Featured ಪ್ರಚಲಿತ

ಯಡಿಯೂರಪ್ಪನವರಿಗೊಂದು ಬಹಿರಂಗ ಪತ್ರ

ಮಾನ್ಯ ಯಡಿಯೂರಪ್ಪನವರಿಗೆ ನಮಸ್ಕಾರಗಳು. ಸಿದ್ಧರಾಮಯ್ಯನವರು ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡುತ್ತಿರುವ ಸಂದರ್ಭದಲ್ಲಿಯೇ ನೀವು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಅಖಾಡಕ್ಕೆ ಧುಮುಕಿದ್ದೀರಾ. ಈ ಸರಕಾರ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿ ಪ್ರತಿಪಕ್ಷಗಳಿಗೆ ಹಬ್ಬದೂಟ ಬಡಿಸಿಟ್ಟರೂ ಬಿಜೆಪಿಯವರಿಗೆ ನುಂಗುವ ಯೋಗ್ಯತೆಯಿಲ್ಲ ಎನ್ನುವ ಭಾವನೆ ಜನರಲ್ಲಿರುವಾಗಲೇ ನೀವು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದುದು ಸಾಮಾನ್ಯ ನಾಗರೀಕರಿಗೆ “ಅಬ್ಬಾ.. ಒಬ್ಬರಾದರೂ ಬಂದ್ರಲ್ಲ ನಮ್ಮ ಸಮಸ್ಯೆಯನ್ನು ಸರಕಾರಕ್ಕೆ ಮುಟ್ಟಿಸೋಕೆ” ಎನ್ನುವ ಹೊಸ ಭರವಸೆಯನ್ನು ಹುಟ್ಟು ಹಾಕಿತ್ತು. ಆದರೆ ನೀವು ಅಧ್ಯಕ್ಷರಾಗಿ ಮೂರು ತಿಂಗಳಾಯ್ತು. ನಮ್ಮಲ್ಲಿ ಮೂಡಿದ ಭರವಸೆಗಳು ಸುಳ್ಳಾಗುತ್ತಿವೆಯೇನೋ ಎಂಬ ಭಾವನೆ ಈಗ ಮೂಡುತ್ತಿದೆ. ಆದ್ದರಿಂದ ನನ್ನ ಅರಿವಿಗನುಗುಣವಾಗಿ ಒಂದಷ್ಟು ಸಲಹೆಗಳನ್ನು ಕೊಡೋಣ ಅಂತ ಈ ಪತ್ರ ಬರೆಯುತ್ತಿದ್ದೇನೆ.

ಮಾನ್ಯರೇ, ಬಿಜೆಪಿಯ ಐದು ವರ್ಷಗಳ ಆಳ್ವಿಕೆಯ ಸುವರ್ಣಯುಗದಲ್ಲಿ ನಮ್ಮ ರಾಜ್ಯ ಎಷ್ಟೆಲ್ಲಾ ಅಧ್ವಾನಗಳಿಗೆ ಸಾಕ್ಷಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನೀವೆಷ್ಟು ಪರಿಶ್ರಮ ಪಟ್ಟಿದ್ದಿರಿ ಎಂಬುದೂ ಸಹ ಗೊತ್ತಿದೆ. ಆದರೆ ಕಠಿಣ ತಪಸ್ಸನ್ನು ಮಾಡಿ ಪಡಕೊಂಡ ವರವನ್ನು ಸುಲಭವಾಗಿ ಕೈಚೆಲ್ಲಿದ ನತದೃಷ್ಟರು ನೀವು. ಆಪರೇಷನ್ ಕಮಲ, ರೆಸಾರ್ಟ್ ರಾಜಕಾರಣ, ಭಟ್ಟಂಗಿಗಳ ಪೋಷಣೆ, ಕೋರ್ಟು, ಕೇಸು, ಜೈಲು.. ಉಫ್!! ನಿಮ್ಮ ಅವಧಿಯಲ್ಲಿ ನಡೆದ ಡೊಂಬರಾಟಗಳು ಒಂದಾ ಎರಡಾ?ನೀವಿವತ್ತು ಕೆಲವು ಕೇಸುಗಳಿಂದ ಹೊರ ಬಂದಿರಬಹುದು. ಆದರೆ ನಿಮ್ಮ ಆವತ್ತಿನ ನಡವಳಿಕೆಗಳನ್ನು ನೆನಪಿಸಿಕೊಳ್ಳುತ್ತಾ ಒಂದು ಮಾತನ್ನು ಹೇಳಬಹುದು, ಒಬ್ಬ ಮುಖ್ಯಮಂತ್ರಿ, ಒಂದು ಸರಕಾರ ಹೇಗಿರಬಾರದು ಎನ್ನುವುದಕ್ಕೆ ನೀವು ಮತ್ತು ನಿಮ್ಮ ಅಂದಿನ ಸರಕಾರ ಅತ್ಯುತ್ತಮ ಉದಾಹರಣೆ. ನೀವು ಒಂದೇ ಒಂದು ಒಳ್ಳೆಯ ಕೆಲಸ ಮಾಡಿಲ್ಲ ಅಂತ ಹೇಳುವುದಿಲ್ಲ. ಅಲ್ಲಿ ಇಲ್ಲಿ ಒಂದೆರಡು ಒಳ್ಳೆಯ ಕೆಲಸ ಮಾಡಿದ್ದೀರಿ ಎಂಬುದರಲ್ಲಿ ಎರಡು ಮಾತೇ ಇಲ್ಲ. ಅದರೆ, ಒಂದು ಕೊಡ ಹಾಲನ್ನು ಹಾಳು ಮಾಡುವುದಕ್ಕೆ ಒಂದು ತೊಟ್ಟು ಹುಳಿ ಸಾಕೆನ್ನುವಂತೆ, ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡಿದರೂ ಅವೆಲ್ಲವನ್ನು ನುಂಗಿ ನೀರು ಕುಡಿಯಲು ಒಂದೇ ಒಂದು ತಪ್ಪು ಕೂಡಾ ಸಾಕಲ್ಲವೇ? ಮೋದಿ ಸರಕಾರ  ಅಷ್ಟೆಲ್ಲಾ ಒಳ್ಳೆಯ ಕೆಲಸ ಮಾಡುತ್ತಿದ್ದರೂ ಒಂದಾದರೂ ವಿಷಯದಲ್ಲಿ ಸರಕಾರವನ್ನು ಹಣಿಯಲು ಪ್ರತಿಪಕ್ಷಗಳೆಲ್ಲವೂ ಪಡುತ್ತಿರುವ ಪಾಡು ನಿಮಗೆ ಕಾಣಿಸುತ್ತಿಲ್ಲವೇ?

ನೀವು ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತರು ನಿಮ್ಮ ವಿರುದ್ಧ   ವರದಿ ನೀಡಿದ್ದು, ರಾಜೀನಾಮೆ ನೀಡಲು ನೀವು ಸತಾಯಿಸಿದ್ದು, ಬಳಿಕ,ಮುಖ್ಯಮಂತ್ರಿಯನ್ನಾಗಿ ಆ ಕಾಲದಲ್ಲಿ ನಿಮ್ಮ ಭಟ್ಟಂಗಿಯಾಗಿದ್ದ ಡಿ.ವಿ ಸದಾನಂದ ಗೌಡರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ನಿಮ್ಮ ಮಾತು ಕೇಳಲಿಲ್ಲ ಎನ್ನುವ ಕಾರಣಕ್ಕೆ ಹನ್ನೊಂದೇ ತಿಂಗಳಲ್ಲಿ  ಅವರನ್ನು ಬದಲಾಯಿಸಿದ್ದು, ಜಗದೀಶ್ ಶೆಟ್ಟರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದು, ಅದಾಗಿ ನಾಲ್ಕೇ ತಿಂಗಳಲ್ಲಿ ಪಕ್ಷ ತೊರೆದು ಕೆಜೆಪಿಯನ್ನು ಕಟ್ಟಿದ್ದು.. ಇದೆಲ್ಲಾ ನಿಮಗೆ ಸರಿ ಅಂತ ಕಾಣುತ್ತದಾ ಸಾರ್? ನೀವೇ ಕಟ್ಟಿ ಬೆಳೆಸಿದ ಪಕ್ಷವನ್ನು ನೀವೇ ಕೈಯ್ಯಾರ ಧ್ವಂಸ ಮಾಡಿದ್ದು ನಿಮಗೆ ಸರಿ ಅಂತ ಅನಿಸುತ್ತದಾ? ಒಮ್ಮೆ ಆಲೋಚಿಸಿ ನೋಡಿ. ಮೇಲ್ನೋಟಕ್ಕೆ ಇಲ್ಲವೆಂದು ಕಾಣುತ್ತಿದ್ದರೂ ಹಿಂದೆ ಮಾಡಿರುವ ತಪ್ಪುಗಳಿಂದ ನೀವು ಪಾಠ ಕಲಿತಿದ್ದೀರಿ ಅಂತ ನಾವಂದುಕೊಂಡಿದ್ದೇವೆ.

ಈ ಭಾರಿಯಂತೂ ನೂರೈವತ್ತು ಸ್ಥಾನ ಗೆಲ್ತೀನಿ ಅಂತ ಗೂಳಿಯಂತೆ ಮುನ್ನುಗ್ಗುತ್ತಿದ್ದೀರಿ. ನಿಮ್ಮ ಈ ಭ್ರಮೆಗೆ ಕಾಂಗ್ರೆಸ್ಸ್ ಸರಕಾರದ ವೈಫಲ್ಯ ಕಾರಣವೋ, ಅಲ್ಲ ನಿಮ್ಮ ನಾಯಕತ್ವದ ಮೇಲೆ ಜನರಿಟ್ಟಿರುವ ನಂಬಿಕೆ ಕಾರಣವೋ ಅಥವಾ ಇನ್ನೂ ನಿಮ್ಮೆಲ್ಲರನ್ನು ಆಕಾಶದಲ್ಲಿ ತೇಲಿಸುತ್ತಿರುವ ಮೋದಿ ಅಲೆಯೇ ಕಾರಣವೋ ಗೊತ್ತಿಲ್ಲ. ಸ್ವಲ್ಪ ಅಹಂಕಾರವನ್ನು ಬಿಟ್ಟು ವಾಸ್ತವವಾಗಿ ಯೋಚಿಸಿ ನೋಡಿ.  ಹೇಗೆ ನಿಮ್ಮ ವೈಫಲ್ಯದಿಂದಾಗಿ ಕಾಂಗ್ರೆಸ್ಸ್ ಸುಲಭವಾಗಿ ಅಧಿಕಾರ ಹಿಡಿಯಿತೋ, ಹಾಗೆಯೇ ಕಾಂಗ್ರೆಸ್ಸ್ ಸರಕಾರದ ವೈಫಲ್ಯದಿಂದಾಗಿ   ಜನ ಇವತ್ತು ಬೇರೆ ವಿಧಿಯಿಲ್ಲದೆ  ನಿಮ್ಮ ಕಡೆ ಮುಖ ಮಾಡಿದ್ದಾರೆಯೇ ಹೊರತು 2008ರಲ್ಲಿ ನಿಮ್ಮ ಮೇಲಿಟ್ಟಿದ್ದ ಭರವಸೆಯಂತೆ  ನಿಮ್ಮ ಮೇಲೆ ಈಗಲೂ  ಭಾರೀ ಭರವಸೆ ಇಟ್ಟಿದ್ದಾರೆ ಅಂತಲ್ಲ. ಜನ ಕಾಂಗ್ರೆಸ್ಸ್ ಸರಕಾರದ ಆಡಳಿತ ವೈಖರಿಯಿಂದಾಗಿ ರೋಸಿ ಹೋಗಿರಬಹುದು. ಆದರೆ ಬಿಜೆಪಿಯೊಂದೇ ಜನಕ್ಕೆ ಪರ್ಯಾಯವಲ್ಲ ಮತ್ತು ನಿಮ್ಮ ಅವಧಿಯ ಡೊಂಬರಾಟಗಳನ್ನು ಜನ ಇನ್ನೂ ಮರೆತಿಲ್ಲ.ತಕ್ಷಣವೇ   ಸ್ವಲ್ಪ ಜಾಗರೂಕರಾಗಿ ಚಾಣಾಕ್ಷತನ ಪ್ರದರ್ಶಿಸಿದರೂ ಜೆ.ಡಿ.ಎಸ್ ಅಧಿಕಾರಕ್ಕೆ ಬರಬಹುದು. ಅದು ಸಾಧ್ಯವೇ ಇಲ್ಲ ಅಂದರೆ ಕಾಂಗ್ರೆಸ್ ಜೆ.ಡಿ.ಎಸ್  ಜತೆಗೂಡಿ ಸಮ್ಮಿಶ್ರ ಸರಕಾರವನ್ನು ರಚಿಸಬಹುದು. ಬಿ.ಬಿ.ಎಂ.ಪಿಯಲ್ಲಿ ಅಧಿಕಾರ ಪಡೆದೇ ಬಿಟ್ಟೆವು ಎಂದು ಪಟಾಕಿ ಸಿಡಿಸಿ, ಅದರ ಹೊಗೆ ಆರುವಷ್ಟರಲ್ಲೇ ಕಾಂಗ್ರೆಸ್ ಜೆ.ಡಿ.ಎಸ್ ಸೇರಿ ಹೇಗೆ ನಿಮ್ಮ ಪಕ್ಷಕ್ಕೆ ಮಾಂಜಾ ಕೊಟ್ಟವು ಎಂಬುದು ಗೊತ್ತಲ್ಲವೇ ನಿಮಗೆ?

ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ “ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವೆ” ಎನ್ನುವ ಡೈಲಾಗನ್ನು ಹೊಡೆದಿದ್ದಿರಿ. ನೀವೆಷ್ಟು ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂಬುದು, ರಾಜ್ಯಾಧ್ಯಕ್ಷರಾಗಿ ಮೂರು ತಿಂಗಳಲ್ಲೇ ಎದ್ದಿರುವ ಭಿನ್ನಮತದಿಂದ ಗೊತ್ತಾಗುತ್ತಿದೆ. ಬೆಂಗಳೂರಿನ ಒಂದೆರಡು ಕಡೆಗಳಲ್ಲಿ ಸಮಾವೇಶಗಳನ್ನು ಮಾಡಿದ್ದು ಬಿಟ್ಟರೆ ರಾಜ್ಯ ಸರಕಾರದ ದುರಾಡಳಿತ ವಿರುದ್ಧ ನೀವೆಲ್ಲರ ಒಗ್ಗಟ್ಟಾಗಿ ದೊಡ್ದ ಮಟ್ಟದ  ಹೋರಾಟ ಮಾಡಿದ್ದನ್ನು ನಾವ್ಯಾರೂ ಕಂಡಿಲ್ಲ. ನೌಕರರ ಪ್ರತಿಭಟನೆ, ಪೋಲೀಸರ ಪ್ರತಿಭಟನೆಯಂತಹ ವಿಷಯಗಳು ಬೋನಸ್’ನಂತೆ ಸಿಕ್ಕರೂ ನೀವದನ್ನು ಬಲಸಿಕೊಳ್ಳಲಿಲ್ಲ. ಲೋಕಾಯುಕ್ತವನ್ನು ಮುಚ್ಚಲು ಸರಕಾರ ಮಾಡಿದ ಹುನ್ನಾರ ಬಟಾಬಯಲಾದರೂ ನಿಮ್ಮಲ್ಲಿ  ಯಾರೂ ತುಟಿ ಬಿಚ್ಚಲಿಲ್ಲ. ಅದೆಲ್ಲವನ್ನೂ ಬಿಟ್ಟು ಪದಾಧಿಕಾರಿಗಳ ಆಯ್ಕೆಯ ವಿಷಯದಲ್ಲಿ ನೀವು, ಸದಾನಂದ ಗೌಡ, ಈಶ್ವರಪ್ಪ ರಾಜ್ಯದ ಒಂದೊಂದು ಮೂಲೆಯಲ್ಲಿ ನಿಂತು ಊಳಿಡುತ್ತಿದ್ದೀರಿ.  ಪದಾಧಿಕಾರಿಗಳ ಆಯ್ಕೆಯಲ್ಲಿ ನೀವು ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡಿದ್ದೀರಿ ಎನ್ನುವ ಕಾರಣಕ್ಕೆ ಇತರರಲ್ಲೂ ಭಿನ್ನಮತ ಸ್ಫೋಟಗೊಂಡಿದೆ. ಇದೇ ಏನು ನೀವು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿರುವ ಪರಿ? ಒಂದನ್ನಂತೂ ನೆನಪಿಡಿ. ನೀವು ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಇತರರ ಸಹಕಾರವೂ ಅತೀ ಅಗತ್ಯ. ಮೋದಿ ಎಂಬ ಹೆಸರಿನ ಮಾತ್ರಕ್ಕೆ  283 ಸೀಟು ಬಂದಂತೆ ನಿಮ್ಮ ಹೆಸರು ಕೇಳಿದ ಕೂಡಲೇ 112 ಸೀಟುಗಳನ್ನು ತೆಗೆದು ನಿಮ್ಮ ಕಿಸೆಯಲ್ಲಿಡಲು ನೀವೇನು ಮೋದಿಯಲ್ಲ, ನೆನಪಿಡಿ.

ನಮ್ಮ ಅವಧಿಯ ಐದು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತೇವೆ, ನರೇಂದ್ರ ಮೋದಿಯವರ ಸಾಧನೆಗಳ ಆಧಾರದ ಮೇಲೆ ಮತ ಕೇಳುತ್ತೇವೆ ಎಂದು ಹೇಳುತ್ತಿದ್ದೀರಿ. ಮೊದಲು ಈ ಬಕ್ವಾಸ್’ಗಳನ್ನು ನಿಲ್ಲಿಸಿ. ನಿಮ್ಮ ಐದು ವರ್ಷಗಳ ಮಹಾ ಸಾಧನೆ ಏನೆಂಬುದು ನಮಗೆಲ್ಲಾ ಚೆನ್ನಾಗಿ ಗೊತ್ತಿದೆ. ಬರೀ ಮೋದಿಯ ಹೆಸರಿಗೆ ಓಟು ಗಿಟ್ಟುವುದಿಲ್ಲ ಎನ್ನುವುದು ಈಗಾಗಲೇ ಬಿಹಾರ ಮತ್ತು ದೆಹಲಿಯ ಚುನಾವಣೆಗಳಲ್ಲಿ ಸಾಭೀತಾಗಿದೆ. ಮೋದಿಯ ಹೆಸರು ಹೇಳಿ ಅಧಿಕಾರಕ್ಕೆ ಬಂದು ಬಳಿಕ ಮಜಾ ಉಡಾಯಿಸುವುದು ನೀವು ಎನ್ನುವುದು ತಿಳಿಯದಷ್ಟು ಅಪ್ರಬುದ್ಧರಲ್ಲ ನಿಮ್ಮ ಮತದಾರರು. ನಿಮ್ಮ ಕಾಲಿಗೆ ಬೀಳುತ್ತೇನೆ. ನರೇಂದ್ರ ಮೋದಿಯವರ ಸಾಧನೆ, ಮೋದಿ ಮಾದರಿ ಸರಕಾರ ಎಂಬಂತಹ ಮಾತುಗಳನು ತಪ್ಪಿಯೂ ಆಡಬೇಡಿ. 2008ರಲ್ಲಿ ಮೋದಿ ಮಾದರಿ ಸರಕಾರ ಎಂದು ಹೇಳಿಕೊಂಡೇ ನೀವು ಕೊಟ್ಟ ಮಾದರಿ ಸರಕಾರವನ್ನು ನಾವೆಂದೂ ಮರೆಯಲಾರೆವು. ಮೋದಿ ಮಾದರಿ ಎಂದು ಮತ್ತೆ ಹೇಳಿ, ದೇಶಕ್ಕಾಗಿ ಕಾಯಾ ವಾಚಾ ಮನಸಾ ದುಡಿಯುತ್ತಿರುವ ಆ ಮಹಾತ್ಮನ ಹೆಸರಿಗೆ ಇನ್ನೊಮ್ಮೆ  ಕಳಂಕ ತರಬೇಡಿ. ಅದರ ಬದಲಾಗಿ, ಕಿತ್ತೋಗಿರೋ ಜಾತಿ ಸಮೀಕರಣವನ್ನು ಬಿಟ್ಟು, ರಾಜ್ಯದ ಅಭಿವೃದ್ಧಿಗಾಗಿ, ರೈತರ ಅಭ್ಯುದಯಕ್ಕಾಗಿ, ಯುವಕರ ಸ್ವಾವಲಂಬನೆಗಾಗಿ ನಿಮ್ಮ ವಿಶನ್ ಏನು ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡು ಬನ್ನಿ. ಅದನ್ನು ಕಾರ್ಯಗತಗೊಳಿಸುವುದಕ್ಕಾಗಿ ನಿಮ್ಮ ಆಕ್ಷನ್ ಪ್ಲಾನ್ ಏನೆಂಬುದರ ಆಧಾರದ ಮೇಲೆ ಮತ ಕೇಳಿ.  ಸಾಮಾಜಿಕ ನ್ಯಾಯ ಅದು ಇದು ಎನ್ನುವ ಹಳೇ ಮಧ್ಯವನ್ನು ಹೊಸ ಬಾಟಲಿಗೆ ತುರುಕುವುದರ ಬದಲು ಮಧ್ಯಮ ವರ್ಗದವರ ಏಳಿಗೆಗಾಗಿ ನಿಮ್ಮ ಐಡಿಯಾಲಾಜಿಗಳೇನೆಂಬುದರ ಮೇಲೆ ಮತ ಕೇಳಿ. ಜನ ತನ್ನಿಂತಾನೇ ಮತ ಹಾಕುತ್ತಾರೆ.

ಯಡಿಯೂರಪ್ಪನವರೇ ಇದೆಲ್ಲದಕ್ಕಿಂತಲೂ ಮೊದಲಾಗಿ ನೀವು ಮಾಡಬೇಕಿರುವ ಕೆಲಸವೇನೆಂದರೆ ರೇಣುಕಾಚಾರ್ಯನಂತಹ ಹೊಲಸು ಭಟ್ಟಂಗಿಗಳನ್ನು ದೂರವಿಡುವುದು. ಆ ಮನುಷ್ಯ ನಿನ್ನೆಯೂ ನಿಮ್ಮನ್ನು ಸಮರ್ಥಿಸಿ ದೆಹಲಿಯಲ್ಲಿ ಮಾತನಾಡಿದ್ದನ್ನು ನೋಡಿದ್ದೇನೆ. ಒಂದು ಕಾಲದಲ್ಲಿ ಮಂತ್ರಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ನಿಮ್ಮ ವಿರುದ್ಧ ಬಂಡೆದ್ದು ಶಾಸಕರನ್ನು ಗೋವಾದಲ್ಲಿ ಕೂಡಿ ಹಾಕಿದ್ದು ಇದೇ ಮನುಷ್ಯ ಎಂಬುದು ನಿಮಗೆ ಮರೆತು ಹೋಯಿತೇ? ಅಂತವರನ್ನೇ ನಿಮ್ಮ ವೈಯಕ್ತಿಕ ವಕ್ತಾರರನ್ನಾಗಿ ಮಾಡಿಕೊಂಡು ತಿರುಗಲು ನಿಮಗೆ ಅಸಹ್ಯವಾಗುವುದಿಲ್ಲವೇ? ನಮ್ಮದು ಕಳಕಳಿಯ ವಿನಂತಿ. ಬಿಜೆಪಿ ಅಧಿಕಾರಕ್ಕೆ ಬರುವುದು ಮತ್ತೈದು ವರ್ಷ ತದವಾದರೂ ಪರವಾಗಿಲ್ಲ.   ರೇಣುಕಾಚಾರ್ಯನಂತವನನ್ನು ಮತ್ತೆ ಶಾಸಕನನ್ನಾಗಿ, ಮಂತ್ರಿಯನ್ನಾಗಿ ಮಾಡಿ ಬಳಿಕ ನಿಮ್ಮನ್ನೇ ನಿಯಂತ್ರಿಸುವಂತಹಾ ರಿಮೋಟನ್ನು ಅವರ  ಕೈಗಿಡಬೇಡಿ. ಆಡಳಿತ ವಿರೋಧಿ ಅಲೆ ಇದ್ದಾಗಲೂ ಹೊನ್ನಾಳಿಯಂತಹ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬನನ್ನು ಗೆಲ್ಲಿಸಿಕೊಡಲಾಗದಂತಹ ದಾರಿದ್ರ್ಯ ಬಿಜೆಪಿಗೆ ಬಂದಿಲ್ಲ ಅಂತ ಭಾವಿಸಿದ್ದೇನೆ. ರೇಣುಕಾಚಾರ್ಯ ಮಾತ್ರ ಅಲ್ಲ, ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣರಂತಹ ಯಾವೊಬ್ಬ ಭಟ್ಟಂಗಿಯೂ ನಿಮ್ಮ ಹತ್ತಿರವೂ ಸುಳಿಯದಂತೆ ನೋಡಿಕೊಳ್ಳಿ. ಬಾಯ್ಬಿಟ್ಟರೆ ಪಕ್ಷಕ್ಕೆ ಡ್ಯಾಮೇಜ್ ಮಾಡುವ, ಸ್ವತಃ ಜಯ ಗಳಿಸಲೂ ತಾಕತ್ತಿಲ್ಲದ ಈಶ್ವರಪ್ಪರನ್ನು ಹೇಗಾದರೂ ನಿಯಂತ್ರಣದಲ್ಲಿಟ್ಟುಕೊಳ್ಳಿ. ಹಿಂದೆಲ್ಲಾ ನಿಮ್ಮನ್ನು ವಾಚಾಮಗೋಚರ ಬೈದು ಈಗ ನಿಮ್ಮನ್ನು ಮೆಚ್ಚಿಸಿ, ಉನ್ನತ ಅವಕಾಶವನ್ನು ಪಡೆದುಕೊಳ್ಳುವುದಕ್ಕಾಗಿ  “With Next CM”  ಎನ್ನುತ್ತಾ ಫೇಸ್ಬುಕ್ಕಿನಲ್ಲಿ ಫೋಟೋ ಹಾಕುವ ಸಮಯ ಸಾಧಕರನ್ನು ಯಾವ ಮಾತ್ರಕ್ಕೂ ನಂಬ ಬೇಡಿ.

ಯಡಿಯೂರಪ್ಪನವರೇ, ತನ್ನ ಸ್ವಯಂಕೃತ ತಪ್ಪುಗಳಿಂದಾಗಿ ಸ್ವತಃ ಕಾಂಗ್ರೆಸ್ಸೇ ಬೆಳ್ಳಿ ತಟ್ಟೆಯನ್ನು ನಿಮ್ಮ ಕೈಗಿಡಲು ಸಿದ್ಧತೆ ನಡೆಸುತ್ತಿದೆ. ಮೃಷ್ಟಾನ್ನವನ್ನು ಬಡಿಸಲು ನಾವು ಸಿದ್ಧರಾಗಿದ್ದೇವೆ. ಮುಂದಿನೈದು  ವರ್ಷಗಳ ಕಾಲ ಕುಳಿತು ಉಣ್ಣಲು ನೀವು ತಯಾರಾಗಿದ್ದೀರಾ? ಅಲೋಚಿಸಿ!

                                                                                             ಇಂತೀ

                                                                                      ಸಾಮಾನ್ಯ ಕಾರ್ಯಕರ್ತ

 

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!