“ಭೋರ್ಗರೆವ ಶರಧಿಯು ಹೇಳುತಿದೆ,
ಯಾರೆಂದೂ ಕೇಳಿರದ ಕಥೆಯೊಂದನು..
ಬಂಡೆಗಲ್ಲ ಮೇಲೆ ಅಪ್ಪಳಿಸಿ ಕೊರೆದಿದೆ,
ಯಾರೆಂದೂ ಅಳಿಸದ ಶಾಸನವನು..
ಶಿಥಿಲವಾದ ನನ್ನ ನೆನಪ ಕಾಗದವನು,
ಒಡಲೊಳಗೆ ಅಚ್ಚಳಿಯದೆ ಬೆಚ್ಚಗೆ ಬಚ್ಚಿಟ್ಟಿದೆ…”
ಸುಮಾರು ಇಪ್ಪತ್ತಾರರ ಹರೆಯದ ರಾಘವ ಕಣ್ಣಿಗೆ ಕನ್ನಡಕವನ್ನು ಧರಿಸಿ ಕೈಗೆ ಲೇಖನಿಯೊಂದನ್ನು ಹಿಡಿದು ಕುಳಿತರೆ ಸಾಕು. ಸರಾಗವಾಗಿ ಕವನಗಳನ್ನು ಹೀಗೆ ಗೀಚುತ್ತಲೇ ಹೋಗುತ್ತಾನೆ. ಹುಡುಗ ಟೆಕ್ ಮಹೀಂದ್ರಾನಲ್ಲಿ ಡೇಟಾ ಮೈಗ್ರೇಶನ್ ಸ್ಪೆಷಲಿಷ್ಟು. ನಮ್ಮೂರು ಗೋಕರ್ಣದವನೇ. ಮಹಾ ಅಂತರ್ಮುಖಿ ಸ್ವಭಾವ. ನನ್ನ ಸಹೋದ್ಯೋಗಿ. ಏನಾದರೂ ಒಂದು ಕೇಳಿದರೆ ಅದು ಅವನ ಮನಸ್ಸಿನ ಪ್ರಾಸೆಸ್ಸರ್ರನ್ನು ಹೊಕ್ಕು ಆತ ಪ್ರತಿಕ್ರಿಯಿಸುವ ಹೊತ್ತಿಗೆ ಸಾಕುಸಾಕಾಗಿರುತ್ತದೆ. ಇನ್ನೂ ಮದುವೆಯಾಗಿಲ್ಲ. ಇವನ ಜಾತಕಕ್ಕಾಗಿ ರಾಷ್ಟ್ರವ್ಯಾಪಿ ಬೇಡಿಕೆಯಿದ್ದರೂ ಮದುವೆಯಾಗಲು ಈತನಿಗೆ ಸುತಾರಾಂ ಒಪ್ಪಿಗೆ ಇಲ್ಲ.
ಇವನ ತಾಯಿಯಂತೂ ಮಗನ ಈ ವೈರಾಗ್ಯದಿಂದ ಬೇಸತ್ತು ಮದುವೆ ಆಮಂತ್ರಣ ಪತ್ರಿಕೆಯನ್ನು ಛಾಪಿಸಿ ಇವನನ್ನೇ ಮದುವೆಗೆ ಕರೆದುಬಿಡುತ್ತೇನೆಂದು ಬ್ಲಾಕ್ ಮೇಲ್ ಮಾಡುವ ಮಟ್ಟಿಗೂ ಹೋಗಿಬಿಟ್ಟಿದ್ದರು. ಅವನ ತಾಯಿ ಆತನಿಗೆ ಹೇಗಾದರೂ ಮಾಡಿ ಮದುವೆಗೆ ಒಪ್ಪಿಸು ಮಾರಾಯ ಎಂದು ದಿನವೂ ಫೋನ್ ಮಾಡಿ ಅಳಲು ಹಂಚಿಕೊಳ್ಳುತ್ತಿದ್ದರು. “ನೋಡು ಮಾರಾಯ ಹವ್ಯಕರಲ್ಲಿ ಮದುವೆಯಾಗುತ್ತೇನೆ ಎಂದರೇ ಹೆಣ್ಣಿಗೆ ಗತಿಯಿಲ್ಲ ಅಂಥದ್ದರಲ್ಲಿ ನಿನಗೆ ಸಿಕ್ಕಿರುವ ಅವಕಾಶಗಳನ್ನು ಯಾಕೆ ಮಿಸ್ ಮಾಡಿಕೊಳ್ತೀಯಾ..?” ಎಂದು ನಾನು ಕೇಳಿದಾಗಲೆಲ್ಲ ಆತನ ಬಳಿ ಇದ್ದುದು ಮೌನದ ಉತ್ತರ ಮಾತ್ರ.
ಅದ್ಯಾಕೋ ಒಂದು ದಿನ ನನ್ನ ಹತ್ತಿರ ತಡೆದುಕೊಳ್ಳಲಾಗಲಿಲ್ಲ. ಚಹಾ ಅಂಗಡಿಯಲ್ಲಿ ಜನವಿದ್ದರೂ ಹಿಂದೆ ಮುಂದೆ ನೋಡದೇ ಕೂಗಿಯೇಬಿಟ್ಟೆ.”ಇಡೀ ಊರಿಗೆ ಅನ್ನ ಹಾಕಿದ ತಾಯಿ ಕರುಳು ಕಣೋ ಅದು..! ಯಾಕೋ ಆ ಜೀವಕ್ಕೆ ಅಷ್ಟೊಂದು ನೋಯಿಸ್ತೀಯಾ? ನಿನ್ನಿಂದ ಏನ್ ತಾನೇ ಕೇಳಿದವಳು ಮಾರಾಯ? ಯಾಕೋ ಹೀಗ್ ಮಾಡ್ತಿದೀಯಾ?” ಅಂದಾಗ
“ನೋಡು ಪ್ರಸಾದ, ಕೆಲವೊಂದು ವಿಷಯಗಳು ಮೇಲ್ನೋಟಕ್ಕೆ ಸರಳವಾಗಿ ಕಾಣ್ತವೆ.ಇಳೀತಾ ಹೋದಷ್ಟೂ ಆಳ.. ಬಹಳ ಆಳ ಇರುತ್ತೆ ಕಣೊ” ಎಂದಿದ್ದ. ರಾಘವ ಇಷ್ಟು ವೇಗವಾಗಿ ಪ್ರತಿಕ್ರಿಯಿಸಿದ್ದು ಇದೇ ಮೊದಲ ಬಾರಿ ಎನಿಸುತ್ತದೆ.
“ಆಯ್ತು ರಾಘವ.. ಹೇಳು, ನಿಂಗೆ ಅಸಲು ತೊಂದರೆ ಆದ್ರು ಏನು? ಯಾಕೇ ಹೀಗ್ ಮಾಡ್ತಿದೀಯಾ? ಎಲ್ಲವನ್ನೂ ಹೇಳು” ನಾನು ಮುದವಾಗಿಯೇ ಕೇಳಿದೆ. ಬಹುಶಃ ರಾಘವನಿಗೂ ತನ್ನ ದುಃಖಗಳನ್ನು ಒಳಗೆ ತುಂಬಿಟ್ಟುಕೊಂಡು ಮನಸ್ಸು ಪ್ರೆಶರ್ ಕುಕ್ಕರಿನಂತಾಗಿತ್ತು ಎನಿಸುತ್ತದೆ. ಅದು ಸೀಟಿಯಾದಾಗ ಕೇಳುವ ಕಿವಿಗಳು ಬೇಕಿದ್ದವು ಅವನಿಗೆ. ಅವನ ಹೆಗಲ ಮೇಲೆ ಕೈಹಾಕುತಿದ್ದಂತೆ ಆತನಿಗೆ ಏನನ್ನಿಸಿತೋ ಏನೋ. ಮೊದಲಿನಿಂದ ನಡೆದಿದ್ದೆಲ್ಲವನ್ನೂ ವಿವರಿಸುತ್ತಾ ಹೋದ.
**************
ಅಂದು ಮಹಾಶಿವರಾತ್ರಿ. ಗೋಕರ್ಣದ ರಥೋತ್ಸವ. ಹಿಂಡುಹಿಂಡಾಗಿ ಜನ ಪ್ರಪಂಚದ ಮೂಲೆ ಮೂಲೆಗಳಿಂದ ಬಂದಿದ್ದರು. ಎಲ್ಲೆಲ್ಲೂ ಸಡಗರ-ಸಂಭ್ರಮ. ಮಹಾಬಲೇಶ್ವರನ ದರ್ಶನಕ್ಕೆ ಕಿಲೋಮೀಟರುಗಳಷ್ಟುದ್ದದ ಸರತಿ ಸಾಲು. ರಥಬೀದಿಯಲ್ಲಿ ಕಿಕ್ಕಿರಿದು ತುಂಬಿದ ಜನರ ನಡುವೆ ಆಳೆತ್ತರದ ರಥವನ್ನು ಜನ ಭಾವೈಕ್ಯತೆಯ ಪ್ರತೀಕವೋ ಎಂಬಂತೆ ಎಳೆಯತ್ತಿದ್ದಾರೆ. ಎಲ್ಲೆಲ್ಲೂ ಜನ! ಕೈಕಾಲುಗಳ ಸಂಧಿಗಳಲ್ಲಿ, ಹೆಂಚು-ಟೆರೇಸು-ಮರಗಳಲ್ಲಿ, ಓಣಿ-ಕೇರಿ ಕಿರುದಾರಿಗಳಲ್ಲಿ ಎಲ್ಲೆಲ್ಲೂ ಜನ! ನನಗಂತೂ ಜೀವನದ ೨೧ ಶಿವರಾತ್ರಿಗಳಲ್ಲಿ ಎಷ್ಟೇ ಕಷ್ಟ ಪಟ್ಟರೂ ಅಷ್ಟುದ್ದದ ತೇರಿನೊಳಗೆ ಬಾಳೆಹಣ್ಣೆಸೆಯಲು ಸಾಧ್ಯವಾಗಿರಲಿಲ್ಲ. ಬಾಳೆಹಣ್ಣು ತೇರಿನೊಳಕ್ಕೆ ಹೋಗಿ ಬೀಳುವುದನ್ನು ಶುಭ ಶಕುನವೆಂದೆ ಭಾವಿಸಲಾಗುತ್ತದೆ. ರಥ ನನ್ನೆಡೆಗೆ ಬರುತ್ತಿದ್ದಂತೆಯೇ ಈ ಬಾರಿ ತಡಮಾಡಲಿಲ್ಲ. ಹರ ಹರ ಮಹಾದೇವ ಎನ್ನುತ್ತಾ ಬಾಳೆಹಣ್ಣು ಎಸೆದೇ ಬಿಟ್ಟೆ. ಕೊನೆಗೂ ಬಾಳೆಹಣ್ಣು ತೇರು ಸೇರಿತು. ಏನೋ ಅದ್ಭುತವಾದ ಭಾವ ಮನಸ್ಸಲ್ಲಿ. ಏನೋ ಹೊಸತು ಶುರುವಾಗುತ್ತದೆ ಎನ್ನುವಷ್ಟರಲ್ಲಿ ರಥ ನಿಂತೇ ಬಿಟ್ಟಿತು. ಏನೋ ರಥದ ಕಾಲಿನಲ್ಲಿ ದೋಷವುಂಟಾಗಿ ರಥವೇ ಉರುಳುವ ಸಾಧ್ಯತೆ ಇದ್ದುದರಿಂದ ರಥವನ್ನು ನಿಲ್ಲಿಸಲಾಯಿತು. ಎಲ್ಲೆಲ್ಲೂ ಸೂತಕದ ಛಾಯೆ. ಮಹಾಬಲನು ಏನೋ ಅಪಾಯದ ಮುನ್ಸೂಚನೆ ಕೊಟ್ಟಿದ್ದಾನೆಂದು ಜನ ಮಾತನಾಡಿಕೊಳ್ಳಲು ಮೊದಲು ಮಾಡಿದರು. ಆಗಲೇ ನನ್ನ ಗಮನ ರಥವನ್ನು ಬಿಟ್ಟು ಜನರ ಮಾತುಗಳ ಬಗ್ಗೆ ಹರಿದದ್ದು. ಹಾಗೆಯೇ ಎಲ್ಲರನ್ನೂ ಮೂಕವಿಸ್ಮಿತನಾಗಿ ಗಮನಿಸುತ್ತಾ ಇದ್ದಾಗಲೇ ಅವಳನ್ನು ನಾನು ಕಂಡದ್ದು. ತನ್ನಪ್ಪನನ್ನು ತಬ್ಬಿ ಆತಂಕದಿಂದ ಅಳುತ್ತಿದ್ದಳು. ನನಗಂತೂ ಅವಳನ್ನು ನೋಡುತ್ತದಿನ ಇರಬೇಕೆನಿಸಿತ್ತು ಆದರೆ ಜನಜಂಗುಳಿಯ ನೂಕುನುಗ್ಗಲಿನಲ್ಲಿ ಯಾರೋ ನನ್ನನ್ನು ತಳ್ಳಿದರು. ಕೆಳಕ್ಕೆ ಬಿದ್ದರೂ ಅವಳಿಂದ ನಾನು ಕಣ್ಣು ಸರಿಸಲಿಲ್ಲ. ಕೊನೆಗೂ ನನ್ನ ಕವನಗಳ ಕನ್ಯೆಗೆ ಮುಖವೊಂದು ಅಂಟಿತ್ತು.
**********
“ಎಲ್ಲ ಸಂಗೀತಕ್ಕೂ ಹೊಂದುವ ಸಾಹಿತ್ಯ..
ನಿನ್ನ ಮಾತೇ ಅಲ್ಲವೇ?
ಸಂಜೆಕಾಲದಲ್ಲಿ ಹಾರುವ ಹಕ್ಕಿಗಳ ಸಾರಥ್ಯ..
ನಿನ್ನದೆ ಅಲ್ಲವೇ?”
ಅಲ್ಲಿಗೆ ನಾನು ಅವಳಿಗಾಗಿ ಹುಡುಕುವ ಕಾರ್ಯದ ಖಾಯಂ ನೌಕರನಾದೆ. ಕೋಟಿತೀರ್ಥದ ದೀಪೋತ್ಸವವಾಗಿರಲಿ, ಭದ್ರಕಾಳಿ ತಾಯಿಯ ಬಂಡಿ ಹಬ್ಬವಾಗಿರಲಿ ಅವಳನ್ನು ಹುಡುಕುವುದೇ ನನ್ನ ಗುರಿ. ಒಮ್ಮೆ ರಾಮ ದೇವರ ಪಲ್ಲಕ್ಕಿ ಹೊತ್ತು ಸಾಗುವಾಗ ಇವಳು ಆರತಿ ತಟ್ಟೆ ಹಿಡಿದು ನಿಂತದ್ದನ್ನು ಕಂಡು ಅವಳ ಮನೆಯ ವಿಳಾಸ ತಿಳಿದಂತಾಯಿತು. ಯಾಕೆ? ಯಾಕಾಗಿ ಇಷ್ಟೊಂದು ಅವಳ ಬಗ್ಗೆ ಕನಸು ಕಾಣುತ್ತಿರುವೆ? ನನಗವಳಿಂದೇನಾಗುವುದಿದೆ? ಅವಳನ್ನು ನಾನು ಮಾತನಾಡಿಸಲಾದರೂ ಧೈರ್ಯವಿದೆಯೇ? ಮತ್ತೇಕೆ ವ್ಯರ್ಥ ಪ್ರಯತ್ನ? ಇವು ಯಾವುದಕ್ಕೂ ನನ್ನ ಬಳಿ ಉತ್ತರವಿರಲಿಲ್ಲ. ಹುಡುಗಿಯರ ಬಳಿ ಹೇಗೆ ಮಾತನಾಡುವುದು? ಅದರ ಆಳ ಅರಿತ ವ್ಯಕ್ತಿಯೊಬ್ಬವನಿದ್ದಾನೆ. ಅವನೇ ಸಾಜನ್. ಸಮುದ್ರ ತೀರದಲ್ಲಿ ವಿದೇಶಿಗರ ಬಳಿ ಹೋಗಿ ಅವರ ಬಳಿ ಮಾತನಾಡುತ್ತಾ ಅವರಿಗೆ ಮಣಿಹಾರಗಳನ್ನು ಚಿಪ್ಪಿನ ವಸ್ತುಗಳನ್ನು ಮಾರುವವನು. ಮೂಲತಃ ರಾಜಸ್ಥಾನದವನು. ಆತನ ನಿಜನಾಮ ಶಿವಾನಂದ. ವಿದೇಶಿಗರನ್ನು ಸೆಳೆಯಲು ತಾನೇ ಸಾಜನ್ ಎಂದು ಹೆಸರಿಟ್ಟುಕೊಂಡಿದ್ದ.ಅಪ್ಪ ಅಮ್ಮ ಎಲ್ಲಿದ್ದಾರೆ ಎಂದು ತಿಳಿದಿಲ್ಲ ಆತನಿಗೆ.ಉತ್ತರದಲ್ಲಿ ಕಡುಬಡುವರು ಹೀಗೆ ದಕ್ಷಿಣಕ್ಕೆ ಬರುವ ವ್ಯಾಪಾರಿ ಗುಂಪಿನ ಜೊತೆ ತಮ್ಮ ಚಿಕ್ಕಮಕ್ಕಳನ್ನು ಹೀಗೆ ಕಳುಹಿಸಿಬಿಡುತ್ತಾರೆ. ಚಿಲ್ಲರೆ ಕೆಲಸಗಳನ್ನು ಮಾಡುತ್ತಾ ಇವರು ಹೀಗೆ ಇಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ. ಸಾಜನ್ ಇಂತಹ ಸ್ಥಿತಿಯಲ್ಲಿಯೂ ಸಂತೋಷಕ್ಕೆ ಕಾರಣಗಳನ್ನು ಹುಡುಕಿಕೊಂಡವನು. ಅವನು ಮಾತನಾಡುತ್ತಲೇ ದಕ್ಷಿಣ ಆಫ್ರಿಕಾದ ಹರೆಯದ ಹುಡುಗಿಯೋರ್ವಳನ್ನು ಬೀಳಿಸಿಕೊಂಡಿದ್ದ. ಅವಳೊಂದಿಗಿನ ಸಾಹಸ ಕಥೆಗಳನ್ನು ಒಂದೊಂದಾಗಿ ಏನೋ ಮಹತ್ತರ ಸಾಧನೆ ಮಾಡಿದಂತೆ ವಿವರಿಸಿದನು. ಹಾಗೆಯೇ ಹುಡುಗಿಯರ ಬಳಿ ಮಾತನಾಡುವ ಸಲಹೆಗಳನ್ನು ಕೊಟ್ಟನು. ಇತ್ತ ನಾನು ಏನು ಕೇಳಿದರೂ ಮಾತು ಹೊರಬರುತ್ತಿರಲಿಲ್ಲ. ಅವಳ ಕೈಹಿಡಿದು ಯಾವ ಬೀಚಿನಲ್ಲಿ ಸುತ್ತುವುದು? ಓಂ? ಪಾರಾಡೈಸ್? ಕುಡ್ಲೆ? ಹಾಫ್ ಮೂನ್? ಅಥವಾ ಸಾದಾ ಬೀಚ್? ಸಾದಾ ಬೀಚ್ ಬೇಡ ಅಲ್ಲಿ ತುಂಬಾ ಜನ ಇರುತ್ತಾರೆ. ಹೀಗೆ ನನ್ನ ಹುಚ್ಚು ಕಲ್ಪನೆಗಳು ಹೆಚ್ಚುತ್ತಲೇ ಹೋದವು.
ಅದೊಂದು ದಿನ ಎಲ್ಲಿಂದ ಪ್ರತ್ಯಕ್ಷವಾದಳೋ ಈ ಮಹಾತಾಯಿ. ಬಟ್ಟೆಗಣಪತಿಯ ಹೂವಿನಂಗಿಯಲ್ಲಿ ದೀಪ ಹಚ್ಚುತ್ತಾ ನಿಂತಿದ್ದಳು. ಪೂಜೆ ಉಪಾಧ್ಯರ ಮನೆತನದ್ದಾಗಿತ್ತು. ಅವರು ಅವಳ ಮನೆತನಕ್ಕೂ ನಮ್ಮ ಮನೆತನಕ್ಕೂ ಹತ್ತಿರದವರೆಂದು ತೋರುತ್ತದೆ. ಅದಕ್ಕೆ ಅವಳು ಅಲ್ಲಿದ್ದುದು. ನಾನೂ ಹಿಂದೆ ಉಳಿಯಲಿಲ್ಲ. ಅವಳ ಜೊತೆ ಹಣತೆಗಳನ್ನು ನಾನೂ ಹಚ್ಚತೊಡಗಿದೆ. ಅವಳ ಉದ್ದನೆಯ ವೇಲಿಗೆ ಚೂರು ಹಣತೆಯಿಂದ ಬೆಂಕಿ ಹತ್ತುತ್ತಿರುವುದನ್ನು ಕಂಡು ನಾನು ಅವಳ ವೇಲಿನ ತುದಿಗೆ ಕೈಯಿಂದ ಬಡಿದೆ. ಅಷ್ಟೇ..! ಅಲ್ಲಿ ಶುರುವಾಯಿತು ಸ್ನೇಹ. ಜೀವನದಲ್ಲಿ ಸಂಖ್ಯೆಗಳ ಪಾತ್ರ ಮಹತ್ವದ್ದೆಂದು ನಮ್ಮ ಗಣಿತ ಟೀಚರ್ರು ಹೇಳಿದ್ದು ನಾನು ಅವಳ ಮೊಬೈಲ್ ನಂಬರ್ ಪಡೆದುಕೊಂಡಾಗಲೇ. ಅಲ್ಲಿಗೆ ನಮ್ಮ ರಜೆ ಮುಗಿಯಿತು. ಇಂಜಿನಿಯರಿಂಗ್ ನ ನಾಲ್ಕನೇ ವರ್ಷ ಮುಗಿಸಲು ನಾನು ಬೆಂಗಳೂರಿಗೆ ಬಂದೆ. ಅವಳ ಜೊತೆ ಏನೇ ಇದ್ದರೂ ಹಂಚಿಕೊಳ್ಳುತ್ತಿದ್ದೆ. ಅವಳ ಎಲ್ಲ ದುಃಖಕ್ಕೂ ಜತೆಯಾಗಿರುತ್ತಿದ್ದೆ. ಅವಳಲ್ಲಿ ನನಗಿಷ್ಟವಿಲ್ಲದ್ದೂ ಏನೂ ಇರಲಿಲ್ಲ. ಅವಳ ಪ್ರತಿಯೊಂದು ವಿಷಯವೂ ನನಗೆ ಅಕ್ಷರಶಃ ಹುಚ್ಚು ಹಿಡಿಸುತ್ತಿತ್ತು. ಅವಳ ಖುಷಿಗಾಗಿ ನನ್ನ ಸರ್ವಸ್ವವನ್ನೂ ಮುಡಿಪಾಗಿಟ್ಟೆ. ಅವಳನ್ನು ಪ್ರೀತಿಸಲು ಶುರು ಮಾಡಿದೆ. ಹೇಳಿಕೊಂಡೆ. ಒಪ್ಪಿದಳು. ಕನಸುಗಳನ್ನು ಕಟ್ಟಿದೆವು. ಗಂಡ ಹೆಂಡತಿಯೆಂದೇ ಕರೆದುಕೊಂಡೆವು. ಕೊನೆಕೊನೆಗಂತೂ ಅವಳು ನನ್ನ ಜೊತೆಯಿಲ್ಲ, ಅವಳನ್ನು ಭೇಟಿಯಾಗಲು ವರ್ಷ ಕಾಯಬೇಕು ಎಂಬ ಸತ್ಯ ನೆನಪಾದಾಗಲೆಲ್ಲ ಹುಚ್ಚರಂತೆ ಅತ್ತಿದ್ದೂ ಇದೆ. ಜೂನಿನಲ್ಲಿ ಇಂಜಿನಿಯರಿಂಗ್ ಮುಗಿದರೂ ಸಿಕ್ಕ ಕೆಲಸದ ತರಬೇತಿ ಮುಗಿಸುವವರೆಗೆಲ್ಲ ವರುಷ ಕಳೆಯುತ್ತದೆಂದು ತಿಳಿದಿತ್ತು. ಕೊನೆಗೂ ತರಬೇತಿ ಮುಗಿಸಿದೆ. ಈಗ ಕೆಲಸಕ್ಕೆ ಸೇರಿ ೬ ತಿಂಗಳಾಯಿತು.
************
“ಅಯ್ಯೋ! ಇದನ್ನ ಮೊದಲೇ ಹೇಳಬಾರದೇನಪ್ಪ? ಥೋ.. ಅಲ್ವವೋ ಅವಳು ಹವ್ಯಕಳು ಅಂತೀಯಾ.. ಮತ್ತಿನ್ನೇನೋ ತೊಂದರೆ?” ನಾನು ಖುಷಿಯಿಂದ ಕೇಳಿದೆ.
“ಸಮಸ್ಯೆ ಏನಪ್ಪ ಅಂದರೆ ಅವಳು ಬದುಕಿಲ್ಲ..” ರಾಘವ ಹೇಳಿದ.ಅವನನ್ನು ಬಿಗಿಯಾಗಿ ಅಪ್ಪುವುದಷ್ಟೇ ನನ್ನ ಬಳಿ ಆಗುವಂತಹ ಸಹಾಯವಾಗಿತ್ತು. ಹೇಗೆ ತೀರಿಹೋದಳು? ಏನು? ಎತ್ತ? ಅವೇನನ್ನೂ ಕೇಳಿ ಅವನ ಹೃದಯವನ್ನು ಇನ್ನಷ್ಟು ಭಾರಗೊಳಿಸಲು ನನಗೆ ಮನಸ್ಸಾಗಲಿಲ್ಲ. ಆತ ಇಡೀ ರಾತ್ರಿ ಅಳುತ್ತಲೇ ಕುಳಿತ. ಆತ್ಮಹತ್ಯೆಗೆ ಪ್ರಯತ್ನಿಸುವಾಗಲೆಲ್ಲ ಅಮ್ಮನ ನೆನಪಾಗುತ್ತದಂತೆ ಅವನಿಗೆ. ಯಾಕೆಂದರೆ ಅಮ್ಮ ತನ್ನಿಡೀ ಜೀವನವನ್ನು ಗಂಡನಿಲ್ಲದೇ ಅವನಿಗಾಗಿ ಸವೆದಿದ್ದಾಳೆ. ಅವಳಿಗಾದರೂ ನಾನು ಬದುಕಬೇಕು ಎಂಬ ಹಠ ಅವನಿಗೆ. ಅಮ್ಮನಿಗೆ ಕಾಲಿಗೆ ಬಿದ್ದು ನೀನು ಹೇಳಿದ್ದೆಲ್ಲವನ್ನೂ ಮಾಡುತ್ತೇನೆ ಮದುವೆ ಬೇಡ ಎಂದು ಕೇಳಿಕೊಂಡ ಮೇಲೆ ತಾಯಿ ಮರುಮಾತಿಲ್ಲದೇ ಒಪ್ಪಿಕೊಂಡಳು. ಈಗಲೂ ಒಮ್ಮೊಮ್ಮೆ ಊರಿಗೆ ಹೋದಾಗ ಆ ಬೀಚುಗಳಲ್ಲಿ ಇಡೀ ರಾತ್ರಿ ಮಲಗಿ ಬಿಡುತ್ತಾನೆ. ಬೆಳಿಗ್ಗೆ ಎದ್ದು ರಾಮತೀರ್ಥದಲ್ಲಿ ಸ್ನಾನ ಮಾಡಿ ಮನೆಗೆ ಬರುತ್ತಾನೆ.
“ನನ್ನಿಂದ ದೂರಿದ್ದರೂ
ನನ್ನೊಡನೆಯೆ ಉಳಿದ
ಅವಳ ಹೆಜ್ಜೆಗುರುತುಗಳು
ಹೃದಯದಲ್ಲಿ ಇನ್ನೂ ಗಟ್ಟಿಯಾಗಿ ಅಚ್ಚೊತ್ತಿವೆ.
ಎಷ್ಟೇ ಆದರೂ ಮರುಭೂಮಿಯೆ ತಾನೆ..?
ಆದರೆ ಅವಳು ಮರೀಚಿಕೆಯಲ್ಲ..”
ಮೊನ್ನೆ ತಾನೇ ಈ ಸಾಲುಗಳನ್ನು ಅವನ ಡೈರಿಯಲ್ಲಿ ಓದಿದೆ. ಪ್ರೀತಿಯೆಂದರೆ ಹಾಗೆ. ಅದು ದೇಹಗಳ ನಡುವಿನ ಸಂಬಂಧವೇ ಅಲ್ಲ. ಎಂದಿಗೂ ರಾಘವ ಹಾಗೂ ಅವಳ ದೇಹಗಳು ಒಂದಾಗದಿರಬಹುದು, ಆದರೆ ರಾಘವ ಮಾತ್ರ ಅವಳ ನೆನಪುಗಳಲ್ಲೇ ಅವಳ ಪ್ರೀತಿಯನ್ನು ಭಾವಿಸುತ್ತಾನೆ. ಅವಳ ಬಳಿ ಈಗಲೂ ಎಲ್ಲವನ್ನೂ ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಾನೆ. ಎರಡು ಆತ್ಮಗಳು ಒಂದಾಗಿ ಅವಳು ಅವನಲ್ಲೇ ಜೀವಿಸುತ್ತಾಳೆ. ಇಬ್ಬರೂ ನಗುತ್ತಾರೆ, ಅಳುತ್ತಾರೆ ಹಾಗೂ ಇನ್ನೂ ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ.
ಮೊನ್ನೆ ಶಿವರಾತ್ರಿಗೆ ನಾನೂ ಅವನ ಬಳಿಯೇ ಇದ್ದೆ.
“ಈ ಸಲ ಶಿವರಾತ್ರಿಗೂ ತೇರು ನಿಲ್ಲೋ ಚಾನ್ಸ್ ಇದ್ಯಾ ಮತ್ತೆ?” ಎಂದು ಕೇಳಿದಾಗ “ಇಲ್ಲ. ಇನ್ನು ಯಾವತ್ತೂ ಈ ತೇರು ನಿಲ್ಲಲ್ಲ” ಎಂದಿದ್ದ.. “ಅದಿರಲಿ,ಅವಳ ಹೆಸರೇನು ಅಂತ ನನಗೆ ನೀನು ಹೇಳಲೇ ಇಲ್ಲ? ” ಎಂಬ ಪ್ರಶ್ನೆಗೆ ಆತನ ಉತ್ತರ,
“ಅವಳ ಹೆಸರು…ಸಾಹಿತ್ಯಾ…”