ಇತ್ತೀಚೆಗೆ ಮಾಧ್ಯಮಗಳು ಮತ್ತು ಮಾಧ್ಯಮದ ಅಧ್ವರ್ಯುಗಳಾದ ಸಂಪಾದಕರುಗಳು ಪದೇ ಪದೇ ಜನರಿಂದ ಬೈಸಿಕೊಳ್ಳುತ್ತಿದ್ದಾರೆ.ಹುಚ್ಚ ವೆಂಕಟ್ ಗಲಾಟೆಯನ್ನು,ದರ್ಶನ್’ನ ಗಂಡ-ಹೆಂಡತಿ ಜಗಳವನ್ನು,ಶಿವರಾಜ್ ಕುಮಾರ್ ಮಗಳ ಮದುವೆಯ ನೇರಪ್ರಸಾರ ಮತ್ತು ಕಾವೇರಿ ಗಲಾಟೆಯ ಸಂದರ್ಭದಲ್ಲಿ ಮಾಧ್ಯಮದವರು ನಡೆದುಕೊಂಡ ರೀತಿಯನ್ನು ಬಹಳಷ್ಟು ಜನರು ವಿರೋಧಿಸಿದರು.ತೀರ ಇತ್ತೀಚಿನ ಲೇಟೆಸ್ಟ್ ಉದಾಹರಣೆ ಕೊಡುವುದಾದರೆ ಕಾವೇರಿ ಗಲಾಟೆಯ ಕುರಿತ ಪ್ರಶ್ನೆ ಕೇಳಿದ್ದಕ್ಕೆ ಪ್ರಕಾಶ್ ರೈ ರೊಚ್ಚಿಗೆದ್ದು ಚಾನೆಲ್’ನವರಿಗೆ ಬೈದು ಕೂಗಾಡಿದ್ದನ್ನು ಪ್ರಸಾರ ಮಾಡಿದ್ದಕ್ಕೆ ಮತ್ತು ನಂತರ ಪ್ರಕಾಶ್ ರೈ ಅವರ ಕ್ಷಮೆ ಆಗ್ರಹಿಸಿದ್ದಕ್ಕೆ ಜನಶ್ರೀ ಚಾನೆಲ್ ಮತ್ತದರ ಸಂಪಾದಕ ಅನಂತ ಚಿನಿವಾರ್ ಅವರನ್ನು ಹಿಗ್ಗಾಮುಗ್ಗಾ ಟೀಕಿಸಲಾಯಿತು.ಮಾಧ್ಯಮಗಳ ಬದ್ಧತೆಯ ಬಗ್ಗೆ ಅವುಗಳಿಗಿರುವ ಹೊಣೆಗಾರಿಕೆಯ ಬಗ್ಗೆ ಮತ್ತೊಮ್ಮೆ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟಿನ ಚರ್ಚೆ ಆಯಿತು.ಹಾಗಾದರೆ ಮಾಧ್ಯಮಗಳನ್ನು ಬೈಯುವ ನಾವು ನಮ್ಮ ಸಾಮಾಜಿಕ ಬದ್ಧತೆ,ಹೊಣೆಗಾರಿಕೆ,ನೈತಿಕತೆಗಳ ಬಗ್ಗೆ ಇನ್ನೊಬ್ಬರು ನಮ್ಮನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲದಷ್ಟು ಸರಿಯಾಗಿದ್ದೇವೆಯೇ?ಅಷ್ಟೊಂದು ದೊಡ್ದ ಮಟ್ಟದಲ್ಲಿ ಮಾಧ್ಯಮಗಳು ಬೆಳೆಯಲು ಕಾರಣವಾದ ನಾವೇ ಈಗ ಮಾಧ್ಯಮಗಳ ಬಹಳಷ್ಟು ನಡೆಗಳನ್ನು ವಿರೋಧಿಸುವುದೇಕೆ?ಇದು ಸರಿಯೇ?
ಸುಮ್ಮನೇ ಉದಾಹರಣೆಗಾಗಿ ಒಂದೆರಡು ಘಟನೆಗಳನ್ನು ಪ್ರಸ್ತಾಪಿಸುತ್ತೇನಷ್ಟೇ.ಯಾವುದೇ ಚಾನೆಲ್ ವಿರುದ್ಧವಾಗಲೀ ಅಥವಾ ಅವುಗಳನ್ನು ಬೈಯುತ್ತಿರುವವರ ಮೇಲಾಗಲಿ ಪೂರ್ವಾಗ್ರಹ ಪೀಡಿತವಾದ ವೈಯಕ್ತಿಕ ದ್ವೇಷ ನನಗಿಲ್ಲ.ಮೊನ್ನೆ ಪ್ರಕಾಶ್ ರೈ-ಜನಶ್ರೀ ರಾದ್ಧಾಂತವನ್ನೇ ಮೊದಲು ನೋಡೋಣ.ಕಾವೇರಿ ವಿವಾದದ ಬಗ್ಗೆ ನಿರೂಪಕಿ ಕೇಳಿದ ಪ್ರಶ್ನೆಗೆ ಪ್ರಕಾಶ್ ರೈ ಯಾವುದೇ ಕಾರಣವಿಲ್ಲದೇ ರೊಚ್ಚಿಗೆದ್ದು ಕೂಗಾಡಿದರು.ಇಂಥ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳುವುದೇ ಮಾಧ್ಯಮಗಳ ಕೆಲಸ.ನಿಮ್ಮ ಬಂಡವಾಳವನ್ನು ಬಯಲು ಮಾಡುತ್ತೇನೆ.ನಿಮ್ಮ ಜನಶ್ರೀ ಚಾನೆಲ್ ಇನ್ನು ಮುಂದೆ ಯಾವತ್ತೂ ನನ್ನ ಬಳಿ ಬರುವುದು ಬೇಡ ಅಂತೆಲ್ಲ ಒದರಾಡಿದರು.ಪುಣ್ಯಕ್ಕೆ ಆ ನಿರೂಪಕಿ ತಾಳ್ಮೆ ಕಳೆದುಕೊಳ್ಳದೇ ಶಾಂತವಾಗಿಯೇ ಎದ್ದು ಬಂದರು.ಅದೇ ಸ್ವತಃ ಅನಂತ್ ಚಿನಿವಾರ್ ಅವರೇ ಸಂದರ್ಶನ ಮಾಡುತ್ತಿದ್ದರೆ ಅಥವಾ ಇನ್ಯಾರೋ ಪ್ರಸಿದ್ಧ ನಿರೂಪಕರು ಪ್ರಕಾಶ್ ಅವರನ್ನು ಪ್ರಶ್ನೆ ಕೇಳುತ್ತಿದ್ದರೆ ಅಲ್ಲಿ ಕಥೆಯೇ ಬೇರೆ ಆಗುತ್ತಿತ್ತು.ಪ್ರಕಾಶ್ ರೈ ಅವರಿಂದ ಅಲ್ಲಿಯೇ ವಿವರಣೆ ಕೇಳಿ ಮತ್ತೊಂದಷ್ಟು ವಾಗ್ಯುದ್ಧಗಳು ಅಲ್ಲಿಯೇ ನಡೆದು ಮತ್ತೊಂದು ಸೀನ್ ಕ್ರಿಯೇಟ್ ಆಗುತ್ತಿತು.ನಂತರ ತಮ್ಮ ಸಂಪಾದಕೀಯ ಕಾರ್ಯಕ್ರಮದಲ್ಲಿ ಅನಂತ್ ಚಿನಿವಾರ್ ಪ್ರಕಾಶ್ ರೈ ಅವರ ನಡೆಯನ್ನು ವಿರೋಧಿಸಿ ಅವರ ಕ್ಷಮೆಗೆ ಪಟ್ಟು ಹಿಡಿದರು.ಪ್ರಕಾಶ್ ರೈ ಮೈಕ್ ಕಿತ್ತು ಬೈಯುತ್ತಾ ಎದ್ದು ಹೋದ ದೃಶ್ಯ ಫೇಸ್ಬುಕ್’ನಲ್ಲಿ ಅಪ್ಲೋಡ್ ಆಯಿತು.ಬಹಳಷ್ಟು ವೀಕ್ಷಕರು ಚಾನೆಲ್ ಮೇಲೆ ಮುಗಿ ಬಿದ್ದರು.ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಕಾವೇರಿ ವಿವಾದದ ಪ್ರಶ್ನೆ ಕೇಳಿದ್ದೇ ತಪ್ಪು ಎಂದು ಕೆಲವರು ಹೇಳಿದರೆ,ಪ್ರಕಾಶ್ ಮೈಕ್ ಕಿತ್ತು ಚರ್ಚೆಯಿಂದ ಎದ್ದ ಮೇಲೂ ಅದರ ವೀಡೀಯೋ ಮಾಡಿ ಕೇವಲ ಟಿಆರ್ಪಿಗಾಗಿ ಅದನ್ನು ಚಾನೆಲ್ ನಲ್ಲಿ,ಫೇಸ್ಬುಕ್’ನಲ್ಲಿ ತೋರಿಸಿದ್ದು ದೊಡ್ಡ ತಪ್ಪು ಎಂದು ಕೂಗಾಡಿದರು.ಟಿಆರ್ಪಿಗಾಗಿ ಮಾಧ್ಯಮಗಳು ಏನು ಬೇಕಾದರೂ ಮಾಡುತ್ತವೆ,ಆಫ್ ದಿ ರೆಕಾರ್ಡ್ ವೀಡಿಯೋವನ್ನು ಕೇವಲ ತಮ್ಮ ಪ್ರಚಾರಕ್ಕಾಗಿ ತೋರಿಸಿದರು.ಇದು ಸರಿಯಲ್ಲ.ಇನ್ನು ಕ್ಷಮೆ ಕೇಳುವಂತೆ ಪ್ರಕಾಶ್ ರೈ ಅವರನ್ನು ಆಗ್ರಹಿಸಿದ್ದು ಮಹಾಪರಾಧ ಅಂತ ಕೆಲವರು ಹೇಳಿದರು.
ಹಾಗದರೆ ಅನಂತ್ ಚಿನಿವಾರ್ ಏನು ಮಾಡಬೇಕಿತ್ತು.ಪ್ರಕಾಶ್ ರೈ ಸಂದರ್ಶನದಿಂದ ಅರ್ಧಕ್ಕೇ ಎದ್ದು ಹೋಗಿದ್ದಕ್ಕೆ ತಮ್ಮ ನಿರೂಪಕಿಯೇ ಕಾರಣ.ಅವಳು ಕೇಳಿದ ಪ್ರಶ್ನೆಯೇ ಸರಿಯಿಲ್ಲ.ಹಾಗಾಗಿ ಪ್ರಕಾಶ್ ಅವರಿಗೆ ಸಿಟ್ಟು ಬರಿಸಿದ್ದಕ್ಕಾಗಿ ಆ ನಿರೂಪಕಿಯ ಹತ್ತಿರವೇ ಕ್ಷಮೆ ಕೇಳಿಸಬೇಕಿತ್ತೇ. ಕಾವೇರಿ ವಿವಾದದ ಬಗ್ಗೆ ಬಹಳಷ್ಟು ಪ್ರಸಿದ್ಧ ನಟರು ತಮ್ಮ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಹಾಗೆಯೇ ಪ್ರಕಾಶ್ ರೈ ಕೂಡ ತಮ್ಮ ಅಭಿಪ್ರಾಯವನ್ನು ಹೇಳಿದ್ದರೆ ಅವರ ಸ್ಟಾರ್ ವ್ಯಾಲ್ಯು ಕಡಿಮೆ ಆಗುತ್ತಿರಲಿಲ್ಲ. ಯಾವ ವಿವಾದವೂ ಆಗುತ್ತಿರಲಿಲ್ಲ. ಹಾಗೆ ನೋಡಿದರೆ ಇಡೀ ಪ್ರಕರಣದಲ್ಲಿ ಪ್ರಕಾಶ್ ಎಡವಿದ್ದರು. ಕಾವೇರಿ ಬಗ್ಗೆ ನಾನು ಮಾತನಾಡಿದರೆ ಎಲ್ಲಿ ತಮಿಳು ಚಿತ್ರರಂಗದಲ್ಲಿ ತನ್ನ ಮಾರ್ಕೆಟ್ ಬಿದ್ದು ಹೋಗುತ್ತದೆಯೋ ಎಂಬ ಅವ್ಯಕ್ತ ಭಯ ಅವರಲ್ಲಿ ಇದ್ದಂತಿತ್ತು.ಇದನ್ನು ಅನಂತ್ ಎನ್’ಕ್ಯಾಷ್ ಮಾಡಿಕೊಂಡರು ಅಷ್ಟೇ. ಕನ್ನಡ ನಾಡಲ್ಲಿ ಹುಟ್ಟಿ ಇಲ್ಲೇ ಬೆಳೆದ ನಟನಿಗೆ ಕನ್ನಡದ ನದಿಯೊಂದರ ಕುರಿತಾದ ವಿವಾದದಲ್ಲಿ ಮಾತನಾಡಲು ಇಷ್ಟವಿಲ್ಲ.ಇದು ತಪ್ಪು.ಮತ್ತು ನಮ್ಮ ನಿರೂಪಕಿಯ ಮೇಲೆ ಕೂಗಾಡಿದ್ದಕ್ಕೆ ಅವರು ಕ್ಷಮೆಯಾಚಿಸಬೇಕು ಅಂತ ಅನಂತ್ ಆಗ್ರಹಿಸಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ. ಟಿಆರ್ಪಿ ಹೆಚ್ಚಿಸಿಕೊಳ್ಳಲು ಒಂದು ಅವಕಾಶ ತನ್ನ ಮುಂದೆ ಇದೆ ಅಂದಾಗ ಇವತ್ತು ಯಾವ ಚಾನೆಲ್ ಕೂಡ ಸುಮ್ಮನೇ ಕೂರುವುದಿಲ್ಲ.ಏಕೆಂದರೆ ಇವತ್ತು ಒಂದು ಚಾನೆಲ್’ನ ಜನಪ್ರಿಯತೆಯನ್ನು,ಅದರ ಗುಣಮಟ್ಟವನ್ನು ವ್ಯಾವಹಾರಿಕವಾಗಿ(ಭಾವನಾತ್ಮಕವಾಗಿ ಅಲ್ಲ)ಅಳೆಯಲು ಟೀಆರ್ಪಿ ಬಿಟ್ಟರೆ ಬೇರೆ ಮಾನದಂಡ ಇಲ್ಲ. ಚಾನೆಲ್’ನ ಭವಿಷ್ಯ ಇರುವುದೇ ಅದಕ್ಕೆ ಎಷ್ಟು ಟೀಆರ್ಪಿ ಬರುತ್ತದೆ ಎಂಬುದರ ಮೇಲೆ. ಹಾಗಾಗಿ ಅದನ್ನು ಹೆಚ್ಚಿಸಿಕೊಳ್ಳಲು ಅವಕಾಶಗಳು ಕಣ್ಣ ಮುಂದೆಯೇ ಇರುವಾಗ ಅದನ್ನು ಬಿಟ್ಟು ನೈತಿಕತೆ,ಮೌಲ್ಯ,ಸರಿ-ತಪ್ಪುಗಳ ವಿಮರ್ಶೆ ಮಾಡುತ್ತಾ ಕೂರಲು ಸಂಪಾದಕನಿಗೆ ಅವಕಾಶವೇ ಇರುವುದಿಲ್ಲ. ಇಡೀ ಪ್ರಕರಣದಲ್ಲಿ ಜನಶ್ರೀ ಚಾನೆಲ್ ಅನ್ನು ವಿಲನ್ ಆಗಿ ಬಿಂಬಿಸಲಾಯಿತು.ಟಿಆರ್ಪಿ ಹೆಚ್ಚಿಸಿಕೊಳ್ಳಲು ಅದು ಹೂಡಿದ ತಂತ್ರ ಇದು ಎಂದು ಜರೆಯಲಾಯಿತು.ಆದರೆ ಯಾವುದೋ ವಾಮಮಾರ್ಗದಿಂದ ತನ್ನ ಟಿಆರ್ಪಿ ಹೆಚ್ಚಿಸಿಕೊಳ್ಳಲು ಜನಶ್ರೀ ಪ್ರಯತ್ನಿಸಲಿಲ್ಲವಲ್ಲ.ಅಂದರೆ ಯಾವುದೋ ಅಶ್ಲೀಲವಾದ ದೃಶ್ಯಗಳನ್ನೋ,ಅಸಭ್ಯ ಮಾತುಗಳನ್ನೋ ಅಥವಾ ವೀಕ್ಷಕರ ಭಾವನೆಗಳಿಗೆ ಧಕ್ಕೆ ತರುವ ಅಂಶಗಳನ್ನೋ ಪ್ರಸಾರ ಮಾಡಲಿಲ್ಲ.(ಇವತ್ತು ಕೆಟ್ಟದನ್ನು ತೋರಿಸಿದರೂ ಜನ ನೋಡುತ್ತಾರೆ.ಅದರಿಂದಲೂ ಟಿಆರ್ಪಿ ಹೆಚ್ಚಾಗುತ್ತದೆ).ಪ್ರಕಾಶ್ ರೈ ಪ್ರಕರಣವನ್ನು ಈ ರೀತಿಯಾಗಿ ಮುಂದುವರೆಸಿದರೆ ನಮ್ಮ ಟಿಆರ್ಪಿ ಹೆಚ್ಚಾಗುತ್ತದೆ.ಅದಕ್ಕೆ ಈ ಥರ ಮಾಡಬೇಕು ಅಂತ ಅನಂತ್ ಅವರಿಗೆ ಅವತ್ತು ಹೊಳೆಯಿತು.ಅವರು ಅದನ್ನು ಸರಿಯಾಗಿ ಉಪಯೋಗಿಸಿಕೊಂಡರು ಅಷ್ಟೇ.ಹಾಗಂತ ಪ್ರಕಾಶ್ ರೈ ಅವರ ವೈಯಕ್ತಿಕ ವಿಷಯಕ್ಕೋ ಅಥವಾ ಹಳೆಯ ಯಾವುದೋ ಘಟನೆಗಳಲ್ಲಿ ಪ್ರಕಾಶ್ ರೈ ಅವರ ನಡವಳಿಕೆಯನ್ನು ಹಿಡಿದುಕೊಂಡು ಅವರ ವ್ಯಕ್ತಿತ್ವವನ್ನು ಅಳೆಯುವ ಯತ್ನಕ್ಕೂ ಕೈ ಹಾಕಲಿಲ್ಲವಲ್ಲ. ಕೇವಲ ಅವತ್ತಿನ ಘಟನೆಯನ್ನು ಮಾತ್ರ ಹಿಡಿದುಕೊಂಡು ಅದರಲ್ಲಿ ಪ್ರಕಾಶ್ ರೈ ಮಾಡಿದ್ದು ಹೇಗೆ ತಪ್ಪು ಅಂತ ನಿರೂಪಿಸುವ ಪ್ರಯತ್ನ ಮಾಡಿದರು.ಪ್ರಕಾಶ್ ರೈ ಅವರನ್ನು ಕನ್ನಡ ವಿರೋಧಿ ಅಂತ ಸಾಬೀತು ಮಾಡುವ ಉದ್ದೇಶ,ಅವಶ್ಯಕತೆ ಅನಂತ್ ಚಿನಿವಾರ್’ಗೂ ಇರಲಿಲ್ಲ.ಪ್ರಕಾಶ್ ರೈ ತಿಳಿದೋ ತಿಳಿಯದೆಯೋ ಸಿಟ್ಟುಗೊಂಡು ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ ಅಂತ ಕೂಗಾಡಿದರು.ಈ ಸನ್ನಿವೇಶವನ್ನು ಸರಿಯಾಗಿ ಬಳಸಿಕೊಂಡ ಜನಶ್ರೀ ನಿಮ್ಮ ಬಂಡವಾಳವನ್ನು ನಾವೂ ಪ್ರಶ್ನಿಸುತ್ತೇವೆ ಅಂತ ಪ್ರಕಾಶ್ ಅವರನ್ನು ವಿಮರ್ಶಿಸಿತು.ಈ ವಿಷಯದ ಬಗ್ಗೆ ತಾವು ನಡೆಸಿಕೊಟ್ಟ ಸಂಪಾದಕೀಯವನ್ನು ನೋಡಿ,ಫೇಸ್ಬುಕ್’ನಲ್ಲಿ ಅಪ್ಲೋಡ್ ಮಾಡಿದ ವೀಡಿಯೋವನ್ನು ಶೇರ್ ಮಾಡಿ ಅಂತ ಅನಂತ್ ಯಾರಲ್ಲೂ ಕೇಳಲಿಲ್ಲ.ಆದರೂ ಜನ ಅವರಿಗೆ ಬಯ್ಯುವ ನೆಪದಲ್ಲೇ ಫೇಸ್ಬುಕ್’ನಲ್ಲಿ ಆ ವೀಡೀಯೋವನ್ನು ಸಾವಿರಾರು ಸಲ ಶೇರ್ ಮಾಡಿದರು.ಇಡೀ ಪ್ರಕರಣದಲ್ಲೂ ಜನಶ್ರೀಯದ್ದೇ ತಪ್ಪು ಅಂತ ನಿರ್ಧರಿಸಿದ ಮೇಲೂ ಅನಂತ್ ಚಿನಿವಾರ್ ನಡೆಸಿದ ಚರ್ಚೆಯನ್ನು ಟಿವಿಯಲ್ಲಿ ನೋಡಿದರು.ನೇರವಾಗಿ ನೋಡಲಾಗದಿದ್ದವರು ‘ಜಿಯೋ’ ಸಿಮ್ ಬಳಸಿಕೊಂಡು ಯೂಟ್ಯೂಬ್ ನಲ್ಲಿ ನೋಡಿದರು. ಜನಶ್ರೀಗೆ ಪ್ರಚಾರ ಸಿಕ್ಕಿತು.ಅದಕ್ಕೆ ಟಿಆರ್ಪಿ ಬಂತು ಅಷ್ಟೇ.ನಾವು ನಿಮ್ಮ ಚಾನೆಲ್ ನೋಡುತ್ತೇವೆ.ಪ್ಯಾನೆಲ್’ಗಳಲ್ಲಿ ಏನೂ ಹುರುಳಿರುವುದಿಲ್ಲ ಅಂತ ಗೊತ್ತಿದ್ದರೂ ತಮ್ಮ ‘ಫೇಸ್ಬುಕ್ ಸೆಲೆಬ್ರೆಟಿ’ಗಳು ಭಾಗವಹಿಸುವ ಚರ್ಚೆಯನ್ನು ನೋಡುತ್ತೇವೆ. ಕೊನೆಗೆ ಆ ಚರ್ಚೆಯ ಉದ್ದೇಶವೇ ಸರಿ ಇರಲಿಲ್ಲ. ನಿರೂಪಕರು Biased ಆಗಿ ಮಾತನಾಡಿದರು.ನಿಮ್ಮ ಚಾನೆಲ್ ಸರಿ ಇಲ್ಲ ಅಂತ ನಾವೇ ಹೇಳುತ್ತೇವೆ.ಇಷ್ಟರಲ್ಲಿ ಚಾನೆಲ್ ಗೆ ಒಂದಷ್ಟು ಟಿಆರ್ಪಿ ಬಂದಿರುತ್ತದೆ.ಕೊನೆಗೆ ಟಿಆರ್ಪಿಗಾಗಿ ನೀವು ಏನು ಬೇಕಾದರೂ ಮಾಡುತ್ತೀರಿ ಅಂತ ನಾವೇ ಬೈಯ್ಯುತ್ತೇವೆ.ಟಿಆರ್ಪಿ ಗಳಿಸಲು ನಾವೇ ಅವಕಾಶ ಮಾಡಿಕೊಟ್ಟು ಆ ಚಾನೆಲ್’ಗಳಿಗೆ ಬೈಯ್ಯುವುದು ಎಷ್ಟು ಸರಿ.
ಇದೇ ಪ್ರಕಾಶ್ ರೈ ಯಾವುದಾದರೂ ಪ್ರಸಿದ್ಧ ಇಂಗ್ಲೀಷ್ ನ್ಯೂಸ್ ಚಾನೆಲ್’ನಲ್ಲಿ ಸಂದರ್ಶನ ಕೊಡುತ್ತಿದ್ದಿದ್ದರೆ ಆಗ ಏನಾಗುತ್ತಿತ್ತು? ಕಾವೇರಿ ವಿಷಯ ಇರಲಿ.ದೇಶವನ್ನು ಕಾಡುತ್ತಿರುವ ಯಾವುದೋ ಒಂದು ಗಹನವಾದ ವಿಷಯದ ಬಗ್ಗೆ ತಾನು ಅಭಿಪ್ರಾಯ ಹೇಳಲಾರೆ. ಕಾಂಟ್ರಾವರ್ಸಿ ಆಗುತ್ತದೆ ಅಂತ ಕೂಗಾಡಿ ಮೈಕ್ ಕಿತ್ತೆಸೆದಿದ್ದರೆ ಏನಾಗುತ್ತಿತ್ತು? ನಮ್ಮ ಅರ್ನಬ್ ಗೋಸ್ವಾಮಿಯನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ.ಪ್ರಕಾಶ್ ರೈ ಟೈಮ್ಸ್ ನೌ ಚಾನೆಲ್ಲಿನ ನಿರೂಪಕಿಯ ಎದುರಿಗೇನಾದರೂ ಕೂಗಾಡಿ ಗಲಾಟೆ ಮಾಡಿದ್ದರೆ ಅರ್ನಬ್ ಗೋಸ್ವಾಮಿ ಅದನ್ನೊಂದು ರಾಷ್ಟ್ರೀಯ ಸಮಸ್ಯೆಯಂತೆ ಪೋಸ್ ಕೊಟ್ಟು ಅವತ್ತೇ ರಾತ್ರಿಯ News Hour ನಲ್ಲಿ ಭಾರೀ ಕಿರುಚಾಟದೊಂದಿಗೆ ಚರ್ಚೆ ಮಾಡುತ್ತಿದ್ದ.ಪ್ರಕಾಶ್ ರೈ ಜನ್ಮ ಜಾಲಾಡಿ ನಿಮ್ಮಂಥ ಸೆಲೆಬ್ರೆಟಿಗಳ ಹಣೆಬರಹವೇ ಇಷ್ಟು ಅಂತ ಪ್ರಕಾಶ್ ರೈ ಅವರನ್ನು ಸಂಪೂರ್ಣವಾಗಿ ಡೀಗ್ರೇಡ್ ಮಾಡಿ ಬಿಡುತ್ತಿದ್ದ.ಟ್ವಿಟ್ಟರ್’ನಲ್ಲಿ ಈ ಘಟನೆ ಎರಡು ದಿನ ಟ್ರೆಂಡ್ ಆಗುತ್ತಿತ್ತು.ಆಗ ಮಾತ್ರ ನಾವು ಅರ್ನಬ್ ಮಾಡಿದ್ದೇ ಸರಿ ಅನ್ನುತ್ತಿದ್ದೆವು.(ಪ್ರಾಮಾಣಿಕವಾಗಿ ಆಲೋಚಿಸಿ.ಇದೇ ಗಲಾಟೆ ಅರ್ನಬ್-ಪ್ರಕಾಶ್ ರೈ ನಡುವೆ ನಡೆದಿದ್ದರೆ ನಮ್ಮಲ್ಲಿ ಬಹಳಷ್ಟು ಜನ ಅರ್ನಬ್ ಪರ ನಿಲ್ಲುತ್ತಿದ್ದರೋ ಇಲ್ಲವೋ. ಟೈಮ್ಸ್ ನೌ ಕೇವಲ ಟಿಆರ್ಪಿಗಾಗಿ ಇದನ್ನು ಮಾಡುತ್ತಿದೆ ಅಂತ ಎಷ್ಟು ಜನ ಹೇಳುತ್ತಿದ್ದರು?)ಆದರೆ ಇಲ್ಲಿ ತನ್ನ ಚಾನೆಲ್’ನ ಅಸ್ಮಿತೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಕ್ಕಾಗಿ,ತನ್ನ ನಿರೂಪಕಿಯ ಪರ ನಿಂತಿದ್ದಕ್ಕಾಗಿ,ಅದರ ಕುರಿತು ವಿಶೇಷ ಚರ್ಚೆ ಏರ್ಪಡಿಸಿದ್ದಕ್ಕಾಗಿ ಅನಂತ್ ಚಿನಿವಾರ್ ವಿಲನ್ ಆಗಿ ಬಿಟ್ಟರು.ಕೇವಲ ಟಿಆರ್ಪಿಗಾಗಿ ಏನು ಬೇಕಾದರೂ ಮಾಡುವ ಸಂಪಾದಕನಂತೆ ನಮಗೆ ಕಂಡು ಬಿಟ್ಟರು.ಆದರೆ ಇನ್ನೊಬ್ಬರ ದೌರ್ಬಲ್ಯವನ್ನು ತಾವು ಉಪಯೋಗಿಸಿಕೊಳ್ಳುವ ಜಾಣತನ ತೋರಿದರಷ್ಟೇ ಚಿನಿವಾರ್. ಇವತ್ತಿನ ಪೈಪೋಟಿಯ ಕಾಲದಲ್ಲಿ ಟಿಆರ್ಪಿ ಹೆಚ್ಚಿಸಿಕೊಳ್ಳದಿದ್ದರೆ ಯಾವುದೇ ಚಾನೆಲ್ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಹೆಚ್ಚಿಸಿಕೊಳ್ಳುವ ಅವಕಾಶ ತನ್ನ ಮುಂದೆ ಇದ್ದಾಗ ಅದನ್ನು ಸದುಪಯೋಗಪಡಿಸಿಕೊಂಡಿತು ಜನಶ್ರೀ.
ಸುವರ್ಣ ನ್ಯೂಸ್ ನಲ್ಲಿ ಆಜಾದಿv/sಸ್ವಾತಂತ್ರ್ಯದ ಚರ್ಚೆಯನ್ನು ನಡೆಸಿಕೊಟ್ಟಾಗ ಇತ್ತೀಚೆಗಷ್ಟೇ ಸುವರ್ಣ ನ್ಯೂಸ್’ನ ಸಂಪಾದಕೀಯ ಮಂಡಳಿ ಸೇರಿರುವ ಅಜಿತ್ ಹನುಮಕ್ಕನವರ್ ಅವರನ್ನು ನಾವು ಶ್ಲಾಘಿಸಿದ್ದೆವು.ಅದರ ಅನ್ ಎಡಿಟೆಡ್ ವರ್ಷನ್ ಪ್ರಸಾರ ಮಾಡಿದಾಗಲಂತೂ ಚಾನೆಲ್’ನ ಟಿಆರ್ಪಿ ಮತ್ತಷ್ಟು ಹೆಚ್ಚಿತು.ಅಂಥ ಒಳ್ಳೆ ಚರ್ಚೆಯನ್ನು ಪ್ರಸಾರ ಮಾಡಿದ ಅಜಿತ್ ಈಗ ತಮ್ಮದೇ ಚಾನೆಲ್’ನಲ್ಲಿ ದಿನಾ ಸಂಜೆ ಏಳುವರೆಗೆ ಹುಚ್ಚ ವೆಂಕಟ್’ನನ್ನು ಕೂರಿಸಿ ಹಿಂದಿನ ದಿನದ ಬಿಗ್ ಬಾಸ್ ರಿಯಾಲಿಟಿ ಶೋ ದ ವಿಮರ್ಶೆಯನ್ನು ಟಿಪಿಕಲ್ ಹುಚ್ಚ ವೆಂಕಟ್ ಸ್ಟೈಲ್’ನಲ್ಲಿ ಮಾಡಿಸುತ್ತಿದ್ದಾರೆ.ಇದಕ್ಕೆ ಅಜಿತ್ ಅವರ ಪೂರ್ಣ ಸಹಮತಿ ಇಲ್ಲದೇ ಇರಬಹುದು.ಆದರೆ ಅವರು ನೇತೃತ್ವ ವಹಿಸಿರುವ ಚಾನೆಲ್’ನಲ್ಲಿಯೇ ತಾನೆ ಕಾರ್ಯಕ್ರಮ ಪ್ರಸಾರವಾಗುತ್ತಿರುವುದು.ಕಳೆದ ಬಿಗ್ ಬಾಸ್ ನಲ್ಲಿ ಹುಚ್ಚ ವೆಂಕಟ್ ಸ್ಪರ್ಧೆಯಿಂದ ಹೊರಬಿದ್ದಾಗ ಕೆಲವೊಂದಿಷ್ಟು ಜನ ಬಿಗ್ ಬಾಸ್ ನೋಡುವುದನ್ನು ನಿಲ್ಲಿಸಿದ್ದರು.ಅವರಿಗೆ ಬೇರೆ ಏನೂ ಮುಖ್ಯವಾಗುತ್ತಿರಲಿಲ್ಲ. ಹುಚ್ಚ ವೆಂಕಟ್ ಕೊಡುತ್ತಿದ್ದ ಮನೋರಂಜನೆಯಷ್ಟೇ ಬೇಕಾಗಿತ್ತು. ಜನರ ಈ ಮನಸ್ಥಿತಿಯನ್ನು ಸುವರ್ಣ ನ್ಯೂಸ್ ಅರಿತುಕೊಂಡು ಬಿಟ್ಟಿತು.ಜನರು ನೋಡುತ್ತಾರೆ ಅಂತ ಖಚಿತವಾಗಿ ಗೊತ್ತಿದ್ದೇ ಹುಚ್ಚ ವೆಂಕಟ್’ನನ್ನು ಕರೆಸಿ ಕಾರ್ಯಕ್ರಮ ಮಾಡಿಸಿತು. ಮೌಲ್ಯ,ಹೊಣೆ,ನೈತಿಕತೆ ಇದ್ಯಾವುದರ ಬಗೆಗೂ ಅದು ತಲೆಕೆಡಿಸಿಕೊಳ್ಳಲೇ ಇಲ್ಲ.ಅದಕ್ಕೆ ಟಿಆರ್ಪಿ ಬೇಕಿತ್ತು.ಹಾಗಾಗಿ ಹುಚ್ಚ ವೆಂಕಟ್ ನನ್ನು ಬಳಸಿಕೊಂಡಿತು ಅಷ್ಟೇ.ಅವತ್ತು ಆಜಾದಿv/sಸ್ವಾತಂತ್ರ್ಯ ಕಾರ್ಯಕ್ರಮ ನಡೆಸಿಕೊಟ್ಟದ್ದಕ್ಕೆ ಅಜಿತ್ ಅವರನ್ನು ಶ್ಲಾಘಿಸಿದ್ದ ನಾವು ಈಗ ಹುಚ್ಚ ವೆಂಕಟ್’ನನ್ನು ಹಿಡಿದುಕೊಂಡು ಮಂಗಾಟ ಮಾಡುತ್ತಿರುವುದು ಸರಿಯೇ ಎಂದು ಅಜಿತ್’ರನ್ನು ಪ್ರಶ್ನಿಸಲಿಲ್ಲ.ನಾವು ನೋಡುತ್ತೇವೆ ಅಂತ ಖಚಿತವಾಗಿ ಗೊತ್ತಿದ್ದೇ ಹುಚ್ಚ ವೆಂಕಟ್’ಗೆ ಅರ್ಧ ಗಂಟೆಯ ಸ್ಲಾಟ್ ಕೊಟ್ಟರು.ಅದನ್ನು ವೀಕ್ಷಕರು ನೋಡುತ್ತಿದ್ದಾರಷ್ಟೆ.ಹಾಗಿರುವಾಗ ಟಿಆರ್ಪಿಗಾಗಿ ಏನು ಬೇಕಾದರೂ ತೋರಿಸುತ್ತೀರಿ ಅಂತ ಬೈಯ್ಯುವ ಅರ್ಹತೆ ನಮಗಿದೆಯೇ?ನಾವು ಏನು ಬೇಕಾದರೂ ನೋಡುತ್ತೇವೆ ಅಂತ ಗೊತ್ತಿದ್ದೇ ತಾನೆ ಅವರೂ ಏನು ಬೇಕಾದರೂ ತೋರಿಸುವುದು.
ಹುಚ್ಚ ವೆಂಕಟ್’ನ ಡೊಂಬಾರಟವನ್ನು,ದರ್ಶನ್ ಗಂಡ-ಹೆಂಡತಿಯ ಜಗಳವನ್ನು,ಶಿವರಾಜ್ ಕುಮಾರ್ ಮಗಳ ‘ದೊಡ್ಮನೆ ಮದುವೆ’ಯನ್ನು,ಯಶ್-ರಾಧಿಕಾ ಪಂಡಿತ್ ನಿಶ್ಚಿತಾರ್ಥವನ್ನು,ಕಾವೇರಿ ಗಲಾಟೆಯಲ್ಲಿ ಬೆಂಗಳೂರು ಹೊತ್ತಿ ಉರಿದ್ದದ್ದನ್ನು ತೋರಿಸದೇ ಇದ್ದಿದ್ದರೆ ನಷ್ಟ ಮಾಧ್ಯಮಗಳಿಗೇ ಆಗುತ್ತಿತು.ಉದಾಹರಣೆಗೆ ಬೆಂಗಳೂರು ಬಂದ್ ಅನ್ನು ಮಾಧ್ಯಮಗಳು ದಿನವಿಡೀ ತೋರಿಸದೇ ಇದ್ದಿದ್ದರೆ ‘ಅಲ್ಲಾ ಸ್ವಾಮಿ ಇಡೀ ಬೆಂಗಳೂರೇ ಹೊತ್ತಿ ಉರಿಯುತ್ತಿದೆ.ಇವರು ಮಾತ್ರ ಅದನ್ನು ಮುಖ್ಯಾಂಶಗಳಲ್ಲಿ ಚುಟುಕಾಗಿ ತೋರಿಸಿ ತಮ್ಮ ಎಂದಿನ ರೆಗ್ಯುಲರ್ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದಾರಲ್ಲ,ಇವರಿಗೆ ಸ್ವಲ್ಪವೂ ಜವಾಬ್ದಾರಿ ಬೇಡವೇ ಅಂತ ನಾವೇ ಬೈದು ಚಾನೆಲ್ ಬದಲಾಯಿಸುತ್ತಿದ್ದೆವು.(ಹೌದೋ ಅಲ್ಲವೋ ಪ್ರಾಮಾಣಿಕವಾಗಿ ಹೇಳಿ)ನ್ಯೂಸ್ ಚಾನೆಲ್’ಗಳಿಗೆ ಬಯ್ಯುತ್ತಲೇ ಬೆಂಗಳೂರು ಬಂದ್ ಅನ್ನು ಲೈವ್ ಆಗಿ ಟಿವಿಯಲ್ಲಿ ದಿನವಿಡೀ ನೋಡಿದವರು ನಾವೇ ಅಲ್ಲವೇ.ಅವರು ಇಂಥ ಗಂಭೀರ ವಿಷಯದಲ್ಲೂ ತಮ್ಮ ಟಿಆರ್ಪಿ ಹೆಚ್ಚಿಸಿಕೊಂಡರು ಅಂತ ನಾವು ಬೈದರೆ ಅದಕ್ಕೆ ಅರ್ಥವೇ ಇಲ್ಲ.ಅಂಥ ಗಂಭೀರ ವಿಷಯಗಳಲ್ಲೂ,ಸುವರ್ಣಾವಕಾಶ ತಮ್ಮ ಮುಂದೆ ಇದ್ದಾಗಲೂ ಟಿಆರ್ಪಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸದಿದ್ದರೆ ಅವನಷ್ಟು ಮೂರ್ಖ ಮತ್ತೊಬ್ಬನಿಲ್ಲ.
ಇವತ್ತು ಯಾವುದೇ ಅಪಾಯವಿಲ್ಲದೇ,ಕಾನೂನಿನ ಚೌಕಟ್ಟಿನೊಳಗೆಯೇ,ಇನ್ನೊಬ್ಬರಿಗೆ ತೊಂದರೆಯಾಗದ ರೀತಿಯಲ್ಲಿ ಒಬ್ಬನಿಗೆ ಪ್ರತಿಷ್ಠೆ,ಜನಪ್ರಿಯತೆ,ಪ್ರಸಿದ್ಧಿ ಮತ್ತು ಹಣ ಸಿಗುತ್ತದೆ ಅಂದಾದರೆ ಕಳೆದುಕೊಳ್ಳಲು ಯಾರು ತಯಾರಿದ್ದಾರೆ ಹೇಳಿ.ಇದಕ್ಕೂ ಒಂದೆರಡು ಉದಾಹರಣೆ ಕೊಡುತ್ತೇನೆ. ನಟಿ ಮಾಳವಿಕಾ ಅವಿನಾಶ್ ನಮಗೆಲ್ಲರಿಗೂ ಗೊತ್ತು.ವಕೀಲರಾಗಿದ್ದವರು.ಕೇವಲ ನಟನೆಗಷ್ಟೇ ತಮ್ಮನ್ನು ಸೀಮಿತಗೊಳಿಸದೇ ದೇಶದ ಬಗ್ಗೆ ಅಭಿಮಾನ,ಪ್ರೀತಿ ಇಟ್ಟುಕೊಂಡು ಅದನ್ನು ತಮ್ಮ ಕೆಲಸಗಳಲ್ಲೂ ತೋರಿಸಿಕೊಟ್ಟವರು.ಬುದ್ಧಿಜೀವಿಗಳು ಅಸಹಿಷ್ಣುತೆ ಇದೆ ಎಂದು ಬೊಬ್ಬಿರಿದಾಗ,ಭಾರತ್ ಕೆ ತುಕುಡೇ ಕರೇಂಗೆ ಅನ್ನುವವರನ್ನು ಬೆಂಬಲಿಸಿ ಕೆಲವರು ಅರಚಾಡಿದಾಗ ಅವರ ವಿರುದ್ಧ ಬೀದಿಗಿಳಿದು ಹೋರಾಡಿದವರು. ಸಾಹಿತ್ಯವನ್ನು ಗಂಭೀರವಾಗಿ ಓದಿಕೊಂಡವರು. ಹಾಗಾಗಿಯೇ ಭೈರಪ್ಪನವರ ಗೃಹಭಂಗ ಧಾರವಾಹಿಯಲ್ಲಿ ನಂಜಮ್ಮನಾಗಿ ಮನೋಜ್ಞ ಅಭಿನಯ ನೀಡಿ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಾಯಿತು. ಬಿಗ್ ಬಾಸ್ ರಿಯಾಲಿಟಿ ಶೋ ನಮ್ಮ ಸಂಸ್ಕೃತಿಗೆ ಹೊಂದುವಂಥದ್ದಲ್ಲ, ಅಲ್ಲಿನ ಸ್ಪರ್ಧಿಗಳನ್ನು ಬಿಗ್ ಬಾಸ್ ನಡೆಸಿಕೊಳ್ಳುವ ರೀತಿ ಮತ್ತು ಆ ಮನೆಯಲ್ಲಿ ಸ್ಪರ್ಧಿಗಳ ವರ್ತನೆ ನೋಡಲು ಸಾಧ್ಯವಿಲ್ಲ ಎಂದು ಸುಮಾರು ಜನ ಆ ಕಾರ್ಯಕ್ರಮ ಶುರುವಾದಂದಿನಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಬಿಗ್ ಬಾಸ್ ಸಮಾಜಕ್ಕೆ ಒಂದು ರೀತಿ ನೆಗೆಟಿವ್ ಸಂದೇಶವನ್ನು ಕೊಡುತ್ತಿದೆ ಕೂಡ. ಇಷ್ಟೆಲ್ಲ ಗೊತ್ತಿದ್ದೂ ಮಾಳವಿಕಾರಂಥ ಮಾಳವಿಕಾ ಅವರೇ ಬಿಗ್ ಬಾಸ್ ನಾಲ್ಕನೇ ಸೀಸನ್’ನಲ್ಲಿ ಸ್ಪರ್ಧಿಸಿದ್ದಾರಂದರೆ ನೀವೇ ಆಲೋಚಿಸಿ.ಬಿಗ್ ಬಾಸ್ ಗೆ ಹೋದರೆ ಒಂದಷ್ಟು ಪ್ರಚಾರ,ಜನಪ್ರಿಯತೆ ಮತ್ತು ಹಣ ಸಿಗುತ್ತದೆ.ಖರ್ಚಾಗುವಂಥದ್ದು ಏನೂ ಇಲ್ಲ. ಮಾಳವಿಕಾ ಇತರೆ ನಟರಂಥಲ್ಲ. ಅವರಿಗೆ ಯಾವ ಕಾರ್ಯಕ್ರಮ ಸರಿ,ಯಾವುದು ತಪ್ಪು ಅಂತ ಗೊತ್ತಿದೆ.ಹಾಗಾಗಿ ಅವರು ಬಿಗ್ ಬಾಸ್’ನಲ್ಲಿ ಸ್ಪರ್ಧಿಸಲಾರರು ಎಂದು ಸ್ಪರ್ಧಿಗಳ ಪಟ್ಟಿಯಲ್ಲಿ ಅವರ ಹೆಸರು ಇದ್ದಾಗ ಅನೇಕರು ಅಂದುಕೊಂಡಿದ್ದರು.ಅವರು ಬಿಗ್ ಬಾಸ್ ಗೆ ಹೋಗಬಾರದೆಂಬುದು ನನ್ನ ವೈಯಕ್ತಿಕ ನಿಲುವೂ ಆಗಿತ್ತು.ಹಾಗಿದ್ದೂ ಮೌಲ್ಯ,ಸಂಸ್ಕೃತಿ ಎಲ್ಲವನ್ನೂ ಬದಿಗಿಟ್ಟು ಮಾಳವಿಕಾ ಬಿಗ್ ಬಾಸ್ ಮನೆಗೆ ಹೋದರು. ಅದು ಅವರ ವೈಯಕ್ತಿಕ ಸ್ವಾತಂತ್ರ್ಯ.ಇರಲಿ.ಆದರೂ ಏನೂ ಖರ್ಚಿಲ್ಲದೇ ಸಿಗುವ ಪ್ರಚಾರ,ಹಣವನ್ನು ಕಳೆದುಕೊಳ್ಳಲು ಮಾಳವಿಕಾ ಮನಸ್ಸು ಮಾಡಲಿಲ್ಲ.ನಾವು ಎಷ್ಟೇ ವಿರೋಧಿಸಬಹುದು.ಆದರೆ ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ನಿಂತು ನೋಡಿದರೆ ಅವರು ಮಾಡಿದ್ದರಲ್ಲಿ ತಪ್ಪಿಲ್ಲವೆಂದು ಅನ್ನಿಸುತ್ತದೆ.
ಮತ್ತೂ ಒಂದು ಉದಾಹರಣೆ ಕೊಡುತ್ತೇನೆ.ಮಂಡ್ಯ ರಮೇಶ್ ಹಿರಿಯ ನಟರು.ರಂಗಕರ್ಮಿ ಕೂಡ.ಮೈಸೂರಿನಲ್ಲಿ ‘ನಟನ’ ಎಂಬ ರಂಗಶಾಲೆಯನ್ನು ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡುತ್ತಿದ್ದಾರೆ.‘ಚಾಮಚೆಲುವೆ’,‘ಚೋರ ಚರಣದಾಸ’ ಮುಂತಾದ ಪ್ರಸಿದ್ಧ ನಾಟಕಗಳನ್ನು ನಿರ್ದೇಶಿಸಿದ್ದಾರೆ.ಹಲವು ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧರೂ ಆಗಿದ್ದಾರೆ. ಆದರೂ ರಂಗಭೂಮಿಯನ್ನು ಬಿಡದೇ ಆಗಾಗ ನಾಟಕಗಳನ್ನಾಡುತ್ತಾರೆ.ಇವರೂ ಸಾಹಿತ್ಯ ಓದಿಕೊಂಡಿದ್ದಾರೆ.ಇಂಥ ಮಂಡ್ಯ ರಮೇಶ್ ಆ ‘ಮಜಾ ಟಾಕೀಸ್’ ಎಂಬ ಹಿಂದಿಯ ರೀಮೇಕ್ ಹಾಸ್ಯ ಕಾರ್ಯಕ್ರಮದಲ್ಲಿ ಆಗಾಗ ತೀರ ಕಳಪೆ ಮಟ್ಟದ,ಕೀಳು ದರ್ಜೆಯ ಹಾಸ್ಯ ನಟನೆ ಮಾಡುತ್ತಾರೆ.ಯಾರೋ ಬರೆದ ಸ್ಕ್ರಿಪ್ಟ್’ಗೆ ಅದು ಹಾಸ್ಯವಲ್ಲ ಅಸಹ್ಯ ಅಂತ ಗೊತ್ತಿದ್ದರೂ ನಟಿಸುತ್ತಾರೆ.ಅವರು ಮಜಾಟಾಕೀಸ್ ಗೆ ಹೋಗಿ ತಮ್ಮ ಗೌರವವನ್ನು ತಾವೇ ಕಳೆದುಕೊಂಡರು ಅಂತಲೂ ಕೆಲವರು ಟೀಕಿಸಿದ್ದಾರೆ.ಅದು ನಿಜವೂ ಹೌದು.ನಿಜವಾದ ಹಾಸ್ಯ ಅಂದರೇನು,ಅದು ಜನರನ್ನು ನಗಿಸಬೇಕೆ ಹೊರತು ಮುಜುಗರ ಹುಟ್ಟಿಸಬಾರದು ಎಂದು ಗೊತ್ತಿದ್ದರೂ ಪುಕ್ಕಟೆ ಪ್ರಚಾರ,ಹಣ ಸಿಗುತ್ತಿರುವಾಗ ಬಿಡಲು ಮನಸ್ಸಾಗದೇ ನಟಿಸಿದರು.ಯಾರೋ ಟೀಕಿಸುತ್ತಾರೆಂದು ಲೆಕ್ಕಿಸದೇ ಅವರು ತಮಗೆ ಸರಿ ಅನ್ನಿಸಿದ್ದನ್ನು ಮಾಡಿದರು.ಇವತ್ತಿನ ಯುಗದಲ್ಲಿ ನಂಬಿಕೆ,ಮೌಲ್ಯ,ಸಿದ್ಧಾಂತಗಳು ಬಹುತೇಕ ಮಾತಿಗಷ್ಟೇ ಸೀಮಿತವಾಗಿವೆ ಅಂತ ಅವರಿಗೂ ತಿಳಿದಿದೆ.ಏನೂ ಖರ್ಚಿಲ್ಲದೇ ಬರುವ ಲಾಭವನ್ನು ಜನ ಟೀಕಿಸುತ್ತಾರೆಂದು ಕಳೆದುಕೊಂಡರೆ ನಾವು ಮೂರ್ಖರಾಗುತ್ತೇವಷ್ಟೇ.ಇಲ್ಲಿ ಮಾಳವಿಕಾ ಮತ್ತು ಮಂಡ್ಯ ರಮೇಶ್ ಅವರನ್ನು ಕೇವಲ ಉದಾಹರಣೆಯಾಗಿ ತೆಗೆದುಕೊಂಡೆಯಷ್ಟೇ.ಇಬ್ಬರೂ ಒಳ್ಳೆ ನಟರು.ಇಬ್ಬರ ಮೇಲೂ ನನಗೆ ಗೌರವವಿದೆ.
ನಾನು ಪ್ರತಿನಿಧಿಸುವ ವೈದ್ಯಕೀಯ ಕ್ಷೇತ್ರದ್ದೇ ಒಂದು ಉದಾಹರಣೆ ಕೊಡುತ್ತೇನೆ ಕೇಳಿ.ಇತ್ತೀಚೆಗೆ ಪರಿಚಯದ ಒಬ್ಬ ವೈದ್ಯರನ್ನು ಮಾತನಾಡಿಸಲು ಅವರ ಖಾಸಗಿ ನರ್ಸಿಂಗ್ ಹೋಮ್’ಗೆ ಹೋಗಿದ್ದೆ.ಅಲ್ಲಿ ಓಪಿಡಿಯಲ್ಲಿ ನಾವು ಕುಳಿತಿದ್ದಾಗ ಒಬ್ಬ ಮಹಿಳೆ ಬಂದು “ಡಾಕ್ಟ್ರೇ ನನಗೆ ರಕ್ತ ಪರೀಕ್ಷೆ ಮಾಡಿಸಬೇಕು” ಅಂದರು.ನಿಮಗೆ ಏನು ತೊಂದರೆ ಎಂದು ಕೇಳಲಾಗಿ “ತೊಂದರೆ ಏನೂ ಇಲ್ಲ.ಆದರೂ ಒಮ್ಮೆ ಎಲ್ಲಾ ಬಗೆಯ ರಕ್ತ ಪರೀಕ್ಷೆಗಳನ್ನು ಮಾಡಿಸಬೇಕು ಅನ್ನಿಸುತ್ತಿದೆ” ಅಂದರು.ಅವರನ್ನು ಸಂಪೂರ್ಣವಾಗಿ Clinical Examination ಮಾಡಿದಾಗಲೂ ಯಾವುದೇ Abnormality ಗೋಚರಿಸಲಿಲ್ಲ.ಆದರೂ ಆ ವೈದ್ಯರು ಮಹಿಳೆಗೆ Complete Hemogram,Random blood sugar,renal functon test,liver function test ಗಳನ್ನು ಬರೆದುಕೊಟ್ಟು ಮಾಡಿಸಿಕೊಂಡು ಬನ್ನಿ ಎಂದು ಕಳಿಸಿದರು.ನನಗೆ ಆಶ್ಚರ್ಯವಾಗಿ ಕೇಳಿದೆ.”ಅವರಿಗೆ ಯಾವ ತೊಂದರೆಯೂ ಮೇಲ್ನೋಟಕ್ಕೆ ಕಾಣಲಿಲ್ಲ.ಸುಮ್ಮನೇ investigations ಮಾಡಿಸುವ ಅವಶ್ಯಕತೆ ಇಲ್ಲವಲ್ಲ.ಆ ಮಹಿಳೆಗೆ ನಾವು ಮನವರಿಕೆ ಮಾಡಬಹುದಿತ್ತು.ಏನಾದರೂ ತೊಂದರೆ ಕಾಣಿಸಿಕೊಂಡರೆ ಬನ್ನಿ,ಆಗ ಬೇಕಾದರೆ ಬ್ಲಡ್ ಟೆಸ್ಟ್ ಮಾಡುವ.ಈಗ ಬೇಡ ಅನ್ನಬಹುದಿತ್ತಲ್ಲ” ಅಂದೆ.ಅದಕ್ಕೆ ಆ ವೈದ್ಯರು “ನಮ್ಮದು ಖಾಸಗಿ ನರ್ಸಿಂಗ್ ಹೋಮ್.ನಮಗೆ ಹಣ ಎಷ್ಟು ಬಂದರೂ ಬೇಕು.ಹಾಗಂತ ನಾವು ನಮ್ಮಲ್ಲಿಗೆ ಬರುವ ರೋಗಿಗಳನ್ನು ಸುಲಿಗೆ ಮಾಡಿ ಸುಮ್ಮನೇ ಹಣ ಕೀಳುವವರಲ್ಲ.ಇಲ್ಲಿ ಬಂದು ರೋಗಿಗಳು ಪಡೆಯುವ ಸೇವೆಗೆ ತಕ್ಕಂತೆ ಹಣ ಪಡೆಯುತ್ತೇವೆ.ನಮ್ಮಲ್ಲಿಗೇ ಬನ್ನಿ ಅಂತ ಯಾರನ್ನೂ ಒತ್ತಾಯ ಮಾಡುವುದಿಲ್ಲ.ಈಗ ಈ ಮಹಿಳೆ ಬಂದು ಅವರಾಗೇ ಬ್ಲಡ್ ಟೆಸ್ಟ್ ಮಾಡಿಸುತ್ತೇನೆ ಅಂದರು.ಮಾಡಿಸಲಿ.ಅವರ ರಿಪೋರ್ಟ್ ನಾರ್ಮಲ್ ಇರುತ್ತದೆ.ಅವರಿಗೆ ಸಮಾಧಾನವಾಗುತ್ತದೆ,ನಮಗೆ ಲಾಭವಾಗುತ್ತದೆ.ಧರ್ಮ,ಮೌಲ್ಯಗಳ ದೃಷ್ಟಿಯಿಂದ ನೀನು ಹೇಳಿದಂತೆ ನಾವು ಅವರಿಗೆ ಮನವರಿಕೆ ಮಾಡಿಕೊಡಬೇಕಿತ್ತು.ಆದರೆ ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಎಲ್ಲ ಸಮಯದಲ್ಲೂ ಭಾವನಾತ್ಮಕವಾಗಿ ಯೋಚಿಸುತ್ತ ಸುಮ್ಮನೇ ಕೂರಬಾರದು.ನಾವು ಕಾನೂನು ಬಾಹಿರವಾಗಿ,ಕೇವಲ ಹಣ ಗಳಿಕೆಯನ್ನೇ ಗುರಿಯಾಗಿಟ್ಟುಕೊಂಡು ರೋಗಿಗಳು ಮುನಿಸಿಕೊಳ್ಳುವ ರೀತಿ ಯಾವ ಕೆಲಸವನ್ನೂ ಮಾಡುತ್ತಿಲ್ಲ.ಹಣ ಗಳಿಸುವ ಅವಕಾಶ ತಾನಾಗೇ ನನ್ನ ಮುಂದೆ ಬಂದಾಗ ಕಳೆದುಕೊಳ್ಳುವ ಮೂರ್ಖ ನಾನಲ್ಲ” ಎಂದರು.
ಹಾಗಾಗಿ ನಾವು ನ್ಯೂಸ್ ಚಾನೆಲ್’ಗಳಿಗೆ ಬಯ್ಯುವುದು ಹೇಗಾಗುತ್ತದೆ ಅಂದರೆ ಆ ಮಹಿಳೆ ತಾನಾಗೇ ಬಂದು ಕೇಳಿಕೊಂಡು ಬ್ಲಡ್ ಟೆಸ್ಟ್ ಮಾಡಿಸಿಕೊಂಡು,ಅದು ನಾರ್ಮಲ್ ಇದೆ ಅಂತ ತಿಳಿದ ಮೇಲೆ ಹೊರಗೆ ಹೋಗಿ ಇನ್ನೊಬ್ಬರ ಹತ್ತಿರ ನನಗೆ ಏನೂ ಖಾಯಿಲೆಯೇ ಇರಲಿಲ್ಲ.ವೈದ್ಯರು ಸುಮ್ಮನೇ ಪರೀಕ್ಷೆಗಳನ್ನು ಮಾಡಿ ಹಣ ಕಿತ್ತರು ಅಂತ ಆರೋಪಿಸಿದಂತಿದೆ.ಅವಕಾಶ ಸಿಕ್ಕಾಗಲೆಲ್ಲ ನ್ಯೂಸ್ ಚಾನೆಲ್ ನೋಡುವವರೂ ನಾವೇ.ಹೇಗಾಗಿದೆ ಅಂದರೆ ಮನೆಯಲ್ಲಿ ಧಾರಾವಾಹಿ ನೋಡುವಾಗ ಅಥವಾ ಕ್ರಿಕೆಟ್ ಮ್ಯಾಚ್ ನೋಡುವಾಗ ಮಧ್ಯದಲ್ಲಿ ಜಾಹೀರಾತು ಬಂದರೆ ತಕ್ಷಣ ಬಹುತೇಕರು ಯಾವುದಾದರೂ ನ್ಯೂಸ್ ಚಾನೆಲ್’ಗೆ ಬದಲಾಯಿಸುತ್ತಾರೆ.ಸಾಲದ್ದಕ್ಕೆ ಟೀವಿಯಿಂದ ದೂರವಿದ್ದಾಗ ಆಗಾಗ ಆನ್ಲೈನ್ ನಲ್ಲಿ ನ್ಯೂಸ್ ಚಾನೆಲ್ ಗಳ ಲೈವ್ ಸ್ಟ್ರೀಮಿಂಗ್ ನೋಡುವವರೂ ನಾವೇ.ಅವರು ಒಳ್ಳೆಯದೇ ತೋರಿಸಲಿ ಕೆಟ್ಟದೇ ತೋರಿಸಲಿ ನಾವಂತೂ ನ್ಯೂಸ್ ಚಾನೆಲ್ ನೋಡಿಯೇ ನೋಡುತ್ತೇವೆ.
ನ್ಯೂಸ್ ಚಾನೆಲ್’ಗಳಿಗೆ ಬಯ್ಯುತ್ತಲೇ ಹುಚ್ಚ ವೆಂಕಟ್’ನ ತರಲೆಗಳನ್ನು ನೋಡಿದವರು ನಾವು.ಬಿಗ್ ಬಾಸ್ ಕಾರ್ಯಕ್ರಮ ಕೆಟ್ಟದ್ದು ಅಂತ ಗೊತ್ತಿದ್ದೂ ಸುದೀಪನಿಗಾಗಿ ಕಾರ್ಯಕ್ರಮ ನೋಡುವವರೂ ಇದ್ದಾರೆ.ಟಿಆರ್ಪಿಗಾಗಿ ಏನು ಬೇಕಾದರೂ ಮಾಡುತ್ತಾರೆ ಅಂತ ಗೊಣಗುತ್ತಲೇ ಯಾರದ್ದೋ ಮನೆಯ ವೈಯಕ್ತಿಕ ಜಗಳಗಳನ್ನು ಬಿಗ್ ಡಿಬೇಟ್ ನಲ್ಲಿ ನೋಡಿದವರು ನಾವು.ಅವರು ಕೆಟ್ಟದನ್ನು ತೋರಿಸುತ್ತಾರೆ.ಟಿಆರ್ಪಿಗಾಗಿ ಏನು ಬೇಕಾದರೂ ಮಾಡುತ್ತಾರೆ.ಮೌಲ್ಯ,ನಂಬಿಕೆಗಳನ್ನು ಗಾಳಿಗೆ ತೂರಿ ಮೂರೂ ಬಿಟ್ಟವರಂತೆ ಆಡುತ್ತಾರೆ ಅಂತ ನಮಗೆ ಗೊತ್ತಿದೆ ತಾನೇ.ಹಾಗದರೆ ಸುದ್ದಿ ವಾಹಿನಿಗಳನ್ನು ನೋಡದಿದ್ದರಾಯಿತು.ಅಷ್ಟೇ.ಏನೇ ಆದರೂ ನಾನು ಇನ್ನು ಕಡೇ ಪಕ್ಷ ಒಂದು ತಿಂಗಳ ಕಾಲ ನ್ಯೂಸ್ ಚಾನೆಲ್ ನೋಡುವುದಿಲ್ಲ ಅಂತ ಎಷ್ಟು ಜನ ತೀರ್ಮಾನ ಮಾಡಿಯಾರು?ಬದಲಿಗೆ ನ್ಯೂಸ್ ಚಾನೆಲ್ ನಲ್ಲಿ ಯಾವುದಾದರೂ ಚರ್ಚೆಯಲ್ಲಿ ಭಾಗವಹಿಸುವ ಆಹ್ವಾನ ಬಂದಿತೋ ಸಿಕ್ಕಿದ್ದೇ ಚಾನ್ಸ್ ಅಂತ ಇಂಥಾ ಚಾನೆಲ್ ನಲ್ಲಿ ಇಷ್ಟು ಗಂಟೆಗೆ ಈ ವಿಷಯದ ಕುರಿತು ಚರ್ಚೆಯಲ್ಲಿ ಭಾಗವಹಿಸುತ್ತೇನೆ ಅಂತ ಫೇಸ್ಬುಕ್’ನಲ್ಲಿ ಸ್ಟೇಟಸ್ ಅಪ್ದೇಟ್ ಮಾಡುವವರೂ ನಾವೇ.ಅವರು ಎಷ್ಟಂದರೂ ಟಿಆರ್ಪಿಗಾಗಿ ಏನು ಬೇಕಾದರೂ ಮಾಡುವವರು ತಾನೆ.ಹಾಗಾದರೆ ನಾನು ಈ ನ್ಯೂಸ್ ಚಾನೆಲ್ ಗಳಲ್ಲಿ ಚರ್ಚೆಗೆ ಹೋಗುವುದಿಲ್ಲ ಅಂತ ಹೇಳಲು ಎಷ್ಟು ಜನ ತಯಾರಿದ್ದಾರೆ?
ನಾವೇನೇ ಕೂಗಿ,ಕಿತ್ತು ಹಾಕಿದರೂ ಅಷ್ಟೇ.ಸುದ್ದಿವಾಹಿನಿಗಳಿಗೆ ಅವುಗಳ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇವತ್ತು ಟಿಆರ್ಪಿ ಬಿಟ್ಟರೆ ಬೇರೆ ಮಾನದಂಡ ಇಲ್ಲ.ಯಾವುದೇ ವ್ಯಕ್ತಿ,ಸಂಸ್ಥೆ ತಾನು ವೀಕ್ಷಕರ ಮಾತಿಗೆ ಬೆಲೆ ಕೊಡುತ್ತೇವೆ,ಸಂಸ್ಕೃತಿ,ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆ ಅಂತ ಹೊರಟರೂ ಕಟ್ಟಕಡೆಗೆ ಅವರ ಯಶಸ್ಸನ್ನು ನಿರ್ಧರಿಸುವುದು ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ ಅರ್ಥಾತ್ ಟಿಆರ್ಪಿ ಅಷ್ಟೇ.ತಾವು ಎಷ್ಟೇ ಒಳ್ಳೆಯವರು ಅಂತ ಬಿಂಬಿಸಿಕೊಂಡರೂ ಟಿಆರ್ಪಿ ಹೆಚ್ಚಿಸಿಕೊಳ್ಳಲು ಅವರು ಕಸರತ್ತು ಮಾಡದಿದ್ದರೆ ಅವರಿಗೆ ಉಳಿಗಾಲವಿಲ್ಲ.ಅದರ ಮೇಲೆ ಅವರ ಜನಪ್ರಿಯತೆ,ಅವರಿಗೆ ಬರುವ ಆದಾಯ ಎಲ್ಲವೂ ನಿರ್ಧರಿಸಲ್ಪಡುತ್ತದೆ.ಒಂದು ಪಾಯಿಂಟ್ ಬಿದ್ದು ಹೋದರೆ ಬರುವ ಜಾಹೀರಾತಿನಲ್ಲಿ ಎಷ್ಟೋ ಕಡಿಮೆಯಾಗುತ್ತದೆ.ಆದ್ದರಿಂದ ಮೇಲೆ ಇಬ್ಬರು ನಟರ ಉದಾಹರಣೆ ಕೊಟ್ಟಂತೆ ಸಂಸ್ಕೃತಿ,ಮೌಲ್ಯಗಳು,ನೈತಿಕತೆ,ಹೊಣೆಗಾರಿಕೆಯನ್ನು ಪ್ರತಿಪಾದಿಸುತ್ತಲೇ ವ್ಯಾವಹಾರಿಕ ಜಗತ್ತಿನಲ್ಲಿ ಹಿಂದುಳಿಯಲು ಯಾರೂ ಬಯಸುವುದಿಲ್ಲ.
ಟಿಆರ್ಪಿಗಾಗಿ ಚಾನೆಲ್’ಗಳು ಕಸರತ್ತು ಮಾಡಲೇಬೇಕಾದ್ದು ಅನಿವಾರ್ಯ.ಅದಕ್ಕಾಗಿ ಅವರು ನಾನಾ ರೀತಿಯ ಅವತಾರಗಳನ್ನು ತಾಳಬೇಕಾಗುತ್ತದೆ.ತಾವು ಜನರಿಂದ ಬೈಸಿಕೊಳ್ಳುತ್ತೇವೆ ಅಂತ ಗೊತ್ತಿದ್ದೂ ಕೆಲವು ಕಾರ್ಯಕ್ರಮಗಳನ್ನು ತೋರಿಸಲೇ ಬೇಕಾಗುತ್ತದೆ.ಅವು ನಿಜವಾಗಿಯೂ ತೀರಾ ಕೀಳುಮಟ್ಟದ,ಮುಜುಗರ ಹುಟ್ಟಿಸುವ,ದೇಶಕ್ಕೆ ಅವಮಾನ ಮಾಡುವಂಥ ಕಾರ್ಯಕ್ರಮಗಳನ್ನು ತೋರಿಸಿದಾಗ ಖಂಡಿತಾ ಅವರನ್ನು ಬೈಯ್ಯೋಣ.”Boycott this channel” ಅಂತ ಟ್ರೆಂಡ್ ಮಾಡೋಣ.ಆದರೆ ಸುದ್ದಿವಾಹಿನಿಗಳನ್ನು ನೋಡುತ್ತಲೇ ಅವು ತಪ್ಪು ಮಾಡುವುದಕ್ಕಾಗಿಯೇ ಕಾದಿದ್ದವರಂತೆ ಅವುಗಳನ್ನು ಟೀಕಿಸುವ ಮುನ್ನ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳೋಣ.