ಕಥೆ

ಮಾಸ್ಟರ್ ಪ್ಲಾನ್!

ಕಾಡು ಅಂದ್ರೆ ಹಾಗೇನೆ ಮುಪ್ಪಾನು ಮುದುಕರಿಗೂ ತಣಿಯದ ಕುತೂಹಲ, ಇನ್ನು ನಮ್ಮನ್ನ ಕೇಳಬೇಕೆ ನಾನು, ಸ್ವಟ್ಟ, ಗುಂಗಾಡಿ ಮತ್ತು ಬೂತ ನಾಲ್ಕನೆ ತರಗತಿಯ ಮೂರನೆ ಸಾಲಿನಲ್ಲಿ ಕುಳಿತುಕೊಳ್ಳೊ ಪೈಲ್ವಾನರು. ಲೇ ಬೂತ ನಾಳೆ ಶನಿವಾರ ಶಾಲೆ ಬಿಟ್ಟ ತಕ್ಷಣ ಬೇಗ ಪಾಟಿಚೀಲ ಇಟ್ಟು, ಗುಂಗಾಡಿನ ಕರಕೊಂಡು ಸ್ವಟ್ಟಾನ ಮಂತ್ಯಾಕ ಬಾ, ನಾನು ಅಲ್ಲೆ ಇರ್ತೀನಿ. ನಮ್ಮವ್ವ ಹೊಲಕ್ಕ ಹೊಗ್ತಾಳ, ಅಪ್ಪ ಸೋಗಿಗೆ ಸಂತಿ ಮಾಡ್ಲಿಕ್ಕೆ ಹೊಗ್ತಾನ ಇಬ್ಬರು ಬರೋದು ಸೀದಾ ರಾತ್ರಿಗನ. ಅಷ್ಟೋತ್ತಿಗಾಗಲೆ ನಾವು ವಾಪಾಸ್ ಬರಬಹುದು. ನಮ್ಮಪ್ಪ ರಾತ್ರಿ ಕೇಳಿದರೆ ಏನ ಹೇಳೋದು? ಲೇ ನಿಮ್ಮಪ್ಪ  ಸೀದ ರಾತ್ರಿ ಹತ್ತಕ್ಕ ಬರೋದು, ಇನ್ನಾ ನಿಮ್ಮವ್ವ ಕೇಳಿದರೆ ಶಿವುನ ಜೊತಿಗೆ ಅಡಾಕಾ ಹೊಗಿದ್ವಿ ಅನ್ನೋ ಅಯ್ತಾ,  ಈ ಬೂತ ಯಾವಗ್ಲು ಇಷ್ಟಾ ನೋಡು ಬರೀ ಹೆದ್ರತಾನ, ನಾ ಸ್ವಟ್ಟನ ಮಂತ್ಯಾಗ ಇರ್ತೀನಿ ತಿಳೀತು.

ಅಗಸಿಬಾಕಲ ಮುಂದೆನೆ ನಮ್ಮ ಶಾಲೆ, ಅಗಸಿಬಾಕಲ ದಾಟಿ ಹನುಮಂತ ದೇವರ ಗುಡಿ  ಮುಂದಿನ ಒಕಳಿ  ಕುಣಿ ದಾಟಿ ಜಾರಗಲ್ಲು ಹತ್ತಿ ಶಟ್ರು ಮನೆ ಮುಂದಾಸಿ ಒಂದು ದಿಬ್ಬ ಹತ್ತಿದರ ಅಲ್ಲೆ ಮೇಟಿ ಈರಣ್ಣ ಮೇಸ್ಷ್ರು ಮನಿ, ಅವರ ಇನ್ನೊಂದು ಹಳೇ ಮನೀಲೆ ನಾವು ಇರೊದು. ಅಂತು ನಮ್ಮ ಬಹುದಿನದ ಕನಸು ನನಸಾಗೂ ಸಮಯ ನಾಳೆ ಶುಭ ಶನಿವಾರದ ರೂಪದಲ್ಲಿ ಎದುರು ನೋಡುತಿತ್ತು  ಎಂದಿನಂತೆ ಆರು ಗಂಟೆಯವರೆಗೆ ಆಟ ಆಡಿ ಇನ್ನೇನು ಜಂಗಳಿ ದನ ವಾಪಾಸು ಬರಬಹುದು ಅನ್ನೋ ಹೊತ್ತಿಗೆ ಮನಿಗೆ ಹೋಗಿ ಒಳಗಿಂದ ಅಂಗಳತನಕ ಕಸ ಅಂದು ಅಂಗಳಕ ಒಂದ ಕೊಡ ನೀರು ಚಳ ಹೊಡದು, ದೇವರ ಮನೀ, ಅಡಿಗಿ ಮನೀ, ಉಸಿ ಮತ್ತಾ ಹೊರಗಿನ ಬಾಗಲಕ ನೀರ ಹಾಕಿ ಕೈ ಕಾಲು ಮಕ ತೊಳಕೊಂಡು ವಿಭೂತಿ ಹಚ್ಚಿಕೊಂಡು ಎರಡು ಊದಿನ ಕಡ್ಡಿ ಹಚ್ಹಿಕೊಂಡು ದೇವರಿಗೆ, ಬಾಗಿಲಗೆ ಬೆಳಗಿ ಒಂದು ಬಾಗಲಿಗೆ ಚುಚ್ಚಿ, ಇನ್ನೊಂದು ದೇವರ ಮುಂದೆ ಚುಚ್ಚಿದರ ನನ್ನ ಕೆಲಸ ಮುಗೀತಪ್ಪ, ಅಂದಕೊಂತಾನ ಮನಿ ಕಡಿಗೆ ಓಡಿ ಹೋದರ!

ಮುಗಿತ ತಮ್ಮ ತಿರುಗೋದು ನಿನ್ನ ಕೈ ಕಾಲು ನೋಡು ಎಪ್ಪಾ ಬೂದಿ ಬಳೊದೊರಂಗ ಅದಾವು, ಮೊಕ ತೊಳಕೊಂಡು ದೇವರಿಗೆ ಒಂದು ಊದಿನ ಕಡ್ಡಿ ಹಚ್ಚೋಗು ಅಂತ ನಮ್ಮ ಅವ್ವ ಕೈಯಾಗ ಬರ್ಲ ಹಿಡುಕೊಂಡು ಹೇಳಿದಳು, ತಲೆ ಒಂದ ಸಲ ಕೆರಕೊಂಡು  ಬಿದ್ದೋಗಿರ ಅಲ್ಲಿನ ಕಿಂಡಿ ಒಮ್ಮೆ ಅವ್ವನಿಗೆ ತೋರಿಸಿ ಒಳಗ ಓದವನಾ ಚಂಬಿಗಿ ತಗೊಂಡು ಹಂಡೆದಾಗನ ನೀರು ತುಂಬಿಕೊಂಡು ಅಂಗಳದಾಗನ ಬಟ್ಟಿ ವಗಿಯೋ ಕಲ್ಲಿನ ಮೈಗೆ ನೀರು ಚುಮಿಕಿಸಿ ಒಳ ಬಂದೊನೆ ಅವ್ವನ ಸೀರಿಗೆ ಮೊಕ ತಿಕ್ಕಿಕೊಂಡು ಕಡ್ಡಿ ಪೆಟ್ಟಿಗೆ ಸಿಗದಿದ್ದಕ್ಕ ವಲೀಲಿ ಇರೊ ಬೆಂಕಿ ಕೆಂಡಕ  ಉಪ್ ಅಂತ ಊದಿ, ಊದಿನ ಕಡ್ಡಿ ಹಚ್ಕೋಂಡು ದೇವರಿಗೆ, ಬಾಗಿಲಗೆ ಒಂದೊಂದು ಕಡ್ಡಿ ಚುಚ್ಚಿ, ಪಾಟಿ ಚೀಲ ತಕ್ಕೊಂಡು ಶನಿವಾರದ ಮಗ್ಗಿ, ಕಕಾಕಿಕೀ, ಅಆಇಈ ಬರೆದು, ಹೂವಾಡಗಿತ್ತಿ ಪದ್ಯ ಬಾಯಿಪಾಠ ಶುರು ಮಾಡೊ ಹೊತ್ತಿಗೆ ನಮ್ಮವ್ವ ರೊಟ್ಟಿ ತಟ್ಟೋ ಸಬ್ದ ತಾಳ ಹಾಕಲಿಕ್ಕೆ ಚಲುವಾಯ್ತು.

ಬಾರೋ ಉಂಡು ಬಿದಕೊ  ಅಂದ್ಲು ನಮ್ಮವ್ವ, ಹಾಳಾದ ಪದ್ಯಕಿಂತ ಅವ್ವನ ರೊಟ್ಟಿ ಬಡಿಯೊ ಸಬ್ದಾನೆ ಜೋರಾಗಿತ್ತು, ಹೋಟ್ಟ್ಯಾಗಿನ ಸಣ್ಣ ಕರುಳು ದೊಡ್ದ ಕರುಳು ಸಣ್ಣಾಟ ದೊಡ್ಡಾಟ ಮಾಡ್ತಿದ್ದವು, ಪಾಟಿ ಚೀಲ ಮೂಲಿಗೆ ಸರಿಸಿ ತಟ್ಟಿ ತಗೊಂಡು ಮೂರು ರೊಟ್ಟಿ ಮ್ಯಾಲ ಹಸಿಮೆಣಸಿನ ಕಾಯಿ ಹಿಂಡಿ ಸ್ವಲ್ಪ ಕರಿದ ಎಣ್ಣೆ ಹಚ್ಹಿಕೊಂಡು, ಪುಟ್ಯಾಗಿನ ಉಳ್ಳಾಗಡ್ಡಿಗೆ ಕೈ ಹಾಕಬೇಕು ಅನ್ನೋ ಹೊತ್ತಿಗೆ ಬುಡು ಸುಮ್ಮನ ರೊಟ್ಟಿ ತಿನ್ನು ಆರ ರೂಪಾಯೀಗೆ ಕೇಜಿ ಅಗ್ಯಾವ, ನಾಲ್ಗಿ ದಪ್ಪ ಅಕಾತಿ ಅಂದ್ಲು ನಮ್ಮವ್ವ, ಸಣ್ಣದಬೆ ಅಂತ ತಗೊಂಡು ರೋಟ್ಟಿ ಜೊತಿಗೆ ತಿಂದು ನೀರು ಕುಡಿದು ಮಕ್ಕಂತಿನವ್ವ ಅಂತ ಹೇಳಿ ಉಂಡ ಕೈ ಕುಂಡಿಗೆ ವರಸಿಕೊಂಡು ಮೇಲೆದ್ದೆ, ತಮ್ಮಾ ಚಣ್ಣ ಹರಕೊಂಡಿಯಲ್ಲ ಅದನ್ನ ಬಿಚ್ಚಿ ಇಡುಯಪ್ಪಾ ಒಂದು ವಸ್ತ್ರ ಸುತ್ತಹರಕೊಂಡು ಮಲಗು ಹೊಲದು ಇಡ್ತೀನಿ ಮುಂಜಾನೆ ಶಾಲೆಗೆ ತೊಟ್ಕೊವಂತಿ, ಅಂದ ತಕ್ಷಣ ಉಡದಾರಕ್ಕ ಕಟ್ಟಿದ ಬಿರಿ ಮಾವನ್ನ ಸಡಿಲಿಸಿ ಚಣ್ಣ ಕಳದು ಟವಲ್ಲು ಸುತ್ತರಕೊಂಡು ಮಲಗಿದೆ.

ಬೆಳಿಗ್ಗೆ ಎದ್ದವನ ರೋಡಿನ ಪಕ್ಕ ಇದ್ದ ದೊಡ್ಡ ಕರಿ ಕಲ್ಲಿನ ಹಿಂದ ಚಂಬಿಗಿ ತಗೊಂಡು ಹೋಗಿ ಬಂದು ಮೈ ತೊಳಕೊಂಡು ಶಾಲಿಗೆ ಹೋಗ್ತೀನಿ ಮಳಿಮಲ್ಲಪ್ಪ ಮೇಸ್ಟ್ರು ಕೋಲು ಹಿಡಕೊಂಡು ಹುಡಗರನ್ನೆಲ್ಲ ಸಾಲಿಗೆ ನಿಲ್ಲಿಸುತ್ತಿದ್ದರು, ಹಿಂದಾಸಿ ಬಂದು ನಾಕನೆ ತರಗತಿ ಸಾಲಲ್ಲಿ ಬೂತನ ಹಿಂದೆ ನಿಂತೆ, ಬರೊ ಅವಸರದಲ್ಲಿ ಬಿಳಿ ತೊಪ್ಪಿಗಿ ತರಾದನ್ನ ಮರೆತು ಬಂದು ಮೇಸ್ತ್ರು ಕೇಳಿದ್ದಕ ಹಸಿ ಇದೆ ಸಾರ್ ಅಂತ ಹೇಳಿ ಎರಡು ಕೈಗೆ ಲೆಕ್ಕಿ ಜುಳ್ಳೀಲಿ ಒಂದೊಂದು ಏಟು ತಿಂದು ಶಾಲಿ ಒಳಗ ಹೋಗಿ ಕೂತ್ವೀ ನೋಡು, ಲೆಕ್ಕದ ಮೇಸ್ಟ್ರು ಉತ್ತಂಗಿ ಬಸವರಾಜಪ್ಪ ಸಾರು ಬಂದ್ರು ಅದು ಇದು ಕೂಡಿ ಕಳಿದು ಭಾಗಿಸಿ ಶೇಷ ಎಷ್ಟು? ಅಂದ್ರು, ಹುಡಗ್ರು ಸೊನ್ನೆ ಸಾರ್ ಅಂದ್ರು, ನೀವು ಸೊನ್ನೆಗಳೆ ಅಂದು ಬರಕೊಳ್ಳಾಕ ಹೇಳಿ ಹೊರಗ ಹೋದ್ರು.

ಮೆಲ್ಲಗೆ ಬೂತನ್ನ ಕೇಳಿದೆ ಎಲ್ಲ ಸರಿಯಲ್ಲಪ್ಪಾ, ಶಾಲಿ ಬಿಟ್ಟ ತಕ್ಷಣ ಹೋಗಾನ್ರಿ, ಸರಿ ಅಂದ ಬೂತ. ಸರಿಯಾಗಿ ಅನ್ನೊಂದು ಮುಕ್ಕಾಲಿಗೆ ಬೆಲ್ ಢಣ್ ಢಣ್ ಅನ್ನೊದೆ ತಡ ಶಾಲೆಯಿಂದ ಒಂದೇ ಉಸಿರಲ್ಲಿ ಓಡಿ ಮನಿವಳಗ ಪಾಟಿಚೀಲ ವಸದು ಸೀದಾ  ಸ್ವಟ್ಟನ ಮನಿಗೆ ಓಡಿದೆ, ಬೂತ ಗುಂಗಾಡಿನ ಕರಕೊಂಡು ಬಂದ ನಾವ್ ನಾಕು ಜನ ಈಟಿ ಜಂಬಣ್ಣನ ಅಂಗಡಿ ಸಂದಿ ಹಿಡಿದು ಮಸಿದಿ ಮುಂದಾಸಿ ಬಡಿಗೇರ ಓಣಿಗೆ ಬಂದಿವಿ, ಬಡಿಗೇರ ಈರಜ್ಜಿ ಎಲ್ಲಿಗೆ ಸವಾರಿ ಹೊಂಟೀರಿ? ಅದು ಮಟ ಮಟ ಮಧ್ಯಾನದಾಗ, ಇಲ್ಲ ಬಿಡಬೆ  ಬಾರಿಹಣ್ಣು ತರಾಕ ಹೊಂಟೀವಿ ಅಂದೆ, ಉಸಾರು ಉಳ-ಹುಪ್ಪಡಿ ಅಂದಕಂತ ಅಜ್ಜಿ ಒಳಗ ಹೊಯ್ತಿ, ಓಣಿ ಮುಗಿತಿದ್ದಂತೆ ನಮ್ಮೂರ ಬೆಟ್ಟಕ ಹೊಗೊ ದಾರಿ, ದಾರಿ ತುಂಬಾ ತಿಪ್ಪಿಗಳೆ ಬಿದ್ದು ಹೊರಳಾಡತಿದ್ದವು ತಿಪ್ಪಿಗಳು ಮುಗಿತಿದ್ದಂತೆ ದಾರಿ ಸ್ವಲ್ಪ ಕಿರಿದಾಗ್ತಾ ಕೊನೆಗೆ ನಾವೆಲ್ಲರು ಹಿಂದೆ-ಮುಂದೆ ಹೊಂಟ್ವಿ.

ಅಡವಿ ಹಡದ ತಾಯಿ ಊರು ಮಲತಾಯಿ ಅಂದಾಂಗ ಅಕ್ಕ-ಪಕ್ಕದ ಬಳ್ಳಾರಿ ಜಾಲಿ ಗಿಡಗಳು ದಾರಿಗೆಲ್ಲ ಚಪ್ಪರ ಹಾಕಿದ್ವು, ಲೇ ಬೂತ ನೀ ಹಿಂದ ಬಾರ್ಲಾ ನೀ ಮೊದಲ ಹೆದುರ ಪುಕ್ಕ, ಸರಿನಪ್ಪ ನೀನೆ ಮುಂದ ಹೋಗು ಅಂತ ಅವ ಹಿಂದ ಬಂದ, ಅವ್ನ ನೋಡೊ ಗುಂಗಾಡಿ ಇಲ್ಲೇ ಗುಯ್ ಗುಡುತಾನ, ಸ್ವಟ್ಟ ಯಾಕಲೆ ಚಪ್ಲಿ ಮೆಟಿಗಂಡಿಲ್ಲ, ಅದರದ ಮೂಗು ಹರದಿತ್ತು ಅದಕ ಹಂಗ ಬಂದಿನಿ ನೋಡರಪ್ಪ, ಮೊದಲು ನೆಲ ಅಡವಿ ಬರ್ತದೆ ಅಲ್ಲಿ ಕಾರಿಟಂಗು ಜಗ್ಗು ಇರ್ತಾವು ಬಾರಿಹಣ್ಣು ಸಿಗತಾವು ತಿಂದಕಂತ ಹೋಗಾನು, ಸ್ವಟ್ಟ ಜಲ್ದಿ-ಜಲ್ದಿ ಬಾರ್ಲ, ಅಲ್ಲಿ ಹುಲಿ ಇದೆಯಂತೆ ಹೌದ! ಹುಂ, ಸಿಂಹಾನು ಇದೆ ಬಾರಪ್ಪಾ ತೋರಸ್ತೀನಿ, ನೋಡಲೆ ಗುಂಗಾಡಿ ಇವ್ನ, ಇಲ್ಲಿ ಅವೆಲ್ಲ ಇದ್ವಂತೆ ನಮ್ಮಜ್ಜರ ಕಾಲದಾಗ, ಈಗ ಅವೆಲ್ಲ ಇಲ್ಲ, ಯಾಕ? ಸ್ವಟ್ಟ ಅವನ್ನೆಲ್ಲಾ ಬೇಟಿ ಆಡಿ ಸಾಯಿಸಿದ್ದಾರಂತೆ, ಅಲ್ಲಿ ನೋಡ್ರಲ ಕೊಟ್ರಿಗೊಳ್ಳಾರ ನೀರಿನ ಹೊಂಡ, ನೀರು ಕುಡಿದು ಹೊಗಾನ್ರಿ, ನಡ್ರಿಲೇ ಬೇಗ ನೆಲ ಅಡವೀಲಿ ಏನೇನೊ ಇರ್ತದ, ಅಲ್ಲಿ ಬರಿ ಮುಳ್ಳಿನಂತ ಗಿಡಗಳು ಕಾರಿಗಿಡ, ತುಗ್ಲಿ ಮರ, ಬೆಟಾರಿ ಗಿಡ, ಹಾಲವೊಂಡ ಗಿಡ, ಅವ್ನ ಬಿಟ್ರ ಮತ್ತೆ ಕರಿ ಜಾಲಿ, ಉತ್ರಾಣಿ ಗಿಡ, ಹಾಲು-ಮೊಸರು ಗಿಡ, ಕಾಚಿ ಕಡ್ಡಿ, ಬ್ರಹ್ಮದಂಡೆ, ಹೋನ್ನಾರಿಕೆ ಗಿಡ, ಅಲ್ಲಾಲ್ಲೇ ಚಂದ್ರ ಮುಖಿ ಹುಲ್ಲು ಬೆಳೆದಿರುತ್ತದೆ, ಏನು? ಹಾಲು- ಮೋಸರು ಗಿಡ ಇರ್ತದಾ? ಹೌದ್ಲೆ ಸ್ವಟ್ಟ ಮನ್ಯಾಗ ಸಿಗೊ ಹಾಲು-ಮೋಸರಲ್ಲ ಇದು, ನಿಮ್ಮ ಮನೀಲಿ ಸೀಗಿ ಹುಣ್ಣಿಮೆಗೆ ನೀವು ಹಟ್ಟಿ ಲೆಕ್ಕವ್ವನ ಅಂದ್ರ ಗುರ್ಜವ್ವನ ಹಾಂ, ಅದೆ ಗುರ್ಜವ್ವನ ಕೂರಿಸಿದಾಗ ಇವೆಲ್ಲಾ ಪೂಜೆ ಮಾಡಲಿಕ್ಕೆ ಬೇಕು, ನಾನು ನಮ್ಮಪ್ಪನ ಜತಿಗೆ ಬಂದು ಇವ್ನನೆಲ್ಲ ಕಿತ್ತುಕೊಂಡು ಹೊಗ್ತಿವಿ.

ಶಿವು ನನಗೊಂದು ತಿಳಿತಿಲ್ಲ ನೋಡು, ಮತ್ತೇನಪ್ಪ ನೀನು ಗುಂಗಾಡಿ ತರ ಹಗಲಲ್ಲೆ ಗುಯ್ ಗುಟ್ಟುತ್ತಿದ್ದರೆ  ಏನಪ್ಪ ತಿಳಿತದೆ, ಅಲ್ಲಲೆ ಇವನ ಹೆಸರು ವಸಂತಕುಮಾರ ಅಂತ ಎಸ್ಸ್ಟ ಚೊಲೋ ಐತಿ ಆದ್ರು ಎಲ್ಲಾರು ಗುಂಗಾಡಿ ಗುಂಗಾಡಿ ಅಂತ ಕರದು ಇವನ ಹೆಸರ ಮರೆತು ಹೊಗೈತಿ ನೋಡು, ಬೂತ ನಿನ್ನ ಹೆಸರು ತಿಪ್ಪಿಗುಂಡಿ ಕೊಟೇಶ ಅಂತ ನಮ್ಮಣ್ಣನಿಗೆ ನೀ ಹೇಳಿದ ಮೇಲಾ ಗೊತ್ತಾತು ನೊಡು, ಆದರು ಖುಶಿ ವಿಶ್ಯ ಅಂದರ ಶಾಲ್ಯೇಗ ಹಾಜರಿ ಕೂಗುವಾಗ ಮಾತ್ರ ಇವರ ಹೆಸರು ಪಕ್ಕ ಆಗೊದು ಅಲ್ವೇನೊ ಸ್ವಟ್ಟ, ಅದೆಲಪ್ಪ ? ಕನ್ನಡ ಸಾರ್ ಭೀಮನಗೌಡ್ರು ಮಾತ್ರ ಹೆಸರ ಹೇಳಿ ಕರೆಯೊದು ,ಉಳಿದ ಎಲ್ಲಾರು ಅಡ್ಡ ಹೆಸರಾ ಕರೆಯೊದು ಅಲ್ವಾ, ನಿನಗೂ ಸ್ವಟ್ಟ ಅಂತ ಕರಿತಿರಬೇಕಲ್ಲ, ಹೌದಪ್ಪ ನನ್ನ ಕಾಲು ಸ್ವಟ್ಟ ಐತಿ ನೋಡು ಅದಕ್ಕ ಸ್ವಟ್ಟ ಅಂತ ಕರಿತಾರ ಅಲ್ವೊ ನಿನ್ನ ಕಾಲು ನೆಟ್ಟಗ ಐತಿ ಮತ್ತೆ, ಹೆ ಅವನು ನೆಡಿಯುವಾಗ ಒಪ್ಪಾರೆ ನೆಡಿತಾನ ನೊಡು ಅದಕ್ಕ ಹಾಗೆ ಅಂತಾರ, ಹೌದ್ಲೆ ಬೂತ ನಿನ್ನ ಗಲ್ಲ ದಪ್ಪ ಅದಾವಲ್ಲ ಬೆಣ್ಣಿ ತಿಂದಿರೊ ಬೆಕ್ಕಿನ ತರ ಅದ್ಕ ನಿನಗೆ ಬೂತ ಅನ್ನೋದಲ್ಲ, ಹೇ ಇರ್ಲಿ ಬಿಡ್ರಿಲೆ ಏನೊ ತಮಾಶಿಗೆ ಅಂತಾರಪ, ಹೌದಪ್ಪ ಹೌದು ಅದಕ್ಕ ನಾವು ನಿನೆಗೆ ಖುಶಿಗೆ ಕೆಂಫ್ಯಾ ಅನ್ನೋದು, ಅನ್ರೆರಪ್ಪ ಅನ್ರಿ  ನಮಗ್ಯೇನು ಬೇಜರಿಲ್ಲ.

ಹೇ ಅಲ್ಲಿ ನೋಡ್ರೊ ತೋಳ-ತೋಳ, ಅದಾ, ಎ ಎಪ್ಪಾ ಮಾರಯಾ ಬೂತ  ಅದು ತೋಳ ಅಲ್ಲೋ, ಮತ್ತೇನು? ಅದು ನರಿ, ಅದ್ರ ಬಾಲ ನೊಡು ನೆಟ್ಟಗ ನೆಲ ನೊಡತದೆ, ಹೌದಲ್ಲೊ! ಹಾಂ ಅದು ನರಿ, ತೋಳಾನು ನೊಡಲಿಕ್ಕೆ ಥೇಟ್ ನಾಯಿ ತರನಾ ಇರತದೆ, ಲೆ ಬೂತ ನರಿ ನೊಡೀದ್ವಿ ಏನೊ ಶುಭ ಐತಿ ಕಣೋ, ನಮ್ಮಜ್ಜ ಹೇಳತಿದ್ದ ನರಿ ಮುಖ ನೋಡಿದರ ಒಳ್ಳೇದ ಆಗ್ತಾದೆ ಅಂತ, ಆದರ ನಾವು ನೋಡಿದ್ದು ಬಾಲ!! ಮೊದಲು ನೋಡಿದ್ದು ಬೂತ ಹಾಗದರ ಇವತ್ತು ರಾತ್ರಿಗೆ ನಿನಗೆ ಕಾದವ ಮಗನ ಬಿಸಿ-ಬಿಸಿ ಹೋಳಗಿ-ತುಪ್ಪಾ, ಸ್ವಟ್ಟ ಒಂದು ಪ್ರಾಣಿ ಕಾಣವಲ್ದು ನೋಡೂ, ಲೇ ಊರಾಗ ಹೋಗಿ ದ್ವೊಡ್ಡ-ದ್ವೊಡ್ಡ ಜನರ ಹೊಟ್ಟಿ ನೋಡುಪ್ಪಾ ಹಂಡೇ-ಹಂಡೆ ಇದ್ಧ್ಹಾಂಗ್ ಅವ, ಅಂದರ! ಅವೆಲ್ಲ ಅವರ ಹೋಟ್ಟ್ಯಾಗ ಅದಾವಲೇ ತಮ್ಮ, ಗುಂಗಾಡಿಗ ಅರ್ತ ಆಗವಲ್ದು! ಶಿವು ಈ ಬೂತ ಏನು ಹೇಳಿತಿದಾನ ಅಂತ ಹೇಳು ಸ್ವಲ್ಪ. ಅಂದರೆ ಮೊದಲು ಇಲ್ಲಿ ನರಿ, ತೊಳ, ಮೊಲಗಳು, ಹಂದಿಗಳು, ಹಂದಿಗಳಾ? ಲೇ ಊರು ಹಂದಿ ನೀನು, ಇಲ್ಲಿ ಹಂದಿ ಅಂದರ ಕಾಡು ಹಂದಿ, ಮಿಕಗಳು ಅಂತೀವಿ ನೊಡು ಅವ ಮತ್ತೆ ನಾಗರ ಹಾವುಗಳು, ಕೆರೆ ಹಾವುಗಳು, ಮಣ್ಣ ಮುಕ್ಕ ಹಾವುಗಳು, ಒತಿ ಕೇತಗಳು, ಉಡ, ಹಾವರಾಣಿ ಬೇರೆ ಬೇರೆ ಜಾತಿಯ ಹಲ್ಲಿಗಳು ಇದ್ವಂತೆ, ನಮ್ಮಪ್ಪ ಒಮ್ಮೆ ಹೇಳಿದ್ದ ಆತ ಸಣ್ಣವ ಇದ್ದಾಗ ನಮ್ಮಜ್ಜಾರು ಗುಡ್ಡದ ಹೊಲದಿಂದ  ಹುಲಿ ನೋಡಿ ಊರಿಗೆ ಓಡಿ ಬಂದಿದ್ದರಂತೆ, ಈಗ ಏನು ಇಲ್ಲಪ್ಪ ಬರಿ ಒಂದೊ ಎರೆಡೊ ನರಿ, ಹಾವು ಕಾಣ್ತಾವು ಅಷ್ಟೆ, ಪರವಾಗಿಲ್ಲಪ್ಪ ನಮ್ಮ ಶಿವ್ಯೆ ಪಂಡಿತ ಅದಾನ. ಅಂಗೆನು ಇಲ್ಲೊ ನಮ್ಮಪ್ಪ ಹೇಳಿದ್ದನ್ನ ನಿಮಗ ಹೇಳಿದೆ ಅಷ್ಟೇ.

ಪ್ರತಿ ವರುಷ ಬ್ಯಾಸಿಗಿಯಲ್ಲಿ ಈ ಪರಿ ಮರ ಕಡಿತಾರ, ಸಾಲದಕ್ಕೆ ಗುಡ್ಡಕ್ಕೆ ಬೆಂಕಿ ಹಚ್ಚತಾರ, ಇನ್ನ ಆ ಪ್ರಾಣಿಗಳು ಎಲ್ಲಿ ಹೋಗಬೇಕು ಹೇಳು? ನಾವ ಆದರ ಮನಿ ಸೇರಕೊಳ್ಳುತ್ತೆವಿ, ಅವುಗಳಿಗೆ ಕಾಡು, ಗುಡ್ಡ, ಯಾವೊದೋ ಗಿಡದ ಬುಡ, ಪೊದೆ ಇವೆ ಮನೆ ಅಲ್ವಾ! ಶಿವು ಇಲ್ಲಿ ನೋಡು ಯಾವೊದೊ ಗಿಡದ ಬೀಜ? ಅಲ್ವೊ ಮಾರಾಯ, ಮತ್ತೆ? ಅವು ಮಲದ ಹಿಕ್ಕಿ, ನೋಡು ಒಣಗಿರಾಕ ಎಷ್ಟು ಹಗುರ ಅವಾ! ತು ಹಿಕ್ಕಿನಾ? ಆಯ್ಯೊ ಇವನ ನೋಡು ಅದರ ಹಿಕ್ಕಿ ಬಹಳ ಔಷಧಕ ಬರತದೆ, ನಮ್ಮಜ್ಜ ಮನಿಯಲ್ಲಿ ಒಂದು ಡಬ್ಬಿ ತುಂಬಿ ಇಟ್ಟದ್ದ, ಹಿಕ್ಕಿನಾ! ಔಷಧನಾ! ಹೌದೊ ಮರಾಯ, ಯಾಕಂದ್ರ ಇವು ನಿನ್ನ ಹಿಕ್ಕಿಯಾಂಗ ವಾಸನಿ ಇಲ್ಲಾ ನೋಡು ಅದಕ ಹ್ಹಾ ಹ್ಹಾ ಹ್ಹಾ, ಅಲ್ಲಿ ನೋಡ್ರೊ ಮಾವಿನ ಮರ, ಅಯ್ಯಪ ಹಣ್ಣು ನೊಡ್ರಿಲೇ, ಹೇ ಮರ ಹತ್ತಾನ್ರಿ, ಸ್ವಟ್ಟಾ ಮರ ಹತ್ತಲೆ, ಇಲ್ಲಾಪ್ಪ ನನಿಗೆ ಮರ ಹತ್ತಾಕ ಬರಲ್ಲಾ ನೀನೆ ಹತ್ತು. ನಾನು ಹತ್ತಿ ಹಣ್ಣು ಹರದು ಕೊಡತೀನಿ ತಡ್ರಿ, ಶಿವು ತುದೀಗೆ ಹೊಗಬೇಡ ಬಿದ್ದೀಯ, ತಮ್ಮಾ ಇಂತ ಎಷ್ಟು ಮರ ಹತ್ತಿಲ್ಲ ನಾನು, ಅಯ್ಯೊ ಅಯ್ಯೊ ಅಯ್ಯಯ್ಯೊ! ಬಿದ್ದಿನಪ್ಪೋ ಅಯ್ಯೊ ಅಯ್ಯ್ಯ್ಯೊ!

ಎ ಎಪ್ಪಾ ಇನ್ನು ಬಿದ್ದ್ಕೊಂಡಿಯಲ್ಲ ಏಳು ಏಳಪ್ಪಾ ಈವತ್ತು ಶನಿವಾರ, ಬೆಳಗಿನ ಸಾಲಿ ಐತಿಲ್ಲ, ಎಲಾ ಇವನಾ ಯಾಕಲಾ ಕಟ್ಟಿ ಮ್ಯಾಗಿಂದ ಕೆಳಗ ಬಿದ್ದೀ! ಎಷ್ಟ ಸಲ ಹೇಳ್ತೀನಿ ನೀನು  ಬಾಳ  ಒದ್ದಾಡ್ತಿ  ಕಟ್ಟಿ ಮ್ಯಾಲ ಮಲಗಬ್ಯಾಡ  ಅಂತ, ಈಗ  ಗೊತ್ತಾಯ್ತು, ಪೆಟ್ಟಾಯ್ತು,  ಹಾಂ ಪೆಟ್ಟಾಯ್ತೇನೊ, ಇಲ್ಲಬೆ ಅಂತ ಹೇಳಿ ಸುತ್ತಾ ನೋಡಿದರ ಕಟ್ಟಿ ಮ್ಯಾಗಿಂದ ಟವಲ್ ಸುತ್ತಿಕೊಂಡು ಕೆಳಗ ಬಿದ್ದಿದ್ದೆ, ಅಯ್ಯೊ ಕನಸು!!! ಯವ್ವಾ ಚಣ್ಣ ಎಲ್ಲಿ ಇಟ್ಟಿಯಬೆ ಅಂದಕೊಂತ ಹೊರಗೆ ಬಂದೆ.

 -ಜಿ ಶಿವಕುಮಾರ್ ಸೋಗಿ,

   ಕೈಗಾ, ಕಾರವಾರ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!