ಕಥೆ

ದೇವರಾಗಿ ಬಂದ ಆ ಮಹಾನುಭಾವ!

ಅಂದು ಶನಿವಾರ.  ಮಧ್ಯಾಹ್ನ ಸುಮಾರು ಹನ್ನೊಂದು ಮೂವತ್ತು.  ಒಲೆ ಮೇಲಿಟ್ಟ ಕುಕ್ಕರ್ ಸೀಟಿ ಹಾಕಿದ ಸೌಂಡ್ ಕೇಳಿಸುತ್ತಿದೆ.  ಓ ಮೂರು ಸೌಂಡ್ ಆಯಿತು.  ಬೇಗ ಹೋಗಿ ಆರಿಸಬೇಕು.  ತರಾತುರಿಯಲ್ಲಿ ಮಕ್ಕಳಾ ಇಲ್ಲೆ ಆಟ ಆಡಿಕೊಂಡಿರಿ ಎಂದೆ. ಅವರಿಗೆ ಕೇಳಸಿತೊ ಇಲ್ಲವೊ ಗಮನಿಸಲು ಸಮಯವಿಲ್ಲ.  ಕುಕ್ಕರ್ ಸೀಟಿ ಎಳೀತಾ ಇದೆ ನನ್ನ ಗಮನ. ತರಾತುರಿಯಲ್ಲಿ ಒಳಗೆ ಹೋದೆ.  ಹಾಗೆ ತರಕಾರಿ ಬಟ್ಟಲಲ್ಲಿ ಸುರಿದು ಈಳಿಗೆ ಮಣೆ ತೆಗೆದುಕೊಂಡು ಎದುರು ಬಾಗಿಲಿಗೆ ಬಂದೆ.  ಬಂದಿರೊ ನೆಂಟರು ಹೊರಗಡೆ ಹೋದವರು ಬರುವುದರಲ್ಲಿ ಅಡಿಗೆ ಮಾಡುವ ಧಾವಂತ.

ಅದೊಂದು ಐದು ಮನೆಗಳಿರುವ ಮಧ್ಯೆ ವಿಶಾಲ ಚುಟ್ಟಿ ಅಂಗಳವಿರುವ ಪ್ರಶಾಂತವಾದ ಚಿಕ್ಕ ಬಾಡಿಗೆ ಮನೆ.  ನನ್ನ ಮಗಳು ಇವರ ಅಣ್ಣನ ಮಗ ಇಬ್ಬರೂ ಅದೇನೊ ಆಟ ಆಡಿಕೊಂಡಿದ್ದರು.  ಇವಳಿಗೆ ಎರಡೂವರೆ ವಷ೯.  ಅವನಿಗೆ ಐದು ವಷ೯ ಹರಿಹರದಲ್ಲಿರುವ ಪುಟಾಣಿ.  ಬೆಂಗಳೂರಿನ ಬೀದಿ ಏನು ಯಾವುದು ಗೊತ್ತಿಲ್ಲ.  ಇವಳೊ ಬಲು ಚೂಟಿ.

ಅರೆ!  ಇಬ್ಬರೂ ಕಾಣುತ್ತಿಲ್ಲವಲ್ಲ.  “ಏಯ್! ಎಲ್ಲಿದ್ದೀರೆ?” ಕರಿತಿದ್ದೀನಿ ನನ್ನ ಏರು ಧ್ವನಿಯಲ್ಲಿ.  ಎಲ್ಲರ ಮನೆ ಹೊಕ್ಕಿ ಬಂದಿದ್ದಾಯಿತು.  ರಸ್ತೆಗೆ ಬರಲು ಓಣಿಯಲ್ಲಿ ಸಾಗಬೇಕು ಓನರ್ ಮನೆ ಸೈಡಿಂದ.  ಹಿಂದೆ ನಮ್ಮ ವಠಾರ.  ರಸ್ತೆಯ ತುತ್ತ  ತುದಿ ಅಕ್ಕ ಪಕ್ಕ ಎಲ್ಲ ವಿಚಾರಿಸಿ ಆಯ್ತು. ತೆರೆದ ಬಾಗಿಲು ತೆರೆದೇ ಇದೆ.  ಅಡಿಗೆ ಮಾಡುವುದು ಮರೆತಿದೆ.  ದೇಹ ಮನಸ್ಸು ಕೈ ಕಾಲು ತನ್ನ ಸ್ವಾಧೀನ ಕಳೆದುಕೊಳ್ಳುವ ಹಂತ.  ಏನು ಮಾಡಬೇಕು ಬುದ್ಧಿ ಸೂಚಿಸುತ್ತಿಲ್ಲ.  ಮಕ್ಕಳಿಬ್ಬರೂ ನಾಪತ್ತೆ.

ಬೀದಿಯ ಜನರೆಲ್ಲರು ಇರೊ ಬರೊ ಕೆಲಸ ಕಾಯ೯ ಬಿಟ್ಟು ರಸ್ತೆಯಲ್ಲಿ ಜಮಾಯಿಸಿದ್ದಾರೆ.  ಒಬ್ಬೊಬ್ಬರ ಬಾಯಲ್ಲಿ ಒಂದೊಂದು ರೀತಿ ಸಾಂತ್ವನ, ಉಪದೇಶ, ಸಲಹೆ ಇತ್ಯಾದಿ.  ಎಲ್ಲದಕ್ಕೂ ನಾನೇ ಹೊಣೆ.  “ನಿಮ್ಮ ಮಗ ಇವಳೊಟ್ಟಿಗೆ ಆಟ ಆಡಿಕೊಂಡಿರಲಿ, ಬಿಟ್ಟೋಗಿ”  ಅಂತ ಹೆಬ್ಬಾತಿ೯ ಮಾತಾಡಿಟ್ಟುಕೊಂಡಿದ್ದೆ.  ಬೇಕಿತ್ತಾ ನನಗೀ ಉಸಾಬರಿ.

ಸರಿ ಎಲ್ಲರ ಸಲಹೆಯ ಮೇರೆಗೆ ಹನುಮಂತನಗರ ಪೋಲೀಸ್ ಸ್ಟೇಷನ್’ಗೆ ಕಂಪ್ಲೇಂಟ್  ಕೊಟ್ಟಿದ್ದಾಯಿತು.  ಆಗ ಸಮಯ ಒಂದು ಗಂಟೆ. ನಾವಿರೋದು ಅದೆ ಏರಿಯಾದಲ್ಲಾಗಿತ್ತು.  ಮಧ್ಯಾಹ್ನ ಎರಡೂವರೆ ಗಂಟೆಯಾಯಿತು.  ಹೊರಗೆ ಹೋದ ಓರಗಿತ್ತಿ ಭಾವ ಇಬ್ಬರೂ ಬಂದಾಯಿತು.  ಅಳುವೊಂದೆ ನಮ್ಮ ಸಂಗಾತಿ. ಮಕ್ಕಳು ಪತ್ತೆ ಇಲ್ಲ. ಪಾಪ! ಅಕ್ಕ ಪಕ್ಕದವರು ತಮಗೆ ಆದ ಕಡೆಯಲೆಲ್ಲ ಹುಡುಕಿದರು. ಗಂಡಸರಲ್ಲ.  ಅವರೆಲ್ಲ ಕೆಲಸಕ್ಕೆ ಹೋಗಿರ್ತಾರಲ್ಲ.  ಹೆಂಗಸರು ಮಕ್ಕಳು ಸೇರಿ ಹುಡುಕಿದ್ದು.  ಆಗಿನ್ನು ಮೊಬೈಲು ಇಲ್ಲ. ಲ್ಯಾಂಡ್’ಲೈನ್ ಅಲ್ಲೊಂದು ಇಲ್ಲೊಂದು.  ಓನರ್ ಮನೆ ಫೋನೆ ಗತಿ.  ಯಜಮಾನರಿಗೆ ಪೇಜರ್’ಗೆ ಮೆಸೇಜು ಕಳಿಸಿದ್ದಾಯಿತು. ಬಾವ ಯಾರದ್ದೊ ಸೈಕಲ್ನಲ್ಲಿ ಹುಡುಕಲು ಹೊರಟರು.

ಸಮಯ ಆರೂವರೆ ಗಂಟೆ.  ಬಸವನಗುಡಿ ಪೋಲೀಸ್ ಸ್ಟೇಷನ್ನಿನಿಂದ ಫೋನು “ಎರಡು ಮಕ್ಕಳು ಸಿಕ್ಕಿದ್ದಾರೆ.  ನಿಮ್ಮವರಾ ಬಂದು ಗುರುತಿಸಿ.”   ಹೋದರೆ ಅವನೊಬ್ಬನಿದ್ದಾನೆ ಅಲ್ಲಿ.  ಮಗಳು?  ಬನ್ನಿ, ದೇವರಂತೆ ನಮ್ಮ ಮಕ್ಕಳ ಕಾಪಾಡಿದ ಆ ಮಹಾನುಭಾವ ಅಲ್ಲೆ ಹತ್ತಿರದಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋದರು.  ಜೊತೆಗೆ ನಡೆದ ಕ್ಷಣದ ವಿವರಣೆ ಹೀಗಿತ್ತು.

ಅರೆ, ಹನ್ನೆರಡು ಗಂಟೆ ಸುಮಾರಿಗೆ ರಾಮಕೃಷ್ಣ ಆಶ್ರಮ ಸರ್ಕಲ್ಲಿನಲ್ಲಿ ದಾಟಿಸಿಬಿಟ್ಟ ಮಕ್ಕಳು ಮತ್ತೆ ತಮ್ಮ ಅಂಗಡಿ ಮುಂದೆ ಕಾಣಿಸಿಕೊಂಡಾಗ ಸಂಶಯ ಬಂದು ಮಕ್ಕಳನ್ನು ಕೇಳಲಾಗಿ ಏನೂ ಹೇಳಲು ಗೊತ್ತಾಗದೆ ಅಳುತ್ತಿರುವಾಗ ಬಸವನಗುಡಿ ಪೋಲೀಸರನ್ನು ಸಂಪರ್ಕಿಸಿದ್ದಾರೆ.

ಪಿಂಕ್ ಫ್ರಾಕಲ್ಲಿದ್ದ ನನ್ನ ಮಗಳು ಅಮ್ಮ ಅಂತ ಕೂಗಿಕೊಂಡು ಓಡಿ ಬಂದು ತಬ್ಬಿಕೊಂಡಾಗಿನ ಆ ಘಳಿಗೆ.  ಅಬ್ಬಾ! ಹೋದ ಜೀವ ಬಂದ ಹಾಗೆ ಆಯಿತು.  ಇರುವ ಒಬ್ಬಳು ಮಗಳು ಇಲ್ಲವಾಗಿನ ಕ್ಷಣ ಸ್ವತಃ ಅನುಭವಿಸಿಬಿಟ್ಟೆ.

ರಾತ್ರಿ ಎಂಟೂ ಮೂವತ್ತು ಯಜಮಾನರು ಬಂದಾಗ.  ಬಾವ ಗಲ್ಲಿ ಗಲ್ಲಿ ಸುತ್ತಿ ಪೋಲಿಸ್ ಸ್ಟೇಷನ್ನಲ್ಲಿ ಸುದ್ದಿ ತಿಳಿದು ಮನೆಗೆ ಬಂದಾಗ ಅದೆ ಹೊತ್ತು.  ಅದುವರೆಗೂ ಮಕ್ಕಳು ಸಿಕ್ಕ ಸಂತೋಷದಲ್ಲಿ ಮಕ್ಕಳನ್ನು ಏನೂ ಕೇಳಿರಲಿಲ್ಲ.  ಭಾವ ಕೂಡಿಸಿಕೊಂಡು ಕೇಳಿದರೆ “ಇಬ್ಬರೂ  ಸ್ಕೂಲ್ಗೆ (ಬೇಬಿಕೇರ್) ಹೋಗಿ ಗಾಂಧೀ ಬಜಾರೆಲ್ಲ ಸುತ್ತಾಡಿಕೊಂಡು ಅಂಕಲ್ ಮನೆಲಿ ಚಾಕಲೆಟ್ ತಿಂದ್ವಿ” ಸಂತೋಷದಿಂದ ಮಗಳ ಬಾಯಲ್ಲಿ ಲೊಚ ಲೊಚ ಮುದ್ದು ಮಾತು.  ಎಲ್ಲರ ಮೊಗದಲ್ಲಿ ನಗು.

ಮಾರನೆಯ ದಿನ ಹುಡುಗರನ್ನು ಮುಂದೆ ಬಿಟ್ಟು “ನಿನ್ನೆ ಹೋದ ದಾರಿಲಿ ಹೋಗಿ ನಮಗೂ ಗಾಂಧೀ ಬಜಾರು ತೋರಿಸಿ” ಅಂತ ಹೊರಟೆವು.  ಇಬ್ಬರೂ ಕೈ ಕೈ ಹಿಡಿದು ಅದೇನೋ ಘನಂದಾರಿ ಕೆಲಸ ಮಾಡಿದವರಂತೆ ಹಿಂದೆ ಆಗಾಗ ತಿರುಗಿ ನೋಡುತ್ತ ನಗುತ್ತ ಹೊರಟಿತು ಸವಾರಿ.  ರಾಮಕೃಷ್ಣ ಆಶ್ರಮ ಸರ್ಕಲ್ “ಇಲ್ಲಿ ಆ ಮಾಮ ನಮ್ಮನ್ನು ಕೈ ಹಿಡಿದು ದಾಟಿಸಿದರು.”  ಗಾಂಧೀ ಬಜಾರ  ಬಸ್ ಸ್ಟಾಪ್.  “ನಾವು ಇಲ್ಲಿ ಬಸ್ಸು ಹತ್ತಲು ಹೋದರೆ ಬಿಡ್ಲಿಲ್ಲ ಗೊತ್ತಾ?”  ಸರಿ ನಡೀರಿ.  “ಅಮ್ಮ ಈ ಅಜ್ಜಿ ಹತ್ತಿರ ಲಿಂಬೆ ಹಣ್ಣು ಈಸ್ಕೊಂಡೆ.”  ಸರಿ ನಡೀರಿ ಮುಂದೆ.   ಡಿವಿಜಿ ರಸ್ತೆ ಕಡೆ ತಿರುಗಿ ಬುಗೆಲ್ರಾಕ್ ಪಾರ್ಕ್ ರಸ್ತೆಯಲ್ಲಿ ತಿರುಗಿದ ಮಕ್ಕಳು  ಆ ಲೋಟಸ್ ಅಂಗಡಿಯವರ ಮನೆ ಮುಂದೆ ನಿಂತರು.  ಮಕ್ಕಳನ್ನು ಕಾಪಾಡಿದ ನಮ್ಮ ಪಾಲಿನ ದೇವರು ಅವರು. ಅವರನ್ನು ಪುನಃ ಮಾತನಾಡಿಸಿ sweet ಕೊಟ್ಟು ಧನ್ಯವಾದ ಹೇಳಿ ಬಂದೆವು.

ಆ ದೇವರು ದೊಡ್ಡವನಲ್ಲವೆ.  ಮತ್ತೆ ಆ ವ್ಯಕ್ತಿಯ ಕಣ್ಣಿಗೇ ಕಾಣಿಸಿದ್ದಾರೆ.  ಅದಿಲ್ಲವಾಗಿದ್ದರೆ?  ಮಕ್ಕಳು ಸಿಗದೆ ಇದ್ದರೆ ಹೇಗಿರುತ್ತಿತ್ತು ನಮ್ಮ ಸ್ಥಿತಿ.  ಮಕ್ಕಳ ಗತಿ ಏನಾಗಿರುತ್ತಿತ್ತೊ ಏನೊ.  ಊಹೆಗೂ ನಿಲುಕದು.  ಆದರೆ ಈಗ ಮಕ್ಕಳಿಬ್ಬರೂ ಬೆಳೆದು ದೊಡ್ಡವರಾಗಿ ಇಂಜಿನಿಯರಿಂಗ್ ಮುಗಿಸಿದ್ದಾರೆ.  ನಮ್ಮ ಕಣ್ಣ ಮುಂದೆ ನಗುತ್ತ ಸುಃಖವಾಗಿದ್ದಾರೆ.

ಮಕ್ಕಳನ್ನು ಕಳೆದುಕೊಂಡ ಹೆತ್ತವರ ಸಂಕಟ ಪೇಪರ್, ಟೀವಿ ವಾಹಿನಿಗಳಲ್ಲಿ ನೋಡಿದಾಗ ನೆನಪಿನ ಸರಣಿ ಬಿಚ್ಚಿಕೊಂಡು ಕಣ್ಣು ಮಂಜಾಗಿಸುತ್ತದೆ.  ಕಣ್ಣೆದುರಿಗೆ ಹುಟ್ಟಿ ಬೆಳೆದು ಇಲ್ಲವಾದಾಗಿನ ಸಂಕಟ, ಯಾತನೆ ಪದಗಳಲ್ಲಿ ವರ್ಣಿಸಲು ಅಸಾಧ್ಯ.  ಇದು ಯಾರಲ್ಲೂ ಹಂಚಿಕೊಳ್ಳಲಾಗದ ನೋವು.

ಇದು ನಡೆದು ಇಪ್ಪತ್ಮೂರು ವಷ೯ ಕಳೆದಿದೆ.  ಇನ್ನೂ ಕಣ್ಣ ಮುಂದೆ ಹಾಗೆಯೆ ಇದೆ.  ಯಾರನ್ನೇ ಆಗಲಿ ಕಳೆದುಕೊಳ್ಳುವ ಸಂದರ್ಭ ಯಾರಿಗೂ ಬರುವುದು ಬೇಡ.

-ಸಂಗೀತಾ ಕಲ್ಮನೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!