ಕಥೆ

ರಾಜ ಸನ್ಯಾಸಿ ಭಾಗ ೧

ಸತ್ತವರು ಪುನರ್ಜನ್ಮ ತಾಳುತ್ತರೆನ್ನುವುದೊಂದು ನಂಬಿಕೆ. ನಮ್ಮ ಧರ್ಮಗ್ರಂಥಗಳಲ್ಲಿಯೂ ಈ ಬಗ್ಗೆ ಸಾಕಷ್ಟು ಅಂಶಗಳಿವೆ. ಕೆಲವರು ಇದನ್ನು ನಂಬಿದರೆ ಇನ್ನೂ ಕೆಲವರು ಅಲ್ಲಗಳೆಯುತ್ತಾರೆ. ;ಇರುವುದೊಂದೇ ಜನ್ಮ. ನಿನಗನ್ನಿಸಿದಂತೆ ಬಾಳು’ ಎನ್ನುವುದು ಕೆಲವರ ನಿಲುವಾದರೆ ‘ಜನ್ಮಜನ್ಮಾಂತರಗಳ ಪಾಪಪುಣ್ಯದಮೇಲೆ ಮೋಕ್ಷ ಅವಲಂಬಿತವಾಗಿದೆ, ಹಾಗಾಗಿ ಧರ್ಮದಿಂದ ಬದುಕಬೇಕು’ ಎನ್ನುವುದು ಹಲವರ ನಂಬಿಕೆ. ಈ ವಿಷಯ ಒತ್ತಟ್ಟಿಗಿರಲಿ. ಸತ್ತವನು ಮತ್ತೆ ಎದ್ದುಬಂದ ಅನ್ನುವಂತಹ ಮಸಾಲಾ ಸುದ್ಧಿಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ವರ್ಷಗಳ ಹಿಂದೆಲ್ಲೋ ಆತ ಸತ್ತನೆಂದು, ತಿಥಿ ಮಾಡಿ ಪೋಟೋಗೆ ಹಾರ ಜೋಡಿಸಿಟ್ಟರೆ ತಾನಿನ್ನೂ ಸತ್ತಿಲ್ಲವೆಂದು ಆತ ಅಚಾನಕ್ಕಾಗಿ ನಡೆದುಬಂದುಬಿಡುವ ಸಂಗತಿಗಳು ಭಾರತದಂತಹ ದೇಶದಲ್ಲಿ ಅಪರೂಪಕ್ಕಾದರೂ ಸಂಭವಿಸುತ್ತಿರುತ್ತವೆ.ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮನೆಜನರ ನಿರ್ಲಕ್ಷ್ಯ,ತಪ್ಪು ತಿಳುವಳಿಕೆಗಳಿಂದಲೇ ಇಂತಹ ಘಟನೆಗಳು ಸಂಭವಿಸುತ್ತವೆ.ಇಂತಹ ಘಟನೆಗಳ ಹಿಂದೆ ಸಂಕೀರ್ಣ ಸಂಗತಿಗಳೇನೂ ಇರುವುದಿಲ್ಲ. ಜನರೂ ಬಾಯ್ತುಂಬಾ ಮಾತನಾಡಿ ಒಂದೆರಡು ದಿನಗಳ ನಂತರ ಎಲ್ಲವನ್ನೂ ಮರೆಯುತ್ತಾರೆ. ಆದರೆ ಇಡೀ ಭಾರತ ಖಂಡವೇ ಒಂದಲ್ಲ,ಎರಡಲ್ಲ ಬರೋಬ್ಬರಿ ಇಪ್ಪತ್ತೈದು ವರ್ಷಗಳ ಕಾಲ ಒಬ್ಬ ವ್ಯಕ್ತಿಯ ಪುನರಾಗಮನದ ಬಗ್ಗೆ ತಲೆಕೆಡಿಸಿಕೊಂಡಿತ್ತೆಂದರೆ ಈ ಕಥೆಯನ್ನು ತಿಳಿಯದಿರುವವರಿಗೆ ಆಶ್ಚರ್ಯವಾಗಬಹುದು. ಅದುವೇ ‘ಭವಲ್ ಸನ್ಯಾಸಿಯ ಕತೆ’

ಬಹುಶಃ ಜಗತ್ತಿನ ನ್ಯಾಯಾಲಯ ಪ್ರಕರಣಗಳ ಇತಿಹಾಸದಲ್ಲಿ ‘ಭವಲ್ ಸನ್ಯಾಸಿಯ ಪ್ರಕರಣದಷ್ಟು ನಿಗೂಢ, ಸಂಕೀರ್ಣ ಪ್ರಕರಣ ಇನ್ನೊಂದು ದಾಖಲಾಗಿರಲಿಕ್ಕಿಲ್ಲ. ನ್ಯಾಯಾಲಯದ ಎಲ್ಲ ಕಾನೂನು ಕಟ್ಟಲೆಗಳಿಗೂ ಸವಾಲಾಗಿ ನಿಂತ ಈ ಪ್ರಕರಣದ ಬಗ್ಗೆ ಭವಲ್ ಸನ್ಯಾಸಿಯ ಪರ ವಕೀಲರಾಗಿದ್ದ ಡಿ ಎನ್ ಪ್ರಿಟ್’ರು ಹೇಳುವುದು ಹೀಗೆ.’ನಾನು ನನ್ನ ಯಶಸ್ವಿ ವೃತ್ತಿಬದುಕಿನಲ್ಲಿ ಎದುರಿಸಿದ ಅತ್ಯಂತ ವಿಚಿತ್ರ ಹಾಗೂ ಕ್ಲಿಷ್ಟವಾದ ಪ್ರಕರಣ. ಇದು ಭಾರತದಂತಹ ದೇಶದಲ್ಲಿ ಮಾತ್ರ ನಡೆಯಲು ಸಾಧ್ಯ.’

ಖ್ಯಾತ ತನಿಖಾ ಪತ್ರಿಕೆ ‘ಬ್ಲಿಟ್ಜ್’ ಈ ಪ್ರಕರಣದ ಸಾರಾಂಶವನ್ನು ವಿವರಿಸಿದ್ದು ಹೀಗೆ. “ಬಂಗಾಲದ ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾಗಿದ್ದ ರಾಜಕುಮಾರನೊಬ್ಬ ಸತ್ತುಹೋದ ಎಂದು ೨೦ ನೇ ಶತಮಾನದ ಮೊದಲನೇ ದಶಕದ ಅಂತ್ಯದ ವೇಳೆಗೆ ಘೋಷಿಸಲ್ಪಡುತ್ತದೆ ಹಾಗೂ ಅವನ ಅಂತ್ಯಸಂಸ್ಕಾರವೂ ಸರಿಯಾದ ರೀತಿಯಲ್ಲಿ ಆಗುತ್ತದೆ. ಆದರೆ ಅದಾಗಿ ಹನ್ನೆರಡು ವರ್ಷಗಳ ನಂತರ ಆ ವ್ಯಕ್ತಿಯು ನಾಟಕೀಯ ರೀತಿಯಲ್ಲಿ ಪುನರಾಗಮನವನ್ನು ಮಾಡುತ್ತಾನೆ. ಅವನ ಅಕ್ಕ ಹಾಗೂ ಅಜ್ಜಿಯೂ ಕೂಡ ಅದು ಅವನೇ ಎಂದು ದೃಢೀಕರಿಸುತ್ತಾರೆ. ಆದರೆ ಅವನ ಹೆಂಡತಿ ಮಾತ್ರ ಅವನನ್ನು ವಂಚಕ ಎಂದು ಜರಿಯುತ್ತಾಳಲ್ಲದೆ ಅವನೊಬ್ಬ ಸೋಗಿಗ ಎಂದು ಅವನನ್ನು ಪತಿಯಾಗಿ ಸ್ವೀಕರಿಸಲು ನಿರಾಕರಿಸುತ್ತಾಳೆ. ತನ್ನ ಆಸ್ತಿ-ಅಧಿಕಾರದ ಪುನರ್ ಸ್ಥಾಪನೆಗಾಗಿ ಆತ ಮೂರನೇ ದಶಕದ ಅಂತ್ಯದ ವೇಳೆಗೆ ಕೋರ್ಟ್’ನಲ್ಲಿ ಅರ್ಜಿ ಸಲ್ಲಿಸುತ್ತಾನೆ. ೧೯೪೬ ರ ಜುಲೈನಲ್ಲಿ ಅವನ ಮನವಿಯೂ ಕೊನೆಗೂ ಪುರಸ್ಕರಿಸಲ್ಪಡುತ್ತದೆ. ಇದು ಕಾನೂನಿನ ಇತಿಹಾಸದಲ್ಲೇ ಚಾರಿತ್ರಿಕವಾಗಿದ್ದು ಬೇರಾವ ಪ್ರಕರಣವೂ ಇದಕ್ಕೆ ಸರಿಸಾಟಿಯಾಗಿಲ್ಲ.

ಭವಲ್ ಸನ್ಯಾಸಿ ಅಥವ ಭವಲ್’ರಾಜ್ ಎನ್ನುವ ವ್ಯಕ್ತಿಯು ಸನ್ಯಾಸ ದೀಕ್ಷೆ ಸ್ವೀಕರಿಸುವುದಕ್ಕಿಂತ ಮೊದಲು ರಾಮೇಂದ್ರ ನಾರಾಯಣ ರಾಯ್ ಚೌಧರಿಯಾಗಿದ್ದ. ರಾಜನ ಎರಡನೇ ಮಗನಾಗಿದ್ದ ಅವನನ್ನು ಜನರು ಅಕ್ಕರೆಯಿಂದ ‘ಮೇಜೋ ಕುಮಾರ್’ ಎಂದೇ ಕರೆಯುತ್ತಿದ್ದರು. ಆತ ಹುಟ್ಟಿ ಬೆಳೆದಿದ್ದೆಲ್ಲ ಢಾಕಾ (ಇಂದಿನ ಬಾಂಗ್ಲಾದೇಶದ ರಾಜಧಾನಿ) ಸಮೀಪದ ಜಯದೇವಪುರ ಎಂಬ ಸಂಸ್ಥಾನದ ರಾಜಮನೆತನದ ವೈಭವದಲ್ಲಿ.೧೯೦೧ರಲ್ಲಿ ರಾಜ ತೀರಿಕೊಂಡಾಗ ಮೇಜೋಕುಮಾರನ ಮೇಲಿದ್ದ ಅಲ್ಪಸ್ವಲ್ಪ ನಿರ್ಬಂಧಗಳೂ ಸಡಿಲಾದವು. ಒಮ್ಮೇಲೇ ಸಿಕ್ಕ ಸ್ವಾತಂತ್ರ್ಯದಿಂದ ಆತ ಲೋಲುಪ ಜೀವನ ಶೈಲಿಗೆ ದಾಸನಾದ. ತನ್ನೆಲ್ಲ ಸಮಯವನ್ನು ಜೂಜು, ಬೇಟೆ, ಕುಡಿತ ಹಾಗೂ ವೇಶ್ಯೆಯರ ಸಹವಾಸದಲ್ಲಿ ಕಳೆದ. ಆತನಿಗೆ ೧೮ ವರ್ಷವಾಗಿದ್ದಾಗ ೧೩ ವರ್ಷದ ಕನ್ಯೆ ಬಿಭಾಬತಿ ದೇವಿಯೊಂದಿಗೆ ಮದುವೆಯಾಯಿತು. ಆದರೂ ಆತ ತನ್ನ ಹಳೆಯ ಚಟಗಳನ್ನು ಮುಂದುವರೆಸಿದ.

ಪರಿಣಾಮವಾಗಿ ಅವನಿಗೆ ಹಲವು ರೋಗಗಳು ಅಂಟಿಕೊಂಡು ತೀವ್ರ ಅನಾರೋಗ್ಯ ಪೀಡಿತನಾಗಬೇಕಾಯ್ತು. ಪತ್ನಿಯ ತಮ್ಮ ಸತ್ಯೇಂದ್ರನಾಥ ಬ್ಯಾನರ್ಜಿ ಹಾಗೂ ಕುಟುಂಬ ವೈದ್ಯರಾಗಿದ್ದ ದಾಸ್ ಗುಪ್ತಾರೊಂದಿಗೆ ಆತ ಚಿಕಿತ್ಸೆಗಾಗಿ ಕಲ್ಕತ್ತಾಗೆ ತೆರಳಿದ. ನಂತರ ಸತ್ಯೇಂದ್ರನಾಥರ ಸಲಹೆ ಮೇರೆಗೆ ಮೇಜೋಕುಮಾರನ ಆರೋಗ್ಯ ಸುಧಾರಣೆಗೆ ಅವರು ಪಶ್ಚಿಮ ಹಿಮಾಲಯದಲ್ಲಿದ್ದ ಡಾರ್ಜಿಲಿಂಗ್’ನತ್ತ ಪ್ರಯಾಣ ಬೆಳೆಸಿದರು.  ಅಲ್ಲೇ ಇದ್ದ ಬಂಗಲೆಯೊಂದರಲ್ಲಿ ಅವರು ವಾಸ ಹೂಡಿದರು. (ಇದೆ ಬಂಗಲೆ ನಂತರದಲ್ಲಿ ಖ್ಯಾತ ವ್ಯಕ್ತಿಗಳ ಆವಾಸಸ್ಥಾನವಾಯಿತು. ಡಿ.ಬಿ. ಚಿತ್ತರಂಜನ್’ದಾಸ್ ಇಲ್ಲೇ ವಾಸ್ತವ್ಯ ಹೂಡಿದ್ದರು. ಮಹಾತ್ಮ ಗಾಂಧೀಜಿಯವರು ಆನಿ ಬೆಸೆಂಟ್’ರವರೊಂದಿಗೆ ಪ್ರವಾಸದ ವೇಳೆ ಬಂದಾಗ ಇಲ್ಲಿಯೇ ಉಳಿದುಕೊಂಡಿದ್ದರು.)

ಆದರೆ ರಾಜಕುಮಾರನ ಆರೋಗ್ಯ ಕ್ಷೀಣಿಸುತ್ತಲೇ ಹೋಯಿತು. ಒಂದು ಹಂತದಲ್ಲಿ ಆತನಿಗೆ ರಕ್ತಬೇಧಿ ಪ್ರಾರಂಭವಾಯಿತು. ೧೯೦೯ ಮೇ ೮ರ ಮಧ್ಯರಾತ್ರಿ ರಾಜಕುಮಾರನು ನಿಧಾನನಾದನೆಂದು ಸತ್ಯೇಂದ್ರ ನಾಥ, ದಾಸ್’ಗುಪ್ತ ಹಾಗೂ ಡಾರ್ಜಿಲಿಂಗ್’ನ ಸಿವಿಲ್ ಸರ್ಜನ್ ಆಗಿದ್ದ ಲೆಫ್ಟಿನೆಂಟ್ ಕೊಲೋನಲ್ ಕ್ಯಾಲ್ವರ್ಟ್’ರವರ ಸಮ್ಮುಖದಲ್ಲಿ ಘೋಷಿಸಲಾಯಿತು. ೧೯೦೯ ಮೇ ೯ರ ಬೆಳಿಗ್ಗೆ ಅಂತ್ಯಸಂಸ್ಕಾರವು ನಡೆಯುವುದೆಂದು ನಿಗದಿ ಪಡಿಸಿದರು. ಅಂದುಕೊಂಡಂತೆ ಮರುದಿನ ಬೆಳಿಗ್ಗೆ ಕಟ್ಟಿಗೆಯ ರಾಶಿಯ ಮೇಲೆ ಶವವನ್ನು ಮಲಗಿಸಿ ಬೆಂಕಿ ಹಚ್ಚಿದರು. ಆದರೆ ಅಗ್ನಿ ಹೊತ್ತಿ ಉರಿಯಲು ಪ್ರಾರಂಭವಾಗುತ್ತಿದ್ದಂತೆ ಧಾರಾಕಾರವಾಗಿ ಮಳೆ ಶುರುವಾಯಿತು. ತೀವ್ರವಾಗಿ ಬಡಿಯುತ್ತಿದ್ದ ಮಳೆಯಿಂದ ತಪ್ಪಿಸಿಕೊಳ್ಳಲು ಕೆಲವು ಆಳುಗಳನ್ನು ಬಿಟ್ಟು ಉಳಿದವರೆಲ್ಲರೂ ಮರೆಗೆ ಓಡಿದರು. ಎಷ್ಟು ಕಾದರೂ ಮಳೆ ನಿಲ್ಲಲಿಲ್ಲ. ಚಿತೆಯು ನದಿಯ ತಟದಲ್ಲೇ ಸಿದ್ಧವಾಗಿತ್ತು. ಅತಿಯಾಗಿ ಸುರಿದ ಮಳೆಯಿಂದ ನದಿಯ ಹರಿವು ಹೆಚ್ಚಿ ರಾಜಕುಮಾರನ ಶವವನ್ನು ಮಲಗಿಸಿದ್ದ ಕಟ್ಟಿಗೆಯ ರಾಶಿಯನ್ನೇ ತೊಳೆದುಹಾಕಲಾರಂಭಿಸಿತು. ಆಳುಗಳು  ಗಾಬರಿಯಾಗಿ ನೋಡುತ್ತಿದ್ದಂತೇ ರಾಜಕುಮಾರನ ದೇಹವು ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ಆಳುಗಳು ಗಾಬರಿಯಿಂದ ಓಡಿ ದೇಹವನ್ನು ಎಳೆದುತರಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಈ ವಿಚಾರವನ್ನು ಅವರು ಸತ್ಯೇಂದ್ರನಾಥನಿಗೆ ತಿಳಿಸಿದರಾದರೂ ಅವರು ಅದನ್ನು ನಿರ್ಲಕ್ಷಿಸಿ ರಾಜಕುಮಾರನ ಅಂತ್ಯಸಂಸ್ಕಾರವು ಮುಗಿದಿದೆ ಎಂದು ಘೋಷಿಸಿದರು.

ದೇಹವು ನದಿಯಲ್ಲಿ ತೇಲುತ್ತ ಹಲವಾರು ಕಿ.ಮೀ.ಗಳಷ್ಟು ದೂರ ಸಾಗಿ ಒಂದು ಕಡೆ ನಿಂತಿತು. ಆ  ಜಾಗದ ಸಮೀಪವಿದ್ದ ಗುಹೆಯೊಂದರಲ್ಲಿ ಬಾಬಾ ಧರಮ್’ದಾಸ್ ( ಆಧ್ಯಾತ್ಮಿಕ ಗುರು, ಪ್ರಖ್ಯಾತ ಆಧ್ಯಾತ್ಮಿಕ ಗುರು ‘ಸ್ವಾಮಿ ರಾಮ’ರ ಗುರು!!) ತಮ್ಮ ಶಿಷ್ಯರೊಂದಿಗೆ ವಾಸವಾಗಿದ್ದರು. ಹೀಗೆ ಶವವೊಂದು ನೀರಿನಲ್ಲಿ ತೇಲುತ್ತಿರುವ ವಿಚಾರವನ್ನು ಅವರ ಶಿಷ್ಯರು ಅವರಿಗೆ ತಿಳಿಸಿದಾಗ ಅವರು ‘ಅದು ನನ್ನ ಶಿಷ್ಯ, ಆ ದೇಹವನ್ನು ತೆಗೆದುಕೊಂಡು ಬನ್ನಿ’ ಎಂದು ತಮ್ಮೆರಡು ಶಿಷ್ಯಂದಿರಾದ ಬಾಬಾ ದರ್ಶನ್’ದಾಸ್ ಹಾಗೂ ಬಾಬಾ ಲೋಕ್’ದಾಸ್’ರಿಗೆ ಸೂಚಿಸಿದರು. ಅವರು ಹೇಳಿದಂತೆ ಅವರ ಶಿಷ್ಯರು ದೇಹವನ್ನು ಗುಹೆಗೆ ಹೊತ್ತು ತಂದು ಬಟ್ಟೆಗಳನ್ನು ಬದಲಿಸಿದರು. ಆ ದೇಹವನ್ನು ಅಲ್ಲಿಂದ ಹೊತ್ತುಕೊಂಡು ಸಮೀಪದ ಹಳ್ಳಿಗೆ ಬಂದ ಬಾಬಾಜಿ (ಬಾಬಾ ಧರಮ್’ದಾಸ್)ಯವರು ರಾಜಕುಮಾರನ ತಲೆಯನ್ನು ಸಂಪೂರ್ಣ ಬೋಳಿಸಿ ಲೇಹವೊಂದನ್ನು ಲೇಪಿಸಿದರು. ಅತ್ಯಾಶ್ಚರ್ಯಕರ ರೀತಿಯಲ್ಲಿ ಆತ ಮತ್ತೆ ಉಸಿರಾಡಲಾರಂಭಿಸಿದ. ಈ ಸುದ್ಧಿಯು ಕಾಡ್ಗಿಚ್ಚಿನಂತೆ ಹರಡಿತು. ಜನರ ಅವಗಾಹನೆಯಿಂದ ತಪ್ಪಿಸಿಕೊಳ್ಳಲು ಬಾಬಾಜಿಯವರು ಕೂಡಲೇ ಆ ಹಳ್ಳಿಯಿಂದ ರಾಜಕುಮಾರನೂ ಸೇರಿದಂತೆ ತಮ್ಮ ಉಳಿದ ಶಿಷ್ಯರ ಜೊತೆ ಇನ್ನೊಂದು ಹಳ್ಳಿಗೆ ಹೊರಟರು. ಆ ಹಳ್ಳಿಯನ್ನು ತಲುಪವಷ್ಟರಲ್ಲಿ ರಾಜಕುಮಾರ ಸಾಕಷ್ಟು ಚೇತರಿಸಿಕೊಂಡಿದ್ದ. ಆದರೆ ಅವನ ಸ್ಮರಣಶಕ್ತಿ ಮಾತ್ರ ಸಂಪೂರ್ಣವಾಗಿ ನಾಶವಾಗಿತ್ತು. ಕೆಲವು ದಿನಗಳು ಕಳೆದ ಮೇಲೆ, ರಾಜಕುಮಾರ ನಡೆಯಲು ಶಕ್ತನಾದಂತೆ ಸಾಧುಗಳ ತಂಡವು ಅವನ ಜೊತೆ ಅವರಿದ್ದ ಜಾಗದಿಂದ ಮರೆಯಾಯಿತು.

ಭವಲ್ ಪ್ರಾಂತ್ಯದ ರಾಜಕುಮಾರನೀಗ ಆಗಷ್ಟೇ ಜನಿಸಿದ್ದ ಎಳೆಮಗುವಿನಂತಿದ್ದ. ಜೀವನದ ಮೂಲಭೂತ ಕೌಶಲ್ಯಗಳನ್ನೂ ಅವನಿಗೆ ಕಲಿಸಿಕೊಡಬೆಕಾಯ್ತು. ಆದರೆ ಅವನು ಭವಲ್’ನ ರಾಜಕುಮಾರನಾಗಿರದೆ ಬಾಬಾಜಿಯ ಎಳೆಮಗುವಾಗಿದ್ದ. ಕೆಲ ವರ್ಷಗಳಲ್ಲೇ ಆತ ಅತ್ಯಂತ ವೇಗದಿಂದ ಕಲಿತು ‘ಅಲ್ಕೆಮಿ’ ಹಾಗೂ ‘ಆಯುರ್ವೇದ’ ವಿದ್ಯೆಗಳಲ್ಲಿ ಪರಿಣಿತನಾದ. ಅತ್ಯಂತ ವೇಗವಾಗಿ ಸಂಗತಿಗಳನ್ನು ಕಲಿಯುತ್ತಿದ್ದ ಆತ ಹಠಯೋಗವನ್ನು ಸಿದ್ಧಿಸಿಕೊಂಡು ಬಲಶಾಲಿಯಾದ ಗೂಳಿಯಂತಾದ. ಬಾಬಾಜಿಯ ಜೊತೆಯಲ್ಲಿ ಆತ ಪೂರ್ತಿ ದೇಶವನ್ನು ಸಂಚರಿಸಿದ. ಹಿಮಾಲಯದ ಮಡಿಲಿನಿಂದ ಉತ್ತರ ಭಾರತದ ಬಯಲುಗಳಲ್ಲೆಲ್ಲ ಸಂಚರಿಸಿ ಅವರು ಕಾಶ್ಮೀರದ ಅಮರನಾಥ ಕ್ಷೇತ್ರವನ್ನು ತಲುಪುವಷ್ಟರಲ್ಲಿ ನಾಲ್ಕು ವರ್ಷಗಳೇ ಕಳೆದಿದ್ದವು. ಅಲ್ಲಿ ಬಾಬಾಜಿಯವರು ಅವನಿಗೆ ಸನ್ಯಾಸ ದೀಕ್ಷೆಯನ್ನಿತ್ತರು. ದೀಕ್ಷೆಯನ್ನು ಸ್ವೀಕರಿಸಿ ಮಂತ್ರೋಚ್ಚಾರಣೆ ಮಾಡುತ್ತಿದ್ದಂತೆ ಆತನಿಗೆ ತನ್ನ ಅಸ್ತಿತ್ವದ ಕುರಿತಾಗಿ ಪ್ರಶ್ನೆಗಳು ಎದುರಾದವು. ‘ತಾನು ಯಾರು? ಎಲ್ಲಿಂದ ಬಂದೆ? ಏನು ಮಾಡುತ್ತಿದ್ದೇನೆ?’ ಎಂಬಿತ್ಯಾದಿ ಪ್ರಶ್ನೆಗಳು ಅವನನ್ನು ಕಾಡಿದವು. ಬಾಬಾಜಿಯವರು ಇದಕ್ಕೆಲ್ಲ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ‘ಸರಿಯಾದ ಸಮಯ ಬಂದ ದಿನ ನಿನ್ನನ್ನು ತಿರುಗಿ ನಿನ್ನ ಮನೆಗೆ ಕಳುಹಿಸುತ್ತೇನೆ.’ ಎಂದಷ್ಟೇ ಹೇಳಿದರು.

Sandeep Hegde, Sirsi

Source:

1)Wikepedia

2) At the eleventh hour,a autobiography of swami Rama

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!