ಕಥೆ

ಸಂಬಂಧಗಳು

ಬೆಳಗಿನ ಹತ್ತು ಗಂಟೆ.  ಮನೆಯೆಲ್ಲ ಗಲಿಬಿಲಿ ವಾತಾವರಣದಿಂದ ನಿಷ್ಯಬ್ಧದವಾಗಿದೆ.  ಒಂದು ಸ್ವಲ್ಪ  ಹೊತ್ತು ಸುದಾರಿಸಿಕೊಂಡು ಆಮೇಲೆ ಮಿಕ್ಕಿದ ಕೆಲಸ ಮಾಡಿಕೊಳ್ಳೋಣ.  ಟಿ.ವಿ ಹಾಕೋಣ ಅಂದರೆ ಕರೆಂಟು ಬೇರೆ ಇಲ್ಲ‌.  ಹಾಗೆ ಸೋಫಾಕ್ಕೆ ಒರಗಿ ಕಣ್ಣು ಮುಚ್ಚಿಕೊಳ್ಳುತ್ತಾಳೆ.

ಮನಸ್ಸು ಯೋಚಿಸಲು ಶುರುಮಾಡುತ್ತೆ.  ತನ್ನ ಗೆಳತಿಯ ನೆನಪು, ಹೇಗಿದ್ದವಳು ಹೇಗಾಗಿ ಹೋದಳು‌.  ಬಚ್ಚಲಲ್ಲಿ ಬಿದ್ದ ನೆವ‌, ಪ್ರಜ್ಞೆ ತಪ್ಪಿ ಬಿದ್ದವಳು ವರುಷವಾದರೂ ಸುಧಾರಿಸದೆ ಹಾಸಿಗೆ ಹಿಡಿದದ್ದು, ಮಗನ ಪರದಾಟ, ಗಂಡನೇ ಸೇವೆ ಮಾಡುವ ಪರಿಸ್ಥಿತಿ. ಮನೆಯವರೆಲ್ಲ ಅದೆಷ್ಟು ಸಂಕಠ ಅನುಭವಿಸುತ್ತಿದ್ದಾರೆ‌.  ಯಾಕೆ ಬಂತು ನೀನಗೀ ಪರಿಸ್ಥಿತಿ ಭವ್ಯ!  ಅವಳ ನೆನಪು ಕಣ್ಣು ಮಂಜಾಯಿತು.

ಆಂಟಿ, ಆಂಟಿ  ಯಾರೊ ಗೇಟು ಬಡಿತಾ ಕರಿತಿದ್ದಾರೆ,

ಯೋಚನೆಯಿಂದ ಹೊರಕ್ಕೆ ಬಂದು, ಹಾ ಬಂದೆ ಯಾರು? ‘ ಆಂಟಿ ನಾನು ಸಂಧ್ಯಾ’.  ಹೊ, ಏನಮ್ಮ ಏನು?   ‘ಏನಿಲ್ಲ ನಿನ್ನೆ ನಿಮ್ಮನೆಗೆ ರೀ-ಪಾಟ್ ಮಾಡೋಕೆ ನಸ೯ರಿಯವನು ಬಂದಿದ್ದನಲ್ಲ, ಅವನ ಫೋನ್ ನಂಬರು ಇದೆಯಾ?  ಅಮ್ಮ ಕೇಳಿಕೊಂಡು ಬಾ ಅಂದ್ರು.’  ಇಲ್ಲ ಕಣೆ, ಸುಮ್ನೆ ರೋಡಲ್ಲಿ ಗಿಡ ತೆಗೆದುಕೊಂಡು ಬಂದಿದ್ದ, ಕರೆದು ಪಾಟ್ ಸರಿಮಾಡಿಸಿದೆ. ಗೊತ್ತಿಲ್ಲ ನನಗೆ.  ಬಾಗಿಲು ಮುಂದೆ ಮಾಡಿ ತನ್ನ ಕೆಲಸದಲ್ಲಿ ಮಗ್ನವಾಗುತ್ತಾಳೆ.  ಸಂದರ್ಭ ಬಂದರೆ ಹೇಗೆ ಮಾತಾಡಿಸಿಕೊಂಡು ಬರುತ್ತಾರೆ, ಇಷ್ಟ ದಿನ ಬಿದ್ದು ಕೈ ಮುರಿದುಕೊಂಡು ಬ್ಯಾಂಡೇಜು ಹಾಕಿಕೊಂಡಿದ್ದು ನೋಡಿದರು ಒಂದಿನ ಏನು ಅಂತ ಇವಳಮ್ಮ ಮಾತಾಡಿಸಿಲ್ಲ. ಎಲ್ಲ ಕಾರ್ಯೆವಾಸು ಕತ್ತೆ ಕಾಲು.  ಈ ನಡೆ ಮನಸ್ಸಿಗೆ ಹಿಂಸೆ ಉಂಟುಮಾಡುತ್ತದೆ.

ಆಗಲೆ ಎರಡು ಗಂಟೆ.  ಇನ್ನೇನು  ಸ್ವಲ್ಪ ಹೊತ್ತು ಬಟ್ಟೆ ಹೊಲಿಯೋಣ, ಮಗಳು ಆಫೀಸಿಂದ ಬರೊ ಹೊತ್ತಿಗೆ ಸೀರೆ ಫಾಲ್ ಹಚ್ಚಿ ಬಿಡೋಣ‌.

ನೆನಪುಗಳ ಸರಪಣಿ ಮತ್ತೆ ಸುತ್ತಿಕೊಳ್ಳುತ್ತದೆ.

ಅಗಿನ್ನು ಇಪ್ಪತ್ತೊಂದರ ವಯಸ್ಸು, ಹೊಲಿಗೆ ಕಲಿತ ಹೊಸದರಲ್ಲಿ ಹೊಲಿಯಬೇಕೆನ್ನುವ  ಉತ್ಸಾಹ.  ರಮೇಶಣ್ಣ, ಅಕಸ್ಮಾತ್ ಪರಿಚಯವಾದ ವ್ಯಕ್ತಿ, ಉಡುಪಿಯವನಾದರು ಇರೋದು ಬಾಂಬೆಯಲ್ಲಿ.  ನಮ್ಮೂರಲ್ಲಿ ಅವನ ಅಕ್ಕನ ಮನೆ.  ನಮ್ಮಮ್ಮನನ್ನು ತನ್ನ ಹೆತ್ತವಳಂತೆ ಮಾತಾಡಿಸೊ ರೀತಿ, ಒಡಹುಟ್ಟಿದ ತಂಗಿಯರಂತೆ  ನಮ್ಮನ್ನೆಲ್ಲ ಕಂಡ ಆ ದಿನಗಳು ಒಮ್ಮೆ ಮುತ್ತಿಕೊಂಡವು ಮನದಲ್ಲಿ.  ಬೇಡ ಅಂದರೂ ಅವನಕ್ಕನ ಹತ್ತಿರ ಮುನ್ನೂರು ರೂಪಾಯಿ ಕೊಟ್ಟು ತೆಗೆದುಕೊಂಡ ಹೊಸ ಮಷಿನ್ನು, ಅದೆಷ್ಟು ಜೋಪಾನವಾಗಿ ಇದೆ ನನ್ನ ಜೊತೆ. ಅಜ್ಜಿಯ ಬ್ಲೌಸು ಕತ್ತರಿಸಲು ಹೋಗಿ ನಾಲ್ಕು ಪೀಸು ಮಾಡಿದ್ದು,ಅಪ್ಪನಿಗೆ ಅಂಡರವೇರ ನಾನೇ ಹೊಲಿಯುತ್ತೇನೆ ಹೇಳಿ, ಅದು ಹಾಕಲಾಗದೆ ಹಾಗೆ ಉಳಿದಿದ್ದು ಎಲ್ಲ ನೆನಪಾಗಿ ಒಬ್ಬಳೆ ಜೋರಾಗಿ ನಗುತ್ತಾಳೆ‌‌. ಆ ಮಷಿನ್ನು ಕಂಡರೆ ಅವಳಿಗೇನೊ ಸೆಂಟಿಮೆಂಟಲ್ ಫೀಲಿಂಗ್.

ಹಳೆಯ ವಸ್ತುಗಳು ಅವಳನ್ನು ಇನ್ನು ಬಿಟ್ಟಿಲ್ಲ.  ಅದರೊಂದಿಗೆ ಹಳೆಯ ನೆನಪುಗಳು ಗಟ್ಟಿಯಾಗಿ ಸುತ್ತಿಕೊಂಡಿವೆ. ಎಲ್ಲೊ ಓದಿದ ನೆನಪು, “ಕೆಲವೊಮ್ಮೆ ಜೀವವಿರುವ ಜೀವಿಗಿಂತ ಜೀವವಿಲ್ಲದ ವಸ್ತುಗಳು ಜೀವ ಕೊಡುತ್ತವೆ ಭಾವನೆಗಳ ನೆನಪುಗಳ ಹೊತ್ತು.”

ಮತ್ತದೆ ಗಡಿಯಾರ ಟಿಕ್ ಟಿಕ್ ಚಲನೆ ಇದ್ದಕ್ಕಿದ್ದಂತೆ ನಿಂತು ಹೋಗುತ್ತದೆ ಒಮ್ಮೊಮ್ಮೆ. ಆಕಡೆ ಈಕಡೆ ತಿರುಗಿಸಿ ಕಸರತ್ತು ಮಾಡಬೇಕು ಅದನ್ನು ಓಡಿಸೋದಕ್ಕೆ.  ಎಷ್ಷೊಂದು ವಷ೯ಆಯಿತು, ನನ್ನ ಹುಟ್ಟಿದ ಹಬ್ಬಕ್ಕೆ ಸಿಕ್ಕ ಉಡುಗೊರೆ.  ಆಫೀಸವರೆಲ್ಲ ಸೇರಿ ಕೊಟ್ಟಿದ್ದು. ಅವರಿಗೆ ನೆನಪಿದೆಯೊ ಇಲ್ಲವೋ ಆದರೆ ಅಭಿಮಾನದಿಂದ ಕೊಟ್ಟ ಉಡುಗೊರೆ ಇದುವರೆಗು ನನ್ನ ಜೊತೆ ಹಾಳಾಗದೆ, ಕಳೆದು ಹೋಗದೆ ಬೆನ್ನಿಗೆ ಅಂಟಿಕೊಂಡು ಬಂದಿದೆಯಲ್ಲ. ಮರೆಯೊಕ್ಕೆ ಆಗುತ್ತಾ?

“ರೀ ಬಾಯೋರೆ ಎಲ್ರಿ ತಗೋಂಡ್ರಿ ಸ್ವೆಟರ್ರೂ” ಕಾಮತ ಉಲಿದ ಮಾತು ಇನ್ನೂ ಮಾರ್ಧನಿಸುತ್ತದೆ ಕಿವಿಯಲ್ಲಿ. ಆಗಿನ ದಿನಗಳು ಕೆಲಸಕ್ಕೆ ಸೇರಿದ ಹೊಸತು. ಕಡಿಮೆ ಸಂಬಳ ಆದರೆ ಆಫೀಸ್ ವಾತಾವರಣ ಅದೆಷ್ಟು ಚೆನ್ನಾಗಿತ್ತು.  ನಾನೊಬ್ಬಳೆ ಹುಡುಗಿ. ಎಲ್ಲರೂ ಮೀಸೆ ಹೊತ್ತ ಗಂಡಸರೇ ಆದ್ರು ನನ್ನನ್ನು ಮಾತ್ರ ಅದೆಷ್ಟು ಪ್ರೀತಿಯಿಂದ ಕಾಣುತ್ತಿದ್ದರು. ಒಂದಿನಾನು ನಾನು ಬೇಜಾರು ಮಾಡಿಕೊಂಡಿದ್ದೇ ಇಲ್ಲ.  ಮನೆ ವಾತಾವರಣ ಅಲ್ಲಿ. ನಾನೊಬ್ಬಳು ಎಲ್ಲರಿಗೂ ಒಡಹುಟ್ಟಿದವಳಾಗಿದ್ದೆ. “ಸ್ವೆಟರ್ ಕಣ್ರೀ ಬಾಳಾ ಚೆನ್ನಾಗಿದೆ, ಒಳ್ಳೆ ಪಿಂಕ ಕಲರ್, ನನಗೆ ತುಂಬಾ ಇಷ್ಟ ಈ ಕಲರು.” ಮನಸ್ಸಿನಲ್ಲಿ ಸಣ್ಣಗೆ ಬಯ್ಯಿಕೊಂಡಿದ್ದೆ “ಎಯ್ ಹೋಗ್ರಿ ನೀವು ಈ ಮಾತು ಹೇಳೊ ಬದಲು…..”  ‘ರೀ ಗಾಯಿತ್ರಿಯವರೆ ಬನ್ನಿ ಇಲ್ಲಿ’ ಮ್ಯಾನೇಜರ್ ಕರೆದಾಗಲೆ ಮಾತಿಗೆ ಕಡಿವಾಣ ಬಿತ್ತು.  ಎಲ್ಲರೂ ತಮ್ಮ ಕೌಂಟರ ಸೇರಿಕೊಂಡರು.

ನನ್ನ ಪಿಚಕಾರಿ ಸಂಬಳದಲ್ಲೆ ತೆಗೆದುಕೊಂಡ ಸ್ವೆಟರ ಅದು. ಬೋಳು ಗೋಡೆಯ ಮೊಳೆಗೆ ತೂಗು ಹಾಕಿದ ಸ್ವೆಟರ ಮೊದಲಿನ ಪಿಂಕ್ ಕಲರ್ ಕಳೆದುಕೊಂಡು ನೇತಾಡುತ್ತಿತ್ತು ನನ್ನೊಂದಿಗೆ ಬೆನ್ನಟ್ಟಿ ಬಂದವಳು.  ಅದಕ್ಕೂ ಮೂವತ್ತು ವರ್ಷ ಆಗಿರಬೇಕು.  ಕಾಶ್ಮೀರಿ ಸ್ವೆಟರ್.  ಎಲ್ಲೂ ಒಂದು ನೂಲು ಈಚೆ ಬಂದಿಲ್ಲ.  ಒಂದು ಸಾರಿ ಹೊಲಿಗೆ ಹಾಕಿದ ನೆನಪು. ಚಳಿಯಲ್ಲಿ ಬೆಚ್ಚನೆಯ ಶಾಖ ಕೊಟ್ಟ ನನ್ನ ಪ್ರೀತಿಯ ಸಂಗಾತಿ!

ಅಯ್ಯೋ ಮರೆತೇ ಬಿಟ್ಟಿದ್ದೆ, ಹೊಸದಾಗಿ ಬಂದ ಬಾಡಿಗೆಯವರು ನನ್ನ ಹತ್ತಿರ ಟೇಬಲ್ ಫ್ಯಾನ ತಗೊಂಡೊಗಿದ್ರಲ್ಲ, ಎಷ್ಟು ದಿನಗಳಾಯಿತು? ಅವರು ಸೀಲಿಂಗ್ ಫ್ಯಾನ್ ಹಾಕಿಕೊಂಡಿದಾರಲ್ಲ ಮೊನ್ನೆನೆ, ಯಾಕೆ ಇನ್ನೂ ಕೊಟ್ಟಿಲ್ಲ?

 ಲತಾ ,ಇದಿರಾ ಮನೇಲಿ.” ಹೂ ಆಂಟಿ ಏನೇಳಿ?”  ಫ್ಯಾನ್ ಬೇಕಾ ನಿಮಗೆ? ಬೇರೆ ಹಾಕಿಸಿಕೊಂಡಿದಿರಿ ಅಲ್ವಾ?   “ಬೇಡಾ ಆಂಟಿ, ಅದೇನೊ ವೈಯರ ಬೇರೆ ಹಾಕಿಸಬೇಕು, run ಆಗಲ್ಲ ಹೇಳುತ್ತಿದ್ದರು ನಮ್ಮನೆಯವರು.”  ಓ! ಹೌದಾ ಸರಿ ಬಿಡಿ. ಒಳಗೊಳಗೆ ಅದೇನು ಮಾಡಿ ಬಿಟ್ಟರೊ ಏನೊ, ಅಪ್ಪ ರೇಡಿಯೊ ಮತ್ತೆ ಇದು ಎರಡೂ ತಂದು ಕೊಟ್ಟಿದ್ದು‌ ಅಷ್ಟು ಹಳೆದಾದರು ಚೆನ್ನಾಗಿ ಇತ್ತು, “ಮಗಳೆ ಈ ಮಾಡೆಲ್ ಗಟ್ಟಿ, ಪಕ್ಕನೆ ಹಾಳಾಗೊಲ್ಲ, ಅಂಗಡಿಯವನು ಹೇಳಿದಾ, ರೆಡಿಯೊ ಮೂರು ಬ್ಯಾಂಡಿಂದು, ಇಡೀ ಕರ್ನಾಟಕದ ಸ್ಟೇಷನ್ ಎಲ್ಲ ತಾಗುತ್ತದೆ.  ಹಾಳು ಮಡಿಕೊ ಬೇಡ. ಹುಡುಕಿ ತಂದಿರೋದು ಅಂತ ಹತ್ತಿರ  ಕೂಡಿಸಿಕೊಂಡು ವಣ೯ನೆ ಮಾಡಿದ ಪರಿ! ತಂಪಾದ ಗಾಳಿ ಬೀಸುವ , ಇಂಪಾದ ಹಾಡು ಕೇಳಿಸುವ ವಸ್ತುಗಳಲ್ಲಿ‌ ಸುಮಧುರವಾದ ನೆನಪಿದೆ.  ಬಾಡಿಗೆಯವರು ಬಂದ ಮೇಲೆ ಖುದ್ದಾಗಿ ನೀವೆ ಮುಂದೆ ಕೂತು ರಿಪೇರಿ ಮಾಡಿಸಿ ಅಂತ ತಿಳಿ ಹೇಳಬೇಕು.

‘ಅಮ್ಮ, ಏನು ಮಾಡ್ತಿದಿಯಾ, ಊಟ ಆಯ್ತಾ’ ಮಗಳ  ವಿಚಾರಣೆ ವಾಟ್ಸಾಪ್’ನಲ್ಲಿ.  ಗಡಿಬಿಡಿಯಿಂದ ಬಟ್ಟೆ ಸಂದಿಯಲ್ಲಿದ್ದ ಮೊಬೈಲ ಹುಡುಕಿ ಉತ್ತರಿಸಿ ನಿನ್ನದು ಆಯ್ತಾ ಅಂತ ಕೇಳುವಷ್ಟರಲ್ಲೆ ಕರೆಂಟ ಮತ್ತೆ ಕೈ ಕೊಡಬೇಕಾ? ಛೆ ಇವತ್ತು ಬೆಳಗಿಂದ ಬರಿ ಏನೇನೊ ಹಳೆಯ ಯೋಚನೆಯಲ್ಲೆ ನನ್ನ ಸಾಮ್ರಾಜ್ಯದಲ್ಲಿ ವಿಹರಿಸುತ್ತಿದ್ದೀನಲ್ಲ? ಪಾಪ ಬೆಳಿಗ್ಗೆ ಹೋಗುವಾಗ ನೆಗಡಿ ಬಂದಂತಿದೆ ಅಂದಿದ್ದಳು.  ಅರಿಶಿನ ಹಾಲು ಕುದಿಸಿಟ್ಟಿದ್ದೀನಿ, ಕುಡಿದುಕೊಂಡು ಹೋಗೆ ಹೇಳಿದ್ದು ಆಫೀಸಿಗೆ ಹೋಗೊ ಗಡಿಬಿಡಿಯಲ್ಲಿ ಮರೆತು ಹೋಗಿದ್ದಾಳೆ. ಅದೇನು ಮರವೊ ಈಗಿನ ಕಾಲದ ಹುಡುಗಿಯರಿಗೆ. ಸರಿ ಫೋನಾದರೂ ಮಾಡಿ ವಿಚಾರಿಸೋಣ.  ‘ಹಲೋ! ಅಮ್ಮ ಮೀಟಿಂಗು, ಆಮೇಲೆ ‘ಲೈನ್ ಕಟ್.  ಸರಿ ಮಾರಾಯ್ತಿ ನಿನ್ನ ಕೆಲಸ ನಿನಗೆ. ಆದರೂ ವಿಚಾರಿಸಲು ಸಿಕ್ಕಲಿಲ್ವಲ್ಲ, ಮುಖ ಪೆಚ್ಚಾಯಿತು‌.

ಇನ್ನು ಈ ಭೂಪ ಅದೆಷ್ಟು ಹೊತ್ತಿಗೆ ಬರುತ್ತಾನೊ, ಬರಿ ಯಾವಾಗಲೂ ಓದೋದು ಬರೆಯೋದರಲ್ಲೆ ಇರುತ್ತಾನೆ.  ಅಮ್ಮನ ಹತ್ತಿರ ಕೂತು ಸ್ವಲ್ಪ ಹೊತ್ತು ಮಾತಾಡಬೇಕು ಅನ್ನೊ ಪ್ರಜ್ಞೆ ಬೇಡವಾ‌.  ಬೆಳಗ್ಗೆ ಬೇಗ ತಿಂಡಿ ಮಾಡು ಅಂತ ರಾತ್ರಿನೇ ವಾರ್ನಿಂಗ್ ಮಾಡಿ ಬೆಳಿಗ್ಗೆ ಗಡಿಬಿಡಿಯಲ್ಲಿ ತಿಂದು ಹೋದವನು ಇಷ್ಟು ಹೊತ್ತಾದರೂ ಪತ್ತೆ ಇಲ್ಲ‌.  ಮಧ್ಯಾಹ್ನಕ್ಕೆ ಊಟನು ತೆಗೆದುಕೊಂಡು ಹೋಗಲಿಲ್ಲ. ಊಟಕ್ಕೆ ಬರಬಹುದು ಅಂತ ಆಡಿಗೆ ಬೇರೆ ಮಾಡಿಟ್ಟೆ‌.

ಆಫೀಸಿಗೆ ರಜೆ ಹಾಕಿಲ್ಲ ಅನಿಸುತ್ತೆ ಹಾಗೆ ಹೋಗಿರಬೇಕು. ಅಬ್ಬಾ ಅದೇನು ಗಡಿಬಿಡಿ ಜೀವನವೊ!  ಮಾತಾಡೋಕು ಸಮಯ ಮಾಡಿಕೊಳ್ಳಬೇಕು ಹೆತ್ತವರ ಜೊತೆಗೂ.

ಮಗಳು ನೋಡಿದರೆ “ಅಮ್ಮ ಏನಂತ ಮಾತಾಡೋದು, ಬರಿ ಅಡಿಗೆ ತಿಂಡಿ ಬಿಟ್ಟರೆ ಪಕ್ಕದ ಮನೆ ವಿಷಯ. ನೀನು ನಿನ್ನ ಗೆಳತಿಯರ ಹತ್ತಿರ ಹರಟೆ ಹೊಡಿ.  ಈಗ ಜನರೇಷನ್ ಗ್ಯಾಪ್, ಸುಮ್ಮನೆ ಅದು ಇದು ಏನು ಮಾತಾಡೋದು? ಬಾ ಬೇಜಾರು ಬಂದರೆ ಪಿಚ್ಚರ್’ಗೆ ಹೋಗೋಣ,ಕನ್ನಡ ಅಲ್ಲ ಹಿಂದಿ ಮೊದಲೇ ಹೇಳ್ತಿನಿ. ಯಾವುದಾದರೂ ಮಾಲ್’ಗೆ ಹೋಗೋಣ. ಅಲ್ಲೆ ಏನಾದರು ತಿಂದು ಬರೋಣ” ಇಂಥ ಒಕ್ಕಣೆ ಮಾತುಗಳು.

ಇನ್ನು ಮಗನೊ ಅಲ್ಲೊಂದು ಇಲ್ಲೊಂದು ಮಾತು, ಬರಿ ಮೂಡಿ ಮಹಾಷಯ.” I have no time”

ಎಂದು ತನ್ನ ರೂಮು ಸೇರಿಕೊಂಡರೆ ಆಯ್ತು ಮಾತಾಡೊ ಹಾಗಿಲ್ಲ.  ಆದರೂ ಇವಳಿಗಿಂತ ಎಷ್ಟೋ ವಾಸಿ, ಯಾವಾಗಲಾದರೂ ಉದುರಿಸುತ್ತಾನೆ ಮಾತಿನ ಮಾಣಿಕ್ಯ.  ಹತ್ತಿರ ಕೂತು ಮಾತಾಡಿದರೆ ಸಮಯ ಹೋಗಿದ್ದೆ ಗೊತ್ತಾಗೊಲ್ಲ ಅಪರೂಪಕ್ಕೊಮ್ಮೆ!

ಬೇಜಾರಾಗುತ್ತದೆ ಮನಸಿಗೆಲ್ಲ, ಈ ಸಂಬಂಧಗಳು ಎಷ್ಟು ಸಂಕುಚಿತವಾಗುತ್ತಿದೆ ದಿನ ದಿನ ಹೋದ ಹಾಗೆ.  ಒಟ್ಟಿಗೆ ಕುಳಿತು ಹರಟೋದು, ಊಟ ಮಾಡೋದು, ಎಲ್ಲಾದರು ಹೋಗಿಬರೋದು ಎಲ್ಲ ಅಪರೂಪವಾಗುತ್ತಿದೆಯಲ್ಲ.  ಯಾವಾಗ ನೋಡಿದರೂ ಕೆಲಸ, Friends, ಊರೂ ಸುತ್ತೋದು, meet ಆಗೋದು.  ಬರಿ ಮನಸ್ಸಿನಲ್ಲಿ ಹೆತ್ತವರ ಬಗ್ಗೆ ಪ್ರೀತಿ ಇದ್ದರೆ ಸಾಕಾ?  ಯಾವಾಗಲೂ ಜೊತೆಗಿರಬೇಕು, ಮಾತು, ಒಡನಾಟ ಬೇಕು ಅನ್ನುವ ಮನಸ್ಸು ದುಃಖ ಪಡುತ್ತೆ.  ಆದರೆ ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕು ಅನ್ನುವ ನಾಣನುಡಿ ರೂಢಿಯಲ್ಲಿ ತರೋದು ಬಹಳ ಕಷ್ಟ. ಆದರೂ ಅನಿವಾರ್ಯ ಈಗಿನ ಕಾಲಕ್ಕೆ.

ಕಣ್ಣ ಮುಂದಿರುವ ಹಳೆಯ ಗಡಿಯಾರ, ಸ್ವೆಟರ, ಕೆಲಸಕ್ಕೆ ಸೇರಿದ ಹೊಸದರಲ್ಲಿ ತೆಗೆದುಕೊಂಡ ಮೂವತ್ತು ವರ್ಷವಾದರೂ ಸುಸ್ತಿತಿಯಲ್ಲಿರುವ HMT ವಾಚು, ಹೊಲಿಗೆಯ ಮಷಿನ್ನು ಎಲ್ಲ ಜೀವಂತವಾಗಿ ಜೊತೆಗೆ ಕುಳಿತು ಮಾತಾಡುತ್ತಿರುವಂತೆ, ತನ್ನೊಂದಿಗೆ ಬಂದ ಗಳಿಗೆಗಳ ಗಟನೆಗಳ ನೆನಪಿಸಿ ನಗಿಸಿ ತನ್ನನ್ನು ಈಗಲೂ ಖುಷಿಯಿಂದ ಇರುವಂತೆ ನೋಡಿಕೊಳ್ಳುತ್ತಿವೆಯಲ್ಲ!  ಯಾರಿಗುಂಟು ಈ ಭಾಗ್ಯ.  “ಬೆಸುಗೆ, ಬೆಸುಗೆ ಜೀವನವೆಲ್ಲ ಸುಂದರ ಬೆಸುಗೆ……FM 92.7 ನಲ್ಲಿ ಸುಂದರ ಹಾಡು ನನ್ನ ಹಳೆಯ ಧ್ವನಿ ಪೆಟ್ಟಿಗೆಯಲ್ಲಿ!

“ಅಮ್ಮ ಬಾಗಿಲು ತೆಗಿ ಬೇಗ” ಗಡಿಬಿಡಿಯಿಂದ ಎದ್ದು ಹೋಗಿ ಬಾಗಿಲು ತೆಗೆದರೆ, ಚಳಿಯಿಂದ ನಡುಗುತ್ತಿದ್ದಾಳೆ ಮಗಳು.  ಅಮ್ಮ ಪರಮಿಷನ್ನು ಹಾಕಿ ಬಂದು ಬಿಟ್ಟೆ.  ತುಂಬಾ ಚಳಿ, ಆ ನಿನ್ನ ಹಳೆ ಸ್ವೆಟರ ಕೊಡು ಹಾಕಿ ಕೊಂಡು ಬೆಚ್ಚಗೆ ಮಲಗಿಕೊಳ್ಳುತ್ತೀನಿ. ಹಾಗೆ ಕಷಾಯ ಮಾಡಿಕೊಡು.  ಅಣ್ಣ ಬಂದನಾ?  ನನ್ನ ಎಬ್ಬಿಸ ಬೇಡ ಹೇಳು.  ನಿನ್ನೆ ರಾತ್ರಿನೂ ಮಾತಾಡೋಕೆ ಆಗಿಲ್ಲ, ಆಫೀಸು ಕೆಲಸ ಮಾಡುತ್ತಿದ್ದೆ. ನಾಳೆ ಬೆಳಿಗ್ಗೆ ಸಿಗುತ್ತೀನಿ ಹೇಳು” ಬಡ ಬಡ ಎಲ್ಲ ಹೇಳಿ ಸ್ವೆಟರ ಹಾಕಿ ಹಾಸಿಗೆ ಸೇರಿದಳು ಬಿಸಿ ಬಿಸಿ ಕಷಾಯ ಕಡಿದು!

ಮನಸ್ಸಿನಲ್ಲಿ ಇವಳಿಗೆ ಅದೇನೊ ಮಮತೆ ಉಕ್ಕಿ ಹರಿಯುತ್ತದೆ ಸ್ವೆಟರ ಮೇಲೆ.  ತನ್ನನ್ನು ಮಾತ್ರ ಅಲ್ಲದೆ ತನ್ನ ಮಗಳನ್ನೂ ಬೆಚ್ಚಗಿರಿಸುತ್ತಿದೆಯಲ್ಲ!

ಪಕ್ಕನೆ ಮಗಳು ಯಾವಾಗಲೊ ಹೇಳಿದ ಮಾತು ನೆನಪಿಗೆ ಬರುತ್ತದೆ ” ಅಮ್ಮ ನಿನ್ನ ಹತ್ತಿರ ಇರೋದು Antique piece ಗಳು. ನಿನ್ನ ನಂತರ ಇವುಗಳನ್ನೆಲ್ಲ ಜೋಪಾನವಾಗಿ ಎತ್ತಿಡುತ್ತೀನಿ. ಇವೆಲ್ಲ ಚಿಕ್ಕ ಚಿಕ್ಕ ವಸ್ತುಗಳು.  ಗುಜರಿಗೆ ಹಾಕಲ್ಲ ಅಥವಾ OLX ನಲ್ಲಿ ಮಾರೊಲ್ಲ.  ಹಾಗೆ ನಿನ್ನ ಮದುವೆ ಸೀರೆ. ಅದಂತೂ Fantastic.  ಅದಕ್ಕೆಲ್ಲ ಅದರ ವಯಸ್ಸಿನ ಬೋರ್ಡ್ ತಗಲಾಕಿ ನಾವಿಬ್ಬರೂ ಅದರಲ್ಲಿ ನಿನ್ನ ಕಾಣುತ್ತೀವಿ. ಯಾರಾದರು ಮನೆಗೆ ಬಂದಾಗ ತೋರಿಸುತ್ತೀನಿ” These are my moms memorable life partners.”

-ಸಂಗೀತಾ ಹೆಗಡೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!