Featured ಪ್ರಚಲಿತ

ಅಷ್ಟಕ್ಕೂ ನಾವು ವೆಂಕಯ್ಯರನ್ನು ಬೆಂಬಲಿಸಿದ್ದೇಕೆ?

ಕೇಂದ್ರ ಸಚಿವರಾದ ಶ್ರೀ ವೆಂಕಯ್ಯ ನಾಯ್ಡುರವರು ಕನ್ನಡ ಕಲಿತಿಲ್ಲ, ಕರ್ನಾಟಕಕ್ಕೆ ಸಂಕಟ ಬಂದಾಗ ಯಾವತ್ತೂ ರಾಜ್ಯದ ಪರ ನಿಂತಿಲ್ಲ, ಕನ್ನಡದಲ್ಲಿ ಟ್ವೀಟ್ ಮಾಡೋದಿಲ್ಲ ಎನ್ನುವ ಕಾರಣಕ್ಕಾಗಿ ಕೆಲವರು ನಾಯ್ಡು ವಿರುದ್ಧ #ವೆಂಕಯ್ಯಸಾಕಯ್ಯ ಅಭಿಯಾನ ನಡೆಸಿ ಭಯಂಕರ ಸ್ವಾಭಿಮಾನ ಮೆರೆದರು. ಕೆಲವರಂತೂ ಮೈಮೇಲೆ ದೇವರು ಬಂದಂತೆ ಬರೋಬ್ಬರಿ ಎರಡು ಭಾರಿ ಮುಕ್ಕಾಲು ಪುಟದ ಲೇಖನಗಳನ್ನು ಬರೆದರು. ಕಡೆಗೆ ಬಿಜೆಪಿ ವೆಂಕಯ್ಯರನ್ನು ರಾಜಸ್ಥಾನಕ್ಕೆ ಕಳುಹಿಸಿದಾಗ ಇದು “ಕನ್ನಡಿಗರ ಜಯ, ಈ ಜಯದ ಕ್ರೆಡಿಟ್ಟು ನಮಗೇ ಸಲ್ಲಬೇಕು” ಎಂಬಂತಹ ಅರ್ಥ ಬರುವ ಮತ್ತೊಂದು ಲೇಖನ ಬರೆದು ಬೀಗಿದರು. ಮತ್ತೆ ಕೆಲವರು ಇಂಗ್ಲೀಷಿನಲ್ಲಿಯೇ ಟ್ವೀಟುಗಳನ್ನು ಮಾಡುವ ಮೂಲಕ ಅಪಾರವಾದ ಕನ್ನಡ ಪ್ರೀತಿ ಮೆರೆದರು. ಈ ಎಲ್ಲಾ ಹಾರಾಟಗಳ ಪರಿಣಾಮವಾಗಿ ವೆಂಕಯ್ಯ ನಾಯ್ಡುಗೆ ಕರ್ನಾಟಕದಿಂದೆ ರಾಜ್ಯಸಭೆ ಟಿಕೆಟ್ ಕೈ ತಪ್ಪಿತು. 

ಆದರಿಲ್ಲಿ ಗಮನಿಸಬೇಕಾದ ಗಮನಾರ್ಹ ಅಂಶವೊಂದಿದೆ, ಅದೇನೆಂದರೆ ಎಷ್ಟು ಜನ #ವೆಂಕಯ್ಯಸಾಕಯ್ಯ ಎಂದರೋ ಅಷ್ಟೇ ಜನ #ವೆಂಕಯ್ಯಬೇಕಯ್ಯ ಎಂದಿದ್ದರು. ಆದರೆ ಇವರ ಹಾರಾಟ #ವೆಂಕಯ್ಯಸಾಕಯ್ಯ ಎಂದವರಿಷ್ಟರಲಿಲ್ಲ. ಪ್ರಮುಖ ಪತ್ರಿಕೆಗಳಲ್ಲಿ ಇದು ಬರಲಿಲ್ಲ. ಆದ್ದರಿಂದಲೋ ಏನೋ ಬಿಜೆಪಿಯ ರಾಜ್ಯ ನಾಯಕರಿಗಿದು ಕೇಳಿಸಲಿಲ್ಲ. ಅಥವಾ ಕೇಳಿಯೂ, ರಾಜ್ಯದ ಕಾಂಗ್ರೆಸ್ ಸರಕಾರ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿದರೂ ನರ ಸತ್ತ ನಾಮರ್ದರಂತಾಗಿರುವ ಬಿಜೆಪಿಯ ನಾಯಕರುಗಳಿಗೆ ನಾಯ್ಡುರವರನ್ನು ಸಮರ್ಥಿಸಿಕೊಳ್ಳುವ ಮನಸ್ಸಾಗಲಿಲ್ಲ. ಬಿಜೆಪಿಯವರು ಇದ್ದರೆಷ್ಟು ಬಿಟ್ಟರೆಷ್ಟು, ನಾವಂತೂ ದನಿಯೆತ್ತುತ್ತೇವೆ ಎಂಬ ಮನೋಭಾವವನ್ನು ಬೆಳೆಸಿಕೊಂಡಿರುವ ಜಾಲತಾಣಿಗರಂತೂ ನಾಯ್ಡುರವರ ಕೈ ಬಿಡಲಿಲ್ಲ. . ಅಷ್ಟಕ್ಕೂ ಇವರೆಲ್ಲಾ ಸೇರಿ ವೆಂಕಯ್ಯರನ್ನು ಸಮರ್ಥಿಸಿಕೊಂಡಿದ್ದೇಕೆ? ಒಂದೊಂದೇ ಅಂಶಗಳನ್ನು ನೋಡಿಕೊಂಡು ಬರೋಣ.

ವೆಂಕಯ್ಯ ನಾಯ್ಡುರವರ ಮೇಲಿದ್ದ ಬಹು ದೊಡ್ಡ ಆರೋಪವೆಂದರೆ, ರಾಷ್ಟ್ರ ಮಟ್ಟದಲ್ಲಿ ಕನ್ನಡಿಗರ ಹಿತಾಸಕ್ತಿಗಳಿಗೆ ಧಕ್ಕೆ ಬಂದಾಗ ಅವರೆಂದೂ ರಾಜ್ಯದ ಪರವಾಗಿ ಕೆಲಸ ಮಾಡಿಲ್ಲ ಎನ್ನುವುದು. ಅವರ ಇತಿಮಿತಿಯಲ್ಲಿ ಖಂಡಿತವಾಗಿಯೂ ಅವರು ಈ ನಿಟ್ಟಿನಲ್ಲಿ ಕೆಲಸ ಮಾಡಿರುತ್ತಾರೆ. ನಮಗದು ಕಾಣುವುದಿಲ್ಲ ಅಷ್ಟೇ. ಬಿಡಿ, ಮಾಡಿಯೇ ಇಲ್ಲ ಅಂತಿಟ್ಟುಕೊಳ್ಳೋಣ. ಒಂದು ಉದಾಹರಣೆ ಕೊಡುತ್ತೇನೆ. ಕಳಸಾ ಬಂಡೂರಿ ಯೋಜನೆಗಾಗಿ ವರ್ಷಗಳಿಂದ ಬಹು ದೊಡ್ಡ ಹೋರಾಟ ಜಾರಿಯಲ್ಲಿದೆ. ರೈತರ ಆತ್ಮಹತ್ಯೆ, ಬರ ಸಮಸ್ಯೆಯ ಜೊತೆಗೆ ಸಮಸ್ಯೆಗಳೊಂದಿಗೆ ಸರಸವಾಡುತ್ತಲೇ ರೈತ ಜೀವಿಸುತ್ತಿದ್ದಾನೆ. ನಮ್ಮ ರಾಜ್ಯದ ಮಂತ್ರಿ ಮಾಗಧರು, ಸಂಸದರ ನಿಯೋಗ ದೆಹಲಿ ಟೂರ್ ಮಾಡಿದ್ದು ಬಿಟ್ಟರೆ ಯಾರೆಲ್ಲಾ ಪ್ರಾಮಾಣಿಕವಾಗಿ ರಾಜ್ಯದ ಪರವಾಗಿ ಕೆಲಸ ಮಾಡಿದ್ದಾರೆ ಹೇಳಿ? ಯಡಿಯೂರಪ್ಪ, ಅನಂತ ಕುಮಾರ್, ಡಿ.ವಿ ಸದಾನಂದ ಗೌಡ, ಪ್ರಹ್ಲಾದ್ ಜೋಷಿ ಮುಂತಾದ ಘಟಾನುಘಟಿಗಳು ಕೇಂದ್ರದ ಆಡಳಿತ ಪಕ್ಷದಲ್ಲಿದ್ದಾರೆ. ಇವರೆಲ್ಲಾ ಸಮರ್ಥವಾಗಿ ರಾಜ್ಯದ ಪರವಾಗಿ ನಿಂತಿದ್ದರೆ ಪ್ರಧಾನ ಮಂತ್ರಿಯವರನ್ನು ಯೋಜನೆ ಜಾರಿಗೊಳಿಸುವ ಸಲುವಾಗಿ ಮಧ್ಯಸ್ಥಿಕೆ  ವಹಿಸುವಂತೆ ಮನವೊಲಿಸಲು ಸಫಲರಾಗುತಿರಲಿಲ್ಲವಾ? ಕನಿಷ್ಟ ಪಕ್ಷ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಇತರ ರಾಜ್ಯಗಳ ಬಿಜೆಪಿ ನಾಯಕರೊಂದಿಗೆ ಸಭೆಯನ್ನಾದರೂ ಏರ್ಪಡಿಸಿ ಅವರಿಗೆ ಯೋಜನೆಯ ಗಂಭೀರತೆಯನ್ನು ಮನವರಿಕೆ ಮಾಡಲು ಸಾಧ್ಯವಾಗುತ್ತಿರಲಿಲಿಲ್ಲವಾ?  ಈ ಕಡೆ ಸಿದ್ಧರಾಮಯ್ಯನವರು, ಖರ್ಗೆ ಮತ್ತು ಇತರ ಕಾಂಗ್ರೆಸಿಗರು ಮನಸ್ಸು ಮಾಡಿದ್ದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಜೊತೆಗೆ ಮಾತನಾಡಿ ಉಳಿದೆರಡು ರಾಜ್ಯಗಳ ಕಾಂಗ್ರೆಸ್ ನಾಯಕರನ್ನು ಮಾತುಕತೆಗೆ ಕರೆಯಲಾಗುತ್ತಿರಲಿಲ್ಲವಾ? ಎರಡೂ ಪಕ್ಷಗಳ ಜನ ಪ್ರತಿನಿಧಿಗಳು ಸಮರ್ಥವಾಗಿ ರಾಜ್ಯದ ಪರವಾಗಿ ದನಿಯೆತ್ತಿದ್ದರೆ ಕನಿಷ್ಟ ಪಕ್ಷ ಒಂದು ಮಾತುಕತೆಯಾದರೂ ನಡೆದಿರುತ್ತಿಲ್ಲವಾ?  ಇದೆಲ್ಲಾ ಬಿಟ್ಟು ಇವರೆಲ್ಲಾ ಪ್ರಧಾನ ಮಂತ್ರಿಯವರ ಮೇಲೆ, ಒಬ್ಬರಿನ್ನೊಬ್ಬರ ಮೇಲೆ ಕೆಸರೆರಚುತ್ತಾ, ರೈತರ ಭಾವನಾತ್ಮಕತೆಯ ಮೇಲೆ ಚೆಲ್ಲಾಟವಾಡಿದ್ದು ಯಾಕೆ? ಈ ಕುರಿತು ಯಾರಾದರೂ ಲೇಖನ ಬರೆದವರಿದ್ದಾರಾ? ಅಲ್ಲಾ ಇಲ್ಲೇ ಹುಟ್ಟಿ ಬೆಳೆದು, ಕನ್ನಡವನ್ನೇ ಬೆಸೆದುಕೊಂಡು ಜೀವಿಸುತ್ತಿರುವ ನಮ್ಮ ರಾಜಕಾರಣಿಗಳೇ ರಾಜ್ಯದ ಪರವಾಗಿ ಗಟ್ಟಿಯಾಗಿ ನಿಲ್ಲಲು, ಸಂಕಷ್ಟಕ್ಕೊಳಗಾದಾಗ ರೈತರ ಪರವಾಗಿ ಸಮರ್ಥವಾದ ವಾದ ಮಂಡಿಸಲು ಅಸಮರ್ಥರಾಗಿರುವಾಗ, ಭಾವನಾತ್ಮಕವಾಗಿ ರಾಜ್ಯದೊಂದಿಗೆ ಅಷ್ಟೇನೂ ಸಂಬಂಧ ಹೊಂದಿರದ ವೆಂಕಯ್ಯ ನಾಯ್ಡು ಹೇಗೆ ನಿಂತಾರು? ರಾಜ್ಯ ಸಭೆ ಸದಸ್ಯರು ಎಂಬ ಒಂದೇ ಒಂದು ಕಾರಣಕ್ಕಾಗಿ ವೆಂಕಯ್ಯರಿಂದ ಅಷ್ಟೆಲ್ಲಾ ನಿರೀಕ್ಷೆ ಮಾಡಲು ಸಾಧ್ಯವೇ?

ಮತ್ತೊಂದು ಕಾರಣ, ವೆಂಕಯ್ಯ ನಾಯ್ಡು ಏನೂ ಕೆಲಸ ಮಾಡಿಲ್ಲ ಅಂತೆ. ಬಿಜೆಪಿಯಲ್ಲಿರುವ ಬಣಗಳನ್ನು ತನಗೆ ಬೇಕಾಗುವಂತೆ ಬಳಸಿಕೊಳ್ಳುವ ಚಾಣಾಕ್ಷ ವೆಂಕಯ್ಯ ಅಂತೆ. ಇನ್ನೊಂದು ಉದಾಹರಣೆ ಕೊಡುತ್ತೇನೆ ನೋಡಿ. ಯಾರು #ವೆಂಕಯ್ಯಸಾಕಯ್ಯ ಅಭಿಯಾನಕ್ಕೆ ನಾಂದಿ ಹಾಡಿದರೋ ಅವರ ಪತ್ರಿಕೆ ಬಾಸ್ ಕೆ.ಪಿ ನಂಜುಂಡಿ ಅಂತ ಇದ್ದಾರೆ, ಒಮ್ಮೆಯೋ ಎರಡು ಭಾರಿಯೋ ಕಾಂಗ್ರೆಸ್ಸಿನಿಂದ ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದರು. ಮೊನ್ನೆಯೂ ಅವರ ಹೆಸರು ಮುಂಚೂಣಿಯಲ್ಲಿತ್ತು. ಬಲಪಂಥೀಯರೆಂದು ಗುರುತಿಸಿಕೊಂಡುರುವವರ ಪತ್ರಿಕೆಗೆ ಹಣ ಹಾಕಿದ್ದಕ್ಕೋ ಏನೋ ಕೊನೆ ಕ್ಷಣದಲ್ಲಿ ಅವರ ಹೆಸರನ್ನು ಕೈ ಬಿಡಲಾಯ್ತು. ತನ್ನ ಜಾತಿಗೊಂದು ಜಯಂತಿ ಬೇಕು, ಆ ದಿನ ಸರಕಾರಿ ರಜೆ ನೀಡಬೇಕೆಂದು ಹಕ್ಕೊತ್ತಾಯ ಮಾಡುವ ನಂಜುಂಡಿ ತನ್ನಲ್ಲಿರುವ ಅಗಾಧ ಹಣವನ್ನು ಜಾತಿ ಸಮಾವೇಶಕ್ಕೆ ಸುರಿಯುತ್ತಾರೆ. ಅದರೆಲ್ಲದರ ಫಲವಾಗಿ, ಆ ಜಾತಿಯ ಮುಂಚೂಣಿ ನಾಯಕನೇ ನಾನೆಂಬುದನ್ನು ಬಿಂಬಿಸಿ, ನಮ್ಮ ಜಾತಿಗೊಂದು ಪ್ರಾತಿನಿಧ್ಯ ಕೊಡಿ ಎನ್ನುತ್ತಾ ಹಿರಿಯ ನಾಯಕರ ಕೃಪಾಕಟಾಕ್ಷವನ್ನು ಪಡೆದುಕೊಂಡ ನಂಜುಂಡಿಯವರ ಸಾಧನೆಗಳೇನು? ಸಮಾಜಕ್ಕೆ ಅವರ ಕೊಡುಗೆಯೇನು? ಜಾತಿ ಸಮಾವೇಶ ಮಾಡಿದ್ದೇ ಬಹು ದೊಡ್ಡ ಸಾಧನೆಯಾ? ಜಾತಿಯನ್ನು ಭಾವನಾತ್ಮಕವಾಗಿ ಬಳಿಸಿಕೊಂಡು ಟಿಕೆಟ್ ಪಡೆಯಲು ಸಮರ್ಥರಾಗಿದ್ದೇ ದೊಡ್ಡ ಸಾಧನೆಯಾ? ಇದರ ಬಗ್ಗೆ ಬರೆಯುವ ನೈತಿಕತೆ “ಅಂಡೆಪಿರ್ಕಿ” ಖ್ಯಾತಿಯ ಸಂಪಾದಕರಿಗೆ  ಇದೆಯಾ? ನಂಜುಂಡಿ ಇಲ್ಲಿ ನಿಮಿತ್ತ ಮಾತ್ರ. ಜಾತಿ, ಜಾತಿ ಎನ್ನುತ್ತ ಜಾತಿಯನ್ನೇ ತಮ್ಮ ಯಶಸ್ಸಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿರುವ, ದುರ್ಬೀನು ಹಿಡಿದು ನೋಡಿದರೂ ಸಿಗಲಾರದಂತಹ ಸಾಧನೆಗಳನ್ನು ಮಾಡಿರುವ ನೂರಾರೂ ದಂಡ-ಪಿಂಡ ರಾಜಕಾರಣಿಗಳು ನಮ್ಮ ರಾಜ್ಯದಲ್ಲಿದ್ದಾರೆ. ಅವರೆಲ್ಲರ ಬಗ್ಗೆ ಬರೆಯುವವರು ಯಾರಾದರೂ ಇದ್ದಾರಾ?

ಬಲು ಸೋಜಿಗದ ವಿಷಯವೇನೆಂದರೆ, ಕೆಲವರು ಅವರು ತಾವು ವೆಂಕಯ್ಯರನ್ನು ವಿರೋಧಿಸಿದ್ದೇಕೆ ಎನ್ನುವುದಕ್ಕೆ ಸಮರ್ಥನೆ ಕೊಡುವಾಗ “ಸೋನಿಯಾ ಗಾಂಧಿಯನ್ನು ನಾವೇಕೆ ಪ್ರಧಾನಿ ಮಾಡಲಿಲ್ಲ? ಆಕೆ ಭಾರತದ ಸೊಸೆಯಲ್ಲವಾ? ಜನರಿಂದ ಆಯ್ಕೆಯಾಗಲಿಲ್ಲವಾ? ಆಕೆಗೆ ಅರ್ಹತೆಯಿರಲಿಲ್ಲವಾ?” ಎಂದೆಲ್ಲಾ ಬರೆದುಕೊಂಡಿದ್ದಾರೆ. ಜೊತೆಗೆ ಹೊರಗಿನವರು ಬಂದು ನಮ್ಮನ್ನು ಆಳುವುದಾದರೆ ನಮ್ಮನ್ನು ಇವತ್ತಿಗೂ ಬ್ರಿಟೀಷರೇ ಆಳಬಹುದಿತ್ತಲ್ಲಾ ಎನ್ನುವ ಅಸಂಬದ್ಧ ಹೋಲಿಕೆಗಳನ್ನು ಕೊಟ್ಟು ನಗೆಪಾಟಲಿಗೀಡಾಗಿದ್ದಾರೆ. ಮೋದಿ ಒಳ್ಳೆಯ ಕೆಲಸ ಮಾಡುತ್ತಾರೆ ಎನ್ನುವ ಕಾರಣಕ್ಕೆ ಕರ್ನಾಟಕಕ್ಕೆ ಕರೆ ತಂದು ಮುಖ್ಯಮಂತ್ರಿ ಮಾಡಲು ಸಾಧ್ಯವೇ? ಎನ್ನುವ ಮತ್ತೊಂದು ಪ್ರಶ್ನೆಯನ್ನು ಗ್ಯಾಪಿನಲ್ಲಿ ತೂರಿ ಬಿಟ್ಟಿದ್ದಾರೆ.  ಇವರು ಹೇಳುವ ಹಾಗೆ, ಕರ್ನಾಟಕಕ್ಕಾಗಿ ಏನೂ ಕೆಲಸ ಮಾಡದ ವೆಂಕಯ್ಯರನ್ನು ರಾಜ್ಯಸಭೆಗೆ ಕಳುಹಿಸಬಾರದು, ಇರಲಿ. ಒಂದು ವೇಳೆ ಉತ್ತಮವಾಗಿ ಕೆಲಸ ಮಾಡುತ್ತಿರುವ ಮೋದಿ ತನ್ನ ಸ್ವಕ್ಷೇತ್ರ ವಾರಣಾಸಿಗೆ ಏನೂ ಕೊಡುಗೆ ಕೊಟ್ಟಿಲ್ಲಾ ಎಂದಿಟ್ಟುಕೊಳ್ಳಿ, ಅಂದ ಮಾತ್ರಕ್ಕೆ ಮೋದಿ ಮತ್ತೆ ವಾರಣಾಸಿಯಲ್ಲಿ ಚುನಾವಣೆಗೆ ನಿಲ್ಲಬಾರದಾ? ದೇಶಕ್ಕಾಗಿ ಸರ್ವಸ್ವವನ್ನೂ ಸಮರ್ಪಿಸುತ್ತಿರುವ ಮೋದಿ ವಾರಣಾಸಿಗೆ ಏನೂ ಮಾಡಲಿಲ್ಲ ಎನ್ನುವ ಕಾರಣಕ್ಕೆ ವಾರಣಾಸಿಯ ಜನ ಮೋದಿಗೆ ಮತ ಹಾಕಬಾರದಾ? ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮಾತೊಂದನ್ನು ಉಲ್ಲೇಖಿಸ ಬಯಸುತ್ತೇನೆ. ಹೋದ ವರ್ಷ ಪಿರಿಯಾಪಟ್ಟಣದ ಶಾಸಕರೊಬ್ಬರು ಮುಖ್ಯಮಂತ್ರಿಗಳನ್ನು ಕುರಿತು “ನೀವು ಯಡಿಯೂರಪ್ಪನವರನ್ನು ನೋಡಿ ಕಲಿಯಿರಿ” ಎನ್ನುತ್ತಾ  ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಅದಕ್ಕವರು ಏನಂದಿದ್ದರು ಗೊತ್ತಾ, “ನಾನು ಮೈಸೂರಿಗೆ ಮಾತ್ರ ಮುಖ್ಯಮಂತ್ರಿಯಲ್ಲ, ಇಡೀಯ ರಾಜ್ಯಕ್ಕೆ ಮುಖ್ಯಮಂತ್ರಿ, ಅಭಿವೃದ್ಧಿಯ ವಿಚಾರದಲ್ಲಿ ಮೈಸೂರನ್ನು ಮಾತ್ರ ಪರಿಗಣಿಸಲು ಸಾಧ್ಯವಿಲ್ಲ” ಎಂದು ತಕ್ಕ ತಿರುಗೇಟು ನೀಡಿದ್ದರು. ವೆಂಕಯ್ಯ ನಾಯ್ಡು ಕೂಡಾ ಹಾಗೆಯೇ ,ಇಡೀ ದೇಶಕ್ಕೆ  ಮಂತ್ರಿಯೇ ಹೊರತು ಕರ್ನಾಟಕಕ್ಕೆ ಮಾತ್ರವಲ್ಲ. ಇದ್ದ ಬದ್ದ ಯೋಜನೆಗಳನ್ನೆಲ್ಲಾ ತಂದು ಕರ್ನಾಟಕವೊಂದಕ್ಕೇ ಸುರಿಯಲು ಸಾಧ್ಯವಿಲ್ಲ ಎನ್ನುವುದು ನಮಗೆ ಅರ್ಥವಾಗಬೇಕು.

ರಾಜ್ಯಸಭೆಗೆ ಕಳುಹಿಸಲು ಹೊರಗಿನ ವೆಂಕಯ್ಯರನ್ನು ಬಿಟ್ಟು ಕನ್ನಡಿಗರಲ್ಲಿಯೇ ಸಮರ್ಥರಾರೂ ಬಿಜೆಪಿಗೆ ಸಿಗಲಿಲ್ಲವಾ ಎನ್ನುವುದು #ವೆಂಕಯ್ಯಸಾಕಯ್ಯ ಅಭಿಯಾನದಲ್ಲಿ ಕೇಳಿ ಬಂದ  ಸಾಮಾನ್ಯವಾದ ಪ್ರಶ್ನೆಯಾಗಿತ್ತು. ಸ್ವಾಮೀ ಸಿಂಪಲ್ಲಾಗಿ ಒಂದು ಪ್ರಶ್ನೆ ಕೇಳುತ್ತೇನೆ, ಎಷ್ಟೋ ವರ್ಷದಿಂದ  ಕರವೇ ಅಧ್ಯಕ್ಷರಾಗಿ ನಾರಾಯಣ ಗೌಡರೊಬ್ಬರೇ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಂಡಿದ್ದಾರೆ.  ಕನ್ನಡ ರಕ್ಷಣೆಗೆ ಅವರನ್ನು ಬಿಟ್ಟು ಬೇರೆ ಯಾರೂ ಸಮರ್ಥರು ಕರ್ನಾಟಕದಲ್ಲಿಲ್ಲವಾ? ಕನ್ನಡತನ, ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹೋರಾಡಲು ಅವರನ್ನು ಬಿಟ್ಟರೆ ಕರ್ನಾಟಕದಲ್ಲಿ ಮತ್ತೊಬ್ಬರು ಹುಟ್ಟಿಲ್ಲವಾ? ನೀವು ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ನಾವುಗಳೂ ಸಹ ನ್ಯಾಯಯುತವಾದ ಪ್ರಶ್ನೆಗಳನ್ನು ನಿಮ್ಮತ್ತ  ಎಸೆಯಬಹುದು ಜೋಕೆ!

ವೆಂಕಯ್ಯ ನಾಯ್ಡುರವರು ಕನ್ನಡದಲ್ಲಿ ಟ್ವೀಟ್ ಮಾಡಲ್ಲ, ತೆಲುಗಿನಲ್ಲಾದರೆ ಯಾವತ್ತೂ ಮಾಡುತ್ತಾರೆ, ಆ ಕಾರಣಕ್ಕೆ ಅವರಿಗೆ ಟಿಕೆಟ್ ಕೊಡಬಾರದು. ಇದು ನಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಹಲುಬಿದವರು ಹಲವರಿದ್ದರು, ಹೀಗೆ ಹಲುಬಿದವರು  ನಿತ್ಯವೂ ಟ್ವೀಟ್ ಮಾಡುವುದು ಇಂಗ್ಲೀಷಿನಲ್ಲಿಯೇ, ಸಂಪಾದಕರನ್ನೂ ಸೇರಿಸಿ. ಕನ್ನಡಿಗರ ಸ್ವಾಭಿಮಾನದ ಅಸ್ತಿತ್ವದ ಪ್ರಶ್ನೆ, ಕನ್ನಡಕ್ಕೆ ಮಾಡುವ ಘೋರ ಅವಮಾನ ಎಂದೆಲ್ಲಾ ಹಾರಾಟ ನಡೆಸಿದವರು ತಮ್ಮ ಮಕ್ಕಳನ್ನು ಕಳುಹಿಸುವುದು ಆಂಗ್ಲ  ಮಾಧ್ಯಮ ಶಾಲೆಗೆ. ಪರರಾಜ್ಯದವರನ್ನು ರಾಜ್ಯಸಭೆಗೆ ಕಳುಹಿಸುವಾಗ ಕಾಡುವ ಕನ್ನಡತನ ಮಕ್ಕಳ  ಪ್ರಾಥಮಿಕ ಶಿಕ್ಷಣಕ್ಕೂ ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುವಾಗ ಕಾಡುವುದಿಲ್ಲವೇ?  ಯಾಕಿಂತಾ ಇಬ್ಬಂದಿತನ?

ನಮ್ಮ ಬೆಂಗಳೂರಿನಲ್ಲಿ ಅರ್ಧಕರ್ಧ ಜನ ಪರರಾಜ್ಯದವರಿದ್ದಾರೆ. ನಮ್ಮ ರಾಜ್ಯದಲ್ಲೇ ಉದ್ಯೋಗ ಪಡೆದುಕೊಂಡು ನೆಲೆ ಕಂಡುಕೊಡಿರುವ ಲಕ್ಷಾಂತರ ಮಂದಿ ಇಲ್ಲಿದ್ದಾರೆ. ಪರರಾಜ್ಯದವರಿಗೆ ನಮ್ಮ ರಾಜ್ಯದಿಂದ ಏಕೆ ಟಿಕೆಟ್ ಕೊಡಬೇಕು ಎನ್ನುವವರಿಗೆ ಬೇರೆ ರಾಜ್ಯದವರಿಗೆ ನಮ್ಮಲ್ಲೇಕೆ ಉದ್ಯೋಗ ಕೊಡಬೇಕು, ಕನ್ನಡಿಗರಿಗೆ ಮಾತ್ರ ಕೊಟ್ಟರೆ ಸಾಲದೇ ಎಂದು ಅನಿಸುವುದಿಲ್ಲವೇ?   ಯಾಕೆ ಅವರಿಗೆ ಅವರ ರಾಜ್ಯದಲ್ಲಿ ನೆಲೆಯಿಲ್ಲವಾ? ವೆಂಕಯ್ಯರನ್ನು ಓಡಿಸಿದಂತೆ ಅವರೆಲ್ಲರನ್ನೂ ಇಲ್ಲಿಂದ ಓಡಿಸಿ ಬಿಡಬೇಕಲ್ಲವೇ? ಈ ಥರಾ ವಿತಂಡವಾದ ಮಾಡುತ್ತಾ ಹೋದರೆ ಅದಕ್ಕೆ ಅರ್ಥವಿದೆಯಾ?

ಇದೆಲ್ಲದಕ್ಕಿಂತಲೂ ಹೆಚ್ಚಾಗಿ ನಾವು ವೆಂಕಯ್ಯರನ್ನು ಬೆಂಬಲಿಸಿದ್ದಕ್ಕೆ ಬಲವಾದ ಕಾರಣಗಳಿವೆ. ಸಾಕಯ್ಯಗಳು ಹೇಳುವಂತೆ ವೆಂಕಯ್ಯ ನಾಯ್ಡು ಯಾವ ಕೆಲಸ ಮಾಡಿಲ್ಲ ಎನ್ನುವುದು ಶುದ್ಧ ಸುಳ್ಳು. ನಗರಾಭಿವೃದ್ಧಿ ಸಚಿವರಾದಾಗಿನಿಂದಲೂ ನಮ್ಮ ಮೆಟ್ರೋಗೆ ವಿಶೇಷ ಆಸ್ಥೆ ವಹಿಸಿ ಕೆಲಸ ಮಾಡಿದ್ದಾರೆ ನಾಯ್ಡು. ಜೊತೆಗೆ ಎರಡರೊಂದಿಗೆ ಮತ್ತೊಂದು ಸ್ಮಾರ್ಟ್ ಸಿಟಿ ರಾಜ್ಯಕ್ಕೆ ದಕ್ಕಿದೆಯೆಂದರೆ ಅದರಲ್ಲಿ ಇವರ ಪಾತ್ರ ಬಹಳ ದೊಡ್ಡದಿದೆ. ಸಂಸದರ ನಿಧಿಯಿಂದ ಬರುವ ಹಣವನ್ನು ಸಮರ್ಪಕವಾಗಿ ವಿನಿಯೋಗಿಸಿದ್ದಾರೆ. ಇದೆಲ್ಲದಕ್ಕಿಂತಲೂ ಮುಖ್ಯವಾಗಿ ಮೋದಿ ಸರಕಾರ ಬಂದಾಗಿನಿಂದಲೂ ಕಾಂಗ್ರೆಸ್ ಒಂದಲ್ಲಾ ಒಂದು ಕಾರಣ ಹಿಡಿದುಕೊಂಡು ಸಂಸತ್ತಿನ ಕಲಾಪಗಳಿಗೆ ಅಡ್ಡಿ ತರುತ್ತಿದೆ. ಒಂದೊಂದು ಮಸೂದೆ ಪಾಸು ಮಾಡಿಕೊಳ್ಳಲೂ ಕುತ್ತಿಗೆಗೆ ತರುವಂತಹಾ ದುಷ್ಟ ಕಾರ್ಯಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಅಂತಹಾ ವಿಷಮ ಪರಿಸ್ಥಿಯಲ್ಲಿಯೂ ಸಂಸತ್ತಿನ ಕಲಾಪ ಸುಸೂತ್ರವಾಗಿ ನಡೆಯುವಲ್ಲಿ, ದೇಶಕ್ಕೆ ಅತೀ ಅಗತ್ಯವಾಗಿರುವ ಮಸೂದೆಗಳನ್ನು ಪಾಸು ಮಾಡಿಸುವಲ್ಲಿ ನಾಯ್ಡು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ತುಂಬಾನೇ ಕೆಲಸ ಮಾಡುತ್ತಿದ್ದಾರೆ.  ಇದು ದೇಶಕ್ಕೆ ನೀಡುವ ಕೊಡುಗೆಯಲ್ಲವೇ? ಜನಪ್ರತಿನಿಧಿಗಳಿಂದ ಆಯ್ಕೆಯಾದ ಒಬ್ಬ ರಾಜ್ಯಸಭೆ ಸದಸ್ಯ ಮಂತ್ರಿಯಿಂದ ತಮಗೇನು ಸಿಕ್ಕಿದೆ ಎಂದು ಯೋಚಿಸುವುದು ಶೇಷ್ಠವೋ, ಅಲ್ಲಾ ದೇಶಕ್ಕೆನು ಸಿಕ್ಕಿದೆ ಎನ್ನುವುದು ಶ್ರೇಷ್ಠವೋ? ಏನಾದರಾಗಲಿ, ಮೋದಿಯನ್ನು ಸರ್ವತ್ರಾ ವಿರೋಧಿಸಿಯೇ ತೀರಬೇಕು ಎಂದು ಜಿದ್ದಿಗೆ ಬಿದ್ದಿರುವ ಪ್ರತಿಪಕ್ಷಗಳನ್ನು ನಿವಾಳಿಸಿಕೊಂಡು ಸಂಸತ್ತಿನ ಕಲಾಪಗಳು ಸುಸೂತ್ರವಾಗುವಂತೆ ಮಾಡುವುದು “ವೆಂಕಯ್ಯ ಸಾಕಯ್ಯ, ಕೊಂಗಯ್ಯ ಹೋಗಯ್ಯ” ಎಂದು ನಾಲ್ಕಕ್ಷರ ಗೀಚಿ ಬಿಟ್ಟಿ ಚಪ್ಪಾಳೆ ಗಿಟ್ಟಿಸಿಕೊಂಡಷ್ಟು ಸುಲಭವಲ್ಲ ಬಿಡಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!