ಮೂರು ತಿಂಗಳ ಬಿರು ಬೇಸಿಗೆಯಲ್ಲಿ ಬೆಂದು ಬೇಸತ್ತ ಮನಕೆ ಹೊಸ ಆಸೆಗಳನು ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳಲು ಮಳೆಗಾಲ ಪ್ರಾರಂಭವಾಗಲೇಬೇಕು. ಪೃಥ್ವಿ ಮೂರು ತಿಂಗಳು ಆ ಸೂರ್ಯನ ಉರಿ ಶಾಖಕ್ಕೆ ಬಳಲಿ ಮೇಘರಾಯನ ಆಗಮನಕ್ಕೆ ಕಾದು ಕುಳಿತಿದ್ದಾಳೆ. ಎಂದು ಬರುವನೋ ಈ ಮಳೆರಾಯ ಅಂತ ರೈತ ಮುಗಿಲೆಡೆಗೆ ಕಣ್ಣನಿಟ್ಟು ಕಾಯುತಿದ್ದಾನೆ. ಗಿಡ ಮರಗಳು ಹೊಸ ವಸಂತವನ್ನು ಸ್ವಾಗತಿಸಲು ಕಾಯುತಿದ್ದಾವೆ. ಅದೆಷ್ಟು ಕೋಪವೋ ಆ ಸೂರ್ಯನಿಗೆ ಗೊತ್ತಿಲ್ಲ, ಎಲ್ಲವನ್ನು ಸುಟ್ಟುಬಿಡುತ್ತೇನೆ ಅಂತ ತುದಿಗಾಲಲ್ಲಿ ನಿಂತಿದ್ದಾನೆ. ನೀರಿಲ್ಲದೆ ಪಶು ಪ್ರಾಣಿಗಳು ಸೂರ್ಯನಿಗೆ ಶಾಪ ಹಾಕುತ್ತಿವೆ. ಊರ ಮೂಲೆಯಲಿ ಕುಂತ ಅಜ್ಜ ಕೈಯಲ್ಲಿ ಕೋಲು ಹಿಡಿದುಕುಂಟುತ್ತ, ಅತ್ತಲಿಂದಿತ್ತ ಇತ್ತಲಿಂದತ್ತ ಮೆಲ್ಲಗೆ ನೆಡೆಯುತ್ತಾ ಗಳಿಗೆಗೊಮ್ಮೆ ಆಕಾಶವನ್ನೇ ನೋಡುತಿದ್ದಾನೆ. ವರುಣರಾಯನಿಗೆ ಮಾಡುವ ಎಲ್ಲಾ ಪೂಜೆಗಳೂ ಹರಕೆಗಳೂ ಮಾಡಿಯಾಗಿದೆ. ಅದೇಕೊ ಗೊತ್ತಿಲ್ಲ ಆತ ಮನುಜನ ಮೇಲೆ ಕರುಣೆಯೇ ತೋರುತಿಲ್ಲ. ಎಲ್ಲರ ಮನಸ್ಸಿನಲ್ಲೂ ಒಂದೇ ಕೋರಿಕೆ, ನೀ ಬೇಗ ಬಾ ಮಳೇರಾಯ.
ಮುಂಚೆ ಅಂದರೆ ನಮ್ಮ ಅಜ್ಜನಕಾಲದ ಮಳೆಗಾಲಕ್ಕೂ ಈಗಿನ ಕಾಲದ ಮಳೆಗಾಲಕ್ಕೂ ಬಹಳ ವ್ಯತ್ಯಾಸವಿದೆ ಬಿಡಿ. ಪ್ರಕೃತಿ ದಿನೇ ದಿನೇ ಮಾನವನ ಮೇಲೆ ಕೋಪತಾಳುತಿದ್ದಾಳೆ ಅನ್ನಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರಕೃತಿಗೆ ಕಾಲಗಳೇ ಮರೆತುಹೋಗುತ್ತಿದೆಯೋ ಅಥವಾ ಮನುಷ್ಯನ ಸೊಕ್ಕಿಳಿಸಲು ಮುನಿಸು ತೋರಿಸುತ್ತಿದ್ದಾಳೋ ತಿಳಿಯದಂತಾಗಿದೆ. ಜೂನ್ ಬಂತೆಂದರೇ ಮಳೆಗಾಲ ಆರಂಭ ಅಂತಾ ಇನ್ನು ಮುಂದೆ ಹೇಳೋದು ಸ್ವಲ್ಪ ಕಷ್ಟಾನೆ. ಅದೇನೆ ಇರಲಿ ಮಳೆಗಾಲದಲ್ಲಿ ಪ್ರಕೃತಿಯ ಸೊಬಗನ್ನು ಕಂಡು ಅನುಭವಿಸದೇ ಇದ್ದರೇ ಮನುಷ್ಯನ ಬದುಕು ಅಪೂರ್ಣವಾದಂತೆ.
ಜೀವನದಲ್ಲಿ ಎಲ್ಲದಕ್ಕೂ ಪ್ರಾರಂಭ ಮತ್ತು ಕೊನೆ ಇರುತ್ತದೆ. ಕೆಲವೊಂದು ಪ್ರಾರಂಭಗಳು ಜೀವನಕ್ಕೆ ದೊಡ್ಡ ತಿರುವನ್ನು ಕೊಟ್ಟರೆ ಇನ್ನು ಕೆಲವೊಂದು ಅಂತ್ಯಗಳು ಕೆಟ್ಟ ನೆನಪುಗಳನ್ನು ಬಿಟ್ಟು ಹೋಗುತ್ತವೆ. ಎಲ್ಲವನ್ನು ಸರಿಸಮವಾಗಿ ತೂಗಿಕೊಂಡು ಹೋದರೆ ಮಾತ್ರ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಬೇಸಿಗೆಯ ಬೇಗೆಗೆ ಬೆಂದುಹೋದ ಭೂಮಿಗೆತಂಪು ಸೂಸುವ ಮಳೆ ಬರೀ ಭೂಮಿಗಷ್ಟೇ ಅಲ್ಲಾ ಮನಸ್ಸುಗಳಿಗೂ ಮಧುರ ಉಲ್ಲಾಸವನ್ನು ತರುತ್ತದೆ. ಮೊದಲ ಮಳೆ ಹನಿ ಭೂಮಿಗೆ ಬಿದ್ದಾಗ ಭೂತಾಯಿಯ ಹರುಷಕೆ ಹೋಲಿಕೆಯೆಇಲ್ಲ. ಗಿಡ ಮರಗಳಿಗೆ, ಪ್ರಾಣಿಪಕ್ಷಿಗಳಿಗೆ ಮತ್ತು ಮಾನವನಿಗೆ ಸುಂದರ ಕ್ಷಣಗಳನ್ನು ಕಟ್ಟಿಕೊಡುತ್ತಾನೆ ಮಳೆರಾಯ.
ನನಗೆ ಮಳೆಗಾಲ ಬಂತೆಂದರೆ ಬಹಳ ಖುಷಿ. ಸಂಪೂರ್ಣ ಯಾಂತ್ರೀಕೃತವಾಗುತ್ತಿರುವ ನಗರಜೀವನಕ್ಕೆ ಸ್ವಲ್ಪರಿಲ್ಯಾಕ್ಸ್ ಬೇಕೆಂದಾಗ ಪ್ರಕೃತಿಯೊಂದಿಗೆ ಬೆರೆಯುವುದಕ್ಕಿಂತ ಬೇರೆ ಒಳ್ಳೆ ಆಯ್ಕೆಇಲ್ಲ. ಮಳೆಗಾಲದಲ್ಲಿ ಒಂದಷ್ಟು ದಿನ ಮಲೆನಾಡಲ್ಲೇ ಇದ್ದು ಪ್ರಕೃತಿಯ ಸೊಬಗನ್ನ ಸವಿಯುವ ಆಸೆ. ಆ ಜಡಿಮಳೆ, ಎಲ್ಲೆಲ್ಲೂ ಸಂತಸದಿಂದ ಹರಿಯುತ್ತಿರುವ ಜಲಧಾರೆ, ಎಲ್ಲೆಲ್ಲೂ ಹಸಿರ ಚಿತ್ರಣ. ಅಬ್ಬಾ ಎಷ್ಟು ಚೆಂದ ಅಂತಿರಾ. ಬಲ್ಲವನೇ ಬಲ್ಲ ಬೆಲ್ಲದ ರುಚಿಯನು ಅಂತಾರಲ್ಲಾ ಹಾಗೆ. ಈ ಸುಂದರ ಪ್ರಕೃತಿಯನು ಸವಿದವನಿಗೆ ಗೊತ್ತು.
ಮೊನ್ನೆ ರೋಹಿತ್ ಚಕ್ರತೀರ್ಥರ “ಅಂಬರವೇ ಸೋರಿದರೂ ಅಂಬರೆಲ್ಲಾ ಸೋತೀತೇ?” ಲೇಖನ ಓದುವಾಗ ಮಳೆಗಾಲದ ದಿನಗಳು ನೆನಪಾದವು. ಮಳೆಗಾನ ಪ್ರಾರಂಭವಾದರೆ ಮೂಲೆಯಲ್ಲಿ ಮುದುಡಿ ಮಲಗಿದ್ದ ಕೊಡೆಗಳು ಕೆಲಸಕ್ಕೆ ಹಾಜರಿ. ಬಣ್ಣ ಬಣ್ಣದ ಕೊಡೆಗಳು. ಲಲನೆಯರು ಬಣ್ಣ ಬಣ್ಣದಕೊಡೆ ಹಿಡಿದು ನಡೆಯುತ್ತಿದ್ದರೆ ಕಾಮನಬಿಲ್ಲು ಆಕಾಶದಿಂದ ಧರೆಗಿಳಿದಂತೆ. ಇನ್ನು ಮಳೆಗಾಲದಲ್ಲಿ ಸ್ನೇಹಿತರು, ಮನೆಮಂದಿಯೆಲ್ಲಾ ಒಂದೆಡೆ ಸೇರಿದರೆ ಒಂದಷ್ಟು ಹರಟೆ ಹೊಡೆಯುತ್ತಾ ಅಮ್ಮ ಮಾಡಿದ ಹಲಸಿನಕಾಯಿ ಚಿಪ್ಸ್ ಮತ್ತು ಹಪ್ಪಳ ಸವೆಯಲು ಸಿಕ್ಕರೆ ಆಹಾ ಎಂತಾ ಸುಂದರ ಕ್ಷಣಗಳು ಅಂತೀರಾ. ರೈತರಿಗೆ ಸಂಭ್ರಮವೋ ಸಂಭ್ರಮ. ಒಂದೆಡೆ ಗದ್ದೆ ಕೆಲಸಗಳು ಪ್ರಾರಂಭವಾದರೆ, ಇನ್ನೊಂದೆಡೆ ಮಳೆಗಾಲಕ್ಕೆ ಬೇಕಾಗುವ ಎಲ್ಲಾ ತಯಾರಿಗಳು ನಡೆದಿರುತ್ತವೆ. ಮನೆಯಲ್ಲಿದನ ಕರುಗಳಿದ್ದರೆ ಮೂರು ತಿಂಗಳಿಗಾಗುವಷ್ಟು ಬೈಹುಲ್ಲನ್ನು ಮಳೆಯಿಂದ ರಕ್ಷಿಸುವುದೇ ದೊಡ್ಡ ಮಂಡೆಬಿಸಿ. ಇನ್ನು ಶಾಲೆ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಒಂದು ರೀತಿಯ ತೊಂದರೆ, ಒಂದು ಕೈಯಲ್ಲಿ ಕೊಡೆ ಇನ್ನೊಂದು ಕೈಯಲ್ಲಿ ಊಟದ ಬುತ್ತಿ. ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ಬಸ್ಸು ಹಿಡಿದು ಶಾಲೆ ಸೇರಿಕೊಳ್ಳುವಾಗ ಮೈಕೈಯಲ್ಲಾ ಒದ್ದೆ. ಅದೇ ಪಾಡಲ್ಲಿ ಮೇಷ್ಟರು ಹೇಳುವ ಪಾಠ ಕೇಳಬೇಕು. ಮಳೆ ಜೋರಾಯಿತೆಂದರೆ ಆ ದಿನ ಶಾಲೆಗೆ ರಜೆ. ಮಕ್ಕಳಿಗೆ ಖುಷಿಯೋ ಖುಷಿ.
ಮಳೆಗಾಲದಲ್ಲಿ ಮಳೆ ಸರಿಯಾಗಿ ಸುರಿದರೆ ಮಾತ್ರ ಇಡೀ ವರ್ಷ ಯಾವುದಕ್ಕೂಕೊರತೆ ಇರುವುದಿಲ್ಲ. ಇಲ್ಲವಾದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡುವವರೂ ತುಂಬಾ ಕಮ್ಮಿಯಾಗುತ್ತಿದ್ದಾರೆ. ಹಳ್ಳಿಯನ್ನು ಬಿಟ್ಟು ಪಟ್ಟಣ ಸೇರುತ್ತಿರುವವರ ಸಂಖ್ಯೆ ಹೆಚ್ಚಾಗಯತ್ತಿದೆ. ಮುಂಚೆ ಕೃಷಿ ಮಾಡುವುದೆಂದರೆ ಬಹಳಾ ಉನ್ನತ ಕೆಲಸವಾಗಿತ್ತು. ಆದರೆ ಇಂದು ಏನೂ ಕೆಲಸ ಸಿಗದಿದ್ದಾಗ ಕೃಷಿ ಮಾಡುವುದು ಅಂತಾ ಎಲ್ಲರ ಮನಸ್ಥಿತಿಯಾಗಿದೆ. ಅದೇನೆ ಇರಲಿ ಪ್ರಕೃತಿಗೆ ವಿರುದ್ದವಾಗಿ ನಡೆಯಲು ಮಾನವನಿಂದ ಸಾಧ್ಯವಾಗದು. ಕಾಲಕಾಲಕ್ಕೆ ಎಲ್ಲವೂ ಸರಿಯಾಗಿ ನಡೆದರೆ ಮಾತ್ರ ಭೂಮಿಯ ಮೇಲೆ ಪ್ರಕೃತಿ ಹಾಗೂ ಮನುಷ್ಯನ ಇರುವಿಕೆ ಸಾಧ್ಯ. ಆ ವರುಣದೇವ ಮನುಷ್ಯನ ಹಾಗೂ ಪ್ರಕೃತಿಯ ಮೇಲೆ ಎಂದೆಂದಿಗೂ ಕರುಣೆತೋರಲಿ ಎಂದು ಬೇಡಿಕೊಳ್ಳೋಣ.
ಪ್ರತೀದಿನ ಬಿಡುವಿಲ್ಲದ ಕೆಲಸದಲ್ಲಿ ಮನಸ್ಸಿಗೆ ನೆಮ್ಮದಿ ಸಿಗುತ್ತಿಲ್ಲವಾದಲ್ಲಿ ಒಮ್ಮೆ ಮಲೆನಾಡಿಗೆ ಬಂದು ಕೆಲ ಕಾಲ ಪ್ರಕೃತಿಯೊಂದಿಗೆ ಕಾಲ ಕಳೆಯಿರಿ. ನಿಜವಾಗಿಯೂ ಒಂದು ದೊಡ್ಡ ಶಕ್ತಿ ನಿಮ್ಮಲ್ಲಿ ಹರಿಯುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮಳೆಯಲ್ಲಿ ನೆನೆಯುವ ಆಸೆ ಯಾರಿಗಿಲ್ಲ ಹೇಳಿ. ಮೊದಲ ಮಳೆಯಲಿ ನೆನೆದ ಸುಂದರ ಕ್ಷಣಗಳನ್ನು ನೆನಪಿನ ಪುಸ್ತಕದಲ್ಲಿ ಬರೆದಿಡಿ.