊತ್ತಿನಲ್ಲೇ ಅದು ತಾರಕಕ್ಕೇರಿತು. ಬೊಬ್ಬೆ ಕೇಳಿದ ಮೇಡಂ ಕೂಡಲೇ ಎಕ್ಸಾಮ್ ಹಾಲ್ ಗೆ ಬಂದಳು. ಮೊದಲ ಬೆಂಚಿನಲ್ಲಿ ಕಾಪಿ ಹೊಡೆಯುತ್ತಿದ್ದ ಇಬ್ಬರನ್ನು ಹಿಡಿದು ಬೈಯ್ಯಲು ಶುರು ಮಾಡಿದಾಗ ಎಕ್ಸಾಮ್ ಹಾಲ್ನಲ್ಲಿ ಪಿನ್ ಡ್ರಾಪ್ ಸೈಲೆನ್ಸ್.

ಗಾಬರಿಗೊಂಡ ಸಂತೋಷ ತನ್ನ ಚೀಟಿಗಳನ್ನೆಲ್ಲಾ ಬಾಯಿಗೆ ಹಾಕಿ ಕೊಂಡ. ಸ್ವಲ್ಪ ಹೊತ್ತಿನಲ್ಲೇ ಸಂದೀಪ ತನ್ನ ಉತ್ತರ ಪತ್ರಿಕೆ ಮೇಡಂಗೆ ಕೊಟ್ಟು ಹೊರ ಹೋದ. ಮೇಡಂ ಹಾಗೆ ಒಂದು ರೌಂಡ್ ಹೊಡೆಯುತ್ತಾ ಕೊನೆಯ ಬೆಂಚ್ ಬಳಿ ಬಂದಳು. ಹಾಗೆ ಸಂತೋಷನ ಹಿಂದೆ ಬಂದು ನಿಂತಳು . ಸುಮ್ಮನೇ ಏನೋ ಬರೆಯುವವನಂತೆ ನಟಿಸುತ್ತಿದ್ದ ಸಂತೋಷ. ಬಾಯಲ್ಲಿದ್ದ ಚೀಟಿಗಳನ್ನು ಹೇಗೂ ಕಷ್ಟ ಪಟ್ಟು ನುಂಗಿಯಾಗಿತ್ತು. ಅವಳ ಗಮನ ಈಗ ಸಂತೋಷನ ಬೆಂಚಿನ ಹಿಂದೆ ಬಿದ್ದಿದ್ದ ಚೀಟಿ ಮೇಲೆ ಬಿತ್ತು. ಅದನ್ನೆತ್ತಿ ಬಿಡಿಸಿ ನೋಡಿದರೆ ಮ್ಯಾತ್ಸ್ ನ ಕೆಲವು ಉತ್ತರಗಳು. ಕೂಡಲೇ ಸಂತೋಷನ ಉತ್ತರ ಪತ್ರಿಕೆಯನ್ನು ತೆಗೆದು ಚೀಟಿಯಲ್ಲಿದ್ದ ಕೈಬರಹ ತಾಳೆ ಮಾಡಿ ನೋಡಿದಳು. ಸಂಶಯವೇ ಇಲ್ಲ. ಇದು ಇವನದ್ದೇ ಕೈ ಬರಹ ಅಂತ ಖಾತ್ರಿಯಾಗಿತ್ತು.

“ಸ್ಟಾಂಡ್ ಅಪ್ ” ಅಂತ ಅವನನ್ನು ಗದರಿಸಿ ಅವನ ಪೇಪರ್ ತಗೊಂಡು ” ಕಂ ವಿಥ್ ಮೀ ” ಅಂತ ಅವಳ ಟೇಬಲ್ ಬಳಿ  ಹೋದಳು. ತನ್ನ ಬಳಿ ಇದ್ದ ಚೀಟಿ ಒಂದು ಬಿಡದೆ ನುಂಗಿದ್ದ, ಇದ್ಯಾವ ಚೀಟಿ ಅಂತ ಗೊತ್ತಾಗದೇ ಶಾಕ್ ನಲ್ಲಿದ್ದ ಸಂತೋಷ. ಹಾಗೆ ಅವಳನ್ನು ಹಿ೦ಬಾಲಿಸಿದ. ಎಕ್ಸಾಮ್ ಹಾಲ್ ನಲ್ಲಿದ್ದ ಎಲ್ಲರೂ ಇವನತ್ತಲೇ ನೋಡತೊಡಗಿದಾಗ ಅವಮಾನವೆನಿಸಿತು. ಹೆದರುತ್ತಲೇ,

” ಮೇಡಂ ಅದು ನಂದಲ್ಲ” ಅಂತಂದ ತನ್ನ ನಡುಗುವ ಸ್ವರದಲ್ಲಿ.

“ಇದು ನಿನ್ನದೇ ಹ್ಯಾಂಡ್ ರೈಟಿಂಗ್” ಅಂತ ಚೀಟಿ ತೆಗೆದು ತೋರಿಸಿದಳು.

ಕೈ ಬರಹ ತನ್ನದೇ,  ಆದರೆ ಅದು ಜೆರಾಕ್ಸ್. ಅಂದರೆ ಇದು ಸಂದೀಪನ ಚೀಟಿ. ಮೇಡಂಗೆ ಹೆದರಿ ಅವನು ಎಸೆದದ್ದು ತನ್ನ ಬೆ೦ಚ್ ಕೆಳಗೆ ಬಿದ್ದಿದೆ. ಇನ್ನು ಏನು ಹೇಳಿದರೂ ಮೇಡಂ ನಂಬಲ್ಲ ಅಂತ ಸುಮ್ನೆ ತಲೆ ತಗ್ಗಿಸಿ ನಿ೦ತುಕೊ೦ಡ.

ಮೇಡಂ ತನ್ನ ಎಂದಿನ ಶೈಲಿಯಲ್ಲಿ ಹಿಗ್ಗಾ ಮುಗ್ಗಾ  ಬಯ್ಯುತ್ತಿದ್ದಳು. ಆಕಾಶವೇ ತಲೆ ಮೇಲೆ ಬಿದ್ದಂತೆ ನಿಂತಿದ್ದ ಸಂತೋಷ. ಈಗಾಗಲೇ ಸಿಕ್ಕಿ ಬಿದ್ದಿದ್ದ ಆ ಇಬ್ಬರು ಅಲ್ಲೇ ಮುಸಿ ಮುಸಿ ನಗುತ್ತ ನಿ೦ತಿದ್ದರು. ಸಂತೋಷನಿಗೆ ಮಾತ್ರ ಏನು ಮಾಡುವುದೆಂದೇ ತೋಚಲಿಲ್ಲ. ಎಷ್ಟು ಸಲ ಸಾರಿ ಹೇಳಿದರೂ ಮೇಡಂ ಕೇಳದೆ ಚೀಟಿಯನ್ನು ಉತ್ತರ ಪತ್ರಿಕೆಯೊಂದಿಗೆ ಸ್ಟೇಪಲ್ ಮಾಡಿ ಪ್ರಿನ್ಸಿಪಾಲ್  ಚೇಂಬರ್ ಗೆ ಬರ ಹೇಳಿದರು. ಈಗಾಗಲೇ ಎಕ್ಸಾಮ್ ಮುಕ್ತಾಯಗೊ೦ಡಿತ್ತು. ಪೇಪರ್’ಗಳ ಕಟ್ಟಿನೊಂದಿಗೆ ಮೇಡಂ ಮುಂದೆ ನಡೆಯುತ್ತಿದ್ದರೆ, ಅವಳ ಹಿಂದೆ ಕಾಪಿ ಹೊಡೆದು ಸಿಕ್ಕಿ ಬಿದ್ದ ಆ ಇಬ್ಬರ ಜೊತೆ ಸಂತೋಷ ಪ್ರಿನ್ಸಿಪಾಲರ ಛೇ೦ಬರ್ ಗೆ ಹೊರಟರು.

ತನ್ನ ಸಹಪಾಠಿಗಳು, ಸೀನಿಯರ್ ಗಳ  ಮುಂದೆ ತನ್ನ ಮಾನ ಹೀಗೆ ಹರಜಾಗುತಿದ್ದುದು ಸಂತೋಷನಿಗೆ ಸಹಿಸಲಾಗಲಿಲ್ಲ. ಈ ಐಡಿಯಾ ಕೊಟ್ಟ ಸಂದೀಪನ ಮೇಲೆ ಕೆಟ್ಟ ಕೋಪ ಬರುತ್ತಿತ್ತು. ತನ್ನನು ಸಿಕ್ಕಿಸಿ ಹಾಕಿ ಇಲ್ಲೆಲ್ಲೋ ಅವಿತಿರಬಹುದೆಂದು ಸುತ್ತಲೂ ಒಮ್ಮೆ ಕಣ್ಣಾಡಿಸಿದ. ಎಲ್ಲೂ ಅವನ ಪತ್ತೆ ಇಲ್ಲ. ಆದದ್ದಾಯಿತು, ಇನ್ನು ಪ್ರಿನ್ಸಿಪಾಲರಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಯೋಚಿಸಿದ. ಮಾತು ಮಾತಿಗೂ ಪೇರೆಂಟ್ಸ್ ಬರಲು ಹೇಳುವುದು ಪ್ರಿನ್ಸಿಪಾಲರ ವೈಖರಿಯೆಂದು ಗೊತ್ತಿತ್ತು. ಹಾಗೆ ಬರ ಹೇಳಿದರೆ ಮನೆಯಲ್ಲೂ ಮಾರಿ ಹಬ್ಬ ಗ್ಯಾರಂಟಿ ಅಂತ ನೆನೆಸಿ ಮೈ ನಡುಕ ಶುರುವಾಯಿತು. ಅವರ ಕೈ ಕಾಲು ಹಿಡಿದಾದರೂ ತಪ್ಪನ್ನು ಒಪ್ಪಿಕೊಂಡು ಶಿಕ್ಷೆಯಿಂದ ಪಾರಾಗಬೇಕೆಂದು ನಿಶ್ಚಯಿಸಿದ. ಪ್ರಿನ್ಸಿಪಾಲ್ ಚೇಂಬರ್ ತಲುಪುತ್ತಲೇ ಎದೆ ಬಡಿತ ಹೆಚ್ಚಾಗ ತೊಡಗಿತ್ತು. ಏನು ಮಾಡಿದರೂ ಇನ್ನು ಕಾಪಿ ಮಾತ್ರ ಹೊಡಿಬಾರದು ಅಂತ ತನಗೆ ತಾನೇ ಹೇಳಿಕೊಂಡ.

-ಹರಿಕಿರಣ್

h.kiran83@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!