Featured ಪ್ರಚಲಿತ

ಬೇಕಿರುವುದು ಮೌಢ್ಯ ಪ್ರತಿಬಂಧಕವಲ್ಲ, ಜಾಢ್ಯ ಪ್ರತಿಬಂಧಕ..

ಕೇಂದ್ರದಲ್ಲಿ ಏಕರೂಪ ನಾಗರೀಕ ಸಂಹಿತೆ ಮತ್ತು ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆಯ ವಿಷಯ ಮತ್ತೆ ನಮ್ಮ ಟೈಮ್’ಲೈನಿನಲ್ಲಿ ಮೇಲಕ್ಕೆ ಬಂದಿದೆ.ಚುನಾವಣಾಪೂರ್ವದಲ್ಲೇ ಹೇಳಿದಂತೆ ಅಧಿಕಾರಕ್ಕೆ ಬಂದು ಎರಡು ವರ್ಷಗಳ ಬಳಿಕ ಕೇಂದ್ರ ಸರಕಾರ ಏಕರೂಪ ನಾಗರೀಕ ಸಂಹಿತೆಯ ಕುರಿತಾದ ಕೆಲಸಕ್ಕೆ ಕೈ ಹಾಕಿದ್ದರೆ, ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪವೇ ಇಲ್ಲದಿದ್ದರೂ ಕೆಲವು ಕಮ್ಯುನಿಸ್ಟ್ ಮನಸ್ಥಿತಿಯ ಬುದ್ಧಿಜೀವಿಗಳ ಒತ್ತಾಯಕ್ಕೆ ಕಟ್ಟು ಬಿದ್ದು ಒಲ್ಲದ ಮನಸಿನಿಂದ ಮೌಢ್ಯ ಪ್ರತಿಬಂದಕ ಕಾಯ್ದೆಯನ್ನು ಜಾರಿಗೆ ತರಲು ಸರಕಾರ ಪ್ರಯತ್ನಿಸುತ್ತಿದೆ. ಒಲ್ಲದ ಮನಸ್ಸಿನಿಂದ ಅಂತ ಯಾಕೆ ಹೇಳಿದೆ ಅಂದರೆ, ಒಂದೆರಡು ಮಂತ್ರಿಗಳನ್ನು ಬಿಟ್ಟರೆ ಉಳಿದವರೆಲ್ಲರೂ ಈ ಕಾಯ್ದೆಗೆ ವಿರುದ್ಧರಿರುವವರೇ.  ಡಿ.ಕೆ.ಶಿ.ಯಂತಹಾ ಮಂತ್ರಿ ಮಾಟ, ಮಂತ್ರ ಇತ್ಯಾದಿಗಳನ್ನು ಮಾಡಿಸುವಂತವರೇ.  ಶಾಸಕರಾಗಿ, ಸಚಿವರಾಗಿ ತಮ್ಮ ಕೊಠಡಿಯನ್ನು ಪ್ರವೇಶಿಸುವಾಗ ಖುರ್ಚಿಗೆ ಪೂಜೆ ಮಾಡಿಸಿಕೊಂಡವರೇ ಎಲ್ಲರೂ, ತಮ್ಮ ಗೃಹಗತಿಗೆ ತಕ್ಕಂತೆ ಪಾರಂಪರಿಕ ವಿಧಾನಸಭಾ ಕಟ್ಟಡದ ವಾಸ್ತುವನ್ನು ಬದಲಾಯಿಸಿಕೊಂಡವರೇ, ಮಳೆಗಾಗಿ ದೇವರ ಮೊರೆ ಹೋಗಿ ಮಳೆ ಬಂದಾಗ ಕಾವೇರಿಗೆ ಬಾಗಿನವನ್ನರ್ಪಿಸಿದವರೇ! ಹಾಗಿರುವಾಗ ಮೌಢ್ಯವನ್ನು ವಿರೋಧಿಸುವುದೆಲ್ಲಿಂದ ಬಂತು?

ನಾನೇ ಕಣ್ಣಾರೆ ಕಂಡ ಉದಾಹರಣೆಯೊಂದನ್ನು ನೀಡ ಬಯಸುತ್ತೇನೆ. ಈಗ್ಗೆ ಎರಡು ವರ್ಷಗಳ ಹಿಂದೆ ನಾನೊಂದು ಪೂಜೆಗೆ ಹೋಗಿದ್ದೆ. ನನಗೆ ತಿಳಿದವರ ಮನೆಯಲ್ಲಿ ನಡೆಯುತ್ತಿದ್ದ ದುರ್ಗಾ ಪೂಜೆ ಅದಾಗಿತ್ತು. ಅವರದ್ದು ಟಿಪಿಕಲ್ ಮಲಯಾಳಿ ಕುಟುಂಬ. ಮನೆಯ ಯಜಮಾನನಿಗಿಂತಲೂ ಹೆಚ್ಚಿನ ಆಡಳಿತ ಯಜಮಾನಿಯದ್ದಾಗಿತ್ತು. ಅಷ್ಟು ಹೊತ್ತು ಸುಮ್ಮನಿದ್ದ ಆ ಯಜಮಾನಿ ಮಂಗಳಾರತಿ ಶುರುವಾಗುವಷ್ಟರಲ್ಲಿ ಮೈಯೆಲ್ಲಾ ಧರಿಸಿಕೊಂಡು ಆಶೀರ್ವದಿಸುವ ರೂಪದಲ್ಲಿ  ಕೈಯನ್ನೆತ್ತಿ ವಿಚಿತ್ರವಾಗಿ ವರ್ತಿಸಲು ಶುರುವಿಟ್ಟಳು. ಆಕೆಯ ಗಂಡ, ಮಕ್ಕಳು ಆಕೆಯ ಮೇಲೆ ಸಾಕ್ಷಾತ್ ದೇವಿಯೇ ಬಂದಿದ್ದಾಳೆಂದು ಆಕೆಗೆ ಕೈ ಮುಗಿದು ಆಶೀರ್ವಾದ ಪಡಕೊಂಡರು. ನನಗೆ ಇದೆಲ್ಲಾ ಬಹಳಾ ಅಂದರೆ ಬಹಳಾನೇ ವಿಚಿತ್ರವಾಗಿ ಕಂಡಿತು. ಅಲ್ಲಿದ್ದ ಅರ್ಚಕರು ನನಗೆ ಆಪ್ತರಾಗಿದ್ದರಿಂದ ಪೂಜೆಯ ಬಳಿಕ ಕೇಳಿಯೇ ಬಿಟ್ಟೆ. “ನೀವು ತಿಳಿದವರು, ಅವರಿಗೆ ತಿಳಿ ಹೇಳಿ ಇಂತಹಾ ಅನಾಚಾರಗಳನ್ನೆಲ್ಲಾ ನಿಲ್ಲಿಸಬಾರದೇ?”. ಅದಕ್ಕವರು ನಯವಾಗಿಯೇ ಕೊಟ್ಟ ಉತ್ತರ ಏನೆಂದರೆ, “ನೋಡು, ಇದು ವರ್ಷವೂ ನಡೆಯುತ್ತದೆ. ಅದು ಅವರವರ ನಂಬಿಕೆ. ಅದನ್ನು ಅನಾಚಾರ ಎಂದು ಹೇಳಲು ನಮಗಾರಿಗೂ ಹಕ್ಕಿಲ್ಲ.”

ಹೌದಲ್ವಾ? ವೈಯಕ್ತಿಕವಾಗಿ ನಾನದನ್ನು ನಂಬಲಿಲ್ಲ. ಆದರೆ ಆ ಮಹಿಳೆ, ಮನೆಯವರ ನಂಬಿಕೆಯನ್ನು ಅಲ್ಲಗೆಳೆಯಲು ನಮಗಾವ ಹಕ್ಕಿದೆ? ಅದನ್ನು ಮೂಢನಂಬಿಕೆ ಅಂತ ನಿರ್ಬಂಧಿಸಲು ನಾವ್ಯಾರು? ಅವರು ತಮ್ಮ ಮನೆಯಲ್ಲಿ ಆ ಥರದ ಒಂದು ಆಚರಣೆಯನ್ನು ಮಾಡಿಕೊಂಡರೆ ಯಾರಿಗೇನು ತೊಂದರೆ? ನನ್ನ ಮನಸ್ಸಿನಲ್ಲಿ ಮೂಡಿದ ಇಂತಹಾ ಪ್ರಶ್ನೆಗಳೇ ಈ ಲೇಖನ ಬರೆಯಲು ಪ್ರೇರೇಪಿಸಿದ್ದು.

ಆಡಳಿತಾತ್ಮಕ ಶಾಸನವನ್ನು ರೂಪಿಸುವ ಸಂದರ್ಭವನ್ನು ಹೊರತುಪಡಿಸಿ ಉಳಿದ ಶಾಸನವನ್ನು ರೂಪಿಸುವಾಗ ಜನರ ಅಭಿಪ್ರಾಯವನ್ನು ಪಡೆಯುವುದು ಮುಖ್ಯವಾಗುತ್ತದೆ. ಅದರಲ್ಲೂ ನಮ್ಮ ನಂಬಿಕೆ ಮತ್ತು ಭಾವನೆಗಳಿಗೆ ನೇರವಾಗಿ ಸಂಬಂಧಿಸಿದ ಮಸೂದೆಗಳನ್ನು ಜಾರಿಗೆ ತರುವ ಮುನ್ನ ಹಲವಾರು ಕೋನಗಳಿಂದ ಅಲೋಚಿಸಬೇಕಾಗುತ್ತದೆ. ನಮ್ಮ ದೇಶದಲ್ಲಿ ಹತ್ತಾರು ಧರ್ಮಗಳಿವೆ, ಅವುಗಳಲ್ಲಿ ನೂರಾರು ಜಾತಿ ಉಪಜಾತಿಗಳಿವೆ. ಜನಾಂಗ, ಜಾತಿ ಉಪಜಾತಿಗಳಿಗೆ  ಸಂಬಂಧಿಸಿದಂತೆ ಹಲವಾರು ಆಚರಣೆಗಳು ನಮ್ಮಲ್ಲಿವೆ. ಈ ಆಚರಣೆಗಳೂ ಸಹ ಊರಿಂದ ಊರಿಗೆ ಭಿನ್ನವಾಗಿದೆ. ಹಾಗಾಗಿ ಅವೆಲ್ಲವನ್ನೂ ಕೂಲಂಕುಷವಾಗಿ ಅಧ್ಯಯನ ಮಾಡಿ  ಯಾವುದು ನಂಬಿಕೆ, ಯಾವುದು ಮೂಢನಂಬಿಕೆ ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಅಷ್ಟಾಗಿಯೂ ಇನ್ನೊಬ್ಬರ ನಂಬಿಕೆಯನ್ನು ಮೂಢನಂಬಿಕೆ ಎನ್ನಲು ನಮಗಾರಿಗೂ ಹಕ್ಕಿಲ್ಲ. ಆದರೂ ಅದರಿಂದಾಗಿ ಇನ್ನೊಬ್ಬರಿಗೆ ತೊಂದರೆಯಾಗುವುದಾದರೆ, ಪ್ರಾಣಿ ಬಲಿಗಳು ನಡೆಯುವುದಾದರೆ, ನರಬಲಿ ಕೊಡುತ್ತಿರುವುದಾದರೆ  ಅದನ್ನು ಮೂಢನಂಬಿಕೆಯೆಂದೇ ಪರಿಗಣಿಸಬೇಕಾಗುತ್ತದೆ.

ಸದ್ಯಕ್ಕೆ ನಮ್ಮಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಕರಡನ್ನು ತಯಾರಿಸಿರುವವರು ನಂಬಿಕೆ-ಮೂಢನಂಬಿಕೆಗಳ ಅಧ್ಯಯನವನ್ನೇ ಮಾಡದೇ ಅಮೋಘ ಜಾಢ್ಯವನ್ನು ಪ್ರದರ್ಶಿಸಿದ್ದಾರೆ. ಸಮಿತಿಯ ಮುಂಚೂಣಿಯಲ್ಲಿದ್ದುಕೊಂಡು, ಒಂದು ವೇಳೆ ಕಾನೂನು ಜಾರಿಗೆ ಬಂದರೆ ಅದು ಬರಲು ಕಾರಣೀಭೂತನಾದ ಸಮಾಜ ಸುಧಾರಕ, ಆಧುನಿಕ ಬಸವಣ್ಣ ನಾನೇ ಎಂಬ ಫುಲ್ ಕ್ರೆಡಿಟ್ ಪಡೆದುಕೊಳ್ಳಲು ತುದಿಗಾಲಲ್ಲಿ ನಿಂತಿರುವ ನಿಡುಮಾಮಿಡಿ ಸ್ವಾಮಿಗಳು ಎಂದಾದರೂ ಮೂಢನಂಬಿಕೆಗಳ ಕುರಿತಾಗಿ ದೀರ್ಘ ಅಧ್ಯಯನವನ್ನು ನಡೆಸಿದ್ದಾರಾ? ದಕ್ಷಿಣ ಕನ್ನಡ-ಉಡುಪಿಯಲ್ಲಿ ಭಾರಿ ಜನಮನ್ನಣೆ ಗಳಿಸಿರುವ ಭೂತಾರಾಧನೆಯಲ್ಲಿ ಭಾಗವಹಿಸಿ ಅದರ ಕುರಿತಾಗಿ ಇಲ್ಲಿನ ಜನರ ಭಾವನೆಗಳೇನಿವೆ ಎಂಬುದನ್ನು   ತಿಳಿಯಲು  ಸ್ವಾಮಿಗಳು ಎಂದಾದರೂ  ಪ್ರಯತ್ನ ಪಟ್ಟಿದ್ದಾರಾ? ಸಂಸ್ಕೃತ ಭಾಷೆಯ ಬಗ್ಗೆ ಇಲ್ಲ ಸಲ್ಲದ್ದನ್ನು ಬರೆದು ತೀಟೆ ತೀರಿಸಿಕೊಳ್ಳುವ ಬರಗೂರರಾಗಲಿ, ಮರುಳ ಸಿದ್ದಪ್ಪನವರಾಗಲೀ,  ‘ತಿಥಿ’ ಚಿತ್ರದ ಗಡ್ಡಪ್ಪನಂತಿರುವ ಇನ್ಯಾರೋ ವ್ಯಕ್ತಿ ಆಗಲೀ  ವಿವಿಧ ಊರುಗಳಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸುವ ಪ್ರಯತ್ನವನ್ನೇ ನಡೆಸಿಲ್ಲ. ಶಿವರಾಜ್ ಪಾಟೀಲರೂ ಅಷ್ಟೇ. ಹೇಳಿ, ಯಾರೋ ತಿಳಿಗೇಡಿಗಳು, ಪ್ರಚಾರ ಹಪಾಹಪಿಗಳು ಬೆಂಗಳೂರಿನಲ್ಲಿ ಕುಳಿತು ಬರೆದ ಕಾನೂನನ್ನು ನಾವು ನಮ್ಮ ಮೇಲೆ ಹೇರಿಕೊಳ್ಳಬೇಕೆ? ಇವರೇನು ಅಂಬೇಡ್ಕರುಗಳಾ? ಅಲ್ಲಾ ಇತಿಹಾಸವೇ ಕಂಡಿರದ ಸಮಾಜ ಸುಧಾರಕರಾ? ಅಲ್ಲಾ ಸ್ವಾಮಿಗಳೇ ನೀವ್ಯಾಕೆ ಇನ್ನೂ ಕಾವಿಯನ್ನು ಧರಿಸಿಕೊಂಡಿರುವುದು? ಮೊದಲು ನೀವು ಆ ಮೂಢನಂಬಿಕೆಯಿಂದ ಹೊರ ಬರಬಾರದೇ? ಕಾವಿ ಧರಿಸದೇ ಸಮಾಜವನ್ನು ಉದ್ದರಿಸಲು ನಿಮ್ಮಿಂದ ಸಾಧ್ಯವಿಲ್ಲವೇ?

ಅಷ್ಟಕ್ಕೂ ಜನರ ಮೇಲೆ ಬಲವಂತದ ಕಾನೂನನ್ನು ಹೇರಲು ಈ ನಿಡುಮಾಮಿಡಿ, ಬರಗೂರು ಮುಂತಾದವರೆಲ್ಲಾ ಯಾರು? ಯಾವ ಯೋಗ್ಯತೆಯನ್ನು ನೋಡಿ ಸರಕಾರ ಇವರಿಗೆ ಕರಡು ಮಸೂದೆಯನ್ನು ತಯಾರಿಸಲು ಅಪ್ಪಣೆ ಕೊಟ್ಟಿದ್ದು? ಸಾಗರದಂತಿರುವ ಹಿಂದೂ ಸಮಾಜದ ನೂರಾರು ಸಂತರು, ಧಾರ್ಮಿಕ ಮುಖಂಡರು ಸರಕಾರದ ಪಾಲಿಗೆ ಸತ್ತು ಹೋಗಿದ್ದಾರಾ? ಅಖಂಡ ಹಿಂದೂ ಸಮಾಜಕ್ಕೆ ನಿಡುಮಾಮಿಡಿಯವರೊಬ್ಬರೇ ಪ್ರತಿನಿಧಿಯಾ? ಸರಕಾರಕ್ಕೆ ನಿಜವಾಗಿಯೂ ಮೌಢ್ಯ ನಿರ್ಮೂಲನೆ ಮಾಡಬೇಕೆನ್ನುವ ಇಚ್ಚೆಯಿದ್ದರೆ ಮೊದಲು ಹಿಂದೂ ಸಮಾಜದ ಎಲ್ಲಾ ಸಾಧು ಸಂತರ ಸಮ್ಮೇಳನವನ್ನು ನಡೆಸಿ ಅವರ ಅಭಿಪ್ರಾಯವನ್ನು ಪಡೆಯಲಿ. ಆಯಾ ಜಾತಿಗಳಲ್ಲಿರುವ ಮೂಢನಂಬಿಕೆಯ ಕುರಿತಾಗಿ ಜನರಿಗೆ ತಿಳಿ ಹೇಳಿ ಅದನ್ನು ನಿರ್ಮೂಲನೆ ಮಾಡುವ ನೇತೃತ್ವವನ್ನು ಆಯಾ ಸ್ವಾಮೀಜಿಗಳಿಗೇ ನೀಡಲಿ. ಅಷ್ಟು ಮಾಡಿದರೆ ಸಾಕು, ಕೆಲಸವಿಲ್ಲದ ಯಾವ ತಿಳಿಗೇಡಿಗಳಿಗೂ ಸುಪಾರಿ ಕೊಡುವುದು ಬೇಡ, ಮೌಢ್ಯ ತನ್ನಿಂತಾನೇ ನಿವಾರಣೆಯಾಗುತ್ತದೆ.

ಅಷ್ಟಕ್ಕೂ ಮೂಢನಂಬಿಕೆಯೆಂಬುದು ಬರೀ ಹಿಂದೂ ಸಮಾಜದಲ್ಲಿ ಮಾತ್ರ ಇರುವಂತದ್ದಲ್ಲ. ಮುಸ್ಲಿಂಮರ ಯಾವುದೋ ಹಬ್ಬಕ್ಕೆ ಪ್ರಾಣಿ ಬಲಿ ಮಾಡುವುದು, ಮೊಹರಂನ ದಿನದಂದು ನಡು ಬೀದಿಯಲ್ಲಿ ನಿಂತು ಹಿಗ್ಗಾಮುಗ್ಗ ಬಾರಿಸಿಕೊಳ್ಳುವುದು, ಸೈತಾನನಿಗೆ ಕಲ್ಲು ಹೊಡೆಯುವುದು ಮುಂತಾದ ಆಚರಣೆಗಳು ಬೇರೆ ಧರ್ಮಗಳಲ್ಲೂ ಜಾರಿಯಲ್ಲಿದೆ.  ಈ ಎಲ್ಲಾ ಆಚರಣೆಗಳ ಬಗ್ಗೆ ದಿವ್ಯ ಮೌನ ವಹಿಸಿರುವ ಈ ಸಮಿತಿ ಬರೀ ಹಿಂದೂಗಳನ್ನಷ್ಟೇ ಟಾರ್ಗೆಟ್ ಮಾಡಿದೆ. “ಯೇಸು ಹಾಗೆ ಮಾಡುತ್ತಾನೆ, ಹೀಗೆ ಮಾಡುತ್ತಾನೆ, ಪವಾಡದ ಮೂಲಕ ನಿಮ್ಮನ್ನು ಉದ್ದರಿಸುತ್ತಾನೆ” ಎನ್ನುತ್ತಾ ಬೊಗಳೆ ಬಿಡುವ ಕ್ರೈಸ್ತ ಮಿಷನರಿಗಳ ಬಗ್ಗೆ ಇವರೆಲ್ಲೂ ಮಾತಾಡಿಲ್ಲ. ಇವರ ಜಾಢ್ಯ ಎಷ್ಟಿದೆಯೆಂದರೆ, ಮುಸ್ಲಿಂ ಮತ್ತು ಕ್ರೈಸ್ತರಲ್ಲಿರುವ ಮೌಢ್ಯ ಆಚರಣೆಗಳ ಅಧ್ಯಯನಕ್ಕಾಗಿ ಆ ಸಮುದಾಯಗಳಿದ್ದು ಒಬ್ಬೇ ಒಬ್ಬನನ್ನು ಸರಿಕಟ್ಟಾಗಿ ನೇಮಿಸಿಕೊಂಡಿಲ್ಲ. ಬದಲಾಗಿ, ಹಿಂದೂ ಸಮುದಾಯವೊಂದನ್ನೇ ಟಾರ್ಗೆಟ್ ಮಾಡಿ ಅದು ಮೂಢನಂಬಿಕೆ, ಇದು ಮೂಢನಂಬಿಕೆ, ಅದನ್ನು ನಿಷೇಧಿಸಿ ಎನ್ನುವ ಷರಾ ಬರೆದು ಕೊಟ್ಟಿದ್ದಾರೆ.

ಸತ್ಯ, ನಮ್ಮ ಸಮಾಜದಲ್ಲಿ ಕೆಲವು ಮೂಢನಂಬಿಕೆಗಳಿವೆ. ಮಾಟ ಮಂತ್ರದ ಹೆಸರಿನಲ್ಲಿ  ಜನರನ್ನು   ನಂಬಿಸಿ ಮೋಸ ಮಾಡುವ ಮಂತ್ರವಾದಿಗಳು, ಜೋತಿಷ್ಯದ ಹೆಸರಿನಲ್ಲಿ ಸುಲಿಗೆ ಮಾಡುವ ಕಪಟಿಗಳು ನಮ್ಮ ನಡುವೆ ಇದ್ದಾರೆ. ಈ ಪ್ರಾಣಿಬಲಿ ಮತ್ತು ನರಬಲಿಯನ್ನು ನಾನೆಂದಿಗೂ ಸಮರ್ಥಿಸುವುದಿಲ್ಲ. ಆದರೆ ಅದನ್ನು ಶಿಕ್ಷಣದ ಮೂಲಕ, ಜಾಗೃತಿ ಮೂಡಿಸುವ ಮೂಲಕ ನಿರ್ಮೂಲನೆ ಮಾಡಬೇಕೇ ಹೊರತು ಒತ್ತಾಯದಿಂದಲ್ಲ. ಬಸವಣ್ಣನವರಾಗಲಿ, ಅಕ್ಕ ಮಹಾದೇವಿಯವರಾಗಲಿ, ಇತರ ಯಾವುದೇ ದಾರ್ಶನಿಕರಾಗಲಿ, ಅರಿವಿನ ಮೂಲಕ ಸಮಾಜವನ್ನು ಉದ್ಧರಿಸಿದರೇ ವಿನಹ ಜನರ ಮೇಲೆ ಕಾನೂನನ್ನು ಹೇರುವ ಮೂಲಕ ಅಲ್ಲ. ಈ ನಿಟ್ಟಿನಲ್ಲಿ ಮೌಢ್ಯ ನಿರ್ಬಂಧ ಕಾನೂನನ್ನು ತರುವ  ಮೊದಲು ಅದರ ಕುರಿತಾದ ಸ್ಪಷ್ಟ ಅಧ್ಯಯನ ನಡೆಸುವ ಸಲುವಾಗಿ ಸರಕಾರ ಮತ್ತು  ಕಾನೂನು ರೂಪಿಸುವ ಸಮಿತಿಯವರ ಜಾಢ್ಯ ನಿರ್ಮೂಲನೆಯಾಗಬೇಕಿದೆ.

ಅತಿ ದೊಡ್ದ ಮೂಢನಂಬಿಕೆ: ಸಿದ್ಧರಾಮಯ್ಯ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತರುತ್ತಾರೆ ಎನ್ನುವುದು ನಮ್ಮ ಬುದ್ಧಿ ಜೀವಿಗಳ ಮೂಢನಂಬಿಕೆ. ಮುಂದಿನ ಭಾರಿಯೂ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ, ಆ ಮೂಲಕ ಮತ್ತೈದು ವರ್ಷ ಆರಾಮವಾಗಿ ಗಂಜಿ ಕುಡಿಯಬಹುದೆನ್ನುವುದು ಅದಕ್ಕಿಂತ ದೊಡ್ಡ ಮೂಢನಂಬಿಕೆ!

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!