ಕಥೆ

ಕಾರಣವಿಲ್ಲದ ತಳಮಳ…

ಇವತ್ತು ಬೆಳಗಿನಿಂದ ಯಾಕೋ ಮನಸ್ಸು ಸರಿಯಾಗಿಲ್ಲ. ಮಾಡಲು ಏನೂ ಕೆಲಸವಿಲ್ಲ ಅಂತಲ್ಲ. ಬೆಳಿಗ್ಗೆ ಕಾಲೇಜಿಗೆ ಬರುತ್ತಿದ್ದಂತೆ ಕಂಡ ದೃಶ್ಯ ನನ್ನನ್ನು ಚಡಪಡಿಸುವಂತೆ ಮಾಡಿದೆ. ವಿಷಯ ನನಗೆ ಸಂಬಂಧ ಪಟ್ಟಿಲ್ಲವಾದರೂ ನಾನೇಕೆ ಹೀಗೆ ಉದ್ವಿಘ್ನಳಾಗಿರುವೆನೆಂದು ನನಗೇ ತಿಳಿಯುತ್ತಿಲ್ಲ. ಇದು ಯಾರೊಡನೆ ಚರ್ಚಿಸುವಂಥದ್ದೂ ಅಲ್ಲ. ಇಂಥದರ ಬಗ್ಗೆ ಮಾತಾಡುವುದು ನನ್ನ ಜಾಯಮಾನವೂ ಅಲ್ಲ.

ನಾನು ಯಾವಾಗಲು ನನ್ನ ಹಾಗೂ ವಿದ್ಯಾರ್ಥಿಗಳ ನಡುವೆ ಒಂದು ಅಂತರವನ್ನು ಕಾಯ್ದುಕೊಂಡಿರುವಂಥವಳು. ಚೆಲ್ಲುಚೆಲ್ಲಾಗಿ ಅವರು ನನ್ನೊಂದಿಗೆ ವರ್ತಿಸುವುದು ನನಗೆ ಇಷ್ಟವಾಗುವುದಿಲ್ಲ. ಇದು ಇಡೀ ಕಾಲೇಜಿಗೇ ಗೊತ್ತು. ಹಾಗಾಗಿ ವಿದ್ಯಾರ್ಥಿಗಳ ಗುಂಪು ನನ್ನಿಂದ ಬಲು ದೂರ. ಆದರೆ ಅಭ್ಯಾಸದ ವಿಷಯದಲ್ಲಿ ಯಾವುದೇ ಸಮಸ್ಯೆಯಿದ್ದರೂ ಅದನ್ನು ನಾನು ನಿವಾರಿಸುತ್ತೇನೆಂಬ ವಿಶ್ವಾಸವಿರುವುದರಿಂದ ಯಾವ ಕ್ಲಾಸಿನ ವಿದ್ಯಾರ್ಥಿಗಳಾದರೂ ನನ್ನ ಬಳಿ ಬರುತ್ತಾರೆ, ಹಾಗೂ ಬಹಳಷ್ಟು ಸಲ ಅವರಿಗೆ ನಿರಾಸೆಯಾಗುವುದಿಲ್ಲ.

ರಾಜೇಶ್ ಮತ್ತು ನಿತ್ಯಾ ನನ್ನ ವಿದ್ಯಾರ್ಥಿಗಳು. ಕಳೆದ ವರ್ಷ ನಾನವರಿಗೆ ಮೊದಲ ಸೆಮಿಸ್ಟರ್’ನಲ್ಲಿ ಕಂಪ್ಯೂಟರ್ ನೆಟ್ವರ್ಕ್ ಕಲಿಸುತ್ತಿದ್ದೆ. ಆಗ ಅವರು ೫ನೇ ಸೆಮಿಸ್ಟರ್’ನಲ್ಲಿದ್ದರು. ಬೇಕಾದಷ್ಟು ಸಲ ನನ್ನ ಬಳಿ ಬಂದಿದ್ದರು. ಒಮ್ಮೆ ಅವರು ಹೋದ ಮೇಲೆ ಪಕ್ಕದಲ್ಲಿದ್ದ ಅಪರ್ಣಾಗೆ ಹೇಳಿದೆ, ” ಇವರಿಬ್ಬರೂ ಪ್ರತಿಸಲ ಒಟ್ಟಿಗೇ ಬರುತ್ತಾರೆ”. ಅಪರ್ಣಾ ಪಕಪಕನೆ ನಕ್ಕುಬಿಟ್ಟಳು. “ನಿನಗೀಗ ಗೊತ್ತಾಯ್ತಾ?, ಅವರಿಬ್ಬರೂ ಫರ್ಸ್ಟ್ ಇಯರ್’ನಿಂದ ಹಾಗೇ ಇರೋದು. ಒಂದೇ ಊರಿನವರಂತೆ, ಹೈಸ್ಕೂಲಿಂದ ಪರಿಚಯವಂತೆ. “

ಯಾವತ್ತೂ ಹೀಗೇ ಆಗೋದು. ಕಾಲೇಜಿನ ಅಫೇರುಗಳು ಎಲ್ಲರಿಗಿಂತ ಕೊನೆಯದಾಗಿ ನನಗೆ ತಿಳಿಯುತ್ತವೆ. ಇಂಥದ್ದಕ್ಕೆ ನಾನು ಯಾವತ್ತೂ ಮಹತ್ವ ಕೊಟ್ಟಿದ್ದಿಲ್ಲ. ಗಾಸಿಪ್ಪಿನಲ್ಲಿ ಆಸಕ್ತಿ ಇಲ್ಲದ ಮೇಲೆ ನನಗೆ ಇದನ್ನು ಹೇಳುವವರಾದರೂ ಯಾರು? ಆದರೂ ಆಗೊಮ್ಮೆ ಈಗೊಮ್ಮೆ ಕಿವಿಯ ಮೇಲೆ ಬೀಳುವ ಸುದ್ದಿಗಳಿಗೆ “ಹೌದಾ??” ಎಂದದ್ದು ಬಿಟ್ಟರೆ ಬಾಕಿ ನಿರ್ಲಕ್ಷ್ಯ.

ಯಾಕೋ ಏನೋ, ರಾಜೇಶ್ ಮತ್ತು ನಿತ್ಯಾ ನನ್ನ ಗಮನ ಸೆಳೆದಿದ್ದರು. ಓದುವುದರಲ್ಲಿ ತುಂಬಾ ಜಾಣರೇನೂ ಅಲ್ಲದ ಎವರೇಜ್ ಆದರೂ, ಮೊದಲ ಸೆಮಿಸ್ಟರ್’ನಿಂದ ಫರ್ಸ್ಟ್ ಕ್ಲಾಸ್ ಕಾಯ್ದುಕೊಂಡಿದ್ದಾರೆ. ಇಬ್ಬರ ರೂಪವೂ ಸಹ ಅತಿ ಸುಂದರವಲ್ಲದ ಸಾಧಾರಣ. ಆದರೆ ನನ್ನನ್ನು ಆಕರ್ಷಿಸಿದ್ದು ಅವರಿಬ್ಬರ ಮುಖದ ಮೇಲಿರುವ ನಿರ್ಮಲ ಭಾವ, ಎಲ್ಲೆ ಮೀರದ ನಡವಳಿಕೆ. ಉಡುಗೆ ತೊಡುಗೆಯಲ್ಲೂ ಗಂಭೀರ. ಒಟ್ಟಿಗೆ ಇರುತ್ತಿದ್ದರೂ ಒಬ್ಬರನ್ನೊಬ್ಬರು ಸ್ಪರ್ಶಿಸಿದ್ದನ್ನು ಯಾರೂ ನೋಡಿಲ್ಲ. ಕಾಲೇಜಿನ ನಾಲ್ಕು ವರ್ಷಗಳಲ್ಲಿ ಎಷ್ಟೋ ಜೋಡಿಗಳು ತಯಾರಾಗುತ್ತವೆ. ತಮ್ಮಂಥ ಪ್ರೇಮಿಗಳೇ ಇಲ್ಲವೆಂಬಂತೆ ಕಾಲೇಜಿನಲ್ಲೆ ಚಕ್ಕಂದವಾಡುತ್ತಾರೆ. ಕೆಲದಿನಗಳಲ್ಲೇ ಇಬ್ಬರೂ ಬೇರೆ ಬೇರೆ ಜೊತೆಯನ್ನು ಹುಡುಕಿಕೊಂಡಿರುತ್ತಾರೆ. ಇಂಥವರ ಮಧ್ಯೆ ರಾಜೇಶ್ ಹಾಗೂ ನಿತ್ಯಾ ಭಿನ್ನವಾಗಿದ್ದರು. ಅವರನ್ನು ನೋಡುತ್ತಿದ್ದರೆ ನನ್ನಲ್ಲೇನೋ ಸಂತಸದ ಭಾವ.

ಈಗ ಇವರಿಬ್ಬರೂ ಕೊನೆಯ ಸೆಮಿಸ್ಟರ್’ನಲ್ಲಿದ್ದಾರೆ. ಮುಂದಿನ ವಾರದಿಂದ ಪರೀಕ್ಷೆಗಳು ಶುರುವಾಗುತ್ತವೆ. ಇವತ್ತು ಬೆಳಿಗ್ಗೆ ನಾವು ಗೆಳತಿಯರೆಲ್ಲರು ಕ್ಯಾಂಟೀನಿಗೆ ಕಾಫಿ ಕುಡಿಯಲು ಹೋಗಿದ್ದೆವು. ವಾಪಸ್ಸು ಬರುವಾಗ ಪಕ್ಕದ ಗಾರ್ಡನ್ನಿನಲ್ಲಿ ಬೆಂಚುಗಳ ಮೇಲೆ ಓದುತ್ತಾ ಕುಳಿತಿದ್ದ ವಿದ್ಯಾರ್ಥಿಗಳ ಬಗ್ಗೆ ಕಮೆಂಟಿಸುತ್ತಾ ನಡೆದಿದ್ದೆವು. ಆಗಲೇ ನನಗೆ ಕಂಡದ್ದು, ನಿತ್ಯಾ ಬೇರೊಬ್ಬ ಹುಡುಗನ ಜೊತೆಗೆ ಚರ್ಚಿಸುತ್ತಿದ್ದಾಳೆ. ಕೈಯಲ್ಲಿ ಪುಸ್ತಕ ಇತ್ತು. ಚರ್ಚೆ ಪರೀಕ್ಷೆಯ ಬಗ್ಗೆಯೇ ನಡೆದಿದ್ದರೂ ನನಗೇಕೋ ಇದನ್ನು ಸಹಿಸಲೇ ಆಗಲಿಲ್ಲ. ಸಂಜೆಯವರೆಗೂ ಒಂಥರಾ ಅರ್ಥವೇ ಇಲ್ಲದ ತಳಮಳ.

ಯಾವಾಗಲೂ ಒಟ್ಟಿಗೇ ಇರುತ್ತಿದ್ದ ಇವರಿಬ್ಬರೂ ಇವತ್ತು ಹೀಗೆ ಬೇರೆ ಯಾಕಾಗಿದ್ದಾರೆ? ಆದರ್ಶವೆಂದು ಕಂಡ ಜೋಡಿಗೆ ದೃಷ್ಟಿ ತಾಕಿತೋ ಏನೊ. ಏನಾದರೂ ಜಗಳವಾಗಿರಬಹುದೇ?, ಇಲ್ಲದಿದ್ದರೆ ಹೀಗೆ ಪರೀಕ್ಷೆಯ ಸಮಯದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರುತ್ತಿದ್ದಿಲ್ಲ. ಯಾರನ್ನು ವಿಚಾರಿಸಲಿ? ನಾನೆಂದೂ ಈ ರೀತಿ ಡಿಸ್ಟರ್ಬ್ ಆದದ್ದಿಲ್ಲ. ಆದರೇಕೋ ಇವತ್ತು ಕಾರಣವೇ ಇಲ್ಲದೆ ತಳಮಳ. ಕಂಪ್ಯೂಟರ್ ಸ್ಕ್ರೀನಿನತ್ತ ಕಣ್ಣಿದ್ದರೂ ಮನಸ್ಸು ಮಾತ್ರ ಬೆಳಗಿನ ದೃಶ್ಯವನ್ನೇ ನೆನಪಿಸಿಕೊಳ್ಳುತ್ತಿತ್ತು. ರಾಜೇಶ್ ಸಹ ಅಲ್ಲೆ ಇದ್ನಾ, ಅಥವಾ ಬೇರೆ ಹುಡುಗಿ ಜೊತೆ?,, ಯಾಕೋ ಈ ವಿಚಾರವೇ ಮನಸ್ಸಿಗೆ ಹಿಡಿಸಲಿಲ್ಲ. ಇನ್ನೊಂದೆರಡು ದಿನ ಅವರನ್ನು ಗಮನಿಸುವುದು, ಇದು ಹೀಗೇ ಮುಂದುವರೆದರೆ ಅವರನ್ನೇ ಕರೆದು ಕೇಳುವುದು, ಸಾಧ್ಯವಾದರೆ ರಾಜಿಗೆ ಪ್ರಯತ್ನಿಸುವುದು. ಈ ವಿಚಾರದಿಂದ ಅಂತೂ ಮನಸ್ಸಿಗೆ ಸಮಾಧಾನವಾಯಿತು. ಆಷ್ಟರಲ್ಲಾಗಲೇ ಕಾಲೇಜ್ ಬಿಡುವ ಟೈಮಾಗಿತ್ತು.

ಪಾರ್ಕಿಂಗ್ನಲ್ಲಿ ನಡೆಯುತ್ತಿದ್ದಾಗ “ರಾಜೇಶ್” ಎನ್ನುವ ಕರೆ ಕೇಳಿ ತಕ್ಷಣ ನಿಂತೆ. ರಾಜೇಶ್ ನನಗೆ ತೀರ ಸಮೀಪದಲ್ಲಿದ್ದ. ಆದರೆ ಅವನ ಲಕ್ಷವೆಲ್ಲ ಓಡಿ ಬರುತ್ತಿದ್ದ ನಿತ್ಯಾ ಕಡೆಗಿತ್ತು. ಏದುಸಿರು ಬಿಡುತ್ತಿದ್ದ ನಿತ್ಯಾ ಹೇಳಿದಳು. “ಇಷ್ಟು ಹೊತ್ತು ಬೇಕಾಯ್ತಾ ಪಾಸ್’ಪೋರ್ಟ್ ವೆರಿಫಿಕೇಶನ್ನಿಗೆ? ನನ್ನದು ಒಂದ್ಸಲ ರಿವೈಸ್ ಅಯ್ತು. ನಿನ್ನೆ ಒಂದು ಪ್ರಾಬ್ಲೆಮ್ ಸಾಲ್ವ್ ಆಗ್ತಿರಲಿಲ್ವಲ್ಲಾ, ಅದನ್ನ ರಮೇಶ್ ಹೇಳಿಕೊಟ್ಟ.” ಅವರಿಬ್ಬರೂ ಇನ್ನೂ ಏನೇನೋ ಮಾತಾಡ್ತಾ ಮುಂದೆ ಹೋದರು. ಬೆಳಗಿನಿಂದ ಕಾರಣವಿಲ್ಲದೇ ತಳಮಳಗೊಂಡ ನನ್ನ ಮನಸ್ಸು ನಿರಾಳವಾಗಿತ್ತು.

-ಉಷಾ ಜೊಗಳೇಕರ್

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!