Featured ಪ್ರಚಲಿತ

ಸಿದ್ದರಾಮಯ್ಯನವರು ಅದೇಕೆ ಈ ಇದ್ದಿಲನ್ನು ಇನ್ನೂ ಸೆರಗಿನಲ್ಲಿ ಕಟ್ಟಿಕೊಂಡಿದ್ದಾರೆ?

ಮೊದಲಿಗೆ ಈ ಕಥಾನಕವನ್ನು ವಡ್ಡರ್ಸೆ ರಘುರಾಮ ಶೆಟ್ಟರಿಂದ ಶುರು ಮಾಡೋಣ. 1984ರ ಸೆಪ್ಟೆಂಬರ್ 9ರಂದು ಮಂಗಳೂರಲ್ಲಿ “ಚಿಂತನೆಯ ಮಳೆ ಸುರಿಸಿ ಜನಶಕ್ತಿಯ ಬೆಳೆ ತೆಗೆವ ಮುಂಗಾರು” ಎಂಬ ಧ್ಯೇಯ ವಾಕ್ಯದೊಡನೆ ವಡ್ಡರ್ಸೆಯವರ ನಾಯಕತ್ವ, ಸಂಪಾದಕತ್ವದಲ್ಲಿ ಮುಂಗಾರು ದಿನಪತ್ರಿಕೆ ಶುರುವಾಯಿತು. ಅದರ ಉದ್ಘಾಟನೆ ಮಾಡಿದವರು ಆ ಕಾಲದ ಬುದ್ಧಿಜೀವಿ, ಸಾಕ್ಷಿಪ್ರಜ್ಞೆ, ದಲಿತ ಸಾಹಿತಿ ಆಗಿದ್ದ ದೇವನೂರು ಮಹಾದೇವ. ರಾಜ್ಯದ ರಾಜಧಾನಿಯಲ್ಲಿ ಮೂವತ್ತು ವರ್ಷ ಪತ್ರಕರ್ತನಾಗಿ ದುಡಿದು, ವಿಧಾನಸೌಧದ ಕಲಾಪಗಳನ್ನು ವರದಿ ಮಾಡುವುದರಲ್ಲಿ ಎತ್ತಿದ ಕೈಯಾಗಿದ್ದ ವಡ್ಡರ್ಸೆಯವರು ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ “ಸದನ ಸಮೀಕ್ಷೆ” ಅಂಕಣದಿಂದ ಜನಪ್ರಿಯರಾಗಿದ್ದರು. ಆದರೆ ತನ್ನ ಸತ್ಯ ನಿಷ್ಠುರತೆ ಮತ್ತು ಅಧಿಕಾರ ಪರಾಙ್ಮುಖತೆಗೆ ಬೆಲೆ ಕೊಟ್ಟು ಅವರು ಬೆಂಗಳೂರಿನ ಕೆಲಸ ಬಿಟ್ಟು ಮಂಗಳೂರಲ್ಲಿ ಹೊಸದಾಗಿ ಪತ್ರಿಕೋದ್ಯೋಗಕ್ಕೆ ಕೈ ಹಚ್ಚಿದರು. ತಮ್ಮ ಜತೆ ಅದುವರೆಗೆ ಪ್ರಜಾವಾಣಿಯಲ್ಲಿ ಕೆಲಸ ಮಾಡಿದ್ದ ಇಂದೂಧರ ಹೊನ್ನಾಪುರ, ಮಹಾಬಲೇಶ್ವರ ಕಾಟ್ರಹಳ್ಳಿ, ಕೆ. ಪುಟ್ಟಸ್ವಾಮಿ, ರಾಮಮೂರ್ತಿ, ಕೆ.ಎಸ್. ಕೇಶವಪ್ರಸಾದ್, ಕೃಪಾಕರ್, ವಿ. ಮನೋಹರ್, ಎನ್.ಎಸ್. ಶಂಕರ್ ಮುಂತಾದವರನ್ನೂ ಕರೆದು ತಂದರು. ಪ್ರಾಮಾಣಿಕತೆಯೊಂದೇ ತನ್ನ ಬಂಡವಾಳವೆಂದು ನಂಬಿದ್ದ ನಿಷ್ಠುರವಾದಿ ವಡ್ಡರ್ಸೆಯವರ ಪತ್ರಿಕೆಯ ಆರಂಭಿಕ ಕಚೇರಿ ಬೇಬಿಯಣ್ಣ ಎಂದೇ ಹೆಸರಾಗಿದ್ದ ಜಯಕರ್ ಎಂಬವರ ಕ್ಯಾಂಟೀನ್‍ನ ಮಾಳಿಗೆಯಲ್ಲಿತ್ತು. ಪತ್ರಿಕೆಗೆ ಬಂಡವಾಳ ಹೂಡಿದವರ ಪೈಕಿ ಒಬ್ಬರಾಗಿದ್ದ (ರಾಂಪಣ್ಣನ ಜೋಕ್ಸ್ ಖ್ಯಾತಿಯ) ರಾಮಪ್ಪಣ್ಣ, ತನ್ನ ಬಾಡಿಗೆ ಮನೆಯ ಭಾಗವೊಂದನ್ನು ಪತ್ರಿಕೆಯ ಕೆಲಸಕ್ಕೆ ಮೀಸಲಿಟ್ಟಿದ್ದರಿಂದ ಅವರ ಮನೆಗೆ ಉಳಿದವರು ಮುಂಗಾರು ಮನೆ ಎಂದೇ ಕೋಡ್‍ವರ್ಡ್ ಇಟ್ಟುಕೊಂಡಿದ್ದರು. ಜನರಿಂದ ಶೇರು ಸಂಗ್ರಹಿಸಿ, “ಇದು ಜನರಿಂದಲೇ ನಡೆಯುವ ಪತ್ರಿಕೆ” ಎಂಬ ಹೊಸ ಪರಿಕಲ್ಪನೆಯನ್ನು ವಡ್ಡರ್ಸೆ ಶುರು ಮಾಡಿದ್ದರು. ಪತ್ರಿಕೆ ನಡೆಸಬೇಕಾದರೆ ಅದರ ಲಾಭ ನಷ್ಟಗಳನ್ನು ನೂರಾರು ದಿನ ತಲೆ ಮೇಲೆ ಹೊರಬಲ್ಲ ಧನಿಕರ ಹಣಕಾಸಿನ ಬೆಂಬಲ ಬೇಕೆಂಬ ನಂಬಿಕೆಯನ್ನು ಸುಳ್ಳು ಮಾಡುವ ಹುಂಬ ವಿಶ್ವಾಸ ವಡ್ಡರ್ಸೆಯವರಲ್ಲಿ ಪ್ರಾರಂಭಿಕ ದಿನಗಳಲ್ಲಿ ತುಂಬಿ ತುಳುಕುತ್ತಿತ್ತು.

“ಮುಂಗಾರು” ಪತ್ರಿಕೆ, ಜೂನ್ ತಿಂಗಳಲ್ಲಿ ದೇಶದ ನೈಋತ್ಯ ಭಾಗಕ್ಕೆ ಹೊಡೆಯುವ ಮುಂಗಾರಿನಂತೆಯೇ ದೊಡ್ಡ ಆರ್ಭಟದೊಂದಿಗೆ ಶುರುವಾಯಿತು. ಆದರೆ ಬರಬರುತ್ತ ಅದು ಶೆಟ್ಟರ ಏಕಚಕ್ರಾಧಿಪತ್ಯವಾಗಿ, ಆರ್ಭಟಗಳಿಗಷ್ಟೇ ಸೀಮಿತವಾದ ಪತ್ರಿಕೆಯಾಗಿ ಉಳಿದು ಬಿಟ್ಟಿತು. ಸೂಕ್ಷ್ಮ ಒಳನೋಟಗಳಿದ್ದ ವರದಿಗಾರಿಕೆಯ ಬದಲಾಗಿ ಜನರನ್ನು ಕೆರಳಿಸುವ ಸುದ್ದಿಗೆ ಮಾತ್ರ ಪ್ರಾಮುಖ್ಯತೆ ಸಿಕ್ಕಿತು. ವಡ್ಡರ್ಸೆಯವರ ವರಸೆಗಳು ಅದೆಷ್ಟು ಉಗ್ರವಾಗಿದ್ದವೆಂದರೆ, ಮುಖ್ಯಮಂತ್ರಿ ಗುಂಡೂರಾಯರೊಮ್ಮೆ “ಪತ್ರಕರ್ತರನ್ನು ಅರಬ್ಬಿ ಸಮುದ್ರಕ್ಕೆ ಎಸೆಯಿರಿ” ಎಂದೂ ಹೇಳುವಂತಾಯಿತು. ಗುಂಡೂರಾಯರು ಎಸೆದ ಆ ಹೇಳಿಕೆಯ ಹುಲ್ಲುಕಡ್ಡಿಯನ್ನು ಹಿಡಿದು ಅದಕ್ಕೆ ಮಂತ್ರಶಕ್ತಿಯಿಂದ ಬ್ರಹ್ಮಾಸ್ತ್ರದ ಬಲ ತುಂಬಿದ ವಡ್ಡರ್ಸೆ ಶೆಟ್ಟರು ಪುಂಖಾನುಪುಂಖವಾಗಿ ಸರಕಾರದ ವಿರುದ್ಧ ಲೇಖನಗಳನ್ನು ಬರೆದು ಕೊನೆಗೆ ಗುಂಡೂರಾಯರನ್ನು ಅಧಿಕಾರದಿಂದ ಇಳಿಸುವ ಮೂಲಕ ಮುಯ್ಯಿ ತೀರಿಸಿಕೊಂಡರು. ಅವರಿಬ್ಬರ ದ್ವೇಷ ಯಾವ ಮಟ್ಟಕ್ಕೆ ಬೆಳೆದಿತ್ತೆಂದರೆ, ಇಬ್ಬರೂ ತಮ್ಮ ಜೀವಮಾನದಲ್ಲೆಂದೂ ವೇದಿಕೆ ಹಂಚಿಕೊಳ್ಳಲಿಲ್ಲ. ತನ್ನ ವೃತ್ತಿ ಬದುಕಿನ ಉಚ್ಛ್ರಾಯ ಕಾಲದಲ್ಲಿ ಅನೇಕ ಸೂಕ್ಷ್ಮ ಒಳನೋಟಗಳಿದ್ದ ಬರಹಗಳಿಗಾಗಿ ಪ್ರಸಿದ್ಧರಾಗಿದ್ದ ಶೆಟ್ಟರು ಮುಂಗಾರು ಪತ್ರಿಕೆ ಆರ್ಥಿಕ ನಷ್ಟದಿಂದ ಕಂಗೆಟ್ಟಾಗ, ತಾನು ಬೆಳೆಸಿದೆನೆಂದು ನಂಬಿದ್ದ ಸಹೋದ್ಯೋಗಿಗಳು ಕೈಬಿಟ್ಟಾಗ ಅಧೀರರಾದರು ಮಾತ್ರವಲ್ಲ; ಕಹಿಮನುಷ್ಯನಾಗಿ ಬದಲಾದರು. ಮುಂಗಾರು ಪತ್ರಿಕೆಯಲ್ಲಿ ಬರೆಯುವ ಪತ್ರಕರ್ತರು ಮತ್ತು ಅಂಕಣಕಾರರು ಸಂಪಾದಕರ ಪ್ರೀತ್ಯರ್ಥ ಬರೆಯಬೇಕು; ಜನರಿಗಾಗಿ ಅಲ್ಲ – ಎಂಬ ವಿಷಮ ಪರಿಸ್ಥಿತಿ ಸೃಷ್ಟಿಯಾಯಿತು. ದೇಶದಲ್ಲಿ ಹೊಸ ತಂತ್ರಜ್ಞಾನಗಳು ಬಂದರೂ, ಮಂಗಳೂರಲ್ಲಿ 1987ರ ಹೊತ್ತಿಗೆ ಡಿಟಿಪಿ ಟೆಕ್ನಾಲಜಿ ಕಣ್ಣು ಬಿಟ್ಟರೂ, ಕರಾವಳಿ ಭಾಗದ ಬೇರೆ ಪತ್ರಿಕೆಗಳು ಅವುಗಳನ್ನು ಅಳವಡಿಸಿಕೊಂಡರೂ ಮುಂಗಾರು ಮಾತ್ರ ಕಣ್ಣುಮುಚ್ಚಿ ಅಚ್ಚುಮೊಳೆಯನ್ನೇ ನೆಚ್ಚಿಕೊಂಡಿತು.

ಕೊನೆಗೂ ಉಳಿದವರು ಊಹಿಸಿದ್ದ ಆ ದಿನ ಬಂದೇ ಬಿಟ್ಟಿತು. ಹಲವು ದಶಕಗಳ ಕಾಲ ಸುದ್ದಿಲೋಕದಲ್ಲಿ ವಿಜೃಂಭಿಸುವ ಕನಸು ಕಂಡಿದ್ದ ಮುಂಗಾರು ಅಕಾಲ ಮರಣಕ್ಕೆ ಈಡಾಗಬೇಕಾಯಿತು. ತಾನು ನಂಬಿದವರೇ ಬೆನ್ನಿಗೆ ಚೂರಿ ಹಾಕಿದರೆಂಬ ನೋವಿನಲ್ಲಿದ್ದ ಶೆಟ್ಟರು, ಪತ್ರಿಕಾಲಯ ಮುಚ್ಚಿ ಹೊರ ನಡೆದಾಗ, ಈ ಮಣ್ಣಾಂಗಟ್ಟಿ ಜನರ ಸಹವಾಸವೇ ಬೇಡ. ವಡ್ಡರ್ಸೆಗೆ ಹೋಗ್ತೇನೆ. ಅಲ್ಲಿ ನೆಲೆಯೂರಿ ಕೃಷಿ ಮಾಡಿಕೊಂಡಿರ್ತೇನೆ – ಎಂದು ತನ್ನ ಆಪ್ತರಲ್ಲಿ ಹೇಳಿಕೊಂಡಿದ್ದರು. (ಅವರ ಮನೆಯನ್ನು ನೀವೆಲ್ಲ ನೋಡೇ ಇರುತ್ತೀರಿ. ಗುಡ್ಡದ ಭೂತ ಧಾರಾವಾಹಿಯಲ್ಲಿ ಈ ಮನೆಯೂ ಒಂದು ಮುಖ್ಯ ಪಾತ್ರ!) ಕೇವಲ ಪ್ರೌಢಶಾಲಾ ಮಟ್ಟದ ಶಿಕ್ಷಣವನ್ನು ಪಡೆದಿದ್ದ ವಡ್ಡರ್ಸೆಯವರು ಪ್ರಜಾವಾಣಿ ಮಾತ್ರವಲ್ಲ, ಡೆಕ್ಕನ್ ಹೆರಾಲ್ಡ್ ಇಂಗ್ಲೀಷ್ ಪತ್ರಿಕೆಯಲ್ಲೂ ಹಲವು ವರ್ಷ ಸಮರ್ಥವಾಗಿ ಕೆಲಸ ನಿರ್ವಹಿಸಿದ್ದ ಉಭಯ ಭಾಷಾ ಪಂಡಿತ. ಪತ್ರಿಕೋದ್ಯಮ ಆಳ-ಅಗಲಗಳನ್ನು, ಒಳ-ಹೊರಗನ್ನು ಅರೆದು ಕುಡಿದಿದ್ದ ವಿದ್ವಾಂಸ. ಮೂಗಿನ ಮೇಲೆ ಸಿಟ್ಟಿದ್ದರೂ ತನ್ನ ಜೊತೆ ಹಲವು ಎಳೆಯರನ್ನು ಬೆಳೆಸಿದ ಉದಾರ ಹೃದಯಿಯೂ ಹೌದು. ವಡ್ಡರ್ಸೆಯವರ ಗರಡಿಯಲ್ಲಿ ಇದ್ದು ಬಂದಿದ್ದೇನೆಂದರೆ ಅದುವೇ ಪತ್ರಿಕೋದ್ಯಮದ ಸ್ನಾತಕ ಪದವಿ ಎಂದು ಸುದ್ದಿಮನೆಗಳಲ್ಲಿ ಪರಿಗಣಿಸುವ ಕಾಲವಿತ್ತು. ಸಿಎಂ ಸಾಹೇಬ್ರು ಊಟಕ್ಕೆ ಬನ್ನೀ ಅಂದ್ರಂತೆ, ಇವರು ಹೋಗಲಿಲ್ವಂತೆ; ವಸತಿ ಸಚಿವರು ಮನೆ ಕೊಡಿಸ್ತೀವಿ ಅಂದ್ರಂತೆ, ಇವರು ನೋ ಅಂದ್ರಂತೆ ಎಂಬೆಲ್ಲ ಕತೆಗಳು ಅವರ ಸುತ್ತ ಹರಿದಾಡುತ್ತಿದ್ದವು. ವಡ್ಡರ್ಸೆಯವರ ವ್ಯಕ್ತಿತ್ವವನ್ನು ಹತ್ತಿರದಿಂದ ನೋಡಿದ ಯಾರೇ ಆದರೂ, ಈ ಮನುಷ್ಯನನ್ನು ವಶೀಲಿಯಿಂದ ಒಲಿಸಿಕೊಳ್ಳಬಹುದೆಂದು ನಂಬಲು ಕಾರಣಗಳಿರಲಿಲ್ಲ. ಹಾಗಿದ್ದರೂ ವಡ್ಡರ್ಸೆ ಸೋತರು ಯಾಕೆಂದರೆ, ಸಿಟ್ಟಿನ ಕೈಗೆ ತಮ್ಮ ವಿವೇಚನೆಯನ್ನು ಕೊಟ್ಟಿದ್ದರಿಂದ. ಕೈಯಲ್ಲಿರುವ ಆಯುಧ ಸುತ್ತಿಗೆಯೊಂದೇ ಆದಾಗ ಎದುರಿರುವುದೆಲ್ಲ ಮೊಳೆಯಂತೆಯೇ ಕಾಣಿಸುತ್ತದೆ ಎಂಬ ಇಂಗ್ಲೀಷ್ ಜಾಣ್ನುಡಿಯಿದೆ. ಶೆಟ್ಟರ ವಿಷಯದಲ್ಲಿ ಹೀಗಾಯಿತೆಂದು ಕಾಣುತ್ತದೆ. ಒಂದು ಸಿದ್ಧಾಂತ, ವಿಚಾರ, ಅಭಿಪ್ರಾಯವನ್ನು ರೂಪಿಸಿಕೊಂಡ ಮೇಲೆ ಜಗತ್ತಿನಲ್ಲಿ ಕಾಣುವ ಸಮಸ್ಯೆಗಳನ್ನೆಲ್ಲ ಆ ಸಿದ್ಧಾಂತಗಳ ಗೂಟಕ್ಕೇ ಸುತ್ತಿಕಟ್ಟಲು ಯತ್ನಿಸತೊಡಗುತ್ತೇವೆ. ಹೊಸದೊಂದು ದಾರಿಯೂ ಇರಬಹುದು; ಇನ್ನೊಂದು ಅಭಿಪ್ರಾಯಕ್ಕೂ ಮನ್ನಣೆ ಸಿಗಬೇಕೆಂಬುದನ್ನು ಮರೆಯುತ್ತೇವೆ. ತಮ್ಮಲ್ಲಿ ಕೆಲಸ ಮಾಡುವವರೆಲ್ಲ ಲೋಹಿಯಾ, ಅಂಬೇಡ್ಕರ್ ವಿಚಾರಗಳನ್ನು ಓದಿಕೊಂಡಿರಬೇಕೆಂದು ಶೆಟ್ಟರು ತಾಕೀತು ಮಾಡುತ್ತಿದ್ದರಂತೆ. ಅದೇನೋ ಒಳ್ಳೆಯದೇ. ಆದರೆ ಮುಂಗಾರು ಗರಡಿಯಲ್ಲಿ ಪಳಗಿದ ಬಹುತೇಕ ಪತ್ರಕರ್ತರ ಓದು ಅವೆರಡು ಹೆಸರುಗಳಿಗೇ ನಿಂತು ಹೋಯಿತು. ಲೋಹಿಯಾ, ವೈಚಾರಿಕ ಸಂಗತಿಗಳನ್ನು ಅತ್ಯಂತ ಕಾವ್ಯಮಯವಾಗಿ ಹಲವು ರೂಪಕಗಳ ಮೂಲಕ ಹೇಳುತ್ತಿದ್ದುದರಿಂದ ಪತ್ರಕರ್ತರಿಗೆ ಅವರು ರುಚಿಸಲಿಲ್ಲವೇನೋ. ಉಳಿದದ್ದು ಅಂಬೇಡ್ಕರ್ ಒಬ್ಬರೇ. ಆದರೆ 1990ರ ದಶಕದಲ್ಲಿ ಅಂಬೇಡ್ಕರ್, ವಿಚಾರವಂತನೆಂಬ ಕಾರಣಕ್ಕಲ್ಲ, ಮೇಲ್ವರ್ಗವನ್ನು ತುಳಿಯಲು ಬಳಸುವ ಹಾರೆ-ಪಿಕಾಸಿಯಾಗಿ ಮತ್ತು ಸರಕಾರೀ ಸವಲತ್ತುಗಳನ್ನು ಗಿಟ್ಟಿಸಲು ಏಣಿಯಾಗಿ ಉಪಯೋಗಕ್ಕೆ ಬರುತ್ತಾರೆಂದು ಗೊತ್ತಾದ ಮೇಲೆ ಹಲವು ಪತ್ರಕರ್ತರ ಚಿಂತನೆಯ ಧಾಟಿ ಬದಲಾಗಿಹೋಯಿತು. ಲೋಹಿಯಾರನ್ನು ಮರೆತರು; ಅಂಬೇಡ್ಕರರನ್ನು ದಾಳವಾಗಿ ಬಳಸಿದರು.

ಇದೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ, ವಡ್ಡರ್ಸೆಯವರ ಗರಡಿಯಲ್ಲಿ ಪಳಗಿ ಬಂದೆನೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಪತ್ರಕರ್ತರನ್ನು ಈ ಎಲ್ಲ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕಾಗುತ್ತದೆ. ಅಧಿಕಾರವನ್ನು ವಿಷದ ಸರ್ಪವೆನ್ನುವಂತೆ ದೂರವಿಟ್ಟಿದ್ದ ವಡ್ಡರ್ಸೆ ಮತ್ತು ಅವರ ಶಿಷ್ಯೋತ್ತಮನೆಂದು ಹೇಳಿಕೊಂಡು ಅಧಿಕಾರದ ಭಾಗವಾದ ಮುಖ್ಯಮಂತ್ರಿ ಸಲಹೆಗಾರ ದಿನೇಶ್ ಅಮೀನ್ ಮಟ್ಟು – ಇವರಿಬ್ಬರು ನನಗಂತೂ ಎರಡು ಧ್ರುವಗಳಂತೆ ಕಾಣಿಸುತ್ತಾರೆ. ಅಧಿಕಾರವನ್ನು ದೂರ ಇಟ್ಟು, ತಾನು ನಂಬಿದ ತತ್ತ್ವಾದರ್ಶಗಳಿಗೆ ತಲೆಬಾಗಿ ಬಾಳಿದ ವಡ್ಡರ್ಸೆ ಮತ್ತು ಅಧಿಕಾರವನ್ನು ಅಪ್ಪಿಕೊಂಡು ಒಪ್ಪಿಕೊಂಡು ತನ್ನೆಲ್ಲ ಆದರ್ಶಗಳನ್ನು ಮಣ್ಣುಪಾಲು ಮಾಡಿರುವ ಸಲಹೆಗಾರರು – ಸಿಟ್ಟಿನ ವಿಷಯವೊಂದನ್ನು ಬಿಟ್ಟು ಮಿಕ್ಕ ಯಾವ ಸಂಗತಿಯಲ್ಲೂ ಹೋಲಿಕೆಗೆ ಅರ್ಹರಲ್ಲ. ಮೂರು ವರ್ಷಗಳ ಹಿಂದೆ ದಿನೇಶ್ ಅಮೀನ್, ಮಧ್ಯಮ ವರ್ಗದವರನ್ನು ಸಾರ್ವಜನಿಕವಾಗಿ “ಷಂಡರು” ಎಂದಿದ್ದರು. ವಿವೇಕಾನಂದರ ಕುರಿತು ತೀರಾ ಕೆಳಮಟ್ಟದ ಲೇಖನ ಬರೆದಿದ್ದರು. ಆ ಲೇಖನದ ಬಗ್ಗೆ ವಿಮರ್ಶಾತ್ಮಕ ಭಿನ್ನಾಭಿಪ್ರಾಯಗಳು ಬಂದಾಗ ಐದಾರು ಜನರನ್ನು ಪೊಲೀಸ್ ಕೇಸ್ ಜಡಿದು ಹಣಿಯಲು ನೋಡಿದರು. ಅದೇ ವಿಷಯದಲ್ಲಿ ಟಿವಿ ಚರ್ಚೆ ನಡೆದಾಗ ಹಾರಾಡಿ ಗದ್ದಲವೆಬ್ಬಿಸಿದರು. ಕುವೆಂಪು ವಿವಿಯಲ್ಲಿ ಪ್ರಾರಂಭವಾಗಿದ್ದ ಸ್ಥಳೀಯ ಸಂಸ್ಕøತಿಗಳ ಅಧ್ಯಯನ ಕೇಂದ್ರವನ್ನು ಮುಚ್ಚಿಸುವ ಎಲ್ಲ ಪ್ರಯತ್ನಗಳಿಗೂ ಬೆಂಬಲವಾಗಿ ನಿಂತರು. ಡಾ. ಎಂ.ಎಂ. ಕಲ್ಬುರ್ಗಿಯವರ ಕೊಲೆ ನಡೆದಾಗ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸಿದರು. ತಾನೇ ಹಿಟ್ ಲಿಸ್ಟ್ ಒಂದನ್ನು ತಯಾರಿಸಿ ರಾಷ್ಟ್ರಮಟ್ಟದಲ್ಲಿ ಮಿಂಚುವ ಪ್ರಯತ್ನ ಮಾಡಿದರು. ಹೆಂಗಸರ ಬಗ್ಗೆ ಅಶ್ಲೀಲವಾಗಿ ಬರೆದುಕೊಳ್ಳುವ ಫೇಸ್‍ಬುಕ್ ಪ್ರವೀಣರನ್ನು ತನ್ನ ಮೆಚ್ಚಿನ ಸ್ನೇಹಿತರೆಂದು ಕೊಂಡಾಡಿದರು. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಿನಾಕಾರಣ ಮುಸ್ಲಿಮರ ಬಂಧನವಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟು ಸರಕಾರಕ್ಕೆ ಮುಜುಗರ ತಂದರು. ಇನ್ನು ವೈಯಕ್ತಿಕವಾಗಿ ಇವರು ಯಾರನ್ನೆಲ್ಲ ಟಾರ್ಗೆಟ್ ಮಾಡಿ ಕಾಡಿದರು, ಎಂತೆಂಥ ಕೊಳಕು ಭಾಷೆಯಲ್ಲಿ ಬೈದರು, ಹೇಗೆ ತುಚ್ಛೀಕರಿಸಿ ಮಾತಾಡಿದರು ಎಂಬುದೆಲ್ಲ ಇಂದಿನ ವಿದ್ಯುನ್ಮಾನ ಯುಗದಲ್ಲಿ ಸರ್ವರಿಗೂ ಢಾಳಾಗಿ ಕಾಣಿಸುತ್ತವೆ ಎನ್ನುವುದೊಂದು ಸಂತೋಷದ ಸಂಗತಿ.

ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರ ಒಂದೆರಡು ಪ್ರಕರಣಗಳನ್ನಷ್ಟೆ ಇಲ್ಲಿ ವಿವರಿಸುತ್ತೇನೆ. ಮೊದಲನೆಯದ್ದು ಮುಂಗಾರು ಪತ್ರಿಕೆಯಲ್ಲಿ ಮೂವತ್ತು ವರ್ಷಗಳ ಹಿಂದೆ ಪ್ರಕಟವಾಗಿದ್ದ ಅಬಕಾರಿ ಅಧಿಕಾರಿಗಳ ಕುರಿತ ವರದಿಗೆ ಸಂಬಂಧಪಟ್ಟಿದ್ದು. ದಿನೇಶ್ ಅಮೀನ್ ಮಟ್ಟು ಅವರು ಮುಂಗಾರು ಪತ್ರಿಕೆಯಲ್ಲಿದ್ದಾಗ ವಡ್ಡರ್ಸೆಯವರ ಕಣ್ಣೆವೆ ತಪ್ಪಿಸಿ ವರದಿಯೊಂದನ್ನು (16 ಆಗಸ್ಟ್ 1986) ಪ್ರಕಟಿಸಿದ್ದರು. ಅದು ಅಬಕಾರಿ ಅಧಿಕಾರಿಗಳ ವಿರುದ್ಧವಾಗಿದ್ದ ವರದಿ. ಮುಂಗಾರು ಪತ್ರಿಕೆಗೆ ಕೆಲವು ಹೆಂಡದ ದೊರೆಗಳ ಸಹಾಯಹಸ್ತವೂ ಇದ್ದದ್ದರಿಂದ ವರದಿ ವಡ್ಡರ್ಸೆಯವರನ್ನು ಕೆರಳಿಸಿತು ಎನ್ನುವುದು ದಿನೇಶರ ವಿಶ್ಲೇಷಣೆ. ವರದಿ ಪ್ರಕಟವಾದ ಮೇಲೆ ಹಲವು ದಿನಗಳು ಅವರಿಬ್ಬರ ನಡುವೆ ಮಾತುಕತೆ ಇರಲಿಲ್ಲವಂತೆ. “ಆಗ ಏನೋ ನನಗೂ ಕೋಪ ಬಂದಿತ್ತು. ಆದರೆ ಈಗ? ನಾವೂ ಸ್ವಲ್ಪ ಪ್ರಾಯೋಗಿಕವಾಗಿ ನೋಡಿ ವಡ್ಡರ್ಸೆಯವರನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಅನಿಸುತ್ತದೆ” – ಎಂದು ಆ ದಿನಗಳನ್ನು ನೆನೆಸಿಕೊಳ್ಳುತ್ತ ದಿನೇಶ್ ಬರೆದಿದ್ದಾರೆ. ಅಂದರೆ, ಪತ್ರಿಕೋದ್ಯಮವು ಲಾಬಿಗಳಿಗೆ ಬಲಿ ಬೀಳಬೇಕು. ತನ್ನನ್ನು ಸಾಕುತ್ತಿರುವ ದೊರೆಗಳ ಹಿತಾಸಕ್ತಿಗೆ ತಕ್ಕಂತೆ ವರದಿಗಳನ್ನು ಪ್ರಕಟಿಸಬೇಕು ಅಥವಾ ತಡೆ ಹಿಡಿಯಬೇಕು ಎಂದೇ ಅರ್ಥವಲ್ಲವೆ? ಮತ್ತು ಇಂಥ ವಶೀಲಿಗಳಿಗೆ ವಡ್ಡರ್ಸೆಯವರು ಆಗಲೇ ಬಲಿ ಬಿದ್ದಿದ್ದರು ಎಂದೂ ಅರ್ಥ ಬರುತ್ತದಲ್ಲವೆ? ಅಂದರೆ ಪತ್ರಿಕೋದ್ಯಮದ ಮೂಲತತ್ತ್ವಗಳನ್ನು ತಾನೀಗ ಗಾಳಿಗೆ ತೂರಿ ವ್ಯವಸ್ಥೆಯ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದೇನೆ ಮತ್ತು ವಡ್ಡರ್ಸೆಯವರು ಅಂಥ ಭ್ರಷ್ಟಾಚಾರವನ್ನು ಆಗಲೇ ಪಾಲಿಸುತ್ತಿದ್ದರು ಎಂದು ದಿನೇಶ್ ಹೇಳಿದಂತಾಯಿತು. ತನ್ನ ಭ್ರಷ್ಟತೆಗೆ ಸಮರ್ಥನೆ ಕೊಡುವ ಭರದಲ್ಲಿ ವಡ್ಡರ್ಸೆಯವರಿಗೂ ಕಳಂಕ ಮೆತ್ತಿದಂತಾಯಿತು! ತಮಾಷೆಯೆಂದರೆ ದಿನೇಶ್ ಅವರು 1989ರ ನಂತರ ಎರಡೂವರೆ ದಶಕಗಳ ಕಾಲ ಕೆಲಸ ಮಾಡಿದ “ವಿಶ್ವಾಸಾರ್ಹ” ಪತ್ರಿಕೆಯೂ ಹೆಂಡದ ದೊರೆಗಳ ಬೆಂಬಲದಿಂದಲೇ ನಡೆಯುತ್ತಿದ್ದದ್ದು! ಅಂಥ ಪತ್ರಿಕೆಗೆ ಕೆಲಸ ಮಾಡಲು ದಿನೇಶರಿಗೆ ಯಾವ ನೈತಿಕತೆಯೂ ಅಡ್ಡ ಬರಲಿಲ್ಲ! ಮತ್ತು ಅವರು ಕೆಲಸ ಮಾಡಿದ ಪತ್ರಿಕೆ ಆ ಕಾಲದ ಅತ್ಯಂತ ನಿರ್ಭೀತ ಪತ್ರಕರ್ತರಾಗಿದ್ದ ವಡ್ಡರ್ಸೆ, ಪಿ.ಆರ್. ರಾಮಯ್ಯ ಮುಂತಾದವರನ್ನೂ ಅವರು ನಡೆಸುತ್ತಿದ್ದ ಮುಂಗಾರು, ತಾಯಿನಾಡು-ನಂಥ ಪತ್ರಿಕೆಗಳನ್ನೂ ಕತ್ತು ಹಿಸುಕಿ ಸಾಯಿಸಿ ಏಕಚಕ್ರಾಧಿಪತ್ಯವನ್ನು ಸ್ಥಾಪಿಸಿತು. ಮುಂಗಾರು ಪತ್ರಿಕೆಯಲ್ಲಿ ಕಡಿಮೆ ಸಂಬಳಕ್ಕೆ ಮತ್ತು ಕೆಲವೊಮ್ಮೆ ಸಂಬಳವಿಲ್ಲದೆ ದುಡಿಯುತ್ತಿದ್ದ ಪ್ರಾಮಾಣಿಕ ಪತ್ರಕರ್ತರು ಕಾಲದ ಅಲೆಗೆ ತಕ್ಕಂತೆ ಬದಲಾಗಿ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದರು. ಪ್ರಾಮಾಣಿಕತೆಯನ್ನು ಗಂಟು ಕಟ್ಟಿ ಒಗೆದು ತಮ್ಮನ್ನು ಮಾರಿಕೊಂಡು ಲಕ್ಷಾಂತರ ರುಪಾಯಿಗಳ ಸಾಮ್ರಾಜ್ಯ ಕಟ್ಟಿಕೊಂಡರು. ಮತ್ತು ಇಂಥವರೆಲ್ಲ ವಡ್ಡರ್ಸೆಯವರನ್ನು ತಮ್ಮ ಆದರ್ಶವೆಂದು ಹೇಳುತ್ತಾ ಬಂದದ್ದು ಭ್ರಷ್ಟಾಚಾರದ ಕೂಪವಾದ ಸರಕಾರಿ ಕಚೇರಿಗಳಲ್ಲಿ ಗಾಂಧಿಯನ್ನು ಮೊಳೆ ಹೊಡೆದು ತೂಗಾಡಿಸಿದಷ್ಟೇ ದೊಡ್ಡ ವಿಪರ್ಯಾಸ!

ಎರಡನೆಯದಾಗಿ, ದಿನೇಶ್ ಅವರ ವೈಯಕ್ತಿಕ ದಾಳಿಗಳು ಯಾವ ಮಟ್ಟಕ್ಕೆ ಹೋಗುತ್ತವೆ ಎಂಬುದಕ್ಕೊಂದು ಸಣ್ಣ ನಿದರ್ಶನ ನೋಡಿ: (1) “2012ರ ಜನವರಿ 19ರಂದು ವಿವೇಕಾನಂದರ ಬಗ್ಗೆ ನಾನು ಬರೆದ ಅಂಕಣದ ನಂತರ ಎಲ್ಲವೂ ಬದಲಾಗಿ ಹೋಯಿತು. ಇವೆಲ್ಲವನ್ನೂ ಪ್ರಾರಂಭಿಸಿದ್ದು, ಪ್ರಚೋದಿಸಿದ್ದು, ಸಂಚನ್ನು ಹೆಣೆದಿದ್ದು ಈಗ ರೇಪಿಸ್ಟ್ ಸ್ವಾಮಿಗಳು, ಕೊಲೆಗಡುಕರನ್ನು ಹುಡುಕಿಕೊಂಡು ಹೋಗಿ ಬೆಂಬಲಿಸುತ್ತಾ ಸುಳ್ಳು ಬೊಗಳುತ್ತಾ ಅಂಡಲೆಯುತ್ತಿರುವ ವಕ್ರಬುದ್ಧಿಯ ಸುಳ್ಳುಕೋರ…” (2) ನನ್ನನ್ನು ವಿರೋಧಿಸುತ್ತಿರುವವರ ಗ್ಯಾಂಗ್‍ಗೆ ಒಬ್ಬ ಲೀಡರ್ ಇದ್ದಾನೆ. ಮನೆಯಲ್ಲಿ ಅಂಗವಿಕಲೆ ಹೆಂಡತಿಯನ್ನು ಇಟ್ಟುಕೊಂಡು ಊರಿನವರ ಬೋಳುತಲೆಗಳಲ್ಲಿ ಕೂದಲು ಹುಡುಕುತ್ತಿರುವ ಆತ್ಮವಂಚಕ…” – ಇಂಥ ಹಲವು ಸಾಲುಗಳನ್ನು ದಿನೇಶರ ಬರಹಗಳಿಂದ ಹೆಕ್ಕಿ ಕೊಡಬಹುದಾದರೂ ಅವೆಲ್ಲ ಇಲ್ಲಿ ಅನಗತ್ಯ. ಸ್ಥಾಲೀಪುಲಕ ನ್ಯಾಯದಂತೆ ಒಂದೆರಡು ಉದಾಹರಣೆಗಳನ್ನು ನೋಡಿಯೇ ಇವರ ಬರಹದ ಮಾದರಿ ಹೇಗಿರುತ್ತದೆ ಎಂದು ಊಹಿಸಬಹುದು. ಪತ್ರಕರ್ತರಿಗೆ ಶುದ್ಧವಾದ ಅಂತಃಕರಣವಿರಬೇಕು. ತಾನು ಹೇಳುವುದನ್ನು ಎಲ್ಲ ಕೋನಗಳಿಂದ ಪರಿಶೀಲಿಸಿ ಸತ್ಯವನ್ನೇ ಹೇಳುತ್ತಿದ್ದೇನೆಯೇ ಎಂಬ ಎಚ್ಚರಿಕೆ ಇರಬೇಕು. ಯಾವುದೋ ಒಂದು ಸಿದ್ಧಾಂತಕ್ಕೆ ತೊಗಲು ಬಾವಲಿಯಂತೆ ನೇತು ಬೀಳದೆ ಸತ್ಯಕ್ಕೆ ಮಾತ್ರ ತಲೆ ಬಾಗುವ ವಿನಯವಂತಿಕೆ ಬೇಕು. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವಿಷಯವನ್ನು ಪ್ರಸ್ತುತ ಪಡಿಸುವಾಗ ಸ್ಥಿತಪ್ರಜ್ಞನ ಸಂಯಮ ಇರಬೇಕು. ಸಿಟ್ಟಿನ ಕೈಗೆ ಬುದ್ಧಿ ಕೊಡದೆ, ತಲೆಯನ್ನು ಕೆಂಡವಾಗಿಸಿಕೊಳ್ಳದೆ, ಸಮಚಿತ್ತದಿಂದ ಬರವಣಿಗೆಯಲ್ಲಿ ತೊಡಗಿಕೊಳ್ಳುವ ಸಹನಶೀಲತೆ ಬೇಕು. ಆದರೆ ದಿನೇಶ್ ಅಮೀನ್ ಅವರ ಬರಹಗಳನ್ನು ಓದುತ್ತ ಹೋದಾಗ ಎಲ್ಲೋ ಈ ವ್ಯಕ್ತಿ ಬಹಳ ಬೇಗ ತನ್ನ ಮನಸ್ಥಿತಿಯನ್ನು ಸೈತಾನನ ಕೈಗೆ ಒಪ್ಪಿಸಿ ಬಿಡುವಂತೆ ಕಾಣುತ್ತದೆ. ಯಾರೋ ಎಂದೋ ಒಂದು ಮಾತನ್ನು ಹೇಳಿದರೆಂದು ಇನ್ಯಾವುದೋ ಸಮಯದಲ್ಲಿ ತನ್ನ ದ್ವೇಷವನ್ನು ಹುಣ್ಣಿನ ರಸಿಕೆಯಂತೆ ಕಾರಿಕೊಳ್ಳುವ ಅವರ ಗುಣ, ಯಾವುದೇ ಕ್ಷೇತ್ರದಲ್ಲಾದರೂ, ಅತ್ಯಂತ ಅಪಾಯಕರ. ವ್ಯಕ್ತಿದ್ವೇಷವನ್ನು ಸಾಧಿಸದಿರುವುದು ಪತ್ರಿಕೋದ್ಯಮಿಗಿರಬೇಕಾದ ಮೊತ್ತ ಮೊದಲ ಅರ್ಹತೆ. ಆದರೆ ಆ ವಿಷಯದಲ್ಲಿಯೇ ದಿನೇಶ್ ಅವರು ಸೋತಿದ್ದಾರೆ ಅನ್ನಿಸುತ್ತದೆ. ನಾಗರಹಾವಿನಂತೆ ಹನ್ನೆರಡು ವರ್ಷಗಳ ಸೇಡನ್ನು ಹೊಟ್ಟೆಯೊಳಗಿಟ್ಟುಕೊಳ್ಳುವ ಈ ಬಗೆಯ ವ್ಯಕ್ತಿಗಳು ಅಧಿಕಾರದಲ್ಲಿದ್ದು, ಅರಸನ ಬಲಗೈ ಪಕ್ಕದಲ್ಲಿದ್ದರೆ ಎಂತೆಂಥ ಅನಾಹುತಗಳಿಗೆ ಕಾರಣೀಭೂತರಾಗಬಹುದು, ಅಲ್ಲವೆ?

ಬಹುಶಃ ಇವೆಲ್ಲ ದಿನೇಶ್ ಅಮೀನ್ ಅವರ ಮೂಲಭೂತ ಗುಣವೇ ಇರಬಹುದು. ಅವರೇ ಬರೆದುಕೊಂಡಿರುವಂತೆ, ಕೆಲವರು ಅವರ ಗುಣಧರ್ಮಗಳು ಮಾಧ್ಯಮ ಸಲಹೆಗಾರನಾದ ನಂತರ ಬದಲಾದವು ಎಂದು ತಿಳಿದಿದ್ದಾರೆ. ಆದರೆ ದಿನೇಶ್ ಅವರು ಹಲವು ದಶಕಗಳಿಂದಲೂ ಹೀಗೆಯೇ ಇದ್ದರೇನೋ! ಈ ವ್ಯಕ್ತಿ ಬಿಜೆಪಿಯನ್ನು ತನ್ನ ವೃತ್ತಿ ಜೀವನದ ಪ್ರಾರಂಭದಿಂದಲೂ ದ್ವೇಷಿಸುತ್ತಾ ಬಂದರಂತೆ. ಸೋನಿಯಾ ಮತ್ತು ಮೋದಿ ನಡುವೆ ತನ್ನ ಆಯ್ಕೆ ಸೋನಿಯಾ ಎಂದು ಯಾವ ಲಜ್ಜೆಯೂ ಇಲ್ಲದೆ ಅವರು ಒಪ್ಪಿಕೊಳ್ಳಬಲ್ಲರು. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತನ್ನ ಆಯ್ಕೆ ಕಾಂಗ್ರೆಸ್ಸೇ ಆಗಿರುತ್ತದೆ ಎಂದು ಹೆಮ್ಮೆಯಿಂದ ಎದೆ ತಟ್ಟಿಕೊಳ್ಳಬಲ್ಲರು. ಜವಾಬ್ದಾರಿಯುತ ಪತ್ರಕರ್ತನೊಬ್ಬ ಇಷ್ಟೊಂದು ಸ್ಪಷ್ಟವಾದ ರಾಜಕೀಯ ನಿಲುವು ತಳೆದಿರುವುದು ಒಳ್ಳೆಯ ಲಕ್ಷಣವೇನೂ ಅಲ್ಲ. ನಿಜವಾದ ಪತ್ರಕರ್ತ ಯಾವುದೇ ಪಕ್ಷಕ್ಕೆ ಅಥವಾ ವ್ಯಕ್ತಿಗೆ ನಿಷ್ಠನಾಗಿರಬಾರದು. ಆತ ಸದಾ ಸತ್ಯಕ್ಕೆ ಮಾತ್ರ ನಿಷ್ಠನಾಗಿರಬೇಕು. ಯಾಕೆಂದರೆ ಯಾವ ರಾಜಕೀಯ ಪಕ್ಷ ಅಥವಾ ವ್ಯಕ್ತಿಯೂ ನಿರಂತರವಾಗಿ ಸತ್ಯಮಾರ್ಗದಲ್ಲೇ ನಡೆಯುತ್ತದೆ; ಸರಿಯಾದ್ದನ್ನೇ ಮಾಡುತ್ತದೆ ಎಂದು ನಂಬುವಂತಿಲ್ಲ. ಹಾಗಾಗಿ ಪಕ್ಷ/ವ್ಯಕ್ತಿಗಳನ್ನು ಬೆಂಬಲಿಸುವ ಮತ್ತು ಚುಚ್ಚಿ ಎಚ್ಚರಿಸುವ ಎರಡೂ ಬಗೆಯ ಸ್ವಾತಂತ್ರ್ಯಗಳನ್ನು ಪತ್ರಕರ್ತನಾದವನು ಕಾಯ್ದಿಟ್ಟುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಆತ ಬಾಲಬಡುಕನಾಗುತ್ತಾನೆ; ಕುರುಡು ಭಕ್ತನಾಗುತ್ತಾನೆ. ತನ್ನ ಜೀವನವನ್ನು ಒಂದೇ ಗೂಟ, ಒಂದೇ ಹಗ್ಗಕ್ಕೆ ಸಮರ್ಪಿಸಿಕೊಂಡ ಹಸುವಿನ ಪ್ರಪಂಚ ಜ್ಞಾನ ಎಷ್ಟಿರಬಹುದು? ಹಾಗಾಗಿ ತಾನು ಸೋನಿಯಾ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ನಿಷ್ಠ ಎಂದು ಹೇಳಿಕೊಳ್ಳುವಾಗಲೇ ದಿನೇಶರು ತನ್ನ ವಿಕೆಟ್ ಕಳೆದುಕೊಂಡರು. ಅವರು ತಾನು ಮೋದಿ ಮತ್ತು ಬಿಜೆಪಿಯ ನಿಷ್ಠಾವಂತನೆಂದು ಹೇಳಿಕೊಂಡಿದ್ದರೂ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುತ್ತಿರಲಿಲ್ಲ. ಆದರೆ ಹೀಗೆ ತನ್ನನ್ನು ತಾನು ಒಂದು ಪಕ್ಷ/ಸಿದ್ಧಾಂತಕ್ಕೆ ಸಮರ್ಪಿಸಿಕೊಳ್ಳುವುದು ಪತ್ರಕರ್ತನ ಹೆಚ್ಚುಗಾರಿಕೆ ಎಂದು ಅವರು ತಿಳಿದಿರುವುದರಿಂದಲೇ ಅವರಿಗೆ ಒಂದಾನೊಂದು ಕಾಲದಲ್ಲಿ ಬಿಜೆಪಿಯನ್ನು ಟೀಕಿಸಿ ಬರೆದು ಈಗ ಅದೇ ಪಕ್ಷದಿಂದ ಸಂಸದನಾಗಿರುವವರ ನಡೆ ತಪ್ಪು ಅನ್ನಿಸುತ್ತದೆ.

ದಿನೇಶರ ಈ ಬಗೆಯ ವ್ಯಕ್ತಿತ್ವಕ್ಕೆ ಮುಂಗಾರು ಪತ್ರಿಕೆ ಮತ್ತು ಅವರ ಬಾಸ್ ಆಗಿದ್ದ ವಡ್ಡರ್ಸೆಯವರ ಪ್ರಭಾವವೂ ಕಾರಣವಾಗಿರಲು ಸಾಧ್ಯವಿದೆ. ಕಮ್ಯುನಿಸ್ಟ್ ಆಗಿದ್ದ, ಲೋಹಿಯಾ ಚಿಂತನೆಗಳನ್ನು ತನಗೆ ಬೇಕೆಂದಂತೆ ಬಳಸಿಕೊಳ್ಳುತ್ತಿದ್ದ ಮತ್ತು ಎಲ್ಲ ದಲಿತಪರ ಚಿಂತನೆಗಳನ್ನು ಅಂಬೇಡ್ಕರ್ ದೃಷ್ಟಿಯಲ್ಲೇ ರೂಪಿಸಿಕೊಂಡಿದ್ದ ವಡ್ಡರ್ಸೆ ಶೆಟ್ಟರು ಈ ಮೇಲೆ ಹೇಳಿದಂತೆ ತನ್ನ ಸಹೋದ್ಯೋಗಿಗಳ ಓದು-ಅಧ್ಯಯನಗಳನ್ನು ಕೂಡ ನಿಯಂತ್ರಿಸಿದರು. ತನ್ನ ಪತ್ರಿಕೆಯಲ್ಲಿ ಇಂಥಾದ್ದೇ ಬರಬೇಕು; ಪತ್ರಕರ್ತರು ಹೀಗೆಯೇ ಬರೆಯಬೇಕು ಎಂಬ ಸರ್ವಾಧಿಕಾರಿಯ ಶಿಸ್ತಿನಿಂದ ಕೆಲಸ ತೆಗೆದರು. ಇದು ಪತ್ರಿಕೋದ್ಯಮದ ಆರಂಭಘಟ್ಟದಲ್ಲಿದ್ದ ದಿನೇಶ್‍ರಿಗೊಂದು ಅಚ್ಚುಕಟ್ಟಾದ ಕಡಿವಾಣ ತೊಡಿಸಿತು. ತಾನು ಬಯಸಿದ್ದನ್ನು ಮಾತ್ರ ನೋಡುವ; ಉಳಿದೆಲ್ಲಕ್ಕೂ ಕುರುಡಾಗಿರುವ ಸೀಮಿತ ದೃಷ್ಟಿಕೋನವನ್ನು ದಯಪಾಲಿಸಿತು. ನಂತರದ ದಿನಗಳಲ್ಲಿ ಕೆಲಸ ಮಾಡಿದ “ವಿಶ್ವಾಸಾರ್ಹ” ಪತ್ರಿಕೆಯ ಮನಸ್ಥಿತಿಯೂ ಅದೇ ಇದ್ದದ್ದರಿಂದ ಅವರಿಗೆ ತಾನು ತಪ್ಪು ದಾರಿಯಲ್ಲಿದ್ದೇನೆಂಬ ಎಚ್ಚರ ಮೂಡಲಿಲ್ಲ. “ಹಯವದನ” ನಾಟಕದಲ್ಲಿ ಪದ್ಮಿನಿ ಹೇಳುತ್ತಾಳಲ್ಲ- ದಾರಿ ತಪ್ಪಿದೆ; ಮುಂದೆ ದಾರಿ ಹೇಳುತ್ತ ಹೋದವರೆಲ್ಲರೂ ಆ ತಪ್ಪಿದ ದಾರಿ ಸರಿಯಾಗದಂತೆ ನೋಡಿಕೊಂಡರು, ಎಂದು. ಹಾಗಾಯಿತು. ಒಬ್ಬ ಕೆಟ್ಟ ವ್ಯಕ್ತಿ ಕೂಡ ಜಗತ್ತಿಗೆ ಕೆಟ್ಟತನಕ್ಕೆ ಒಂದು ಒಳ್ಳೆಯ ಉದಾಹರಣೆಯಾಗಿ ಉಪಯೋಗಕ್ಕೆ ಬರುತ್ತಾನಂತೆ. ಹಾಗೆ ದಿನೇಶ್ ಅವರಿಂದ ಪತ್ರಕರ್ತರು ಕಲಿಯಲೇಬೇಕಾದ ಎರಡು ಬಹುಮುಖ್ಯ ಪಾಠಗಳೆಂದರೆ: ಎಂದಿಗೂ ನಿನ್ನ ಆತ್ಮಸಾಕ್ಷಿಯನ್ನು ಕೊಂದುಕೊಂಡು ಬದುಕಬೇಡ ಮತ್ತು ತಲೆ ತುಂಬ ಸಿಟ್ಟು-ದ್ವೇಷಗಳಷ್ಟೇ ತುಂಬಿಕೊಂಡಿದ್ದಾಗ ದಯವಿಟ್ಟು ಕೈಗೆ ಪೆನ್ನು ಎತ್ತಿಕೊಳ್ಳಬೇಡ! ಈ ಎರಡೂ ಸಂದರ್ಭಗಳಲ್ಲಿ ಪತ್ರಕರ್ತ ತುಸುಮಟ್ಟಿಗೆ ದಿನೇಶ್ ಅಮೀನ್ ಆಗಿರುವ ಸಾಧ್ಯತೆ ಇದೆ!

ವ್ಯವಸ್ಥೆಯ ವಿರುದ್ಧ ಸದಾ ಹೋರಾಟವನ್ನು ಜಾರಿಯಲ್ಲಿಟ್ಟಿದ್ದ ವಡ್ಡರ್ಸೆಯವರ ಶಿಷ್ಯ ಎಂದು ದಿನೇಶ್‍ರನ್ನು ಕರೆಯುವುದು ಗತಿಸಿ ಹೋಗಿರುವ ಚೇತನಕ್ಕೆ ಮಾಡುವ ಅವಮಾನ. ಕಳೆದ ಮೂರು ವರ್ಷಗಳಲ್ಲಿ ದಿನೇಶ್ ಹಿಂದೂ, ಆರೆಸ್ಸೆಸ್, ಬಿಜೆಪಿ, ಬಲಪಂಥೀಯರು, ರಾಷ್ಟ್ರೀಯತೆಯ ಚಿಂತಕರು – ಇವರನ್ನೆಲ್ಲ ತನ್ನ ಪರಮ ವೈರಿಗಳೆಂದು ಭಾವಿಸಿ ಮಾತಿನ ಬಾಣವನ್ನು ಚುಚ್ಚುತ್ತ ಬಂದಿದ್ದಾರೆ. ಬಿಹಾರದಲ್ಲಿ ಬಿಜೆಪಿ ಸೋತ ಖುಷಿಯಲ್ಲಿ ಕಾಣೆ ಮೀನು ತಿನ್ನುತ್ತೇನೆಂದು ಬರೆದುಕೊಳ್ಳುವ ಮಟ್ಟಕ್ಕೆ ಈ “ಕ್ಯಾಬಿನೆಟ್ ದರ್ಜೆ”ಯ ಪತ್ರಕರ್ತ ಬಂದಿದ್ದಾರೆ! ರಾಜ್ಯದಲ್ಲಿ ಇದುವರೆಗೆ ಕಾಂಗ್ರೆಸ್‍ನಿಂದ ನಡೆದಿರುವ ಹಲವು ಅನ್ಯಾಯಗಳ ಬಗ್ಗೆ ಇವರದ್ದು ದಿವ್ಯಮೌನ! ಇಂದಿರಾ ಗಾಂಧಿಯಂಥ ಸರ್ವಾಧಿಕಾರಿ ಧೋರಣೆಯ ಪ್ರಧಾನಿಗೆ ಮಾಧ್ಯಮ ಸಲಹೆಗಾರರಾಗಿ ಶಾರದಾಪ್ರಸಾದ್ ಕಾಯ್ದುಕೊಂಡ ಘನತೆಯ ನೂರನೇ ಒಂದಂಶವನ್ನಾದರೂ ದಿನೇಶ್ ಅಮೀನ್ ಉಳಿಸಿಕೊಂಡಿದ್ದರೆ ಅವರು ವಡ್ಡರ್ಸೆಯವರ ಹೆಸರೆತ್ತುವುದನ್ನು ಒಪ್ಪಿಕೊಳ್ಳಬಹುದಿತ್ತು. ಪಿಂಗಳಕನಿಗೊಬ್ಬ ದಮನಕನಿದ್ದ. ಹಿಟ್ಲರ್ ಎಂಬ ಮಾನವಕುಲದ ಕ್ರೂರ ಸರ್ವಾಧಿಕಾರಿಗೂ ಅವನ ಪ್ರೊಪಗಾಂಡಗಳನ್ನು ದೇಶಕ್ಕೆ ಬಿತ್ತರಿಸಲು ಜೋಸೆಫ್ ಗೊಬೆಲ್ಸ್ ಎಂಬ ಸಲಹೆಗಾರನಿದ್ದ. ಇಂಥ ಮಂತ್ರಿಗಳನ್ನು ಕಟ್ಟಿಕೊಂಡು ಆ ರಾಜರು ಅದೆಂಥ ಪ್ರಪಾತಕ್ಕೆ ಬಿದ್ದರೆಂಬುದು ಇತಿಹಾಸ ಓದಿದವರಿಗೆ ಗೊತ್ತಿದೆ. ಹಿಂದೂಗಳ ಮೇಲೆ ನಿತ್ಯ ನಿರಂತರ ದ್ವೇಷದ ಹೊಗೆ ಕಾರುವ, ತನ್ನ ವಿರುದ್ಧ ಸೈದ್ಧಾಂತಿಕ ಚರ್ಚೆಗಿಳಿಯುವವರನ್ನು ಪೊಲೀಸ್ ವ್ಯವಸ್ಥೆ ಬಳಸಿ ಮೆತ್ತಗಾಗಿಸುವ, ಬುದ್ಧಿಜೀವಿಗಳ ಟೌನಾಲ್ ಹೋರಾಟಗಳಿಗೆ ಸದಾ ಬೆಂಬಲಿಗನಾಗಿರುವ, ಭಯೋತ್ಪಾದಕ ಮುಸ್ಲಿಮರನ್ನು ಅಮಾಯಕರೆಂದು ಹೇಳಿ ಸರಕಾರದ ದಾರಿ ತಪ್ಪಿಸುವ, ಕರ್ನಾಟಕದ ಮಧ್ಯಮ ವರ್ಗದ ಜನರನ್ನು ಷಂಡರೆನ್ನುವ ಘನತೆವೆತ್ತ ಸಲಹೆಗಾರರನ್ನು ಕೊರಳಿಗೆ ಕಟ್ಟಿಕೊಂಡಿರುವ ಸಿದ್ದರಾಮಯ್ಯನವರಿಗೆ ಅದ್ಯಾವ ಪೂರ್ವಜನ್ಮದ ಋಣ ತೀರಿಸುವುದಿದೆಯೋ ದೇವರೇ ಬಲ್ಲ! ಇಂಥ ರಾಜ-ಮಂತ್ರಿಗಳ ಬಗ್ಗೆ ಪಕ್ಷದ ಹೈಕಮಾಂಡ್ ಇನ್ನೂ ತುಟಿಪಿಟಕ್ಕೆನ್ನದೆ ಕೂತಿರುವುದು ಆಶ್ಚರ್ಯಕರ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!