ಕಥೆ

ಆ ಮಳೆಯ ರಾತ್ರಿ….!!

  ಮಳೆ ಜೋರಾಗಿ ಸುರಿಯತ್ತಿತ್ತು..!! ಪಳಕ್ಕನೆ ಮಿಂಚುವ ಮಿಂಚು, ಅದರ ಬೆನ್ನಿಗೆ ಗುಡುಗಿನ ಆರ್ಭಟ, ಗಾಳಿಯೂ ಅವರ ಜೊತೆ ಸೇರಿತ್ತು..ಒಂಥರಾ ಭಯಾನಕ ವಾತಾವರಣ..!!ಇದು ಇವತ್ತೇ ಪ್ರಳಯವಾಗುತ್ತೇನೋ ಎಂಬ ಭಯವನ್ನುಂಟು ಮಾಡುತ್ತಿತ್ತು…ಎಲ್ಲಿ ನೋಡಿದರಲ್ಲಿ ನೀರು..ರಸ್ತೆ ಕಾಣಿಸುತ್ತಿಲ್ಲ..!! ಮಂಗಳೂರಲ್ಲಿ, ರಿಲೇಷನ್ ಒಬ್ಬರ ಮದುವೆ ರಿಸೆಪ್ಷನ್ ಮುಗಿಸಿ ಆತುರಾತುರವಾಗಿ ಮನೆಯ ಕಡೆಗೆ ಹೊರಟರೆ ಹೀಗೆ ಆಗಬೇಕೇ..!!? ಮನೆಗೆ ಇನ್ನೂ ಒಂದು ಘಂಟೆಯ ಪಯಣವಿದೆ.. ಡ್ರೈವ್ ಮಾಡಲು ಕಷ್ಟವಾಗುತ್ತಿದೆ.. ಎಲ್ಲಿಯಾದರೂ ಕಾರನ್ನು ನಿಲ್ಲಿಸಲೇಬೇಕಾಗಿತ್ತು ಈಗ. ಎಲ್ಲಿ

ನಿಲ್ಲಿಸೋಣ ಎಂದು ನೋಡುತ್ತಿರಬೇಕಾದರೆ ಪಳಕ್ಕನೆ ಮಿಂಚಿದ ಮಿಂಚಿನ ಬೆಳಕಲ್ಲಿ ಕಾಣಿಸಿತ್ತು ಒಂದು ದೊಡ್ಡ ಮನೆ. ತಡ ಮಾಡದೆ ಅತ್ತ ಕಾರನ್ನು ಓಡಿಸಿದೆ…ಮನೆಗೆ ಕೌಪೊಂಡ್,ಗೇಟು ಏನೂ ಕಾಣಿಸಲಿಲ್ಲ.. ಕಾರನ್ನು ನಿಲ್ಲಿಸಿ ಮನೆಯ ಮುಂಭಾಗದತ್ತ ಓಡಿದೆ…ದೀಪದ ಬೆಳಕು ಆ ಮನೆಯ ಒಳಗಿನಿಂದ ಕಾಣಿಸಿತ್ತು..’ಅಬ್ಬಾ ಸಮಾಧಾನ!! ಜನರಿದ್ದಾರೆ..’ ಹಗುರವಾಗಿ ಉಸಿರು ಬಿಟ್ಟೆ..ಬಾಗಿಲು ಮುಚ್ಚಿಕೊಂಡಿತ್ತು..ಬಾಗಿಲು ಬಡಿಯಲಾ..? ಬೇಡ..ಸುಮ್ನೆ ಅವರಿಗ್ಯಾಕೆ ತೊಂದರೆ ಕೊಡೋದು..ಇಲ್ಲಿಯೇ ನಿಂತು ಮಳೆ ಕಡಿಮೆ ಆದ ಮೇಲೆ ಹೋದರಾಯ್ತು…ಸ್ವಗತವಾಗಿ ಹೇಳಿಕೊಂಡು ಆ ಮನೆಯ ಹೊರಗಿನ ಸಿಟೌಟ್ನಲ್ಲಿ ಕುಳಿತುಕೊಂಡೆ..ಶರೀರ ಚಳಿಯಿಂದ ಗಡ ಗಡನೆ ನಡುಗುತ್ತಿತ್ತು..ಕಿಸೆಯಿಂದ ಸಿಗರೇಟೊಂದನ್ನು ತೆಗೆದು ತುಟಿಗಿಟ್ಟೆ..ಪುನ: ಲೈಟರ್ಗಾಗಿ ಕಿಸೆ ತಡಕಾಡಿದೆ..ಲೈಟರ್ ಇಲ್ಲ.

ಸಂಜೆ ಲೈಟರನ್ನು ಕಿಸೆಯಲ್ಲೇ ಇಟ್ಟ ನೆನಪು..!! ಎಲ್ಲಿ ಹೋಯಿತು!? ಕಾರಿನಲ್ಲಿರಬಹುದೇನೋ..ಈ ಮಳೆಯಲ್ಲಿ ಪುನ: ಕಾರಿನ ಬಳಿ ಹೋಗುವುದು ಬೇಡವೆನಿಸಿತು..ಇದ್ದಕ್ಕಿದ್ದಂತೆ ಅವಳು ನೆನಪಾದಳು.. ಪ್ರಣತಿ..  ಮುದ್ದು ಮುಖದ ನೀಲಿ ಕಂಗಳ ಚೆಲುವೆ.  “ವಿಶ್ವ ಸಿಗರೇಟು ಸೇದ್ಬೇಡ್ವೋ..ಆರೋಗ್ಯಕ್ಕೆ ಒಳ್ಳೆದಲ್ಲ ಕಣೋ..”  “ನೋಡು..ನಂಗೆ ಉಪದೇಶ ಮಾಡೋಕೆ  ಬರ್ಬೇಡ..ಬೇಕಾದ್ರೆ ನಿನ್ನ ಬಿಟ್ಟೇನು..ಆದರೆ ಇದನ್ನು ಮಾತ್ರ ಬಿಡಲ್ಲ..” ಕೈಯಲ್ಲಿದ್ದ ಸಿಗರೇಟಿನಿಂದ ಧಮ್ ಎಳೆಯುತ್ತಾ ನುಡಿದಿದ್ದೆ..ಅದಕ್ಕವಳು ಮುಖ ಊದಿಸಿಕೊಳ್ಳುತ್ತಾ ಹೇಳಿದ್ದಳು..”ನೀನು ಹೀಗೆ ಮಾಡ್ತಿರು..ಆಯ್ತಾ..ಒಂದು ದಿನ ಸಿಗರೇಟ್ ಕೈಯಲ್ಲಿ ಹಿಡಿದು ಪರದಾಡುವ ಗತಿ ಬರುತ್ತೆ..!?” ಸಿಟ್ಟಿನಿಂದ ಹೇಳಿದ್ದಳು.. “ಸಾರಿ..ಕಣೆ..ಸುಮ್ನೆ ಜೋಕ್ ಮಾಡಿದೆ ಅಷ್ಟೆ..ಅದನ್ನೇ ಸೀರಿಯಸ್ಸಾಗಿ ತಗೋಬೇಡ..” ಸಮಾಧಾನ ಪಡಿಸಿದ್ದೆ..ಅವಳ ಆ ಶಾಪ ನಿಜವಾಯ್ತೇನೋ..ಈಗ ಬರೀ ಸಿಗರೇಟು ಮಾತ್ರ ಕೈಯಲ್ಲಿದೆ.. ಆ ವಿಷಯ ನೆನಪಾಗುತ್ತಲೇ ನಗು ಬಂತು.. “ಹಲೋ..ನೀವ್ಯಾರು?..ಇಲ್ಲೇನು ಮಾಡ್ತಿದ್ದೀರಾ..!?” ಹಿಂದಿನಿಂದ ಮಧುರವಾದ ಧ್ವನಿ ಕೇಳಿಸಿ ತಿರುಗಿ ನೋಡಿದೆ..ಕೈಯಲ್ಲಿ ದೀಪ ಹಿಡಿದುಕೊಂಡು ಬಿಳಿ ಬಣ್ಣದ ಚೂಡಿದಾರ ಧರಿಸಿದ್ದ ಸುಂದರಿಯೊಬ್ಬಳು ನಿಂತಿದ್ದಳು..ಎಂತವರನ್ನೂ ಸೆಳೆಯುವಂತಹ ಸೌಂದರ್ಯ!! ಅವಳಿಂದ ಕಣ್ಣು ತೆಗೆಯದಾದೆ..ಎಂತಹ ಸೆಳೆತ!!  “ಹಲೋ..ಏನ್ರೀ ಹಾಗೆ ನೋಡ್ತಿದ್ದೀರಾ..??” ಅವಳ ಮಾತಿಗೆ ಎಚ್ಚೆತ್ತು “ಹಾ ಹೇಳಿ..” ಎಂದೆ..ಅದಕ್ಕವಳು ನಗುತ್ತಾ..”ನೀವ್ಯಾರು? ಇಷ್ಟು ಹೊತ್ತಲ್ಲಿ ಇಲ್ಲೇನು

ಮಾಡ್ತಿದ್ದೀರಾ..?!” ಕೇಳಿದಳು..ಅವಳು ನಗುವಾಗ ಕೆಂಪಗಿನ ತುಟಿಗಳ ನಡುವೆ ಬೆಳ್ಳಗಿನ ದಾಳಿಂಬೆಯ ದಂತಪಂಕ್ತಿಗಳು ಕಾಣಿಸಿದ್ದವು…ಏನು ಹೇಳಬೇಕೆಂದು ತಿಳಿಯದೆ..”ಅದು ಮಳೆ ಬರುತ್ತಾ ಇದೆ..ಸೋ..” ತಡವರಿಸುತ್ತಾ ನುಡಿದೆ..”ಗೊತ್ತಾಯ್ತು..ಬಿಡಿ..ಮತ್ತೆ ಅಲ್ಲೇಕೆ ನಿಂತಿದ್ದೀರಾ..ಮನೆಯೊಳಗೆ ಬನ್ನಿ..” ಆಹ್ವಾನಿಸಿದಳು..ಅದೇನು ಸೆಳೆತವೋ..ಹಿಂಬಾಲಿಸಿದ್ದೆ..ಮನೆಯೊಳಗೆ ಬಂದವ ಸುತ್ತಲೂ ಕಣ್ಣಾಡಿಸಿದೆ..ದೊಡ್ಡದಾದ ಹಾಲ್.. ಅದಕ್ಕೆ ಹೊಂದಿಕೊಂಡು ಎರಡು ಮೂರು ರೂಮ್ಗಳು. ಮೇಲಿನ ರೂಮ್ಗಳಿಗೆ ಹೋಗಲು ಮೆಟ್ಟಿಲುಗಳು.. ಗೋಡೆಗಳಲ್ಲಿ ಕಾಣಿಸುತ್ತಿರುವ ವಿವಿಧ ರೀತಿಯ ಪೈಂಟಿಂಗ್ಸ್ ವಿಶೇಷವಾಗಿ ತಯಾರಿಸಲ್ಪಟ್ಟಂತೆ ಕಾಣುವ ಹಾಂಗಿಂಗ್ ಲೈಟ್ಸ್ಗಳು.. ಒಟ್ಟಿನಲ್ಲಿ ಶ್ರೀಮಂತವಾಗಿತ್ತು ಎಂದು ಹೇಳಬಹುದು..ಮನೆಯೆಲ್ಲ ಒಂಥರಾ ಕೆಟ್ಟ ವಾಸನೆ ಬರುತ್ತಿತ್ತು….ನೋಡೋಣವೆಂದರೆ ಕರೆಂಟು ಬೇರೆ ಇಲ್ಲ..ಅವಳಲ್ಲಿ ಕೇಳಬೇಕೆಂದುಕೊಂಡೆ..ಆದರೆ ಮಾತು ಹೊರ ಬರಲಿಲ್ಲ.. ಅಲ್ಲದೆ ಮನೆಯಲ್ಲಿ ಯಾರೂ ಇದ್ದಂಗೆ ಕಾಣಿಸಲಿಲ್ಲ..ಎಲ್ಲಿ ಹೋದರು ಎಲ್ಲ..!? ಇವಳು ಒಬ್ಳೇ ಇರೋದಾ ಇಷ್ಟು ದೊಡ್ಡ ಮನೆಯಲ್ಲಿ.!? ಮನಸ್ಸಿನ ಮೂಲೆಯಲ್ಲಿ ಸಣ್ಣ ಹೆದರಿಕೆ.. “ಏನ್ರೀ ಏನೂ ಮಾತನಾಡ್ತಿಲ್ಲ..ಹೆದರಿಕೆಯಾಗ್ತಿದೆಯಾ..” ನನ್ನ ಸ್ಥಿತಿ ನೋಡಿ ಕೇಳಿದಳೇನೋ.. “ಹಾಗೇನಿಲ್ಲ..ಮನೆಯಲ್ಲಿ ಯಾರೂ ಇದ್ದಂಗೆ ಕಾಣಿಸ್ತಿಲ್ಲ” ಧೈರ್ಯ ಮಾಡಿ ಕೇಳಿದೆ..ಅದಕ್ಕವಳು “ಇಲ್ಲ..ಎನೀ ಪ್ರಾಬ್ಲಂ..” ಎಂದು ಕೇಳಿದಳು..”ಒಬ್ರೇ ಇರೋಕೆ ಭಯವಾಗಲ್ವ..?” ಪ್ರಶ್ನಿಸಿದೆ..ಅದಕ್ಕವಳು ಜೋರಾಗಿ ನಕ್ಕಳು..ಅವಳು ಯಾಕೆ ನಗುತ್ತಿದ್ದಾಳೆಂದು ನನಗೆ ಅರ್ಥವಾಗಲಿಲ್ಲ..ನಗು ನಿಲ್ಲಿಸಿದವಳು “ಅಯ್ಯೋ..ನೀವು ನಿಂತೇ ಇದ್ದಿರಲ್ಲ..ಕುಳಿತುಕೊಳ್ಳಿ..” ಅಲ್ಲೇ ಇದ್ದ ಸೋಫಾದ ಕಡೆ ಕೈ ತೋರಿಸಿದಳು..ನಾನು ಮರು ಮಾತನಾಡದೆ ಕುಳಿತುಕೊಂಡೆ…”ಮೇಡಂ ನಿಮ್ಮ ಹೆಸರು..?” ಅವಳನ್ನು ಕೇಳೋಣವೆಂದರೆ ಅವಳು ಕಾಣಿಸಲಿಲ್ಲ..ಅರೇ..!! ಇಷ್ಟು ಹೊತ್ತು ಇಲ್ಲೇ ಇದ್ದಳಲ್ಲ..ಈಗೆಲ್ಲಿ ಹೋದಳು..? “ಹಲೋ..ಮೇಡಂ..” ಎಂದು ಕರೆದೆ..ಉತ್ತರವಿಲ್ಲ..ಪುನಃ ಕರೆದೆ..ನೋ ರೆಸ್ಪಾನ್ಸ್. ಮನೆಯ ಸುತ್ತಲೂ ಕಣ್ಣಾಡಿಸಿದೆ..ಯಾರ ಸುಳಿವೂ ಇಲ್ಲ..ಹೊರಗೆ ಮಳೆಯ ಅಬ್ಬರ ಕೇಳಿಸಲಿಲ್ಲ.. ಸೂಜಿ ಬಿದ್ದರೂ ಕೇಳಬಹುದೆನಿಸುವ ನಿಶ್ಶಬ್ಧ..ನೀರವ ಮೌನ..!! ಭಯಾನಕ ವಾತಾವರಣ.. ಇನ್ನು ಇಲ್ಲಿರುವುದು ಸರಿಯಲ್ಲವೆನಿಸಿತು.. ಕುಳಿತಲ್ಲಿಂದ ಎದ್ದು ಮುಂಬಾಗಿಲತ್ತ ಓಡಿದೆ..ಟೇಬಲ್ ಮೇಲಿದ್ದ ದೀಪ ನಂದಿ ಹೋಯಿತು..ಸುತ್ತಲೂ ಗಾಢಂಧಕಾರ ಆವರಿಸಿತು..ಕಿಸೆ ಮುಟ್ಟಿ ನೋಡಿದೆ..ಮೊಬೈಲ್ ಇತ್ತು…ಈಗ ಧೈರ್ಯ ಬಂತು ಮೊಬೈಲ್ ತೆಗೆದು ಟಾರ್ಚ್ ಬೆಳಗಿಸಿದೆ.. ಬಾಗಿಲ ಬಳಿ ದೊಡ್ಡದಾದ ಕಪ್ಪು ಬಣ್ಣದ ಬೆಕ್ಕು ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಿತ್ತು..ಅದರ ಕಣ್ಣುಗಳು ಬೆಳಕಲ್ಲಿ ಪಳಕ್ಕನೆ ಹೊಳೆದುವು..ಅದರ ಮೈ ಮೇಲೆ ಅಲ್ಲಲ್ಲಿ ರಕ್ತ ಕಾಣಿಸಿದ್ದು ಅದು ಕೆಳಗೆ ನೆಲಕ್ಕೆ ತೊಟ್ಟಿಕ್ಕುತ್ತಿತ್ತು.. ಥೂ ಅಸಹ್ಯ.!? “ಶ್…” ಎಂದು ಅದನ್ನು ಓಡಿಸಲು ನೋಡಿದೆ..ಅದು ಅಲ್ಲಿಂದ ಅಲುಗಾಡಲಿಲ್ಲ..ನನ್ನನ್ನೇ ನೋಡುತ್ತಿತ್ತು..ಹಿಂದಿನಿಂದ ಏನೋ ಸದ್ದು ಕೇಳಿಸಿ ಮೊಬೈಲ್ನ ಟಾರ್ಚ್ ಬೆಳಕನ್ನು ಹಿಂದಕ್ಕೆ ಹಾಯಿಸಿದೆ…ಯಾರೂ ಇಲ್ಲ…!! ಪುನ: ಬೆಳಕನ್ನು ಬಾಗಿಲ ಬಳಿ ಹಾಯಿಸಿ ಬೆಚ್ಚಿ ಬಿದ್ದೆ…ಕಪ್ಪು ಬೆಕ್ಕು ಕಾಣಿಸಲಿಲ್ಲ.. ಕೆಳಗೆ ನೆಲದ ಮೇಲೆ ಬಿದ್ದಿದ್ದ ರಕ್ತದ ಹನಿಗಳು ಕಾಣಿಸಲಿಲ್ಲ..ಭಯ ಕಾಡತೊಡಗಿತ್ತು.. ಅದೇ ಸಮಯದಲ್ಲಿ “ಅಮ್ಮಾ ಉರಿ..ಉರಿ..ತಡೆಯೋಕೆ ಆಗ್ತಿಲ್ಲ” ನರಳುವಿಕೆಯ ಧ್ವನಿ ಕೇಳಿಸಿ ಪುನ: ತಿರುಗಿ ನೋಡಿದೆ..ವಿಕಾರ ರೂಪದ ಆಕೃತಿಯೊಂದು ಕಾಣಿಸಿತ್ತು. ಬೆಂಕಿಗೆ ಸಿಲುಕಿ ಅಲ್ಲಲ್ಲಿ ಬೆಂದು ಹೋದಂತೆ ಕಾಣುವ ದೇಹ.. ಅಲ್ಲಲ್ಲಿ ರಕ್ತ ಒಸರುತ್ತಿತ್ತು.. ಮುಖದಲ್ಲಿ ಕಣ್ಣು,ಮೂಗು ಬಾಯಿ ಯಾವುದೂ ಇಲ್ಲ.. ಅವುಗಳ ಬದಲು ಬರೀ ತೂತುಗಳು.. “ಅಯ್ಯೋ..ದೆವ್ವ..ದೆವ್ವ..!!” ಎಂದು ಕಣ್ಣುಗಳನ್ನು ಮುಚ್ಚುತ್ತಾ ಕಿರುಚಿದೆ..ಕೈಯಲ್ಲಿದ್ದ ಮೊಬೈಲ್ ಕೆಳಗೆ ಬಿದ್ದು ಬಿಟ್ಟಿತು.. “ಯಾಕೆ ಕಿರುಚ್ತಾ ಇದ್ದೀರಾ..ಏನಾಯಿತು..?” ಅದೇ ಹುಡುಗಿಯ ವಾಯ್ಸ್ ಕೇಳಿಸಿತ್ತು.. ಕಣ್ತೆರೆದು ನೋಡಿದರೆ ಅದೇ ಬಿಳಿ ಬಣ್ಣದ ಚೂಡಿದಾರ ಧರಿಸಿದ್ದ ಸುಂದರಿ.. ಪುನ: ಕಣ್ಣುಗಳನ್ನು ಉಜ್ಜುತ್ತ ನೋಡಿದೆ..ಅವಳೇ..ಸಂಶಯವೇ ಇಲ್ಲ.. ಹಾಗಾದರೆ ನಾನು ನೋಡಿದ ಆ ವಿಕಾರ ರೂಪ ನನ್ನ ಭ್ರಮೆನಾ..? ನಂಬಲಸಾಧ್ಯವಾಯಿತು..”ಏನ್ರೀ..ನನ್ನ ಈ ಸುಂದರ ಮುಖವನ್ನು ನೋಡಿ ದೆವ್ವ ಎಂದು ಕಿರುಚಿದ್ರಲ್ಲ..ನಿಜವಾಗಿ ದೆವ್ವ ಬಂದ್ರೆ ಏನ ಮಾಡ್ತೀರಾ..?” ಎಂದವಳು ಮಾತು ನನ್ನ ಹಾಸ್ಯ ಮಾಡಿದಂತೆ ಅನಿಸಿತು..”ನಾನು ನಿಜವಾಗಿಯೂ ನೋಡಿದೆ..ಎಷ್ಟು ಭಯಾನಕವಾಗಿತ್ತು ಗೊತ್ತಾ..ಅದು..ನೆನಪಿಸಿಕೊಂಡರೆ ಭಯವಾಗುತ್ತೆ..” ನನ್ನ ಮಾತಿಗೆ ಅವಳು “ಹೌದಾ..ನನಗೆ ಏನೂ ಕಾಣಿಸ್ಲಿಲ್ಲ..” ಎಂದಳು..”ಅಲ್ಲ..ನಾನು ಅಷ್ಟು ಹೊತ್ತಿನಿಂದ ಕರೀತಾ ಇದ್ದೀನಿ..ಎಲ್ ಮಾಯವಾಗಿದ್ರೀ..” ನೇರವಾಗಿ ಪ್ರಶ್ನಿಸಿದೆ..”ನಿಮಗೆ ಕಾಫಿ ಮಾಡಲು ಹೋಗಿದ್ದೆ..ತಗೊಳ್ಳಿ..” ಕಾಫಿ ಕಪ್ಪನ್ನು ನನ್ನ ಮುಂದೆ ಹಿಡಿದಳು.. ಈ ಮನೆಯಲ್ಲಿ ಏನೋ ನಿಗೂಢತೆ ಇದೆ.. ಮೊದಲು ಕಪ್ಪು ಬೆಕ್ಕು ಕಾಣಿಸಿತು..ಆಮೇಲೆ ವಿಕಾರ ರೂಪ..ಅಲ್ಲದೆ ನಾನು ಎಷ್ಟು ಕರೆದರೂ ಇವಳಿಗೆ ಕೇಳಿಸಿಲ್ಲ ಅಂದ್ರೆ ಏನರ್ಥ… ಇಲ್ಲ..ಇನ್ನು ಇಲ್ಲಿದ್ದರೆ ನನಗೆ ಅಪಾಯ.. ಬೇಗ ಈ ಮನೆಯಿಂದ ಹೊರ ಹೋಗಬೇಕು.. “ಏನು ಬೇಡ..ಮಳೆ ನಿಂತಿದೆ..ನಾನು ಹೋಗ್ತೀನಿ..ಈಗಲೇ ತುಂಬ ಹೊತ್ತಾಗಿದೆ..” ಎನ್ನುತ್ತಾ ಮುಂಬಾಗಿಲು ತೆರೆದೆ..ತಂಪಾದ ಗಾಳಿ ಮುಖಕ್ಕೆ ರಾಚಿತು..ಮಳೆ ಇನ್ನೂ ಸುರಿಯತ್ತಲೇ ಇದೆ..!?

ಅಚ್ಚರಿಯೆನಿಸಿತು..ಆಗ ಮಳೆ ನಿಂತಂತೆ ಕಾಣಿಸಿತ್ತು..ಈಗ ನೋಡಿದರೆ..!? “ಮಳೆ ಇನ್ನೂ ಬರುತ್ತಲೇ ಇದೆ..ಹೇಗೆ ಹೋಗ್ತೀರೀ..” ಅವಳು ಕೇಳಿದಳು..ಬೇರೆ ದಾರಿಯಲ್ಲದೆ ಒಳ ಬಂದು ಸೋಫಾದಲ್ಲಿ ಅವಳು ನೀಡಿದ ಕಾಫಿಯನ್ನು ಹೀರುತ್ತಾ ಕುಳಿತೆ…ಸಣ್ಣಗೆ ಉರಿಯುತ್ತಿದ್ದ ದೀಪದ ಬೆಳಕು ಕತ್ತಲೊಡನೆ ನಿರಂತರ ಹೋರಾಟ ಮಾಡುತ್ತಿತ್ತು…”ಅಂದ ಹಾಗೆ ಮೇಡಂ..ನಿಮ್ಮ ಹೆಸರು!?” ಸ್ವಲ್ಪ ಹಿಂಜರಿಯತ್ತಾ ಕೇಳಿದೆ..ಆಗಾಗ ಹಣೆಯನ್ನು ಚುಂಬಿಸುತ್ತಿರುವ ಮುಗುರಳನ್ನು ಸರಿಸುತ್ತಾ ಹೇಳಿದಳು..”ಆಶಾ..!!” “ಬ್ಯುಟಿಫುಲ್ ನೇಮ್..” ಎಂದೆ..ಅವಳು ಅಂದರೆ ಆಶಾ ಹೂ ನಗೆ ಬೀರಿದಳು..”ಸರಿಯಾಗಿ ನೆನೆಪಿದೆ ನನಗೆ ಇದಕ್ಕೆಲ್ಲ ಕಾರಣ ಕಿರು ನಗೆ..” ಸಾಂಗ್ ಕೇಳತೊಡಗಿತು..ನೋಡಿದರೆ ಆಗಲೇ ಕೆಳಗೆ ಬಿದ್ದಿದ್ದ ಮೊಬೈಲ್ ಹಾಡುತ್ತಿತ್ತು..ಮೊಬೈಲ್ ಡಿಸ್ಪ್ಲೇ ಮೇಲೆ ‘ಪ್ರಣತಿ’ ಎಂದು ತೋರಿಸುತ್ತಿತ್ತು..ಕಾಲ್ ಎಟೆಂಡ್ ಮಾಡಿದೆ..”ಹಲೋ..ವಿಶ್ವ..ಎಲ್ಲಿದ್ದೀಯಾ..!?” ನಲ್ಲೆಯ ಸ್ವೀಟ್ ವಾಯ್ಸ್ ಕೇಳಿಸಿತ್ತು..”ನಾನು ಇನ್ನೂ ಮನೆ ತಲುಪಿಲ್ಲ ಕಣೆ….”ಹಲೋ..ನಾನು ಹೇಳಿದ್ದು ಕೇಳಿಸ್ತಾ..” ನೆಟ್ವರ್ಕ್ ಸಿಗದಾಯಿತು..”ಹಲೋ..ಹಲೋ..ಪ್ರಣತಿ..” ಕಾಲ್ ಕಟ್ಟಾಗಿತ್ತು..”ಈ ಮಳೆಗೆ ಸಿಗ್ನಲ್ ಸಿಕ್ತಿಲ್ಲ ಅಂತ ಕಾಣುತ್ತೆ..ಅವಳು ಯಾರು ಲವ್ವರಾ..!?” ಆಶಾಳ ಕುತೂಹಲದ ಪ್ರಶ್ನೆಗೆ “ಹೌದು..ಕಾಲೇಜಲ್ಲಿ ನನ್ನ ಜ್ಯೂನಿಯರ್ ಆಗಿದ್ದಳು..” ನನ್ನ ಮತ್ತು ಪ್ರಣತಿಯ ಪ್ರೀತಿಯ ಕಥೆ ನನಗರಿವಾಗದೇ ಆಶಾಳಿಗೆ ಒದರಿ ಬಿಟ್ಟೆ.

                          ****************************************************

ಪ್ರಣತಿ.. ಅವಳ ಆ ಮುಗ್ದ ನಗುವಿಗಲ್ಲವೇ ನಾನು ಮನ ಸೋತಿದ್ದು!!? ಕಾಲೇಜು ಕ್ಯಾಂಟೀನ್ನಲ್ಲಿ ಉಂಟಾದ ಮೊದಲ ಭೇಟಿ…ಅಪರೂಪದ ಚೆಲುವೆ!!!ಪೂರ್ಣ ಚಂದ್ರನಂತಹ ದುಂಡಗಿನ ಹೊಳಪಿನ ಮುಖ..ಎಂತವರನ್ನೂ ಸೆಳೆಯಲ್ಪಡುವ ಚಂಚಲ ನೀಲಿ ಕಣ್ಣುಗಳು..ಸ್ವಲ್ಪವೇ ಉದ್ದವೆನಿಸುವ ಮೂಗು..ಕೆಂಪಗಿನ ತುಟಿಗಳ ನಡುವೆ ಬೆಳ್ಳಗಿನ ದಾಳಿಂಬೆಯ ದಂತಪಂಕ್ತಿಗಳು..ಹಣೆಯನ್ನು ಆಗಾಗ ಚುಂಬಿಸುತ್ತಿರುವ ಮುಂಗುರುಳು..ಅವುಗಳನ್ನು ಸರಿಪಡಿಸುತ್ತ ತನ್ನ ಪ್ರೆಂಡ್ಸ್’ಗಳೊಡನೆ ನಗುತ್ತಾ ಹರಟುತ್ತಿರುವ ಅವಳು ಆಗಲೇ ನನ್ನ ಹೃದಯವನ್ನು ಕದ್ದಿದ್ದಳು..ಅದು ಆಕರ್ಷಣೆನಾ..ಅಲ್ಲ

ಪ್ರೀತಿನಾ..ತಿಳಿಯುತ್ತಿಲ್ಲ…ಎಲ್ಲಿ ಹೋದರೂ,ಕುಂತರೂ,ಮಲಗಿದರೂ ಅವಳದೇ ನೆನಪು.. ಅವಳನ್ನು ಮಾತನಾಡಿಸಲು ಪ್ರಯತ್ನ ಮಾಡಿದೆ..ಆದರೆ ಸಾಧ್ಯವಾಗಲೇ ಇಲ್ಲ.. ಎಲ್ಲಿ ಹೋದರೂ ಅವಳ ಜೊತೆ ಪ್ರೆಂಡ್ಸಗಳು ಇದ್ದೇ ಇರುತ್ತಿದ್ದರು..ಹಾಗಾಗಿ ಅವಳ ಮುದ್ದು ಮುಖವನ್ನು ದೂರದಿಂದ ನೋಡುವುದು..ಹಿಂಬಾಲಿಸುವುದು..ಅಭ್ಯಾಸವಾಗಿ ಹೋಗಿತ್ತು…..ಪ್ರೆಂಡ್ಸ್’ಗಳು ಮಾತನಾಡುವಾಗ ಅವಳ ಹೆಸರು ಪ್ರಣತಿ ಎಂದು ಗೊತ್ತಾಗಿತ್ತು.. “ಏ ವಿಶ್ವ..ಯಾಕೆ ಹೀಗಿದ್ದಿಯಾ..ಏನಾಯಿತು!!?ಇತ್ತೀಚೆಗಂತೂ ನೀನು ತುಂಬ ಬದಲಾಗಿದ್ದಿಯಾ” ಕ್ಲೋಸ್ ಫ್ರೆಂಡ್ ಅವಿನಾಶ್ ಕೇಳಿದಾಗ ನಿಜ ವಿಷಯವನ್ನು ಮುಚ್ಚಿಟ್ಟೆ..

“ಏನಿಲ್ಲ..ಎಕ್ಸಾಮ್ ಅಲ್ವಾ..ಹಾಗಾಗಿ ಬ್ಯುಸಿ ಕಣೋ..” ಸ್ಮೈಲ್ ಮಾಡುತ್ತಾ ಹೇಳಿದ್ದೆ…ಒಂದು ದಿನ ಅವಳನ್ನು ಮಾತನಾಡಿಸುವ ದಿನ ತನ್ನಿಂತಾನೇ ಒದಗಿ ಬಂದಿತ್ತು..ಅಂದು ಶುಕ್ರವಾರ..!! ಸಂಜೆ ಹೊತ್ತು.. ಕಾಲೇಜು ಎಂದಿನಂತೆ ಬಿಟ್ಟಿತ್ತು..ಇನ್ನು ಸ್ವಲ್ಪ ಹೊತ್ತಲ್ಲಿ ಮಳೆ ಬರುವ ಸೂಚನೆಯನ್ನು ಆಗಸದಲ್ಲಿ ಕಪ್ಪನೆಯ ಮೋಡಗಳು ತೋರಿಸಿದ್ದುವು..ತಣ್ಣಗೆ ಬೀಸುವ ಗಾಳಿ ವಾತಾವರಣವನ್ನು ಬದಲಿಸಿತ್ತು..ಬೇಗನೆ ಮನೆ ಸೇರುವ ಉದ್ದೇಶದಿಂದ ಬೈಕ್ ಸ್ಟಾರ್ಟ್ ಮಾಡಿ ಬಸ್ಸ್ಟಾಪ್ ಬಳಿ ಬಂದೆ..ಅಲ್ಲಿ ಪ್ರಣತಿ ಕಾಣಿಸಿದ್ದಳು..ಅವಳ ಪ್ರೆಂಡ್ಸ್’ಗಳು ಯಾರೂ ಕಾಣಿಸಲಿಲ್ಲ..ಅವಳೊಡನೆ ಮಾತನಾಡಲು ಇದೇ ಕರೆಕ್ಟ್ ಟೈಮ್ ಅನಿಸಿತ್ತು…ಬೈಕ್ ನಿಲ್ಲಿಸಿ ಅವಳ ಬಳಿ ಹೋದೆ..ಬಸ್ಗಾಗಿ ಕಾಯುತ್ತಿದ್ದಾಳೆ..ಒಮ್ಮೆ ರೋಡ್ ಕಡೆ ನೋಡುತ್ತಿದ್ದವಳು ಮತ್ತೊಮ್ಮೆ ವಾಚ್ ಕಡೆ ನೋಡುತ್ತಿದ್ದಳು..”ಹಲೋ…ಪ್ರಣತಿ ಅಲ್ವಾ ನಿಮ್ಮ ಹೆಸರು?” ಎಂದೆ..ಅವಳು ಕೂಡ “ಹೌದು” ಎಂದು ಸ್ಮೈಲ್ ಕೊಟ್ಟವಳು ಪುನ: ರೋಡ್ ಕಡೆ ನೋಟ ಹರಿಸಿದ್ದಳು..

“ಅಯಾಮ್ ವಿಶ್ವನಾರಾಯಣ್..ಯುವರ್ ಸೀನಿಯರ್..ಫೈನಲ್ ಇಯರ್ ಬಿ.ಎಸ್.ಸಿ..ಏನು ಬಸ್ಸಿಗಾಗಿ ಕಾಯುತ್ತೀದ್ದೀರಾ.!!?” ಪುನ: “ಹೌದು..” ಎಂದಳಷ್ಟೇ.. “ಎಲ್ಲಿ ನಿಮ್ ಫ್ರೆಂಡ್ಸ್ ಯಾರೂ ಕಾಣಿಸ್ತಿಲ್ಲ..” “ಅವರು ಆಗಲೇ ಹೋದ್ರು..” “ಈವತ್ತು ನೀವು ಹೋಗುವ ಬಸ್ಸು ಇಲ್ಲಾಂತ ಕಾಣಿಸುತ್ತೆ..ಇಫ್ ಯು ಡೋಂಟ್ ಮೈಂಡ್..ಡ್ರಾಪ್ ಕೊಡ್ಲಾ..!?” ಕೇಳಿದ್ದು ತಪ್ಪಾಯಿತೇನೋ ಅಂದುಕೊಂಡು ಅವಳ ರಿಯಾಕ್ಷನ್’ಗಾಗಿ ಕಾದೆ..ನಾವಿದ್ದ ಬಸ್ ಸ್ಟಾಪಿನ ಸಮೀಪ ಅಂಗಡಿಯೊಂದಿದ್ದು ಅಲ್ಲಿ ಕೆಲವರು ಕುಳಿತಿದ್ದು ನಮ್ಮನ್ನೇ ನೋಡುತ್ತಿದ್ದರು..ಅದು ಪ್ರಣತಿಗೆ ಮುಜುಗರನ್ನುಂಟು ಮಾಡಿತೋ ಏನೋ..ಸ್ವಲ್ಪ ಹೊತ್ತು ಆಲೋಚಿಸಿದವಳು “ಓ.ಕೆ..” ಎಂದಳು..ನನಗೆ ಆ ದಿವಸ ಆದಷ್ಟು ಸಂತಸ ಮತ್ಯಾವತ್ತೂ ಆಗಿರಲಿಲ್ಲ..”ಬನ್ನಿ..ಬನ್ನಿ..ನಿಮ್ಮ ಮನೆ ಎಲ್ಲಿ ಅಂತ ಹೇಳಿ ಅಲ್ಲೇ ಡ್ರಾಪ್ ಮಾಡ್ತೀನೀ” ಸಂಭ್ರಮದಿಂದ

ನುಡಿದಿದ್ದೆ..ಅದಕ್ಕವಳು..”ಬೇಡ..ಬೇಡ..ಬಸ್ಸ್ಟಾಪಿನವರೆಗೆ ಸಾಕು..” ಎಂದಳು..ಆಗಲೇ ಮಳೆ ಹನಿಯುವುದಕ್ಕೆ ಆರಂಭವಾಗಿತ್ತು…ಹಿಂದೆ ಹೃದಯಕ್ಕೆ ಇನ್ನೂ ಹತ್ತಿರವಾದ ಹುಡುಗಿ..ತಂಪಾಗಿ ಬೀಸುವ ಗಾಳಿಯಲ್ಲಿ ಹಾಗೇ ತೇಲಿ ಹೋದ ಅನುಭವ..!! ಮನಸ್ಸಿಗೆ ಏನೋ ಒಂಥರಾ ಫೀಲಿಂಗ್ ನೀಡುತ್ತಿತ್ತು.. ಬೈಕನ್ನು ವೇಗವಾಗಿ ಓಡಿಸಿದೆ..ಮಳೆ ತನ್ನ ಪ್ರಭಾವನ್ನು ಹೆಚ್ಚಿಸಿತು..ಗಾಳಿಯೂ ಜೊತೆ ಸೇರಿತು…ಕೂಡಲೇ ಅಲ್ಲೇ ಹತ್ತಿರದಲ್ಲಿ ಕಾಣಿಸಿದ ಅಂಗಡಿಯೊಂದರ ಮುಂದೆ ಗಾಡಿ ನಿಲ್ಲಿಸಿದೆ..”ಅಯ್ಯೋ..ಮಳೆ ಜೋರಾಗಿ ಬರ್ತಿದೆ..ನಾನು ಹೇಗೆ ಮನೆ ತಲುಪುವುದು..” ಕಳವಳದಿಂದ ಹೇಳಿದ್ದಳು..ಅವಳ ಮುದ್ದು ಮುಖದಲ್ಲಿ ಟೆಂಷನ್ ಕಾಣಿಸಿತ್ತು..ಅಲ್ಲದೆ ಕತ್ತಲು ದಟ್ಟವಾಗಿ ಹರಡಿತ್ತು..ಅದೂ ಅವಳ ಹೆದರಿಕೆಗೆ ಕಾರಣವಾಗಿತ್ತು..”ಡೋಂಟ್ವರಿ ಪ್ರಣತಿ..ನಾನು ಇದ್ದೀನಲ್ಲ..ನಿಮ್ಮನ್ನು ಸೇಫಾಗಿ ಮನೆ ಮನೆ ತಲುಪಿಸ್ತೀನಿ..ಓ.ಕೆ!?” ಅವಳನ್ನು ಸಮಾಧಾನ ಪಡಿಸಿದ್ದೆ..”ಹುಂ” ಎಂದು ತಲೆ ಆಡಿಸಿದವಳು ಸುರಿಯತ್ತಿರುವ ಮಳೆ ಯಾವಾಗ ನಿಲ್ಲುತ್ತೋ ಅಂತ ಕಾಯುತ್ತ ನಿಂತಳು..ಮಳೆ ಹನಿಗಳು ಗಾಳಿಯ ರಭಸಕ್ಕೆ ಸಿಲುಕಿ ಒಂದೇ ಸಮನೆ ಮುಖಕ್ಕೆ ರಾಚುತ್ತಿತ್ತು..ಚಳಿಯಿಂದ ಮೈಯಲ್ಲ ನಡುಗುವಂತೆ ಮಾಡುತ್ತಿತ್ತು..ಅಂಗಡಿಯಿಂದ ಬಿಸಿ ಬಿಸಿ ಕಾಫಿ ತೆಗೆದುಕೊಂಡು ಬಂದು ಅವಳಿಗೆ ಕೊಟ್ಟೆ..”ಥಾಂಕ್ಸ್” ಎಂದು ಕಾಫಿಯನ್ನು ತೆಗೆದುಕೊಂಡಳು..ಸುಮ್ಮನೆ ಏನೇನೋ ಮಾತನಾಡಿ ಅವಳ ನಂಬಿಕೆಯನ್ನು ಹಾಳು ಮಾಡುವುದು ಬೇಡವೆನಿಸಿ ಏನೂ ಹೆಚ್ಚು ಮಾತನಾಡಲು ಹೋಗಲಿಲ್ಲ..ಕಾಫಿ ಕುಡಿದು ಮುಗಿಯುವ ವೇಳೆಗೆ ಮಳೆ ಸ್ವಲ್ಪ ಬಿಟ್ಟಿತ್ತು..

ಅಲ್ಲಿಂದ ಹೊರಟೆವು.. ಅವಳು ಹೇಳಿದ ಅಡ್ರೆಸ್ನಂತೆ ಮನೆಯ ಬಸ್ ಸ್ಟಾಪ್ನಲ್ಲಿ ಬಿಡುವ ಹೊತ್ತಿಗೆ ಆಗಲೇ ರಾತ್ರಿಯಾಗಿತ್ತು..”ಥಾಂಕ್ಸ್..ಇಲ್ಲಿಯವರೆಗೆ ಬಿಟ್ಟಿದ್ದಕ್ಕೆ..” ಸ್ಮೈಲ್ ಮಾಡುತ್ತಾ ಹೇಳಿದವಳು ಹೊರಟು ಹೋದಳು..ಅವಳು ಹೋದತ್ತ ನೋಡುತ್ತಾ ನಿಂತಿದ್ದೆ..ಅಂದು ನನಗೆ ಇಡೀ ಪ್ರಪಂಚವನ್ನೇ ಗೆದ್ದಷ್ಟು ಸಂತೋಷವಾಗಿತ್ತು..ಈ ಘಟನೆ ನಮ್ಮ ಪರಿಚಯ ಸ್ನೇಹಕ್ಕೆ ಕಾರಣವಾಗಿತ್ತು..ಕಾಲೇಜಲ್ಲಿ

ದಿನಾ ಎದುರು ಸಿಗುವಾಗ ಸ್ಮೈಲ್ ಕೊಡುತ್ತಿದ್ದಳು..ಮಾತನಾಡುತ್ತಿದ್ದಳು..ಒಮ್ಮೆ ಅವಿನಾಶ್ ಕೇಳಿದ್ದ..”ಹೇಗೋ ಅವಳನ್ನು ಕ್ಯಾಚ್ ಹಾಕ್ಕೊಂಡೆ..ನಂಗೂ ಹೇಳು ವಿಶ್ವ..” “ಹೋಗೋ..ಹಾಗೇನು ಇಲ್ಲ..ಪರಿಚಯವಿದೆ..ಹಾಗೆ ಮಾತನಾಡ್ತೀವಿ ಅಷ್ಟೇ..” ಎಂದಿದ್ದೆ..ಇತ್ತೀಚೆಗಂತೂ ಪ್ರಣತಿ ನನ್ನೊಡನೆ ಸಲುಗೆಯಿಂದಲೇ ಮಾತನಾಡುತ್ತಿದ್ದಳು..ದಿನಾ ಕಾಲೇಜು ಕ್ಯಾಂಪಸ್,ಕ್ಯಾಂಟೀನ್,ಕ್ಲಾಸ್ ರೂಮ್ ಎಲ್ಲಿಂದರಲ್ಲಿ ಹರಟೆ ಹೊಡೆಯವುದು ಅಭ್ಯಾಸವಾಗಿ ಬಿಟ್ಟಿತು…ಪ್ರೀತಿ ವಿಷಯವನ್ನು ಹೇಳಿಬಿಡಲಾ ಅನಿಸಿತಾದರೂ ಎಲ್ಲಿ ಇದ್ದ ಅವಳ ಸ್ನೇಹವನ್ನು ಕಳೆದುಕೊಂಡು ಬಿಡುತ್ತೇನೆಂಬ ಹೆದರಿಕೆ ಅದಕ್ಕೆ ಅಡ್ಡಿಯಾಗಿತ್ತು..ಆದರೆ ನನ್ನಿಂದ ಈ ವಿಷಯವನ್ನು ತುಂಬ ದಿವಸ ಮುಚ್ಚಿಡಲು ಸಾಧ್ಯವಾಗಲಿಲ್ಲ…ಸಿನೆಮಾಗಳಲ್ಲಿ ಮಾಡುವ ರೀತಿ, ಯಾವುದೋ ಪಾರ್ಕ್’ನಲ್ಲಿ ರೋಸ್ ಕೊಟ್ಟು ಉದ್ದುದ್ದ ಡಯಲಾಗ್ ಹೇಳದೆ ಸಿಂಪಲ್ ಆಗಿ ಪ್ರೀತಿಯ ವಿಷಯನ್ನು ಹೇಳಿದೆ..ಆ ದಿನ ರಾತ್ರಿ, “ನಿನ್ನ ಕಣ್ಣಂಚಿನ ಕಾಡಿಗೆಯು ಅಂದ..ನೀನಾಡುವ ಪ್ರತಿ ನುಡಿಯೂ ಚಂದ..ನಿನ್ನ ಸನಿಹ ಎಂದೆಂದು ಮನಸ್ಸಿಗೆ ಆನಂದ..ಮಾಡಿಕೊಳ್ಳುವೆಯಾ ನನ್ನೊಂದಿಗಿರಲು ಒಪ್ಪಂದ..” ಎಲ್ಲಿಯೋ ಓದಿದ ಶಾಯಿರಿಯ ಜೊತೆ ಐ ಲವ್ ಯೂ ಪ್ರಣತಿ ಎಂದು ಮೊಬೈಲ್ನಲ್ಲಿ ವಾಟ್ಸಪ್ ಮೆಸೇಜ್ ಕಳುಹಿಸಿಯೇ ಬಿಟ್ಟೆ..ಆಮೇಲೆ ಅವಳು ಏನು ಹೇಳುವಳೋ ಎಂಬ ಚಿಂತೆ ಕಾಡತೊಡಗಿತ್ತು..ಪ್ರೀತಿಯನ್ನು ಒಪ್ಪುತ್ತಾಳಾ..!?ಇಲ್ಲ ರಿಜೆಕ್ಟ್ ಮಾಡುತ್ತಾಳಾ..!? ಇದ್ದ ಫ್ರೆಂಡ್ಶಿಪ್ ಇದರಿಂದಾಗಿ ಕೊನೆಗೊಳ್ಳುತ್ತಾ..!? ಟೆನ್ಶನ್ನಲ್ಲಿ ನಿದ್ದೆಯೇ ಬರದಾಯಿತು..ಅವಳ ರಿಪ್ಲೈಗೋಸ್ಕರ ಇಡೀ ರಾತ್ರಿ ಕಾದೆ..ನೋ ರಿಪ್ಲೈ……!!! ಮರುದಿನ ಕಾಲೇಜಿನ ಕ್ಯಾಂಪಸ್ನಲ್ಲಿ ಅವಳಿಗಾಗಿ ಕಾಯುತ್ತಾ ನಿಂತಿದ್ದೆ..ಹಾಗೆ ಬಿರುಗಾಳಿಯಂತೆ ಬಂದವಳು ನನಗೆ ಬೈದಳು..!?

                          *****************************************************

“ಏನು ಬೈದ್ಲಾ..!? ಅಂದ್ರೆ ನಿಮ್ಮ ಪ್ರೀತಿಯನ್ನು ರಿಜೆಕ್ಟ್ ಮಾಡಿದ್ಲಾ” ಆಶಾ ಕುತೂಹಲದಿಂದ ಪ್ರಶ್ನಿಸಿದಳು.. ನಾನು ಮಾತು ಕಥೆಯನ್ನು ಮುಂದುವರಿಸಿದೆ.. “‘ಅಲ್ಲ ಮೆಸೇಜ್ ಮಾಡಿ  ಐ ಲವ್ ಯೂ ಅಂತ ಹೇಳ್ತೀರಲ್ಲ..!? ನಿಮಗೆ ನನ್ನ ಎದುರು ನಿಂತು ಐ ಲವ್ ಯೂ ಅಂತ ಹೇಳೋಕೆ ಧೈರ್ಯ ಇಲ್ವಾ..?’ ಅಂತ ಬೈದಳು..’ನಿನಗೆ ಇಷ್ಟ ಇಲ್ಲದಿದ್ದರೆ ಬೇಡ ಬಿಡು’ ತಲೆ ಕೆರೆದುಕೊಳ್ಳುತ್ತಾ

ನುಡಿದಿದ್ದೆ..ಅದಕ್ಕವಳು ‘ಯಾರು ಹೇಳಿದ್ದು ಇಷ್ಟ ಇಲ್ಲ ಅಂತ..ಐ ಲವ್ ಯೂ ಟೂ’ ಅಂತ ಹೇಳಿದಳು..”

ಆಶಾ,”ಅಂದ್ರೆ..ಅವಳು ನಿಮ್ಮ ಪ್ರೀತಿಯನ್ನ ಒಪ್ಪಿದ್ದಾಳೆ..” ಹೇಳಿದಳು..”ಹೌದು..ಮತ್ತೆ ನಮ್ಮ ಪ್ರೀತಿಗೆ ವಿಲನ್ಸ್ ಯಾರೂ ಇರಲಿಲ್ಲ..” ಖುಷಿಯಿಂದಲೇ ಹೇಳಿದೆ..”ನಿಮ್ಮ ಲವ್ ಹ್ಯಾಪಿ ಎಂಡಿಂಗ್..ಆಯ್ತಲ್ಲ..ಆದ್ರೆ..ನನ್ನ ಲವ್..?” ಎಂದ ಆಶಾಳ ಮುಖ ಕಳೆಗುಂದಿದನ್ನು ಗಮನಿಸಿದೆ..”ಯಾಕೆ ಏನಾಗಿತ್ತು..? ಕೈಯಲ್ಲಿದ್ದ ಕಾಫಿಯನ್ನು ಕುಡಿದು ಮುಗಿಸುತ್ತಾ ಕೇಳಿದೆ..”ನಾನು ಮತ್ತು ಮುರಳಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೆವು..ಆದರೆ ಇದಕ್ಕೆ ಕಲ್ಲು ಹಾಕಿದವರು ಚಿಕ್ಕಮ್ಮ ಮತ್ತೆ ಅವನ ತಮ್ಮ..!! ಹೆದರಿಸಿ ಬೆದರಿಸಿ ಮುರಳಿ ಬೇರೆ ಮದುವೆ ಆಗುವಂತೆ ಮಾಡಿದರು..ರಾಸ್ಕಲ್ಸ್..!?” ಆಶಾ ಸಿಟ್ಟಿನ ಆವೇಶದಿಂದ ನಡುಗುತ್ತಿದ್ದಳು..ಅವಳ ಕಣ್ಣುಗಳು ಕೆಂಪಗಾಗಿದ್ದು ಹೆದರಿಕೆ ಹುಟ್ಟಿಸುವಂತಿತ್ತು…ಕಾಫಿ ಕಪ್ಪನ್ನು ಟೇಬಲ್ ಮೇಲಿಟ್ಟು ನಡುಗುವ ಅವಳನ್ನು ಹಿಡಿದು ನಿಲ್ಲಿಸಲು ಮುಟ್ಟಿದ್ದೇ ತಡ ಹಾವು ತುಳಿದವಳಂತೆ ಬಹು ದೂರಕ್ಕೆ ಹಾರಿದಳು..”ಅಯ್ಯೋ..ಹತ್ತಿರ ಬರಬೇಡ..ಹತ್ತಿರ ಬರಬೇಡ..” ಎಂಬ ಕೂಗು.. ಆಶಾಳ ಮುಖ ಭಾವ ಕ್ರಮೇಣ ಬದಲಾಗುತ್ತಿರುವಂತೆ ಭಾಸವಾಗಿತ್ತು….ಒಮ್ಮಿಂದೊಮ್ಮೆಲೇ ಕಿಟಿಕಿ ಗಾಜುಗಳು ಪಟ ಪಟನೆ ಬಡಿದು ಸದ್ದು ಮಾಡತೊಡಗಿದುವು..ಅದರ ಜೊತೆಗೆ ಒಮ್ಮೆ ಯಾರೋ ಜೋರಾಗಿ ವಿಚಿತ್ರವಾಗಿ ನಗುತ್ತಿರುವಂತೆ ಕೇಳಿಸತೊಡಗಿತು.. ಹೆದರಿಕೆಯಿದಲೇ ಸುತ್ತಲೂ ನೋಡಿದೆ..ನಗು ನಿಂತಿತು..ಈಗ ಅಳು ಕೇಳಿಸತೊಡಗಿತು!!…ಇಡೀ ವಾತಾವರಣವೇ ಕ್ರಮೇಣ ಬದಲಾಗತೊಡಗಿತು..ಜೋರಾಗಿ ಕಟಕ್ ಕಟಕ್ ಎಂಬ ಸದ್ದು ಕೇಳಿಸಿ ಮೇಲೆ ನೋಡಿ ಬೆಚ್ಚಿ ಬಿದ್ದೆ…ಮೇಲಿನಿಂದ ತುಂಡಾದ ಹಾಂಗಿಂಗ್ ಲೈಟ್ ನೇರವಾಗಿ ಕೆಳಗೆ ಬೀಳುತ್ತಿತ್ತು..ನಾನು ಪಕ್ಕಕೆ ಸರಿದೆ..ಆದರೆ ಅದು ತಡವಾಗಿತ್ತು..ಧಢಾಲ್ ಎಂಬ ಸದ್ದು ಅಲ್ಲೆಲ್ಲ ಪ್ರತಿಧ್ವನಿಸಿತ್ತು..”ಅಮ್ಮಾ..” ಎಂಬ ಆಕ್ರಂದನ ಗಂಟಲಿನಿಂದ ಹೊರ ಬಂತು..!

     ಟಕ್..ಟಕ್..ಎಂಬ ಸದ್ದು ಕೇಳಿಸಿತು..ಸ್ಟೇರಿಂಗ್ಗೆ ತಲೆ ಕೊಟ್ಟು ಮಲಗಿದ್ದು ಎಚ್ಚರಗೊಂಡು ಕಣ್ತೆರೆದು ನೋಡಿದೆ..ಯಾರೋ ಒಬ್ಬ ಹುಡುಗ ಕಾರಿನ ಕನ್ನಡಿಯನ್ನು ತಟ್ಟುತ್ತಿದ್ದ..ನನಗೇನು ಆಗಿಲ್ವ..!? ತುಂಡಾದ ಹಾಂಗಿಂಗ್ ಲೈಟ್ ತಲೆಯ ಮೇಲೆ ಬೀಳುತ್ತಿರುವ ದೃಶ್ಯ ಕಣ್ಣ ಮುಂದೆ ಬಂತು..ಆಮೇಲಿಂದೇನು ನೆನಪಿಲ್ಲ..ನನ್ನ ಯಾರು ರಕ್ಷಿಸಿದರು..!? ಮನೆಯೊಳಗಿನಿಂದ ಇಲ್ಲಿಗೆ ಹೇಗೆ ಬಂದೆ..!?  ಹುಡುಗ ಪುನಃ ಕಾರಿನ ಕನ್ನಡಿಯನ್ನು ಜೋರಾಗಿ ತಟ್ಟಿದ…ಕಾರಿನ ಡೋರ್ ತೆಗೆದು ಹೊರ ಬಂದೆ..ಬೆಳಗಿನ ಹೊತ್ತು..ವಿಶಾಲವಾದ ಸ್ವಚ್ಚವಾದ ನೀಲಿ ಆಗಸದಲ್ಲಿ ಕೆಂಬಣ್ಣ ಹರಡಿಸುವ ಮೂಲಕ ಸೂರ್ಯ ತನ್ನ ಪ್ರಭಾವನ್ನು ಬೀರತೊಡಗಿದ್ದ….ಅವನ ಆಗಮನದಿಂದ ಮರ ಗಿಡಗಳು ಮೆಲ್ಲಗೆ ಅಲ್ಲಾಡುತ್ತಾ ತಮ್ಮ ಹರ್ಷವನ್ನು ವ್ಯಕ್ತಪಡಿಸುತ್ತಿದ್ದವು..ಹೂಗಳು ಅವನ ಸ್ಪರ್ಶಕ್ಕೆ ನಾಚಿ ಅರಳಿ ನಿಂತಿದ್ದವು..ಹಕ್ಕಿಗಳು ಹಲರವ ಕಿವಿಗಳಿಗೆ ಇಂಪಾಗಿ ಕೇಳಿಸುತ್ತಿತ್ತು..ನೆಲವೆಲ್ಲ ಒದ್ದೆಯಾಗಿದ್ದು ರಾತ್ರಿ ಮಳೆ ಸುರಿದದ್ದನ್ನು ಎತ್ತಿ ತೋರಿಸುತ್ತಿತ್ತು..”ಸರ್..ಇಲ್ಲೇನು ಮಾಡ್ತಿದ್ದೀರ..!?” ಆ ಹುಡುಗ ಅಚ್ಚರಿಯಿಂದ ಪ್ರಶ್ನಿಸಿದ..”ಅದು..ರಾತ್ರಿ ಮಳೆ ಬಂದಿತ್ತಲ್ಲ..ಹಾಗಾಗಿ ಆ ಮನೆಗೆ ಹೋಗಿದ್ದೆ..ಈಗ ಮನೆಯ ಒಳಗಿದ್ದವನು ಇಲ್ಲಿಗೆ ಹೇಗೆ..ಗೊತ್ತಾಗ್ತಿಲ್ಲ..” ಆ ಹುಡುಗನಲ್ಲಿ ಕೇಳಿದೆ..”ಏನು ಸಾರ್..ನೀವು..ತಮಾಷೆ ಮಾಡ್ತಿಲ್ಲ ತಾನೆ..” “ಯಾಕೆ ಏನಾಯಿತು..!?” “ಆ ಮನೆಗೆ ಒಂದು ವರ್ಷದ ಹಿಂದೇನೇ ಬೀಗ ಹಾಕಲಾಗಿದೆ.ಸಾರ್..ಮತ್ತೆ..ನೀವು ಹೇಗೆ ಒಳಗೆ ಹೋಗಿರ್ತೀರಾ..!?” ಅವನ ಮಾತಿಗೆ ಅಚ್ಚರಿಯಾಗಿತ್ತು..ನಿನ್ನೆ ನಡೆದದ್ದೆಲ್ಲ ಕನಸಾ ಹಾಗಾದರೆ..!? ಇಲ್ಲ ಕನಸು ಆಗುವುದಕ್ಕೆ ಸಾಧ್ಯವಿಲ್ಲ..!! ಇಲ್ಲಿ ಏನೋ ವಿಷಯ ಇದೆ.. “ಸರಿಯಾಗಿ ಬಿಡಿಸಿ ಹೇಳು..!?” ಅಂದೆ..ಹುಡುಗ ಹೇಳಿದ, “ಇದು ಸೋಮಶೇಖರ್ ಎಂಬವರ ಮನೆ ಸಾರ್..ಅವರ ಒಬ್ಬಳೇ ಮಗಳು ಆಶಾ..ಅವರು ತೀರಿಕೊಂಡ ಮೇಲೆ ಆಸ್ತಿ ಎಲ್ಲ ತನ್ನ ಪ್ರೀತಿಯ ಮಗಳ ಹೆಸರಿಗೆ ಬರೆದಿದ್ದರು..ಅದುವೇ ಅವಳ ಪಾಲಿಗೆ ಮುಳುವಾಯ್ತು ಅಂತ ಕಾಣುತ್ತೆ..ಒಂದು ವರ್ಷದ ಹಿಂದೆ ಆಶಾಳ ಚಿಕ್ಕಮ್ಮ ಅಂದ್ರೆ  ಸೋಮಶೇಖರ್ರ ಎರಡನೆಯ ಹೆಂಡತಿ ಮತ್ತು ಅವಳ ತಮ್ಮ ಸೇರಿ ಆಸ್ತಿಗೋಸ್ಕರ ಕೊಂದರೋ..ಅಲ್ಲ ಅವಳಾಗಿಯೇ ಆತ್ಮಹತ್ಯೆ ಮಾಡಿಕೊಂಡಳೋ..ಗೊತ್ತಿಲ್ಲ..ಆಮೇಲೆ ಮನೆ ಈ ರೀತಿ ಹಾಳು ಬಿದ್ದಿದೆ..” “ಆಶಾನಾ..!!..ಏಯ್ ಚಾನ್ಸೇ ಇಲ್ಲಪ್ಪಾ..ನಾನು ನಿನ್ನೆ ಅವಳನ್ನು ನೋಡಿದ್ದೀನಿ..ಅವಳೊಡನೆ ಮಾತನಾಡಿದ್ದೀನಿ..” ವಾದ ಮಾಡಲು ನಿಂತೆ..”ಇಲ್ಲ ಸಾರ್..ಅವಳು ಆವತ್ತೆ ತೀರಿಕೊಂಡಿದ್ದಾಳೆ..ಬೇಕಾದ್ರೆ ನೀವು ಹೋಗಿ ನೋಡಿ..” ನನ್ನ ಮಾತನ್ನು ನಂಬದ ಅವನು ನುಡಿದ..”ಓಕೆ..ಅಂದ ಹಾಗೆ ಅವಳ ಚಿಕ್ಕಮ್ಮ ಮತ್ತು ಅವಳ ತಮ್ಮ ಎಲ್ಲಿ ಹೋದ್ರು..!? ಅವರಿಲ್ಲಿಲ್ವಾ..!?”

ಮನೆಯತ್ತ ಹೆಜ್ಜೆ ಹಾಕುತ್ತ ಕೇಳಿದೆ ಅದಕ್ಕವನು, “ಇಲ್ಲ ಸಾರ್..ಈ ಘಟನೆ ಆದ ಮೇಲೆ ಯಾರೂ ಅವರನ್ನು ನೋಡಿಲ್ಲ..ತಲೆ ಮರೆಸಿಕೊಂಡಿದ್ದಾರೋ..ಇಲ್ಲ ಸತ್ತು ಹೋದ್ರೋ..ಒಂದೂ ಗೊತ್ತಿಲ್ಲ..ಮನೆ ಮಾತ್ರ ಯಾರೂ ಇಲ್ಲದೆ ಹಾಳು ಬಿದ್ದಿದೆ..” ಅಂದ..ಸುತ್ತಲೂ ಎಲ್ಲಿಂದರಲ್ಲಿ ಬೆಳೆದು ನಿಂತಿರುವ ಹುಲ್ಲುಗಳು,ಗಿಡಗಳು..ಹರಡಿರುವ ಮರದ ಎಲೆಗಳು..ಕಸ ಕಡ್ಡಿಗಳು.. ಎಲ್ಲವೂ ಮನೆಯಲ್ಲಿ ಯಾರೂ

ವಾಸವಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿತ್ತು..ಮನೆಯ ಮುಂದೆ ಬಂದು ನೋಡಿದೆ..ಬಾಗಿಲಿಗೆ ಬೀಗ ಹಾಕಲಾಗಿದ್ದು ಕಾಣಿಸಿತ್ತು..ಬೀಗದ ಪಲ್ಲೆ ತುಕ್ಕು ಹಿಡಿದಿದ್ದು ತೆಗೆಯದೆ ಎಷ್ಟು ವರ್ಷವಾಗಿದೆಯೋ ಎಂಬಂತಿತ್ತು..ಸ್ವಲ್ಪ ತೆರೆದಿದ್ದ ಕಿಟಿಕಿಯ ಮೂಲಕ ಮನೆಯೊಳಗೆ ಇಣುಕಿದೆ..ದೊಡ್ಡದಾದ ಹಾಲ್..ಅಲ್ಲಿ ಗೋಡೆಯ ಮೇಲೆ ಟಿವಿ..ಕೆಳಗೆ ಟೇಬಲ್..ಸೋಫಾ..ಎರಡು ಮೂರು ಖುರ್ಚಿಗಳು ಎಲ್ಲ ಕಾಣಿಸಿದ್ದು ಎಲ್ಲದರಲ್ಲೂ ಧೂಳು ಮೆತ್ತಿಕೊಂಡಿತ್ತು..ಅಲ್ಲದೆ ಹಾಲ್ ತುಂಬ ಜೇಡರ ಬಲೆಗಳು ಹರಡಿಕೊಂಡಿದ್ದವು..ಆಗ ಕಾಣಿಸಿತ್ತು ಗೋಡೆಯ ಮೇಲೆ ಇದ್ದ ಫ್ರೇಮ್ ಹಾಕಲಾಗಿದ್ದ ಫೋಟೋ..!! ನಗುತ್ತಾ ನಿಂತಿರುವ ಆಶಾ..!! ಅವಳೇ ಸಂಶಯವೇ ಇಲ್ಲ..!! ಅಂದ್ರೆ ನಾನು ಮಾತನಾಡಿದ್ದು ದೆವ್ವದ ಜೊತೆನಾ..!? ಒಂದೊಂದಾಗಿ ನಿನ್ನೆ ನಡೆದ ಘಟನೆಗಳು ನೆನಪಿಗೆ ಬಂದುವು..ಭಯದಿಂದ ಚಳಿ ಜ್ವರ ಬಂದಂತೆ ನಡುಕ ಶುರುವಾಗಿತ್ತು…ಪುನಃ ಮನೆಯೊಳಗೆ ನೋಡಲಾಗಲಿಲ್ಲ..ಕಿಟಿಕಿ ಮುಚ್ಚಿದೆ..ಆದ್ರೆ ಅವಳಿಂದ ನನ್ನ ರಕ್ಷಿಸಿದ್ದು ಯಾರು..? ಆಲೋಚಿಸುತ್ತಿರಬೇಕಾದರೆ ದೃಷ್ಠಿ ಬಲ ಕೈಯ ಕಡೆ ಹೋಗಿತ್ತು..ಒಂದು ವಾರದ ಹಿಂದೆ, ವೀರಾಂಜನೇಯ ದೇವಾಲಯಕ್ಕೆ ಹೋಗಿದ್ದಾಗ ಅಲ್ಲಿ ಸಾಧುಗಳೊಬ್ಬರು ಕಟ್ಟಿದ್ದ ತಾಯತ.. ಯಾರು ರಕ್ಷಿಸಿದರು ಎಂಬ ಪ್ರಶ್ನೆಗೆ ಈಗ ಉತ್ತರ ದೊರಕಿತ್ತು..ದೇವರೇ ನನ್ನ ಕಾಪಾಡಿದ್ದಕ್ಕೆ ದೊಡ್ಡ ಥಾಂಕ್ಸ್..ಮನದಲ್ಲೇ ಪ್ರಾರ್ಥನೆ ಸಲ್ಲಿಸಿದೆ..ತಲೆ ಕೆರೆದುಕೊಂಡು ನಿಂತಿದ್ದ ಹುಡುಗನಿಗೆ ಥಾಂಕ್ಸ್ ಹೇಳಿ ಅಲ್ಲಿಂದ ಹೊರಟು ಬಿಟ್ಟೆ..ಭಯದಿಂದಾಗಿಯೋ ಏನೋ ಒಂದು ವಾರ ಜ್ವರ ಎಡೆಬಿಡದೆ ಕಾಡಿತ್ತು..ನಾನು ಹೇಳಿದ ಈ ವಿಷಯವನ್ನು ಯಾರೂ ನಂಬಲಿಲ್ಲ..ಪ್ರಣತಿಯಂತೂ ನಕ್ಕಿದ್ದೇ ನಕ್ಕಿದ್ದು.. ಆದರೆ ಆ ಮಳೆಯ ರಾತ್ರಿಯ ಘಟನೆ ಸತ್ಯ..ಸುಳ್ಳಲ್ಲ ಎಂಬುದು ಅನುಭವಿಸಿದ ನನಗೆ ಮಾತ್ರ ಗೊತ್ತು.. ಅದು ಜೀವನದುದ್ದಕ್ಕೂ ಕಾಡುವ ಕೆಟ್ಟ ಅನುಭವವಾಗಿ ಉಳಿದುಕೊಂಡು ಬಿಟ್ಟಿತು..

ವಿನೋದ್ ಕೃಷ್ಣ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!