ಸಂಗತಿ ಬಹಳ ಹಳೆಯದು. ಅಂತೆಯೇ ಈ ಕಥೆಯೂ ಕೂಡ. ಆ ಕಾಲದಲ್ಲಿ ಎಲ್ಲರೂ ಚಪ್ಪಲಿಯಿಲ್ಲದೆ ಬರಿಗಾಲಲ್ಲಿ ನಡೆಯುವವರೆ. ಈಗಿನಂತೆ ಕಾಲಿಗೆ ತೊಡಲು ಚಪ್ಪಲಿಯಿರಲಿಲ್ಲ, ಬೂಟಂತು ಇರಲೇ ಇಲ್ಲ. ಬರಿಗಾಲಲ್ಲಿ ನಡೆಯುವವರ ಈ ಕಥೆ ಚಕ್ರಪುರವೆಂಬ ರಾಜ್ಯದ್ದು.
ಚಕ್ರಪುರವನ್ನು ಆಳುವ ರಾಜ ಚಕ್ರಮಾದಿತ್ಯ ಒಂದು ದಿನ ಬಲು ಕೋಪಗೊಂಡ. ಆತ ರಾಜಭವನವನ್ನು ಬಿಟ್ಟು ಹೊರಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತ್ತು. ಹೊರಗೆ ಹೊರಟನೆಂದರೆ ಅವನ ಕೋಮಲ ಪಾದಗಳಿಗೆ ಮೆತ್ತಿಕೊಳ್ಳುವ ಧೂಳಿನದೇ ಸಮಸ್ಯೆ. ಧೂಳೆಂದರೆ ಅಷ್ಟಿಷ್ಟ್ಟಲ್ಲ, ಬೆಟ್ಟಗುಡ್ಡಗಳನ್ನು ಅಗೆದು ಪುಡಿಗೈದು ರಾಶಿ ಹಾಕಿದರೆ ಹೇಗೋ..ಹಾಗೆ. ಇಷ್ಟೊಂದು ಧೂಳು ಎಲ್ಲಿಂದ ಬರುತ್ತಿದೆ ಎನ್ನುವುದು ರಾಜನಿಗೆ ಮಾತ್ರವಲ್ಲ ಇಡಿಯ ರಾಜ್ಯಕ್ಕೆ ತಿಳಿದ ವಿಷಯವೇ ಆಗಿತ್ತ್ತು. ಈ ಪಾಟಿ ಧೂಳು ಬರುತ್ತಿದ್ದುದು ಪಕ್ಕದ ಬಳ್ಳಾರಪುರವೆಂಬ ರಾಜ್ಯದಿಂದ. ಬಳ್ಳಾರಪುರದ ರಾಜನಲ್ಲಿ ಎಣಿಸಿ ಮುಗಿಸಲಾರದಷ್ಟು ಸಂಪತ್ತು ಇತ್ತೆಂದು ಜನರಾಡಿಕೊಳ್ಳುತ್ತಿದ್ದರು. ಆತ ನೆಲದ ಮೇಲೆ ನಡೆದಾಡುತ್ತಲೇ ಇರಲಿಲ್ಲವಂತೆ. ಹಾರಾಡುತ್ತಿದ್ದ! ರಾಮಾಯಣದ ಕಾಲದಲ್ಲಿ ಪುಷ್ಪಕ ವಿಮಾನವಿತ್ತಲ್ಲ, ಅಂತಹ ವಿಮಾನದಲ್ಲಿ! ಚಕ್ರಪುರದ ರಾಜ ಬಳ್ಳಾರಪುರದ ರಾಜನಿಂದ ಹಲವು ಸಲ ದುಡ್ಡುಕಾಸಿನ ನೆರವು ಪಡೆದಿದ್ದ. ಧೂಳು ಬರುವುದು ಬಳ್ಳಾರಪುರದಿಂದ ಎಂದು ತಿಳಿದಿದ್ದರೂ ಚಕ್ರಮಾದಿತ್ಯ ಏನೂ ಮಾಡುವಂತಿರಲಿಲ್ಲ. ಪ್ರಜೆಗಳು ಸಾಯಲಿ, ತಾನಾದರೂ ಈ ಪರಿ ಧೂಳಿನಿಂದ ತಪ್ಪಿಸಿಕೊಳ್ಳುವುದೆಂತು? ಮರುದಿನ ರಾಜ ಆಜ್ಞೆ ಹೊರಡಿಸಿದ. ಇನ್ನು ಮುಂದೆ ಈ ರಾಜ್ಯದಲ್ಲಿ ನಾನು ನಡೆಯುವಲ್ಲೆಲ್ಲ ಧೂಳಿರಕೂಡದು.
ಮಂತ್ರಿಮಂಡಲ ನಿರ್ಣಯವೊಂದನ್ನು ತೆಗೆದುಕೊಂಡು ಸ್ವಚ್ಛತಾ ಆಂದೋಲನವೊಂದನ್ನು ಹಮ್ಮಿಕೊಂಡಿತು. ಸ್ವತಃ ರಾಜ ಚಕ್ರಮಾದಿತ್ಯನೇ ಚಿನ್ನದ ಹಿಡಿಯುಳ್ಳ ಕಸಪೊರಕೆಯಲ್ಲಿ ರಾಜಬೀದಿಯನ್ನು ಗುಡಿಸಿ ಸ್ವಚ್ಛತಾ ಆಂದೋಲನವನ್ನು ಉದ್ಘಾಟಿಸಿಯೇ ಬಿಟ್ಟ. ಸಾಮಂತರು, ಧೀಮಂತರು, ಮಂತ್ರಿ ಮಹೋದಯರು, ಬುದ್ಧಿಜೀವಿಗಳು, ಸಾಹಿತಿಗಳು, ನಟ ನಟಿಯರು, ಅಧಿಕಾರಿಗಳೆಲ್ಲ ಸ್ವಚ್ಛತಾ ಆಂದೋಳನದ ಪ್ರಚಾರಕ್ಕಾಗಿ ಟೊಂಕ ಕಟ್ಟಿನಿಂತರು. ಅಲ್ಲಿ ಗುಡಿಸು, ಇಲ್ಲಿ ಗುಡಿಸು, ಅಲ್ಲಿ ಒರೆಸು, ಇಲ್ಲಿ ಒರೆಸು, ಅಲ್ಲಿ ನೋಡು ಧೂಳು, ಇಲ್ಲಿ ನೋಡು ಧೂಳು.
ಯಾವನೋ ಒಬ್ಬ ಭಟ್ಟಂಗಿ ರಾಜನಿಗೆ ಸಲಹೆ ನೀಡಿದ. ಪ್ರಭು ಯೋಜನೆಯೇನೋ ಸರಿಯೇ. ಆದರೂ ನನಗೊಂದು ಚಿಂತೆ. ನಗರದಲ್ಲಿ ನೀವು ನಡೆದಾಡುವ ದಾರಿಯ ಧೂಳನ್ನು ಈ ಪಾಟಿ ಸ್ವಚ್ಛ್ಛಗೊಳಿಸಿದರೆ ನಿಮ್ಮ ಪಾದದ ಧೂಳನ್ನು ಶಿರದಲ್ಲಿ ಧರಿಸಿ ಪಾವನರಾಗುವ ಅವಕಾಶದಿಂದ ಪ್ರಜಾವರ್ಗವು ವಂಚಿತವಾಗಬಹುದು. ಹೌದು….ಹೌದು… ರಾಜನ ಚಮಚಾಗಳು ತಲೆಯಾಡಿಸಿದರು. ದೊರೆಯ ಪಾದಧೂಳಿ ಸದಾ ತಮ್ಮ ತಲೆಯ ಮೇಲಿರಬೇಕೆಂಬ ಹುಂಬರಿಗಾಗಿ ರಾಜನ ಪಾದಧೂಳಿಯನ್ನು ಸಂಗ್ರಹಿಸಿ ಚಿನ್ನದ ಕರಂಡಕಗಳಲ್ಲಿ ಸಂಗ್ರಹಿಸಿಡಲಾಯಿತು. ಮುಂದುವರಿಯಿತು ಸ್ವಚ್ಛತಾ ಆಂದೋಲನ. ರಸ್ತೆಗಳು, ಉದ್ಯಾನಗಳು, ಶಾಲೆಗಳು, ಆಸ್ಪತ್ರಗಳು, ಸರಕಾರಿ ಕಚೇರಿಗಳನ್ನು ಗುಡಿಸಿ ಚೊಕ್ಕವಾಗಿಡುವ ಕಾರ್ಯಕ್ರಮ ಯುದ್ಧದೋಪಾದಿಯಲ್ಲಿ ನಡೆಯಿತು. ಪರಿಣಾಮ ನೆಲದ ಮೇಲೆ ಒಂದಿನಿತೂ ಧೂಳಿಲ್ಲ!
ಉರಿವ ಸೂರ್ಯನಿಗೆ ಗ್ರಹಣ ಹಿಡಿಯಿತೋ ಎಂಬ ಹಾಗೆ ಜನರಿಗನಿಸತೊಡಗಿತು. ರಾಜಭವನದ ಮೇಲೆ, ಶ್ರೀಮಂತರ ವೈಭವೋಪೆತ ಮನೆಗಳ ಮೇಲೆ, ಗುಡಿ ಗೋಪುರಗಳ ಮೇಲೆ, ಸರಕಾರಿ ಅಧಿಕಾರಿಗಳ ಬಳಿಯಿರುವ ಕಡತಗಳ ಮೇಲೆ ಅಂಗಡಿ ಮುಂಗಟ್ಟುಗಳ ಮೇಲೆ, ಸೂಚನಾ ಫಲಕಗಳ ಮೇಲ, ಉದ್ಯಾನದಲ್ಲಿ ಅರಳಿ ನಿಂತ ಹೂಗಳ ಮೇಲೆಲ್ಲ ಧೂಳು ನಿಂತಿತು. ಜನರ ಮುಖಗಳ ಮೇಲೆ, ಕಣ್ಣು, ಕಿವಿ, ಮೂಗಿನ ಹೊಳ್ಳೆಗಳಲ್ಲಿ ಎಲ್ಲೆಂದರಲ್ಲಿ ಧೂಳು. ಸರಾಗವಾಗಿ ಉಸಿರಾಡುವುದಕ್ಕೂ ಕಷ್ಟವಾಯಿತು. ಧೂಳು ಮುಚ್ಚಿದ ಮುಖಗಳನ್ನು ಗುರುತಿಸುವುದು ಕಷ್ಟವಾಯಿತು. ಯಾರಲ್ಲಾದರೂ ಮಾತನಾಡುವ ಮೊದಲು ನೀನು ಇಂತಹವನಲ್ಲವೇ ಎಂದು ಕೇಳುವಂತಾಯಿತು. ಧೂಳಿನಿಂದಾಗಿ ಪ್ರಜೆಗಳೆಲ್ಲ ಸೀನುವುದಕ್ಕೆ ಪ್ರಾರಂಭಿಸಿದರು. ಮಾತಿಲ್ಲ, ಕತೆಯಿಲ್ಲ, ಎಲ್ಲರೂ ಸೀನುವವರೆ.
ಪರಿಸ್ಥಿತಿಯಿಂದ ಚಕ್ರಮಾದಿತ್ಯ ಕಂಗೆಟ್ಟ, ಕನಲಿದ. ಸಚಿವರನ್ನು, ಅಧಿಕಾರಿಗಳನ್ನು ಕರೆದು ಛೀಮಾರಿ ಹಾಕಿದ. ನನ್ನ ಪಾದಗಳಿಗೆ ಧೂಳು ಸೋಕಬಾರದೆಂದು ಆಜ್ಞೆಯಿತ್ತರೆ ಇಡಿಯ ರಾಜ್ಯದಲ್ಲೆಲ್ಲ ಧೂಳೆಬ್ಬಿಸಿದಿರಿ. ನಾಳೆಯ ಒಳಗೆ ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕದೇ ಇದ್ದಲ್ಲಿ ನಿಮ್ಮ ನೌಕರಿಗೆ ಸಂಚಕಾರ ಬಂದೀತು, ಜೋಕೆ ಎಂದೆಚ್ಚರಿಸಿದ. ಸಚಿವರು, ಅಧಿಕಾರಿಗಳು ಧೂಳಿನ ಸಮಸ್ಯೆಯಿಂದಾಗಿ ನಿದ್ದೆಯಿಲ್ಲದೆ ಕಂಗೆಟ್ಟರು. ಸಚಿವರು ಅಧೀಕಾರಗಳ ಮೇಲೂ, ಅಧಿಕಾರಿಗಳು ತಮ್ಮ ಕೈಕೆಳಗಿರುವ ಕಾರಕೂನರ ಮೇಲೂ, ಕಾರಕೂನರು ಕಚೇರಿಯ ಜವಾನರ ಮೇಲೂ, ಜವಾನರು ಕಚೇರಿಗೆ ಬರುವ ಪ್ರಜಾವರ್ಗದ ಮೇಲೂ ಹರಿಹಾಯತೊಡಗಿದರು. ಈ ಸಮಸ್ಯೆಗೆ ಪರಿಹಾರವನ್ನು ನೀಡುವವರಿಗೆ ಪ್ರಶಸ್ತಿ, ಶಾಲು ಹೊದಿಸಿ ಸನ್ಮಾನ, ನಗದು ಸಂಭಾವನೆಗಳನ್ನು ಘೋಷಿಸಲಾಯಿತು. ಯಾವುದೋ ಬೊಚ್ಚು ಬಾಯಿಯ ಮುದುಕಿಯೊಂದು ನಗರಾಭಿವೃದ್ಧಿ ಮಂತ್ರಿಗಳ ಕಿವಿಯಲ್ಲೇನೋ ಉಸುರಿತು. ಮಂತ್ರಿವರ್ಗ, ಅಧಿಕಾರಿ ವರ್ಗ ಮುದುಕಿಯ ಸಲಹೆಗೆ ತಲೆದೂಗಿತು. ಮುದುಕಿಗೊಂದು ಪಟ್ಟೆಸೀರೆ, ಕೈಗೊಂದು ಚಿನ್ನದ ಡಾಬನ್ನು ತೊಡಿಸಿ ಸನ್ಮಾನಿಸಲಾಯಿತು. ಮುದುಕಿ ಬೇರಾರೂ ಅಲ್ಲ ಹತ್ತಾರು ಮನೆಗಳಲ್ಲಿ ಕಸಮುಸುರೆ ಮಾಡುವ ಹನುಮಕ್ಕ.
ಮುದುಕಿಯ ಸಲಹೆಯಂತೆ ನದಿ, ಕೆರೆಕೊಳ್ಳಗಳಿಂದ ನೀರನ್ನು ತರಿಸಿ ಧೂಳಿರುವೆಲ್ಲೆಡೆಯೆಲ್ಲ ಸಿಂಪಡಿಸಲಾಯಿತು. ಧೂಳು ಕರಕರಗಿ ನೀರಾಯಿತು. ವಾತಾವರಣ ಶುಭ್ರ್ರವಾಯಿತು. ಚಕ್ರಪುರ ರಾಜ್ಯದಲ್ಲಿ ಧೂಳಿನ ಒಂದೇ ಒಂದು ಕಣವಿಲ್ಲ. ಆದರೆ ಎನೋ ಮಾಡಲು ಹೋಗಿ ಏನೋ ಆಯಿತು ಎಂಬಂತೆ ಹೊಸತೊಂದು ಸಮಸ್ಯೆ ಹುಟ್ಟಿಕೊಂಡಿತು. ಧೂಳೆೆಲ್ಲ ನೀರೊಡನೆ ಬೆರೆತು ಮೇಲಿಂದ ಕೆಳಕ್ಕಿಳಿದು ರಾಜ್ಯದಲ್ಲೆಲ್ಲ ಕೆಸರಾಗಿ ನಿಂತು ಬಿಟ್ಟಿತು. ಅರಮನೆಯ ಉದ್ಯಾನದಲ್ಲಿ, ರಾಜ ಬೀದಿಗಳಲ್ಲಿ, ಇಲ್ಲಿ ನೋಡಿದರಲ್ಲಿ ಕೆಸರು. ನಡೆದಾಡಿದರೆ ಜಾರಿ ಬೀಳುವ ಭೀತಿ. ಬರಿಗಾಲಲ್ಲಂತೂ ನಡೆಯುವ ಹಾಗೇ ಇರಲಿಲ್ಲ.
ರಾಜ ಚಿಂತಾಕ್ರಾಂತನಾದ ಈ ಪಾಟಿ ಕೆಸರಲ್ಲಿ ನಗರ ವೀಕ್ಷಣೆ ಮಾಡುವುದೆಂತು. ಪ್ರಜೆಗಳ ಸುಖದುಃಖಗಳನ್ನು ವಿಚಾರಿಸುವುದೆಂತು, ಆಡಳಿತ ನಡೆಸುವುದೆಂತು? ರಾಜ ಮತ್ತೆ ತಲೆಯೆತ್ತದ ಹಾಗೆ ಜಾರಿಬೀಳಬೇಕೆಂದು ಬಯಸುವ ಹಿತಶತ್ರುಗಳು ಆಸ್ಥಾನದಲ್ಲಿ ಬಹಳ ಮಂದಿ ಇದ್ದರು. ಅವರಿಗೆ ರಾಜ್ಯದಲ್ಲಿನ ಕೆಸರಿನ ರಾಡಿಯ ಸಮಸ್ಯೆಯಿಂದ ಬಹಳಷ್ಟು ಖಷಿಯಾಯಿತು. ಇದೇ ಸಮಯವೆಂದು ರಾಜನ ಮೇಲೆ ಕೆಸರೆರಚುವುದಕ್ಕೆ ಅವರೆಲ್ಲ ಒಂದಾದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅವನು ಸಚಿವರನ್ನು, ಅಧಿಕಾರಿಗಳನ್ನು ಸಿಟ್ಟು ಬಂತೆಂದು ಅತಿಯಾಗಿ ಬಯ್ಯುವ ಹಾಗಿಲ್ಲ. ಈಗಾಗಲೇ ರಾಜನ ವಿರುದ್ಧ ಅತೃಪ್ತರ ಸಂಚೊಂದು ನಡೆಯುತ್ತಿರುವುದು ರಾಜನಿಗೆ ಗೊತ್ತೇ ಇದೆ.
ಆತ ರಾಜ್ಯದ ಬುದ್ಧಿವಂತರೆನಿಸಿಕೊಂಡವರಿಂದ ಸಲಹೆಗಳನ್ನು ಕೆಳಿದ. ರಾಜ ನಡೆದಲ್ಲೆಲ್ಲ ರತ್ನಗಂಬಳಿಯನ್ನು ಹಾಸಬೆಕೆಂಬ ಸಲಹೆಯೊಂದು ಬಂತು. ಅದು ಬಹಳ ಖರ್ಚಿನ ಬಾಬೆಂದು ಅದನ್ನು ಕೈಬಿಡಲಾಯಿತು. ಕೊನೆಗೊಂದು ಸಲಹೆ ಬಂತು. ರಾಜ ನಡೆದಾಡುವ ಎಲ್ಲ ದಾರಿಗಳನ್ನು, ರಾಜಮಾರ್ಗಗಳನ್ನು, ಹೆದ್ದಾರಿಗಳನ್ನು, ಕಿರುದಾರಿಗಳನ್ನು, ಅಡ್ಡದಾರಿಗಳನ್ನು ಚರ್ಮದಿಂದ ಮುಚ್ಚಬೇಕು. ಮಂತ್ರಿಮಾಗಧರು, ಬುದ್ಧಿಜೀವಿಗಳು ಈ ಯೋಜನೆಯನ್ನು ಸ್ವಾಗತಿಸಿದರು. ಆದರೆ ಆಚಾರವಂತರು, ಮಠದ ಸ್ವಾಮೀಜಿಗಳು, ಪ್ರಾಣಿದಯಾ ಸಂಘದವರು, ಪರಿಸರವಾದಿಗಳು ಮತ್ತು ಇವರನ್ನು ಬೆಂಬಲಿಸುವ ರಾಜನ ವಿರೋಧಿಗಳು ಈ ಯೋಜನೆಯನ್ನು ಕಟುವಾಗಿ ಟೀಕಿಸಿದರು. ಈ ಯೋಜನೆಗಾಗಿ ಅಸಂಖ್ಯ ಪ್ರಾಣಿಗಳನ್ನು ಕೊಲ್ಲಬೇಕಾಗುತ್ತದೆ. ಇದರಿಂದ ಪ್ರಾಣಿ ಸಂಕುಲಕ್ಕೆ ಅಪಾಯವಿದೆ ಎಂಬ ಕೂಗೆಬ್ಬಿತು. ಅಲ್ಲಲ್ಲಿ ಪ್ರತಿಭಟನೆಗಳು, ಹರತಾಳಗಳು ಬೃಹತ್ ಸಭೆಗಳು ನಡೆದವು.
ರಾಜನಿಗೆ ಎಷ್ಟು ಸಿಟ್ಟುಬಂತೆಂದರೆ ತನ್ನ ವಿರೋಧಿಗಳ, ಮಣ್ಣಿನ ಮಕ್ಕಳ, ಪರಿಸರವಾದಿಗಳ, ಸಂಪ್ರದಾಯವಾದಿಗಳ ಬೆನ್ನಿನ ಚರ್ಮವನ್ನೇ ಸುಲಿದು ತಾನು ನಡೆಯುವ ದಾರಿಗೆ ಹೊದೆಸುವಷ್ಟು. ರಾಜ ಎದೆಗುಂದಲಿಲ್ಲ, ಯೋಜನೆಯನ್ನು ಪ್ರಕಟಿಸಿಯೇ ಬಿಟ್ಟ. ಯೋಜನೆಯನ್ನು ಕಾರ್ಯಗತಗೊಳಿಸಬೇಕಾದಲ್ಲಿ ಎಷ್ಟು ಚರ್ಮ ಬೇಕಾದೀತು? ಚರ್ಮಕ್ಕಾಗಿ ಎಷ್ಟು ಪ್ರಾಣಿಗಳನ್ನು ಕೊಲ್ಲಬೇಕಾದೀತು? ಎಷ್ಟು ಪ್ರಮಾಣದ ಚರ್ಮವನ್ನು ಹೊರರಾಜ್ಯಗಳಿಂದ ತರಿಸಬೇಕಾದೀತು. ನಗರಾಭಿವೃದ್ಧಿ ಮಂತ್ರಿಗಳು, ಅಧಿಕಾರಿಗಳು ಈ ಯೋಜನೆಯಿಂದ ಹಿರಿಹಿರಿ ಹಿಗ್ಗಿದರು. ತಜ್ಞರನ್ನು ಕರೆಸಿ ರಾಜ್ಯದಲ್ಲಿರುವ ದಾರಿಗಳ ಉದ್ದಳತೆಯನ್ನು ಲೆಕ್ಕಹಾಕಿಸಿದರು. ಈ ಯೋಜನೆಗೆ ತಗಲಬಹುದಾದ ವೆಚ್ಚವನ್ನು, ಅದರೊಳಗಿನ ತಮ್ಮ ಪಾಲನ್ನು, ತಮಗೆ ಬರಬೇಕಾದ ಮಾಮೂಲನ್ನು ಸೇರಿಸಿ ಯೋಜನೆಯ ವೆಚ್ಚ ಮತ್ತು ಯೋಜನೆಯನ್ನು ಅನುಷ್ಟಾನಗೊಳಿಸುವುದಕ್ಕೆ ಬೇಕಾದ ನಿಗದಿತ ಸಮಯದ ವಿವರಗಳನ್ನು ರಾಜಸಭೆಯಲ್ಲಿ ಮುಂದಿಟ್ಟರು.
ರಾಜ ಅಧಿಕಾರಿಗಳ, ಮಂತ್ರಿ ಮಹೋದಯರ ಕಾರ್ಯದಕ್ಷತೆಯನ್ನು ಶ್ಲಾಘಿಸಿದ. ಕೊನೆಯಲ್ಲಿ ಈ ಯೋಜನೆಯನ್ನು ಶೀಘ್ರವೇ ಜ್ಯಾರಿಗೊಳಿಸುವುದಾಗಿ ಸಭೆಯಲ್ಲಿ ಘೋಷಿಸಿದ. ಸಭೆಯ ಮೂಲೆಯೊಂದರಿಂದ ಮಹಾಪ್ರಭೂ……ಎಂಬ ಕ್ಷೀಣ ದ್ವನಿಯೊಂದು ಕೇಳಿಸಿತು. ನಾನು ಈ ಯೋಜನೆಯನ್ನು ವಿರೋಧಿಸುತ್ತೇನೆ.. ಯಾರದು….? ನಾನು ಚಮ್ಮಾರ ಚೆಲುವ…! ಬೇರೆ ಸಮಯದಲ್ಲಾದರೆ ಸಭೆಯಿಂದ ಹೊರಗೆ ತಳ್ಳಬಹುದಿತ್ತು. ಈಗ ಹಾಗಲ್ಲ, ಪರಿಸ್ಥಿತಿ ಗಂಭಿರವಿದೆ. ಅವನನ್ನು ನನ್ನ ಬಳಿಗೆ ಕರೆದು ತನ್ನಿ, ರಾಜ ಆಜ್ಞೆಯಿತ್ತ.
ಚಮ್ಮಾರ ಚೆಲುವನನ್ನು ರಾಜಭಟರು ರಾಜವೇದಿಕೆಗೆ ಕರೆತಂದರು. ರಾಜ ನೋಡುತ್ತಲೇ ಇದ್ದ. ಹಣ್ಣು ಹಣ್ಣು ಮುದುಕ. ಸೊರಗಿದ ದೇಹ, ಎಣ್ಣೆ ಕಾಣದ ಕೂದಲು, ಕೊಳಕು ಬಟ್ಟೆ. ದಾರಿದ್ರ್ಯವೇ ಮೂರ್ತಿವೆತ್ತಂತೆ, ತನ್ನ ಆಡಳಿತವನ್ನೇ ಅಣಕಿಸುವ ವ್ಯಂಗಚಿತ್ರದಂತೆ ಕಾಣಿಸಿತು ರಾಜನಿಗೆ. ಇಂತಹವನು ತನ್ನ ಅನುಕೂಲಕ್ಕಾಗಿ ಮಾಡಿರುವ ಯೋಜನೆಯನ್ನು ವಿರೋಧಿಸುತ್ತಿದ್ದಾನಲ್ಲ. ಏನಿರಬಹುದು ಇವನ ತಲೆಯಲ್ಲಿ? ಸಭೆಯಲ್ಲಿ ಸಚಿವರು, ಅಧಿಕಾರಿಗಳು, ಬುದ್ಧಿಜೀವಿಗಳು, ಧೀಮಂತರು, ರಾಜನ ಯೋಜನೆಗೆ ಚರ್ಮವನ್ನು ಪೂರೈಸುತ್ತೇನೆಂದು ಬಂದ ಚರ್ಮದ ವ್ಯಾಪಾರಿಗಳು ಮುಸಿಮುಸಿ ನಗುತ್ತಿದ್ದರು. ರಾಜ ಇಂತಹವನಿಂದಲೂ ಸಲಹೆಯನ್ನು ಕೇಳುತ್ತಿದ್ದಾನಲ್ಲ ಎಂದು.
ರಾಜ ಕೇಳಿದ ಏನು ನಿನ್ನ ಅಹವಾಲು? ಏನು ನಿನ್ನ ಸಲಹೆ? ಚಮ್ಮಾರ ಚೆಲುವನೆಂದ ಈ ಯೋಜನೆಯನ್ನು ಜಾರಿಗೊಳಿಸುವ ಮೊದಲು ನನಗೆ ನಿಮ್ಮ ಪಾದವನ್ನೊಮ್ಮೆ ನೀಡಿ. ರಾಜಭಟರು ರಾಜನಿಗೇನೂ ಅಪಾಯವಾಗದ ಹಾಗೆ ರಾಜನ ಇಕ್ಕೆಲಗಳಲ್ಲಿ ನಿಂತರು. ಇನ್ನಿಬ್ಬರು ಚಮ್ಮಾರ ಚೆಲುವನ ಹಿಂದೆ ಈಟಿಗಳನ್ನು ಹಿಡಿದು ನಿಂತರು. ರಾಜನಿಗೇನೂ ಅಪಾಯವಾಗಬಾರದಲ್ಲ. ರಾಜ ತನ್ನ ಪಾದವನ್ನು ಮುಂದೆ ಚಾಚಿದ. ಚಮ್ಮಾರ ಚೆಲುವ ರಾಜನ ಪಾದವನ್ನು ಕಣ್ಣಿಗೊತ್ತಿಕೊಂಡು ತನ್ನ ತೊಡೆಯಮೇಲಿರಿಸಿಕೊಂಡ.
ರಾಜನ ಪಾದವನ್ನು ಅಳೆದ. ತನ್ನ ಹರಕು ಚೀಲದಿಂದ ರಾಜನ ಪಾದದಳತೆಗೆ ಸರಿಯಾದ ಚರ್ಮವನ್ನು ತೆಗೆದ. ನಾಜೂಕಾಗಿ ಕತ್ತರಿಸಿ, ಹೊಲಿದು ರಾಜನ ಪಾದಗಳನ್ನು ಮುಚ್ಚುವಂತಿರುವ ಚಪ್ಪಲಿಗಳನ್ನು ಹೊಲಿದು ರಾಜನ ಕಾಲಿಗೆ ತೊಡಿಸಿದ. ಮಹಾಪ್ರಭು, ಈಗ ಒಂದು ಹತ್ತು ಹೆಜ್ಜೆ ನಡೆಯಿರಿ ಎಂದ. ರಾಜ ವೇದಿಕೆಯ ಮೇಲೆ ಅತ್ತಿತ್ತ ನಡೆದಾಡಿದ. ತಾನು ತೊಟ್ಟ ಚಪ್ಪಲಿಗಳನ್ನು ಮುಟ್ಟಿ ಮುಟ್ಟಿ ನೋಡಿದ, ಖುಷಿಗೊಂಡ. ಕೊರಳಲ್ಲಿರುವ ರತ್ನಹಾರವನ್ನು ತೆಗೆದು ಚಮ್ಮಾರ ಚೆಲುವನ ಕೊರಳಿಗೆ ತೊಡಿಸಿದ. ರೇಷ್ಮೆಯ ಶಾಲನ್ನು ಹೊದಿಸಿ ಸನ್ಮಾನಿಸಿದ ಅವನಿಗೆ ದುಡ್ಡುಕಾಸನ್ನು ಕೊಟ್ಟು ಕಳುಹಿಸಿದ.
ಈ ಯೋಜನೆಯನ್ನು ರೂಪಿಸಿದವರ, ಮಂತ್ರಿಗಳು, ಅಧಿಕಾರಿಗಳು, ಚರ್ಮವ್ಯಾಪಾರಿಗಳ ಮೋರೆ ಕಪ್ಪಿಟ್ಟಿತು. ಚಕ್ರಪುರದಲ್ಲಿ ಚರ್ಮೋದ್ಯಮ ಭರದಿಂದ ಬೆಳೆಯಿತು.