ದಿನಾಂಕ 12-09-2016 ನೇ ಸೋಮವಾರ ರಾಜ್ಯದ ಸುದ್ದಿ ವಾಹಿನಿಗಳಲ್ಲಿ `ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ,ಕನ್ನಡದವರ ಮನೆ,ಅಂಗಡಿಗಳ ಮೇಲೆ ದಾಳಿ’ ಎಂಬ ಸುದ್ದಿ ಬಿತ್ತರವಾಗಲು ಶುರುವಾದ ಕೂಡಲೇ ಕಳೆದ ಶುಕ್ರವಾರ ಅಂದರೆ 8-9-2016ರಂದು ರಾಜ್ಯವ್ಯಾಪಿ ಬಂದ್ ಆಚರಿಸಿ ನಂತರ ತಕ್ಕಮಟ್ಟಿಗೆ ಶಾಂತವಾಗಿದ್ದ ರಾಜ್ಯ ರಾಜಧಾನಿ ಮತ್ತು ಮಂಡ್ಯ ಹೊತ್ತಿ ಉರಿಯತೊಡಗಿದವು.ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಎಲ್ಲಾ ಬಸ್ಸುಗಳು ರದ್ದಾದವು.ಬೆಂಗಳೂರಿನಲ್ಲೂ ಬಿ.ಎಂಟಿ.ಸಿ. ಮತ್ತು ಮೆಟ್ರೋ ಸೇವೆಗಳು ಏಕಾಏಕಿ ರದ್ದಾದವು. ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿದ್ದ ಬಹಳಷ್ಟು ಜನ ಇದ್ದಕ್ಕಿದ್ದಂತೆಯೇ ಭಯಬೀತಗೊಂಡು ಪರದಾಡುವಂತಾಯಿತು.
ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೇ ಬೇಕಾಗಿದ್ದರಿಂದ ನಾನು, ನನ್ನ ಅಪ್ಪ ಮತ್ತು ಅಮ್ಮ 12-09-2016 ರಂದು ಮೈಸೂರಿನಿಂದ ಬೆಂಗಳೂರಿಗೆ ಮಧ್ಯಾಹ್ನ 2:30ರ ರೈಲಿನಲ್ಲಿ ಹೊರಟೆವು.ಇದ್ದಕ್ಕಿದ್ದಂತೆಯೇ ಬೆಂಗಳೂರಿಗೆ ಬಸ್ ಸಂಚಾರ ರದ್ದಾಗಿದ್ದರಿಂದ ಶ್ರೀರಂಗಪಟ್ಟಣ,ಮಂಡ್ಯ,ಮದ್ದೂರು ಕಡೆಗೆ ತೆರಳುವ ಜನರೂ ರೈಲನ್ನೇ ಆಶ್ರಯಿಸಿ ಬಂದಿದ್ದರಿಂದ ರೈಲು ಹಿಂದೆಂದೂ ಇರದಷ್ಟು ರಷ್ ಇತ್ತು.ಎಲ್ಲರ ಬಾಯಲ್ಲೂ ಕಾವೇರಿ ಗಲಾಟೆಯದ್ದೇ ಮಾತು.ಕೆಲವರು ತಮಿಳುನಾಡನ್ನು,ಜಯಲಲಿತಾಳನ್ನು ಬಯ್ಯುತ್ತಿದ್ದರೆ ಇನ್ನುಳಿದ ಬಹುತೇಕ ಎಲ್ಲರೂ ಇದ್ದಕ್ಕಿದ್ದಂತೆಯೇ ಮಂಡ್ಯ,ಶ್ರೀರಂಗಪಟ್ಟಣ,ಬೆಂಗಳೂರಿನಲ್ಲಿ ಹಿಂಸಾಚಾರ ಆರಂಭಿಸಿ ಬಂದ್ ಮಾಡುತ್ತಿರುವವರನ್ನು ಹಿಗ್ಗಾಮುಗ್ಗಾ ಬಯ್ಯುತ್ತಾ ಬೆಂಗಳೂರಿಗೆ ತಲುಪಿದ ಮೇಲೆ ತಮ್ಮ ತಮ್ಮ ಮನೆಗಳಿಗೆ ತೆರಳುವುದು ಹೇಗೆಂದು ಚಿಂತಾಕ್ರಾಂತರಾಗಿದ್ದರು.ಕ್ಷಣಕ್ಷಣಕ್ಕೂ ಬೆಂಗಳೂರಿನಲ್ಲಿರುವ ತಮ್ಮ ಗೆಳೆಯರಿಗೆ,ಸಂಬಂಧಿಕರಿಗೆ ಫೋನಾಯಿಸಿ ಅಲ್ಲಿನ ಸ್ಥಿತಿಯನ್ನು ವಿಚಾರಿಸತೊಡಗಿದರು.ಅಷ್ಟರಲ್ಲಾಗಲೇ ವಾಟ್ಸಾಪ್ ಗ್ರೂಪುಗಳಲ್ಲಿ ಬೆಂಗಳೂರಿನಲ್ಲಿರುವವರು ತಮ್ಮ ಮನೆಗಳನ್ನು ಆದಷ್ಟು ಬೇಗ ಸೇರಿಕೊಳ್ಳಿ.ಇಲ್ಲವಾದಲ್ಲಿ ನಿಮ್ಮ ಜೀವಕ್ಕೇ ಅಪಾಯ ಎಂಬ ಸಂದೇಶಗಳು ಬರತೊಡಗಿ ಜನರನ್ನು ಮತ್ತಷ್ಟು ಗಾಬರಿಗೊಳಿಸಿದವು.
ಸಂಜೆ ಐದುವರೆ ಹೊತ್ತಿಗೆ ನಾವಿದ್ದ ರೈಲು ಬೆಂಗಳೂರು ರೈಲು ನಿಲ್ದಾಣವನ್ನು ತಲುಪಿತು.ಅಲ್ಲಿ ಇಳಿದು ನೋಡಿದರೆ ಎಲ್ಲೆಲ್ಲೂ ಕಾಲು ಹಾಕಲೂ ಜಾಗವಿಲ್ಲದಷ್ಟು ಜನಸಂದಣಿ.ಇದ್ದಕ್ಕಿದ್ದಂತೆ ಸಾರಿಗೆ ವ್ಯವಸ್ಥೆ ನಿಂತು ಹೋಗಿದ್ದರಿಂದ ಅನೇಕ ಜನರು ರೈಲು ನಿಲ್ದಾಣದಲ್ಲೇ ನಿಂತಿದ್ದರು.ನಾವು ತಲುಪಬೇಕಾದ ಸ್ಥಳಕ್ಕೆ ಹೋಗಲು ಓಲಾ ಕ್ಯಾಬ್ ಬುಕ್ ಮಾಡೋಣವೆಂದು Mobile App ತೆರೆದರೆ ಈ ಕ್ಷಣದಲ್ಲಿ ನಮ್ಮ ಟ್ಯಾಕ್ಸಿ ಸೇವೆ ಲಭ್ಯವಿಲ್ಲ ಎಂದು ತೋರಿಸಲಾರಂಭಿಸಿತು.ಬಿ.ಎಂ.ಟಿ.ಸಿ.,ಮೆಟ್ರೋ ಯಾವುದೂ ಇಲ್ಲದ್ದರಿಂದ ನಮಗೆ ತಲೆಕೆಟ್ಟಿತು. ಆದದ್ದಾಗಲಿ ಆಟೋದಲ್ಲಿ ಹೋಗೋಣ ಅಂತ ನನ್ನ ಅಪ್ಪ ಹೇಳಿದರು.ಒಬ್ಬ ಆಟೋದವ ನಾವು ಕರೆದ ಸ್ಥಳಕ್ಕೆ ಬರಲು ಒಪ್ಪಿಕೊಂಡ.ಆಟೋ ಹತ್ತಿ ಹೊರಟಾಯಿತು.ಸ್ವಲ್ಪ ದೂರ ತೆರಳುತ್ತಿದ್ದಂತೆಯೇ ರಸ್ತೆ ಮಧ್ಯದಲ್ಲಿ ಟೈರುಗಳನ್ನು ಸುಡುತ್ತಿರುವ ದೃಶ್ಯ ಎಲ್ಲೆಡೆ ಕಾಣಲಾರಂಭಿಸಿತು.ಕೆಲವು ಕಡೆಯಂತೂ ದೊಡ್ಡ ದೊಡ್ದ ಮರಗಳನ್ನೇ ರಸ್ತೆಗೆ ಅಡ್ದ ಹಾಕಿ ಸುಟ್ಟಿದ್ದರು.ಹನುಮಂತ ನಗರಕ್ಕೆ ಬರುತ್ತಿದ್ದಂತೆ ಅಲ್ಲಿ ಗಲಾಟೆ ಸ್ವಲ್ಪ ಜೋರಾಗಿಯೇ ಇತ್ತು.”ತಮಿಳುನಾಡಿಗೆ ಧಿಕ್ಕಾರ,ಜಯಲಲಿತಾಗೆ ಧಿಕ್ಕಾರ” ಎಂಬ ಘೋಷಣೆಗಳನ್ನು ಕೂಗುತ್ತಾ ಕನ್ನಡ ಬಾವುಟ ಹಿಡಿದಿದ್ದ ಒಂದಷ್ಟು ಯುವಕರು ಟೈರುಗಳನ್ನು ಸುಡುತ್ತಿದ್ದರು.ಒಂದು ಸ್ಕೂಟಿಯನ್ನು ಸಂಪೂರ್ಣ ಸುಟ್ಟು ಭಸ್ಮ ಮಾಡಿದರು.ಒಬ್ಬ ವಿಕೃತ ಯುವಕನಂತೂ ನಮ್ಮ ಪಕ್ಕದ ಆಟೋದಲ್ಲಿ ಹೋಗುತ್ತಿದ್ದ ಮಹಿಳೆಯ ಕಡೆಗೆ ಓಡಿ ಬಂದು”ಮೇಡಂ ನಿಮ್ಗೆ ನೀರು ಬೇಕು ತಾನೆ.ಸುಮ್ನೆ ಮುಚ್ಕೊಂಡ್ ಮನೇಲ್ ಇರಿ.ರಸ್ತೆಗೆ ಇಳಿದ್ರೆ ನಿಮಗೆ ಏನು ಮಾಡುತ್ತೇವೋ ನಮಗೇ ಗೊತ್ತಿಲ್ಲ” ಎಂದು ಜೋರಾಗಿ ಅರಚಲಾರಂಭಿಸಿದ.ಆ ಮಹಿಳೆ ಗಾಬರಿಗೊಳಗಾದಳು.ಆ ಯುವಕನ ಮಾತುಗಳು ಸುಮ್ಮನೇ ಪ್ರತಿಭಟಿಸುವ ಮಾತುಗಳಾಗಿರಲಿಲ್ಲ.ಬಂದ್’ನ ನೆಪದಲ್ಲಿ ಹಿಂಸೆಗಿಳಿದು ಅಮಾಯಕರನ್ನು,ಮಹಿಳೆಯರನ್ನು ದೌರ್ಜನ್ಯ ಮಾಡುವ ಮಾತುಗಳಂತಿದ್ದವು.
ದೇವರ ದಯದಿಂದ ನಾವು ತಲುಪಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ಹೋಗಿ ಮುಟ್ಟಿದೆವು.ರಾತ್ರಿ ಟಿವಿ ನೋಡುತ್ತಿದ್ದಂತೆ ಮನಸ್ಸಿಗೆ ಭಾರೀ ಬೇಜಾರಾಯಿತು.ಒಂದಷ್ಟು ಕಿಡಿಗೇಡಿಗಳು ತಮಿಳುನಾಡಿನ ರಿಜಿಸ್ಟ್ರೇಷನ್ ನಂಬರ್ ಹೊಂದಿದ್ದ ಕೆ.ಪಿ.ಎನ್.ಟ್ರಾವೆಲ್ಸ್ ಸಂಸ್ಥೆಗೆ ಸೇರಿದ್ದ ಮೂವತ್ತೈದು ಬಸ್ಸುಗಳನ್ನು ಮತ್ತು ಕೆಲವು ಲಾರಿಗಳನ್ನು ಸಂಪೂರ್ಣ ಸುಟ್ಟು ಹಾಕಿದ್ದರು.ಪರಿಸ್ಥಿತಿಯನ್ನು ನಿಯಂತ್ರಿಸಲು ಪೋಲೀಸರು ನಡೆಸಿದ ಗೋಲೀಬಾರ್’ಗೆ ಒಬ್ಬ ಮೃತಪಟ್ಟಿದ್ದ. ಹಲವು ವಾಹನಗಳ ಗಾಜುಗಳು ಪುಡಿಯಾಗಿದ್ದವು. ಅನೇಕ ಜನರು ಸಾರಿಗೆ ವ್ಯವಸ್ಥೆ ಇಲ್ಲದೇ ಮನಗೆ ಹೋಗಲಾಗದೇ ಬೆಂಗಳೂರಿನ ನಾನಾ ಭಾಗಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ನಮ್ಮ ಸಂಬಂಧಿಕರೊಬ್ಬರು ವಾಸವಿರುವ ಅಪಾರ್ಟ್’ಮೆಂಟ್ ಒಂದರಲ್ಲಿ ತಮಿಳುನಾಡು ಮೂಲದ ವೈದ್ಯರೊಬ್ಬರ ಕಾರನ್ನು ಅವರ ಕಣ್ಣೆದುರೇ ಕಿಡಿಗೇಡಿಗಳು ಒಡೆದು ನಜ್ಜುಗುಜ್ಜು ಮಾಡಿದ್ದರು. ನಾವು ಉಳಿದುಕೊಂಡಿದ್ದ ಮನೆಯ ಪಕ್ಕದ ಮನೆಯಲ್ಲಿ ಒಬ್ಬಳು ಯುವತಿ ರಾತ್ರಿ ಹನ್ನೊಂದು ಗಂಟೆಯಾದರೂ ತನ್ನ ತಂಗಿ ಆಫೀಸ್’ನಿಂದ ಇನ್ನೂ ವಾಪಸ್ ಬಂದಿಲ್ಲ.ಏನಾಯಿತೋ ಏನೋ ಎಂದು ಗೊಳೋ ಅಂತ ಅಳುತ್ತಿದ್ದಳು.ಅವಳನ್ನು ಹುಡುಕಲು ತಾನು ಹೋಗುತ್ತೇನೆ ಎಂದು ಹೊರಟವಳನ್ನು ಈ ಹೊತ್ತಿನಲ್ಲಿ ಎಲ್ಲಿ ಅಂತ ಹುಡುಕುತ್ತೀಯೆ ಎಂದು ಅವಳ ಸ್ನೇಹಿತೆಯರು ಸಮಾಧಾನ ಪಡಿಸುತ್ತಿರುವಾಗ ಯಾರೋ ಪುಣ್ಯಾತ್ಮರು ಅವಳ ತಂಗಿಯನ್ನು ಕಾರಿನಲ್ಲಿ ತಂದು ಬಿಟ್ಟರು.
ಬೆಂಗಳೂರಿನಾದ್ಯಂತ 144ನೇ ಸೆಕ್ಷನ್ ಜಾರಿಯಾಗಿತ್ತು. ಹದಿನಾರು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಿ ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಅರೆಸೇನಾಪಡೆಗಳನ್ನು ಕರೆಸಲಾಗಿತ್ತು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕಿಡಿಗೇಡಿಗಳು ಟೈರ್ ಸುಡುವುದನ್ನು,ವಾಹನಗಳಿಗೆ ಕಲ್ಲು ಹೊಡೆಯುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಪೋಲೀಸರಿಗೆ ಸಾಧ್ಯವಾಗಲಿಲ್ಲ.ಪೋಲೀಸರ ಗೋಲೀಬಾರ್’ನಿಂದ ತಪ್ಪಿಸಿಕೊಳ್ಳಲು ಮೇಲಿನ ಮಹಡಿಗೆ ಓಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದ ಯುವಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟ.ಅಲ್ಲಿಗೆ ಕಿಡಿಗೇಡಿಗಳು ಬಂದ್ ಹೆಸರಲ್ಲಿ ಕಾನೂನನ್ನು ಕೈಗೆ ಎತ್ತಿಕೊಂಡದ್ದಕ್ಕೆ ಇಬ್ಬರು ಅಮಾಯಕರು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಯಿತು.
ಕಾವೇರಿ ಗಲಾಟೆ ಇವತ್ತು ನಿನ್ನೆಯದಲ್ಲ. ಎಷ್ಟೋ ಸಲ ಈ ವಿಚಾರ ಕೋರ್ಟಿಗೆ ಹೋಗಿದೆ. ಆಗಲೂ ಪ್ರತಿಭಟನೆಗಳಾಗಿವೆ.ಆದರೆ ಅವು ಯಾವುವೂ ಈಗಿನಂತೆ ಹಿಂಸಾರೂಪ ತಾಳಿರಲಿಲ್ಲ.ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದು ತಪ್ಪೇ.ಅದನ್ನು ಮಾಡಿದವರಿಗೆ ಶಿಕ್ಷೆ ಆಗಲೇಬೇಕು.ಹಾಗಂತ ತಮಿಳರು ಕನ್ನಡಿಗರಿಗೆ ಹೊಡೆದರು ಅಂತ ಇಲ್ಲಿ ಬಂದ್ ಮಾಡಿ ನಾವೂ ಹಿಂಸೆ ಮಾಡುತ್ತೇವೆ ಎಂದು ಇವರು ಹೊರಟರೆ ಅವರಿಗೂ ನಮಗೂ ಇರುವ ವ್ಯತ್ಯಾಸವೇನು?ಕೆಲವೇ ಗಂಟೆಗಳ ಕಾಲ ಬೆಂಗಳೂರಿನಂಥ ನಗರದಲ್ಲಿ ಸಾರಿಗೆ ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಿ ಕಂಡಕಂಡಲ್ಲಿ ಹಿಂಸೆಗಿಳಿದರೆ ಅದರಿಂದ ಜನಸಾಮಾನ್ಯರಿಗೆ ಎಷ್ಟು ತೊಂದರೆಯಾಗುತ್ತದೆ ಎಂದು ಬಂದ್ ಮಾಡುವವರು ಎಂದಾದರೂ ಯೋಚಿಸಿದ್ದಾರೆಯೇ?ಸ್ವಂತ ವಾಹನ ಇಟ್ಟುಕೊಂಡಿರುವವರು ಕೆಲವೇ ಕೆಲವು ಮಂದಿ ಮಾತ್ರ.ಉಳಿದವರು ಬೆಂಗಳೂರಿನಲ್ಲಿ ಸಿಟಿ ಬಸ್ಸನ್ನು,ಮೆಟ್ರೋವನ್ನು ಅವಲಂಬಿಸಿದ್ದಾರೆ.ಅದನ್ನು ತಡೆದರೆ ವಿನಾಕಾರಣ ಜನರಿಗೆ ತೊಂದರೆಯಾಗುತ್ತದೆ ಎಂದು ಗೊತ್ತಿದ್ದೂ ಸುಮಾರು ಜನ ಬಂದ್ ಹೆಸರಲ್ಲಿ ಬೆಂಗಳೂರಿನಲ್ಲಿ ಹಿಂಸೆಗಿಳಿದರಲ್ಲ ಇಂಥವರನ್ನು ನಿಜವಾದ ಕನ್ನಡಿಗ ಎನ್ನಬಹುದೇ. ಕಾವೇರಿಯನ್ನು ರಕ್ಷಿಸಲು ಕನ್ನಡದ ಹೆಸರಲ್ಲಿ ತಾವು ಮಾಡುವ ದೊಂಬಿಯಿಂದ ಇನ್ನೊಬ್ಬ ಕನ್ನಡಿಗ ತೊಂದರೆಗೊಳಗಾಗುತ್ತಾನೆ ಎಂದು ಗೊತ್ತಿದ್ದೂ ಏಕಾಏಕಿ ಬಂದ್ ಮಾಡಿದರಲ್ಲ ಅಂಥವರನ್ನು ಏನು ಮಾಡಬೇಕು?
ಎಲ್ಲಿಯೋ ಏನೋ ಮಾಡಿಕೊಂಡಿದ್ದ ಒಂದಷ್ಟು ಯುವಕರು ಕನ್ನಡಪರ ಸಂಘಟನೆಗಳು ಕರೆದದ್ದಕ್ಕೆ ಎಲ್ಲಿಂದಲೋ ಓಡಿ ಬಂದು ಟೈರುಗಳನ್ನು ಸುಟ್ಟರು.ವಾಹನಗಳಿಗೆ ಕಲ್ಲು ಎಸೆದರು.ದಾರಿಯಲ್ಲಿ ಹೋಗುತ್ತಿರುವ ಮಹಿಳೆಯರನ್ನು ಚುಡಾಯಿಸಿ ವಿಕೃತ ಆನಂದ ಪಡೆದರು.ಅದೆಲ್ಲ ಮಾಡಿ ಇವರು ಕೊನೆಗೆ ಸಾಧಿಸಿದ್ದೇನು?ತಮಿಳುನಾಡಿಗೆ ಎಂದಿನಂತೆಯೇ ನೀರು ಹರಿಯಿತು.ಮುಖ್ಯಮಂತ್ರಿ 13-09-2016ರಂದು ನಡೆಸಿದ ಸಚಿವ ಸಂಪುಟದ ಸಭೆಯಲ್ಲಿ ನ್ಯಾಯಾಂಗ ನಿಂದನೆ ಮಾಡಲು ಇಷ್ಟವಿಲ್ಲದ್ದರಿಂದ ಸುಪ್ರೀಂ ಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ನೀರು ಬಿಡಲು ತೀರ್ಮಾನಿಸಲಾಯಿತು.ಈ ನಿರ್ಧಾರ ಹೊರ ಬಿದ್ದದ್ದು 13-09-2016 ರ ಮಧ್ಯಾಹ್ನ 3:30ರ ಹೊತ್ತಿಗೆ.ಹಿಂದಿನ ದಿನ ಆರಂಭವಾಗಿದ್ದ ಗಲಾಟೆ ತುಸು ಶಾಂತವಾಗಿ ಬೆಂಗಳೂರಿನಲ್ಲಿ ಬಸ್ ಸಂಚಾರ ನಿಧಾನಕ್ಕೆ ಆರಂಭವಾಗಿತ್ತು.ಆದರೆ ಮುಖ್ಯಮಂತ್ರಿಗಳ ನಿರ್ಧಾರದಿಂದ ಹೋರಾಟಗಾರರು ಮತ್ತೆ ಎಲ್ಲಿ ರೊಚ್ಚಿಗೆದ್ದು ಹಿಂಸೆ ಆರಂಭಿಸುವರೋ ಎಂದು ಜನ ಮತ್ತೆ ಚಿಂತೆಗೊಳಗಾದರು.
ಕನ್ನಡ ಸಂಘಟನೆಯ ಮುಖಂಡರುಗಳು ಯಾವತ್ತೂ ಕೇವಲ ಭಾಷಣ ಮಾಡಿ ಫೋಟೋ ತೆಗೆಸಿಕೊಂಡು ಹೋಗುತ್ತಾರೆಯೇ ವಿನಃ ಟೈರು ಹೊತ್ತಿಸಿ,ದೊಂಬಿ ಎಬ್ಬಿಸಿ ಹಿಂಸಾಚಾರ ಮಾಡುವವರು ಅವರ ಮಾತುಗಳಿಂದ ಪ್ರಚೋದನೆಗೊಳಗಾಗುವ ಒಂದಷ್ಟು ಯುವಕರು.ಸಂಘಟನೆಯ ಮುಖಂಡರು ಜೈಲಿಗೆ ಹೋಗುವುದಿಲ್ಲ.ಒಂದೊಮ್ಮೆ ಹೋದರೂ ತಾವು ನಿಷ್ಠರಾಗಿರುವ ರಾಜಕೀಯ ಧಣಿಗಳ ಕೃಪಾಕಟಾಕ್ಷದಿಂದ ಜಾಮೀನು ಪಡೆದು ತಕ್ಷಣ ಹೊರ ಬರುತ್ತಾರೆ.ಆದರೆ ಟೈರು ಹೊತ್ತಿಸಿದ್ದಕ್ಕೆ,ಕಲ್ಲು ಎಸೆದಿದ್ದಕ್ಕೆ ತಿಂಗಳುಗಟ್ಟಲೆ ಜೈಲಿನಲ್ಲಿ ಕೊಳೆಯುವವರು ಅವರಿಂದ ಪ್ರಚೋದನೆಗೊಳಪಟ್ಟ ಯುವಕರು.
ಇವರು ಮಾಡಿದ ಹಿಂಸೆಯಿಂದ ಏನು ಸಾಧಿಸಿದಂತಾಯಿತು.ಇಬ್ಬರ ಹೆಣ ಬಿತ್ತಲ್ಲ ಅವರ ಪ್ರಾಣವನ್ನು ಈ ಸಂಘಟನೆಗಳ ಮುಖಂಡರಿಗೆ ವಾಪಸ್ ತರಲು ಸಾಧ್ಯವೇ?ಹಣ ಕೊಡಬಹುದು.ಆದರೆ ಜೀವಕ್ಕೆ ಬೆಲೆ ಕಟ್ಟಲಾಗುತ್ತದೆಯೇ? ಮೂವತ್ತೈದು ಬಸ್’ಗಳನ್ನು ಕಳೆದುಕೊಂಡ ಅದರ ಮಾಲೀಕನ ಪಾಡೇನಾಗಬೇಕು?ಕಷ್ಟಪಟ್ಟು ಕೊಂಡಿದ್ದ ಖಾಸಗಿ ವಾಹನಗಳು ಇವರ ಗಲಾಟೆಯಲ್ಲಿ ಜಖಂಗೊಂಡರೆ ಅದರ ನಷ್ಟ ಭರಿಸುವವರು ಯಾರು?ಇವರು ಇಷ್ಟೆಲ್ಲ ಮಾಡಿಯೂ ಏನಾಯಿತು?ಮುಖ್ಯಮಂತ್ರಿ ತಮಿಳುನಾಡಿಗೆ ನೀರು ಬಿಡದಿರಲು ನಿರ್ಧರಿಸಲಿಲ್ಲವಲ್ಲ.ಬದಲಿಗೆ ನ್ಯಾಯಾಂಗ ನಿಂದನೆ ಮಾಡಲು ಧೈರ್ಯವಿಲ್ಲವೆಂದು ಬಿಟ್ಟರು.ಹಾಗಿರುವಾಗ ಇವರು ಇಷ್ಟೆಲ್ಲ ಬಂದ್ ಮಾಡಿ ಏನು ಪ್ರಯೋಜನವಾಯಿತು.ಇವರು ಬಂದ್ ಮಾಡಿದ ಮಾತ್ರಕ್ಕೆ ಸರ್ಕಾರ,ನ್ಯಾಯಾಲಯಗಳು ತಮ್ಮ ಆದೇಶಗಳನ್ನು ಬದಲಿಸಲಾರವು.ಅದು ಗೊತ್ತಿದ್ದೂ ಬಂದ್ ಹೆಸರಲ್ಲಿ ಹಿಂಸೆ ಮಾಡಿ ಜನಸಾಮಾನ್ಯರಿಗೆ ತೊಂದರೆ ಕೊಟ್ಟರಲ್ಲ ಇವರೆಲ್ಲ ನಮ್ಮ ಮಹಾನ್ ಕನ್ನಡ ‘ಹೋರಾಟಗಾರರು’.
ಸೆಪ್ಟೆಂಬರ್ ತಿಂಗಳೊಂದರಲ್ಲೇ ಈಗಾಗಲೇ ಮೂರು ಬಂದ್ ಆಗಿದೆ.ಇನ್ನು ಬಂದ್ ಆದರೆ ಶ್ರೀಸಾಮಾನ್ಯ ಜನರು ರೊಚ್ಚಿಗೆದ್ದು ಈ ಸಂಘಟನೆಗಳ ಚಳಿ ಬಿಡಿಸಿದರೂ ಆಶ್ಚರ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಜೋಕ್ ಒಂದು ಹರಿದಾಡುತ್ತಿದೆ.”ನಿನ್ನೆ ಬಸ್ ಬಂದಿತ್ತು,ಏಕೆಂದರೆ ಬಂದಿರಲಿಲ್ಲ.ಇವತ್ತು ಬಸ್ ಬಂದಿಲ್ಲ,ಏಕೆಂದರೆ ಬಂದಿತ್ತು”ಈ ಜೋಕ್ ಅನ್ನು ನಾವು ಪದೇ ಪದೇ ಕೇಳುವಂತಾಗದಿರಲಿ.ಬಂದ್ ಮಾಡುವ ಮುನ್ನ ಸಂಘಟನೆಗಳು ಸ್ವಲ್ಪ ಯೋಚಿಸಲಿ.