ಕಥೆ

ಕಾಮಿತಾರ್ಥ ಭಾಗ 2

ಕಾಮಿತಾರ್ಥ – 1

ಜಪಾನೀ ಮೂಲ: ಹರುಕಿ ಮುರಕಾಮಿ

ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ

ಟೆಂಗೊ ತನ್ನ ತಂದೆಯ ಕತೆಯನ್ನು ಪೂರ್ತಿ ನಂಬಿರಲಿಲ್ಲ. ತಾನು ಹುಟ್ಟಿದ ಕೆಲ ದಿನಗಳಲ್ಲೆ ಆಕೆ ಸತ್ತಳು ಎನ್ನುವುದಂತೂ ಶುದ್ಧ ಸುಳ್ಳು ಎನ್ನುವುದು ಅವನಿಗೆ ಗೊತ್ತಿತ್ತು. ಯಾಕೆಂದರೆ ಅವಳ ಹೆಸರಿನಲ್ಲಿ ಒಂದು ನೆನಪು ಅವನ ಮನಸ್ಸಿನೊಳಗೆ ಹಾರಿ ಹೋಗದ ಹಕ್ಕಿಯಂತೆ ಬೆಚ್ಚನೆ ಕೂತಿದೆ. ಆಗವನಿಗೆ ಒಂದೂವರೆ ವರ್ಷ. ಅವಳು ಈ ಪುಟ್ಟ ಮಗುವಿನ ಮೆತ್ತನೆ ಹಾಸಿಗೆಯ ಪಕ್ಕ ನಿಂತಿದ್ದಾಳೆ. ಅವಳ ಜೊತೆ ಇನ್ಯಾರೋ ಪರಪುರುಷ ಇದ್ದಾನೆ. ಹೌದು, ಪರಪುರುಷನೇ. ಯಾಕೆಂದರೆ ತಾನು ದಿನಾ ನೋಡುವ ದೊರಗು ಮುಖದ ಗಂಡಸಿಗೂ ಈ ವ್ಯಕ್ತಿಗೂ ಬಹಳ ವ್ಯತ್ಯಾಸವಿದೆ. ಅಮ್ಮ ರವಿಕೆ ಕಳಚಿದ್ದಾಳೆ. ಆತ ಅವಳೆದೆಯಲ್ಲಿ ಮುಖ ಹುದುಗಿಸಿದ್ದಾನೆ. ಟೆಂಗೊ ಅವರ ಪಕ್ಕದಲ್ಲಿ ಮಲಗಿದ್ದಾನೆ. ಅವನ ಉಸಿರಾಟ ಕೋಣೆಯೆಲ್ಲ ಕೇಳುವಷ್ಟು ಜೋರಾಗಿ ಹೊಮ್ಮುತ್ತಿದೆ. ಆದರೆ ಅವನಿಗೆ ನಿದ್ದೆ ಬಂದಿಲ್ಲ. ಬಂದಿದೆ ಎಂಬಂತೆ ಮಲಗಿದ್ದಾನೆ ಅಷ್ಟೆ. ಅವನ ಚಿಕ್ಕ ಕಣ್ಣು ಅಮ್ಮನನ್ನು ನೋಡುತ್ತಿದೆ. ಇದು ಟೆಂಗೊನ ಬಳಿ ಇರುವ ಅವನ ತಾಯಿಯ ಕಪ್ಪುಬಿಳುಪು ಫೋಟೋ. ಹತ್ತು ಸೆಕೆಂಡುಗಳಲ್ಲಿ ಮುಗಿದು ಹೋಗುವ ಆ ಸ್ಪಷ್ಟ ದೃಶ್ಯ ಅವನ ಮಿದುಳಲ್ಲಿ ಎರಕ ಹೊಯ್ದ ಅಚ್ಚಿನಂತೆ ಕೂತು ಬಿಟ್ಟಿದೆ. ಅಮ್ಮನ ಬಗ್ಗೆ ಖಚಿತವಾಗಿ ಅವನಿಗೆ ಗೊತ್ತಿರುವ ವಿವರಗಳು ಇಷ್ಟೆ. ತಾಯಿ-ಮಗನನ್ನು ಬೆಸೆದಿರುವ ಒಂದು ಅನೂಹ್ಯ ಕರುಳ ಬಳ್ಳಿ ಅದು. ಸಂಜೆ ಕೊಟ್ಟಿಗೆಯಲ್ಲಿ ಕೂತು ಮೆಲುಕು ಹಾಕುವ ಹಸುವಿನಂತೆ ಟೆಂಗೊ ಆಗಾಗ ಈ ಕನಸೋ-ನನಸೋ ಎಂಬ ಭ್ರಮೆಯಲ್ಲಿ ಬರೆದಂತಿರುವ ಚಿತ್ರವನ್ನು ಮನಸ್ಸಿನಲ್ಲಿ ರೂಪಿಸಿಕೊಳ್ಳುತ್ತಾನೆ. ಬಾಲ್ಯ ಕಾಲದಲ್ಲಿ ಅಳಿಸಿ ಹೋಗಿರುವ ಉಳಿದೆಲ್ಲ ಚಿತ್ರಗಳ ನಡುವಲ್ಲಿ ಇದೊಂದು ಎಣ್ಣೆ ಬತ್ತದ ದೀಪದಂತೆ ಪ್ರಖರವಾಗಿ ಉರಿಯುತ್ತಿದೆಯಲ್ಲ ಎಂದು ಅವನಿಗೆ ಅಚ್ಚರಿಯಾಗುತ್ತದೆ. ಟೆಂಗೊನ ಅಪ್ಪನಿಗೆ ತನ್ನ ಮಗನ ಮನಸ್ಸಿನೊಳಗೆ ಈ ಅಳಿಸದ ಚಿತ್ರ ಕೂತು ಬಿಟ್ಟಿರುವುದರ ಕುರಿತು ಯಾವ ಕಲ್ಪನೆಯೂ ಇಲ್ಲ. ಅಪ್ಪ ಮತ್ತು ಮಗ ತಂತಮ್ಮ ರಹಸ್ಯಗಳ ಕತ್ತಲೆ ಕೋಣೆಗಳಲ್ಲಿ ಬೀಗ ಜಡಿದುಕೊಂಡು ಕೂತಿದ್ದಾರೆ.

ವಯಸ್ಸಿಗೆ ಬಂದ ಮೇಲೆ ಟೆಂಗೊ ಯೋಚಿಸಿದ್ದುಂಟು. ಅವೊತ್ತು ಅಮ್ಮನ ಎದೆಯಲ್ಲಿ ಮುಖ ಇಟ್ಟಿದ್ದ ಆ ಮನುಷ್ಯನೇ ನನ್ನ ನಿಜವಾದ ತಂದೆಯೇ? ಯಾಕಿರಬಾರದು. ಯೋಚನೆ ಬಲವಾಗುತ್ತಿತ್ತು. ಯಾಕೆಂದರೆ, ಟೆಂಗೊ ಮತ್ತು ಅವನನ್ನು ಮಗನೆಂದು ಒಪ್ಪಿಕೊಂಡಿರುವ ಈ ಎನ್‍ಎಚ್ಕೆ ಕಲೆಕ್ಷನ್ ಏಜೆಂಟಿಗೆ ಯಾವುದೇ ಶಾರೀರಿಕ ಹೋಲಿಕೆ ಇರಲಿಲ್ಲ. ಟೆಂಗೊ ನೀಳ ದೇಹದ ಅಗಲ ಹಣೆಯ ಚೂಪು ಮೂಗಿನ ದುಂಡು ಕಿವಿಗಳ ಮನುಷ್ಯ. ಆದರೆ ಅಪ್ಪನೆಂದು ಕರೆಸಿಕೊಂಡವನು ಅಷ್ಟೊಂದು ಉದ್ದ ದೇಹದವನಲ್ಲ. ಕುಳ್ಳಪ್ಪನೆಂದು ಹೇಳಬಹುದಾದಷ್ಟು ಸಣ್ಣ ಶರೀರಿ. ನೋಡಲಿಕ್ಕೂ ಅವನೇನೂ ಅಷ್ಟು ಆಕರ್ಷಕವಾಗಿರಲಿಲ್ಲ. ಹಣೆ ಕಿರಿದು. ಚಪ್ಪಟೆ ಮೂಗು. ಕುದುರೆಗಿದ್ದ ಹಾಗಿನ ಚೂಪು ಕಿವಿ. ಟೆಂಗೊನ ಮುಖದಲ್ಲಿ ರಾಜ ಗಾಂಭೀರ್ಯ ತುಂಬಿದ್ದರೆ ಅಪ್ಪನ ಮುಖ ಒತ್ತಡದಲ್ಲಿದ್ದಂತೆ, ಸಿಡುಕನಂತೆ ಕಾಣಿಸುತ್ತಿತ್ತು. ಸುತ್ತಲಿನ ಜನ ತಮ್ಮಿಬ್ಬರ ರೂಪಭೇದದ ಬಗ್ಗೆ ಮಾತಾಡಿಕೊಳ್ಳುತ್ತಿದ್ದದ್ದು ಆಗಾಗ ಟೆಂಗೊ ಗಮನಕ್ಕೂ ಬಂದಿತ್ತು.

ಆದರೆ ಟೆಂಗೊಗೆ ಇಂತಹ ದೇಹ ವ್ಯತ್ಯಾಸಗಳಿಂದ ಅಷ್ಟೇನೂ ಸಮಸ್ಯೆಯಾಗುತ್ತಿರಲಿಲ್ಲವೇನೋ. ಅವನನ್ನು ನಿಜಕ್ಕೂ ಚಿಂತೆಗೀಡು ಮಾಡುತ್ತಿದ್ದದ್ದು ಅವರಿಬ್ಬರ ನಡುವೆ ಇದ್ದ ಮಾನಸಿಕ ವ್ಯತ್ಯಾಸಗಳು. ಅವನ ಅಪ್ಪ ಎಂದೂ ಯಾವುದನ್ನೂ ತಿಳಿದುಕೊಳ್ಳುವ – ಹೊರಗಿನ ಜಗತ್ತು ಅದೇನನ್ನು ಜ್ಞಾನದ ಬಾಯಾರಿಕೆ ಎನ್ನುತ್ತದೋ – ಅಂತಹ ಯಾವ ಲಕ್ಷಣಗಳನ್ನೂ ತೋರಿಸಿದವನಲ್ಲ. ಅವನು ಬೆಳೆದು ಬಂದ ಪರಿಸ್ಥಿತಿ, ಆಗಿನ ಬಡತನದ ಸನ್ನಿವೇಶಗಳನ್ನೆಲ್ಲ ನೋಡಿದರೆ ಅವನ ಉದಾಸೀನಕ್ಕೆ ಸಮರ್ಥನೆ ಕೊಡಬಹುದಿತ್ತೆನ್ನೋಣ. ಅಪ್ಪನ ಕಡು ಬಡತನದ ದುರದೃಷ್ಟ ಬಾಲ್ಯದ ಬಗ್ಗೆ ಟೆಂಗೊನಿಗೆ ಆಗಾಗ ಮರುಕ ಕೂಡ ಹುಟ್ಟಿದ್ದಿದೆ. ಆದರೆ, ಜಗತ್ತಿನ ತಿಳಿವಳಿಕೆಯಲ್ಲಿ ಸ್ವಲ್ಪವಾದರೂ ಪಡೆಯಬೇಕೆಂದು ಹಪಹಪಿ ಹುಟ್ಟುವುದಕ್ಕೂ ಈ ಬಡತನ-ಬಾಲ್ಯದ ತೊಂದರೆಗಳಿಗೂ ಸಂಬಂಧ ಇಲ್ಲ ಎನ್ನುವುದು ಟೆಂಗೊನ ನಿಲುವು. ಬದುಕಿನಲ್ಲಿ ತನ್ನ ದಿನನಿತ್ಯದ ಕೆಲಸಗಳನ್ನು ಸುಸೂತ್ರವಾಗಿ ಮಾಡಿಕೊಂಡು ಹೋಗಲು ಬೇಕಾದಷ್ಟು ಅನುಭವ, ಚಾತುರ್ಯ ಅಪ್ಪನಿಗಿತ್ತೆನ್ನುವುದು ನಿಜ. ಆದರೆ, ಅವಕ್ಕೆಲ್ಲ ಮೀರಿದ ಒಂದು ಜ್ಞಾನದ ಹಸಿವು ಇರುತಲ್ಲ, ಅದ್ಯಾಕೆ ಅವನಲ್ಲಿ ಕಾಣಿಸುತ್ತಿಲ್ಲ ಎಂದು ಟೆಂಗೊನಿಗೆ ಆಶ್ಚರ್ಯವಾಗುತ್ತಿತ್ತು. ತನ್ನ ಬದುಕು ನಿಂತ ನೀರಾಗಿ ಕೊಳೆಯುತ್ತಿದೆ ಅಂತಾದರೂ ಅನಿಸಿರಬೇಕಿತ್ತು, ಅಂತಹ ವ್ಯಥೆ ಕೂಡ ಇವನಿಗಿಲ್ಲವಲ್ಲ ಎಂದು ಮತ್ತೆ ಟೆಂಗೊ ಯೋಚಿಸುತ್ತಿದ್ದ. ಅವನು ಎಂದೂ ಪುಸ್ತಕವನ್ನು ಎತ್ತಿಕೊಂಡದ್ದನ್ನು ಟೆಂಗೊ ನೋಡಿಲ್ಲ. ಸಂಗೀತ, ಸಿನೆಮಗಳಲ್ಲೂ ಅವನಿಗೆ ಆಸಕ್ತಿ ಇದ್ದಹಾಗಿರಲಿಲ್ಲ. ಯಾವತ್ತೂ ಅವನು ಹೊರಗಿನ ಸ್ಥಳಗಳಿಗೆ ಪ್ರವಾಸ ಕೂಡ ಹೋದವನಲ್ಲ. ತಾನು ಪ್ರತಿ ದಿನ ಪ್ರತಿ ವಾರ ಸುತ್ತುತ್ತಿದ್ದ ಕಲೆಕ್ಷನ್ ರೂಟುಗಳಲ್ಲೆ ಅವನು ತನ್ನ ಜೀವನದ ಸಾರ್ಥಕ ಕ್ಷಣಗಳನ್ನು ಅನುಭವಿಸುತ್ತಿದ್ದ ಹಾಗಿತ್ತು. ಕಲೆಕ್ಷನ್ನಿಗೆ ಹೊರಡುವ ಮೊದಲು ಯಾವ ಯಾವ ಮನೆ ಎಲ್ಲೆಲ್ಲಿದೆ, ಹೇಗೆ ಹೋದರೆ ಹೆಚ್ಚು ಮನೆ ಮುಟ್ಟಿ ಮಾತಾಡಿಸಬಹುದು ಎಂಬುದನ್ನೆಲ್ಲ ಮ್ಯಾಪಿನಲ್ಲಿ ಬಣ್ಣಬಣ್ಣದ ಪೆನ್ನಿನಿಂದ ಗುರ್ತು ಹಾಕಿಕೊಂಡು ನೋಡುತ್ತಿದ್ದನಾತ, ಜೀವ ವಿಜ್ಞಾನಿಯೊಬ್ಬ ಕ್ರೋಮೋಸೋಮುಗಳನ್ನು ತದೇಕ ಚಿತ್ತದಿಂದ ಅಧ್ಯಯನ ಮಾಡಿದ ಹಾಗೆ!
***

ಟೆಂಗೊ ತನ್ನ ಅಪ್ಪನಿಗೆ ತದ್ವಿರುದ್ಧವಾಗಿದ್ದ. ಅವನಿಗೆ ಆಸಕ್ತಿ ಹುಟ್ಟಿಸದ ವಿಷಯಗಳೇ ಇರಲಿಲ್ಲ ಎನ್ನಬೇಕು. ಶಾಲೆಯಲ್ಲಿ ಚಿಕ್ಕಂದಿನಿಂದಲೇ ಅವನು ಲೆಕ್ಕದಲ್ಲಿ ಮುಂದಿದ್ದ. ಮೂರನೇ ಕ್ಲಾಸಿಗೆ ಬರುವಷ್ಟು ಹೊತ್ತಿಗೆ ಹೈಸ್ಕೂಲಿನ ಹುಡುಗರ ಲೆಕ್ಕಗಳನ್ನೂ ಅವನು ಬಿಡಿಸಿ ತೋರಿಸುವ ಚಮತ್ಕಾರ ಮಾಡುತ್ತಿದ್ದ. ತನ್ನ ತಂದೆಯೊಂದಿಗೆ ಕಳೆಯುತ್ತಿದ್ದ ನೀರಸ ಬದುಕಿಂದ ಮುಕ್ತಿ ಪಡೆಯಲು ಅವನಿಗೆ ಗಣಿತದ ಆಸರೆ ಬೇಕಾಗುತ್ತಿತ್ತು. ಉದ್ದನೆ ಓಣಿಯಲ್ಲಿ ಸಂಖ್ಯೆಗಳನ್ನು ನೇತು ಹಾಕಿದ ಮನೆಗಳ ಕದ ತಟ್ಟುತ್ತ ಅನಂತದವರೆಗೆ ಹೋದಂತೆ ಕನಸು ಕಾಣುತ್ತಿದ್ದ. ಗಣಿತ ಮಾಡುತ್ತಿರುವಷ್ಟು ಹೊತ್ತು ಅವನಿಗೆ ವಾಸ್ತವದ ಎಲ್ಲ ರಗಳೆಗಳಿಂದ ಅತೀತವಾದ ಸ್ವರ್ಗದಲ್ಲಿ ವಿಹರಿಸಿದ ಅನುಭವವಾಗುತ್ತಿತ್ತು. ಗಣಿತ, ಕಲ್ಪನೆಗಳ ಇಟ್ಟಿಗೆಗಳನ್ನಿಟ್ಟು ಕಟ್ಟಿದ ಅದ್ಭುತ ಸೌಧದಂತೆ ಕಾಣಿಸಿದರೆ ಸಾಹಿತ್ಯ ಅವನಿಗೆ ಮಾಂತ್ರಿಕ ಅರಣ್ಯದಂತೆ ಅನಿಸುತ್ತಿತ್ತು. ಗಣಿತ ಸ್ವರ್ಗದ ಉಪ್ಪರಿಗೆಗೆ ಕರೆದೊಯ್ಯುವ ಏಣಿಯಂತೆ ಕಂಡರೆ, ಸಾಹಿತ್ಯ ನೆಲಕ್ಕಂಟಿ ವಿಸ್ತಾರವಾಗಿ ಬೆಳೆದು ನಿಂತ ಅರಣ್ಯದ ಅನುಭವ ಕೊಟ್ಟಿತು. ಈ ಅರಣ್ಯದಲ್ಲಿ ನಗರದಂತೆ ಮ್ಯಾಪುಗಳಿಲ್ಲ, ಕೈಗಂಬಗಳಿಲ್ಲ. ವಯಸ್ಸು-ಬುದ್ಧಿಗಳೆರಡೂ ಮಾಗುತ್ತಾ ಹೋದ ಹಾಗೆ ಗಣಿತದ ಏಣಿಗಿಂತ ಕಥಾರಣ್ಯದ ಹಿಡಿತವೇ ಬಿಗಿಯಾಗುತ್ತಾ ಬಂತು. ಹೌದು, ಕಾದಂಬರಿಯ ಪುಟಗಳಡಿಯಲ್ಲಿ ಕಳೆದು ಹೋಗುವುದು ವಾಸ್ತವ ಜಗತ್ತಿನಿಂದ ಮಾಡುವ ಪಲಾಯನವೇ. ಆಮೇಲೆ ಕತೆ ಮುಗಿಸಿ ಎದ್ದಾಗ ರಮ್ಯಜಗತ್ತಿನಲ್ಲಿ ಅಷ್ಟು ಹೊತ್ತು ಸುಖವಾಗಿ ವಿಹರಿಸಿದವನು ಧುತ್ತನೆ ಈ ವಾಸ್ತವ ಲೋಕದ ಹಳವಂಡಗಳ ನಿತ್ಯನರಕಕ್ಕೆ ಬಂದು ಬಿದ್ದಿರುತ್ತಾನೆ, ಒಪ್ಪೋಣ. ಆದರೆ, ಕತೆ ಓದಿ ಮುಗಿಸುವ ಹೊತ್ತಿಗೆ ತಾನು ಸ್ವಲ್ಪ ಹೊಸ ಮನುಷ್ಯನಾಗಿರುತ್ತೇನೆ, ತನ್ನ ಸುತ್ತಲಿನ ಜಗತ್ತು ಸ್ವಲ್ಪಮಟ್ಟಿಗಾದರೂ ಬೇರೆಯಾಗಿ ಕಾಣಿಸುತ್ತದೆ ಎನ್ನುವುದು ಕೂಡ ನಿಜವಲ್ಲವೆ? ಸಾಹಿತ್ಯ ನಮಗೊಂದು ಹೊಸ ಪದರ ಹುಟ್ಟಿಸುತ್ತದೆ, ಎಷ್ಟೇ ತೆಳುವಾಗಿರಲಿ ಅದು! ಯಾಕೆಂದರೆ ಕತೆಗಳೆಷ್ಟೇ ಸ್ಪಟಿಕ ಸ್ಪಷ್ಟವಾಗಿದ್ದರೂ ಗಣಿತದ ಹಾಗೆ ಈ ಕಥಾರಣ್ಯದಲ್ಲಿ ಇದಮಿತ್ಥಂ ಎನ್ನುವ ಪರಿಹಾರಗಳಿಲ್ಲ. ಸಾಹಿತ್ಯ, ಒಂದು ಸಮಸ್ಯೆಯನ್ನು ಸರಳವೋ ಸಂಕೀರ್ಣವೋ ಆದ ಇನ್ನೊಂದು ರೂಪಕ್ಕೆ ಪರಿವರ್ತಿಸಿ ನಮ್ಮ ಮುಂದೆ ಇಡುತ್ತದೆ ಅಷ್ಟೆ. ಆ ದಾರಿಯಲ್ಲಿ ನಡೆದು ಹೋಗಬೇಕಾದವರು ನಾವೇ. ಕತೆಗಳನ್ನು ಓದಿ ನಮ್ಮೊಳಗೆ ಹುಟ್ಟುವ ಎಚ್ಚರ ಇದೆಯಲ್ಲ ಅದು, ಗೂಢಲಿಪಿಯಲ್ಲಿ ಬರೆದ ಪರಿಹಾರದ ಹಾಗೆ. ತಕ್ಷಣಕ್ಕೆ ಅದು ನೆರವಾಗಲಿಕ್ಕಿಲ್ಲ, ಆದರೆ ಕೈಯಲ್ಲಿ ಪರಿಹಾರವಿದೆಯೆಂಬ ಭರವಸೆಯನ್ನಂತೂ ಹುಟ್ಟಿಸುತ್ತದೆ ಎಂದು ಟೆಂಗೊನ ಮನಸ್ಸು ಹೇಳುತ್ತಿತ್ತು.

ಸಾಹಿತ್ಯದ ಓದಿನಿಂದ ಅವನು ಕಟ್ಟಿಕೊಂಡ ಒಂದು ನಂಬಿಕೆ ಏನೆಂದರೆ – ನನ್ನ ನಿಜವಾದ ತಂದೆ ಅಲ್ಲೆಲ್ಲೋ ಇದ್ದಾನೆ. ಡಿಕನ್ಸ್‍ನ ಕಾದಂಬರಿಯ ಅನಾಥ ಶಿಶುವಿನಂತೆ ತನ್ನ ಬದುಕಿನಲ್ಲೂ ತನಗೆ ಗೊತ್ತಿಲ್ಲದ ಯಾವುದೋ ಅನಿರೀಕ್ಷಿತ ತಿರುವುಗಳು ಬಂದು ಕೊನೆಗೆ ಈ ಸಿಡುಕಪ್ಪನ ಮಡಿಲಿಗೆ ನಾನು ಬಿದ್ದಿರಬೇಕು! ಹಾಗೆ ಯೋಚಿಸಿದಾಗೆಲ್ಲ ಅವನಿಗೆ ಅಸಹ್ಯವಾಗುತ್ತಿತ್ತು. ಆದರೆ, ತಾನಂದುಕೊಂಡದ್ದೇ ನಿಜವಾದರೆ, ತನ್ನ ನಿಜ ಅಪ್ಪ ಹೊರಗೆಲ್ಲೋ ಇರಬಹುದಲ್ಲ ಎನ್ನುವ ಆಶಾಭಾವವೂ ಮೂಡುತ್ತಿತ್ತು. ಆಲಿವರ್ ಟ್ವಿಸ್ಟ್ ಕಾದಂಬರಿ ಓದಿದ ಮೇಲೆ ಟೆಂಗೊ, ಡಿಕನ್ಸ್‍ನ ಉಳಿದೆಲ್ಲ ಕತೆ ಕಾದಂಬರಿಗಳನ್ನೂ ಲೈಬ್ರರಿಯಲ್ಲಿ ಹುಡುಕಿತೆಗೆದು ಓದತೊಡಗಿದ. ಅಲ್ಲಿನ ಅನಾಥ ಮಕ್ಕಳ ಕತೆಗಳೆಲ್ಲ ತನ್ನದೇ ಎಂಬ ವಿಚಿತ್ರ ಆರೋಪ ಮಾಡಿಕೊಳ್ಳುತ್ತ ಭ್ರಮೆ-ವಾಸ್ತವಗಳ ನಡುವೆ ಜೀಕಿದ. ಆ ಕತೆಗಳೊಳಗೆ ಎಷ್ಟು ಮುಳುಗಿಹೋದನೆಂದರೆ ಅವನಿಗೆ ಈ ಮನುಷ್ಯ ಅಪ್ಪನಲ್ಲ ಎನ್ನಿಸುವುದರ ಜೊತೆಗೆ ಈ ಮನೆ ಕೂಡ ತನ್ನದಲ್ಲ ಅನ್ನಿಸತೊಡಗಿತು. ತನ್ನ ನಿಜವಾದ ಅಪ್ಪ-ಅಮ್ಮ ಒಂದಲ್ಲಾ ಒಂದು ದಿನ ಬರುತ್ತಾರೆ, ತನ್ನನ್ನು ಈ ನರಕದಿಂದ ಪಾರು ಮಾಡುತ್ತಾರೆ ಎಂದು ಆಸೆ ಪಡುತ್ತ ಕಾಯತೊಡಗಿದ. ಹಾಗೇನಾದರೂ ಆಗಿ ಬಿಟ್ಟರೆ ತನ್ನ ಹೊಸ ಬದುಕು ಸುಂದರ ಶಾಂತ ಕನಸಿನಂತಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತನಗೆ ಭಾನುವಾರ ಬಯಸಿದ್ದನ್ನು ಮಾಡುವ ಸ್ವಾತಂತ್ರ್ಯ ಸಿಗುತ್ತಲ್ಲ ಎಂದು ಕನಸುತ್ತಿದ್ದ.

ಟೆಂಗೊನ ತಂದೆ ತನ್ನ ಮಗನ ಗ್ರೇಡ್‍ಗಳ ಬಗ್ಗೆ ಹೊರಗೆ ಗೆಳೆಯರೊಂದಿಗೆ, ನೆರೆ ಹೊರೆಯಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ಆದರೆ, ಅವನಿಗೆ ಒಳಗೊಳಗೆ ಟೆಂಗೊನ ಬುದ್ಧಿವಂತಿಕೆಯ ಮೇಲೆ ಅಷ್ಟೇನೂ ಇಷ್ಟವಿದ್ದ ಹಾಗಿರಲಿಲ್ಲ. ಹುಡುಗ ಮನೆಯಲ್ಲಿ ಶಾಂತವಾಗಿ ಓದಿಕೊಂಡೋ ಲೆಕ್ಕ ಬಿಡಿಸುತ್ತಲೋ ಕೂತಿದ್ದರೆ ಅಪ್ಪ ಯಾವ್ಯಾವುದೋ ಕೆಲಸಕ್ಕೆ ಬಾರದ ಕೆಲಸಕ್ಕಾಗಿ ಕರೆಯುವುದು ನಡೆಯುತ್ತಿತ್ತು. ಇಲ್ಲವಾ, ಯಾವುದೋ ಒಂದು ಹಳೆ ವಿಷಯ ಎತ್ತಿ ಮಗನನ್ನು ಸುಮ್ಮನೆ ಜಗಳಕ್ಕೆ ಇಳಿಸಿ ಬುದ್ಧಿಮಾತುಗಳ ಮಳೆ ಸುರಿಯುತ್ತಿದ್ದ. ನಾನು ಇಷ್ಟು ಕಷ್ಟಾ ಪಟ್ಟು ದುಡಿದುತಂದು ಸಾಯ್ತಿದೇನೆ ಅಂತ ಅವನು ಶುರುಮಾಡಿದರೆ ಈ ಮಾತು ತನ್ನ ಮನಸ್ಸಿನ ಯಾವ ಕೋನವನ್ನು ಚುಚ್ಚಲು ಎತ್ತಿದ ಈಟಿ ಎನ್ನುವುದು ಟೆಂಗೊನಿಗೆ ತಿಳಿದು ಹೋಗುತ್ತಿತ್ತು. “ನಿನ್ನ ವಯಸ್ಸಿನಲ್ಲಿ ನಾನು ಕತ್ತೆ ತರಾ ದುಡೀತಿದ್ದೆ. ನನ್ನ ಸ್ವಂತ ಅಪ್ಪ-ದೊಡ್ಡಪ್ಪನೋರೆಲ್ಲ ನನಗೆ ದನಕ್ಕೆ ಬಡಿದ ಹಾಗೆ ಬಡೀತಿದ್ರು. ಒಂದು ಹೊತ್ತು ಹೊಟ್ಟೆ ತುಂಬ ಉಣ್ಣ ಬೇಕಾದ್ರೆ ಮೂರು ಹೊತ್ತು ಉಪವಾಸ ಬೀಳ್ಬೇಕಾಗಿತ್ತು ನಾನು. ಪ್ರಾಣಿ.. ಪ್ರಾಣಿ ಹಾಗೆ ನಡೆಸಿಕೊಳ್ತಾ ಇದ್ರು ನನ್ನನ್ನ. ಇದೆಲ್ಲ ನಿನಗೆ ಗೊತ್ತಿರಲಿ ಅಂತ ಹೇಳ್ತಿದೇನೆ. ಹೊಲಗದ್ದೇಲಿ ಕತ್ತೆ ಹಾಗೆ ದುಡೀದೆ ಆರಾಮಾಗಿ ಕೂತು ನಾಲ್ಕಕ್ಷರ ಕಲ್ತು ಮಾರ್ಕು ತಗೊಳ್ಳೋದರಲ್ಲಿ ದೊಡ್ಡಸ್ತಿಕೆ ಇಲ್ಲ ಅನ್ನೋದು ನೆಪ್ಪಿಟ್ಕೋ” ಎಂದೆಲ್ಲ ಕೋಪದ ಭರದಲ್ಲಿ ಅಪ್ಪ ಅನ್ನಿಸಿಕೊಂಡವನು ಅರಚುತ್ತಿದ್ದ.

ಈ ಮನುಷ್ಯನಿಗೆ ನನ್ನ ಮೇಲೆ ಅಸಾಧ್ಯ ದ್ವೇಷವಿದೆ ಎಂದು ಕಾಲಕ್ರಮೇಣ ಟೆಂಗೊನಿಗೆ ಅನ್ನಿಸಲಾರಂಭಿಸಿತು. ಈತನಿಗೆ ನನ್ನ ಮೇಲೆ ಅಸೂಯೆಯಿದೆ. ಒಂದೋ ನನ್ನ ಅಸ್ತಿತ್ವದ ಮೇಲೆ ಅಥವಾ ನಾನು ಕಳೆಯುತ್ತಿರುವ ದುರಂತಗಳಿಲ್ಲದ ಜೀವನದ ಮೇಲೆ. ಆದರೆ ಸ್ವಂತ ಅಪ್ಪನಾದವನು ತನ್ನ ಮಗನ ಮೇಲೆ ಹೀಗೆ ಕಾರಿಕೊಳ್ಳುತ್ತಾನೆಯೆ? ಟೆಂಗೊನಿಗೆ ತನ್ನ ಅಪ್ಪನ ದ್ವೇಷಕ್ಕೆ ಕಾರಣವಾದ ಮೂಲವನ್ನು ಕೆದಕಬಾರದು ಅನ್ನಿಸಿದರೂ ಆತ ಕಾಲ ಕಳೆದಂತೆ ಹೆಚ್ಚು ಜಿಗುಟಾಗುತ್ತಿದ್ದಾನೆ ಎನ್ನುವುದನ್ನು ಮಾತ್ರ ನಿರಾಕರಿಸಿ ನಿರಾಳವಾಗಿರಲು ಆಗಲಿಲ್ಲ. ಒಮ್ಮೊಮ್ಮೆ ಕೂತು ಯೋಚಿಸಿದಾಗ ಅನ್ನಿಸುತ್ತಿತ್ತು – ಅಪ್ಪ ನನ್ನನ್ನು ದ್ವೇಷಿಸುತ್ತಿದ್ದಾನೋ ಅಥವಾ ಎಂದಿಗೂ ಮರೆಯಲಾಗದ ಯಾವುದೋ ಸಂಗತಿ ನನ್ನ-ಅವನ ಅಸ್ತಿತ್ವದೊಡನೆ ತಳುಕು ಹಾಕಿಕೊಂಡಿರುವುದರಿಂದ ಹೀಗೆಲ್ಲ ಆಡುತ್ತಿದ್ದಾನೋ? ನನ್ನೊಳಗಿನ ಯಾವ ಅಂಶ ಅವನನ್ನು ಈ ಪರಿ ಅಣಕಿಸುತ್ತಿದೆ?
***

ಟ್ರೇನು ಟೋಕಿಯೋ ಸ್ಟೇಷನ್ ಬಿಟ್ಟ ಮೇಲೆ ಟೆಂಗೊ ತಾನು ತಂದಿದ್ದ ಪುಸ್ತಕ ಹೊರ ತೆಗೆದ. ಪ್ರಯಾಣದ ಥೀಮ್ ಇದ್ದ ಒಂದಷ್ಟು ಕತೆಗಳ ಸಂಕಲನ ಅದು. ಅದರಲ್ಲಿ ಜರ್ಮನ್ ಕತೆಗಾರನೊಬ್ಬ ಬರೆದಿದ್ದ ಕತೆಯೊಂದಿತ್ತು. ಬೆಕ್ಕುಗಳ ಪಟ್ಟಣ ಅಂತ ಹೆಸರು. ಇದು ಎರಡು ವಿಶ್ವ ಯುದ್ಧಗಳ ನಡುವಿನ ಅವಧಿಯಲ್ಲಿ ಬರೆದ ಕತೆ ಎಂದು ಮುನ್ನುಡಿಯಲ್ಲಿ ಹೇಳಿದ್ದರು. ಕತೆಯಲ್ಲಿ ಯುವಕನೊಬ್ಬ ಯಾವುದೇ ನಿರ್ದಿಷ್ಟ ಉದ್ದೇಶಗಳಿಲ್ಲದೆ ಯಾತ್ರೆ ಹೊರಟಿದ್ದಾನೆ. ಟ್ರೇನುಗಳನ್ನು ಹತ್ತಿ ಒಂದೂರಿಂದ ಇನ್ನೊಂದೂರಿಗೆ ಭೇಟಿ ಕೊಡುತ್ತಿದ್ದಾನೆ. ಮಧ್ಯದಲ್ಲಿ ಯಾವ ಊರು ಹಿಡಿಸುತ್ತದೋ ಅಲ್ಲೇ ಇಳಿದು ಬಿಡುವವನು ಅವನು! ಆ ಊರಿನ ಅಂದಚಂದ ಬೆಟ್ಟಬಯಲು ಎಲ್ಲ ಸುತ್ತಾಡಿ ಒಂದೆರಡು ದಿನ ತಂಗಿ ಮುಂದಿನ ಊರಿಗೆ ಪ್ರಯಾಣ. ಮತ್ತೆ ರೈಲು ಯಾತ್ರೆ. ಹೀಗಿರಲಾಗಿ, ಒಮ್ಮೆ ಅವನು ಒಂದು ಸುಂದರ ನದಿಯನ್ನು ನೋಡುತ್ತಾನೆ. ಸುತ್ತ ಹರಡಿದ ಬೆಟ್ಟಗಳ ನಡುವೆ ನೀಳವೇಣಿಯ ಜಡೆಯಂತೆ ಹರಡಿದ ನದಿ ಸಂಜೆಗತ್ತಲ ಬೆಳಕಲ್ಲು ಹೊಳೆಯುತ್ತಿದೆ. ಅದಕ್ಕೊಂದು ಚಂದದ ಸೇತುವೆ ಬೇರೆ! ಟ್ರೇನು ಆ ಊರಿನ ಸ್ಟೇಷನ್ನಲ್ಲಿ ಒಂದು ನಿಮಿಷದ ಮಟ್ಟಿಗೆ ನಿಲ್ಲುತ್ತದೆ. ಯಾರೂ ಇಳಿಯದಿದ್ದರೂ ಈ ಯುವಕ ತಕ್ಷಣ ಆ ಊರನ್ನು ನೋಡಿ ಹೋಗಲೇಬೇಕೆಂದು ಇಳಿಯುತ್ತಾನೆ.

ಸ್ಟೇಷನ್ ನಿರ್ಜನವಾಗಿದೆ. ಇಷ್ಟೊಂದು ಭಣಗುಡುವ ಜಾಗವೂ ಇರುತ್ತದಾ ಎಂದು ಆಶ್ಚರ್ಯಪಡುತ್ತ ಯುವಕ ಆ ಸೇತುವೆಯ ಕಡೆ ಹೋಗುತ್ತಾನೆ. ಸೇತುವೆ ದಾಟಿ ಆ ಪುಟ್ಟ ಪಟ್ಟಣದೊಳಕ್ಕೆ ಕಾಲಿಡುತ್ತಾನೆ. ಅಲ್ಲಿನ ಎಲ್ಲ ಅಂಗಡಿ ಮುಂಗಟ್ಟುಗಳೂ ಮುಚ್ಚಿವೆ. ಟೌನ್‍ಹಾಲು ನಿರ್ಜನವಾಗಿದೆ. ಆ ಪಟ್ಟಣದಲ್ಲಿರುವುದು ಒಂದೇ ಒಂದು ಹೋಟೆಲು. ಆದರೆ ಅಲ್ಲೂ ಯಾರೂ ಇಲ್ಲ! ಇಡೀ ಊರಲ್ಲಿ ಜನಗಳೇ ಇಲ್ಲ! ಊರು ಜನರಿಲ್ಲದೆ ಸ್ಮಶಾನದಷ್ಟು ಮೌನವಾಗಿದೆ. ಈ ಊರಲ್ಲಿ ಇಷ್ಟು ಬೇಗ ಎಲ್ಲಾ ಮಲಗುತ್ತಾರಾ, ಅವನಿಗೆ ಅನುಮಾನ. ಗಡಿಯಾರ ರಾತ್ರಿ ಹತ್ತೂವರೆ ಎನ್ನುತ್ತಿದೆ. ಹೇಳಿಕೊಳ್ಳುವಷ್ಟು ತಡವೇನಲ್ಲ ಇದು. ಅಥವಾ ಈ ಊರಲ್ಲಿ ಏನೋ ತೊಂದರೆಯಾಗಿ ಇಲ್ಲಿದ್ದವರೆಲ್ಲ ಗುಳೆ ಹೋಗಿರಬಹುದಾ? ಏನೇ ಆದರೂ ಮುಂದಿನ ಟ್ರೇನು ಇದ್ದದ್ದು ಮರುದಿನ ಮುಂಜಾನೆಗೇ. ಅಲ್ಲಿಯವರೆಗೆ ಹೇಗಾದರೂ ಇಲ್ಲಿ ರಾತ್ರಿ ಕಳೆಯಲೇಬೇಕು. ಏನು ಮಾಡುವುದೆಂದು ಗೊತ್ತಾಗದೆ ಅವನು ಅಲ್ಲಿನ ಖಾಲಿ ಬೀದಿಗಳಲ್ಲಿ ಅತ್ತಿಂದಿತ್ತ ಪಿಶಾಚಿಯಂತೆ ಅಲೆಯುತ್ತಾನೆ
.
ನಿಜ ಹೇಳಬೇಕೆಂದರೆ ಅದೊಂದು ಬೆಕ್ಕುಗಳ ಪಟ್ಟಣ. ಅಲ್ಲಿ ಸೂರ್ಯ ಪೂರ್ತಿ ಕಂತಿ ಜಗತ್ತಿಗೆ ಕತ್ತಲು ಇಳಿದ ಮೇಲೆ ತರಹೇವಾರಿ ಬೆಕ್ಕುಗಳು ಸೇತುವೆ ದಾಟಿಕೊಂಡು ಬರುತ್ತಿದ್ದವು. ಅವು ನಾವು ನೋಡುವ ಸಾಮಾನ್ಯ ಬೆಕ್ಕುಗಳಿಗಿಂತ ಶಾನೆ ದೊಡ್ಡವಿದ್ದವು. ಆದರೂ ಅವುಗಳನ್ನು ಬೆಕ್ಕುಗಳು ಎಂದು ಸುಲಭವಾಗಿ ಗುರುತಿಸಬಹುದಾಗಿತ್ತು. ಅಂಥಾ ವಿಚಿತ್ರ ಬೆಕ್ಕುಗಳನ್ನು ನೋಡಿದ ಯುವಕನಿಗೆ ಎದೆ ನಡುಗಿತು. ಅವನು ಕೂಡಲೇ ಆ ಊರಿನ ನಡುವೆ ಇದ್ದ ದೊಡ್ಡ ಗಡಿಯಾರ ಗೋಪುರ ಹತ್ತಿ ಅಡಗಿ ಕೂತ. ಬೆಕ್ಕುಗಳು ಅವುಗಳ ಪಾಡಿಗೆ ಬಂದವು. ಅಂಗಡಿ, ಹೋಟೇಲ್ ತೆರೆದವು. ಮತ್ತೊಂದಿಷ್ಟು ಬೆಕ್ಕುಗಳು ಬಂದವು. ಅಕ್ಕಿ ಬೇಳೆ ಕೊಂಡವು. ಕಚಪಿಚ ಮಾತಾಡಿಕೊಂಡವು. ಊರ ಕಟ್ಟೆಯಲ್ಲಿ ಕೂತವು. ಎಲೆ ಅಡಿಕೆ ಹಾಕ್ಕೊಂಡು ಹರಟೆ ಹೊಡೆದವು. ಟೌನ್‍ಹಾಲಿನಲ್ಲಿ ಒಂದಷ್ಟು ಬೆಕ್ಕುಗಳು ಸ್ಟಾಂಪ್‍ ಪೇಪರು, ಅರ್ಜಿ, ದಫ್ತರ, ಕರಿಕೋಟು ಬಿಳಿಕೋಟು ಎಲ್ಲ ಹಿಡಿದುಕೊಂಡು ಬಿರುಸಾಗಿ ಕೆಲಸ ಮಾಡುತ್ತಿದ್ದದ್ದು ಯುವಕನಿಗೆ ಕಾಣಿಸುತ್ತಿತ್ತು. ಕೆಲವು ಬೆಕ್ಕುಗಳಂತೂ ಈ ಜಗತ್ತಿನ ರಗಳೆಯೇ ಬೇಡವೆಂಬಂತೆ ನಶ್ವರವಾದಿಗಳಾಗಿ ಬಾರಿನಲ್ಲಿ ಬಿಯರು ಹೀರುತ್ತ ಕೂತು ಬಿಟ್ಟಿದ್ದವು. ಹುಣ್ಣಿಮೆಯ ರಾತ್ರಿಯಾದ್ದರಿಂದ ಇಡೀ ಪಟ್ಟಣದ ಆಗು ಹೋಗುಗಳೆಲ್ಲ ಯುವಕನ ಕಣ್ಣೆದುರು ಕಪ್ಪುಬಿಳುಪಿನ ಸಿನೆಮದ ಹಾಗೆ ನಡೆದು ಹೋಗುತ್ತಿತ್ತು. ಮರುದಿನ ಸೂರ್ಯ ಮೂಡುವ ಹೊತ್ತಿಗೆ ಬೆಕ್ಕುಗಳು ತಮ್ಮೆಲ್ಲ ವ್ಯವಹಾರ ಮುಗಿಸಿಕೊಂಡು ಹೊರಟು ಹೋದವು. ಇಡೀ ಪಟ್ಟಣ ಮತ್ತೆ ಸ್ಮಶಾನದಂತೆ ಸ್ಥಬ್ದವಾಯಿತು. ಯುವಕ ಗೋಪುರದಿಂದ ಇಳಿದು ಬಂದ. ಆ ಊರಿನ ಗಲ್ಲಿಗಲ್ಲಿಗಳಲ್ಲಿ ಮತ್ತೆ ನಡೆದ. ಹಸಿವಾದಾಗ ಅಲ್ಲೆ ಯಾವುದೋ ಅಂಗಡಿಯ ಹೊರಗೆ ಉಳಿದಿದ್ದ ಒಂದಷ್ಟು ಬ್ರೆಡ್ಡು ತಿಂದ. ಹೋಟೇಲಿನ ಒಳಗೆಹೋಗಿ ಗಡದ್ದಾಗಿ ಸಣ್ಣದೊಂದು ನಿದ್ದೆ ತೆಗೆದ. ಕತ್ತಲಾಗುತ್ತಿದೆ ಅನ್ನುವ ಸಮಯಕ್ಕೆ ಮತ್ತೆ ಗಡಿಯಾರ ಗೋಪುರ ಏರಿ ಅಡಗಿ ಕುಳಿತ.

ಹೀಗೆ ಹಗಲು ಹೊತ್ತು ಇಳಿದು ಬಂದು ಆ ಪಟ್ಟಣದಲ್ಲಿ ತಿರುಗೋದು, ರಾತ್ರಿ ಮತ್ತೆ ಗೋಪುರ ಏರುವುದು ನಡೆಯುತ್ತದೆ. ಟ್ರೇನು ಮುಂಜಾನೆ ಒಮ್ಮೆ, ಮತ್ತೊಮ್ಮೆ ಸಂಜೆ ಆ ಊರಿನ ಸ್ಟೇಷನ್ನಲ್ಲಿ ಒಂದು ನಿಮಿಷ ನಿಂತು ಮುಂದೋಡುತ್ತದೆ. ಯಾರೂ ಇಳಿಯುವುದಿಲ್ಲ, ಯಾರೂ ಹತ್ತುವುದಿಲ್ಲ. ಆದರೂ ಟ್ರೇನು ಸರಿಯಾಗಿ ಅರವತ್ತು ಸೆಕೆಂಡುಗಳಷ್ಟು ಹೊತ್ತು ಆ ಊರಲ್ಲಿ ನಿಂತು ಮುಂದುವರಿಯುತ್ತದೆ. ಯುವಕ ಹೀಗೆ ಬಂದು ಹಾಗೆ ಹೋಗಿ ಬಿಡುವ ಯಾವುದಾದರೂ ಟ್ರೇನು ಹಿಡಿದು ಬೆಕ್ಕುಗಳ ಪಟ್ಟಣದಿಂದ ಪಾರಾಗಿ ಹೋಗಬಹುದಿತ್ತು. ಆದರೆ ನಾವು ಬಯಸಿದಂತೆ ಆತ ನಡೆಯುತ್ತಾನೆಯೇ? ಇನ್ನೂ ಬಿಸಿ ರಕ್ತ ಅವನದ್ದು. ಕೆಟ್ಟ ಕುತೂಹಲ ಮತ್ತು ಅಮಿತ ಜೀವನೋತ್ಸಾಹದ ಚಿಗರೆ ಅವನು. ಈ ಪಟ್ಟಣದ ಮಾಯೆ ಅವನನ್ನು ಪರವಶಗೊಳಿಸಿಬಿಟ್ಟಿದೆ. ಇಲ್ಲಿನ ಒಳ ರಹಸ್ಯವನ್ನು ಭೇದಿಸಲೇಬೇಕು, ಇಲ್ಲಿಗೆ ಬೆಕ್ಕುಗಳ ಹೆಸರು ಯಾಕೆ ಬಂತು ಸಂಶೋಧನೆ ನಡೆಸಿಯೇ ತೀರಬೇಕೆಂದು ಮನಸ್ಸು ಗಾಳಿಯಲ್ಲಿ ಗುದ್ದಿ ಚಾಲೆಂಜ್ ಹಾಕಿಕೊಂಡುಬಿಡುತ್ತದೆ.

ಮೂರನೇ ರಾತ್ರಿ ಗಡಿಯಾರ ಗೋಪುರದ ಕೆಳಗೆ ಒಟ್ಟುಗೂಡಿದ ಬೆಕ್ಕುಗಳ ನಡುವೆ ಕಚಪಿಚ ಮಾತಾಯಿತು. “ಹೇ! ಮನುಷ್ಯರ ವಾಸನೆ ಬರತದಲ್ಲಾ?” ಎಂದು ಒಂದು ಬೆಕ್ಕು ಕೇಳಿತು. “ಈಗ ನಿಂಗೂ ಬಂತಾ? ನಂಗೂ ಎರಡು ಮೂರು ದಿನದಿಂದಾ ಈ ವಿಚಿತ್ರ ವಾಸ್ನೆ ಬರ್ತಿದೆ” ಇನ್ನೊಂದು ಕೊತ್ತಿ ತನ್ನ ತೇವಗೊಂಡ ಮೂಗನ್ನುಜ್ಜುತ್ತ ಉತ್ತರ ಕೊಟ್ಟಿತು. “ನಂಗೂ ಬತ್ತ್ ಕಣಾ” ಎಂದು ಮತ್ತೊಂದು ದನಿಗೂಡಿಸಿತು. “ಇದು ವಿಚಿತ್ರವಾಗಿದೆ. ಈ ಜಾಗದಲ್ಲಿ ಮನುಷ್ಯರು ಇರೋದಕ್ಕೆ ಚಾನ್ಸೇ ಇಲ್ವಲ್ಲಾ!” ಎಂದಿತೊಂದು ಹಿರಿಯ ಮಾರ್ಜಾಲ. ಪಿಸು ಮಾತಿನಂತೆ ಶುರುವಾದ ಮಾತು ಸಂತೆಯ ಗದ್ದಲದಂತೆ ಆ ಜಾಗವನ್ನು ತುಂಬಿಕೊಂಡಿತು. ಎಲ್ಲ ಬೆಕ್ಕುಗಳಿಗೂ ಈ ಮನುಷ್ಯವಾಸನೆ ಹೊಡೆದಿತ್ತು. ಹೇಗೆ ಹೇಗೆ ಎನ್ನುತ್ತ ತಲೆಕೆಡಿಸಿಕೊಂಡು ಯೋಚಿಸತೊಡಗಿದವು. ಅವು ತಮ್ಮೊಳಗೆ ಒಂದಷ್ಟು ಗುಂಪು ಮಾಡಿಕೊಂಡು ಪತ್ತೇದಾರಿ ನಾಯಿಗಳಂತೆ ಇಡೀ ಪಟ್ಟಣವನ್ನು ಮೂಸುತ್ತ ಗುಡಿಸಿಹಾಕಿದವು. ವಾಸನೆಯ ಮೂಲ ಗಡಿಯಾರ ಗೋಪುರವೇ ಎಂದು ಕಂಡು ಹಿಡಿಯಲು ಅವುಗಳಿಗೆ ಅರೆತಾಸೂ ಬೇಕಾಗಲಿಲ್ಲ. ಅವುಗಳಲ್ಲಿ ಬಲಿಷ್ಠವಾದ ಮೂರ್ನಾಲ್ಕು ಬೆಕ್ಕುಗಳು ಗೋಪುರ ಹತ್ತುವುದಕ್ಕೆ ಶುರುಮಾಡಿದವು. ಅವುಗಳ ಹೆಜ್ಜೆಯ ಸಪ್ಪಳ ಕೂಡ ಕೇಳಿಸುವಷ್ಟು ಮೌನದಲ್ಲಿ, ಬಡಿಯುವ ಎದೆಯನ್ನು ಅಮುಕಿ ಹಿಡಿದು ಕೂತ ಯುವಕ. ಈ ಬೆಕ್ಕುಗಳು ಹೆಸರಿಗಷ್ಟೇ ಬೆಕ್ಕುಗಳು. ಗಾತ್ರ ಹುಲಿಯದ್ದೇ. ಅವುಗಳ ಕೈಯಲ್ಲಿ ಸಿಕ್ಕಿಬಿದ್ದರೆ ಜೀವಂತ ಮರಳುವ ಆಸೆ ಬಿಟ್ಟೇ ಬಿಡಬೇಕೆನ್ನುವುದು ಖಾತ್ರಿ. ಮನುಷ್ಯರು ಕಾಲಿಡಬಾರದ ಜಾಗಕ್ಕೆ ಬಂದ ತಪ್ಪಿಗೆ ಕೊನೆಗೆ ಬೆಕ್ಕುಗಳ ಕೈಯಲ್ಲಿ ದಾರುಣವಾಗಿ ಕೊನೆಯುಸಿರು ಎಳೆಯುತ್ತೇನೆಂದು ಬಗೆದ.

ಅಷ್ಟರಲ್ಲಿ ಮೂರು ಬೆಕ್ಕುಗಳು ಗೋಪುರ ಹತ್ತಿಯೇ ಬಿಟ್ಟವು. ಮೊದಲ ಬೆಕ್ಕು ತನ್ನ ಮೂತಿಯನ್ನು ಮುಂದೆ ಮಾಡಿ ಹೊಳ್ಳೆಗಳನ್ನು ಅರಳಿಸಿ ಗಾಳಿ ಎಳೆದುಕೊಂಡಿತು. “ಮನುಷ್ಯನದ್ದೇ ವಾಸನೆ. ಸಂಶಯವೇ ಇಲ್ಲ. ಆದರೆ ಯಾರೂ ಕಾಣ್ತಿಲ್ಲವಲ್ಲ!” ಎಂದಿತು. ಎರಡನೆಯದ್ದೂ ಹಾಗೇ ಮಾಡಿ “ಇದು ವಿಚಿತ್ರ! ಇಲ್ಲಿ ನಿಜವಾಗಿಯೂ ಯಾರೂ ಕಾಣಿಸ್ತಾ ಇಲ್ಲ! ಸರಿ, ಬೇರೆ ಕಡೆ ಹುಡುಕೋಣ” ಅಂದಿತು. ಬೆಕ್ಕುಗಳು ಪರಸ್ಪರ ಮುಖ ನೋಡಿಕೊಂಡು ಇದೇನಪ್ಪ ವಿಚಿತ್ರ ಎಂದು ಅಚ್ಚರಿ ಪಡುತ್ತ ಮಾತಾಡಿಕೊಳ್ಳುತ್ತ ಗೋಪುರದಿಂದ ಇಳಿದುಹೋದವು. ಅವುಗಳ ದೊಪ್‍ದೊಪ್ಪನೆ ಹೆಜ್ಜೆಯ ಸಪ್ಪಳ ದೂರವಾಗುತ್ತಿದ್ದ ಹಾಗೆ ಯುವಕ ನೆಮ್ಮದಿಯ ನಿಟ್ಟುಸಿರು ಬಿಟ್ಟ. ಆದರೆ ಅವನಿಗೆ ಈಗ ನಡೆದ ವಿದ್ಯಮಾನದಲ್ಲಿ ಒಂದು ವಿಷಯ ಮಾತ್ರ ಅರ್ಥವಾಗಲಿಲ್ಲ. ಬೆಕ್ಕುಗಳು, ಅಲ್ಲಿದ್ದ ಪುಟ್ಟ ಜಾಗದಲ್ಲಿ ಗುಬ್ಬಚ್ಚಿಯಂತೆ ಕೂತಿದ್ದ ಯುವಕನನ್ನು ಗುರುತಿಸದಿರಲು ಯಾವ ಕಾರಣವೂ ಇರಲಿಲ್ಲ. ಹಾಗಿದ್ದರೂ ತಾನೇಕೆ ಅವುಗಳ ಕಣ್ಣಿಗೆ ಬೀಳಲಿಲ್ಲ, ಯುವಕನಿಗೆ ಒಗಟಾಯಿತು. ಏನೇ ಇರಲಿ, ಮರುದಿನ ಬರುವ ಮೊದಲ ಟ್ರೇನಿಗೇ ಈ ವಿಕ್ಷಿಪ್ತ ಪಟ್ಟಣದಿಂದ ಪಾರಾಗಿ ಹೋಗಿಬಿಡಬೇಕು ಎಂದು ನಿರ್ಧರಿಸಿದ.

ಆದರೆ, ಮರುದಿನ ಟ್ರೇನು ಆ ಸ್ಟೇಷನ್ನಲ್ಲಿ ನಿಲ್ಲಲಿಲ್ಲ. ಅವನ ಕಣ್ಣೆದುರಲ್ಲೇ ಟ್ರೇನು ಹೀಗೆ ಬಂದು ಹಾಗೆ ಹೊರಟು ಹೋಯಿತು. ಮಧ್ಯಾಹ್ನವೂ ಅದೇ ಕತೆ. ಟ್ರೇನಿನ ಮುಂದಿನ ಭಾಗದಲ್ಲಿ ಡ್ರೈವರು ಕೂತದ್ದು ಕೂಡ ಯುವಕನಿಗೆ ಕಾಣಿಸಿತು. ಆದರೆ ಇವನನ್ನು ನೋಡಿಯೇ ಇಲ್ಲವೆನ್ನುವಂತೆ ಟ್ರೇನು ತನ್ನ ಪಾಡಿಗೆ ತಾನು ಜುಗುಜುಗು ಓಡುತ್ತ ಮರೆಯಾಯಿತು. ಮತ್ತೆ ಸಂಜೆ ಇಳಿಯುತ್ತಿದೆ. ಬೆಕ್ಕುಗಳು ಬರುವ ಹೊತ್ತು ಸಮೀಪಿಸುತ್ತಿದೆ. ಯುವಕನಿಗೆ ಕೊನೆಗೂ ಗೊತ್ತಾಗಿದೆ. ಇದು ಬೆಕ್ಕುಗಳ ಪಟ್ಟಣ ಕೂಡ ಅಲ್ಲ; ಲೋಕದ ಕಣ್ಣಲ್ಲಿ ಕಳೆದು ಹೋಗಲಿಕ್ಕೆಂದೇ ಆತ ಬಂದಿಳಿಯಬೇಕಿದ್ದ ನಿಲ್ದಾಣ ಇದು. ಅವನಿಗಾಗಿ ವಿಶೇಷವಾಗಿ ತೆರೆಯಲ್ಪಟ್ಟ ಜಗತ್ತಿನ ಬಾಗಿಲು ಇದು. ಇಲ್ಲಿ ಟ್ರೇನುಗಳು ನಿಲ್ಲುವುದಿಲ್ಲ. ಯಾರೂ ಇಳಿಯುವುದಿಲ್ಲ; ಯಾರೂ ಹತ್ತುವುದಿಲ್ಲ. ಭವದ ಯಾವ ಸಾಧನಗಳೂ ಅವನನ್ನು ಇಲ್ಲಿಂದ ಅವನ ವಾಸ್ತವ ಜಗತ್ತಿಗೆ ಎತ್ತಿಕೊಂಡೊಯ್ಯುವುದಿಲ್ಲ. ಇದು ಆತನ ಗಮ್ಯ. ಕೊನೆಯ ನಿಲ್ದಾಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!